ಬಾಬು ರಾಜೇಂದ್ರ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಾಜೇಂದ್ರ ಪ್ರಸಾದ್ ಇಂದ ಪುನರ್ನಿರ್ದೇಶಿತ)
Jump to navigation Jump to search
ಡಾ. ರಾಜೇಂದ್ರ ಪ್ರಸಾದ್
डा. राजेन्द्र प्रसाद
ಬಾಬು ರಾಜೇಂದ್ರ ಪ್ರಸಾದರು 1947ರ ವರ್ಷದಲ್ಲಿ

ಅಧಿಕಾರದ ಅವಧಿ
ಜನವರಿ ೨೬, ೧೯೫೦ – ಮೇ ೧೩, ೧೯೬೨
ಉಪ ರಾಷ್ಟ್ರಪತಿ   ಸರ್ವೆಪಳ್ಳಿ ರಾಧಾಕೃಷ್ಣನ್
ಪೂರ್ವಾಧಿಕಾರಿ ಸಿ. ರಾಜಗೋಪಾಲಾಚಾರಿ
ಉತ್ತರಾಧಿಕಾರಿ ಸರ್ವೆಪಳ್ಳಿ ರಾಧಾಕೃಷ್ಣನ್

ಜನನ ಡಿಸೆಂಬರ್ ೩, ೧೮೮೪
ಜೆರದೈ, ಬಿಹಾರ್
ಮರಣ February 28, 1963(1963-02-28) (aged 78)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ ರಾಜವಂಶಿ ದೇವಿ
ಲೇಡಿ ಜಾಕ್ವೆಲಿನ್ ಕೆನ್ನಡಿ ಯವರನ್ನು ಬೇಟಿ ಯಾಗಿದ್ದ ಸಂದರ್ಭ

ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ[೧]. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು.

“ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ. ಆತನೇ ರಾಜೇಂದ್ರ ಪ್ರಸಾದ್” ಗಾಂಧೀಜಿಯವರು ಆಡಿದ ಈ ಮಾತು ಬಾಬು ರಾಜೇಂದ್ರ ಪ್ರಸಾದರ ಬಗ್ಗೆ. ಅವರು ಗಾಂಧೀಜಿಯವರ ವ್ಯಕ್ತಿತ್ವ, ನೈತಿಕ ಸ್ಥೈರ್ಯ, ಕಾರ್ಯ ವಿಧಾನ ಹಾಗೂ ಆದರ್ಶಗಳಲ್ಲಿ ಇಟ್ಟಿದ್ದ ಅನನ್ಯ ವಿಶ್ವಾಸಕ್ಕೆ ಸಾಕ್ಷಿ. ಹಾಗೆಂದ ಮಾತ್ರಕ್ಕೆ ಪ್ರಸಾದರು ಗಾಂಧೀಜಿಯವರ ವ್ಯಕ್ತಿಪೂಜಕರಾಗಿದ್ದರು ಎಂದರ್ಥವಲ್ಲ. ಭಿನ್ನಾಭಿಪ್ರಾಯ ಬಂದಾಗ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪ್ರಸಾದರು ಹಿಂಜರಿಯುತ್ತಿರಲಿಲ್ಲ. ಆದರೆ ಒಮ್ಮೆ ಗಾಂಧೀಜಿ ಒಂದು ನಿರ್ಧಾರ ತೆಗೆದುಕೊಂಡಮೇಲೆ, ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು.

ಜೀವನ[ಬದಲಾಯಿಸಿ]

