ವಿಷಯಕ್ಕೆ ಹೋಗು

ಎಂ. ಬಿ. ರಾಮಚಂದ್ರರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ. ಬಿ. ರಾಮಚಂದ್ರರಾವ್ (1906 - 1992) ಭಾರತದ ಒಬ್ಬ ಪ್ರಸಿದ್ಧ ಭೂಭೌತ ವಿಜ್ಞಾನಿ. ಪೂರ್ಣ ಹೆಸರು ಮಂದಗೆರೆ ಭಾರದ್ವಾಜ್ ರಾಮಚಂದ್ರರಾವ್.

1906 ಆಗಸ್ಟ್ 5 ರಂದು ಮಂಡ್ಯ ಜಿಲ್ಲೆಯ ಮಂದಗೆರೆಯಲ್ಲಿ ಜನನ. ಇವರ ತಂದೆ ಬೈರಪ್ಪ ಭಾರದ್ವಾಜ್, ತಾಯಿ ವೆಂಕಮ್ಮ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಭೂವಿಜ್ಞಾನ ಶಾಖೆಯ ಪ್ರತಿಭಾವಂತ ವಿದ್ಯಾರ್ಥಿ ಎನಿಸಿ 1928 ರಲ್ಲಿ ಬಿ. ಎಸ್‌ಸಿ. ಪದವೀಧರರಾದರರು. ಆ ವರ್ಷವೇ ಇವರನ್ನು ಅಂದಿನ ಮೈಸೂರು ಸರ್ಕಾರ ಭೂಸರ್ವೇಕ್ಷಣಾ ಇಲಾಖೆಯಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ನೇಮಕಮಾಡಿತು. ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಸರ್ವೇಕ್ಷಣ ನಡೆಸಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗಳಿಸಿದರು. ಇಲ್ಲಿನ ಶಿಲಾಸಮುದಾಯದಲ್ಲಿ ಹುದುಗಿದ್ದ ಖನಿಜಗಳ ಅನ್ವೇಷಣೆ, ಗಣಿಗಾರಿಕೆ ಹಾಗೂ ಕೆಲವು ಎಂಜಿನಿಯರಿಂಗ್ ಯೋಜನೆಗಳಲ್ಲಿ ಶ್ರಮಿಸಿದರು. ಇದರ ಜೊತೆಗೆ 1933 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಎಂ. ಎಸ್‌ಸಿ ಪದವಿಯನ್ನೂ ಗಳಿಸಿದರು.

ಆ ವೇಳೆಗೆ ಖನಿಜಾನ್ವೇಷಣೆಯಲ್ಲಿ ಭೂಭೌತ ಸರ್ವೇಕ್ಷಣೆ ಹೆಚ್ಚು ಬಳಕೆಗೆ ಬಂದಿತ್ತು. 1937 - 38 ರಲ್ಲಿ ರಾಮಚಂದ್ರರಾಯರು ಈ ಹೊಸ ವಿಧಾನದಲ್ಲಿ ಹೆಚ್ಚಿನ ಪರಿಶ್ರಮ ಪಡೆದು ಮೈಸೂರಿನ ಭೂಸರ್ವೇಕ್ಷಣಾ ಇಲಾಖೆಯಲ್ಲೂ ಈ ವಿಧಾನವನ್ನು ಬಳಕೆಗೆ ತಂದರು. ಚಿತ್ರದುರ್ಗ ಬಳಿ ಇರುವ ಇಂಗಳದಾಳದ ತಾಮ್ರ ಅದುರಿನ ನಿಕ್ಷೇಪಗಳ ಮತ್ತು ಕೋಲಾರ ಜಿಲ್ಲೆಯ ಗಣಾಚಾರಪುರದ ಗ್ರಾಫೈಟ್ ಅದುರಿನ ನಿಕ್ಷೇಪಗಳ ವ್ಯಾಪ್ತಿಯನ್ನು ಅರಿತುಕೊಳ್ಳಲು ಇವರು ಕೈಕೊಂಡ ಭೂಭೌತ ಸರ್ವೇಕ್ಷಣೆ ಬಲು ಸಹಾಯಕವೆನಿಸಿತ್ತಲ್ಲದೆ ಆ ಪ್ರದೇಶಗಳಲ್ಲಿನ ಗಣಿಗಾರಿಕೆಗೆ ಸಾಕಷ್ಟು ಅನುಕೂಲವೆನಿಸಿತು. ಅಲ್ಲದೆ ನಾಡಿನ ಹಲವಾರು ಕಡೆ ಈ ವಿಧಾನಗಳ ನೆರವಿನಿಂದ ಅಂತರ್ಜಲವನ್ನು ಪತ್ತೆಹಚ್ಚಿ ನೀರಿಗಿದ್ದ ಬವಣೆಯನ್ನು ನಿವಾರಿಸಲು ಸಹಾಯಕರಾದರು. ಇವರ ಸಾಧನೆಯ ಕೀರ್ತಿ ನೆರೆನಾಡಿಗೂ ಹಬ್ಬಿ 1944 ರಲ್ಲಿ ಸ್ವಲ್ಪಕಾಲ ಇವರ ಸೇವೆಯನ್ನು ಅಂದಿನ ಮದರಾಸು ಸರ್ಕಾರಕ್ಕೆ ಎರವಲು ನೀಡಲಾಯಿತು. ಅಲ್ಲಿಯ ಜನೋಪಯೋಗಿ ಇಲಾಖೆ ಕೈಗೊಂಡಿದ್ದ ಹಲವಾರು ಯೋಜನೆಗಳಲ್ಲಿ ಇವರ ಉತ್ತಮ ಸಲಹೆ ಲಭ್ಯವಾಗಿ, ಕೆಲವು ನದೀಪಾತ್ರಗಳ ತಳದಲ್ಲಿ 30 - 60 ಮೀಟರ್ ಆಳದಲ್ಲಿ ಹುದುಗಿದ್ದ ಶಿಲಾರಚನಾ ವಿನ್ಯಾಸವನ್ನು ಅರಿಯಲು ಸಾಧ್ಯವಾಯಿತು.

ಇವರ ಪ್ರತಿಭೆಯನ್ನು ಗುರುತಿಸಿದ ಮೈಸೂರು, ಭೂಭೌತ ಸರ್ವೇಕ್ಷಣಾ ವಿಧಾನಗಳಲ್ಲಿ ಇನ್ನು ಹೆಚ್ಚಿನ ಪರಿಶ್ರಮ ಪಡೆಯಲೆಂದು ಉನ್ನತ ತರಬೇತಿಗಾಗಿ ಇವರನ್ನು ಒಂದು ವರ್ಷಕಾಲ ಇಂಗ್ಲೆಂಡ್, ಅಮೆರಿಕ ಮತ್ತು ಕೆನಡಗಳಿಗೆ ಕಳುಹಿಸಿತ್ತು. ಅಲ್ಲಿಂದ ಮರಳಿದ ಬಳಿಕ 1949 ರಲ್ಲಿ ಭಾರತ ಸರ್ಕಾರದ ಅಪೇಕ್ಷೆಯಂತೆ ಇವರ ಸೇವೆಯನ್ನು ಭಾರತ ಭೂಸರ್ವೇಕ್ಷಣಾ ಇಲಾಖೆಗೆ ವಹಿಸಲಾಯಿತು.[] ಇವರು ಆ ಸಂಸ್ಥೆಯ ಪ್ರಧಾನ ಭೂಭೌತ ವಿಜ್ಞಾನಿಯಾದರು. ಆ ಇಲಾಖೆಯ ಭೂಭೌತ ಸರ್ವೇಕ್ಷಣಾ ಶಾಖೆಯನ್ನು ಆಧುನಿಕ ರೀತಿಯಲ್ಲಿ ವ್ಯವಸ್ಥೆಗೊಳಿಸಿ ಅದರ ಕಾರ್ಯಚಟುವಟಿಕೆಯನ್ನು ಬಹುವಾಗಿ ವಿಸ್ತರಿಸಿದರು. ರಾಜಸ್ಥಾನದ ಖೇತ್ರಿ, ಬಿಹಾರಿನ ಸಿಂಘಭೂಮ್, ಕರ್ನಾಟಕದ ಚಿತ್ರದುರ್ಗ ಹೀಗೆ ಹಲವಾರು ಪ್ರದೇಶಗಳ ತಾಮ್ರ, ಸೀಸ, ಮ್ಯಾಂಗನೀಸ್ ಮುಂತಾದ ಅದುರು ನಿಕ್ಷೇಪಗಳ ವ್ಯವಸ್ಥಿತ ಅನ್ವೇಷಣೆಯಾಯಿತು. ಇದೇ ವೇಳೆಯಲ್ಲಿ ಗುಜರಾತಿನ ಕ್ಯಾಂಬೆ ಮತ್ತು ತಮಿಳುನಾಡಿನ ಕಾವೇರಿ ನದೀಮುಖಜ ಭೂಪ್ರದೇಶಗಳಲ್ಲಿ ನಡೆದ ತೈಲಾನ್ವೇಷಣೆಯ ಕಾರ್ಯದಲ್ಲೂ ರಾಯರದೇ ನಿರ್ದೇಶನ.

ಈ ವೇಳೆಗೆ ಭಾರತ ಸರ್ಕಾರದವರು ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಚುರುಕುಗೊಳಿಸಿ ಅದಕ್ಕಾಗಿಯೇ ಪ್ರತ್ಯೇಕ ಆಯೋಗವೊಂದನ್ನು 1957ರಲ್ಲಿ ಡೆಹ್ರಾಡೂನಿನಲ್ಲಿ ಆರಂಭಿಸಿದರು. ಆಯೋಗದ ಭೂಭೌತ ಶಾಖೆಯ ನಿರ್ದೇಶಕರಾಗಿ ನೇಮಕಗೊಂಡ ರಾಮಚಂದ್ರರಾಯರು[] ದೇಶದ ಹಲವಾರು ಪ್ರದೇಶಗಳಲ್ಲಿ ತೈಲನಿಕ್ಷೇಪಗಳಿಗಾಗಿ ಸರ್ವೇಕ್ಷಣೆ ಕಾರ್ಯಕ್ರಮಗಳನ್ನು ನಿಯೋಜಿಸಿದರು. ಹೀಗೆ ನಡೆಸಿದ  ಸರ್ವೇಕ್ಷಣ ಇವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡಿ ಪ್ರಸಿದ್ಧವಾದ ಕ್ಯಾಂಬೆ - ಅಂಕಲೇಶ್ವರ ನೈಸರ್ಗಿಕ ಅನಿಲ ಮತ್ತು ತೈಲಕ್ಷೇತ್ರಗಳ ವ್ಯಾಪ್ತಿಯನ್ನು ಪತ್ತೆಹಚ್ಚಿತು. 1959 ರಲ್ಲಿ ಆಯೋಗದ ಸದಸ್ಯರಾದ ಇವರು ಅದರ ತಾಂತ್ರಿಕ ಹಾಗೂ ಆಡಳಿತ ವಿಭಾಗಗಳ ಹೊಣೆಗಾರಿಕೆಯನ್ನು ವಹಿಸಿಕೊಂಡರು. 1961 ರಲ್ಲಿ ಇವರು ಸರ್ಕಾರಿ ಸೇವೆಯಿಂದ ವಿಶ್ರಾಂತರಾದರೂ ಇವರ ಅಪಾರ ಪರಿಶ್ರಮ ಹಾಗೂ ಅನುಭವಗಳು ಆಯೋಗಕ್ಕೆ ಆವಶ್ಯಕವೆನಿಸಿ ಸಲಹೆಗಾರರನ್ನಾಗಿ ಮತ್ತೆ ನೇಮಿಸಲಾಯಿತು.

ಅನಂತರ 1971 - 72 ರಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ರಚನೆ, ಆಡಳಿತ, ಕಾರ್ಯವಿಧಾನ - ಈ ಎಲ್ಲ ಅಂಶಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯಲ್ಲೂ ರಾಯರೂ ಸದಸ್ಯರಾಗಿ ಸೇವೆಸಲ್ಲಿಸಿದ್ದರು. ಹೀಗೆ 35 ವರ್ಷಗಳಿಗೂ ಹೆಚ್ಚು ಕಾಲದ ಇವರ ಉತ್ತಮ ಸೇವೆಯನ್ನು ಮೆಚ್ಚಿ 1972 ರಲ್ಲಿ ಕೇಂದ್ರ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನಿತ್ತು ಗೌರವಿಸಿತು.[]

ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಅಂತಾರಾಷ್ಟ್ರೀಯ ಸಭೆ - ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಇವರು ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡ, ರಷ್ಯ, ಇಂಗ್ಲೆಂಡ್, ಜರ್ಮನಿ, ಇಟಲಿ, ರೊಮೇನಿಯ, ಇರಾನ್ - ಹೀಗೆ ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿ ಅಪಾರ ಅನುಭವ ಗಳಿಸಿದರು.

ಭೂ ಹಾಗೂ ಭೂಭೌತವಿಜ್ಞಾನಕ್ಕೆ ಸಂಬಂಧಿಸಿದಂತೆ ಸುಮಾರು 70 ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.[] ಹಲವಾರು ವೈಜ್ಞಾನಿಕ ಸಂಘಗಳ ಸದಸ್ಯರು ಹಾಗೂ ಭಾರತ ಭೂವಿಜ್ಞಾನ ಸಂಘದ ಉಪಾಧ್ಯಕ್ಷರು ಆಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿರುವ ಇವರ ಪುಸ್ತಕ ಔಟ್‌ಲೈನ್ಸ್ ಆಫ್ ಜಿಯೋಫಿಸಿಕಲ್ ಪ್ರಾಸ್ಪೆಕ್ಟಿಂಗ್, ಭೂಭೌತವಿಜ್ಞಾನಿಗಳ ಮೆಚ್ಚುಗೆಯನ್ನು ಗಳಿಸಿದೆ. ರಾಮಚಂದ್ರರಾಯರು ಬೆಂಗಳೂರಿನಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. "Fellow Profile". Indian Academy of Sciences. 2016. Retrieved 11 April 2016.
  2. "ONGC'S PHENOMENAL JOURNEY TOWARDS DIAMOND JUBILEE". Pioneer. 31 August 2015. Retrieved 10 April 2016.
  3. "Padma Awards" (PDF). Ministry of Home Affairs, Government of India. 2016. Archived from the original (PDF) on 15 October 2015. Retrieved 3 January 2016.
  4. "Ramachandra Rao, M. B. on GSI". Geological Survey of India. 2016. Retrieved 11 April 2016.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: