ವಿಷಯಕ್ಕೆ ಹೋಗು

ಎಡ್ವಿನ್ ಎಮ್.ಮೆಕ್‌ಮಿಲನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಡ್ವಿನ್ ಮ್ಯಾಕ್‍ಮಿಲನ್

ಎಡ್ವಿನ್ ಎಮ್. ಮೆಕ್‌ಮಿಲನ್ (ಸೆಪ್ಟೆಂಬರ್ 18, 1907 – ಸೆಪ್ಟೆಂಬರ್ 7, 1991) ಅಮೆರಿಕದ ಒಬ್ಬ ವಿಜ್ಞಾನಿ. ಯುರೇನಿಯಮ್ ಅತೀತ ಪರಮಾಣು ಸಂಖ್ಯೆ ಇದ್ದು ಆವರ್ತಕೋಷ್ಟಕದಲ್ಲಿ ಯುರೇನಿಯಮ್ ಆದ ಮೇಲೆ ಕಾಣಿಸಿಕೊಳ್ಳುವ ಧಾತುಗಳ ಸಂಶೋಧನೆ ಮತ್ತು ಅಭ್ಯಾಸಕ್ಕೋಸ್ಕರ 1951ರಲ್ಲಿ ಗ್ಲೆನ್ ಟಿ. ಸೀಬೋರ್ಗ್ ಜೊತೆ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಕ ಪಡೆದ ವಿಜ್ಞಾನಿ.[] ಇವರು ೧೯೪೦ ರಲ್ಲಿ ಪಿ.ಎಚ್.ಅಬೇಲ್ಸನ್ ಜತೆಗೂಡಿ ಯುರೇನಿಯಮ್ -೨೩೯ ನ್ನು ವಿದಳನ ಮಾಡಿ ನೆಪ್ಚೂನಿಯಮ್ ಮೂಲಧಾತುವನ್ನು ಕಂಡುಹಿಡಿದರು. ನೆಪ್ಚೂನಿಯಮ್ (ಪರಮಾಣು ಸಂಖ್ಯೆ 93) ಮತ್ತು ಪ್ಲೂಟೋನಿಯಮ್ (94) ಧಾತುಗಳ ಸಂಶೋಧನೆಯಲ್ಲಿ ಮುಖ್ಯವಾದ ಪಾತ್ರವಹಿಸಿದ ಭೌತವಿಜ್ಞಾನಿ.

ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತದ ರೆಡೊಂಡೊ ಕರಾವಳಿಯಲ್ಲಿ 1907 ಸೆಪ್ಟೆಂಬರ್ 18ರಂದು ಜನನ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಬಿ.ಎಸ್. ಮತ್ತು ಎಮ್.ಎಸ್. ಪದವಿಗಳನ್ನು 1928 ಮತ್ತು 1929ರಲ್ಲಿಯೂ[] ಪ್ರಿನ್‌ಸ್ಟನ್ ವಿಶ್ವವಿದ್ಯಾಲಯದ ಪಿಎಚ್.ಡಿ. ಪದವಿಯನ್ನು 1933ರಲ್ಲಿಯೂ ಪಡೆದ.

ನೆಪ್ಚೂನಿಯಮ್‍ನ ಸಂಶೋಧನೆ: ಯುರೇನಿಯಮ್ ವಿದಳನ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ನಡೆಸಿದ ಪ್ರಯೋಗಗಳು ಮೊದಲನೆಯ ಯುರೇನಿಯಮ್ ಆಚೆಯ ಧಾತುವಿನ ಸಂಶೋಧನೆಗೆ ಕಾರಣವಾಯಿತು. ಮ್ಯಾಕ್‌ಮಿಲನ್ ಮತ್ತಿತರರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ವಿದಳನಕ್ರಿಯೆ ಕುರಿತ ಪ್ರಯೋಗಗಳನ್ನು  ಮಾಡಿದಾಗ ಉತ್ಪನ್ನವಾದ ಪ್ರಮುಖ ಫಲಿತಗಳ ಪರಸ್ಪರ ಪಥಗಳನ್ನು ಅಳೆದರು. ಕ್ರಿಯೆಯ ಒಂದು ಫಲಿತದ ಅರ್ಧಾಯು 2.3 ದಿವಸಗಳಾಗಿದ್ದು ಅದು ಹೆಚ್ಚಾಗಿ ಹಿಮ್ಮರಳದೇ ವಿದಳಿಸುತ್ತಿರುವ ಯುರೇನಿಯಮ್ ಪರಮಾಣು ನ್ಯೂಟ್ರಾನನ್ನು ಸೆರೆಹಿಡಿದುದರ (ಕ್ಯಾಪ್ಚರ್) ಪರಿಣಾಮವಾಗಿರಬಹುದೆಂದು ಅನುಮಾನಿಸಿದರು. ಮ್ಯಾಕ್‌ಮಿಲನ್ ಮತ್ತು ಎಬೆಲ್ಸನ್ 1940ರಲ್ಲಿ ಈ ಉತ್ಪನ್ನ 93 ಪರಮಾಣು ಸಂಖ್ಯೆಯುಳ್ಳ ಧಾತುವಾಗಿರಬಹುದೆಂದೂ 289U ಬೀಟಕ್ಷಯವೇ ಇದರ ಕಾರಣವೆಂದೂ ತೀರ್ಮಾನಿಸಿದರು.[] ಪರಮಾಣು ಸಂಖ್ಯೆ 93 ಇರುವ ಈ ಧಾತುವಿಗೆ ನೆಪ್ಚೂನಿಯಮ್ (Np) ಎಂದು ಹೆಸರಿಟ್ಟರು (ಯುರೇನಸ್ ಆಚೆಯ ಗ್ರಹ ನೆಪ್ಚೂನ್).[]

ಪ್ಲೂಟೋನಿಯಮ್‍ನ ಸಂಶೋಧನೆ: ಮ್ಯಾಕ್‌ಮಿಲನ್ ಮತ್ತು ಎಬೆಲ್ಸನ್ ಅವರ ಸಂಶೋಧನೆಯಿಂದ ನೆಪ್ಚೂನಿಯಮ್ ಸಹ ಬೀಟಕ್ಷಯಕ್ಕೆ ತುತ್ತಾಗುವುದು ಖಚಿತವಾಯಿತು. ಹೀಗೆ Np ಕ್ಷಯಿಸಿದಾಗ ಪರಮಾಣು ಸಂಖ್ಯೆ 94 ಇರುವ ಮುಂದಿನ ಧಾತು ದೊರಕುವ ಸಂಭವ ಹೆಚ್ಚಾಯಿತು. 1940ರಲ್ಲಿ ಸೀಬರ್ಗ್, ಮ್ಯಾಕ್‌ಮಿಲನ್, ಕೆನಡಿ ಮತ್ತು ವಾಲ್ ಅವರು ಯುರೇನಿಯಮ್ ಧಾತುವನ್ನು ಡ್ಯೂಟರಾನುಗಳಿಂದ ತಾಡಿಸಿದಾಗ ಹೊಸ ನೆಪ್ಚೂನಿಯಮ್ ಸಮಸ್ಥಾನಿ ಉಂಟಾಗಿ ಬೀಟ ಕ್ಷಯದಿಂದ ಪರಮಾಣು 94 ಉಳ್ಳ ಪ್ಲೂಟೋನಿಯಮ್ ಫಲಿಸಿತು.

ಸಿಂಕ್ರೊಟ್ರಾನ್‍ನ ಉಪಜ್ಞೆ: ಮ್ಯಾಕ್‌ಮಿಲನ್ 1958ರಲ್ಲಿ ಕ್ಯಾಲಿಫೋರ್ನಿಯದ ಬರ್ಕ್ಲಿಯಲ್ಲಿ ವಿಕಿರಣ ಪ್ರಯೋಗಶಾಲೆಯ ನಿರ್ದೇಶಕರಾಗಿ ನೇಮಕಗೊಂಡರು. ಎರಡನೆಯ ಮಹಾಯುದ್ಧದ ವೇಳೆ ರೇಡಾರ್ ಸಂಶೋಧನೆಯಲ್ಲಿ ತೊಡಗಿದ್ದರು.[] ಲಾಸ್ ಅಲಮೋಸ್ ಪ್ರಯೋಗಶಾಲೆಯ ಸ್ಥಾಪನೆಯಲ್ಲಿ ಮುಖ್ಯಪಾತ್ರವಹಿಸಿದರು. ರಷ್ಯದ ವಿಜ್ಞಾನಿ ವ್ಲಾಡಿಮಿರ್ ವೆಕ್ಸ್‌ಲರ್ ಮತ್ತು ಮ್ಯಾಕ್‌ಮಿಲನ್ ಇಬ್ಬರೂ ಪ್ರತ್ಯೇಕವಾಗಿ ಸಿಂಕ್ರೊಟ್ರಾನ್ ಉಪಕರಣವನ್ನು ಉಪಜ್ಞಿಸಿದರು.[][] ಇದರಿಂದಾಗಿ ಎಲೆಕ್ಟ್ರಾನ್ ಮತ್ತು ಇತರ ಮೂಲಕಣಗಳು ಅತ್ಯಧಿಕ ವೇಗದಿಂದ ಪರಮಾಣು ಕ್ರಿಯೆಯಲ್ಲಿ ಭಾಗವಹಿಸುವಂತಾಯಿತು. ಹೀಗೆ ಮೂಲಕಣಗಳ ಅಭ್ಯಾಸಕ್ಕೆ ಸಿಂಕ್ರೊಟ್ರಾನ್ ಒಂದು ಕೊಡುಗೆಯಾಯಿತು.

ಅಮೆರಿಕದ ವೈಜ್ಞಾನಿಕ ಸಲಹಾಸಮಿತಿಯ ಸದಸ್ಯರಾಗಿದ್ದ ಮ್ಯಾಕ್‌ಮಿಲನ್ 1968ರಿಂದ 1971 ರ ತನಕ ರಾಷ್ಟ್ರೀಯ ವೈಜ್ಞಾನಿಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.[] 1963ರಲ್ಲಿ ಇವರಿಗೆ ಶಾಂತಿಗಾಗಿ ಪರಮಾಣು ಪಾರಿತೋಷಿಕವನ್ನು ಪ್ರದಾನಿಸಲಾಯಿತು.[] ಅಮೆರಿಕದ ಭೌತವಿಜ್ಞಾನ ಸಂಘದ ಫೆಲೋ ಆಗಿ ಚುನಾಯಿತರಾದರು. ಕ್ಯಾಲಿಫೋರ್ನಿಯದ ಬರ್ಕ್ಲಿಯ ಲಾರೆನ್ಸ್ ಪ್ರಯೋಗ ಶಾಲೆಯಲ್ಲಿ ಸಂಶೋಧನ ನಿರತರಾಗಿದ್ದರು (1977).

ಉಲ್ಲೇಖಗಳು

[ಬದಲಾಯಿಸಿ]
  1. Nobel Foundation. "The Nobel Prize in Chemistry 1951". Retrieved July 16, 2015.
  2. Nobel Foundation. "Edwin M. McMillan – Biographical". Retrieved July 16, 2015.
  3. Jackson & Panofsky 1996, pp. 221–222.
  4. Seaborg 1993, p. 289.
  5. Lofgren, Abelson & Helmolz 1992, pp. 118–119.
  6. Jackson & Panofsky 1996, pp. 226–227.
  7. McMillan, Edwin M. (September 1, 1945). "The Synchrotron—A Proposed High Energy Particle Accelerator". Physical Review. 68 (5–6): 143. Bibcode:1945PhRv...68..143M. doi:10.1103/PhysRev.68.143.
  8. "Edwin M. McMillan". www.nasonline.org. Retrieved 2023-02-06.
  9. Lofgren, Edward J. "Edwin McMillan, a biographical sketch" (PDF). Lawrence Berkeley Laboratory. Archived from the original (PDF) on July 23, 2015. Retrieved July 18, 2015.


ಬಾಹ್ಯಸಂಪರ್ಕ

[ಬದಲಾಯಿಸಿ]