೧೮೮೪ರ ಡಿಸೆಂಬರ್ ೩ನೇ ತಾರೀಖು ಬಿಹಾರದ ಜೇರಡ್ಡೆ ಎಂಬ ಹಳ್ಳಿಯಲ್ಲಿ ಪ್ರಸಾದರು ಜನಿಸಿದರು[೨]. ತಂದೆ ಮಹದೇವ ಸಹಾಯ್; ಸಂಸ್ಕೃತ ಮತ್ತು ಫಾರಸಿ ವಿದ್ವಾಂಸರು; ಅಲ್ಲದೆ ವೈದ್ಯರು. ತಾಯಿ ಕಮಲೇಶ್ವರಿ ದೇವಿ; ಸಂಪ್ರದಾಯಸ್ಥರು, ದೈವಭಕ್ತೆ, ಪ್ರತಿದಿನವೂ ರಾಮಾಯಣದ ಕತೆಗಳನ್ನು ಮಗನಿಗೆ ಹೇಳುವರು. ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳ ಕುಟುಂಬ. ಬಡವ – ಬಲ್ಲಿದ, ಹಿಂದೂ- ಮುಸ್ಲಿಂ ಮುಂತಾದ ಯಾವ ಭೇದ ಭಾವವೂ ಇಲ್ಲದ ಆಡಂಬರಹಿತವಾದ ಗ್ರಾಮೀಣ ಜನರ ಒಡನಾಟದಲ್ಲಿ ಬೆಳೆದ ಪ್ರಸಾದರು ಉಚ್ಚ ಆದರ್ಶ, ನೈತಿಕ ನಡೆವಳಿಕೆ ಮತ್ತು ಋಜು ಸ್ವಭಾವವನ್ನು ಮೈಗೂಡಿಸಿಕೊಂಡರು. ಕೇವಲ ೧೨ನೇ ವಯಸ್ಸಿನಲ್ಲೇ ರಾಜ ಬನ್ಸಿದೇವಿಯವರೊಂದಿಗೆ ವಿವಾಹವೂ ಆಯಿತು.

ಆಗಿನ ಪದ್ಧತಿಯಂತೆ, ಪ್ರಸಾದರ ಮೊದಲ ಶಿಕ್ಷಣ ಪರ್ಷಿಯನ್ ಭಾಷೆಯಲ್ಲಿ, ಒಬ್ಬ ಮುಸಲ್ಮಾನ್ ಮೌಲ್ವಿಯಿಂದ. ಪ್ರತಿಭಾಶಾಲಿಯಾಗಿದ್ದ ಪ್ರಸಾದರು ಶಾಲಾ ಕಾಲೇಜುಗಳಲ್ಲಿ ಅತ್ಯಂತ ಮೇಧಾವಿ ವಿದ್ಯಾರ್ಥಿ ಎನ್ನಿಸಿಕೊಂಡಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಿಂದ ಹಿಡಿದು ಬಿ.ಎ., ಎಂ.ಎ. ಹಾಗೂ ಕಾನೂನು ಪರೀಕ್ಷೆಗಳಲ್ಲಿ ಅವರಿಗೇ ಪ್ರಥಮಸ್ಥಾನ. ಚರ್ಚೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನಗಳು ಇವರಿಗೆ ಕಟ್ಟಿಟ್ಟದ್ದು.

ಪ್ರಸಾದರ ಸಮಾಜ ಸೇವಾ ಕಾರ್ಯಗಳಿಗೆ ವಿದ್ಯಾರ್ಥಿ ದೆಸೆಯಲ್ಲೇ ಅಡಿಪಾಯ ಹಾಕಲಾಗಿತ್ತು ತಮ್ಮ ಅಣ್ಣ ಮಹೇಂದ್ರ ಪ್ರಸಾದರಿಂದ “ಸ್ವದೇಶಿ”ಯ ಪಾಠ ಕಲಿತಿದ್ದ ಪ್ರಸಾದರು ಸೋದರಿ ನಿವೇದಿತಾ, ಸುರೇಂದ್ರನಾಥ ಬ್ಯಾನರ್ಜಿ ಮುಂತಾದ ದೇಶ ಪ್ರೇಮಿಗಳ ಭಾಷಣಗಳಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ವೃಂದದಲ್ಲಿ ಇವರು ಜನಪ್ರಿಯ ನಾಯಕ. 1906ರಲ್ಲಿ ಬಿಹಾರಿ ವಿದ್ಯಾರ್ಥಿಗಳನ್ನು ಒಂದುಗೂಡಿಸಿ “ಬಿಹಾರಿ ವಿದ್ಯಾರ್ಥಿಗಳ ಸಮಾವೇಶ" ಎಂಬ ಸಂಘವನ್ನು ಕಟ್ಟಿದರು.

ಪ್ರಸಾದರ ವೃತ್ತಿ ಜೀವನ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಆರಂಭಗೊಂಡಿತು. ಆನಂತರ ಅವರು ಕಲ್ಕತ್ತಾ ಮತ್ತು ಪಾಟ್ನಾಗಳಲ್ಲಿ ವಕೀಲ ವೃತ್ತಿ ನಡೆಸಿದರು. ಪಾಟ್ನಾ ವಿಶ್ವ ವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು.

ಮಹಾನ್ ಸಮಾಜ ಸೇವಕ, ಸ್ವಾತಂತ್ರ್ಯ ಹೋರಾಟಗಾರ[ಬದಲಾಯಿಸಿ]

ಅಂದಿನ ಕಾಲದಲ್ಲಿ ಇಡೀ ದೇಶವೇ ಒಂದು ಹೊಸ ಚೈತನ್ಯವನ್ನು ಪಡೆದಿತ್ತು. ಅಂದಿನ ವಾತಾವರಣವೇ ಒಂದು ಹೊಸ ಬಾಳಿನ ನಿರೀಕ್ಷೆ ಮತ್ತು ಆದರ್ಶದ ಅಲೆಗಳಿಂದ ತುಂಬಿತ್ತು ಎಂದು ಪ್ರಸಾದರು ಹೇಳುತ್ತಾರೆ. ಬಂಗಾಲದ ವಿಭಜನೆ, ವಿದೇಶಿ ವಸ್ತುಗಳ ನಿರಾಕರಣೆ, ಸ್ವದೇಶಿ ಚಳುವಳಿ ಮುಂತಾದ ಅನೇಕ ವಿಷಯಗಳು ಎಲ್ಲೆಡೆಯೂ ಚರ್ಚಿತವಾಗುತ್ತಿದ್ದವು. ಬಿಹಾರದ ಸ್ಥಿತಿಗತಿಗಳನ್ನು ಸುಧಾರಿಸಲು ಪ್ರಸಾದರು ನಡೆಸುತ್ತಿದ್ದ ಚಟುವಟಿಕೆಗಳು ಗೋಪಾಲಕೃಷ್ಣ ಗೋಖಲೆಯವರ ಗಮನಕ್ಕೆ ಬಂತು. ಆಗ ತಾನೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಗಾಂಧೀಜಿಯವರ ಗಮನವನ್ನೂ ಸೆಳೆಯಿತು.

ಗಾಂಧೀಜಿಯವರನ್ನು ಪ್ರಸಾದರು ೧೯೧೫ರ ವರ್ಷದಲ್ಲಿ ಮೊದಲು ಭೇಟಿಯಾದರು. ಆದರೆ ಈ ಭೇಟಿಗಳು ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಕ್ರಿಯಾಶಕ್ತಿಗಳ ಪರಿಚಯವಾದದ್ದು ಚಂಪಾರಣ್‌ದಲ್ಲಿ. ಪ್ರಸಾದರು ಅಲ್ಲಿಂದ ಮುಂದೆ ಗಾಂಧೀಜಿಯವರ ಅನುಯಾಯಿಯಾದರು. ಕೈತುಂಬ ವರಮಾನ ತರುತ್ತಿದ್ದ ವಕೀಲ ವೃತ್ತಿಯನ್ನು ತ್ಯಜಿಸಿದರು. ಜನರ ಹಿತಕ್ಕೆ ಮಾರಕವಾದ ಕಾನೂನುಗಳೆಲ್ಲವನ್ನೂ ವಿರೋಧಿಸಿದರು. ಈ ಅಸಹಕಾರಗಳಿಂದ ಸರ್ಕಾರದ ದೃಷ್ಟಿಯಲ್ಲಿ ದೇಶದ್ರೋಹಿ ಎನಿಸಿಕೊಂಡರು. ಸೆರೆಮನೆವಾಸ, ಸ್ವಂತ ಗಳಿಕೆ ಇಲ್ಲದ್ದರಿಂದ ಕಷ್ಟಕಾರ್ಪಣ್ಯಗಳು, ಎಡೆಬಿಡದೆ ಕಾಡುತ್ತಿದ್ದ ಅಸ್ತಮಾ ಇವು ಯಾವುವೂ ಅವರ ಕಾರ್ಯಚಟುವಟಿಕೆಗಳಿಗೆ ಅಡ್ಡಿಬರಲಿಲ್ಲ. ಸದಾ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಭಾಷಣ ಮತ್ತು ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದರು.

೧೯೩೪ರ ಜನವರಿ ೧೫ರಂದು ಸಂಭವಿಸಿದ ಭಯಂಕರ ಭೂಕಂಪ ಹಾಗೂ ಪ್ರವಾಹಗಳಿಂದ ಇಡೀ ಬಿಹಾರವೇ ತತ್ತರಿಸಿತ್ತು. ಅದರ ಮರುದಿನವೇ ಸೆರೆಮನೆಯಿಂದ ಬಿಡುಗಡೆ ಹೊಂದಿದ ಪ್ರಸಾದರು, ತಮ್ಮ ತೀವ್ರ ಅನಾರೋಗ್ಯವನ್ನೂ ಲೆಕ್ಕಿಸದೆ ಬಹುದೊಡ್ಡ ಪ್ರಮಾಣದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯವನ್ನು ಸಂಘಟಿಸಿದರು. ಮರುವರ್ಷವೇ ಕ್ವೆಟ್ಟಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತರಾದವರಿಗೂ ನೆರವು ಕಳಿಸಲು ಶ್ರಮಿಸಿದರು. ಸರ್ಕಾರದ ಕಾರ್ಯಕ್ರಮಕ್ಕಿಂತ ಯಶಸ್ವಿಯಾದ ಅವರ ಕಾರ್ಯಕ್ರಮ ಅವರ ಸಂಘಟನಾ ಚಾತುರ್ಯಕ್ಕೆ ಹಾಗೂ ಕ್ರಿಯಾಶಕ್ತಿಗೆ ಸಾಕ್ಷಿಯಾಗಿದ್ದವು. ಅವರ ಈ ಎಲ್ಲ ಜನಹಿತ ಕಾರ್ಯಗಳಿಂದಾಗಿ ರಾಜೇಂದ್ರ ಪ್ರಸಾದರು ಜನರ ಪ್ರೀತಿಯ “ರಾಜೆನ್ ಬಾಬು” ಆದರು.

೧೯೩೪ರಲ್ಲಿ ಮುಂಬಯಿ (ಈಗಿನ ಮುಂಬಯಿ) ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ; ೧೯೨೯ ಹಾಗೂ ೧೯೩೬ರಲ್ಲಿ ಬಿಹಾರದ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷತೆ, ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷ ಪದವಿ – ಇವು ಅವರು ಅಲಂಕರಿಸಿದ ಕೆಲವು ಪ್ರಮುಖ ಹುದ್ದೆಗಳು.

