ವಿಷಯಕ್ಕೆ ಹೋಗು

ಗಣಿತ ಸಂಘಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಿತ ಸಂಘ ಎಂದರೆ ಗಣಿತಜ್ಞರು ಸಮಾನ ಆಸಕ್ತಶೀಲ ಗಣಿತಜ್ಞರೊಡನೆ ಅಭಿಪ್ರಾಯಗಳನ್ನೂ, ಸಂಶೋಧನೆಗಳನ್ನು ವಿನಿಮಯಿಸಿಕೊಳ್ಳಲು ಸ್ಥಾಪಿಸಿಕೊಂಡಿರುವ ವಿಚಾರವೇದಿಕೆ.

ಗಣಿತ ಸಂಘಗಳ ಉದ್ದೇಶ, ಕೆಲಸಗಳು

[ಬದಲಾಯಿಸಿ]

ಗಣಿತಜ್ಞರಲ್ಲಿ ಸಂಸರ್ಗ ಕಲ್ಪಿಸುವುದೇ ಇವುಗಳ ಮುಖ್ಯೋದ್ದೇಶ. 17ನೆಯ ಶತಮಾನದವರೆಗೆ ಅಭಿಪ್ರಾಯವಿನಿಮಯಗಳು ಪರಸ್ಪರ ಭೇಟಿ ಮತ್ತು ಪತ್ರ ವ್ಯವಹಾರಗಳಲ್ಲಿ ನಡೆಯುತ್ತಿತ್ತು. ಗಣಿತಜ್ಞರ ಸಂಖ್ಯೆ ಹೆಚ್ಚಾದಾಗ ಗಣಿತ ಸಂಘಗಳ ಸ್ಥಾಪನೆ ಅನಿವಾರ್ಯವಾಯಿತು. ಸಭೆ ಸಮ್ಮೇಳನಗಳನ್ನು ನಡೆಸಿ, ಸಂಶೋಧನೆಗಳ ಲೇಖನಗಳಿರುವ ನಿಯತಕಾಲಿಕಗಳನ್ನು ಪ್ರಕಟಿಸಿ ಗಣಿತ ಸಂಘಗಳು ಈ ಸಂಸರ್ಗವನ್ನು ಸಾಧಿಸಿವೆ. ಗ್ರಂಥಾಲಯಗಳನ್ನು ಸ್ಥಾಪಿಸಿ ವಿದೇಶ ವಿನಿಮಯದ ನಿರ್ಬಂಧವಿರುವ ರಾಷ್ಟ್ರಗಳಲ್ಲಿ ನಿಯತಕಾಲಿಕಗಳನ್ನು ಬದಲಾಯಿಸಿಕೊಂಡು ಜ್ಞಾನಪ್ರಸಾರ ನಿಜವಾಗಿಯೂ ಅಂತರಾಷ್ಟ್ರೀಯವಾಗುವಂತೆ ಮಾಡುವುದರಲ್ಲಿ ಗಣಿತ ಸಂಘಗಳು ಯಶಸ್ವಿಯಾಗಿವೆ. ಇದಲ್ಲದೆ ಸದಸ್ಯರಿಗೆ ಉದ್ಯೋಗಾವಕಾಶ ಮಾಹಿತಿಯನ್ನು ಒದಗಿಸಿಕೊಡುವುದು, ಸಾಮೂಹಿಕ ಜೀವವಿಮೆ ಇಳಿಸುವುದರಲ್ಲಿ ನೆರವಾಗುವುದು ಇವೇ ಮೊದಲಾದ ಕಾರ್ಯಕ್ರಮಗಳನ್ನು ಅಮೆರಿಕಾದ ಕೆಲವು ಗಣಿತ ಸಂಘಗಳು ಇಟ್ಟುಕೊಂಡಿವೆ. ಹೆಚ್ಚಿನ ಸಂಘಗಳು ಮೊದಲಿಗೆ ಒಂದು ವಿಶ್ವವಿದ್ಯಾಲಯಕ್ಕಾಗಲೀ ಒಂದು ನಗರಕ್ಕಾಗಲೀ ಸೀಮಿತಗೊಂಡಿದ್ದು ಪ್ರಾದೇಶಿಕ ಸಂಘಗಳಾಗಿಯೇ ಹುಟ್ಟಿಕೊಂಡರೂ ಅವುಗಳ ಪೈಕಿ ಹೆಚ್ಚಿನವು ಬೇಗನೆ ಪ್ರಗತಿ ಹೊಂದಿ ರಾಷ್ಟ್ರೀಯ ಸಂಘಗಳಾಗಿ ಪ್ರವರ್ಧಿಸಿದವು. ಕೆಲವು ಅಂತರಾಷ್ಟ್ರೀಯ ಸಂಘಗಳೂ ಇವೆ. ಆದರೆ ಇವು ರಾಷ್ಟ್ರೀಯ ಸಂಘಗಳಷ್ಟು ಜಯಪ್ರದವಾಗಿಲ್ಲ. ಚರ್ಚಾತೀತವಾದ, ಸಮರ್ಪಕ ಸಂಶೋಧನಾ ಫಲಿತಾಂಶಗಳಿರುವ ಲೇಖನಗಳನ್ನಷ್ಟೇ ಗಣಿತ ಸಂಘಗಳು ಸಮ್ಮೇಳನಗಳಲ್ಲಿ ಮಂಡಿಸುವುದು ಸಂಪ್ರದಾಯ. ಕಡಿಮೆ ಓದುಗರಿರುವ ಮತ್ತು ವ್ಯಾವಹಾರಿಕವಾಗಿ ಲಾಭದಾಯಕವಲ್ಲದ ನಿಯತಕಾಲಿಕಗಳನ್ನು ಗಣಿತ ಸಂಘಗಳು ಪ್ರಕಟಿಸಬೇಕಾಗಿದೆ. ಈ ಕಾರ್ಯಕ್ಕೆ ಕೆಲವೊಮ್ಮೆ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಧನಸಹಾಯ ಮಾಡಿ ನೆರವಾಗುವುದುಂಟು.

