ವಿಷಯಕ್ಕೆ ಹೋಗು

ಆಜೊ಼ ಸಂಯುಕ್ತಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಜ಼ೊ ಸಂಯುಕ್ತಗಳ ಸಾಮಾನ್ಯ ರಾಸಾಯನಿಕ ಸೂತ್ರ

ಆಜೊ಼ ಸಂಯುಕ್ತಗಳು ಆಜೊ಼ ಗುಂಪಿನ (-N=N-) ಸಹಾಯದಿಂದ ಜೋಡಿಸಲ್ಪಟ್ಟ ಎರಡು ಬೆಂಜೀನ್ (ಆರೋಮ್ಯಾಟಿಕ್) ಚಕ್ರಗಳನ್ನುಳ್ಳ ಸಂಯುಕ್ತ ವಸ್ತುಗಳು.[]

ಗುಣಗಳು

[ಬದಲಾಯಿಸಿ]

ಇವುಗಳ ಬಣ್ಣ ಸಾಮಾನ್ಯವಾಗಿ ಹಳದಿ ಅಥವಾ ಕೆಂಪು. ಸ್ಫಟಿಕಾಕಾರ. ಇವು ಡೈಆಜ಼ೊ ಸಂಯುಕ್ತಗಳಿಗಿಂತ ಹೆಚ್ಚು ಸ್ಥಿರ. ಆಸವನ (ಡಿಸ್‍ಟಿಲೀಷನ್) ಹೊಂದುವಾಗ ವಿಭಜನೆಗೊಳ್ಳುವುದಿಲ್ಲ. ಆಜ಼ೊ ಬಣ್ಣಗಳಲ್ಲನೇಕವು ವ್ಯಾವಹಾರಿಕವಾಗಿ ಈ ಗುಂಪಿಗೇ ಸೇರಿವೆ.

ಆಜೊ಼ ಸಂಯುಕ್ತಗಳನ್ನು ಸಾಮಾನ್ಯವಾಗಿ ತಯಾರಿಸುವ ಕ್ರಮಗಳು

[ಬದಲಾಯಿಸಿ]
  1. ಆರೋಮ್ಯಾಟಿಕ್ ನೈಟ್ರೋ ಸಂಯುಕ್ತಗಳನ್ನು ಸೋಡಿಯಂ ರಸಮಿಶ್ರಣದಿಂದ ಅಥವಾ ಪ್ರತ್ಯಾಮ್ಲೀಯ ಸ್ಟಾನಸ್ ಕ್ಲೋರೈಡ್ ದ್ರಾವಣದೊಡನೆ ಅಪಕರ್ಷಿಸುವುದರ ಮೂಲಕ
  2. ಅಜಾಕ್ಸಿ ಸಂಯುಕ್ತಗಳನ್ನು ಕಬ್ಬಿಣದ ಚೂರ್ಣದೊಡನೆ ಅಪಕರ್ಷಿಸುವುದರ ಮೂಲಕ
  3. ಹೈಡ್ರೋಜೊ ಸಂಯುಕ್ತಗಳನ್ನು ಮರ್ಕ್ಯೂರಿಕ್ ಆಕ್ಸೈಡ್ ಅಥವಾ ಸೋಡಿಯಂ ಹೈಪೋಬ್ರೋಮೈಡ್ ಅಥವಾ ಫೆರಿಕ್ ಕ್ಲೋರೈಡ್‍ಗಳಿಂದ ಸಹಜರೀತಿಯಲ್ಲಿ ಉತ್ಕರ್ಷಿಸುವುದರ ಮೂಲಕ
  4. ಡೈಆಜೊ಼ ಸಂಯುಕ್ತಗಳನ್ನು ಆರೋಮ್ಯಾಟಿಕ್ ಅಮೀನ್ ಅಥವಾ ಫೀನಾಲ್‍ಗಳ ಸಂಗಡ ಕೂಡಿಸಿ ಆಜೊ಼ ಬಣ್ಣಗಳನ್ನು ತಯಾರಿಸುವುದರ ಮೂಲಕ.

ಪ್ರಮುಖ ಆಜ಼ೊ ಸಂಯುಕ್ತಗಳು

[ಬದಲಾಯಿಸಿ]

ಮೇಲೆ ತಿಳಿಸಿದ ನೈಟ್ರೋಸಂಯುಕ್ತಗಳ ಅಪಕರ್ಷಣವನ್ನು ಹಂತ ಹಂತವಾಗಿ ಮುಂದುವರಿಸಿದರೆ ಈ ಕೆಳಕಂಡ ಸಂಯುಕ್ತಗಳು ಹುಟ್ಟುವುವು:

ಆಜ಼ೊಕ್ಸಿ ಬೆಂಜೀನ್

[ಬದಲಾಯಿಸಿ]

ನೈಟ್ರೋಬೆಂಜೀನನ್ನು ಮೆಥೆನಾಲ್‍ನಲ್ಲಿ ವಿಲೀನಗೊಳಿಸಿ ಸೋಡಿಯಂ ಮೆಥಾಕ್ಸೈಡ್‍ನೊಡನೆ ಬಹಳ ಹೊತ್ತು ಕುದಿಸಿದರೆ, ಆಜ಼ೋಕ್ಸಿಬೆಂಜೀನ್ ಉತ್ಪತ್ತಿಯಾಗುತ್ತದೆ. ಅನಂತರ ಅದರಲ್ಲಿರುವ ಆಲ್ಕೋಹಾಲ್‍ನ್ನು ನೀರಿನ ಹಬೆಯ ಮೇಲೆ ಕಾಯಿಸಿ ಆಸವನದಿಂದ ತೆಗೆದುಬಿಟ್ಟರೆ ಆಜ಼ೋಕ್ಸಿ ಬೆಂಜೀನ್ ತೈಲರೂಪದಲ್ಲಿ ಹೊರಬಂದು, ಕ್ರಮೇಣ ಘನೀಭವಿಸುತ್ತದೆ. ಅನಂತರ ಇದನ್ನು ಪೆಟ್ರೋಲಿಯಂ ಈಥರ್ ಮೊದಲಾದ ದ್ರವಗಳಲ್ಲಿ ವಿಲೀನಿಸಿ ಆರುವುದಕ್ಕೆ ಬಿಟ್ಟರೆ ಶುದ್ಧವಾದ ಸ್ಫಟಿಕಾಕಾರದ ಆಜ಼ೊಕ್ಸಿ ಬೆಂಜೀನ್ ದೊರೆಯುತ್ತದೆ.[]