೧೯೩೫ರ ಭಾರತ ಸರ್ಕಾರ ಕಾಯಿದೆ ಪ್ರಕಾರ ೧೯೩೭ರಲ್ಲಿ ಚುನಾವಣೆ ನಡೆದು, ಮಂತ್ರಿ ಮಂಡಲಗಳು ರಚನೆಯಾಗುವ ಕಾಲಕ್ಕೆ ಸಕ್ರಿಯ ಪಾತ್ರ ವಹಿಸಿದ ಕಾಂಗ್ರೆಸ್ ಸಂಸದೀಯ ಸಮಿತಿಯ ಒಬ್ಬ ಪ್ರಮುಖ ಸದಸ್ಯರು ರಾಜೇಂದ್ರ ಬಾಬು. 1946ರಲ್ಲಿ ಭಾರತದ ತಾತ್ಕಾಲಿಕ ಸರ್ಕಾರದಲ್ಲಿ ಆಹಾರ ಮತ್ತು ಕೃಷಿ ಖಾತೆಗಳ ಮಂತ್ರಿಯಾಗಿ ಗಣನೀಯ ಸಾಧನೆ ಮಾಡಿದರು. ಅದೇ ವರ್ಷ ಭಾರತದ ಸಂವಿಧಾನವನ್ನು ರೂಪಿಸಲು ಹಾಗೂ ತಾತ್ಕಾಲಿಕ ಸಂಸತ್ತಾಗಿ ಕಾರ್ಯ ನಿರ್ವಹಿಸಲು ರಚಿತವಾದ ಸಂವಿಧಾನ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಸಂವಿಧಾನ ನಿರ್ಮಾಣದಲ್ಲಿ ರಾಜೀನ್‌ಬಾಬು ಅವರ ಕಾಣಿಕೆಯು ಅಮೂಲ್ಯವಾದುದು.

ರಾಷ್ಟ್ರಪತಿಗಳಾಗಿ[ಬದಲಾಯಿಸಿ]

೧೯೫೦ರ ಜನವರಿ ೨೬ರಂದು ಭಾರತವು ಗಣರಾಜ್ಯವಾದಾಗ ಸ್ವತಂತ್ರ ಭಾರತದ ಮೊಟ್ಟ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೫೨ ಮತ್ತು ೧೯೫೭ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಮೇಲೂ ರಾಜೆನ್ ಬಾಬು ಅವರೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ರಾಜೆನ್ ಬಾಬು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು.

ಕಡೆಯ ವರ್ಷಗಳು[ಬದಲಾಯಿಸಿ]

೧೯೬೨ರಲ್ಲಿ ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾಗಿ[೩], ತಾವೇ ಪಾಟ್ನಾದಲ್ಲಿ ಸ್ಥಾಪಿಸಿದ ಸದಾಕತ್ ಆಶ್ರಮದಲ್ಲಿ ನೆಲೆಸಿದರು.

ಕಡೆಯ ದಿನಗಳಲ್ಲಿ ರಾಜೇಂದ್ರ ಪ್ರಸಾದರು ತುಂಬ ದುಃಖ ಅನುಭವಿಸಿದರು. ಪತ್ನಿ ಹಾಗೂ ಪ್ರೀತಿಯ ಅಕ್ಕ ಇವರ ಮರಣ, ಚೀನಾ ದೇಶ ಭಾರತದ ಮೇಲೆ ನಡೆಸಿದ ಆಕ್ರಮಣ ಇವೆಲ್ಲವೂ ಅವರನ್ನು ತುಂಬ ದುಃಖಕ್ಕೀಡು ಮಾಡಿದವು. ಕೇವಲ ಒಂದು ವರ್ಷದೊಳಗೇ ೧೯೬೩ರ ಫೆಬ್ರವರಿ ೨೮ರಂದು ನಿಧನರಾದರು[೪]

ಸರಳತೆ[ಬದಲಾಯಿಸಿ]