ಇತಿಹಾಸ, ಪ್ರಮುಖ ಗಣಿತ ಸಂಘಗಳು

[ಬದಲಾಯಿಸಿ]

ಈಗಿರುವ ಗಣಿತ ಸಂಘಗಳಲ್ಲಿ ಅತ್ಯಂತ ಪ್ರಾಚೀನವಾದುದು ಮ್ಯಾತಮ್ಯಾಟಿಶೆ ಗೆಜ಼ೆಲ್ ಶಾಪ್ಟ್. ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ 1690ರಲ್ಲಿ ಇದರ ಸ್ಥಾಪನೆ. 1881ರಿಂದ ಇದು ಮಿಟ್ಟೈಲೂನ್ (ನಿವೇದನೆ) ಪ್ರಕಟಿಸುತ್ತದೆ.[][] 1717ರಲ್ಲಿ ಲಂಡನ್ನಿನಲ್ಲಿ ರೂಪಗೊಂಡ ಚರ್ಚಾಕೂಟ (ಡಿಸ್ಕಶನ್ ಸರ್ಕಲ್) ಇನ್ನೊಂದು ಪ್ರಾಚೀನ ಸಂಘ. 1845ರ ವರೆಗೆ ಇದರ ಅಸ್ತಿತ್ವವಿತ್ತು. ಬಳಿಕ ಇದು ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯೊಡನೆ ವಿಲೀನಗೊಂಡಿತು. ವಿಸ್ಕೊಂಡಿಶ್ ಗೆನೋಟ್ ಶಪ್ಟ್ ಸಂಘ 1778ರಲ್ಲಿ ಆಮ್‌ಸ್ಟರ್‌ಡಾಮ್ ನಗರದಲ್ಲಿ ಸ್ಥಾಪಿಸಲ್ಪಟ್ಟಿತು. ಉಳಿದೆಲ್ಲ ರಾಷ್ಟ್ರೀಯ ಸಂಘಗಳ ಉದಯ 19ನೆಯ ಶತಮಾನದ ಉತ್ತರಾರ್ಧದ ತರುವಾಯವೇ. ರಾಷ್ಟ್ರೀಯ ಸಂಘಗಳಲ್ಲಿ ಅತ್ಯಂತ ಹಳೆಯದು ಮಾಸ್ಕೋ ಗಣಿತ ಸಂಘ. ಇದರ ಕಾರ್ಯಾರಂಭವಾದದ್ದು 1864ರಲ್ಲಿ. 1867ರಲ್ಲಿ ವಿಶಾಲ ತಳಹದಿಯ ಮೇಲೆ ಇದನ್ನು ತಿರುಗಿ ಸ್ಥಾಪಿಸಲಾಯಿತು. ಇದು ಮುಖ್ಯವಾಗಿ ಎರಡು ನಿಯತಕಾಲಿಕಗಳನ್ನು ಪ್ರಕಟಿಸುತ್ತದೆ. 1952ರಿಂದ ಪ್ರಕಟವಾಗುತ್ತಿರುವ ಟ್ರಾನ್ಸಾಕ್ಷನ್ಸ್ ಇವುಗಳಲ್ಲೊಂದು.[] ರಷ್ಯದಲ್ಲಿ ಇನ್ನೂ ಅನೇಕ ಗಣಿತ ಸಂಘಗಳಿವೆ. ಇವುಗಳಲ್ಲಿ 1879ರಲ್ಲಿ ಪ್ರಾರಂಭವಾದ ಕಾರ್ಖೋಫ್‌ನ ಗಣಿತ ಸಂಘ ಉಲ್ಲೇಖಾರ್ಹ.[] ಲಂಡನ್ ವಿಶ್ವವಿದ್ಯಾಲಯದಲ್ಲಿ 1865ರಲ್ಲಿ ಪ್ರಾದೇಶಿಕ ಸಂಸ್ಥೆಯಾಗಿ ಹುಟ್ಟಿದ ಲಂಡನ್ ಗಣಿತ ಸಂಘ ಶೀಘ್ರವೇ ಪ್ರಗತಿ ಹೊಂದಿ ಇಂಗ್ಲೆಂಡಿನ ರಾಷ್ಟ್ರೀಯ ಗಣಿತ ಸಂಘವೆಂದು ಪರಿಗಣಿಸಲ್ಪಟ್ಟಿದೆ. ದೊಡ್ಡ ಗಾತ್ರದ ಪ್ರಬಂಧಗಳನ್ನು ಇದು ಪ್ರೊಸೀಡಿಂಗ್ಸ್‌ನಲ್ಲಿಯೂ (1865 ರಿಂದ),[] ಸಣ್ಣವನ್ನು ಜರ್ನಲ್‌ನಲ್ಲಿಯೂ (1926 ರಿಂದ) ಪ್ರಕಟಿಸುತ್ತದೆ.