ಆಲ್ಕಲಾಯ್ಡ್ಗಳು
ಆಲ್ಕಲಾಯ್ಡ್ಗಳು ಪ್ರತ್ಯಾಮ್ಲೀಯ ಲಕ್ಷಣ, ಸಂಕೀರ್ಣ ರಚನೆ ಇರುವ ಮತ್ತು ಕೆಲವು ಜಾತಿಯ ಸಸ್ಯಗಳಲ್ಲಿ ದೊರೆವ ಸಾವಯವ (ಆರ್ಗ್ಯಾನಿಕ್) ವಸ್ತುಗಳು. ಮೂಲ ಲಕ್ಷಣದಲ್ಲಿ ಇವು ಆಲ್ಕಲಿಗಳನ್ನು (ಕ್ಷಾರ) ಹೋಲುವುದರಿಂದ ಈ ಹೆಸರು ಬಂದಿದೆ.
ನಾಮಕರಣ
[ಬದಲಾಯಿಸಿ]ನಿಕೊಟೀನ್‍ನಂಥ ಹಲವು ಆಲ್ಕಲಾಯ್ಡ್‌ಗಳ ರಚನೆಗಳು ಸರಳವಾದವುಗಳಾದರೂ ಬಹುಸಂಖ್ಯೆಯ ಆಲ್ಕಲಾಯ್ಡ್‌ಗಳು ಜಟಿಲ ರಚನೆಯುಳ್ಳವಾದ್ದರಿಂದ ರಾಸಾಯನಿಕ ನಾಮಕರಣ ನಿಯಮಗಳನ್ನು (ನಾಮನ್‍ಕ್ಲೇಚರ್ ರೂಲ್ಸ್) ಅನುಸರಿಸಿ ಇವುಗಳಿಗೆ ಹೆಸರಿಡುವುದು ಬಹಳ ಕಷ್ಟ . ಆದ್ದರಿಂದ ಈ ಬಗೆಯ ಪ್ರಯತ್ನವನ್ನು ಬಿಟ್ಟು ಇತರ ವಿಧಾನಗಳನ್ನು ಉಪಯೋಗಿಸುವುದು ಅನಿವಾರ್ಯ. ಸಾಮಾನ್ಯವಾಗಿ ಆಲ್ಕಲಾಯ್ಡ್‌ಗಳ ಹೆಸರುಗಳು ಅವುಗಳ ಆಕರ ಸಸ್ಯದ ಹೆಸರನ್ನು ಅವಲಂಬಿಸಿದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಅವುಗಳ ಗುಣ, ಲಕ್ಷಣ ಅಥವಾ ಉಪಯುಕ್ತತೆಗಳನ್ನು ಅವಲಂಬಿಸಿ ಹೆಸರಿಡಲಾಗುತ್ತದೆ. ಒಂದೇ ಒಂದು ಸಂದರ್ಭದಲ್ಲಿ ವಿಜ್ಞಾನಿಯ ಹೆಸರನ್ನು ಅವಲಂಬಿಸಿರುವುದು ಕಂಡುಬಂದಿದೆ. [ಪೆಲೆಟೆರೀಸ್ ಎಂಬ ಹೆಸರಿಗೆ ಮೂಲ ಆಲ್ಕಲಾಯ್ಡ್ ವಿಜ್ಞಾನಿ ಜೋಸೆಫ್ ಪೆಲ್ಲೆಟಿಯಟರ್ ಎಂಬ ಫ್ರೆಂಚ್ ಸಂಶೋಧಕನ ಹೆಸರು]. ಈ ಬಗೆಯ ಸ್ವಲ್ಪ ಹೆಚ್ಚು ಕಡಿಮೆ ನಿಯಮರಹಿತ ನಾಮಕರಣದ ದೆಸೆಯಿಂದಾಗಿ ಆಲ್ಕಲಾಯ್ಡಿನ ಹೆಸರಿನಿಂದ ಅದರ ರಾಸಾಯನಿಕ ರಚನೆ, ಗುಣ, ಲಕ್ಷಣಗಳ ವಿಚಾರವಾಗಿ ಏನೂ ತಿಳಿಯುವಂತಿಲ್ಲ. ಆಲ್ಲದೆ ಅನೇಕ ಬಾರಿ ಒಂದೇ ಆಲ್ಕಲಾಯ್ಡನ್ನು ಇಬ್ಬರು ಸಂಶೋಧಕರು ಒಬ್ಬನಿಗರಿವಿಲ್ಲದಂತೆ ಇನ್ನೊಬ್ಬ ಕಂಡುಹಿಡಿದಾಗ ಬೇರೆ ಬೇರೆ ಹೆಸರುಗಳಿಟ್ಟಿರುವುದು ಕಂಡುಬರುತ್ತದೆ.
ಗುಣಲಕ್ಷಣಗಳು
[ಬದಲಾಯಿಸಿ]1804ರಲ್ಲಿ ಸಸ್ಯವೊಂದರಿಂದ ಮಾರ್ಫಿನ್ ಸಂಯುಕ್ತವನ್ನು ಬೇರ್ಪಡಿಸಿದ ದಿನ ಆಲ್ಕಲಾಯ್ಡ್ ಯುಗದ ಆರಂಭವಾಯಿತು ಎನ್ನಬಹುದು. ದೈಹಿಕ ಕ್ರಿಯೆಗಳ ಮೇಲೆ ಪರಿಣಾಮಗಳನ್ನು ಉಂಟುಮಾಡಬಲ್ಲ ಸಸ್ಯ ಜನ್ಯ ಪ್ರತ್ಯಾಮ್ಲೀಯ (ಬೇಸಿಕ್) ನೈಟ್ರೊಜನ್‍ಸಂಯುಕ್ತಗಳನ್ನು ಆಲ್ಕಲಾಯ್ಡ್‌ಗಳೆಂದು ಕರೆಯಲು 1818ರಲ್ಲಿ ತೀರ್ಮಾನಿಸಲಾಯಿತು. ಅಮೈನೋ ಆಮ್ಲಗಳು ಮತ್ತು ಪ್ರೋಟೀನ್‍ಗಳು ಸಸ್ಯಗಳಲ್ಲಿದ್ದರೂ ಅವು ಆಲ್ಕಲಾಯ್ಡ್‌ಗಳನ್ನು ಸಮೂಹಕ್ಕೆ ಸೇರುವುದಿಲ್ಲ. ಮಾರ್ಫೀನಿನ ಮೊದಲ ತಯಾರಿಕೆಯ ದಿನದಿಂದ ಇಂದಿನವರೆಗೆ ನೂರಕ್ಕೆ ಮೇಲ್ಪಟ್ಟ ಸಸ್ಯವರ್ಗಗಳಿಂದ ಸಾವಿರಾರು ಆಲ್ಕಲಾಯ್ಡ್‌ಗಳನ್ನು ಬೇರ್ಪಡಿಸಲಾಗಿದೆ. ಈ ಸಂಯುಕ್ತಗಳು ಜೈವಿಕ ಕ್ರಿಯೆಗಳ (ಬಯಲಾಜಿಕಲ್ ರಿಯಾಕ್ಷನ್ಸ್) ಮೇಲೆ ಪರಿಣಾಮ ಬೀರಬಲ್ಲವು. ಆದ್ದರಿಂದ ಅವುಗಳ ಪ್ರಾಮುಖ್ಯ ಹೆಚ್ಚು. ಬಲು ಪುರಾತನ ಕಾಲದಿಂದಲೂ ಜನರು ಸಸ್ಯಗಳ ಎಲೆ, ಬೇರು, ತೊಗಟೆ, ಬೀಜ ಮೊದಲಾದುವುಗಳ ಕಷಾಯ ಮತ್ತು ಪುಡಿಗಳನ್ನು ಔಷಧ ಅಥವಾ ವಿಷವಸ್ತುಗಳಾಗಿ ಉಪಯೋಗಿಸುತ್ತಲೇ ಇದ್ದಾರೆ. ಬಲುಮಟ್ಟಿಗೆ ಈ ಔಷಧೀಯ ಮತ್ತು ವಿಷ ಗುಣಗಳಿಗೆ ಸಸ್ಯಗಳಲ್ಲಿರುವ ಆಲ್ಕಲಾಯ್ಡ್‌ಗಳೇ ಕಾರಣವೆಂದು ಇಂದು ನಮಗೆ ತಿಳಿದಿದೆ.[೧]
ಸಾಮಾನ್ಯವಾಗಿ ದ್ವಿದಳ ಬೀಜಗಳನ್ನು ನೀಡುವ ಉಚ್ಚ ದರ್ಜೆಯ ಗಿಡಮರಗಳಲ್ಲಿ ಆಲ್ಕಲಾಯ್ಡ್‌ಗಳು ಹೆಚ್ಚಿನ ಪರಿಣಾಮದಲ್ಲಿರುವುದು ಕಂಡುಬಂದಿದೆ. ಹೂ, ಬೀಜ ಬಿಡದ ಕೀಳ್ಮಟ್ಟದ ಸಸ್ಯಗಳಲ್ಲಿ ಆಲ್ಕಲಾಯ್ಡ್‌ಗಳನ್ನು ಗುರುತಿಸಿಲ್ಲ. ಎರ್ಗಾಟ್ ಗುಂಪಿನ ಆಲ್ಕಲಾಯ್ಡ್‌ಗಳು ಈ ಸಾಮಾನ್ಯ ನಿಯಮಗಳಿಗೆ ಒಂದು ಮುಖ್ಯ ಅಪವಾದ. ಅವು ಚಿಟ್ಟಗೋದಿ (ರೈ) ಮೇಲೆ ಬೆಳೆಯುವ ಕೀಳ್ತರಗತಿಯ ಸಸ್ಯವಾದ ಬೊಸ್ಟಿನಲ್ಲಿ ದೊರೆಯುತ್ತವೆ. ಪರಸ್ಪರ ಸಂಬಂಧಿಸಿದ ಸಸ್ಯವರ್ಗಗಳಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ರಚನಾಸಾಮ್ಯತೆ (ಸ್ಟ್ರಕ್ಚರಲ್ ಸಿಮಿಲಾರಿಟಿ) ಮತ್ತು ಸಂಬಂಧ ಇವೆ.
ಸಸ್ಯಗಳಲ್ಲಿನ ಪ್ರಮಾಣ
[ಬದಲಾಯಿಸಿ]ಸಸ್ಯಗಳ ಯಾವುದೇ ಒಂದು ಪ್ರತ್ಯೇಕ ಭಾಗದಲ್ಲಿ ಮಾತ್ರ ಆಲ್ಕಲಾಯ್ಡ್‌ಗಳು ಇರುತ್ತವೆಂದು ಹೇಳಲು ಸಾಧ್ಯವಿಲ್ಲ. ಎಲೆ, ಕಾಂಡ, ತೊಗಟೆ, ಬೇರು, ಹೂ, ಬೀಜಗಳಲ್ಲಿ ಎಲ್ಲಿ ಬೇಕಾದರೂ ಇರಬಹುದು. ಆದರೆ ಎಲ್ಲ ಭಾಗಗಳಲ್ಲೂ ಇರುತ್ತವೆಂದಾಗಲೀ, ಹಾಗೆ ಇದ್ದಲ್ಲಿ ಎಲ್ಲ ಭಾಗಗಳಲ್ಲೂ ಸಮಪ್ರಮಾಣದಲ್ಲಿ ಇರುತ್ತವೆಂದಾಗಲೀ ಹೇಳಲಾಗದು. ಉದಾಹರಣೆಗೆ ಹೊಗೆಸೊಪ್ಪಿನ ಎಲೆಗಳಲ್ಲಿ ಆಲ್ಕಲಾಯ್ಡ್‌ಗಳು ಹಿರಿಯ ಪ್ರಮಾಣದಲ್ಲಿದ್ದರೂ ಬೀಜಗಳಲ್ಲಿ ಅವುಗಳ ಅಂಶ ಕಂಡುಬಂದಿಲ್ಲ. ಹಲವಾರು ವರ್ಷ ಇರಬಲ್ಲ ಗಿಡ, ಮರಗಳಲ್ಲಿ ಬೆಳೆವಣಿಗೆಯ ಮೊದಲ ವರ್ಷದಲ್ಲಿ ಆಲ್ಕಲಾಯ್ಡ್‌ಗಳ ಹಂಚಿಕೆ (ಡಿಸ್ಟ್ರಿಬ್ಯೂಷನ್) ಸಸ್ಯದ ಎಲ್ಲ ಭಾಗಗಳಲ್ಲಿಯೂ ಸಮನಾಗಿದ್ದು ಕ್ರಮೇಣ ಸಸ್ಯ ಬೆಳೆದಂತೆ ಹಲವು ನಿರ್ದಿಷ್ಟ ಭಾಗಗಳಲ್ಲಿ ಆಲ್ಕಲಾಯ್ಡ್ ಸಾಂದ್ರತೆ ಹೆಚ್ಚಾಗಿ ಉಳಿದ ಭಾಗಗಳಲ್ಲಿ ಕಡಿಮೆಯಾಗುತ್ತದೆ. ಒಂದು ವರ್ಷಕ್ಕಿಂತ ಕಡಿಮೆ ಆಯುಷ್ಯವುಳ್ಳ ಗಿಡಗಳಲ್ಲಿ ಆಲ್ಕಲಾಯ್ಡ್ ಪ್ರಮಾಣ ದಿನ ಕಳೆದಂತೆ ವ್ಯತ್ಯಸ್ತವಾಗುತ್ತಲೇ ಇದ್ದು ಹೂ ಬರುವುದಕ್ಕೆ ಹಲವು ದಿನಗಳ ಮೊದಲು ಆಲ್ಕಲಾಯ್ಡ್‌ಗಳು ಅಧಿಕ ಪ್ರಮಾಣದಲ್ಲಿ ಉತ್ಪನ್ನವಾಗುತ್ತವೆ.
ಸ್ಥಿತಿ ಮತ್ತು ರೀತಿ
[ಬದಲಾಯಿಸಿ]ಆಲ್ಕಲಾಯ್ಡ್ ಇರುವ ಸಸ್ಯವೊಂದರಲ್ಲಿ ಸಾಮಾನ್ಯವಾಗಿ ಹಲವಾರು ಆಲ್ಕಲಾಯ್ಡ್‌ಗಳಿರುತ್ತವೆ. ಇಂಥವುಗಳ ಪರಸ್ಪರ ಪ್ರಮಾಣ ಸಸ್ಯದ ಬೆಳೆವಣಿಗೆಯ ಎಲ್ಲ ಘಟ್ಟಗಳಲ್ಲೂ ಒಂದೇ ಸಮನಾಗಿರುವುದಿಲ್ಲ. ಸಸ್ಯದ ಆರಂಭದೆಸೆಯಲ್ಲಿ ಕಾಣಲಾಗದ ಹಲವು ಆಲ್ಕಲಾಯ್ಡ್‌ಗಳನ್ನು ಬೆಳೆದ ಗಿಡಗಳಿಂದ ಸಾಕಷ್ಟು ಪ್ರಮಾಣದಲ್ಲಿ ಬೇರ್ಪಡಿಸಬಹದು. ಅಷ್ಟೇ ಅಲ್ಲದೆ ಸಸ್ಯದಲ್ಲಿನ ಆಲ್ಕಲಾಯ್ಡ್‌ಗಳ ಒಟ್ಟು ಪ್ರಮಾಣ ಮತ್ತು ಪರಸ್ಪರ ಪ್ರಮಾಣ ಸಸ್ಯ ಬೆಳೆಯುವ ವಾತಾವರಣ, ವಾಯುಗುಣ ಮತ್ತು ತಳಿಗಳನ್ನು ತಕ್ಕಮಟ್ಟಿಗೆ ಅವಲಂಬಿಸಿರುತ್ತವೆ. ಸಸ್ಯಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಬೆಳೆಸಿ ಅವುಗಳಲ್ಲಿನ ಆಲ್ಕಲಾಯ್ಡ್ ಪ್ರಮಾಣ ವ್ಯತ್ಯಾಸಗೊಳ್ಳುವಂತೆ ಮಾಡಬಹುದು. ಸಿಂಕೋನಾ ಮರಗಳಲ್ಲಿ ಕ್ವಿನೀನ್ ಆಲ್ಕಲಾಯ್ಡ್‌ನ ಪ್ರಮಾಣ ಹೆಚ್ಚಾಗುವಂತೆ ಜಾವಾದ್ವೀಪದಲ್ಲಿ ಮಾಡಲಾಗಿದೆ. ಹಾಗೆಯೇ ನಿಕೊಟೀನ್ ಅಂಶ ಕಡಿಮೆಯಿರುವ ಹೊಗೆಸೊಪ್ಪಿನ ಪ್ರತ್ಯೇಕ ತಳಿಯನ್ನೂ ಬೆಳೆಸಲು ಸಾಧ್ಯವಾಗಿದೆ.
ಆಲ್ಕಲಾಯ್ಡ್‌ಗಳು ಸಸ್ಯಗಳಲ್ಲಿ ಸಾಮಾನ್ಯವಾಗಿ ಬಿಡಿಯಾದ ಸ್ಥಿತಿಯಲ್ಲಿ (ಫ್ರೀ ಸ್ಟೇಟ್) ಇರುವುದಿಲ್ಲ; ಸಸ್ಯಗಳಲ್ಲಿರುವ ಆಮ್ಲಗಳೊಡನೆ ಸಂಯೋಜಿತವಾಗಿ ಲವಣಗಳ ರೂಪದಲ್ಲಿರುತ್ತವೆ (ನಿಕೊಟೀನ್ ಮತ್ತು ನಾರ್ಸೀನ್ ಮಾತ್ರ ಈ ನಿಯಮಕ್ಕೆ ಅಪವಾದಗಳು). ಈ ಬಗೆಯ ಸಂಯೋಗಗಳಲ್ಲಿ ಸಸ್ಯಗಳಲ್ಲಿ ಸಾಮಾನ್ಯವಾಗಿ ಇರುವ ಆಮ್ಲಗಳೆಲ್ಲವೂ ಎಂದರೆ ಆಕ್ಸಾಲಿಕ್, ಟಾರ್ಟಾರಿಕ್, ಆಸಿಟೆಕ್, ಮ್ಯಾಲಿಕ್, ಸಿಟ್ರಿಕ್ ಮೊದಲಾದ ಆಮ್ಲಗಳು ಭಾಗವಹಿಸುತ್ತವೆ. ಹಲವು ಪ್ರತ್ಯೇಕ ಆಲ್ಕಲಾಯ್ಡ್‌ಗಳೊಡನೆ ಸಂಯೋಜಿಸಿ ಲವಣಗಳಾಗಿರುತ್ತವೆ. ಆಲ್ಕೊಹಾಲ್ ಅಥವಾ ಫಿನಾಲ್ ಪುಂಜಗಳನ್ನುಳ್ಳ ಆಲ್ಕಲಾಯ್ಡ್‌ಗಳು ಹಲವು ಬಾರಿ ಎಸ್ಟರುಗಳಾಗಿಯೂ ಇರುತ್ತವೆ.
ಸಸ್ಯಗಳಲ್ಲಿ ಆಲ್ಕಲಾಯ್ಡ್‍ಗಳ ಪಾತ್ರ
[ಬದಲಾಯಿಸಿ]ಸಸ್ಯ ಪ್ರಪಂಚದಲ್ಲಿ ಕಾಣಬರುವ ಅಧಿಕ ಸಂಖ್ಯೆಯ ಆಲ್ಕಲಾಯ್ಡ್‌ಗಳನ್ನು ಗಮನಿಸಿದಾಗ ಅವುಗಳಿಂದ ಸಸ್ಯಗಳಿಗೆ ಯಾವುದಾದರೊಂದು ಬಗೆಯ ಉಪಯೋಗವಿರಬೇಕೆಂದು ಭಾವಿಸುವುದು ಸಹಜ. ಆದರೆ ಸಸ್ಯಗಳಲ್ಲಿ ಆಲ್ಕಲಾಯ್ಡ್‌ಗಳು ನಿರ್ವಹಿಸುವ ಕರ್ತವ್ಯವೇನೆಂಬುದರ ವಿಷಯವಾಗಿ ಹಲವಾರು ವಾದಗಳನ್ನು ಮಂಡಿಸಲಾಗಿದ್ದರೂ ಈ ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಆಲ್ಕಲಾಯ್ಡ್‌ಗಳು ಜೀವಾಣುವಿನಲ್ಲಿರುವ ಪ್ರೋಟೋಪ್ಲಾಸಂನ ಸಂಯೋಜನೆಯಲ್ಲಿ ಮಧ್ಯವರ್ತಿಗಳಾಗಿರಬಹುದೆಂದು ಹೆಕೆಲ್ ಸೂಚಿಸಿದ. ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಿಗೆ ಸಂಬಂಧಿಸಿದ ಹಲವು ಆಲ್ಕಲಾಯ್ಡ್‌ಗಳ ಮಟ್ಟಿಗೆ ಈ ವಾದ ಹೊಂದಬಹುದಾದರೂ ಉಳಿದ ಆಲ್ಕಲಾಯ್ಡ್‌ಗಳ ಬಗ್ಗೆ ಈ ವಾದ ವಿವರಣೆ ನೀಡುವುದಿಲ್ಲ. ಅಲ್ಲದೆ ಸಸ್ಯದ ವಿವಿಧ ಭಾಗಗಳಲ್ಲಿರುವ ಆಲ್ಕಲಾಯ್ಡ್‌ಗಳ ಅಸಮ ಹಂಚಿಕೆ ಈ ವಾದಕ್ಕೆ ಪುಷ್ಟಿ ನೀಡುವುದಿಲ್ಲ; ಮತ್ತು ಸಸ್ಯಗಳಲ್ಲಿ ಆಲ್ಕಲಾಯ್ಡ್ ಪ್ರಮಾಣಕ್ಕೂ ಪ್ರೊಟೋಪ್ಲಾಸಂ ಪ್ರೋಟೀನ್ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲದಿರುವುದನ್ನು ಪ್ರಯೋಗಗಳಿಂದ ಸಿದ್ಧಪಡಿಸಲಾಗಿದೆ. ಆಲ್ಕಲಾಯ್ಡ್‌ಗಳೇ ಇಲ್ಲದ ಅನೇಕ ಸಸ್ಯಗಳಿವೆಯೆಂಬ ವಿಷಯವೂ ಗಮನಾರ್ಹವಾಗಿದೆ.
ಸಸ್ಯಗಳಲ್ಲಿ ಆಲ್ಕಲಾಯ್ಡ್‌ಗಳು ಏಕೆ ಸೃಷ್ಟಿಯಾಗುತ್ತವೆ
[ಬದಲಾಯಿಸಿ]ಆಲ್ಕಲಾಯ್ಡ್‌ಗಳು ಪ್ರಕೃತಿ ಸಸ್ಯಗಳಿಗೆ ವರವಾಗಿ ಇತ್ತಿರುವ ರಕ್ಷಣಾಸ್ತ್ರಗಳೆಂದು ಹಲವು ವಿಜ್ಞಾನಿಗಳು ಭಾವಿಸಿದ್ದಾರೆ. ಆನೇಕ ಆಲ್ಕಲಾಯ್ಡ್‌ಗಳು ಸಸ್ಯಗಳ ಎಲೆ, ತೊಗಟೆಗಳಂಥ ಹೊರಗಣ (ಪೆರಿಫೆರಲ್) ಭಾಗಗಳಲ್ಲಿದ್ದು ವಿಷಸ್ವಭಾವವನ್ನು ಪಡೆದಿರುವುದೇ ಈ ವಾದಕ್ಕೆ ಮೂಲಕಾರಣ. ಆದರೆ ಎಲ್ಲ ಆಲ್ಕಲಾಯ್ಡ್‌ಗಳೂ ಸಸ್ಯಗಳ ಹೊರಮೈ ಭಾಗಗಳಲ್ಲಿಲ್ಲ: ಆಲ್ಕಲಾಯ್ಡ್‌ಗಳಲ್ಲಿನ ವಿಷ ಸ್ವಭಾವವೂ ತೀಕ್ಷ್ಣವಾಗಿಲ್ಲ. ಹೊರಮೈ ಭಾಗದಲ್ಲಿ ಆಲ್ಕಲಾಯ್ಡ್‌ಗಳನ್ನು ಪಡೆದಿರುವ ಸಸ್ಯಗಳಿಗಾದರೂ ಪರಕೀಯ ಜೀವಿಗಳಿಂದ ಆಗುತ್ತಿರುವ ಹಾನಿ ಕಡಿಮೆಯಾಗಿಲ್ಲ. ಆದ್ದರಿಂದ ರಕ್ಷಣಾಸ್ತ್ರವಾದವನ್ನು ಒಪ್ಪುವುದು ಸಾಧ್ಯವಿಲ್ಲ.
ಪ್ರಾಣಿಗಳ ದೇಹಗಳಿಗೆ ಬೇಡದ ನೈಟ್ರೊಜನ್ ಯೂರಿಯ ಅಥವಾ ಯೂರಿಕ್ ಆಮ್ಲವಾಗಿ ಹೊರಚಲ್ಲಲ್ಪಡುತ್ತದೆ. ಅದೇ ರೀತಿ ಸಸ್ಯದ ಚಯಾಪಚಯದ (ಮೆಟಬಾಲಿಸಂ) ಅಂತಿಮ ಸಂಯುಕ್ತಗಳೇ (ಎಂಡ್ ಕಾಂಪೌಂಡ್) ಆಲ್ಕಲಾಯ್ಡ್‌ಗಳಾಗಿದ್ದು ತಮಗೆ ಬೇಡದ ನೈಟ್ರೊಜನ್ನನ್ನು ಸಸ್ಯಗಳು ಹೇಗೆ ಹೊರಚೆಲ್ಲುತ್ತವೆಂಬುದು ಮತ್ತೊಂದು ವಾದ. ಈ ವಾದಕ್ಕೆ ಪ್ರಯೋಗಗಳ ಆಧಾರವೇನೂ ಇಲ್ಲ. ಕಾರ್ಬನ್, ಹೈಡ್ರೋಜನ್‍ಗಳೇ ಹಿರಿಯ ಪ್ರಮಾಣದಲ್ಲಿರುವ ಆಲ್ಕಲಾಯ್ಡ್‌ಗಳಲ್ಲಿ ನೈಟ್ರೊಜನ್ನಿನ ಪ್ರಮಾಣ ಅತ್ಯಲ್ಪ. ಒಂದೆರಡು ನೈಟ್ರೊಜನ್ ಪರಮಾಣುಗಳನ್ನು ಬಂಧಿಸಿಡಲು ಆಲ್ಕಲಾಯ್ಡ್‌ಗಳಂಥ ಜಟಿಲ ರಚನೆಯ ಅಣುಗಳನ್ನು ಪ್ರಕೃತಿ ಸೃಷ್ಟಿಸುತ್ತದೆಂಬುದು ಅಸಮಂಜಸವಾಗಿ ತೋರುತ್ತದೆ.
ಅನಿರೀಕ್ಷಿತ ಪರಿಸ್ಥಿತಿಯನ್ನೆದುರಿಸಲು ಸಸ್ಯಗಳು ನೈಟ್ರೊಜನ್ನನ್ನು ಆಲ್ಕಲಾಯ್ಡ್‌ಗಳಲ್ಲಿ ಸಂಗ್ರಹಿಸಿ ಇಟ್ಟಿರುತ್ತವೆಂಬುದೂ ಒಂದು ವಾದ. ಆದರೆ ಸಸ್ಯಗಳಲ್ಲಿರುವ ಆಲ್ಕಲಾಯ್ಡ್‌ಗಳ ಅಲ್ಪಾಂಶ ಮತ್ತು ಆಲ್ಕಲಾಯ್ಡ್‌ಗಳಲ್ಲಿರುವ ನೈಟ್ರೊಜನ್ನಿನ ಅಲ್ಪಾಂಶಗಳನ್ನು ಗಮನಿಸಿದಾಗ ಈ ವಾದದಲ್ಲಿ ಅಷ್ಟು ಹುರುಳಿಲ್ಲವೆಂಬುದು ತಾನಾಗಿ ವ್ಯಕ್ತವಾಗುತ್ತದೆ. ಈ ವಾದವನ್ನು ಸಮರ್ಥಿಸಲು ಪ್ರಯೋಗಗಳ ಆಧಾರವಂತೂ ಇಲ್ಲವೇ ಇಲ್ಲ.[೨]
ಈ ವರೆಗೂ ಪ್ರಯೋಗಗಳ ಆಧಾರವೇನೂ ದೊರೆಯದೆ ಹೋದರೂ ವಿಜ್ಞಾನಿಗಳು ನಂಬಿರುವ ವಾದವೊಂದಿದೆ. ನಮ್ಮ ದೇಹದಲ್ಲಿನ ಹಾರ್ಮೋನುಗಳಂತೆ ಸಸ್ಯಗಳಲ್ಲಿನ ಚಯಾಪಚಯಗಳನ್ನು (ಮೆಟಬಾಲಿಕ್ ರಿಯಾಕ್ಷನ್) ನಿರ್ದೇಶಿಸುವುದರಲ್ಲಿ ಆಲ್ಕಲಾಯ್ಡ್‌ಗಳು ಪ್ರಮುಖ ಪಾತ್ರ ವಹಿಸುತ್ತವೆಂಬುದೇ ಈ ವಾದ. ಸಸ್ಯಗಳ ಬೆಳೆವಣಿಗೆಯ ವಿವಿಧ ಘಟ್ಟಗಳಲ್ಲಿ ವಿವಿಧ ಆಲ್ಕಲಾಯ್ಡ್‌ಗಳು ಭಿನ್ನ ಪ್ರಮಾಣಗಳಲ್ಲಿ ಸೃಷ್ಟಿಯಾಗುವುದು ಈ ಊಹೆಗೆ ಆಧಾರ. ಈ ವಾದವನ್ನು ಸ್ಪಷ್ಟೀಕರಿಸಿ ಸಮರ್ಥಿಸಲು ಹಲವು ಪ್ರಯೋಗಗಳು ನಡೆಯುತ್ತಿವೆ.
ಆಲ್ಕಲಾಯ್ಡ್‌ನ ತಯಾರಿಕೆ
[ಬದಲಾಯಿಸಿ]ಸಸ್ಯಗಳಲ್ಲಿ ಆಲ್ಕಲಾಯ್ಡ್‌ಗಳು ಮಾತ್ರವಲ್ಲದೆ ಇತರ ಅನೇಕ ಸಂಯುಕ್ತಗಳು ಇವೆ. ಸಾಮಾನ್ಯವಾಗಿ ಆಲ್ಕಲಾಯ್ಡ್‌ಗಳ ಅಂಶ ನೂರಕ್ಕೆ ಎರಡಕ್ಕಿಂತ ಕಡಿಮೆ ಇರುತ್ತದೆ. ಸಸ್ಯಗಳಲ್ಲಿರುವ ಪಿಷ್ಟ (ಕಾರ್ಬೊಹೈಡ್ರೇಟ್), ಸೆಲ್ಯುಲೋಸ್, ವರ್ಣದ್ರವ್ಯ (ಪಿಗ್‍ಮೆಂಟ್), ರಾಳ (ರೆಸಿನ್) ಮೊದಲಾದುವುಗಳಿಂದ ಬೇರ್ಪಡಿಸುವುದು ಆಲ್ಕಲಾಯ್ಡ್‌ಗಳ ತಯಾರಿಕೆಯಲ್ಲಿ ಮೊದಲನೆಯ ಘಟ್ಟ. ಇದಾದ ಅನಂತರವೂ ಆಲ್ಕಲಾಯ್ಡ್‌ಗಳು ಸಂಪೂರ್ಣ ಶುದ್ಧವಾಗಿರುವುದಿಲ್ಲ. ಅಲ್ಲದೆ ಹೀಗೆ ಬೇರ್ಪಡಿಸುವಾಗ ಸಾವಯವ ದ್ರವ್ಯಗಳು, ನೀರು, ಶಾಖ, ಆಮ್ಲ, ಪ್ರತ್ಯಾಮ್ಲಗಳನ್ನು ಉಪಯೋಗಿಸುವುದು ಅನಿವಾರ್ಯ. ಹಲವು ಆಲ್ಕಲಾಯ್ಡ್‌ಗಳು ತೀವ್ರಪರಿಸ್ಥಿತಿಗಳಲ್ಲಿ ಅಸ್ಥಿರವಾದ್ದರಿಂದ ಅವುಗಳ ತಯಾರಿಕೆಯಲ್ಲಿ ಬಲು ಜಾಗರೂಕತೆಯನ್ನು ವಹಿಸುವುದು ಅವಶ್ಯಕ. ಹೀಗೆ ದೊರೆತ ಆಲ್ಕಲಾಯ್ಡ್ ಭಾಗ ಹಲವು ಆಲ್ಕಲಾಯ್ಡ್‌ಗಳ ಮಿಶ್ರಣವಾಗಿರಬಹುದು. ಆದ್ದರಿಂದ ಅವನ್ನು ಅನಂತರ ಪರಸ್ಪರ ಬೇರ್ಪಡಿಸಿ ಪುನಃ ಶುದ್ಧೀಕರಿಸಬೇಕಾಗುತ್ತದೆ. ಸಸ್ಯಗಳಲ್ಲಿ ಆಲ್ಕಲಾಯ್ಡ್ ಕೇವಲ ಅಲ್ಪಾಂಶದಲ್ಲಿರುವುದರಿಂದಲ್ಲೂ ಅವುಗಳ ಬೇರ್ಪಡೆ ದೀರ್ಘವಾಗಿದ್ದು ಈ ಕಾಲದಲ್ಲಿ ಸಾಕಷ್ಟು ನಷ್ಟವಾಗುವುದರಿಂದಲೂ ಹಲವು ಗ್ರಾಂ ಆಲ್ಕಲಾಯ್ಡ್‌ಗಳಿಗಾಗಿ ಅನೇಕ ಟನ್ ಸಸ್ಯಗಳಿಂದ ಆರಂಭಿಸುವ ಅವಶ್ಯಕತೆಯಿದ್ದು ದೊಡ್ಡ ಗಾತ್ರದ ಉಪಕರಣಗಳನ್ನು ಉಪಯೋಗಿಸಬೇಕಾಗುತ್ತದೆ.
ಮೊದಲು ಸಸ್ಯದ ಯಾವ ಭಾಗದಲ್ಲಿ ಆಲ್ಕಲಾಯ್ಡ್‌ಗಳ ಸಾಂದ್ರತೆ ಹೆಚ್ಚಿರುತ್ತದೋ ಆ ಭಾಗವನ್ನು ಬೇರ್ಪಡಿಸಿ, ಸಣ್ಣ ಸಣ್ಣ ತುಂಡುಗಳನ್ನಾಗಿ ಇಲ್ಲವೇ ಪುಡಿಮಾಡಿ ಅದರಲ್ಲಿನ ಜಲಾಂಶ ಕಡಿಮೆ ಮಾಡಲು ಒಣಗಿಸಲಾಗುತ್ತದೆ. ಅನಂತರ ಈ ಸಸ್ಯರಾಶಿಯಿಂದ ಆಲ್ಕಲಾಯ್ಡ್ ಮೊತ್ತವನ್ನು ಬೇರ್ಪಡಿಸಲು ಲೀನಕಾರಿ ಸಂಸ್ಕರಣಕ್ಕೆ (ಎಕ್ಸ್‌ಟ್ರ್ಯಾಕ್ಷನ್) ಒಳಪಡಿಸಬೇಕು. ಈ ಬಗೆಯ ಸಂಸ್ಕರಣಕ್ಕೆ ಎರಡು ಬಗೆಯ ಲೀನಕಾರಿಗಳನ್ನುಪಯೋಗಿಸಬಹುದು.
ಬೆಂಜೀನ್, ಈಥರ್ ಮೊದಲಾದ ನೀರಿನೊಡನೆ ಬೆರೆಯದ ಸಾವಯದ ಲೀನಕಾರಿಗಳು
[ಬದಲಾಯಿಸಿ]ಮೊದಲನೆಯ ಬಗೆಯ ಲೀನಕಾರಿಗಳು ಸಸ್ಯಗಳಲ್ಲಿರುವ ರಾಳ, ಕೊಬ್ಬುಗಳನ್ನೂ ದ್ರಾವಣದಲ್ಲಿ ಸೇರುವಂತೆ ಮಾಡಬಲ್ಲವು. ದ್ರಾವಣದಲ್ಲಿ ಈ ಪರಕೀಯ ವಸ್ತುಗಳೂ ಬೆರೆತಿದ್ದರೆ ಆಲ್ಕಲಾಯ್ಡ್‌ಗಳ ಶುದ್ಧೀಕರಣ ಬಲು ಕಷ್ಟ. ಆದ್ದರಿಂದ ಸಸ್ಯರಾಶಿಯನ್ನು ಮೊದಲೊಮ್ಮೆ ಲೀನಕಾರಿ ಕೊಬ್ಬು ಸಂಸ್ಕರಣಕ್ಕೆ ಒಳಪಡಿಸಿ, ರಾಳಗಳನ್ನು ನಿವಾರಿಸಬೇಕು. ಅನಂತರ ಈ ಸಸ್ಯರಾಶಿಯಲ್ಲಿ ಲವಣರೂಪದಲ್ಲಿರುವ ಆಲ್ಕಲಾಯ್ಡ್‌ಗಳನ್ನು ಮುಕ್ತಸ್ಥಿತಿಗೆ ತರಲು ಪ್ರತ್ಯಾಮ್ಲವೊಂದರೊಡನೆ ವರ್ತಿಸುವಂತೆ ಮಾಡಬೇಕು. ಪ್ರತ್ಯಾಮ್ಲ ತೀವ್ರವಾಗಿದ್ದರೆ ಅಸ್ಥಿರ ಆಲ್ಕಲಾಯ್ಡ್‌ಗಳು ಶಿಥಿಲಗೊಂಡು ನಷ್ಟವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಅಮೋನಿಯ, ಸೋಡಿಯಂ ಬೈಕಾರ್ಬೊನೇಟ್‍ಗಳಂಥ ದುರ್ಬಲ ಪ್ರತ್ಯಾಮ್ಲಗಳನ್ನು ಜಾಗರೂಕತೆಯಿಂದ ಉಪಯೋಗಿಸಬೇಕಾಗುತ್ತದೆ. ಲವಣರೂಪದಲ್ಲಿದ್ದಾಗ ಸಾವಯದ ಲೀನಕಾರಿಗಳಲ್ಲಿ ಆಲ್ಕಲಾಯ್ಡ್‌ಗಳು ಲೀನವಾಗುವುದಿಲ್ಲ. ಆದರೆ ಬಿಡಿಸ್ಥಿತಿಯಲ್ಲಿದ್ದಾಗ ಲೀನವಾಗುತ್ತದೆ. ಆದ್ದರಿಂದ ಪ್ರತ್ಯಾಮ್ಲದೊಡನೆ ವರ್ತಿಸಿದ ಸಸ್ಯರಾಶಿಯನ್ನು ಪುನಃ ಲೀನಕಾರೀ ಸಂಸ್ಕರಣಕ್ಕೆ ಒಳಪಡಿಸಿದಾಗ ಆಲ್ಕಲಾಯ್ಡ್‌ಗಳು ಸಾವಯದ ಲೀನಕಾರಿಗಳಲ್ಲಿ ಲೀನವಾಗಿ ಆಲ್ಕಲಾಯ್ಡ್ ದ್ರಾವಣ ದೊರೆಯುತ್ತದೆ.
ನೀರಿನೊಡನೆ ಬೆರೆಯಬಲ್ಲ ಆಲ್ಕೋಹಾಲ್ ಅಥವಾ ಮಂದ ಮತ್ತು ದುರ್ಬಲ (ಡೈಲ್ಯೊಟ್ ಮತ್ತು ವೀಕ್) ಆಮ್ಲಗಳ ಜಲದ್ರಾವಣಗಳು
[ಬದಲಾಯಿಸಿ]ದುರ್ಬಲ ಆಮ್ಲಗಳ ಗುಂಪಿನಲ್ಲಿ ದುರ್ಬಲ ಆಮ್ಲೀಯತೆಯನ್ನುಳ್ಳ ಲವಣ ದ್ರಾವಣಗಳೂ ಸೇರುತ್ತವೆ.
ಎರಡನೆಯ ಬಗೆಯ ಲೀನಕಾರಿಗಳನ್ನು ಉಪಯೋಗಿಸುವಾಗ ಸಸ್ಯರಾಶಿಯನ್ನು ಮೊದಲು ಪ್ರತ್ಯಾಮ್ಲಗಳೊಡನೆ ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಆಲ್ಕಲಾಯ್ಡ್‌ಗಳನ್ನು ಬಿಡಿಸ್ಥಿತಿಗೆ ತರುವುದು ಅವಶ್ಯಕ. ಈ ಸಂದರ್ಭದಲ್ಲಿಯೂ ಪ್ರತ್ಯಾಮ್ಲವನ್ನು ಆರಿಸಿಕೊಳ್ಳುವ ಆಲ್ಕಲಾಯ್ಡ್‌ಗಳ ಅಸ್ಥಿರತೆಯನ್ನು ಗಮನದಲ್ಲಿಡಬೇಕು. ಬೇರ್ಪಡಿಸಲಾಗುತ್ತಿರುವ ಆಲ್ಕಲಾಯ್ಡ್‌ಗಳು ಸ್ಥಿರಬಗೆಯವಾಗಿದ್ದರೆ ಸುಟ್ಟ ಸುಣ್ಣ ಅಥವಾ ಸೋಡಿಯಂ ಹೈಡ್ರಾಕ್ಸೈಡುಗಳಂಥ ತೀವ್ರ ಕ್ಷಾರವಸ್ತುಗಳನ್ನು ಉಪಯೋಗಿಸಬಹುದು. ಹೀಗೆ ಪ್ರತ್ಯಾಮ್ಲದೊಡನೆ ವರ್ತಿಸಿದ ಸಸ್ಯರಾಶಿಯನ್ನು ಲೀನಕಾರೀ ಸಂಸ್ಕರಣಕ್ಕೆ ಒಳಪಡಿಸಿದಾಗ ಆಲ್ಕಲಾಯ್ಡ್‌ಗಳು ಲೀನಕಾರಿಗಳಲ್ಲಿ ಲೀನವಾಗಿ ಸಸ್ಯಮೂಲದಿಂದ ಹೊರಬರುತ್ತದೆ. ಎರಡು ಬಗೆಯ ಲೀನಕಾರೀ ಸಂಸ್ಕರಣಗಳಿಗೂ ಸಾಕ್ಸ್ ಲೆಟ್ ಮಾದರಿಯ ಉಪಕರಣವನ್ನು ಉಪಯೋಗಿಸಬಹುದು.[೩]
ಹಲವು ಬಗೆಯ ಆಲ್ಕಲಾಯ್ಡ್‌ಗಳಿಗೆ ಮೊದಲನೆಯ ವಿಧಾನವೂ ಮತ್ತೆ ಹಲವಕ್ಕೆ ಎರಡನೆಯ ವಿಧಾನವೂ ಅನುಕೂಲ ಮಾರ್ಗಗಳು. ಆದ್ದರಿಂದ ವಿಧಾನವನ್ನು ಆರಿಸುವಾಗ ಸಸ್ಯಮೂಲ ಮತ್ತು ಅದರಲ್ಲಿನ ಆಲ್ಕಲಾಯ್ಡ್‌ಗಳ ಬಗ್ಗೆ ಪೂರ್ವ ಜ್ಞಾನವಿದ್ದರೆ ಒಳ್ಳೆಯದು. ಯಾವುದೇ ವಿಧಾನವನ್ನು ಅನುಸರಿಸಿದರೂ ಲೀನಕಾರೀ ಸಂಸ್ಕರಣದ ಅನಂತರ ದೊರೆಯುವುದು ಆಲ್ಕಲಾಯ್ಡ್‌ಗಳ ಕರಡುದ್ರಾವಣ.
ಸಾವಯದ ಲೀನಕಾರಿಗಳನ್ನು ಉಪಯೋಗಿಸಿದಾಗ ದೊರೆತ ದ್ರಾವಣದಿಂದ ಲೀನಕಾರಿಗಳನ್ನು ಬಾಷ್ಪೀಕರಣ (ಇವಾಪೊರೇಷನ್) ಅಥವಾ ಆಸವೀಕರಣದ (ಡಿಸ್ಟಿಲ್ಲೇಷನ್) ಮೂಲಕ ಹೊರದೂಡಿದಾಗ ಆಲ್ಕಲಾಯ್ಡ್‌ಗಳ ಕರಡು ಮಿಶ್ರಣ ದೊರೆಯುತ್ತದೆ. ಸಾರಗುಂದಿಸಿದ ಅಥವಾ ದುರ್ಬಲ ಆಮ್ಲೀಯ ಲೀನಕಾರಿಗಳನ್ನು ಉಪಯೋಗಿಸಿದಾಗ ದೊರೆಯುವ ದ್ರಾವಣದಲ್ಲಿ ಆಲ್ಕಲಾಯ್ಡ್‌ಗಳು ಲವಣ ರೂಪದಲ್ಲಿರುತ್ತವೆ. ಈ ಆಮ್ಲೀಯ ದ್ರಾವಣಕ್ಕೆ ಸಾಕಷ್ಟು ಪ್ರತ್ಯಾಮ್ಲವನ್ನು ಸೇರಿಸಿದಾಗ ಲವಣರೂಪದಲ್ಲಿದ್ದ ಆಲ್ಕಲಾಯ್ಡ್‌ಗಳು ಬಿಡಿಸ್ಥಿತಿಗೆ ಬಂದು ದ್ರಾವಣದಲ್ಲಿ ಬೇರೆ ಆಗುತ್ತವೆ. ಹೀಗೆ ಬೇರ್ಪಟ್ಟ ಆಲ್ಕಲಾಯ್ಡ್‌ಗಳನ್ನು ನೀರಿನೊಡನೆ ಬೆರೆಯದ ಸಾವಯದ ಲೀನಕಾರಿಯೊಂದರಿಂದ ಸಂಸ್ಕರಿಸಿ ದೊರೆತ ದ್ರಾವಣದಿಂದ ಲೀನಕಾರಿಯನ್ನು ಆಸವೀಕರಿಸುವುದರ ಮೂಲಕ ಬೇರ್ಪಡಿಸಿದಾಗ ಆಲ್ಕಲಾಯ್ಡ್ ಕರಡುರಾಶಿ ದೊರೆಯುತ್ತದೆ. ಇದರಲ್ಲಿ ಪರಕೀಯ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲದೆ ಹೋದರೆ ಈ ಮಿಶ್ರಣವನ್ನು ನೇರವಾಗಿ ಆಲ್ಕಲಾಯ್ಡ್‌ಗಳನ್ನು ಪ್ರತ್ಯೇಕಿಸಲು ತೆಗೆದುಕೊಳ್ಳಬಹುದು. ಹಾಗಿಲ್ಲದಿದ್ದಲ್ಲಿ ಆಲ್ಕಲಾಯ್ಡ್‌ಗಳ ಕರಡುರಾಶಿಯನ್ನು ಸಾರಸಸಗುಂದಿಸಿದ ಆಮ್ಲವೊಂದರಲ್ಲಿ ಲೀನಮಾಡಿ ಕರಗದ ವಸ್ತುಗಳನ್ನು ಶೋಧಿಸಿ ತೆಗೆದು, ಉಳಿದ ದ್ರಾವಣವನ್ನು ಸಾವಯವ ಲೀನಕಾರಿಗಳಿಂದ ತೊಳೆದರೆ ಆಲ್ಕಲಾಯ್ಡ್‌ಗಳಲ್ಲದ ಪರಕೀಯ ವಸ್ತುಗಳು ಆ ಲೀನಕಾರಿಗಳಲ್ಲಿ ಲೀನವಾಗಿ ಆಲ್ಕಲಾಯ್ಡ್‌ಗಳಿಂದ ಬೇರಾಗುತ್ತವೆ. ಉಳಿದ ಆಮ್ಲೀಯ ದ್ರಾವಣಕ್ಕೆ ಪ್ರತ್ಯಾಮ್ಲವೊಂದನ್ನು ಸಾಕಷ್ಟು ಪ್ರಮಾಣದಲ್ಲಿ ಸೇರಿಸಿದಾಗ ಆಲ್ಕಲಾಯ್ಡ್‌ಗಳು ದ್ರಾವಣದಿಂದ ಹೊರಚೆಲ್ಲಲ್ಪಡುತ್ತವೆ. ಇವನ್ನು ಪುನಃ ನೀರಿನೊಡನೆ ಬೆರೆಯುವ ಲೀನಕಾರಿಯೊಂದರಿಂದ ಸಂಸ್ಕರಿಸಿದಾಗ ಆಲ್ಕಲಾಯ್ಡ್ ಮಿಶ್ರಣದ ದ್ರಾವಣ ದೊರೆಯುತ್ತದೆ. ಈ ದ್ರಾವಣದಿಂದ ಲೀನಕಾರಿಯನ್ನು ಹೊರದೂಡಿದಾಗ ಆಲ್ಕಲಾಯ್ಡ್ ಆಲ್ಕಲಾಯ್ಡ್ ಕರಡು ಮಿಶ್ರಣ ದೊರೆಯುತ್ತದೆ. ಈ ಕರಡು ಮಿಶ್ರಣದಲ್ಲಿ ಎಷ್ಟು ಪ್ರತ್ಯೇಕ ಆಲ್ಕಲಾಯ್ಡ್‌ಗಳಿವೆಯೆಂಬುದನ್ನು ತೆಳುಪದರ (ಥಿನ್ ಲೇಯರ್) ಕ್ರೊಮಾಟೋಗ್ರಫಿ ವಿಧಾನದಿಂದ ಕಂಡು ಹಿಡಿಯಬಹುದು.
ಹಲವೇ ಹಲವು ಪ್ರತ್ಯೇಕ ಸಂದರ್ಭಗಳಲ್ಲಿ ಆಲ್ಕಲಾಯ್ಡ್‌ಗಳು ಕೆಲವು ನಿರ್ದಿಷ್ಟ ರಾಸಾಯನಿಕ ಸಂಯುಕ್ತಗಳೊಡನೆ ವರ್ತಿಸಿ ಅಲೀನ ಸಂಕೀರ್ಣ ಸಂಯುಕ್ತಗಳಾಗುವಂತೆ ಮಾಡಿ ಬೇರ್ಪಡಿಸಬಹುದು. ಹೀಗೆ ಆಲ್ಕಲಾಯ್ಡ್‌ಗಳು ಸಂಕೀರ್ಣವಾಗಿ ಅವಕ್ಷೇಪಿಸುವಂತೆ (ಪ್ರೆಸಿಪಿಟೇಷನ್) ಮಾಡಲು ಫಾಸ್ಪೋಟಿಂಗ್‍ಸ್ಟಿಕ್ ಆಮ್ಲ, ಫಾಸ್ಪೋ ಮಾಲಿಬ್ಡಿಕ್ ಆಮ್ಲ, ಪಿಕ್ರಿಕ್ ಆಮ್ಲ, ಸ್ಟಿಫ್ನಿಕ್ ಆಮ್ಲ, ಆಂಥ್ರಕ್ವಿನೋನ್ ಸಲ್ಫೋನಿಕ್ ಆಮ್ಲ ಮತ್ತು ಹಲವಾರು ಪ್ರತ್ಯೇಕ ಲವಣಗಳನ್ನು ಉಪಯೋಗಿಸಬಹುದು. ಮತ್ತೆ ಹಲವು ನಿರ್ದಿಷ್ಟ ಸಂಯುಕ್ತಗಳೊಡನೆ ವರ್ತಿಸಿದಾಗ ಆಲ್ಕಲಾಯ್ಡ್‌ಗಳು ಬಣ್ಣ ತಾಳುತ್ತವೆ. ಇವನ್ನು ಆಲ್ಕಲಾಯ್ಡ್‌ಗಳ ತಯಾರಿಕೆಯಲ್ಲಿ ಉಪಯೋಗಿಸಲು ಸಾಧ್ಯವಾಗದೆ ಹೋದರೂ ಪೂರ್ವಭಾವಿಯಾಗಿ ಆಲ್ಕಲಾಯ್ಡ್‌ಗಳ ಇರುವಿಕೆಯನ್ನು ತಿಳಿಯಲು ಉಪಯೋಗಿಸಬಹುದು.[೪]
ಆಲ್ಕಲಾಯ್ಡ್‌ನ್ನು ಬೇರ್ಪಡಿಸುವುದು
[ಬದಲಾಯಿಸಿ]ಮುಂದಿನ ಘಟ್ಟದಲ್ಲಿ ಈ ಆಲ್ಕಲಾಯ್ಡ್ ಮಿಶ್ರಣದಿಂದ ವಿವಿಧ ಆಲ್ಕಲಾಯ್ಡ್‌ಗಳನ್ನು ಬೇರ್ಪಡಿಸಲಾಗುವುದು. ಈ ಬೇರ್ಪಡೆ ಹಲವು ಬಾರಿ ಸುಲಭವಾಗಿರಬಹುದು ಮತ್ತೆ ಹಲವು ಬಾರಿ ಬಹು ಜಟಿಲವಾಗಿರಬಹುದು. ಇದಕ್ಕೆ ವಿವಿಧ ಆಲ್ಕಲಾಯ್ಡ್‌ಗಳಲ್ಲಿರುವ ಗುಣ, ಲಕ್ಷಣಗಳಲ್ಲಿನ ಅಥವಾ ಒಂದು ಗುಣದ ತೀವ್ರತೆಯಲ್ಲಿ ಇರಬಲ್ಲ ಭಿನ್ನತೆಯೇ ಆಧಾರ. ಒಂದು ನಿರ್ದಿಷ್ಟ ಲೀನಕಾರಿಯಲ್ಲಿ ಲೀನವಾಗುವ ಶಕ್ತಿಯಲ್ಲಿ ಭಿನ್ನತೆಯಿದ್ದರೆ ಅಂಥ ಆಲ್ಕಲಾಯ್ಡ್‌ಗಳನ್ನು ಆಂಶಿಕ ಸ್ಪಟಿಕೀಕರಣದಿಂದ (ಫ್ರ್ಯಾಕ್ಷನಲ್ ಕ್ರಿಸ್ಟಲ್ಲೈಸ್ಟೇಷನ್) ಬೇರ್ಪಡಿಸಬಹುದು. ಆಲ್ಕಲಾಯ್ಡ್‌ಗಳ ಪ್ರತ್ಯಾಮ್ಲೀಯತೆಗಳು ಭಿನ್ನವಾಗಿದ್ದಲ್ಲಿ ಆಲ್ಕಲಾಯ್ಡ್ ಮಿಶ್ರಣವನ್ನೊಳಗೊಂಡ ಆಮ್ಲೀಯ ದ್ರಾವಣವೊಂದರ ಆಮ್ಲೀಯತೆಯನ್ನು ಕ್ರಮೇಣ ಕಡಿಮೆ ಮಾಡಿ ಆಲ್ಕಲಾಯ್ಡ್‌ಗಳು ಕ್ರಮೇಣ ಒಂದಾದ ಮೇಲೊಂದರಂತೆ ಹೊರಬೀಳುವಂತೆ ಮಾಡಿ ಬೇರ್ಪಡಿಸಬಹುದು. ನಿರ್ದಿಷ್ಟ ಸಂಯುಕ್ತಗಳೊಡನೆ ಸೇರಿ ಸಂಕೀರ್ಣ ಸಂಯುಕ್ತಗಳಾಗುವ ಶಕ್ತಿ ಪಡೆದಿರುವ ಆಲ್ಕಲಾಯ್ಡ್‌ಗಳನ್ನು ಸಂಕೀರ್ಣಗಳಾಗಿ ಮಾರ್ಪಡಿಸಿ ಇತರ ಆಲ್ಕಲಾಯ್ಡ್‌ಗಳಿಂದ ಬೇರ್ಪಡಿಸಬಹುದು. ಅನಂತರ ಅಂಥ ಸಂಕೀರ್ಣ ಸಂಯುಕ್ತದ ವಿಭಜನೆಯಿಂದ ಆಲ್ಕಲಾಯ್ಡ್‌ನ್ನು ಪಡೆಯಬಹುದು.[೫]
ಆಲ್ಕಲಾಯ್ಡ್ ಮಿಶ್ರಣದಿಂದ ವಿವಿಧ ಆಲ್ಕಲಾಯ್ಡ್‌ಗಳನ್ನು ಪ್ರತ್ಯೇಕಿಸಲು ಅತಿಮುಖ್ಯವಾದ ಮತ್ತು ಹೆಚ್ಚು ಬಳಕೆಯಲ್ಲಿರುವ ವಿಧಾನವೆಂದರೆ ಕ್ರೊಮೊಟೋಗ್ರಫಿ ವಿಧಾನ. ಇದರಲ್ಲಿ ಮೂರು ಬಗೆಗಳಿವೆ-ಮೊದಲನೆಯದು ಸ್ತಂಭರೀತಿಯ (ಕಾಲಂ) ಕ್ರೊಮಾಟೋಗ್ರಫಿ. ಈ ಬಗೆಯ ಕ್ರೊಮಾಟೋಗ್ರಪಿಯಲ್ಲಿ ಗಾಜಿನ ಅಥವಾ ಲೋಹದ ಕೊಳವೆಯೊಂದರಲ್ಲಿನ ಅಲೂಮಿನಿಯಂ ಆಕ್ಸೈಡ್, ಸೆಲ್ಯುಲೋಸ್ ಅಥವಾ ಸಿಲಿಕಾಜೆಲ್‍ಗಳ ಸ್ತಂಭವನ್ನು ಉಪಯೋಗಿಸಲಾಗುತ್ತದೆ. ಎರಡನೆಯದಾದ ಮಂದಪದರ ಕ್ರೊಮಾಟೋಗ್ರಫಿಯಲ್ಲಿ (ಥಿಕ್ ಲೇಯರ್ ಕ್ರೊಮಾಟೋಗ್ರಫಿ) ಗಾಜಿನ ಹಾಳೆಯೊಂದರ ಮೇಲೆ ಹರಡಲಾದ ಅಲ್ಯೂಮಿನಿಯಂ ಆಕ್ಸೈಡ್ ಸೆಲ್ಯುಲೋಸ್ ಅಥವಾ ಸಿಲಿಕಾಜೆಲ್‍ಗಳ ಒಂದೆರಡು ಮಿಲಿಮೀಟರ್ ಮಂದದ ಪದರವನ್ನು ಉಪಯೋಗಿಸಲಾಗುತ್ತದೆ. ಈ ಬಗೆಯ ವಿಧಾನ ಅಲ್ಪಪರಿಮಾಣಗಳಿಗೆ ಮಾತ್ರ ಸೂಕ್ತ. ಮೂರನೆಯ ಅಯಾನ್‍ವಿನಿಮಯ ಕ್ರೊಮಾಟೋಗ್ರಪಿಯಲ್ಲಿ. ಇದರಲ್ಲಿ ಅಲ್ಯೊಮಿನಿಯಂ ಆಕ್ಸೈಡ್ ಮೊದಲಾದ ಅಧಿಶೋಷಕಗಳ (ಅಡ್‍ಸಾರ್ಬೆಂಟ್) ಬದಲಾಗಿ ಅಯಾನ್ ವಿನಿಮಯ ರಾಳಗಳನ್ನು ಉಪಯೋಗಿಸಲಾಗುತ್ತದೆ.
ಕ್ರೊಮಾಟೋಗ್ರಫಿ ವಿಧಾನದಿಂದ ಗುಣಲಕ್ಷಣಗಳಲ್ಲಿ ಅಲ್ಪ ಭಿನ್ನತೆಯಿರುವ ಆಲ್ಕಲಾಯ್ಡ್‌ಗಳನ್ನೂ ಸೂಕ್ತ ಅಧಿಶೋಷಕಗಳನ್ನೂ ಸೂಕ್ತ ಸಾವಯದ ಲೀನಕಾರಿ ದ್ರವಗಳನ್ನೂ ಉಪಯೋಗಿಸಿ ಬೇರ್ಪಡಿಸುವುದು ಸಾಧ್ಯವಾಗಿದೆ. ಹಲವು ಬಾರಿ ಭಿನ್ನತೆ ತೀರ ಅತ್ಯಲ್ಪವಿದ್ದು ಮೊದಲನೆಯ ಕ್ರೊಮಾಟೋಗ್ರಫಿಯಲ್ಲಿ ಭಾಗಶಃ ಮಾತ್ರ ಪ್ರತ್ಯೇಕಿಸಲು ಸಾಧ್ಯವಾಗುತ್ತದೆ. ಪೂರ್ಣ ಪ್ರತ್ಯೇಕತೆಗೆ ಮತ್ತೊಮ್ಮೆ ಕ್ರೊಮಾಟೋಗ್ರಫಿಯನ್ನು ಉಪಯೋಗಿಸಬೇಕಾಗುತ್ತದೆ.
ಮೇಲಿನ ವಿಧಾನಗಳಿಂದ ಪ್ರತ್ಯೇಕಿಸಲಾದ ಆಲ್ಕಲಾಯ್ಡ್‌ಗಳನ್ನು ಸೂಕ್ತ ಲೀನಕಾರಿಗಳನ್ನುಪಯೋಗಿಸಿ ಸ್ಪಟಿಕೀಕರಣದಿಂದ ಶುದ್ದೀಕರಿಸಿದ ಅನಂತರ ಆಲ್ಕಲಾಯ್ಡ್‌ಗಳು ಶುದ್ಧರೂಪದಲ್ಲಿ ದೊರೆಯುತ್ತವೆ.
ಆಲ್ಕಲಾಯ್ಡ್‌ನ ರಚನಾನಿರ್ಣಯ (ಸ್ಟ್ರಕ್ಚರ್ ಡಿಟರ್ಮಿನೇಷನ್)
[ಬದಲಾಯಿಸಿ]ಹೀಗೆ ಬೇರ್ಪಡಿಸಿದ ಆಲ್ಕಲಾಯ್ಡ್‌ಗಳು ಹಿಂದೆಯೇ ಪರಿಚಿತವಿದ್ದ ಆಲ್ಕಲಾಯ್ಡ್‌ಗಳಾಗಿರಬಹುದು. ಇಲ್ಲವೇ ಹೊಸ ಆಲ್ಕಲಾಯ್ಡ್‌ಗಳಾಗಿರಬಹುದು. ಪರಿಚಿತವಿದ್ದವಾದರೆ ಅವನ್ನು ಮೊದಲು ಗುರುತಿಸಬೇಕು. ಹಾಗೆ ಗುರುತಿಸಲು ಅವುಗಳ ಗುಣ, ಲಕ್ಷಣಗಳ ಪರೀಕ್ಷೆ ನಡೆಸಿ ಪರಿಚಿತ ಆಲ್ಕಲಾಯ್ಡ್‌ನ ಗುಣಲಕ್ಷಣಗಳೊಡನೆ ಹೋಲಿಸಿ ಅವುಗಳಲ್ಲಿ ಅನನ್ಯತೆಯನ್ನು ಸಾಧಿಸಬೇಕು. ಸಾಮಾನ್ಯವಾಗಿ ಪರೀಕ್ಷಿಸಲಾಗುವ ಗುಣಲಕ್ಷಣಗಳೆಂದರೆ-ದ್ರವಿಸುವ ಬಿಂದು (ಮೆಲ್ಟಿಂಗ್ ಪಾಯಿಂಟ್), ಅತಿರಕ್ತ (ಇನ್‍ಫ್ರಾರೆಡ್) ಅತಿನೇರಳೆ (ಆಲ್‍ಟ್ರಾವಯೊಲೆಟ್) ಮತ್ತು ಬೀಜಕಾಂತ ಅನುನಾದ (ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್) ರೋಹಿತಗಳು. ಈ ಲಕ್ಷಣಗಳಲ್ಲದೆ ಈಚೀಚೆಗೆ ದ್ರವ್ಯರಾಶಿ ರೋಹಿತಗಳ (ಮ್ಯಾಸ್ ಸ್ಪೆಕ್ಟ್ರ್ರ) ಪರೀಕ್ಷೆ ಹೆಚ್ಚಾಗುತ್ತಿದೆ. ಕಡೆಗೆ ನಿಖರವಾಗಿ ಗುರುತಿಸಲು ಸಸ್ಯಗಳಿಂದ ಹೊಸತಾಗಿ ಹೊರತೆಗೆದು ಶುದ್ಧೀಕರಿಸಿದ ಆಲ್ಕಲಾಯ್ಡನ್ನು ಪರಿಚಿತ ಆಲ್ಕಲಾಯ್ಡ್‌ಗಳೊಡನೆ ಸಮಪ್ರಮಾಣದಲ್ಲಿ ಬೆರೆಸಿ ಮಿಶ್ರಣದ ಗುಣ, ಲಕ್ಷಣಗಳ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಗೊಳಗಾಗಿರುವ ಆಲ್ಕಲಾಯ್ಡ್, ಪರಿಚಿತ ಆಲ್ಕಲಾಯ್ಡ್, ಮಿಶ್ರಣ ಇವು ಮೂರರ ಗುಣಲಕ್ಷಣಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲದಿದ್ದಲ್ಲಿ ಹೊಸ ಆಲ್ಕಲಾಯ್ಡ್ ಮತ್ತು ಪರಿಚಿತ ಆಲ್ಕಲಾಯ್ಡ್‌ಗಳ ಅನನ್ಯತೆಯನ್ನು ಸಾಧಿಸಿದಂತಾಗುತ್ತದೆ. ಹಲವು ಬಾರಿ ಹೊಸ ಆಲ್ಕಲಾಯ್ಡ್‌ನ ಸೂಕ್ತ ನಿಷ್ಪನ್ನ (ಡಿರೈವೆಟಿವ್) ಸಂಯುಕ್ತವೊಂದನ್ನು ಪರಿಚಿತ ಆಲ್ಕಲಾಯ್ಡ್‌ನ ಅನುರೂಪ ನಿಷ್ಪನ್ನದೊಡನೆ ಹೋಲಿಸಿ ಅನನ್ಯತೆಯನ್ನು ಸಾಧಿಸಲಾಗುತ್ತದೆ.[೬]
ಸಸ್ಯದಿಂದ ಪ್ರತ್ಯೇಕಿಸಿದ ಆಲ್ಕಲಾಯ್ಡ್ ಇದುವರೆಗೆ ಪರಿಚಿತವಲ್ಲದ ಹೊಸ ರಚನೆಯ ಆಲ್ಕಲಾಯ್ಡ್ ಆಗಿದ್ದಲ್ಲಿ ಅದರ ರಚನಾನಿರ್ಣಯ ಅಗತ್ಯ. ಈ ಬಗೆಯ ರಚನಾನಿರ್ಣಯ ಸಮಸ್ಯೆಗಳು ಸಾವಯವ ರಸಾಯನಶಾಸ್ತ್ರ ಸಂಶೋಧನೆಗಳಿಗೆ ಉತ್ತಮ ವಸ್ತುಗಳು.
ರಚನಾನಿರ್ಣಯಕ್ಕೆ ಮೊದಲು ಪರಿಶುದ್ಧ ಆಲ್ಕಲಾಯ್ಡ್ ಅವಶ್ಯಕ. ಪರಿಶುದ್ದವಾಗಿಲ್ಲದಿದ್ದಲ್ಲಿ ಅದರ ದ್ರವಿಸುವ ಬಿಂದು ಅಚಲವಾಗುವವರೆಗೂ ಅಥವಾ ದ್ಯುತಿಪಟುತ್ವ (ಆಪ್ಟಿಕಲ್ ಆಕ್ಟಿವಿಟಿ) ಆಲ್ಕಲಾಯ್ಡ್ ಆಗಿದ್ದಲ್ಲಿ ಅದರ ದ್ಯುತಿಭ್ರಮಣ (ಆಪ್ಟಿಕಲ್ ರೊಟೇಷನ್) ಅಚಲವಾಗುವವರೆಗೂ ಶುದ್ಧೀಕರಿಸಬೇಕು. ಶುದ್ದೀಕರಣಕ್ಕೆ ಸ್ಪಟಿಕೀಕರಣ ವಿಧಾನವನ್ನಾಗಲೀ ಕ್ರೊಮಾಟೋಗ್ರಫಿಯನ್ನಾಗಲೀ ಮತ್ತಾವುದಾದರೂ ಸೂಕ್ತ ವಿಧಾನವನ್ನಾಗಲೀ ಉಪಯೋಗಿಸಬಹುದು. ಪರಿಶುದ್ಧತೆಯನ್ನು ಪರೀಕ್ಷಿಸಲು ತೆಳುಪದರ ಕ್ರೊಮಾಟೋಗ್ರಫಿಯನ್ನೂ ಉಪಯೋಗಿಸಬಹುದು. ಅನಂತರ ರಚನಾನಿರ್ಣಯಕ್ಕೆ ತೊಡಗುವ ಮೊದಲು ಈವರೆಗೆ ತಿಳಿದಿರುವ ಸಾವಿರಾರು ಆಲ್ಕಲಾಯ್ಡ್‌ಗಳೆಲ್ಲವುಗಳಿಂದಲೂ ಪರೀಕ್ಷೆಗೊಳಗಾಗಿರುವ ಆಲ್ಕಲಾಯ್ಡ್ ಖಂಡಿತವಾಗಿಯೂ ಭಿನ್ನವಾದುದೆಂದು ನಿಶ್ಚಯಮಾಡಿಕೊಳ್ಳಬೇಕು.
ರಚನಾನಿರ್ಣಯದ ಮೊದಲ ಹಂತ ಆಲ್ಕಲಾಯ್ಡ್‌ನ ಪ್ರಮಾಣಾತ್ಮಕ ವಿಶ್ಲೇಷಣೆ (ಕ್ವಾಂಟೆಟೇಟ್ಯೊ ಅನಾಲಿಸಿಸ್). ನಿಷ್ಕೃಷ್ಟ ವಿಶ್ಲೇಷಣೆಯಿಂದ ಸಂಯುಕ್ತದಲ್ಲಿನ ಮೂಲವಸ್ತುಗಳ ಶತಾಂಶ ಪ್ರಮಾಣ ಮತ್ತು ಅಣುತೂಕಗಳ ಜ್ಞಾನದಿಂದ ಅಣುಸೂತ್ರವನ್ನು ತಿಳಿಯಬಹುದು. ಇದರ ಮುಂದಿನ ಹೆಜ್ಜೆ ರಚನಾಸೂತ್ರದ ನಿರ್ಣಯ. ಸಂಕೀರ್ಣ ರಚನೆಯುಳ್ಳ ಆಲ್ಕಲಾಯ್ಡ್‌ಗಳ ರಚನಾನಿರ್ಣಯ ಅನೇಕ ಬಾರಿ ಬಲುಕಷ್ಟ.
ಪರೀಕ್ಷೆಗೊಳಗಾಗಿರುವ ಆಲ್ಕಲಾಯ್ಡ್‌ನ ಆಕರ ಮತ್ತು ಆ ಆಕರಸಸ್ಯದಲ್ಲಿರುವ ಪರಿಚಿತ ಒಡನಾಡಿ ಆಲ್ಕಲಾಯ್ಡ್‌ಗಳ ರಚನೆಗಳ ಜ್ಞಾನದಿಂದ ಹಲವು ಊಹಾರಚನೆಗಳನ್ನು ಮಂಡಿಸಬಹುದು. ವರ್ಣಪಟಲಗಳ ಪರೀಕ್ಷೆಯಿಂದ ರಚನೆಯ ವಿಷಯವಾಗಿ ಹಲವು ಸ್ಥೂಲವಿಷಯಗಳನ್ನೂ ಅರಿಯಬಹುದು. ಊಹಾರಚನೆಗಳನ್ನು ಬರೆಯುವಾಗ ಇವುಗಳ ಉಪಯೋಗವನ್ನು ಪಡೆಯಲಾಗುತ್ತದೆ. ಹೀಗೆ ಮಾಡಿಕೊಂಡ ಊಹೆಗಳ ಆಧಾರದ ಮೇಲೆ ಆಲ್ಕಲಾಯ್ಡ್‌ಸಂಯುಕ್ತವನ್ನು ಹಲವು ನಿರ್ದಿಷ್ಟರಾಸಾಯನಿಕ ವಸ್ತುಗಳಿಂದ ಇಲ್ಲವೇ ಉಷ್ಣ ಅಥವಾ ವಿಕಿರಣಶಕ್ತಿಯನ್ನು (ರೇಡಿಯೇಷನ್ ಎನರ್ಜಿ) ನೀಡಿ ಶಿಥಿಲೀಕರಣ ಕ್ರಿಯೆಗಳಿಗೆ (ಡಿಗ್ರೆಡೇಷನ್ ರಿಏಕ್ಷನ್ಸ್ ) ಒಳಪಡಿಸಿ ಪರಿಣಾಮವಾಗಿ ಬರುವ ಆಲ್ಕಲಾಯ್ಡ್‌ನ ಭಿನ್ನಭಾಗಗಳನ್ನು ಪರೀಕ್ಷಿಸಿ ಗುರುತಿಸಲಾಗುತ್ತದೆ. ಶಿಥಿಲೀಕರಣ ಕ್ರಿಯೆಗಳಿಂದ ದೊರೆತ ಅಣುತುಣುಕುಗಳನ್ನು ಗುರುತಿಸಲಾಗದೆ ಹೋದರೆ ಅವನ್ನು ಪುನಃ ಶಿಥಿಲೀಕರಣ ಕ್ರಿಯೆಗಳಿಗೆ ಒಳಗುಮಾಡಿ ಪರಿಣಾಮವಾಗಿ ದೊರೆಯುವ ಸಂಯುಕ್ತಗಳನ್ನು ಗುರುತಿಸಲಾಗುತ್ತದೆ. ಹೀಗೆ ದೊರೆತ ಅಣುತುಣುಕುಗಳ ರಚನೆಗಳನ್ನು ಸೂಕ್ತ ರೀತಿಯಲ್ಲಿ ಒಟ್ಟುಗೂಡಿಸುವುದರಿಂದ ಪೂರ್ಣ ಆಲ್ಕಲಾಯ್ಡ್ ಅಣುವಿನ ರಚನೆಯ ಬಗ್ಗೆ ಸ್ವಲ್ಪ ಸುಳಿವು ಸಿಕ್ಕಿದಂತಾಗುತ್ತದೆ. ಆಗ ಕೆಲವು ಊಹಾರಚನೆಗಳಿಗೆ ಸಮರ್ಥನೆ ದೊರೆತು ಉಳಿದ ಊಹಾರಚನೆಗಳನ್ನು ತಿರಸ್ಕರಿಸಬಹುದು.
ಆಲ್ಕಲಾಯ್ಡ್ ಅಣುವಿನಲ್ಲಿ ಆಕ್ಸಿಜನ್ ಪರಮಾಣುಗಳಿದ್ದಲ್ಲಿ ಅವು ಆಲ್ಕೊಹಾಲ್ ಪುಂಜದಲ್ಲಿವೆಯೇ, ಫಿನಾಲ್ ಪುಂಜದಲ್ಲಿವೆಯೇ, ಎಸ್ಟರು, ಆಮ್ಲ ಅಥವಾ ಈಥರ್ ಪುಂಜಗಳಲ್ಲಿವೆಯೇ ಎಂಬುದನ್ನು ಹಲವು ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳಿಂದ ಕಂಡುಹಿಡಿಯಬಹುದು. ಅಷ್ಟೇ ಅಲ್ಲದೇ ಆಮ್ಲ, ಎಸ್ಟರು, ಆಲ್ಕೊಹಾಲ್, ಫಿನಾಲ್ ಪುಂಜಗಳು ಎಷ್ಟೆಷ್ಟಿವೆಯೆಂಬುದನ್ನು ಕಂಡುಹಿಡಿಯಬಹುದು. ಈಥರ್‌ಬಂಧ (ಲಿಂಕೇಜ್) ಎಥಾಕ್ಸಿ ಅಥವಾ ಮೆಥಾಕ್ಸಿ ಪುಂಜಗಳಲ್ಲಿ ಇದ್ದಲ್ಲಿ ಅಂಥ ಪುಂಜಗಳು ಎಷ್ಟಿವೆಯೆಂಬುದನ್ನು ಅಳೆಯಬಹುದು.
ಒಂದು ಉದಾಹರಣೆ
[ಬದಲಾಯಿಸಿ]ಹಾಫ್‍ಮನ್ನನ ಸಮಗ್ರ ಮೆಥಿಲೇಷನ್ ಎಂಬ ಕ್ರಿಯೆಯನ್ನು ಸೂಕ್ತರೀತಿಯಲ್ಲಿ ಉಪಯೋಗಿಸಿದಾಗ, ಕಾರ್ಬನ್ನಿನ ಅಣುಗಳ ಪರಸ್ಪರ ಬಂಧನದ ಸ್ಥೂಲರಚನೆ ತಿಳಿಯುತ್ತದೆ. ಮೇಲ್ಕಂಡ ವಿಧಾನ ಮತ್ತು ಕ್ರಿಯೆಗಳಿಂದ ಸಂಗ್ರಹಿಸಿದ ಎಲ್ಲ ಸಂಗತಿಗಳನ್ನೂ ಉಪಯೋಗಿಸಿ ಆಲ್ಕಲಾಯ್ಡ್ ಅಣುವಿನ ರಚನೆಯನ್ನು ನಿರ್ಣಯಿಸಬಹುದು.[೭] ಉದಾಹರಣೆಗೆ ಒಂದು ಸರಳ ಆಲ್ಕಲಾಯ್ಡ್ ಆದ ನಿಕೊಟೀನ್‍ನ ರಚನಾನಿರ್ಣಯವನ್ನು ಪರಿಶೀಲಿಸಬಹುದು.
ಹೊಗೆಸೊಪ್ಪಿನ ಎಲೆಗಳಲ್ಲಿರುವ ಮುಖ್ಯ ಆಲ್ಕಲಾಯ್ಡಾದ ನಿಕೊಟೀನ್‍ನ ಪ್ರಮಾಣಾತ್ಮಕ ವಿಶ್ಲೇಷಣೆ ಮತ್ತು ಅಣುತೂಕ ನಿರ್ಣಯಗಳಿಂದ ಈ ಸಂಯುಕ್ತದ ಅಣುಸೂತ್ರ C10H14N2 ಎಂದು ತಿಳಿದು ಬರುತ್ತದೆ. ಹೊಗೆಸೊಪ್ಪಿನ ಎಲೆಗಳಲ್ಲಿ ಈ ಆಲ್ಕಲಾಯ್ಡ್ ಮಾತ್ರವಲ್ಲದೆ ಪಿರೋಲಿಡಿನ್ ವೃತ್ತವನ್ನೊಳಗೊಂಡಿರುವ ಹಲವಾರು ಸಂಯುಕ್ತಗಳಿರುವುದರಿಂದ ನಿಕೊಟೀನ್ ಅಣುವೂ ಪಿರೋಲಿಡಿನ್ ವೃತ್ತವನ್ನು ಹೊಂದಿರಬಹುದೆಂದು ಊಹಿಸಬಹುದು.
ನಿಕೊಟೀನನ್ನು ಕ್ರೋಮಿಯಂ ಆಕ್ಸೈಡಿನೊಡನೆ ವರ್ತಿಸಿದಾಗ ಅಣುಗಳು ಶಿಥಿಲ ಬದಿಯಲ್ಲಿ ತೋರಿಸಿದಂತಿದೆಯೆಂದು ಇತರ ವಿಧಾನಗಳಿಂದ ತಿಳಿದುಬಂದಿದೆ.
ಈ ಶಿಥಿಲೀಕರಣ ಕ್ರಿಯೆಯಿಂದ ನಿಕೊಟೀನ್ ಅಣುವಿನಲ್ಲಿ ಪಿರಿಡಿನ್ ವೃತ್ತವಿದೆಯೆಂದೂ, ಪಿರಿಡಿನ್ ವೃತ್ತದಿಂದ ಅಣುವಿನ ಉಳಿದಭಾಗಕ್ಕೆ ವೃತ್ತದ ಮೂರನೆಯ ಪರಮಾಣು ಸ್ಥಾನದಿಂದ ಸಂಬಂಧವಿದೆಯೆಂದೂ ತಿಳಿದುಬರುತ್ತದೆ.
ನಿಕೊಟೀನ್ ಮೆಥಯೋಡೈಡ್ ಲವಣವನ್ನು ಪೊಟಾಷಿಯಂ ಫೆರಿಸಯನೈಡ್, ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಕ್ರೋಮಿಯಂ ಆಕ್ಸೈಡುಗಳೊಡನೆ ಕ್ರಮವಾಗಿ ವರ್ತಿಸಿದಾಗ ಹೈಗ್ರಿನಿಕ್ ಆಮ್ಲ ದೊರೆಯುತ್ತದೆ. ಹೈಗ್ರಿನಿಕ್ ಆಮ್ಲದ ರಚನೆಯು ತಿಳಿದಿರುವುದರಿಂದ ನಿಕೊಟೀನ್ ಅಣುವಿನಲ್ಲಿ N-ಮಿಥೈಲ್-ಪಿರೋಲಿಡಿನ್ ವೃತ್ತವಿರುವುದೂ ಈ ವೃತ್ತದಿಂದ ಅಣುವಿನ ಉಳಿದಭಾಗಕ್ಕೆ ಸಂಬಂಧ ಎರಡನೆಯ ಸ್ಥಾನದ ಮೂಲಕ ಆಗಿರುವುದೂ ತಿಳಿಯುತ್ತದೆ.
ನಿಕೊಟೀನ್ ಮತ್ತು ಹೈಗ್ರಿನಿಕ್ ಆಮ್ಲಗಳ ಅಣುಸೂತ್ರಗಳ ಮೊತ್ತವನ್ನು ಪರಿಶೀಲಿಸಿದಾಗ ಈ ಎರಡು ಅಣುಗಳಲ್ಲಿರುವುದಕ್ಕಿಂತಲೂ ಹೆಚ್ಚು ಪರಮಾಣುಗಳು ನಿಕೊಟೀನ್‌ನಲ್ಲಿ ಇಲ್ಲವೆಂಬುದು ತಿಳಿಯುತ್ತದೆ. ಅದ್ದರಿಂದ ನಿಕೊಟೀನ್ ಅಣುವಿನ ರಚನೆ ಇಲ್ಲಿ ತೋರಿಸಿದಂತೆ ಇರಬೇಕೆಂಬುದು ಸಿದ್ಧವಾದಂತಾಯಿತು. ಅನಂತರ ಸಂಯೋಜನೆಯಿಂದಲೂ ಈ ರಚನೆಯನ್ನು ಸಮರ್ಥಿಸಲಾಗಿದೆ.
ಹಲವು ಸಂದರ್ಭಗಳಲ್ಲಿ ಶಿಥಿಲೀಕರಣಕ್ರಿಯೆಗಳಿಂದ ತಿಳಿಯುವ ಸಂಗತಿಗಳೆಲ್ಲವನ್ನೂ ಸಂತೃಪ್ತಿಗೊಳಿಸಬಲ್ಲ ಹಲವಾರು ಊಹಾರಚನೆಗಳು ಸಾಧ್ಯ. ಅಂಥ ಸಂದರ್ಭದಲ್ಲಿ ಸಂಪೂರ್ಣ ನಿರ್ಣಯಕ್ಕೆ ಬರುವುದು ಸಾಧ್ಯವಿಲ್ಲ.
ಈಗ ಸುಮಾರು 30 ವರ್ಷಗಳಿಂದ ಭೌತವಿಧಾನಗಳ ಉಪಯೋಗ ಹೆಚ್ಚಾಗಿ ಈಗ ಅತಿರಕ್ತರೋಹಿತ, ಅತಿನೇರಳೆರೋಹಿತ, ಬೀಜಕಾಂತಅನುನಾದರೋಹಿತ, ದ್ರವ್ಯರಾಶಿರೋಹಿತ, ದ್ಯುತಿಭ್ರಮಣ ಪ್ರಸರಣ (ಆಪ್ಟಿಕಲ್ ರೊಟೇಟರಿ ಡಿಸ್ಪರ್ಶನ್),[೮]ಕಿರಣನಮನ (ಡಿಫ್ರಾಕ್ಷನ್) ಎಲೆಕ್ಟ್ರಾನ್‍ನಮನ ಮೊದಲಾದ ವಿಧಾನಗಳನ್ನು ತಪ್ಪದೆ ರಚನಾನಿರ್ಣಯಕ್ಕಾಗಿ ಉಪಯೋಗಿಸಲಾಗುತ್ತಿದೆ. ಸುಮಾರು ಹತ್ತು ವರ್ಷಗಳಿಂದೀಚೆಗೆ ದ್ರವ್ಯರಾಶಿರೋಹಿತದ ಉಪಯೋಗ ಬಲುಮಟ್ಟಿಗೆ ಹೆಚ್ಚಿದೆ. ಈಗ ಅನೇಕ ಸಂದರ್ಭಗಳಲ್ಲಿ ಆಲ್ಕಲಾಯ್ಡ್‌ನ್ನು ಒಂದು ರಾಸಾಯನಿಕಕ್ರಿಯೆಗೂ ಒಳಪಡಿಸದೆ ಕೇವಲ ಭೌತವಿಧಾನಗಳ ನೆರವಿನಿಂದಲೇ ಅದರ ಪೂರ್ಣರಚನೆಯನ್ನು ನಿರ್ಣಯಿಸುವುದು ಸಾಧ್ಯವಾಗಿದೆ. ರಾಸಾಯನಿಕ ವಿಧಾನಗಳಿಂದ ನಿರ್ಣಯಿಸಲು ಸಾಧ್ಯವಾಗದ ರಚನೆಗಳನ್ನೂ ಭೌತವಿಧಾನಗಳಿಂದ ಹೆಚ್ಚು ಕಷ್ಟವಿಲ್ಲದೆ ಮತ್ತು ಹೆಚ್ಚು ಪ್ರಮಾಣದಲ್ಲಿ ಸಂಯುಕ್ತವನ್ನು ಉಪಯೋಗಿಸದೆ ನಿರ್ಣಯಿಸಲು ಸಾಧ್ಯವಾಗುವುದರಿಂದ ಈ ವಿಧಾನಗಳ ಪ್ರಾಮುಖ್ಯ ಹೆಚ್ಚಿದೆ. ವಿವಿಧ ಪರಮಾಣುಗಳ ನಡುವಿನ ಪರಸ್ಪರ ದೂರ, ಕೋನಗಳನ್ನು ಕ್ಷ-ಕಿರಣ ನಮನ ಮತ್ತು ಎಲೆಕ್ಟ್ರಾನ್ ನಮನ ವಿಧಾನಗಳನ್ನುಪಯೋಗಿಸಿ ನಿಖರವಾಗಿ ಅಳೆಯಬಹುದು. ಈ ಅಳತೆಗಳಿಂದ ರಾಸಾಯನಿಕ ಕ್ರಿಯೆಗಳಿಂದ ಸುಲಭವಾಗಿ ಅರಿಯಲಾಗದ ಆಕಾಶ ರಚನೆಯನ್ನು (ಸ್ಪೇಶಿಯಲ್ ಸ್ಟ್ರಕ್ಚರ್) ಅರಿತುಕೊಳ್ಳಬಹುದು.
ಕಡೆಯದಾಗಿ ನಿರ್ಣಯಿಸಿದ ಊಹಾರಚನೆಯನ್ನು ಸಮರ್ಥಿಸಲು ರಚನೆಯಲ್ಲಿ ಅನುಮಾನಕ್ಕೆಡೆಬಾರದ ರೀತಿಯಲ್ಲಿ ಪ್ರಯೋಗಶಾಲೆಯಲ್ಲಿ ಆ ರಚನೆಯ ಸಂಯುಕ್ತವನ್ನು ಸಂಯೋಜಿಸಲಾಗುತ್ತದೆ. ಹೀಗೆ ಸಂಯೋಜಿಸಲಾದ ಸಂಯುಕ್ತ ಮತ್ತು ಆಭ್ಯಸಿಸುತ್ತಿರುವ ಆಲ್ಕಲಾಯ್ಡ್‌ನ ಅನನ್ಯತೆಯನ್ನು ಸಾಧಿಸಿದಾಗ ಆ ಆಲ್ಕಲಾಯ್ಡಿನ ರಚನಾನಿರ್ಣಯ ಪೂರ್ಣವಾಗುತ್ತದೆ.
ವರ್ಗೀಕರಣ ಮತ್ತು ಹಲವು ಆಲ್ಕಲಾಯ್ಡ್‌ಗಳು
[ಬದಲಾಯಿಸಿ]ಆಲ್ಕಲಾಯ್ಡ್‌ಗಳನ್ನು ಅವುಗಳ ರಚನೆಯಲ್ಲಿನ ಸಾಮ್ಯಗಳನ್ನನುಸರಿಸಿ ವರ್ಗೀಕರಣ ಮಾಡಲಾಗಿದೆ. ಈ ಪ್ರಥಮ ವರ್ಗೀಕರಣದ ಅನಂತರ ಅವುಗಳ ಅಕರಗಳಿಗನುಗುಣವಾಗಿ ಮರುವರ್ಗೀಕರಣ ಮಾಡಲಾಗುತ್ತದೆ. ಹಲವು ಮುಖ್ಯ ಆಲ್ಕಲಾಯ್ಡ್‌ಗಳನ್ನೂ ಅವುಗಳಲ್ಲಿನ ಪ್ರಮುಖ ಆಲ್ಕಲಾಯ್ಡ್‌ಗಳನ್ನೂ ಮುಂದೆ ಸ್ಥೂಲವಾಗಿ ವಿವರಿಸಿದೆ.
ಹಲವು ಅತಿ ಸರಳ ಆಲ್ಕಲಾಯ್ಡ್‌ಗಳಲ್ಲಿ ನೈಟ್ರೊಜನ್ನಿನ ಪರಮಾಣು ವೃತ್ತವೊಂದರ ಭಾಗವಾಗಿರುವುದಿಲ್ಲ. ಅಂಥ ಆಲ್ಕಲಾಯ್ಡ್‌ಗಳಲ್ಲಿ ಕೆಳಕಾಣಿಸಿರುವ ಎಫೆಡ್ರಿನ್ ಮುಖ್ಯವಾದುದು. ಎಫೆಡ್ರಾ ಗುಂಪಿನ ಸಸ್ಯಗಳಲ್ಲಿ (ಭಾರತೀಯ ಹೆಸರುಗಳು-ಆಸ್ಮೆನಿಯಾ, ಪೋಕ್, ಖಾಂಡ ಬುದಶೂರ್) ದೊರೆಯುವ ಈ ಸಂಯುಕ್ತದ ರಚನಾನಿರ್ಣಯವಾದ ಅನಂತರ ಎರಡು ಬಗೆಗಳಲ್ಲಿ ಸಂಯೋಜಿಸಲಾಗಿದೆ.
ಎಫೆಡ್ರಿನ್‍ನ ಉಪಯೋಗಗಳು: ಈ ಆಲ್ಕಲಾಯ್ಡ್‌ಗೆ ರಕ್ತದ ಒತ್ತಡವನ್ನು ಹೆಚ್ಚಿಸುವ ಶಕ್ತಿಯಿದೆ. ಇದನ್ನು ಆಸ್ತಮಾ ದುರ್ಬಲ ರಕ್ತಚಲನೆಗಳಲ್ಲೂ ಉಸಿರುನಾಳಗಳನ್ನು ಹಿಗ್ಗಿಸುವುದಕ್ಕಾಗಿ (ಡೈಲೇಟ್) ಅನೇಕ ಇತರ ಔಷಧಗಳ ಜೊತೆಯಲ್ಲೂ ಉಪಯೋಗಿಸುತ್ತಾರೆ. ಕೇಂದ್ರನರಮಂಡಲವನ್ನು ಇದು ಚೋದಿಸುವುದರಿಂದ, ಸಂಜೆ ಸೇವಿಸಿದರೆ ನಿದ್ದೆಗೆಡುತ್ತದೆ.
ಪಿರಿಡಿನ್ ವೃತ್ತವನ್ನುಳ್ಳ ಆಲ್ಕಲಾಯ್ಡ್‌ಗಳಲ್ಲಿ ನಿಕೊಟೀನ್, ಹೆಮ್ಲಾಕ್ ಸಸ್ಯದ ಆಲ್ಕಲಾಯ್ಡ್‌ಗಳು, ಅಡಿಕೆ ಮತ್ತು ಮೆಣಸುಗಳಲ್ಲಿರುವ ಆಲ್ಕಲಾಯ್ಡ್‌ಗಳು ಮುಖ್ಯವಾದುವು.
ನಿಕೋಟೀನ್ ಪ್ರಭಾವ: ನಿಕೊಟೀನ್ ಸಂಯುಕ್ತ ಕೇಂದ್ರನರಮಂಡಲ ಮತ್ತು ಅಂಗಗಳ ತುದಿಗಳಲ್ಲಿರುವ ನರಗಳ ಮೇಲೆ ಪ್ರಭಾವ ಬೀರಬಲ್ಲುದು ಮತ್ತು ಗ್ರಂಥಿಗಳ ರಸಸ್ರಾವವನ್ನು (ಗ್ಲ್ಯಾಂಡ್ಯುಲರ್ ಸೆಕ್ರಿಷನ್) ಹೆಚ್ಚಿಸಬಲ್ಲುದು. ರಕ್ತನಾಳಗಳು ಕುಗ್ಗುವಂತೆ ಮಾಡಿ ರಕ್ತದ ಒತ್ತಡವನ್ನು ಹೆಚ್ಚಿಸುವ ಶಕ್ತಿ ಇದಕ್ಕಿದೆ.
ಹೆಮ್ಲಾಕ್‍ನಲ್ಲಿರುವ ಕೋನಿನ್, ಕೋನಿರ್ಸಿ ಆಲ್ಕಲಾಯ್ಡ್‌ಗಳಿಂದಲೂ ಮೆಣಸಿನಲ್ಲಿರುವ ಪಿಪೇರಿನ್ ಆಲ್ಕಲಾಯ್ಡ್‌ನಿಂದಲೂ ಅಡಿಕೆಯಲ್ಲಿರುವ ಅರಿಕೇಡಿನ್, ಅರಿಕೋಲಿನ್, ಗ್ವಾರ್ಸಿ ಮತ್ತು ಗ್ವಾಕೋಲಿನ್‍ಗಳಿಂದಲೂ ಅಂಥ ಹೆಚ್ಚಿನ ಉಪಯೋಗವೇನಿಲ್ಲ.
ಹೆಮ್ಲಾಕ್‍ನ ಉಪಯೋಗ: ಹೆಮ್ಲಾಕ್ ಬೇರು ತೊಗಟೆಗಳ ಕಷಾಯವನ್ನು ಬಲು ಹಿಂದಿನ ಕಾಲದಿಂದಲೂ ಯೂರೋಪಿನಲ್ಲಿ ವಿಷವಾಗಿ ಉಪಯೋಗಿಸುತ್ತಿದ್ದರು.
ಅಡಿಕೆಯ ಉಪಯೋಗ: ಅಡಿಕೆಯ ಆಲ್ಕಲಾಯ್ಡ್‌ಗಳಲ್ಲಿ ಬಾಯಿಯಲ್ಲಿ ಜೊಲ್ಲು ಸುರಿಸುವಂತೆ ಮಾಡುವ ಮತ್ತು ಹಲವು ಬಗೆಗಳಲ್ಲಿ ವ್ಯಕ್ತಿಯನ್ನು ಉದ್ರೇಕಗೊಳಿಸಬಲ್ಲ ಗುಣವಿರುವುದು ತಿಳಿದುಬಂದಿದೆ. ಅರಿಕೋಲಿನ್ ಸಂಯುಕ್ತವನ್ನು ಹೊಟ್ಟೆಯಲ್ಲಿನ ಪರೋಕ್ಷಜೀವಿಗಳ ವಿರುದ್ಧವಾಗಿ ವಿರೇಚಕವಾಗಿ ಮತ್ತು ಲಾಲಾರಸಸ್ರವಕಾರಕವಾಗಿಯೂ ವೈದ್ಯದಲ್ಲಿ ಉಪಯೋಗಿಸುತ್ತಾರೆ.
ಕೂಡಿಕೊಂಡಿರುವ (ಕಂಡೆನ್ಸ್‌ಡ್) ಪಿರೋಲಿಡಿನ್ ಮತ್ತು ಪಿಪೆರಿಡಿನ್ ವೃತ್ತ ರಚನೆಯನ್ನೊಳಗೊಂಡಿರುವ ಆಲ್ಕಲಾಯ್ಡ್‌ಗಳನ್ನು ಅಕರಗಳಿಗನುಗುಣವಾಗಿ ಮರು ವಿಂಗಡಿಸಬಹುದು. ಸೊಲನೇಸೀ ಗುಂಪಿನ ಸಸ್ಯಗಳಾದ ಅಟ್ರೋಪ ಬೆಲ್ಲಡೋನ (ಉಮ್ಮತ್ತಿ), ಹೆನ್‌ಬೇನ್ (ಹ್ಯೋಸೈಮಸ್ ನೈಜರ್, ಸಂಸ್ಕೃತ-ಪರಸಿಕಾಯಿ), ದತ್ತೂರ, ಸ್ಕೊಪೋಲಿಯ ಕಾರ್ನಿಯೋಲಿಯಗಳಲ್ಲಿ ದೊರೆಯುವ ಅಟ್ರೊಪೀನ್ ಮತ್ತು ಸ್ಕೊಪೋಲಮಿನಗಳ ರಚನೆಗಳನ್ನು ಕೆಳಗೆ ಕಾಣಿಸಿದೆ.
ಅಟ್ರೊಪೀನ್ ಮತ್ತು ಸ್ಕೊಪೋಲಮಿನ್‍ನ ಉಪಯೋಗಗಳು: ಅಟ್ರೊಪೀನನ್ನು ಸ್ನಾಯುಗಳ ಸಡೆತವನ್ನು ತಡೆಗಟ್ಟಲು ಉತ್ತೇಜಕವಾಗಿ, ವಿಪರೀತ ಲಾಲಾಸ್ರವವನ್ನು ಕಡಿಮೆ ಮಾಡುವುದಕ್ಕೆ ಉಪಯೋಗಿಸುತ್ತಾರೆ. ಸ್ಕೊಪೋಲಮಿನನ್ನು ಮಾರ್ಫಿನಿನೊಡನೆ ಅಥವಾ ಪ್ರತ್ಯೇಕವಾಗಿ ಅರೆ ನಿದ್ರಾಸ್ಥಿತಿಯನ್ನುಂಟು ಮಾಡಲು ಮತ್ತು ಮೆದುಳಿನ ಉದ್ರೇಕ ಕಡಿಮೆಮಾಡುವ ಶಾಮಕವಾಗಿ ಉಪಯೋಗಿಸುತ್ತಾರೆ.
ಕೊಕೇನ್ ಉಪಯೋಗಗಳು: ಕೋಕ ಸಸ್ಯಗಳನ್ನು ಆಕರವಾಗುಳ್ಳ ಇದೇ ಗುಂಪಿನ ಆಲ್ಕಲಾಯ್ಡ್‌ಗಳಲ್ಲಿ ಕೊಕೇನ್ ಮುಖ್ಯವಾದುದು. ದಂತ ವೈದ್ಯರ ಕುರ್ಚಿಯನ್ನೇರಿದವರಿಗೆಲ್ಲ ಪರಿಚಿತವಿರುವ ಈ ಸಂಯುಕ್ತವನ್ನು ಸ್ಥಳೀಯ ಇಂದ್ರಿಯ ನೋವಳಿಕವಾಗಿ (ಅನೆಸ್ಥೆಟಿಕ್) ಹಿಂದೆ ಹೆಚ್ಚು ಬಳಕೆಯಲ್ಲಿತ್ತು. ಹಲವು ಪ್ರತ್ಯೇಕ ಸಂದರ್ಭಗಳಲ್ಲಿ ಲಾಲಾಸ್ರವವನ್ನು ಕಡಿಮೆ ಮಾಡುವುದಕ್ಕಾಗಿಯೂ ಉತ್ತೇಜಕ, ವೇದನಾನಿವಾರಕ ಅಥವಾ ಶಮನಕಾರಿಯಾಗಿಯೂ ಬಳಕೆಯಲ್ಲಿತ್ತು.
ಕೊಕೇನ್‌ನ ಗುಣಲಕ್ಷಣಗಳಿಗೆ ಕಾರಣಗಳನ್ನು ಶೋಧಿಸುವ ಯತ್ನದಲ್ಲಿ ಅದೇ ಗುಣಗಳನ್ನುಳ್ಳ ನೊವೋಕೇನ್, ಟ್ಯುಟೋಕೇನ್ ಮೊದಲಾದ ಹಲವು ಸಂಶ್ಲೇಷಿತ (ಸಿಂತೆಟಿಕ್) ಹಲವು ರಚನಾ ಸಂಬಂಧಿ ಸಂಯುಕ್ತಗಳನ್ನು ತಯಾರಿಸಲಾಗಿದೆ. ಇವನ್ನೂ ಕೊಕೇನಿನ ಬದಲಾಗಿ ಉಪಯೋಗಿಸಲಾಗುತ್ತಿದೆ.
ದಾಳಿಂಬೆಯ ಉಪಯೋಗಗಳು: ದಾಳಿಂಬೆಯ ತೊಗಟೆಯ ಕಷಾಯವನ್ನು ಹೊಟ್ಟೆಯಲ್ಲಿನ ಪರೋಪಜೀವಿ ಜಂತುಗಳನ್ನು ಉಚ್ಚಾಟಿಸಲು ಬಲುಹಿಂದಿನಿಂದಲೂ ಉಪಯೋಗಿಸಲಾಗುತ್ತಿದೆ. ಈ ಔಷಧೀಯ ಗುಣಕ್ಕೆ ಅದರಲ್ಲಿರುವ ಪೆಲೆಟಿಯರಿನ್ ಎಂಬ ಆಲ್ಕಲಾಯ್ಡ್ ಕಾರಣವೆಂದು ತಿಳಿದುಬಂದಿದೆ.
ಸಿಂಕೋನ ಮರದ ಉಪಯೋಗಗಳು: ಕ್ವಿನೋಲಿನ್ ವೃತ್ತವುಳ್ಳ ಆಲ್ಕಲಾಯ್ಡ್‌ಗಳಲ್ಲಿ ಸಿಂಕೋನ ಮರದ ತೊಗಟೆ ಬೇರುಗಳಿಂದ ತೆಗೆಯಲಾಗುವ ಆಲ್ಕಲಾಯ್ಡ್‌ಗಳು ಪ್ರಮುಖವಾದುವು. ಸಿಂಕೋನ ಮರದ ತೊಗಟೆಯನ್ನು ಜ್ವರಶಾಮಕವಾಗಿ ದಕ್ಷಿಣ ಅಮೆರಿಕದ ನಿವಾಸಿಗಳು ಬಲು ಹಿಂದಿನಿಂದಲೂ ಉಪಯೋಗಿಸುತ್ತಿದ್ದು ಆ ಮರಕ್ಕೆ ಜ್ವರದ ಮರವೆಂದೇ ಹೆಸರಿಟ್ಟಿದ್ದಾರೆ. ಮಲೇರಿಯದ ವಿರುದ್ದ ಅನೇಕ ವರ್ಷಗಳ ಕಾಲ ನಿರಂತರವಾಗಿ ಉಪಯೋಗಿಸಲ್ಪಟ್ಟ ಕ್ವಿನೈನ್‌ಗೆ ಸಿಂಕೋನ ಮರವೇ ಆಕರ. ಸಿಂಕೋನ ಮರದಲ್ಲಿ ಕ್ವಿನೈನ್ ಮಾತ್ರವಲ್ಲದೆ ಸಿಂಕೋನಿನ್, ಕ್ವಿನಿಡೀನ್, ಸಿಂಕೋನಿಡೀನ್ ಮೊದಲಾದ ಹಲವಾರು ಆಲ್ಕಲಾಯ್ಡ್‌ಗಳಿವೆ. ಮಲೇರಿಯಾ ಉಂಟುಮಾಡುವ ಪ್ರಾಸ್ಮೋಡಿಯಂ ಸೂಕ್ಷ್ಮಕ್ರಿಮಿಗಳಿಗೆ ಕ್ವಿನೈನ್ ಯಾವ ಹಾನಿಯನ್ನೂ ಮಾಡದೇ ಹೋದರೂ ಕ್ರಿಮಿಗಳ ವಿರುದ್ದ ದೇಹದ ಸಹಜಶಕ್ತಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಿ ಮಲೇರಿಯಾ ನಿವಾರಣೆಯಲ್ಲಿ ನೆರವು ನೀಡುತ್ತದೆ. ಕ್ವಿನೈನ್ ಮತ್ತು ಸಿಂಕೋನಿನ್‌ಗಳೆರಡೂ ಉತ್ತಮ ಜ್ವರಶಾಮಕಗಳು ಮತ್ತು ಅಲ್ಪ ಪ್ರಮಾಣದಲ್ಲಿ ಸೇವಿಸಿದಾಗ ಬಲವರ್ಧಕಗಳು. ಹಲವು ಸಂದರ್ಭಗಳಲ್ಲಿ ಸಿಂಕೋನ ಆಲ್ಕಲಾಯ್ಡ್‌ಗಳನ್ನು ಪೂತಿನಾಶಕಗಳಾಗಿಯೂ ಉಪಯೋಗಿಸುತ್ತಾರೆ. ಈಗ ಹಲವು ವರ್ಷಗಳಿಂದ ಕ್ವಿನಿಡೀನನ್ನು ಹಲವು ಹೃದ್ರೋಗಗಳು ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತಿದೆ.
ಐಸೋಕ್ವಿನಿಲಿನ್ ವೃತ್ತವನ್ನೊಳಗೊಂಡಿರುವ ಆಲ್ಕಲಾಯ್ಡ್‌ಗಳಲ್ಲಿ ಪಪಾವೆರೀನ್, ಬರ್ಬೆರಿನ್ ಮತ್ತು ಸ್ಯಾಂಗ್ವೆನೆರಿನ್ ಗುಂಪಿನ ಆಲ್ಕಲಾಯ್ಡ್‌ಗಳು ಪ್ರಮುಖವಾದುವು.
ಪಪಾವೆರೀನ್ ಗುಂಪಿನ ಆಲ್ಕಲಾಯ್ಡ್‌ಗಳಿಗೆ ಆಕರ ಗಸಗಸೆ ಜಾತಿಯ ಸಸ್ಯಗಳು. ಇವುಗಳಲ್ಲಿ ಪಪಾವೆರೀನ್ ಮತ್ತು ನರ‍್ಕೋಟೇನ್ ಮುಖ್ಯವಾದುವು. ಗಸಗಸೆಯ ಗಿಡದ ಉತ್ಪನ್ನವಾದ ಅಪೀಮಿನಲ್ಲಿ ಈ ಬಗೆಯ ಆಲ್ಕಲಾಯ್ಡ್‌ಗಳು ಅನೇಕ ಇವೆ. ಅಫೀಮಿನಲ್ಲಿ ಹತ್ತು ಶತಾಂಶದಷ್ಟಿರುವ ನಾರ್ಕೋಟಿನ್ ಮೈಮರೆಸಿ ಸುಪ್ತಾವಸ್ಥೆಯನ್ನು ತರಬಲ್ಲ ಸಂಯುಕ್ತ.
ಕೊಟಾರ್ನಿನ್‍ನ ಉಪಯೋಗಗಳು: ನಾರ್ಕೊಟೀನಿನಿಂದ ತಯಾರಿಸಲಾಗುವ ಕೊಟಾರ್ನಿನ್ ಸಂಯುಕ್ತಕ್ಕೆ ರಕ್ತಸ್ರಾವವನ್ನು ತಡೆಗಟ್ಟುವ ಮತ್ತು ಗರ್ಭಾಶಯವನ್ನು ಸಂಕುಚಿಸುವ ಗುಣವಿರುವುದರಿಂದ ಪ್ರಸವ ಕಾಲದಲ್ಲಿ ಇದನ್ನು ಉಪಯೋಗಿಸುತ್ತಾರೆ. ಈ ಸಂಯುಕ್ತಕ್ಕೆ ಕೇಂದ್ರ ನರಮಂಡಲವನ್ನು ತಾತ್ಕಾಲಿಕವಾಗಿ ನಿಸ್ಸತ್ತ್ವಗೊಳಿಸುವ ಶಕ್ತಿಯಿದೆ.
ಪಪಾವರಿನ್ ಪ್ರಭಾವ: ಪಪಾವರಿನ್ ಸಂಯುಕ್ತಕ್ಕೂ ಇಂದ್ರಿಯ ಸುಪ್ತಿಯನ್ನುಂಟುಮಾಡುವ ಶಕ್ತಿಯಿದ್ದರೂ ಮಾರ್ಫೀನ್‌ನಷ್ಟು ತೀವ್ರವಾಗಿಲ್ಲ, ನರಗಳ ಮೂಲಕ ಸ್ನಾಯಗಳ ಮೇಲೆ ಪರಿಣಾಮ ಬೀರಬಲ್ಲದು. ಈ ದೃಷ್ಟಿಯಲ್ಲಿ ಇದು ಕೊಡೀನನ್ನು ಹೋಲುತ್ತದೆ.
ಹೈಡ್ರಾಸ್ಟಿನ್ ಉಪಯೋಗಗಳು: ಈ ಆಲ್ಕಲಾಯ್ಡ್ ರಚನೆಯಲ್ಲಿ ನಾರ್ಕೋಟೀನಿಗೆ ಸಂಬಂಧಿಸಿದ ಸಂಯುಕ್ತವಾದರೂ ಅಪೀಮಿನಲ್ಲಿರುವುದಿಲ್ಲ. ಹೈಡ್ರಾಸ್ಟಿಸ್ ಕೆನಡೆನ್ನಿಸ್ ಎಂಬ ಸಸ್ಯದ ಬೇರಿನಲ್ಲಿರುವ ಈ ಸಂಯುಕ್ತದ ನಿಷ್ಪನ್ನವಾದ ಹೈಡ್ರಾಸ್ಟನಿನ್‌ಗೆ ರಕ್ತನಾಳಗಳನ್ನು ಸಂಕುಚಿಸಿ ರಕ್ತದ ಒತ್ತಡವನ್ನು ಹೆಚ್ಚಿಸುವ ಶಕ್ತಿಯಿರುವುದರಿಂದ ಇದನ್ನು ಅಂಡಾಶಯ ಪರೀಕ್ಷೆ ಮತ್ತು ಪ್ರಸವವಿಜ್ಞಾನದ ಇತರ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ. ಹೈಡ್ರಾಸ್ಟಿನ್ ಸಂಯುಕ್ತವನ್ನು ಹೃದಯೋದ್ವೇಗ ಶಮನಕಾರಿಯಾಗಿ, ಪೂತಿನಾಶಕವಾಗಿ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡಲು ಉಪಯೋಗಿಸುತ್ತಾರೆ.
ಬರ್ಬೆರಿನ್ ಉಪಯೋಗಗಳು: ಬರ್ಬೆರಿನ್ ಗುಂಪಿನ ಆಲ್ಕಲಾಯ್ಡ್‌ಗಳಲ್ಲಿ ಬರ್ಬೆರಿನ್ ಸಂಯುಕ್ತವೇ ಮುಖ್ಯವಾದುದು. ಬರ್ಬೆರಿನ್ ಸಸ್ಯಗಳ (ಭಾರತೀಯ ಹೆಸರುಗಳು -ದಾರು ಹಳದಿ, ದಾರು ಹರಿದ್ರಾ) ಮತ್ತು ಹೈಡ್ರಾಸ್ಟಿಸ್ ಕೆನಡೆನ್ನಿಸ್ ಗಿಡದ ಬೇರುಗಳು ಮತ್ತು ಕ್ಯಾಂಥೋಕ್ಸೈಲಮ್ ಕ್ಲ್ಯಾವಹರ್ಕ್ಯುಲಿಸ್ ಎಂಬ ಗಿಡದ ತೊಗಟೆಗಳಲ್ಲಿ ದೊರೆಯುವ ಈ ಆಲ್ಕಲಾಯ್ಡಿನ ಗುಣಗಳು ಹೈಡ್ರಾಸ್ಟಿಸ್‌ನ ಗುಣಗಳನ್ನು ಹೋಲುತ್ತದೆ; ಬರ್ಬೆರೀನ್ ಸಲ್ಪೇಟು ಭಾರತದಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಆಮಶಂಕೆ, ಭೇದಿ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿವೆ.
ಸ್ಯಾಂಗ್ವೆನೆರಿನ್ ಉಪಯೋಗಗಳು: ಸ್ಯಾಂಗ್ವೆನೆರಿನ್ ಗುಂಪಿನಲ್ಲಿ ಸ್ಯಾಂಗ್ವನೆರಿನ್, ಕೆಲಿಡೋನಿನ್, ಕೆಲೆರಿಥ್ರಿನ್ ಮತ್ತು ಹೋಮೋಕೆಲಿಡೋನಿನ್ ಎಂಬ ನಾಲ್ಕು ಪರಸ್ಪರ ಸಂಬಂಧಿಸಿದ ಆಲ್ಕಲಾಯ್ಡ್‌ಗಳಿವೆ. ಗಸಗಸೆ ಜಾತಿಯ ಕೆಲಿಡೋನಿಯಂ ಮೇಜಸ್ ಮತ್ತು ಸ್ಯಾಂಗ್ವಿನೇರಿಯ ಕೆನಡೆನ್ಸಿಸ್ ಎಂಬ ಸಸ್ಯಗಳ ಬೇರುಗಳಲ್ಲಿ ದೊರೆಯುವ ಈ ಆಲ್ಕಲಾಯ್ಡ್‌ಗಳು ಚರ್ಮದ ಕ್ಯಾನ್ಸರಿನ ಚಿಕಿತ್ಸೆಯಲ್ಲಿ ಉಪಯೋಗಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಬೇರುಗಳ ಕಷಾಯವನ್ನು ಚಿಕಿತ್ಸೆಯಲ್ಲಿ ಈಗಾಗಲೇ ಉಪಯೋಗಿಸಲಾಗುತ್ತಿದೆ.
ಗಸಗಸೆ ಜಾತಿಯ ಗಿಡಗಳಲ್ಲಿ ದೊರೆಯುವ ಮತ್ತೊಂದು ಮುಖ್ಯವಾದ ಆಲ್ಕಲಾಯ್ಡ್‌ಗಳ ಗುಂಪಿನಲ್ಲಿ ಮಾರ್ಫೀನ್, ಕೋಡೀನ್ ಮತ್ತು ಅದರ ಸಂಬಂಧಿಗಳು ಸೇರುತ್ತವೆ. ಇವುಗಳೂ ಐಸೋಕ್ವಿನೋಲಿನ್ ವೃತ್ತವನ್ನುಳ್ಳ ಆಲ್ಕಲಾಯ್ಡ್‌ಗಳೇ, ಇವುಗಳ ರಚನೆಗಳು ಅಷ್ಟು ಸರಳವಾದುವಲ್ಲವಾದ್ದರಿಂದ ಬಲುಕಾಲ ಇವುಗಳ ರಚನಾ ನಿರ್ಣಯಗಳು ರಸಾಯನ ಶಾಸ್ತ್ರಜ್ಞರಿಗೆ ಉತ್ತಮ ಸಮಸ್ಯೆಗಳಾಗಿ ಉಳಿದಿದ್ದುವು.
ಕೋಡೀನ್‍ನ ಉಪಯೋಗಗಳು: ಕೋಡೀನ್‌ನಲ್ಲಿ ಇಂದ್ರಿಯಸುಪ್ತಿಯನ್ನುಂಟುಮಾಡುವ ಶಕ್ತಿ ತೀವ್ರವಾಗಿಲ್ಲ. ಆದರೆ ಉದ್ವೇಗಶಾಮಕ ಶಕ್ತಿ ಉಂಟು. ಆದ್ದರಿಂದ ಕೋಡೀನಿನ ಸೇವನೆ ಮಾರ್ಫೀನಿನ ಸೇವನೆಗಿಂತ ಹೆಚ್ಚು ಕ್ಷೇಮಕರ. ಸ್ನಾಯುಗಳ ಸೆಡೆತವನ್ನು ಕಡಿಮೆಮಾಡುವ ಶಕ್ತಿ ಇರುವುದರಿಂದ ಕೋಡೀನನ್ನು ಕೆಮ್ಮು, ನೆಗಡಿಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಉತ್ಪನ್ನ ಸಂಯುಕ್ತಗಳಾದ ಮಾರ್ಫೀನ್ ಎಥೈಲ್ ಈಥರ್ ಮತ್ತು ಡೈಹೈಡ್ರೋಕೋಡೀನ್‌ಗಳನ್ನೂ ಕೆಮ್ಮಿನ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತಿದೆ.
ಮಾರ್ಫೀನಿನ ಮತ್ತೊಂದು ನಿಷ್ಪನ್ನವಾದ ಅಪೋಮಾರ್ಫೀನ್ ವಾಂತಿ ಮಾಡಿಸಲು ಉಪಯೋಗಿಸುವ ಔಷಧಿ.
ಇಂಡೋಲ್ ವೃತ್ತರಚನೆಯನ್ನೊಳಗೊಂಡಿರುವ ಆಲ್ಕಲಾಯ್ಡ್‌ಗಳಲ್ಲಿ ಎರ್ಗಾಟ್, ಸ್ಟ್ರಿಕ್ನೋಸ್ ಮತ್ತು ಯೋಹಿಂಬೆ ಗುಂಪಿನ ಆಲ್ಕಲಾಯ್ಡ್‌ಗಳು ಮುಖ್ಯವಾದುವು. ಧಾನ್ಯಗಳ ಮೇಲೆ, ಅದರಲ್ಲೂ ರೈಧಾನ್ಯದ ಮೇಲೆ ಬೆಳೆಯುವ ಕೀಳ್ತರಗತಿಯ ಪರೋಪ ಜೀವಿಯಾದ ಎರ್ಗಾಟ್ ಎಂಬ ಬೂಷ್ಟಿನಲ್ಲಿ ದೊರೆಯುವ ಆಲ್ಕಲಾಯ್ಡ್‌ಗಳೆಲ್ಲವೂ ಲೈಸರ್ಜಿಕ್ ಆಮ್ಲದ ನಿಷ್ಪನ್ನ ಸಂಯುಕ್ತಗಳು. ಲೈಸರ್ಜಿಕ್ ಆಮ್ಲದ ಡೈ ಎಥೈಲ್ ಅಮೈಡ್ ನಿಷ್ಪನ್ನ ಎಲ್.ಎಸ್.ಡಿ. ಎಂಬ ಹೆಸರಿನಿಂದ ಜಗತ್ಪ್ರಸಿದ್ಧವಾಗಿದೆ.
ಮೆದುಳನ್ನು ಸುಪ್ತಿ, ಸಂಮೋಹನಕ್ಕೊಳಮಾಡಿ ಈ ಸಂಯುಕ್ತ, ಸೇವಿಸುವ ವ್ಯಕ್ತಿಯ ಮಾನಸಿಕ ಹಿನ್ನೆಲೆ ಮತ್ತು ಆಕಾಂಕ್ಷೆಗಳಿಗನುಗುಣವಾಗಿ ವಿವಿಧ ಅಸ್ವಾಭಾವಿಕ ಅನುಭವಗಳನ್ನು ನೀಡಬಲ್ಲ ಶಕ್ತಿ ಪಡೆದಿರುವುದರಿಂದ ಪಾಶ್ಚಾತ್ಯ ದೇಶಗಳಲ್ಲಿ ಅನೇಕರು ಇದರ ಸೇವನೆಯ ಚಟಕ್ಕೆ ಬಲಿಯಾಗಿದ್ದಾರೆ. ಈ ಸಂಯುಕ್ತದ ವಿಪರೀತ ಉಪಯೋಗದಿಂದ ಸೇವಿಸುವ ವ್ಯಕ್ತಿ ಬೇಜವಾಬ್ದಾರಿಯವನಾಗಿ ಮಾನಸಿಕ ರೋಗಿಯಾಗುವ ಸಂಭವವುಂಟು. ಎಲ್.ಎಸ್.ಡಿ. ಮೆದುಳಿನಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸುವ ಸೆರೊಟೊನಿನ್ ಎಂಬ ಸಂಯುಕ್ತದ ಸಮತೋಲನವನ್ನು ಬದಲಾಯಿಸುವುದೇ ಅದರ ಸೇವನೆಯಿಂದಾಗುವ ಪರಿಣಾಮಗಳಿಗೆ ಕಾರಣವೆಂದು ನಂಬಲಾಗಿದೆ.
ಸ್ಟ್ರಿಕ್ನೋಸ್‍ನ ಉಪಯೋಗಗಳು: ಸ್ಟ್ರಿಕ್ನೋಸ್ ಗುಂಪಿನ ಎರಡು ಮುಖ್ಯ ಆಲ್ಕಲಾಯ್ಡ್‌ಗಳು ಸ್ಟ್ರಿಕನಿನ್ ಮತ್ತು ಬ್ರೂಸಿನ್. ಸ್ಟ್ರಿಕ್ನೋಸ್ (ಕಾಜವಾರ) ಗುಂಪಿನ ಸಸ್ಯಗಳಲ್ಲಿ ದೊರೆಯುವ ಈ ಆಲ್ಕಲಾಯ್ಡ್‌ಗಳನ್ನು ಶುದ್ಧರೂಪದಲ್ಲಿ ಪಡೆದ ಅನಂತರ ಸಂಪೂರ್ಣ ರಚನಾನಿರ್ಣಯ ಮಾಡಿ, ಪ್ರಯೋಗಶಾಲೆಯಲ್ಲಿ ಸಂಯೋಜಿಸಿ ಸಮರ್ಥಿಸಲು ಸುಮಾರು ನೂರು ವರ್ಷಗಳೇ ಬೇಕಾಗುವುದು. ಈ ಆಲ್ಕಲಾಯ್ಡ್‌ಗಳು ವಿಷಪದಾರ್ಥಗಳೆಂದು ಪ್ರಸಿದ್ಧವಾಗಿದ್ದರೂ ಸೂಕ್ತ ಪ್ರಮಾಣಗಳಲ್ಲಿ ಹಸಿವಾಗಿಸಲೂ ನರಗಳನ್ನು ಉತ್ತೇಜಿಸುವುದಕ್ಕಾಗಿಯೂ ಬಲವರ್ಧಕಗಳಾಗಿಯೂ ಇವನ್ನು ಉಪಯೋಗಿಸಲಾಗುತ್ತಿದೆ.
ಸರ್ಪಗಂಧದ ಉಪಯೋಗಗಳು: ಯೋಬಿಂಬೆ ಗುಂಪಿನ ಆಲ್ಕಲಾಯ್ಡ್‌ಗಳಲ್ಲಿ ಮುಖ್ಯವಾದುವು ಯೋಹಿಂಬೈನ್ ಮತ್ತು ನಿಸರ್ಪೀನ್‌ಗಳು. ಸರ್ಪಗಂಧ ಅಥವಾ ಚಂದ್ರಿಕಾ ಗಿಡದ ಬೇರು ತೊಗಟೆಗಳಲ್ಲಿನ ಮುಖ್ಯ ಆಲ್ಕಲಾಯ್ಡ್ ರಿಸರ್ಪೀನ್, ಸರ್ಪಗಂಧವನ್ನು ಸುಮಾರು ನಾಲ್ಕು ಸಾವಿರ ವರ್ಷಗಳಿಂದಲೂ ಭಾರತೀಯರು ಮೂಲಿಕೆಯಾಗಿ ಉಪಯೋಗಿಸುತ್ತಿದ್ದರು. ಚರಕ ಸಂಹಿತೆಯಲ್ಲೂ ಇದರ ಉಲ್ಲೇಖವಿದೆ. ಈ ಸಂಯುಕ್ತಕ್ಕೆ ಮನಸ್ಸು, ಹೃದಯಗಳ ಉದ್ವೇಗಗಳನ್ನು ಕಡಿಮೆಮಾಡಿ ರಕ್ತದ ಒತ್ತಡವನ್ನು ತಗ್ಗಿಸುವ ಶಕ್ತಿ ಇರುವುದರಿಂದ ಮಾನಸಿಕರೋಗಗಳು ಮತ್ತು ಅತಿರಕ್ತದ ಒತ್ತಡದ ಚಿಕತ್ಸೆಗಾಗಿ ಇದನ್ನು ಉಪಯೋಗಿಸಲಾಗುತ್ತಿದೆ. ರಿಸರ್ಪೀನಿನ ಉಪಯೋಗವನ್ನು ಸುಮಾರು ಇಪ್ಪತ್ತು ವರ್ಷಗಳಿಂದ ಪಾಶ್ಚಾತ್ಯ ವೈದ್ಯರು ಅರಿತುಕೊಂಡು ಸರ್ಪಗಂಧದಿಂದ ಬೇರ್ಪಡಿಸಿ ಹಿರಿಯ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.
ಯೋಹಿಂಬೈನ್‍ನ ಉಪಯೋಗ: ಯೋಹಿಂಬೈನ್ ಸಂಯುಕ್ತಕ್ಕೆ ಕಾಮೋತ್ತೇಜಕ ಗುಣವೂ ಇದೆಯೆಂದು ಹೇಳಲಾಗಿದೆ.
ಇಂಡೋಲ್ ರಚನೆಯನ್ನೊಳಗೊಂಡಿರುವ ಹಲವು ಆಲ್ಕಲಾಯ್ಡ್‌ಗಳು ಕೆಲಬಾರ್ ಎಂಬ ಬೀಜದ ಕಾಳುಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಮುಖ್ಯವಾದುದು ಈಸರೀನ್ ಅಥವಾ ಫೈಸೋಸ್ಟಿಗ್ಮಿನ್.
ಈಸರೀನ್ ಉಪಯೋಗಗಳು: ಈಸರೀನ್ ಕಣ್ಣುಪಾಪೆ ಸಂಕುಚಿಸುವಂತೆ ಮಾಡಬಲ್ಲದು. ಗ್ರಂಥಿಗಳ ರಸ ಒಸರುವಿಕೆಯನ್ನು ಹೆಚ್ಚಿಸಬಲ್ಲುದು ಮತ್ತು ಕರುಳಿನಲ್ಲಿ ಆಹಾರ ಪರಿಕ್ರಮ ಸ್ನಾಯ ಸಂಕೋಚನೆಯಿಂದ ಸರಾಗವಾಗಿ ಮುಂದುವರಿಯುವಂತೆ ಮಾಡಬಲ್ಲ ಶಕ್ತಿ ಇದಕ್ಕಿದೆ.
ನೇತ್ರ ಚಿಕಿತ್ಸೆಯಲ್ಲಿ ಮತ್ತು ಕ್ಯೊರರೇ (ಕ್ಯೊರರೇ ಎಂಬುದು ದಕ್ಷಿಣ ಅಮೆರಿಕದ ಮೂಲನಿವಾಸಿಗಳು ಬಾಣದ ತುದಿಗೆ ಹಚ್ಚುತ್ತಿದ್ದ ವಿಷ : ಹಲವಾರು ಜಾತಿಯ ಮರಗಳ ತೊಗಟೆಗಳಿಂದ ಒಂದು ನಿರ್ದಿಷ್ಟ ರೀತಿಯಲ್ಲಿ ಸಂಸ್ಕರಿಸಿ ಈ ವಿಷವನ್ನು ತಯಾರಿಸಲಾಗುತ್ತಿತ್ತು : ಈ ವಿಷದಲ್ಲಿಯೂ ಹಲವಾರು ಆಲ್ಕಲಾಯ್ಡ್‌ಗಳಿವೆ) ವಿಷಪ್ರಯೋಗದ ವಿರುದ್ಧ ಚಿಕಿತ್ಸೆಗಾಗಿ ಇದನ್ನು ಉಪಯೋಗಿಸಬದಹುದು.
ಕೆಫೀನ್‍ನ ಉಪಯೋಗಗಳು: ಪ್ಯೂರೀನ್ ವೃತ್ತರಚನೆಯನ್ನೊಳಗೊಂಡಿರುವ ಆಲ್ಕಲಾಯ್ಡ್‌ಗಳಲ್ಲಿ ಮುಖ್ಯವಾದುವು ಕೆಫೀನ್ ಮತ್ತು ಥಿಯೋಬ್ರೋಮಿನ್. ಕಾಫಿಬೀಜ ಮತ್ತು ಚಹದ ಎಲೆಗಳಲ್ಲಿರುವ ಕೆಫೀನ್ ಮತ್ತು ಕೋಕೋ ಬೀಜಗಳಲ್ಲಿರುವ ಥಿಯೋಬ್ರೋಮಿನ್ ಹೃದಯದ ಬಡಿತವನ್ನು ಹೆಚ್ಚಿಸಿ ಕೇಂದ್ರ ನರಮಂಡಲಕ್ಕೂ ತಾತ್ಕಾಲಿಕ ಉತ್ತೇಜನ ನೀಡುತ್ತದೆ.
ಹೃದಯದ ಬಡಿತದ ವೇಗವನ್ನು ಕಡಿಮೆ ಮಾಡುವ ಅನಪೇಕ್ಷಿತ ಗುಣವನ್ನುಳ್ಳ ಆಸ್ಪಿರಿನ್‌ನಂಥ ಔಷಧಗಳಿಂದುಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಗಟ್ಟಲು ಅಂಥ ಔಷಧಗಳೊಡನೆ ಕೆಫೀನನ್ನು ಉಪಯೋಗಿಸಲಾಗುತ್ತದೆ. ಉತ್ತೇಜಕ ಗುಣವಿರುವುದರಿಂದ ಅನೇಕ ತಂಪು ಪಾನೀಯಗಳಲ್ಲೂ ಕೆಫೀನನ್ನು ಬೆರೆಸಲಾಗುತ್ತಿದೆ.
ಚಿತ್ರದಲ್ಲಿ ತೋರಿಸಿರುವ ರಚನೆಯುಳ್ಳ ಕೋಲ್ಜಿಸಿನ್, ಕೋಲ್ಜಿಕಮ್ ಗುಂಪಿನ ಸಸ್ಯಗಳಲ್ಲಿ (ಭಾರತೀಯ ಹೆಸರುಗಳು-ಹಿರಣ್ಯತುತ್, ಹಿರಂಟುತಿಯ, ಮೂಂಡ್, ಸುರಂಜಮಕರ್ವಿ) ದೊರೆಯುವ ಆಲ್ಕಲಾಯ್ಡ್. ೧೮೧೯ರಲ್ಲಿ ಬೇರ್ಪಡಿಸಲ್ಪಟ್ಟ ಈ ಸಂಯುಕ್ತದ ರಚನಾ ನಿರ್ಣಯಕ್ಕೆ ಸುಮಾರು ನೂರನಲವತ್ತು ವರ್ಷಗಳಾದುವು. ಏಳೆಂಟು ವರ್ಷಗಳ ಹಿಂದೆ ಇದರ ಸಂಯೋಜನೆಯೂ ಆಗಿದ್ದು ಈಗ ಇದರ ರಚನಾನಿರ್ಣಯ ಸಂಪೂರ್ಣವಾಗಿದೆ. ಕಟ್ಟುವಾರೆ (ಗೌಟ್) ರೋಗದ ಚಿಕತ್ಸೆಯಲ್ಲಿ ಈ ಸಂಯುಕ್ತವನ್ನು ಉಪಯೋಗಿಸಲಾಗುತ್ತಿದೆ.
ಇನ್ನುಳಿದ ಆಲ್ಕಲಾಯ್ಡ್‌ಗಳಲ್ಲಿ ಹಲವು ಮುಖ್ಯ ಆಲ್ಕಲಾಯ್ಡ್‌ಗಳನ್ನು ಮುಂದೆ ಸ್ಥೂಲವಾಗಿ ಪರಿಶೀಲಿಸಲಾಗಿದೆ.
ಪೈಲೋಕಾರ್ಪಿನ್ (ಆಕರ-ಪೈಲೋಕಾರ್ಪಸ್ ಪೆನ್ನಾಟಿ ಪೋಲಸ್) - ನೇತ್ರಚಿಕಿತ್ಸೆಯಲ್ಲಿ ಮತ್ತು ಬೆವರಿಳಿಸಲು ಸಹಾಯಕವಾಗಿ ಇದನ್ನು ಉಪಯೋಗಿಸಲಾಗುತ್ತಿದೆ.
ಆಕೋನಿಟನ್ (ಆಕರ-ಆಕೋನಿಟಮ್ ಗುಂಪಿನ ಸಸ್ಯಗಳು. ಭಾರತೀಯ ಹೆಸರುಗಳು-ಬಂಬಲನಾಗ, ಸಫೇದ್ ಬಿಷ್, ಅತಿವಿಷ)-ಬಹು ತೀವ್ರ ವಿಷವಸ್ತು. ಕೇಂದ್ರನರಮಂಡಲದ ಮೇಲೆ ಪರಿಣಾಮವನ್ನುಂಟುಮಾಡಬಲ್ಲ ಶಕ್ತಿಯಿದ್ದು ಹೃದಯ ಸ್ತಂಭನವನ್ನುಂಟುಮಾಡಬಲ್ಲದು.
ಎಮೆಟಿನ್ (ಆಕರ-ಇಪಿಕ್ಕಾಕುವಾನ) - ಈ ಆಲ್ಕಲಾಯ್ಡ್‌ನ್ನು ಏಕಾಣುಜೀವಿಗಳಿಂದುಂಟಾಗುವ ರಕ್ತಭೇದಿಯ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ. ಇದು ವಾಂತಿಕಾರಿ ಗುಣವನ್ನೂ ಪಡೆದಿದೆ.
ಈಗ ಸುಮಾರು ಹತ್ತು ವರ್ಷಗಳಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಸ್ಯೋತ್ಪನ್ನ ಸಂಯುಕ್ತಗಳ ಉಪಯೋಗವನ್ನು ಪರಿಶೀಲಿಸಲಾಗುತ್ತಿದೆ. ಹಲವು ಆಲ್ಕಲಾಯ್ಡ್‌ಗಳು ಥ್ಯಾಲಿಕಾರ್ಪಿನ್, ಟೆಟ್ರಾಂಡ್ರಿನ್, ವಿಂಕ ಲ್ಯೊಕೋಬ್ಲ್ಯಾಸ್ಟಿನ್, ಎಲೆಫ್ಯಾಂಟಿನ್, ವಿಟಾಫೆರಿನ್, ಅಕ್ರೋಮೈಸಿನ್, ಕೋಲ್ಚಿಸಿನ್ ಮತ್ತು ಸ್ಯಾಂಗ್ವೆನೆರಿನ್ ಗುಂಪಿನ ಆಲ್ಕಲಾಯ್ಡ್‍ಗಳು ವಿವಿಧ ಬಗೆಯ ಕ್ಯಾನ್ಸರ್ ವಿರುದ್ಧ ಚಿಕಿತ್ಸೆಗಳಲ್ಲಿ ಉಪಯೋಗಕ್ಕೆ ಒದಗುವ ಭರವಸೆಯನ್ನು ತೋರಿಸುತ್ತಿವೆ. ಖಚಿತ ನಿರ್ಣಯಕ್ಕೆ ಬರಲು ಬೇಕಾಗುವ ಪ್ರಯೋಗಗಳು ನಡೆಯುತ್ತಿವೆ.
ಪ್ರಯೋಗಗಳು ಮತ್ತು ಭವಿಷ್ಯ
[ಬದಲಾಯಿಸಿ]ಆಲ್ಕಲಾಯ್ಡ್‌ಗಳ ಜೈವಿಕ ಉತ್ಪಾದನೆ (ಬಯೊಜೆನಿಸಿಸ್), ಸಸ್ಯಗಳಲ್ಲಿ ಆಲ್ಕಲಾಯ್ಡ್‌ಗಳ ನಿರ್ಮಾಣ ಹೇಗೆ ಆಗುತ್ತದೆಂಬುದನ್ನು ತಿಳಿದುಕೊಳ್ಳಲು ಅನೇಕ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸಿದ್ದಾರೆ ಮತ್ತು ನಡೆಸುತ್ತಿದ್ದಾರೆ. ಈ ಪರಿಶೀಲನೆಗಳಿಂದ ಸಸ್ಯಗಳಲ್ಲಿ ಅವುಗಳ ಪಾತ್ರೆವೇನೆಂಬುದನ್ನು ತಿಳಿಯುವ ಸಾಧ್ಯತೆಯಿದೆಯೆಂದು ಭಾವಿಸಲಾಗಿದೆ. ಈ ಬಗೆಯ ಜೈವಿಕಸಂಶ್ಲೇಷಣ (ಬಯೋಸಿಂತೆಸಿಸ್) ಸಮಸ್ಯೆಯೂ ರಸಾಯನಶಾಸ್ತ್ರಜ್ಞರಿಗೆ ರಚನಾನಿರ್ಣಯ ಸಮಸ್ಯೆಯಷ್ಟೇ ಮನೋರಂಜಕವಾಗಿದೆ. ಈ ವರೆಗೆ ನಡೆದಿರುವ ಪರಿಶೀಲನೆಗಳಲ್ಲಿ ರಾಬರ್ಟ್ ರಾಬಿನ್‍ಸನ್, [೯]ಪಿಕ್ಟೆಟ್ ಮತ್ತು ಕಳೆದ ಎರಡು ದಶಕಗಳಲ್ಲಿ ಹೆಂಡ್ರಿಕ್‍ಸನ್ ಮತ್ತು ಬ್ಯಾಟರ್ ಸ್ಟೀಯವರ ಪಾತ್ರಗಳು ಹಿರಿದಾಗಿವೆ.[೧೦]
ಸಸ್ಯಗಳಲ್ಲಿ ಸಮೃದ್ಧವಾಗಿರುವ ಅಮೈನೋ ಆಮ್ಲಗಳು, ಅಸೆಟಿಕ್ ಆಮ್ಲ ಮತ್ತು ಫಾರ್ಮಾಲ್ಡೆ ಹೈಡ್‍ಗಳು ಈ ಬಗೆಯ ಸಂಶ್ಲೇಷಣೆಗಳಲ್ಲಿ ಭಾಗವಹಿಸುವುವೆಂದು ತಿಳಿದು ಬಂದಿದೆ. ಈ ಬಗೆಯ ಪರಿಶೀಲನೆಗಳಲ್ಲಿ ವಿಕಿರಣಕ್ರಿಯಾಶಕ್ತಿಯನ್ನುಳ್ಳ ಪರಮಾಣುಗಳನ್ನೊಳಗೊಂಡಿರುವ ಸಂಯುಕ್ತಗಳನ್ನು ಸಸ್ಯಗಳಿಗೆ ಒದಗಿಸಿ, ಅಂತಿಮ ಸಂಯುಕ್ತವಾದ ಆಲ್ಕಲಾಯ್ಡಿನಲ್ಲಿ ವಿಕಿರಣಶಕ್ತಿಯ ಇರುವಿಕೆ (ಅಥವಾ ಇಲ್ಲದಿರುವಿಕೆ), ಇದ್ದಲ್ಲಿ ಅದರ ತೀವ್ರತೆ ಇವುಗಳ ಪರೀಕ್ಷೆಯಿಂದ ಊಹಿಸಲಾದ ಸಂಯುಕ್ತಗಳಿಂದ ಆಲ್ಕಲಾಯ್ಡ್ ಅಣುಗಳ ನಿರ್ಮಾಣ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಉದಾಹರಣೆಗೆ ವಿಕಿರಣಕ್ರಿಯಾಶಕ್ತಿಪೂರಿತ ಕಾರ್ಬನ್ ಅಣುವನ್ನುಳ್ಳ ಅಸಿಟಿಕ್ ಆಮ್ಲವನ್ನು ಸಸ್ಯಕ್ಕೆ ಒದಗಿಸಿ, ಹಲವು ಕಾಲದ ಅನಂತರ ಆ ಸಸ್ಯದಿಂದ ಆಲ್ಕಲಾಯ್ಡ್‌ನ್ನು ತಯಾರಿಸಿದಾಗ ಆ ಆಲ್ಕಲಾಯ್ಡ್ ವಿಕಿರಣಕ್ರಿಯಾಶಕ್ತಿಯ ಇರುವಿಕೆಯನ್ನು ವ್ಯಕ್ತಪಡಿಸಿದರೆ ಅದರ ಜೈವಿಕ ಸಂಶ್ಲೇಷಣೆಯಲ್ಲಿ ಅಸಿಟಿಕ್ ಆಮ್ಲ ಭಾಗವಹಿಸಿದೆಯೆಂದು ನಿರ್ಣಯಿಸಬಹುದು.
ಸಾಮಾನ್ಯವಾಗಿ ಈ ಬಗೆಯ ಸಂಶೋಧನೆಗಳಲ್ಲಿ ಊಹಾಸಂಶ್ಲೇಷಣೆಗಳನ್ನು ಬರೆದು ಅನಂತರ ಇವುಗಳನ್ನು ಸಮರ್ಥಿಸಲು, ನಕಾಶೆಗಳಲ್ಲಿ ತೋರಿಸಿರುವ ಮಧ್ಯವರ್ತಿಗಳನ್ನು ಪರಿಶೀಲಿಸಲಾಗುತ್ತದೆ. ಅದಕ್ಕಾಗಿ ವಿಕಿರಣಕ್ರಿಯಾಶಕ್ತಿಯುಳ್ಳ ಪರಮಾಣುಗಳನ್ನೊಳಗೊಂಡಿರುವ ಊಹಾಮಧ್ಯವರ್ತಿಗಳನ್ನು ಪ್ರತ್ಯೇಕವಾಗಿ ಸಂಯೋಜಿಸಿ ಅವುಗಳನ್ನು ಅನಂತರ ಸಸ್ಯಕ್ಕೆ ಒದಗಿಸಿ ಹಲವು ದಿನಗಳ ಅನಂತರ ಆಲ್ಕಲಾಯ್ಡ್‌ನ್ನು ಸಸ್ಯದಿಂದ ಬೇರ್ಪಡಿಸಿ ಪರೀಕ್ಷಿಸಲಾಗುತ್ತದೆ. ಆ ಸಮಯದಲ್ಲಿ ಆಲ್ಕಲಾಯ್ಡ್‌ನಲ್ಲಿ ವಿಕಿರಣಕ್ರಿಯಾಶಕ್ತಿಯಿದ್ದಲ್ಲಿ ಊಹಾಮಧ್ಯವರ್ತಿ ನಿಜವಾಗಿಯೂ ಜೈವಿಕ ಸಂಶೋಧನೆಯಲ್ಲಿಯೂ ಮಧ್ಯವರ್ತಿ ಎಂದು ಭಾವಿಸಲಾಗುತ್ತದೆ. ಹಾಗಿಲ್ಲವಾದರೆ ಆ ಮಾರ್ಗ ಮತ್ತು ಮಧ್ಯವರ್ತಿಗಳನ್ನು ತಿರಸ್ಕರಿಸಿ ಹೊಸ ಮಧ್ಯವರ್ತಿ ಮತ್ತು ಮಾರ್ಗಗಳ ಪರೀಕ್ಷೆಗೆ ತೊಡಗಬೇಕಾಗುತ್ತದೆ. ಈ ಬಗೆಯ ಸೂಕ್ಷ್ಮಸಂಶೋಧನೆಯಿಂದ ಯಾವ ಮೂಲ ಅಣುಗಳು ಆರಂಭ ವಸ್ತುಗಳು, ಅವು ಹೇಗೆ ಕ್ರಮೇಣ ಒಂದರೊಡನೊಂದು ಸೇರಿ ದೊಡ್ಡ ಅಣುಗಳಾಗುತ್ತವೆ ಎಂಬುದನ್ನು ತಿಳಿಯಬಹುದು.[೧೧]
ಇಂಥ ಸಂಶೋಧನೆಗಳು ಸಸ್ಯಗಳ ಬೆಳೆವಣಿಗೆಯನ್ನು ಅನುಸರಿಸಬೇಕಾಗಿರುವುದರಿಂದ ಬಹು ಕಾಲವ್ಯಯ ಅನಿವಾರ್ಯ. ಈ ವರೆಗೆ ಅನೇಕ ಆಲ್ಕಲಾಯ್ಡ್‌ಗಳ ಜೈವಿಕ ಉತ್ಪಾದನೆಗಳನ್ನು ಯಶಸ್ವಿಯಾಗಿ ಅರಿತುಕೊಳ್ಳಲಾಗಿದೆ. ಎಲ್ಲ ಆಲ್ಕಲಾಯ್ಡ್‌ಗಳ ರಚನಾನಿರ್ಣಯ, ಪ್ರಯೋಗಶಾಲೆಯ ಸಂಶ್ಲೇಷಣೆಗಳನ್ನು ಮಾತ್ರವಲ್ಲದೆ, ಜೈವಿಕ ಸಂಶ್ಲೇಷಣೆಗಳ ಅರಿವನ್ನೂ ಸಾಧಿಸಬೇಕೆಂಬುದು ಆಲ್ಕಲಾಯ್ಡ್ ವಿಜ್ಞಾನಿಗಳ ಆಶಯ. ಈ ಬಗೆಯ ಸಂಶ್ಲೇಷಣೆಯ ರಹಸ್ಯವನ್ನು ಅರಿತ ಅನಂತರ ಆಲ್ಕಲಾಯ್ಡ್‌ನ್ನು ಪ್ರಯೋಗಶಾಲೆಯಲ್ಲಿ ಸಂಶ್ಲೇಷಿಸಲೂ ಹಲವು ಬಾರಿ ಕೆಲವು ಸೂಚನೆಗಳು ದೊರೆಯುತ್ತವೆ.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ https://books.google.com/books?id=MtOiLVWBn8cC&pg=PA20
- ↑ https://en.wikipedia.org/wiki/Special:BookSources/9789400766495
- ↑ http://www.epharmacognosy.com/2012/07/general-characteristics-of-alkaloids.html
- ↑ http://www.yourarticlelibrary.com/biology/plants/the-process-of-extraction-of-alkaloids-from-plants/49418
- ↑ https://www.dmt-nexus.me/forum/default.aspx?g=posts&t=70899
- ↑ http://www.yourarticlelibrary.com/biology/alkaloid/alkaloid-function-properties-and-classification-of-alkaloids/49592
- ↑ https://babel.hathitrust.org/cgi/pt?id=mdp.39015034593486;view=1up;seq=575
- ↑ https://www.sciencedirect.com/science/article/pii/S0040402001994268
- ↑ https://www.nobelprize.org/prizes/chemistry/1947/robinson/facts/
- ↑ https://egpat.com/blog/8-precursors-essential-for-biosynthesis-of-alkaloids
- ↑ "ಆರ್ಕೈವ್ ನಕಲು". Archived from the original on 2014-03-18. Retrieved 2020-01-11.
- ↑ https://www.sciencedirect.com/science/article/pii/B978012405927600014X