ದೇಶದ ಅತ್ಯುಚ್ಛ ಪದವಿಯನ್ನಲಂಕರಿಸಿದರೂ, ಆ ಪದವಿಗೆ ತಕ್ಕ ವೈಭವವೆಲ್ಲವೂ ಅವರನ್ನು ಸುತ್ತುವರಿದಿದ್ದರೂ, ಅವರು ಮಾತ್ರ ಆಡಂಬರ ರಹಿತ ಜೀವನವನ್ನೇ ನಡೆಸಿಕೊಂಡು ಬಂದರು. ಸಂವಿಧಾನಿಕವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಘನತೆ ಹಾಗೂ ಗೌರವಗಳನ್ನು ದೊರಕಿಸಿಕೊಟ್ಟರು. ಜನರ ಸಂಪರ್ಕವನ್ನು ಉಳಿಸಿಕೊಳ್ಳುವುದಕ್ಕಾಗಿ, ರೈಲಿನಲ್ಲೇ ಪ್ರವಾಸ ಮಾಡುತ್ತಿದ್ದರು. ತಮಗೆ ನಿಗದಿಯಾಗಿದ್ದ ಸಂಬಳ ಮತ್ತು ಭತ್ಯಗಳನ್ನು ಸ್ವ–ಇಚ್ಛೆಯಿಂದ ೨,೫೦೦ ರೂಪಾಯಿಗಳಿಗೆ ಇಳಿಸಿಕೊಂಡರು. ಶ್ರೀ ಕೆ.ಎಂ. ಮುನ್ಷಿಯವರ ಅಹ್ವಾನದ ಮೇಲೆ ಐತಿಹಾಸಿಕ ಸೋಮನಾಥ ದೇವಾಲಯದ ಜೀರ್ಣೊದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪಟ್ನಾ, ಜುಲೈ 4: ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಜೆಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ! ಯಾವುದಪ್ಪಾ ಆ ಬ್ಯಾಂಕು ಇನ್ನೂ ಅಂಥಾ ಖಾತೆಯನ್ನು ಉಳಿಸಿಕೊಂಡಿರುವುದು ಎಂದು ಆಶ್ಚರ್ಯಪಟ್ಟಿರಾ? ಅದುವೇ ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇನ್ನು ರಾಷ್ಟ್ರದ ಮೊಟ್ಟಮೊದಲ ಪ್ರಜೆ ದಿವಂಗತ ಬಾಬು ರಾಜೇಂದ್ರ ಪ್ರಸಾದ್. ಅದಿರಲಿ ಈ ವಿಷ್ಯಾ ಈಗೇಕೆ ಎಂದರೆ 14ನೇ ರಾಷ್ಟ್ರಪತಿ ಪದಗ್ರಹಣದ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಒಂದಷ್ಟು ಹಳೆಯ ಮೆಲುಕುಗಳು... ಸುಮಾರು 50 ವರ್ಷಗಳ ನಂತರವೂ ಸಾಕ್ಷಾತ್ ರಾಷ್ಟ್ರಪತಿಯೊಬ್ಬರ ಉಳಿತಾಯ ಖಾತೆಯನ್ನು ಉಳಿಸಿಕೊಂಡಿರುವ ಹೆಮ್ಮೆ ಬಿಹಾರದ ಪಟ್ನಾದಲ್ಲಿ Exhibition Road ನಲ್ಲಿರುವ PNB ಶಾಖೆಯದ್ದಾಗಿದೆ. ಬಾಬು ರಾಜೇಂದ್ರ ಪ್ರಸಾದ್ ಅವರು ತಾವು ಅಸುನೀಗುವುದಕ್ಕೆ ಕೆಲವೇ ತಿಂಗಳುಗಳ ಮುನ್ನ, 1962ರ ಅಕ್ಟೋಬರ್ 24ರಂದು ಈ ಖಾತೆಯನ್ನು ತೆರೆದಿದ್ದರು. 'ನಮ್ಮ ಬ್ಯಾಂಕು ಇಂದಿಗೂ ರಾಜೇಂದ್ರ ಪ್ರಸಾದ್ ಅವರ ಖಾತೆಗೆ prime customer status ಸ್ಥಾನಮಾನ ನೀಡಿದೆ. ಅದು ನಮ್ಮ ಹೆಮ್ಮೆಯೂ ಹೌದು' ಎನ್ನುತ್ತಾರೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್ಎಲ್ ಗುಪ್ತಾ ಅವರು. ಶಾಖೆಯ ನೋಟಿಸ್ ಬೋರ್ಡಿನಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಭಾವಚಿತ್ರವನ್ನು ಹಾಕಿ ಅದರ ಕೆಳಗೆ ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು 0380000100030687 ನಮೂದಿಸಿದೆ. ಅಂದಹಾಗೆ ಪ್ರತಿ ಆರು ತಿಂಗಳಿಗೊಮ್ಮೆ ಈ ಖಾತೆಗೆ ಬಡ್ಡಿ ಹಣ ಜಮೆಯಾಗುತ್ತಿರುತ್ತದೆ. ಆದರೆ ಇದುವರೆಗೂ ಯಾರೂ ಈ ಹಣ ತಮಗೆ ಸೇರಬೇಕು ಎಂದು ಕೇಳಿಕೊಂಡು ಬಂದಿಲ್ಲ. ಸಹಜ ಕುತೂಹಲದಿಂದ ಅವರ ಖಾತೆಯಲ್ಲಿರುವ ಮೊತ್ತ ಎಷ್ಟು ಎಂದು ನೋಡಿದಾಗ ಆ ಮೊತ್ತ 1,813 ರೂಪಾಯಿ. ಎಂಬುದು ಬೆಳಕಿಗೆ ಬರುತ್ತದೆ. ಬಾಬು ರಾಜೇಂದ್ರ ಪ್ರಸಾದ್ ಅವರು ಬಿಹಾರದ ಸಿವಾನ್ ಜಿಲ್ಲೆಯ ಜೆರಾಡಿ ಗ್ರಾಮದಲ್ಲಿ 1884ರ ಡಿಸೆಂಬರ್ 3ರಂದು ಜನಿಸಿದ್ದರು. ಪಟ್ನಾದಲ್ಲಿ 1963ರ ಫೆಬ್ರವರಿ 28ರಂದು ಮೃತಪಟ್ಟಿದ್ದರು. ಅವರು 1952ರಿಂದ 1962ರ ವರೆಗೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಕೃತಿಗಳು[ಬದಲಾಯಿಸಿ]

