ಖುರಾಸಾನಿ ಓಮ
ಹಯೊಸೈಯಾಮಸ್ ನೈಗರ್ | |
---|---|
ಹಯೊಸೈಯಾಮಸ್ ನೈಗರ್ ಕೋಲರ್‌ನ ಔಷಧೀಯ ಸಸ್ಯಗಳಲ್ಲಿ, 1887 | |
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಸೊಲನೇಲೀಸ್ |
ಕುಟುಂಬ: | ಸೊಲನೇಸೀ |
ಕುಲ: | ಹಯೊಸೈಯಾಮಸ್ |
ಪ್ರಜಾತಿ: | ಹ. ನೈಗರ್
|
Binomial name | |
ಹಯೊಸೈಯಾಮಸ್ ನೈಗರ್ |
ಖುರಾಸಾನಿ ಓಮ ಎನ್ನುವುದು ಹಯೊಸೈಯಾಮಸ್ ನೈಗರ್ ಎಂಬ ಸೊಲನೇಸೀ ಕುಟುಂಬಕ್ಕೆ ಸೇರಿದ ವಿಷಮೂಲಿಕೆಗೆ ಪ್ರಚಾರದಲ್ಲಿರುವ ಹೆಸರು.[೧][೨] ಕುರಾಸಾನಿ, ಹಂದಿಗಾಳು ಎನ್ನುವುದೂ ಉಂಟು. ಇಂಗ್ಲಿಷಿನಲ್ಲಿ ಹೆನ್‌ಬೇನ್ ಎಂದೂ ಕರೆವುದಿದೆ; ಗ್ರೇಟ್ ಬ್ರಿಟನ್ ಇದರ ತವರಾದರೂ ಇದು ಮಧ್ಯ ಮತ್ತು ದಕ್ಷಿಣ ಯೂರೋಪು, ಪಶ್ಚಿಮ ಏಷ್ಯಾ, ಸೈಬೀರಿಯಾ, ಭಾರತ, ಉತ್ತರ ಅಮೇರಿಕ-ಹೀಗೆ ಪ್ರಪಂಚದ ಅನೇಕ ಭಾಗಗಳಲ್ಲಿ ಹರಡಿದೆ.[೩]
ಲಕ್ಷಣಗಳು
[ಬದಲಾಯಿಸಿ]ಇದು ಬೆಳೆಯುವುದು ಪಾಳುಭೂಮಿಯಲ್ಲಿ ಮತ್ತು ಕಸದ ಕುಪ್ಪೆಗಳಲ್ಲಿ. ಇದರಲ್ಲಿ ಏಕವಾರ್ಷಿಕ ಬಗೆಯದು ಬೇಸಿಗೆಯಲ್ಲಿ 1' ರಿಂದ 2' ಯಷ್ಟು ಎತ್ತರ ಬೆಳೆದು ಹೂ ಬಿಟ್ಟು, ಬೀಜ ಕೊಡುತ್ತದೆ. ದ್ವೈವಾರ್ಷಿಕ ಬಗೆಯದು ಔಷಧದ ದೃಷ್ಟಿಯಿಂದ ಮುಖ್ಯವಾದುದು. ಇದು ಮೊದಲನೆಯ ವರ್ಷ ಕುಚ್ಚುಕುಚ್ಚಾಗಿ ಎಲೆ ತೋರುತ್ತದೆ. ಈ ಎಲೆಗಳು ಚಳಿಗಾಲದಲ್ಲಿ ಉದುರಿದರೂ ಗಿಡ ಒಣಗುವುದಿಲ್ಲ; ಮುಂದಿನ ವಸಂತದಲ್ಲಿ ಮತ್ತೆ ಚಿಗುರಿ ಎರಡು ಅಡಿಯಷ್ಟು ಎತ್ತರವಾಗಿಯೂ, ಸುಪುಷ್ಟವಾಗಿಯೂ ಬೆಳೆದು ಗೊಂಚಲು ಗೊಂಚಲಾಗಿ ಹೂಬಿಡುತ್ತದೆ. ಇವುಗಳ ಎಲೆಗಳು, ಅದರಲ್ಲೂ ತಳದ ಎಲೆಗಳು ದೀರ್ಘಚತುರಸ್ರಾಕಾರದವು. ಇವುಗಳ ತುದಿ ಕೋಚು ಕೋಚು. ರೋಮಗಳಿಂದ ಕೂಡಿರುವುದರಿಂದ ಈ ಎಲೆಗಳು ಬೆರಳಿಗೆ ಅಂಟುತ್ತವೆ. ಅಲ್ಲದೆ ಇವುಗಳಿಗೆ ಓಕರಿಕೆ ಬರಿಸುವ ವಾಸನೆ ಬೇರೆ ಇದೆ. ಈ ಗಿಡಗಳಲ್ಲಿನ ಹೂಗಳ ಬಣ್ಣ ಹಳದಿ ಅಥವಾ ಕಡುಗೆಂಪು; ಹೂಗಳು ಭಸ್ಮದಾನಿಯ ಆಕಾರದಲ್ಲಿರುತ್ತವೆ.
ಉಪಯೋಗಗಳು
[ಬದಲಾಯಿಸಿ]ಇದರ ಎಲೆಗಳನ್ನೂ, ಹೂವಿನ ತುದಿಗಳನ್ನೂ ಅಮಲು ಬರಿಸಲೂ ನಿದ್ದೆ ಬರಿಸಲೂ ಉಪಯೋಗಿಸುತ್ತಾರೆ. ವಿರೇಚಕಗಳಿಂದಾಗಬಹುದಾದ ಹೊಟ್ಟೆನುಲಿಯನ್ನು ತಡೆಯಲು ವಿರೇಚಕಗಳೊಂದಿಗೆ ಇದನ್ನು ಮಿಶ್ರಮಾಡಬಹುದು. ನೂರರಲ್ಲಿ ಕೇವಲ 0.1 ಪಾಲು ಇರುವ ಸಸ್ಯಕ್ಷಾರಗಳಿಂದಾಗಿ ಇದಕ್ಕೆ ಈ ಔಷಧೀಯ ಗುಣ ಒದಗಿದೆ.[೪] ಈ ಸಸ್ಯಕ್ಷಾರಗಳಲ್ಲಿ ಮುಖ್ಯವಾದುವು ಹಯೋಸಿಯಾಮಿನ್ (C17H23NO3), ಆಟ್ರೋಪೀನ್ (C17H23NO3), ಮತ್ತು ಸ್ಕೊಪೋಲಮೀನ್ (C17H21NO4).
ಹಯೋಸಯಾಮೀನ್ ಮತ್ತು ಅಟ್ರೊಪೀನುಗಳ ವ್ಯತ್ಯಾಸ ಅತಿಸ್ವಲ್ಪ. ಮೊದಲನೆಯದರ ಮೂಲಕ ಸಮಾನ ಅಲೆಯುದ್ದಗಳಿರುವ ಹಾಗೂ ಸಮತಲೀಯವಾದ ಕಿರಣಗಳನ್ನು ಹಾಯಿಸಿದರೆ ಕಿರಣ ಬಾಗುವುದು. ಅದರ ಅಣುವಿನಲ್ಲಿ, ಬಾಗಿಸುವ ಶಕ್ತಿಯನ್ನು ಹೊಂದಿರುವ ಲೇವೂ ಟ್ರೋಪಿಕ್ ಆಮ್ಲವಿದೆ. ಅಟ್ರೋಪೀನಿನಲ್ಲಿಯಾದರೊ ರೆಸಿಮಿಕ್ ಟ್ರೋಪಿಕ್ ಆಮ್ಲವಿದೆ. ದುರ್ಬಲ ಪ್ರತ್ಯಾಮ್ಲದ ದ್ರಾವಣದಿಂದ ಈ ಎಲೆಗಳಲ್ಲಿನ ಸಾರವನ್ನು ಹೊರತೆಗೆಯುವಾಗ ಹಯೋಸಯಾಮೀನು ಅಟ್ರೋಪೀನಾಗಿ ಬದಲಾವಣೆ ಹೊಂದುತ್ತದೆ. ಕಣ್ಣಿನ ಪಾಪೆಯನ್ನು ಹಿಗ್ಗಿಸುವ ಶಕ್ತಿಯುಳ್ಳ ಅಟ್ರೋಪೀನ್ ತಯಾರಿಕೆ ಈ ರೀತಿ ಸಾಧ್ಯ.[೫]
ಒಣಗಿಸಿ ಪುಡಿಮಾಡಿದ ಎಲೆ ಮತ್ತು ಹೂಗಳ ತುದಿಗಳನ್ನು ಸೇದುವ ಮಿಶ್ರಣಗಳಲ್ಲಿ ಅಲ್ಲದೆ ಮತ್ತು ತರಿಸುವ ಪಾನೀಯಗಳಲ್ಲಿ ಸೇರಿಸುವುದುಂಟು. ಕೆಲವು ಸಲ ಇದರ ಬೀಜಗಳನ್ನು ಹಲ್ಲುನೋವು ಕಡಿಮೆಮಾಡಲು ಉಪಯೋಗಿಸುತ್ತಾರೆ. ಇವೆರಡೂ ಸರಿಯಲ್ಲ. ಇದರಲ್ಲಿನ ರಾಸಾಯನಿಕಗಳ ಪ್ರಮಾಣ ನಿರ್ದಿಷ್ಟವಾಗಿಲ್ಲದಿರುವುದರಿಂದ ಇದರ ಕಷಾಯವನ್ನು ಔಷಧರೂಪವಾಗಿ ಬಳಸುವುದು ತುಂಬ ಅಪಾಯಕಾರಿ. ಆದರೆ ಇದರಿಂದ ತಯಾರಾದ, ಶುದ್ಧರೂಪದ ಔಷಧಗಳ ಉಪಯೋಗ ನಿಷಿದ್ಧವಲ್ಲ. ಅದಿರು ವಾಯು, ಬುದ್ಧಿಮಾಂದ್ಯ ಮುಂತಾದ ನರಮಂಡಲದ ಕಾಯಿಲೆಗಳ ಚಿಕಿತ್ಸೆಗೆ ಇವನ್ನು ಬಳಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Kennedy, David O. (2014). "The Deliriants: The Nightshade (Solanaceae) Family". Plants and the Human Brain. New York: Oxford University Press. pp. 131–7. ISBN 978-0-19-991401-2. LCCN 2013031617. OCLC 865508649.
- ↑ Wink 1998, p. 31
- ↑ Dines, T.D.; Smart, S.M.; Walker, K.J. Stroh, P.A.; Humphrey, T.A.; Burkmar, R.J.; Pescott, O.L.; Roy, D.B.; Walker, K.J. (eds.). "Henbane Hyoscyamus niger L." BSBI Online Plant Atlas 2020.
- ↑ Raetsch, Ch. (2005). The encyclopedia of psychoactive plants: ethnopharmacology and its applications. US: Park Street Press. pp. 277–282.
- ↑ Yazdani N, Sadeghi R, Momeni-Moghaddam H, Zarifmahmoudi L, Ehsaei A (2018). "Comparison of cyclopentolate versus tropicamide cycloplegia: A systematic review and meta-analysis". Journal of Optometry. 11 (3): 135–143. doi:10.1016/j.optom.2017.09.001. PMC 6039578. PMID 29132914.
ಹೊರಗಿನ ಕೊಂಡಿಗಳು
[ಬದಲಾಯಿಸಿ]