4C6H5NO2 + 3CH3ONa → 2C6H5N(O)=N-C6H5 + 3HCOONa + 3H2O

ಆಜ಼ೊಕ್ಸಿ ಬೆಂಜೀನಿನ ಬಣ್ಣ ತಿಳಿಹಳದಿ. ಇದರ ಕರಗುವ ಬಿಂದು 360 ಸೆಂ.ಗ್ರೇ.[] ಇದು ನೀರಿನಲ್ಲಿ ಕರಗುವುದಿಲ್ಲ. ಸೇಂದ್ರಿಯ ದ್ರವಗಳಾದ ಈಥರ್, ಆಲ್ಕೋಹಾಲ್‍ಗಳಲ್ಲಿ ಕರಗುತ್ತದೆ. ಪ್ರಬಲ ಸಲ್ಫ್ಯೂರಿಕ್ ಆಮ್ಲದ ಜೊತೆಯಲ್ಲಿ ಬಿಸಿಮಾಡಿದರೆ ಪ್ಯಾರಾ (P) ಹೈಡ್ರಾಕ್ಸಿ ಬೆಂಜೀನ್ ಎಂಬ ಐಸೋಮರ್ ಆಗಿ ಪರಿವರ್ತನೆ ಹೊಂದುತ್ತದೆ.

                          		     ಪ್ರಬಲ H2SO4
                             C6H5N(O)=N-C6H4                            C6H5N=NC6H4OH

ಆಜ಼ೊ ಬೆಂಜೀನ್ (C6H5N=NC6H5)

[ಬದಲಾಯಿಸಿ]

ಆಜ಼ೊಕ್ಸಿ ಬೆಂಜೀನನ್ನು ಅದರ ಪ್ರಮಾಣದ ಮೂರರಷ್ಟು ಕಬ್ಬಿಣದ ಚೂರ್ಣದೊಡನೆ ಆಸವನಗೊಳಿಸಿದರೆ ಆಜ಼ೊ ಬೆಂಜೀನ್ ಉತ್ಪತ್ತಿಯಾಗುತ್ತದೆ.

C6H5N(O)=N-C6H5 + Fe → C6H5N=NC6H5 + FeO

ಇನ್ನೂ ಸುಲಭವಿಧಾನವೆಂದರೆ, ನೈಟ್ರೋ ಬೆಂಜೀನನ್ನು ಸತುವಿನ ಚೂರ್ಣ ಮತ್ತು ಕಾಸ್ಟಿಕ್ ಸೋಡ ಅಥವಾ ಪ್ರತ್ಯಾಮ್ಲೀಯ ಸ್ಟಾನಸ್ ಕ್ಲೊರೈಡ್ ದ್ರಾವಣದೊಡನೆ ಅಪಕರ್ಷಿಸಿ ಆಜ಼ೊ ಬೆಂಜೀನನ್ನು ಪಡೆಯಬಹುದು.

2C6H5NO2 + 8H → C6H5N=NC6H5 + 4H2O

ಇದನ್ನು ಪೆಟ್ರೋಲಿಯಂ ಈಥರ್‌ನಲ್ಲಿ ವಿಲೀನಗೊಳಿಸಿ ಅನಂತರ ಸ್ಫಟಿಕೀಕರಿಸಿ ಶುದ್ಧಿಗೊಳಿಸಬಹುದು. ಇದರ ಬಣ್ಣ ಕಿತ್ತಲೆಗೆಂಪು. ಕರಗುವ ಬಿಂದು 680 ಸೆಂ.ಗ್ರೇ. ಇದು ನೀರಿನಲ್ಲಿ ಕರಗುವುದಿಲ್ಲ. ಈಥರ್, ಆಲ್ಕೋಹಾಲ್ ಮುಂತಾದ ಸೇಂದ್ರೀಯ ದ್ರವಗಳಲ್ಲಿ ಕರಗುತ್ತದೆ. ಇದಕ್ಕೆ ಬಣ್ಣವಿದ್ದರೂ ಸಹ ಇದರಿಂದ ಬಟ್ಟೆಗೆ ಬಣ್ಣ ಬರುವುದಿಲ್ಲ.

ರಾಸಾಯನಿಕ ಕ್ರಿಯೆಗಳು: ಅಮೋನಿಯಂ ಸಲ್ಫೈಡ್ ಅಥವಾ ಸತುವಿನ ಚೂರ್ಣ ಮತ್ತು ಕಾಸ್ಟಿಕ್ ಸೋಡ ಮಿಶ್ರಣದಿಂದ ಆಜ಼ೊ ಬೆಂಜೀನನ್ನು ಅಪಕರ್ಷಿಸಿದರೆ ಹೈಡ್ರಜೊ ಬೆಂಜೀನ್ ದೊರಕುತ್ತದೆ.

C6H5-N=N-C6H5 + 2H → C6H5-NH-NH-C6H5 ಹೈಡ್ರಜೊ ಬೆಂಜೀನ್

ಸತುವಿನ ಚೂರ್ಣ ಮತ್ತು ಅಸಿಟಿಕ್ ಆಮ್ಲ ಅಥವಾ ಸ್ಟಾನಸ್ ಕ್ಲೋರೈಡ್ ಮತ್ತು ಹೈಡ್ರೊಕ್ಲೋರಿಕ್ ಆಮ್ಲ ಮೊದಲಾದ ಆಮ್ಲಗಳ ಅಪಕರ್ಷಣದಿಂದ ಆಜ಼ೊ ಬೆಂಜೀನ್ ಅನಿಲೀನನ್ನು ಕೊಡುತ್ತದೆ.