ರಾಜೇಂದ್ರ ಪ್ರಸಾದರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಮಾನ ಪ್ರಭುತ್ವವಿತ್ತು. ಈ ಎರಡರಲ್ಲಿಯೂ ಪುಸ್ತಕಗಳನ್ನು ಬರೆದಿದ್ದಾರೆ. “ಚಂಪಾರಣ್ ಸತ್ಯಾಗ್ರಹ” ಮಹಾತ್ಮಾ ಗಾಂಧಿಯವರ ಪದತಲದಲ್ಲಿ “ಆತ್ಮಕಥೆ”, “ಭಾರತದ ವಿಭಜನೆ” ಇವು ಅವರ ಕೆಲವು ಪ್ರಮುಖ ಪುಸ್ತಕಗಳು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಅಲಹಾಬಾದ್ ಹಾಗೂ ದಿಲ್ಲಿ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದವು. ೧೯೬೨ರಲ್ಲಿ “ಭಾರತ ರತ್ನ” ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು[೫].

ಆಕರಗಳು[ಬದಲಾಯಿಸಿ]

  1. ಕಣಜದಲ್ಲಿ Archived 2016-03-06 at the Wayback Machine.
  2. ರಾಜೇಂದ್ರಭವಾನ್ ಟ್ರಸ್ಟ್ Archived 2013-11-26 at the Wayback Machine.
  3. ಹಿಂದಿನ ರಾಷ್ಟ್ರಪತಿಗಳು - ರಾಷ್ಟ್ರಪತಿ ರಾಜೇಂದ್ರಪ್ರಸಾದ್
  4. ಇಂಗ್ಲಿಷ್ ವಿಕಿಪೀಡಿಯ

ಉಲ್ಲೇಖಗಳು[ಬದಲಾಯಿಸಿ]

  1. "Dr. Rajendra Prasad Biography". iloveindia.com. Retrieved 2015-03-05.
  2. "DR. RAJENDRA PRASAD". pastpresidentsofindia.indiapress.org. Retrieved 2015-03-05.
  3. "Dr. Rajendra Prasad". chhapra.co.in. Archived from the original on 2015-09-05. Retrieved 2015-03-05.
  4. "Dr. Rajendra Prasad". rss.bih.nic.in. Archived from the original on 2015-05-17. Retrieved 2015-03-05.
  5. "First Citizen". /indiatogether.org. Archived from the original on 2015-05-17. Retrieved 2015-03-05.