ಗಸಗಸೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಸಗಸೆ
Papaver rhoeas - Köhler–s Medizinal-Pflanzen-101.jpg
ವೈಜ್ಞಾನಿಕ ವರ್ಗೀಕರಣ
Kingdom: plantae
Division: ಹೂ ಬಿಡುವ ಸಸ್ಯ
Class: ಮ್ಯಾಗ್ನೋಲಿಯೋಪ್ಸಿಡ
Order: ಪಾಪವೆರಲ್ಸ್
Family: ಪಾಪವೆರೆಸಿಯೆ(Papaveraceae)
Genus: ಪಾಪವೆರ್
Species: P. rhoeas
ದ್ವಿಪದ ಹೆಸರು
ಪಾಪವೆರ್ ರೊಯೆಸ್
L.
ಗಸಗಸೆ ಹೂವು

ಗಸಗಸೆಪ್ರಾಚೀನ ಕಾಲದಿಂದಲೂ ಬೆಳೆಸಲ್ಪಡುತ್ತಿರುವ ಒಂದು ಸಸ್ಯ. ಕಳೆಯ ಪಟ್ಟದಿಂದ ಬೆಳೆಯ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಬಹಳ ಹಿಂದಿನ ಕಾಲದಿಂದ ಮೆಡಿಟರೇನಿಯನ್ ಪ್ರದೇಶಗಳು, ಮಧ್ಯ ಪ್ರಾಚ್ಯ, ಭಾರತ, ರಷ್ಯಾ ದೇಶಗಳಲ್ಲಿ ಇದರ ವ್ಯವಸಾಯ ಇದೆ. ಪಶ್ಚಿಮ ಯುರೋಪ್ ದೇಶಗಳಲ್ಲಿ ಇದನ್ನು ಗಸಗಸೆ ಬೀಜಗಳಿಗಾಗಿಯೂ ಪೂರ್ವದೇಶಗಳಲ್ಲಿ ಅದರಲ್ಲೂ ಭಾರತ, ಇರಾನ್, ಟರ್ಕಿಗಳಲ್ಲಿ ಆಫೀಮಿಗಾಗಿಯೂ ಹೆಚ್ಚಾಗಿ ಬೆಳೆಸಲಾಗುತ್ತಿದೆ. ಭಾರತದಲ್ಲಿ ಇದನ್ನು ಬೀಜ ಮತ್ತು ಅಫೀಮಿಗಾಗಿ ಸುಮಾರು 16ನೆಯ ಶತಮಾನ ದಿಂದ ಬೆಳೆಸುತ್ತಿದ್ದಾರೆ. ಅಫೀಮಿನ ಬೇಸಾಯ, ಮಾರಾಟ, ಬಳಕೆಗಳ ಬಗ್ಗೆ ಕಟ್ಟುನಿಟ್ಟಾದ ನಿಬಂಧನೆಗಳಿವೆ. ಸರ್ಕಾರದ ಅನುಮತಿ ಇಲ್ಲದೆ ಗಸಗಸೆ ಗಿಡವನ್ನು ಬೆಳೆಸಲಾಗದು. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಬಿಹಾರಗಳಲ್ಲಿ ಹೆಚ್ಚಾಗಿಯೂ ಕಾಶ್ಮೀರದಲ್ಲಿ ಅಲ್ಪಸ್ವಲ್ಪವಾಗಿಯೂ ಇದನ್ನು ಬೆಳೆಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಇದರ ವ್ಯವಸಾಯವನ್ನು ನಿಷೇಧಿಸಲಾಗಿದೆ. ಗಸಗಸೆ ಗಿಡದ ಬೇಸಾಯ, ಇದರಿಂದ ಅಫೀಮನ್ನು ತೆಗೆಯುವ ವಿಧಾನ ಮತ್ತು ಅಫೀಮಿನ ಬಳಕೆಗಳನ್ನು ಕುರಿತ ವಿವರಗಳಿಗೆ ಅಫೀಮು.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಪಾಪವೆರೆಸಿಯೆ ( Papaveraceae)ಕುಟುಂಬಕ್ಕೆ ಸೇರಿರುವ ಈ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಪಾಪವೆರ್ ರೊಯೆಸ್( Papaver rhoeas)ಎಂದಾಗಿದೆ.ಪರ್ಯಾಯ ನಾಮ ಅಫೀಮುಗಿಡ. ಪಪೇವರ್ ಸಾಮ್ನಿಫೆರಂ ವೈಜ್ಞಾನಿಕ ನಾಮ. ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರು ಓಪಿಯಂ ಪಾಪಿ ಅಥವಾ ವೈಟ್ ಪಾಪಿ ಹಿಂದಿಯಲ್ಲಿ 'ಕಸ್‌ಕಸ್',ತೆಲುಗಿನಲ್ಲಿ 'ಗಸಗಸಾಲು'ಎಂದು ಹೆಸರು.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

  • ದೊಡ್ಡ ಹೂವಿನ ಸಣ್ಣ ಗಿಡ. ಕಡು ಕೆಂಪು ಬಣ್ಣದ ದೊಡ್ಡ ಹೂವಿನ ನಡುವೆ ಕಪ್ಪು ಬಣ್ಣದ ಕೇಸರವಿರುತ್ತದೆ.ಗಸಗಸೆ ಗಿಡ ವಾರ್ಷಿಕ ಬಗೆಯದು. ಇದು ಸುಮಾರು 61ಸೆಂಮೀನಿಂದ 1ಮೀ-22ಸೆ.ಮೀ ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ನೀಳವಾಗಿ ಬೆಳೆಯುವುದು. ಇದರ ಮೇಲ್ಭಾಗದಲ್ಲಿ ವಿರಳವಾಗಿ ಕೊಂಬೆಗಳು ಹರಡಿರುತ್ತವೆ. ಎಲೆಗಳ ಆಕಾರ ದೀರ್ಘ ಅಂಡದಂತೆ. ಅಂಚು ಸೀಳುಗೊಂಡಿದೆ. ಹೂಗಳು ಗಾತ್ರದಲ್ಲಿ ದೊಡ್ಡವು. ಇವುಗಳ ಭಾರಕ್ಕೆ ಕೊಂಬೆಗಳು ಜಗ್ಗಿ ತೂಗಾಡುತ್ತಿರುತ್ತವೆ.
  • ಹೂಗಳ ಬಣ್ಣ ಕೆಂಪು, ಬಿಳಿ, ನೇರಳೆ, ನೀಲಿ-ಹೀಗೆ ವೈವಿಧ್ಯಮಯ. ಅಂಡಾಶಯ ಗುಂಡಗೆ ದಪ್ಪವಾಗಿದೆ. ಶಲಾಕೆ ಇಲ್ಲ. ಅಂಡಾಶಯದ ಮೇಲ್ಭಾಗದಲ್ಲಿ ಛಾವಣಿಯಂಥ ಶಲಾಕಾಗ್ರ ಉಂಟು. ಕಾಯಿಯ ಒಳಗೆ ಅಸಂಖ್ಯಾತ ಬೀಜಗಳಿವೆ. ಇವೇ ಗಸಗಸೆ. ಬೀಜಗಳ ಬಣ್ಣ ಕಪ್ಪು ಇಲ್ಲವೆ ಬಿಳಿ. ಆಕಾರ ಮೂತ್ರಪಿಂಡದಂತೆ. ಕಾಯಿಗಳು ಬಲಿತ ಮೇಲೆ ತುದಿಯಲ್ಲಿ ಸಣ್ಣ ಸಣ್ಣ ರಂಧ್ರಗಳು ಉಂಟಾಗಿ ಅವುಗಳ ಮೂಲಕ ಬೀಜಗಳು ಹೊರಬರುತ್ತವೆ. ಗಾಳಿಗೆ ಕಾಯಿ ಅಲುಗಾಡಿದಾಗ ಬೀಜಗಳು ಸ್ವಲ್ಪಸ್ವಲ್ಪವಾಗಿ ಹೊರಬಂದು ಚದರುತ್ತವೆ.

ಪೌಷ್ಟಿಕಾಂಶಗಳು[ಬದಲಾಯಿಸಿ]

ಬೀಜಗಳಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಬೀಜಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ಶೇ.4.3-ಶೇ.5.2 ತೇವಾಂಶ, ಶೇ.22.3- ಶೇ.24.4 ಪ್ರೋಟೀನು, ಶೇ.1.03- ಶೇ.1.45 ಸುಣ್ಣ, ಶೇ.0.79-ಶೇ.0.89 ರಂಜಕ, ಶೇ.8.5-ಶೇ.11.1 ಕಬ್ಬಿಣ ಮತ್ತು ಥಯಾಮಿನ್, ರೈಬೊಫ್ಲೇವಿನ್, ನಿಕೊಟಿನಿಕ್ ಆಮ್ಲ ಮುಂತಾದ ವಿಟಮಿನ್ನುಗಳೂ ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸತು ಮುಂತಾದ ಖನಿಜಾಂಶಗಳೂ ಲಘು ಪರಿಮಾಣಗಳಲ್ಲಿರುತ್ತವೆ. ಅಲ್ಲದೆ ಲೆಸಿತಿನ್, ಆಕ್ಸ್ಯಾಲಿಕ್ ಆಮ್ಲ, ಪೆಂಟಾಸಾನ್ಸ್ ಎಂಬ ವಸ್ತುಗಳೂ ಡಯಾಸ್ಟೇಸ್, ಎಮಲ್ಸಿನ್, ಲೈಪೇಸ್, ನ್ಯೂಕ್ಲಿಯೇಸ್ ಮುಂತಾದ ಕಿಣ್ವಗಳೂ ಇವೆ. ಮತ್ತುಬರಿಸುವ ಅಂಶವಾದ ನಾರ್ಕೊಟಿನ್ ಅತ್ಯಲ್ಪ ಪರಿಮಾಣದಲ್ಲಿದೆ.

ಉಪಯೋಗಗಳು[ಬದಲಾಯಿಸಿ]

  • ಗಸಗಸೆ ಗಿಡ, ಹೂವು ತರಕಾರಿಯಾಗಿ ಉಪಯೋಗವಾಗುತ್ತದೆ. ಬೀಜ ಪಾಯಸ,ಕೀರು ಇತ್ಯಾದಿ ಮಾಡಲು ಉಪಯೋಗಿಸುತ್ತಾರೆ. ಇದರ ಹೂವನ್ನು ಮಾದಕ ಪಾನೀಯ ತಯಾರಿಕೆಯಲ್ಲಿ ಬಳಸುತ್ತಾರೆ.ಇದರ ಹೂವನ್ನು ಯುದ್ಧದಲ್ಲಿ ಮಡಿದವರ ಜ್ಞಾಪಕಾರ್ಥವಾಗಿ ಧರಿಸುವ ಸಂಪ್ರದಾಯ ಹಲವಾರು ದೇಶಗಳಲ್ಲಿದೆ.
  • ಅನೇಕ ಬಗೆಯ ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಬೀಜಗಳನ್ನು ಬಳಸುತ್ತಾರೆ. ಬೀಜಗಳಿಗೆ ಔಷಧೀಯ ಗುಣಗಳೂ ಇವೆ. ಬೀಜಕ್ಕೆ ಪುಷ್ಟಿದಾಯಕ ಮತ್ತು ತಂಪುಕಾರಕವೆಂದು ಹೆಸರುಂಟು. ದೇಹಭಾಗಗಳನ್ನು ಮೃದುಗೊಳಿಸುವ ಲೇಪವಾಗಿಯೂ ಮಲಬದ್ಧತೆಯ ನಿವಾರಕವಾಗಿಯೂ ಇದನ್ನು ಬಳಸುವುದಿದೆ.

ಆಧಾರ /ಬಾಹ್ಯ ಸಂಪರ್ಕಗಳು[ಬದಲಾಯಿಸಿ]

೧.http://sliceoftheday.wordpress.com/2008/06/17/common-poppy-papaver-rhoeas/ ೨. Malta Wild Plants - Papaver rhoeas

ಛಾಯಾಂಕನ[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಸಗಸೆ&oldid=534068" ಇಂದ ಪಡೆಯಲ್ಪಟ್ಟಿದೆ