[] ಎಡಿನ್‌ಬರೋ ಗಣಿತ ಸಂಘದ ಸ್ಥಾಪನೆ 1883 ರಲ್ಲಿ. ಅದೇ ವರ್ಷ ಪ್ರೊಸೀಡಿಂಗ್ಸ್‌ನ ಪ್ರಕಟಣೆ ಆರಂಭವಾಯಿತು. 1909 ರಿಂದ 1961 ರ ವರೆಗೆ ನೋಟ್ಸ್‌ನ್ನು ಪ್ರಕಟಿಸಿತು.[] ಫ್ರಾನ್ಸಿನ ಗಣಿತ ಸಂಘವನ್ನು 1872 ರಲ್ಲಿ ಸ್ಥಾಪಿಸಲಾಯಿತು. ಅದೇ ವರ್ಷ ಬುಲೆಟಿನ್ ಪ್ರಕಟಣೆ ಆರಂಭವಾಯಿತು. 1890 ರಲ್ಲಿ ಜರ್ಮನಿಯ ಡಾಯ್ಕೆ ಮ್ಯಾತಮ್ಯಾಟಿಶೆ ಫೆರೈನ್ ಗುಂಗ್ ಸ್ಥಾಪನೆ. 1892 ರಿಂದ ಪ್ರಕಟವಾಗುತ್ತಿರುವ ಈ ಸಂಘದ ಯಾರೆಬೆರಿಷ್ಟೆಯಲ್ಲಿ (ವಾರ್ಷಿಕ ಸರದಿ) ಗಣಿತದ ಬೆಳವಣಿಗೆಯನ್ನು ಸೂಚಿಸುವ ಅಮೂಲ್ಯ ಲೇಖನಗಳನ್ನೂ, ಸಮೀಕ್ಷೆಯ ರೂಪದಲ್ಲಿರುವ ದೀರ್ಘ ಪ್ರಬಂಧಗಳನ್ನೂ ಕಾಣಬಹುದು. ಈ ವರದಿಗಳು ಇತ್ತೀಚೆಗೆ ಎರಡು ಸಂಪುಟಗಳಲ್ಲಿ ಪುನರ್ಮುದ್ರಣಗೊಂಡಿವೆ. ಇಟೆಲಿಯ ಸರ್ಕೊಲೊ ಮ್ಯಾತಮಾಟಿಕೊ ಡಿ ಪಾಲೆರ್ಮೊ 1884 ರಲ್ಲಿ ಸ್ಥಾಪನೆಯಾಯಿತು.[] ಶೀಘ್ರವೇ ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. 1887 ರಿಂದ ಪ್ರಕಟವಾಗುತ್ತಿರುವ ರೆಂಡಿಕೋಂಟಿ ಅನೇಕ ವರ್ಷಗಳವರೆಗೆ ಪ್ರಪಂಚದ ಪ್ರಮುಖ ನಿಯತಕಾಲಿಕವೆಂದು ಪರಿಗಣಿಸಲ್ಪಟ್ಟಿತ್ತು. ಯೂನಿಯನ್ ಮ್ಯಾತಮ್ಯಾಟಿಕಾ ಇಟಾಲಿಯಾನಾ 1922 ರಲ್ಲಿ ಸ್ಥಾಪನೆ.[][೧೦][೧೧] ಅದೇ ವರ್ಷದಿಂದ ಇದು ಬುಲೆಟಿನೊವನ್ನು ಪ್ರಕಟಿಸುತ್ತಿದೆ. 1888 ರಲ್ಲಿ ಸ್ಥಾಪಿತವಾದ ನ್ಯೂಯಾರ್ಕ್ ಗಣಿತ ಸಂಘ 1894 ರಲ್ಲಿ ಅಮೆರಿಕನ್ ಮ್ಯಾಥಮ್ಯಾಟಿಕಲ್ ಸೊಟೈಟಿಯಾಗಿ ಪರಿವರ್ತನೆಗೊಂಡಿತು. ಇದು ಜಗತ್ತಿನಲ್ಲೇ ಹೆಸರುವಾಸಿಯಾದ ಸಂಘ. 1891 ರಿಂದ ಉಪನ್ಯಾಸಗಳು, ಪ್ರಬಂಧಗಳು ಮತ್ತು ಸಂಘದ ಕಾರ್ಯಕಲಾಪಗಳ ವಿವರಣೆಗಳನ್ನು ಒಳಗೊಂಡ ಬುಲೆಟಿನನ್ನು ಇದು ಪ್ರಕಟಿಸುತ್ತಿದೆ. ಇದಲ್ಲದೆ ದೀರ್ಘ ಲೇಖನಗಳನ್ನು ಟ್ರಾನ್ಸಾಕ್ಷನ್ಸ್‌ನಲ್ಲಿ (1900 ರಿಂದ), ಸುದೀರ್ಘ ಪ್ರಬಂಧಗಳನ್ನು ಮೆಮಾಯ್‍ರ್ಸ್‌ನಲ್ಲಿ (1950 ರಿಂದ), ಸಣ್ಣ ಲೇಖನಗಳನ್ನು ಪ್ರೊಸೀಡಿಂಗ್ಸ್‌ನಲ್ಲಿ ಇದೇ ಸಂಘ ಪ್ರಪಂಚದ ಇತರ ಕೆಲವು ಗಣಿತ ಸಂಘಗಳ ಸಹಕಾರದಿಂದ ಪ್ರಕಟಿಸುತ್ತಿದೆ. 1938 ರಲ್ಲಿ ಸಂಘದ ಚರಿತ್ರೆಯನ್ನೂ, 1950 ರಲ್ಲಿ ಹಿರಿಯ ಗಣಿತಜ್ಞರಾದ ಜಾರ್ಜ್ ಬಿರ್ಕಾಫರ ಲೇಖನಗಳನ್ನೂ ಮೂರು ಸಂಪುಟಗಳಲ್ಲಿ ಪ್ರಕಟಿಸಿದೆ. ಮ್ಯಾಥ್‌ಮ್ಯಾಟಿಕಲ್ ಅಸೋಸಿಯೇಷನ್ ಆಫ್ ಅಮೆರಿಕದ ಸ್ಥಾಪನೆ ಆದದ್ದು 1915 ರಲ್ಲಿ. ಸದಸ್ಯ ಸಂಖ್ಯೆಯಲ್ಲಿ ಈ ಸಂಘಕ್ಕೆ ಅಗ್ರಸ್ಥಾನ. ಅಮೆರಿಕನ್ ಮ್ಯಾಥ್‌ಮ್ಯಾಟಿಕಲ್ ಮಂತ್ಲಿ, ಕೇರಸ್ ಮೊನೊಗ್ರಾಫ್, ಸ್ಲಾಟ್ ಮೆಮೋರಿಯಲ್ ಪೇಪರ್ಸ್ ಇದರ ಪ್ರಕಟಣೆಗಳು. ಅನ್ವಯ ಗಣಿತಕ್ಕೆ ಮೀಸಲಾದ ಸಂಘ ಸಿಯಾಂ. ಇದರ ಸ್ಥಾಪನೆ 1951 ರಲ್ಲಿ.[೧೨] ಇದು ರಿವ್ಯೂ, ಜರ್ನಲ್ ಆಫ್ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್‌ನ್ನು ಮೊದಲ್ಗೊಂಡು ಏಳು ನಿಯತಕಾಲಿಕಗಳನ್ನು ಪ್ರಕಟಿಸುತ್ತಿದೆ. 1960ರ ಹೊತ್ತಿಗೆ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಗಣಿತ ಸಂಘಗಳ ಸ್ಥಾಪನೆಯಾಗಿತ್ತು. ಇವುಗಳಲ್ಲಿ ವಿಖ್ಯಾತವಾದವು ಭಾರತದ ಮತ್ತು ಜಪಾನಿನ ಗಣಿತ ಸಂಘಗಳು. ಎರಡನೆಯ ಜಾಗತಿಕ ಯುದ್ಧಾನಂತರ ಸ್ಥಾಪನೆಯಾದ ಜಪಾನಿನ ಸಂಘ ಜರ್ನಲ್‌ನ್ನು ಪ್ರಕಟಿಸುತ್ತಿದೆ.

ಕೆಲವು ವಿಶ್ವವಿದ್ಯಾಲಯಗಳ ಗಣಿತ ಸಂಘಗಳು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಟೊರೊಂಟೊ ವಿಶ್ವವಿದ್ಯಾಲಯದ ಕೆನಡಿಯನ್ ಜರ್ನಲ್, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಜರ್ನಲ್, ಸ್ವೀಡನ್ನಿನ ಉಪ್ಸಲಾ ವಿಶ್ವವಿದ್ಯಾಲಯದ ಆಕ್ಟಾ ಮ್ಯಾಥ್‌ಮ್ಯಾಟಿಕಾ ಇಂಥವು. ಇವಲ್ಲದೆ ಗಣಿತದ ವಿಶಿಷ್ಟ ಕ್ಷೇತ್ರಗಳಿಗೆ ಸಂಬಂಧಪಟ್ಟ ಕೆಲವು ಸಂಘಗಳಿವೆ. ಈ ಸಂಘಗಳ ಪ್ರಕಟಣೆಗಳನ್ನು ಆವರಣದಲ್ಲಿ ಕೊಟ್ಟಿದೆ. ಅಮೆರಿಕದ ಸಿಂಬಾಲಿಕ್ ಲಾಜಿಕ್ ಸಂಸ್ಥೆ (ಜರ್ನಲ್), ಬಯೋಮೆಟ್ರಿಕ್ ಸಂಸ್ಥೆ (ಬಯೋಮೆಟ್ರಿಕ್), ಇಕೊನೊ ಮೆಟ್ರಿಕ್ ಸಂಘ (ಇಕೊನೊಮೆಟ್ರಿಕ್), ಸಂಖ್ಯಾಕಲನಶಾಸ್ತ್ರಜ್ಞರ ಸಂಘ (ಅನ್ನಲ್ಸ್ ಆಫ್ ಮ್ಯಾಥ್‌ಮ್ಯಾಟಿಕಲ್ ಸ್ಟ್ಯಾಟಿಸ್ಟಿಕ್ಸ್), ಫಿಬೋನಾಚ್ಚೀ ಸಂಘ (ಫಿಬೋನಾಚ್ಚೀ ಕ್ವಾರ್ಟರ್ಲಿ), ಜಪಾನಿನ ಟೆನ್ಸರ್ ಸಂಘ (ಟೆನ್ಸರ್) ಇವನ್ನು ಉಲ್ಲೇಖಿಸಬಹುದು.