C6H5-N=N-C6H5 + 4H → 2C6H5NH2

ಹೈಡ್ರೊಜನ್ ಪರಾಕ್ಸೈಡ್ ಮತ್ತು ಗೇಸಿಯಸ್ ಅಸಿಟಿಕ್ ಆಮ್ಲ ಮಿಶ್ರಣದಿಂದ ಆಜ಼ೊ ಬೆಂಜೀನನ್ನು ಉತ್ಕರ್ಷಿಸಿದರೆ ಆಜ಼ೊಕ್ಸಿ ಬೆಂಜೀನ್ ದೊರೆಯುತ್ತದೆ.

C6H5-N=N-C6H5 + O → C6H5N(O)=N-C6H5

ಹೈಡ್ರೊಜೊ ಬೆಂಜೀನ್ (C6H5NH-NHC6H5)

[ಬದಲಾಯಿಸಿ]

ಆಜ಼ೊ ಬೆಂಜೀನನ್ನು ಪ್ರತ್ಯಾಮ್ಲೀಯದ ಅಪಕರ್ಷಣದಿಂದ ಅಥವಾ ನೈಟ್ರೋ ಬೆಂಜೀನನ್ನು ಸತುವಿನ ಚೂರ್ಣ ಮತ್ತು ಬಿಸಿ ಸೋಡಿಯಮ್ ಹೈಡ್ರಾಕ್ಸೈಡ್‍ಗಳ ಕ್ರಿಯೆಯಿಂದ ನೇರವಾಗಿ ಅಪಕರ್ಷಿಸಿ ತಯಾರಿಸಬಹುದು. ದ್ರಾವಣ ವರ್ಣರಹಿತವಾಗುವಂತೆ ಕಾಯಿಸಿ ಅನಂತರ ಅದನ್ನು ಸೋಸಿದರೆ ವರ್ಣರಹಿತ, ಸ್ಫಟಿಕರೂಪದ ಹೈಡ್ರೊಜೊ ಬೆಂಜೀನ್ ಉತ್ಪತ್ತಿಯಾಗುತ್ತದೆ. ಇದರ ಕುದಿಯುವ ಬಿಂದು 1310 ಸೆಂ.ಗ್ರೇ.

C6H5-N=N-C6H5 + 2H → C6H5-NH-NH-C6H5

ರಾಸಾಯನಿಕ ಕ್ರಿಯೆಗಳು: ಪಾದರಸ ಭಸ್ಮ, ಸೋಡಿಯಂ ಹೈಪೋ ಬ್ರೋಮೈಟ್, ಫೆರಿಕ್ ಕ್ಲೋರೈಡ್‍ಗಳ ಜೊತೆ ಉತ್ಕರ್ಷಣ ಹೊಂದಿದರೆ ಆಜ಼ೊ ಬೆಂಜೀನ್ ಉತ್ಪತ್ತಿಯಾಗುತ್ತದೆ. ಇದನ್ನು ಹೊರಗಿನ ಗಾಳಿಗಿಟ್ಟರೆ ನಿಧಾನವಾಗಿ ಉತ್ಕರ್ಷಣೆ ಹೊಂದಿ ಕಿತ್ತಲೆಗೆಂಪಿನ ಬಣ್ಣಕ್ಕೆ ತಿರುಗಿ ಆಜ಼ೊ ಬೆಂಜೀನ್ ಆಗಿ ಪರಿವರ್ತಿತವಾಗುತ್ತದೆ.

C6H5-NH-NH-C6H5 + O → C6H5-N=N-C6H5 + H2O

ಸ್ಟಾನಸ್ ಕ್ಲೋರೈಡ್ ಮತ್ತು ಹೈಡ್ರೊಕ್ಲೋರಿಕ್ ಆಮ್ಲ ಅಥವಾ ಸೋಡಿಯಂ ರಸಮಿಶ್ರಣಗಳಿಂದ ಪ್ರಬಲ ರೀತಿಯಲ್ಲಿ ಅಪಕರ್ಷಣ ಹೊಂದಿ ಅನಿಲಿನ್ ಉತ್ಪತ್ತಿಯಾಗುತ್ತದೆ.[]

C6H5-NH-NH-C6H5 + 2H → 2C6H5-NH2

ಹೈಡ್ರಜೊ ಬೆಂಜೀನನ್ನೇ ಕಾಯಿಸಿದರೆ ಆಜೊ಼ ಬೆಂಜೀನ್ ಮತ್ತು ಅನಿಲಿನ್ ಹೊರಬರುತ್ತವೆ. ಈ ಕ್ರಿಯೆಯಲ್ಲಿ ಒಂದು ಹೈಡ್ರಜೊ ಬೆಂಜೀನ್ ಅಣು ತನ್ನ ಎರಡು ಹೈಡ್ರೊಜನ್ ಅಣುಗಳನ್ನು ತೊರೆದು ಮತ್ತೊಂದು ಹೈಡ್ರಜೊ ಅಣುವಿಗೆ ರವಾನಿಸಿಕೊಡುತ್ತದೆ.

|   +         C6H5-NH     HN-C6H5        C6H5-N     H2N-C6H5
              |
                                →            II  +
                   C6H5 NH     HN-C6H5        C6H5-N     H2N-C6H5

ಹೈಡ್ರಜೋಬೆಂಜೀನನ್ನು ಸಾಧಾರಣ ಪ್ರಬಲ ಕ್ಲೋರಿಕ್ ಆಮ್ಲದ ಜೊತೆ ಕಾಯಿಸಿದರೆ ಅದರ ಅಣುಗಳ ಅನಂತರ ರಚನೆಯಲ್ಲಿ ಬದಲಾವಣೆ ಕಂಡುಬಂದು ಹೊರಗಿನ ಎರಡು ಬೆಂಜೀನ್ ಚಕ್ರಗಳು ಮೊದಲಿದ್ದ ಸ್ಥಳದಿಂದ ಎದುರಿನ (p) ಸ್ಥಳಕ್ಕೆ ಹೊರಳಿ p-p' ಡೈಅಮೈನೊಡೈಫೀನೈಲ್ ಅಥವಾ ಬೆಂಜಿಡಿನ್ ಆಗಿ ಪರಿವರ್ತಿಸಿಕೊಳ್ಳುತ್ತದೆ. ಈ ಬದಲಾವಣೆಗೆ ಬೆಂಜಿಡಿನ್ ರೂಪಾಂತರ ಎಂದು ಹೆಸರು.[]

ಬೆಂಜ಼ಿಡಿನ್ ರೂಪಾಂತರ

ಹೈಡ್ರಜೊ ಬೆಂಜೀನಿನ ಎರಡು (p) ಸ್ಥಾನಗಳೂ ತೆರವಾಗಿದ್ದರೆ (H ಮಾತ್ರ ಇದ್ದಾಗ) ಈ ಬಗೆಯ ಪರಿವರ್ತನೆ ಸಾಧ್ಯವಾಗುತ್ತದೆ. ಒಂದೇ ಒಂದು ಸ್ಥಾನ ತೆರವಾಗಿದ್ದರೆ, ಹಿಂದಿನ ಪರಿವರ್ತನೆಯ  ಅರ್ಧಭಾಗದ ಪರಿವರ್ತನೆ ಮಾತ್ರ ಸಾಧ್ಯ. ಈ ರೀತಿಯ ಬದಲಾವಣೆಗೆ ಸೆಮಿ ಬೆಂಜಿಡಿನ್ ಅಥವಾ ಸೆಮಿಡಿನ್ ಪರಿವರ್ತನೆ ಎಂದು ಹೆಸರು.

ಸೆಮಿಡಿನ್ ಪರಿವರ್ತನೆ

ಆಜ಼ೊಬೆಂಜೀನನ್ನು ತವರ ಮತ್ತು ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲದಿಂದ ಅಪಕರ್ಷಿಸಿ ನೇರವಾಗಿ ಬೆಂಜಿಡಿನನ್ನು ಪಡೆಯಬಹುದು. ಈ ಕ್ರಿಯೆಯಲ್ಲಿ ಮೊದಲು ಉಂಟಾಗುವ ಹೈಡ್ರಜೊ ಬೆಂಜೀನ್ ಅನಂತರ ಬೆಂಜಿಡಿನ್ ಆಗಿ ಪರಿವರ್ತನೆ ಹೊಂದುತ್ತದೆ.

ಬೆಂಜಿಡಿನ್ ವರ್ಣರಹಿತವಾದ, ಸ್ಫಟಿಕರೂಪಿ; ನೀರಿನಲ್ಲಿ ವಿಲೀನವಾಗದ ಸಂಯುಕ್ತ ವಸ್ತು. ಇದರ ಕುದಿಯುವ ಬಿಂದು 1270 ಸೆಂ. ಗ್ರೇ. ಆದರೆ ದುರ್ಬಲ ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ವಿಲೀನವಾಗಿ ಬೆಂಜಿಡಿನ್ ಹೈಡ್ರೊಕ್ಲೋರೈಡ್ ಆಗಿ ಪರಿವರ್ತಿತಗೊಳ್ಳುತ್ತದೆ. ಬೆಂಜಿಡಿನ್ ಉಪಯೋಗ ಮುಖ್ಯವಾಗಿ ಬಣ್ಣಗಳ ತಯಾರಿಕೆಯಲ್ಲಿ ಹೆಚ್ಚು.

ಆಜ಼ೊ ಬಣ್ಣಗಳು

[ಬದಲಾಯಿಸಿ]

ಸಾಮಾನ್ಯವಾಗಿ ನೂಲು ಬಟ್ಟೆಗಳಿಗೆ ಹಾಕಿದ ಬಣ್ಣ ಒಗೆತ, ಬಿಸಿಲುಗಳಿಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೆಲವು ಬಣ್ಣವುಳ್ಳ ರಾಸಾಯನಿಕ ದ್ರವ್ಯಗಳು ಬಟ್ಟೆಯ ಮೇಲೆ ಬಿದ್ದರೆ ಅದರ ಬಣ್ಣ ಬಟ್ಟೆಗೆ ಅಂಟಿಕೊಳ್ಳುವುದಿಲ್ಲ. ಉದಾಹರಣೆಗೆ, ಕಿತ್ತಲೆಗೆಂಪು ಬಣ್ಣದ ಆಜ಼ೊ ಬೆಂಜ಼ೀನ್ ನೂಲಿನ ಬಟ್ಟೆಯ ಮೇಲೆ ಬಿದ್ದರೆ ಬಟ್ಟೆಗೆ ಬಣ್ಣ ಅಂಟುವುದಿಲ್ಲ. ಅಲ್ಲದೆ ರಾಸಾಯನಿಕ ದ್ರವ್ಯದ ಬಣ್ಣವೂ ನೂಲಿನ ಎಳೆಗೆ (ಫೈಬರ್) ಅಂಟುವುದಿಲ್ಲ. ಉದಾಹರಣೆಗೆ, ಹಳದಿ ಬಣ್ಣದ ಪಿಕ್ರಿಕ್ ಆಮ್ಲ ರೇಷ್ಮೆ, ಉಣ್ಣೆ ಎಳೆಗಳ ಮೇಲೆ ಬಣ್ಣ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ. ಈ ಎಳೆಗಳಿಗೆ ಮತ್ತೆ ಬೇರೆ ಬಣ್ಣಗಳನ್ನು ಕೊಡುವುದು ಸಾಧ್ಯವಾಗುವುದಿಲ್ಲ. ಈಗಿರುವ ಎಲ್ಲ ಬಣ್ಣದ ಸಾಧನಗಳೂ ಆರೋಮ್ಯಾಟಿಕ್ ಸಂಯುಕ್ತಗಳೇ ಆಗಿವೆ. ಇವುಗಳಲ್ಲಿ ಸುಮಾರು 3-8 ಲಕ್ಷ ಸಂಯುಕ್ತಗಳಿದ್ದು ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಆರೋಮ್ಯಾಟಿಕ್ ಬಣ್ಣಗಳೇ ಆಗಿವೆ.

ಸೇಂದ್ರಿಯ ಸಂಯುಕ್ತಗಳ ಬಣ್ಣಗಳಿಗೂ ಅವುಗಳ ಅಂತರ್‌ರಚನೆಗಳಿಗೂ ಇರುವ ಸಂಬಂಧ ಹೆಚ್ಚು ಕುತೂಹಲಕಾರಿಯಾದ ರಾಸಾಯನಿಕ ವಿಷಯ. ರಾಸಾಯನಿಕ ವಸ್ತುಗಳಿಗೆ ಬಣ್ಣವಿರಬೇಕಾದರೆ ಅವುಗಳಲ್ಲಿ ಕೆಲವು ವಿಶಿಷ್ಟ ಗುಂಪುಗಳಿರಬೇಕೆಂದು ಓಲಿವರ್ ವಿಟ್ ಎಂಬಾತ ಕಂಡುಹಿಡಿದ. ಇಂಥ ವರ್ಣಧಾರಿ ಗುಂಪುಗಳನ್ನು ಕ್ರೋಮೋಫೋರ್ ಎಂಬುದಾಗಿ ಕರೆದ. ಸಾಧಾರಣವಾಗಿ ಇವು ಅಸಂತೃಪ್ತ ಗುಂಪುಗಳು.

ಆಜ಼ೊ ಬಣ್ಣಗಳ ಬಗ್ಗೆ ವಿವರಗಳು, ತಯಾರಿಕೆ

[ಬದಲಾಯಿಸಿ]

ಇವು ಮುಖ್ಯ. ಆಜ಼ೊಬೆಂಜ಼ೀನ್‌ನಲ್ಲಿರುವ ಆಜ಼ೊ (-N=N-) ಗುಂಪು ಇಂಥ ಒಂದು ಕ್ರೋಮೋಫೋರವೇ. ಕ್ರೋಮೋಫೋರುಗಳು ಒಂದೇ ರೀತಿಯ ಸಂಯುಕ್ತಗಳಿಗೆ ಬಣ್ಣವನ್ನು ಬೀರುವುದಿಲ್ಲ. ಉದಾಹರಣೆಗೆ, ಬೆಂಜ಼ೀನ್‌ನಲ್ಲಿ ಮೂರು ಕ್ರೋಮೋಫೋರ ಗುಂಪುಗಳಿದ್ದರೂ ಅದು ವರ್ಣರಹಿತ. ಕ್ರೋಮೋಫೋರವನ್ನು ಹೊಂದಿರುವ ಸಂಯುಕ್ತಗಳಿಗೆ ಕ್ರೋಮೋಜೆನ್ ಎಂದು ಹೆಸರು. ಕ್ರೋಮೋಜೆನ್‌ಗೆ ಬಣ್ಣವಿದ್ದರೂ ಇದನ್ನು ಬೇರೆ ವಸ್ತುಗಳಿಗೆ ಬಣ್ಣಹಾಕುವುದಕ್ಕೆ ಉಪಯೋಗಿಸುವುದಿಲ್ಲ. ಕ್ರೊಮೋಫೋರ್ ಜೊತೆಗೆ ಬಣ್ಣವನ್ನು ಹೆಚ್ಚಿಸುವಂಥ ಬೇರೊಂದು ರಾಸಾಯನಿಕ ಗುಂಪು ಅಗತ್ಯ. ಆ ಗುಂಪಿಗೆ ಆಕ್ಸೊಕ್ರೋಮ್ ಎಂದು ಹೆಸರು. ಇವು ತಾವಾಗಿಯೇ ಬಣ್ಣವನ್ನು ಕೊಡುವುದಿಲ್ಲ. ಆದರೆ ಕ್ರೋಮೋಫೋರವನ್ನು ಹೊಂದಿರುವ ಸಂಯುಕ್ತಗಳ ಬಣ್ಣವನ್ನು ಹೆಚ್ಚಿಸುತ್ತವೆ. ಅಲ್ಲದೆ ಬಣ್ಣ ಎಳೆಗಳಿಗೆ ಅಂಟುವಂತೆ ಮಾಡುತ್ತವೆ. -NH2, OH, NHR, NR2, -COOH, -HSO4 ಇತ್ಯಾದಿಗಳೆಲ್ಲ ಮುಖ್ಯವಾದ ಆಕ್ಸೊಕ್ರೋಮ್ ಗುಂಪುಗಳು. ಇವು ಆಮ್ಲ ಇಲ್ಲವೆ ಪ್ರತ್ಯಾಮ್ಲಗಳಾಗಿದ್ದು ಲವಣಜನಕಗಳು. ಎಳೆಯ ಕಡೆಗೆ ಬಣ್ಣ ಆಕರ್ಷಣಗೊಳ್ಳುವಂತೆ ಇವು ಮಾಡುತ್ತವೆ. ಅಲ್ಲದೆ ಬಣ್ಣಗಳಿಗೆ ಆಮ್ಲ ಅಥವಾ ಪ್ರತ್ಯಾಮ್ಲ ಗುಣಗಳನ್ನು ತಂದು ಕೊಡುತ್ತವೆ. ಆಜ಼ೋಬಣ್ಣಗಳು ಹೆಚ್ಚಾಗಿ ಸಲ್ಫ್ಯೂರಿಕ್ ಆಮ್ಲಗಳು. ಆದ್ದರಿಂದ ಇವನ್ನು ಆಮ್ಲ ಬಣ್ಣಗಳೆಂದು ಕರೆಯುತ್ತಾರೆ. p ಅಮೈನೊ ಆಜ಼ೊ ಬೆಂಜ಼ೀನ್ ಮತ್ತು p ಹೈಡ್ರಾಕ್ಸಿ ಆಜ಼ೊ ಬೆಂಜ಼ೀನ್‌ಗಳಲ್ಲಿ ಸಾಮಾನ್ಯವಾಗಿ ಇರುವ ಆಜ಼ೊ ಗುಂಪು ಕ್ರೋಮೋಫೋರ್ ಆಗಿರುವುದರಿಂದ NH2 ಅಥವಾ OHದಂಥ ಆಕ್ಸೊಕ್ರೋಮುಗಳನ್ನು ಇವು ಹೊಂದಿರುತ್ತವೆ. ಬಣ್ಣಗಳನ್ನು ಲೇಪಿಸಬೇಕಾದರೆ ಅವು ನೀರಿನಲ್ಲಿ ಕರಗುವಂತಿರಬೇಕು. ಈ ಕಾರಣದಿಂದಾಗಿ ಬಣ್ಣಗಳನ್ನು ಸಲ್ಫಾನಿಕ್ ಆಮ್ಲಗಳಾಗಿ ಪರಿವರ್ತಿಸಿದ ಅನಂತರ ಪ್ರತ್ಯಾಮ್ಲ ಲವಣಗಳು ನೀರಿನಲ್ಲಿ ಬಹುಬೇಗ ಕರಗುತ್ತವೆ. ಕೃತಕ ಬಣ್ಣಗಳಲ್ಲಿ ಆಜ಼ೊ ಬಣ್ಣಗಳು ಪ್ರಧಾನವಾಗಿದ್ದು, ಅವನ್ನು ನೂಲು, ರೇಷ್ಮೆ, ಉಣ್ಣೆ, ಕಾಗದ ಮೊದಲಾದ ವಸ್ತುಗಳಿಗೆ ಬಣ್ಣಹಾಕಲು ಉಪಯೋಗಿಸುತ್ತಾರೆ.[][] ಬೇಕಾದ ಛಾಯೆಗಳಲ್ಲಿ ಈ ಬಣ್ಣಗಳು ದೊರೆಯುತ್ತವೆ. ಡಯಜ಼ೊಸಿಯಮ್ ಲವಣಗಳು (ಪ್ರೈಮರಿ) ಹಾಗೂ (ಸೆಕೆಂಡರಿ) ಆರೋಮ್ಯಾಟಿಕ್ ಅಮೀನ್‌ಗಳ ಸಂಗಡ ಮೊದಲಿನ ಬಣ್ಣವುಳ್ಳ ಡಯಜ಼ೊ ಆಮೈನೋ ಸಂಯುಕ್ತಗಳಾಗುತ್ತವೆ. ಅನಂತರ ಇವು p ಆಮೈನೋ ಆಜ಼ೊ ಬೆಂಜ಼ೀನ್‌ಗಳಾಗಿ ಪರಿವರ್ತಿತವಾಗಬಲ್ಲುವು. ಟರ್ಷಿಯರಿ ಅಮೀನ್‌ಗಳ ಮತ್ತು ಫೀನಾಲ್‌ಗಳ ಜೊತೆ ಡೈಜೊನಿಯಂ ಲವಣಗಳು ಆಜ಼ೊ ಬಣ್ಣಗಳನ್ನು ತರುತ್ತವೆ. ಈ ರೀತಿಯ ಜೊತೆಗೂಡಣೆಯ ಕ್ರಿಯೆಗೆ ಕಪ್ಲಿಂಗ್ ಎಂದು ಹೆಸರು. ಈ ಕ್ರಿಯೆಗಳಲ್ಲಿ -NH2 ಅಥವಾ -OHಗಳ ಎದುರಿಗಿರುವ (p) ಪ್ಯಾರಾಸ್ಥಾನದಲ್ಲಿ ಹೈಡ್ರೊಜನ್‌ನ ಹೊರತು ಮತ್ಯಾವುದೇ ರ‍್ಯಾಡಿಕಲ್ ಇರಕೂಡದು. ಒಂದು ಪಕ್ಷ ಆ ಸ್ಥಾನ ತುಂಬಿದ್ದರೆ ಪಕ್ಕದಲ್ಲಿನ (o) ಆರ್ಥೊ ಸ್ಥಾನದಲ್ಲಿ ಅವಕಾಶವಾದರೆ ಹೊಂದಿಕೊಳ್ಳುತ್ತದೆ. ಆದರೆ ಮೆಟಾ-ಸ್ಥಾನದಲ್ಲಿ ಹೊಂದಿಕೊಳ್ಳುವುದಿಲ್ಲ. ಆರೋಮ್ಯಾಟಿಕ್ ಅಮೈನೋ ಸಂಯುಕ್ತವನ್ನು ಡೈಆಜ಼ೊಟೈಜ಼್ ಮಾಡಿದ ಅನಂತರ ದೊರೆಯುವ ಡೈಆಜ಼ೊನಿಯಮ್ ಲವಣವನ್ನು ಮಂಜುಗಡ್ಡೆಯಿಂದ ತಂಪಾಗಿಸಿ ನಿಧಾನವಾಗಿ ಫಿನಾಲ್ ಅಥವಾ ಅದರ ಸಲ್ಫಾನಿಕ್ ಆಮ್ಲದ ಪ್ರತ್ಯಾಮ್ಲೀಯ ದ್ರಾವಣಕ್ಕೆ ಸೇರಿದರೆ ಸಂಯೋಜನಕಾರ್ಯ ನಡೆಯುತ್ತದೆ. ಈ ಕ್ರಿಯೆಯಲ್ಲಿ ಸೋಡಾ ಲವಣವನ್ನು ಉಪಯೋಗಿಸಿದ್ದಾದರೆ ಆಜ಼ೊ ಬಣ್ಣ ಹೊರಬರುತ್ತದೆ. ಇದೇ ರೀತಿ ಸ್ವಲ್ಪ ಆಮ್ಲ ಇಲ್ಲವೆ ತಟಸ್ಥ ದ್ರಾವಣದಲ್ಲಿ ಅಥವಾ ಆಲ್ಕೋಹಾಲ್‌ನ ದ್ರಾವಣದಲ್ಲಿ ಅಮೀನ್ ಜೊತೆ ಡೈಆಜ಼ೊನಿಯಮ್ ಲವಣವನ್ನು ಸೇರಿಸಿದರೆ ಸಂಯೋಜನಕಾರ್ಯ ನೆರವೇರುತ್ತದೆ. ಈ ರೀತಿಯಾಗಿ ಆಜ಼ೊ ಬಣ್ಣಗಳು ಸಾಮಾನ್ಯವಾಗಿ ಹಳದಿಬಣ್ಣದಲ್ಲಿರುತ್ತವೆ. ಆಲ್ಕೈಲ್ ಅಥವಾ ಫೀನೈಲ್ ಗುಂಪುಗಳನ್ನು ಕೂಡಿದರೆ ಅಥವಾ ಅದರ ಅಣುತೂಕವನ್ನು ಹೆಚ್ಚಿಸಿದರೆ ಅದರ ಬಣ್ಣ ಕಿತ್ತಳೆ, ಕೆಂಪು ನೇರಳೆ ಅಥವಾ ನೀಲಿ ಬಣ್ಣಕ್ಕೆ ತಿರುಗುತ್ತವೆ. ನ್ಯಾಪ್ಥಲೀನ್‌ನಿಂದ ತಯಾರಾದ ಬಣ್ಣಗಳು ಬಹಳ ಉತ್ಕೃಷ್ಟ. ಬಣ್ಣಗಳಲ್ಲಿನ ಆಜ಼ೊ ಗುಂಪು ಹೆಚ್ಚಾದಂತೆ ಅವುಗಳ ಛಾಯೆಯೂ ಅಧಿಕವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬಣ್ಣವನ್ನು ನೂಲಿನ ಎಳೆಯ ಮೇಲೆಯೇ ಉತ್ಪಾದಿಸುತ್ತಾರೆ. ನೂಲನ್ನು ಮೊದಲು ಫೀನಾಲ್‌ನ ಪ್ರತ್ಯಾಮ್ಲೀಯ ದ್ರಾವಣದಲ್ಲಿ ಅದ್ದಿ ಹೊರತೆಗೆದು ಒಣಗಿದ ಮೇಲೆ ಅದನ್ನು ಡೈಆಜ಼ೊನಿಯಮ್ ಲವಣದಲ್ಲಿ ಹಾಕಿದಾಗ ನೂಲಿನ ಎಳೆಯ ಮೇಲೆ ಬಣ್ಣ ಅಂಟುತ್ತದೆ. ಆಜ಼ೊ ಬಣ್ಣಗಳು ಅಧಿಕವಾಗಿದ್ದು, ಇವುಗಳಲ್ಲಿ ಹೆಚ್ಚು ಉಪಯುಕ್ತ ಹಾಗೂ ಸ್ಥಿರವಾಗಿ ನಿಲ್ಲುವ ಕೆಲವು ಬಣ್ಣಗಳ ಸೂಕ್ಷ್ಮ ಪರಿಚಯವನ್ನು ಕೆಳಗೆ ಪ್ರಸ್ತಾಪ ಮಾಡಲಾಗಿದೆ.

