ಕೆ.ಆರ್.ಎಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯವೇ ಕನ್ನಂಬಾಡಿ ಕಟ್ಟೆ ಅಥವಾ ಕೃಷ್ಣರಾಜಸಾಗರ. ಕೆ.ಆರ್.ಎಸ್. ಎಂದೇ ಖ್ಯಾತವಾದ ಈ ಜಲಾಶಯ ಬುದ್ಧಿಶಕ್ತಿಗೆ ಹೆಸರಾದ ಭಾರತರತ್ನ ವಿಶ್ವೇಶ್ವರಯ್ಯನವರ ಕೊಡುಗೆಯಲ್ಲಿ ಪ್ರಮುಖವಾದ್ದು. ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ ಕೆ.ಜಿ.ಎಫ್. ಇಷ್ಟು ವರ್ಷಗಳ ಕಾಲ ಚಿನ್ನವನ್ನು ತೆಗೆಯುತ್ತಲೂ ಇರಲಿಲ್ಲ, ಶಿವನ ಸಮುದ್ರದಲ್ಲಿ ನಿರಂತರ ವಿದ್ಯುತ್ ಉತ್ಪಾದನೆಯೂ ಆಗುತ್ತಿರಲಿಲ್ಲ ಮಿಗಿಲಾಗಿ ಮಂಡ್ಯ ಮತ್ತು ಮಳವಳ್ಳಿಯ ಬರಡು ಭೂಮಿ ಇಂದು ಕಬ್ಬಿನ ಬೆಳೆ ತೆಗೆವ ಬಂಗಾರದ ನಾಡೂ ಆಗುತ್ತಿರಲಿಲ್ಲ. ಕೋಲಾರ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸುತ್ತಿದ್ದ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಬೇಸಿಗೆಯಲ್ಲಿ ನೀರಿನ ಕೊರತೆ ಬಾರದಂತೆ ತಾತ್ಕಾಲಿಕವಾಗಿ ಮೇಲಿನ ಅಣೆಕಟ್ಟೆಗಳಲ್ಲಿ ನೀರನ್ನು ಸಂಗ್ರಹಿಸಿಡಲು ೫೦ ಸಾವಿರಕ್ಕೂ ಹೆಚ್ಚು ಹಣ ವ್ಯಯವಾಗುತ್ತಿತ್ತು. ಆಗ ಇದಕ್ಕೆ ಶಾಶ್ವತ ಪರಿಹಾರವಾಗಿ ೮೯ ಲಕ್ಷ ರೂಪಾಯಿ ವೆಚ್ಚದ ಯೋಜನೆಯನ್ನು ಮೈಸೂರಿನ ಮುಖ್ಯ ಎಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರು ನಿರ್ಮಿಸಿದರು. ಮದ್ರಾಸು ಸರ್ಕಾರ ತಂಜಾವೂರಿನ ಭೂಮಿಗೆ ನೀರು ಸಾಕಾಗದೆಂದು ತಗಾದೆ ತೆಗೆದಾಗ ಕೃಷ್ಣರಾಜ ಸಾಗರವನ್ನು ೧೩೦ ಅಡಿ ಎತ್ತರ ನಿರ್ಮಿಸಿ, ೧೨೪ ಅಡಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ೧೯೨೪ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಗ್ರಾನೈಟ್‌ಕಲ್ಲು ಮತ್ತು ಸುರ್ಕಿ ಗಾರೆಯಿಂದ ಈ ಜಲಾಶಯ ನಿರ್ಮಿಸಲಾಯಿತು. ನೆರೆಬಂದಾಗ ಜಲಾಶಯಕ್ಕೆ ಅಪಾಯವಾಗದಂತೆ ತೂಬುಗಳನ್ನು ನಿರ್ಮಿಸಲಾಯಿತು. ಜಲಾಶಯದ ಕ್ರೆಸ್ಟ್ ಗೇಟ್‌ಗಳನ್ನು ತೆರೆದಾಗ ಬಿಳಿಯ ಹಾಲು ನೊರೆಯಂತೆ ಭೋರ್ಗರೆಯುತ್ತಾ ಹೊಳೆಗೆ ಹರಿಯುವ ನೀರಿನ ರಮಣೀಯತೆಯನ್ನು ನೋಡುವುದೇ ಒಂದು ಸೊಗಸು. ವಿಶ್ವೇಶ್ವರಯ್ಯನವರ ಈ ಮಹತ್ಕಾರ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು ಸರ್ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾದಾಗ. ಅವರು ಕಾಶ್ಮೀರದ ಶಾಲಿಮಾನ್ ತೋಟದ ಮಾದರಿಯಲ್ಲೇ ಎರಡೂ ದಡದಲ್ಲಿ ಬೃಂದಾವನ ಉದ್ಯಾನ ನಿರ್ಮಿಸಿದರು. ಇಲ್ಲಿ ಜಲಧಾರೆಗಳನ್ನು, ಚಿಲುಮೆಗಳನ್ನು ನಿರ್ಮಿಸಲಾಯಿತು. ಸಂಗೀತ ಕಾರಂಜಿ ಇಲ್ಲಿನ ಮತ್ತೊಂದು ಆಕರ್ಷಣೆ. ಕತ್ತಲಾವರಿಸುತ್ತಿದ್ದಂತೆ ಬೃಂದಾವನದಲ್ಲಿ ಬೆಳಗುವ ದೀಪಗಳನ್ನು ಮೇಲ್ಭಾಗದಲ್ಲಿ ನಿಂತು ಆನಂದಿಸುವುದೇ ಒಂದು ಸೊಗಸು.

ಮತ್ತೊಂದು ಮಾಹಿತಿ: ಕೆ.ಆರ್.ಎಸ್. ಜಲಾಶಯ ನಿರ್ಮಾಣಕ್ಕೆ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಆ ಊರಲ್ಲಿ ೬೦೦ ವರ್ಷಗಳಷ್ಟು ಹಳೆಯದಾದ ಚೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವೂ ಇತ್ತು. ಈಗ ಕಾವೇರಿ ಹಿನ್ನೀರಿನಲ್ಲಿ ಇದು ಮುಳುಗಿ ಹೋಗಿದೆ. ಸುಂದರ ಶಿಲ್ಪಕಲಾ ಕೆತ್ತನೆಯ ದೊಡ್ಡ ದೊಡ್ಡ ಕಂಬಗಳು, ಗೋಪುರಗಳುಳ್ಳ ಈ ಶಿಲಾ ದೇಗುಲ ೨೦ ವರ್ಷಗಳ ಬಳಿಕ ೨೦೦೦ನೇ ಇಸವಿ ಮೇ ೨೪ರಂದು ಸಂಪೂರ್ಣ ಗೋಚರಿಸಿತ್ತು. ಮತ್ತೆ ಎರಡು ವರ್ಷದ ಬಳಿಕ ಮತ್ತೆ ಭಾಗಶಃ ಗೋಚರಿಸಿತ್ತು. ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆ ಇದೆ. ಹಿಂದೆ ಇಲ್ಲಿ ಊರಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಬಿಡಾರಗಳು, ದನದ ಕೊಟ್ಟಿಗೆಗಳು, ಸುಂದರ ಪ್ರಾಕಾರ ಇದೆ. ತ್ರಿಕೂಟ, ಸುಖನಾಸಿ, ಮಂಟಪ, ಮಹಾಮಂಟಪಗಳಿಂದ ಕೂಡಿದ ಈ ದೇಗುಲ ೧೮ ಕಂಬಗಳಿಂದ ಕೂಡಿದ್ದು ಸುಭದ್ರವಾಗಿತ್ತು. ಈಗ ಇಡೀ ದೇಗುಲವನ್ನು ಸ್ಥಳಾಂತರ ಮಾಡಲಾಗದೆ.