ಭಾರತದಲ್ಲಿ

[ಬದಲಾಯಿಸಿ]

ಭಾರತೀಯ ಗಣಿತ ಸಂಘ 1907 ರಲ್ಲಿ ಮದ್ರಾಸಿನಲ್ಲಿ ರೂಪುಗೊಂಡಿತು. ಸ್ಥಾಪಿಸಿದವರು ವಿ. ರಾಮಸ್ವಾಮಿ ಅಯ್ಯರ್. ಜರ್ನಲ್ ಮತ್ತು ಸ್ಟ್ಯೂಡೆಂಟ್ ಎಂಬ ಎರಡು ನಿಯತಕಾಲಿಕಗಳು ಇದರ ಪ್ರಕಟಣೆಗಳು. ಇದಲ್ಲದೆ ವಾರ್ಷಿಕ ಸಮ್ಮೇಳನಗಳಲ್ಲಿ ಓದಲ್ಪಡುವ ಲೇಖನಗಳ ಸಾರಸಂಗ್ರಹವನ್ನು ಈ ಸಂಘ ಬಿಡಿಯಾಗಿ ಪ್ರಕಟಿಸುತ್ತದೆ. ಇದರ ಪ್ರಧಾನ ಕಾರ್ಯಾಲಯ ದೆಹಲಿ ವಿಶ್ವವಿದ್ಯಾಲಯದಲ್ಲೂ, ಗ್ರಂಥಾಲಯ ಮದ್ರಾಸ್ ವಿಶ್ವವಿದ್ಯಾಲಯದ ರಾಮಾನುಜಂ ಸಂಸ್ಥೆಯಲ್ಲೂ ಇವೆ. ಲಕ್ನೋದ ಭಾರತೀಯ ಗಣಿತ ಪರಿಷತ್ ಗಣಿತವನ್ನೂ ಸಂಘ ಬುಲೆಟಿನನ್ನೂ ಪ್ರಕಟಿಸುತ್ತಿವೆ. ಇವಲ್ಲದೆ ಅಲಹಾಬಾದ್ ಗಣಿತ ಸಂಘ, ದೆಹಲಿಯ ಆಪರೇಷನ್ ರೀಸರ್ಚ್ ಸಂಘಗಳನ್ನು ಕೂಡ ಇಲ್ಲಿ ಉಲ್ಲೇಖಿಸಬಹುದು.

ಅಂತಾರಾಷ್ಟ್ರೀಯ ಗಣಿತ ಸಮ್ಮೇಳನಗಳು

[ಬದಲಾಯಿಸಿ]

ಅಂತಾರಾಷ್ಟ್ರೀಯ ಗಣಿತ ಸಮ್ಮೇಳನಗಳು 19ನೆಯ ಶತಮಾನದಲ್ಲಿ ಕೆಲವೊಮ್ಮೆ ನಡೆದುವು. ಮೊದಲಿಗೆ 1897 ರಲ್ಲಿ ಅಂತಾರಾಷ್ಟ್ರೀಯ ಗಣಿತ ಕಾಂಗ್ರೆಸ್ ಜ್ಯೂರಿಚ್ ನಗರದಲ್ಲಿ ಸೇರಿತು.[೧೩] 1900 ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಿತು. ತದನಂತರ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ (ಯುದ್ಧಾವಧಿಯ ಹೊರತು) ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಈ ಸಭೆ ಸೇರುತ್ತಿದೆ. 1954ರಲ್ಲಿ ಆಮ್‌ಸ್ಟರ್‌ಡಾಮ್ ನಗರದಲ್ಲಿ ಸೇರಿದ ಸಭೆ ರಷ್ಯನ್, ಇಟಾಲಿಯನ್, ಫ್ರೆಂಚ್, ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳು ಮಾತ್ರ ಅಭಿಜಾತವೆಂಬ ನಿರ್ಣಯವನ್ನು ಅಂಗೀಕರಿಸಿದೆ. ಅಂತಾರಾಷ್ಟ್ರೀಯ ಗಣಿತ ಸಂಘಗಳ ಒಕ್ಕೂಟಕ್ಕೆ ಪ್ರಯತ್ನಗಳು ನಡೆಯುತ್ತಲೇ ಇದ್ದು 1950ರಲ್ಲಿ ಒಕ್ಕೂಟ ಅಸ್ತಿತ್ವಕ್ಕೆ ಬಂತು. ವಿಶ್ವಸಂಸ್ಥೆಯ ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘಕ್ಕೆ ಇದರ ಪ್ರವೇಶ 1952 ರಲ್ಲಾಯಿತು. ರಾಷ್ಟ್ರಗಳ ಪ್ರತಿನಿಧಿಗಳೇ ಈ ಸಂಘದ ಸದಸ್ಯರು.

ಪ್ರಪಂಚದ ಸಮಸ್ತ ರಾಷ್ಟಗಳ ಗಣಿತ ಸಂಘಗಳು ಪ್ರಕಟಿಸುವ ನಿಯತಕಾಲಿಕಗಳ ಸಂಖ್ಯೆ 1200ನ್ನೂ ಮಿಕ್ಕಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Notes", Bulletin of the American Mathematical Society, 14: 93, November 1907
  2. Mitteilungen der Mathematischen Gesellschaft in Hamburg, retrieved 2017-10-09
  3. https://www.mathnet.ru/php/journal.phtml?jrnid=mmo&wshow=details&option_lang=eng
  4. According to Ostrovskii (1999, p. 26)
  5. "Proceedings of the London Mathematical Society | London Mathematical Society".
  6. "Journal of the London Mathematical Society | London Mathematical Society".
  7. "Edinburgh Mathematical Notes". mcs.st-and.ac.uk. Retrieved 16 September 2014.
  8. The Mathematical Circle of Palermo, MacTutor History of Mathematics archive. Retrieved 2011-06-19.
  9. "Cenni storici sull'Unione Matematica Italiana" [History of the Italian Mathematical Union]. Unione Matematica Italiana (in ಇಟಾಲಿಯನ್). Retrieved 2022-11-30.
  10. Magenes, Enrico (1998). "Una testimonianza sul III Congresso dell'U.M.I" [A witness of the third Congress of the UMI]. Bollettino dell'Unione Matematica Italiana (in ಇಟಾಲಿಯನ್). 1-A (1): 1–6. Retrieved 2022-11-30.
  11. Magenes, Enrico (1998). "L'U.M.I. nel primo dopo-guerra (1945-1951)" [The UMI in the early years after WWI (1945-1951)]. Bollettino dell'Unione Matematica Italiana (in ಇಟಾಲಿಯನ್). 1-A (2): 145–152. Retrieved 2022-11-30.
  12. Grier, David Alan (2006). "Irene Stegun, the "Handbook of Mathematical Functions", and the Lingering Influence of the New Deal". The American Mathematical Monthly. 113 (7): 585–597. doi:10.2307/27642002. JSTOR 27642002.
  13. C., Bruno, Leonard (2003) [1999]. Math and mathematicians : the history of math discoveries around the world. Baker, Lawrence W. Detroit, Mich.: U X L. pp. 56. ISBN 0787638137. OCLC 41497065.{{cite book}}: CS1 maint: multiple names: authors list (link)


ಗ್ರಂಥಸೂಚಿ

[ಬದಲಾಯಿಸಿ]