ಮೀಥೈಲ್ ಆರೇಂಜ್

[ಬದಲಾಯಿಸಿ]

ಸಲ್ಫಾನಿಲಿಕ್ ಆಮ್ಲವನ್ನು ಡೈಆಜ಼ೊಟೈಜ಼್ ಮಾಡಿ, ಮಿಥೈಲ್ ಅನಿಲಿನ್ ಜೊತೆ ಸಂಯೋಜಿಸಿದಾಗ ಈ ಬಣ್ಣ ಉತ್ಪತ್ತಿಯಾಗುತ್ತದೆ.[]

ರೇಷ್ಮೆ ಮತ್ತು ಉಣ್ಣೆ ಬಟ್ಟೆಗೆ ಇದು ಕಿತ್ತಳೆ ಬಣ್ಣವನ್ನು ನೀಡುತ್ತದೆ. ಈ ಬಣ್ಣ ಸ್ಥಿರವಾಗಿ ನಿಲ್ಲುವುದಿಲ್ಲ. ಇದನ್ನು ಆಮ್ಲಪ್ರತ್ಯಾಮ್ಲಗಳ ಗಾತ್ರ ನಿರ್ಧರಣೆಯಲ್ಲಿ ಒಂದು ಸೂಚಕದಂತೆ (ಇಂಡಿಕೇಟರ್) ಬಳಸುತ್ತಾರೆ. ಪ್ರತ್ಯಾಮ್ಲದ ಲವಣದಲ್ಲಿ ಇದರ ಬಣ್ಣ ಹಳದಿ; ಆಮ್ಲದ ಲವಣದಲ್ಲಿ ಕೆಂಪು. ಬಣ್ಣಕ್ಕೆ ಅನುಗುಣವಾಗಿ ಇದರ ಅಣುರಚನೆಯಲ್ಲಿಯೂ ಬದಲಾವಣೆಗಳು ಕಂಡುಬರುತ್ತವೆ.

ಕ್ರೈಸೋಯ್‌ಡಿನ್

[ಬದಲಾಯಿಸಿ]

ಬೆಂಜೀನ್ ಡೈಆಜ಼ೊನಿಯಮ್ ಕ್ಲೋರೈಡ್‌ಅನ್ನು ಮೆಟಾ ಫೆನಿಲಿನ್ ಡೈಅಮೀನ್ ಸಂಗಡ ಸಂಯೋಜಿಸಿದರೆ ಈ ಬಣ್ಣ ಲಭಿಸುತ್ತದೆ.

ಇದರ ಹೈಡ್ರೊಕ್ಲೋರೈಡ್ ಸಹಜವಾಗಿ ನೀರಿನಲ್ಲಿ ಕರಗುತ್ತದೆ. ಇದರ ಬಣ್ಣ ಹಳದಿ ಮಿಶ್ರಿತವಾದ ಕೆಂಪು. ರೇಷ್ಮೆ ಮತ್ತು ಉಣ್ಣೆಗೆ ಬಣ್ಣ ಹಾಕಲು ಇದನ್ನು ನೇರವಾಗಿ ಉಪಯೋಗಿಸುತ್ತಾರೆ. ಆದರೆ ವರ್ಣಬಂಧಕಗಳ (ಮಾರ್‌ಡೆಂಟ್) ಮೂಲಕ ಇದನ್ನು ಉಪಯೋಗಿಸಿ ನೂಲಿಗೆ ಬಣ್ಣವನ್ನು ಹಾಕಬೇಕಾಗುತ್ತದೆ.

ಬಿಸ್ಮಾರ್ಕ್ ಬ್ರೌನ್

[ಬದಲಾಯಿಸಿ]

ಹೈಡ್ರೊಕ್ಲೋರಿಕ್ ಆಮ್ಲದ ದ್ರಾವಣದಲ್ಲಿ ಸ್ವಲ್ಪ ಅಧಿಕವಾಗಿರುವ ಮೆಟಾಡೈಅಮೀನ್ ಮೇಲೆ ಸಿಟ್ರಿಕ್ ಆಮ್ಲದ ವರ್ತನೆಯಿಂದ ಇದು ತಯಾರಾಗುತ್ತದೆ. ಇದರಲ್ಲಿ ಎರಡು ವಿಭಾಗಗಳುಂಟು.

i) ಡೈಅಮೀನಿನ ಒಂದು -NH2 ಗುಂಪು ಡೈಆಜೊ಼ಟೈಜ್ ಹೊಂದಿ ಪರಿವರ್ತಿತವಾದ ಡೈಅಮೀನಿನ ಜೊತೆ ಸಂಯೋಗ ಹೊಂದಿ ಈ ಬಣ್ಣ ತಯಾರಾಗುತ್ತದೆ.

(H2N)2C6H4 + 2 H+ + 2 HNO2 → [C6H4(N2)2]2+ + 2 H2O

ii) ಮೆಟಾಫೆನಿಲಿನ್ ಡೈಅಮೀನಿನಿಂದ ಎರಡೂ-NH2 ಗುಂಪುಗಳು ಡೈಆಜ಼ೊಟೈಜ಼್ ಹೊಂದಿದಾಗ ಈ ಬಣ್ಣ ಉಂಟಾಗುತ್ತದೆ.

2 (H2N)2C6H4 + [C6H4(N2)2]2+ → 2 H+ + [(H2N)2C6H3N2]2C6H4

ಮೇಲಿನ ಎರಡು ಬಗೆಯ ಸಂಯುಕ್ತಗಳ ಹೈಡ್ರೊಕ್ಲೋರಾಯ್ಡ್‌ಗಳ ಮಿಶ್ರಣವೇ ಈ ಬಿಸ್ಮಾರ್ಕ್ ಬಣ್ಣ. ಇದನ್ನು ಚರ್ಮ, ಉಣ್ಣೆ ಮತ್ತು ನೂಲಿಗೆ (ವರ್ಣಬಂಧಕದ ಮೂಲಕ) ಬಣ್ಣ ಹಾಕಲು ಉಪಯೋಗಿಸುತ್ತಾರೆ.

ರಿಸಾರ್ಸಿನ್ ಯೆಲ್ಲೊ

[ಬದಲಾಯಿಸಿ]

ಸಲ್ಫಾನಿಲಿಕ್ ಆಮ್ಲವನ್ನು ಡೈಆಜ಼ೊಟೈಜ಼್ ಮಾಡಿದ ಅನಂತರ ರೆಸಾರ್ಸಿನಾಲ್ ಜೊತೆ ಮಿಶ್ರಣ ಮಾಡಿದರೆ ಈ ಬಣ್ಣ ತಯಾರಾಗುತ್ತದೆ.

ಇದು ಬಂಗಾರದ ಬಣ್ಣದಂತಿರುತ್ತದೆ. ರೇಷ್ಮೆಗೆ ಬಣ್ಣ ಹಾಕಲು ಇದನ್ನು ಉಪಯೋಗಿಸುತ್ತಾರೆ.

ಕಾಂಗೊ ರೆಡ್

[ಬದಲಾಯಿಸಿ]

ಡೈಆಜ಼ೊಟೈಜ಼್ ಮಾಡಿದ ಬೆಂಜಿಡಿನನ್ನು α-ನ್ಯಾಫ್ಥಾಯಿನಿಕ್ ಆಮ್ಲದ (1 ಅಮೈನೊ ನ್ಯಾಫ್ಥಾಲನ್ 4 ಸಲ್ಫೇನಿಕ್ ಆಮ್ಲ) ಜೊತೆ ಸಂಯೋಜಿಸಿದರೆ ಇದು ತಯಾರಾಗುತ್ತದೆ.[]

ಇದರ ಬಣ್ಣ ಕರಿಗೆಂಪು. ನೂಲಿಗೆ ಬಣ್ಣ ಹಾಕಲು ಇದನ್ನು ನೇರವಾಗಿ ಉಪಯೋಗಿಸಬಹುದು. ಆಮ್ಲಪ್ರತ್ಯಾಮ್ಲಗಳ ಮಾಪನ ವಿಧಾನದಲ್ಲಿ (ಎಸ್ಟಿಮೇಷನ್) ಇದನ್ನು ಸೂಚಕವಾಗಿ ಉಪಯೋಗಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.britannica.com/science/azo-compound
  2. http://www.jrespharm.com/pdf.php?&id=240
  3. "Azoxybenzene". Organic Syntheses. 11: 16. 1931. doi:10.15227/orgsyn.011.0016. {{cite journal}}: Cite uses deprecated parameter |authors= (help)
  4. https://www.sigmaaldrich.com/materials-science/material-science-products.html?TablePage=20396479<ref>
  5. https://www.sciencedirect.com/topics/chemistry/azo-compound
  6. Benkhaya, Said; M'rabet, Souad; El Harfi, Ahmed (2020-01-31). "Classifications, properties, recent synthesis and applications of azo dyes". Heliyon. 6 (1): e03271. doi:10.1016/j.heliyon.2020.e03271. ISSN 2405-8440. PMC 7002841. PMID 32042981.
  7. "Azo dyes". Food-Info.net. Archived from the original on 2022-11-29. Retrieved 2022-11-29.
  8. Liu, Ting-ting; Shi, Chun-ling (January 2005). "Improvement of Methyl Orange Preparation". Guangzhou Chamical Industry. 43 (1): 76–77.
  9. Gerald Booth "Naphthalene Derivatives" in Ullmann's Encyclopedia of Industrial Chemistry, 2005, Wiley-VCH, Weinheim. doi:10.1002/14356007.a17_009.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: