ವಿಷಯಕ್ಕೆ ಹೋಗು

ಅರೇಬಿಯದ ಚರಿತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರೇಬಿಯದ ಚರಿತ್ರೆ: ಏಷ್ಯಖಂಡದ ನೈಋತ್ಯ ಭಾಗದಲ್ಲಿರುವ ಅರೇಬಿಯ ಪರ್ಯಾಯದ್ವೀಪದ ಉದ್ದ 463 ಕಿಮೀ. ದೇಶದ ಬಹುಭಾಗವಲ್ಲ ಮರಳುಗಾಡು. ಚರಿತ್ರಪೂರ್ವಕಾಲದಲ್ಲಿ ಇಲ್ಲಿನ ಜನರ ಸ್ಥಿತಿ ಹೇಗಿತ್ತು, ಸೆಮಿಟಿಕ್ ಭಾಷೆಯನ್ನಾಡುವ ಇತರ ಜನಾಂಗಗಳೊಂದಿಗೆ ಇವರು ಎಂಥ ಸಂಬಂಧವನ್ನು ಹೊಂದಿದ್ದರು, ಎಂಬ ವಿಷಯಗಳು ಖಚಿತವಾಗಿ ತಿಳಿದುಬಂದಿಲ್ಲ.

ಪ್ರ.ಶ.ಪೂ. 1000 ವರ್ಷಗಳ ಹಿಂದೆಯೇ ಅರೇಬಿಯದಲ್ಲಿ ಪತ್ಯೇಕ ಬುಡಕಟ್ಟಿಗೆ ಸೇರಿ, ಪ್ರತ್ಯೇಕ ಸಮಾಜ ವ್ಯವಸ್ಥೆ ಹೊಂದಿದ್ದ ಎರಡು ಜನಾಂಗದವರಿದ್ದರು ಎಂದು ತಿಳಿದುಬರುತ್ತದೆ. ಒಂದು ಜನಾಂಗದವರು ಕಹತನಿ ಎಂಬ ಬುಡಕಟ್ಟಿಗೆ ಸೇರಿದವರು ತಾವು ಶುದ್ಧ ಅರಬ್ಬೀಯರು ಎಂದು ಅವರು ನಂಬಿದ್ದರು; ತಮ್ಮದೇ ಆದ ಭಾಷೆ ಸಂಸ್ಕೃತಿ, ಮತಧರ್ಮಗಳನ್ನು ಬೆಳೆಸಿಕೊಂಡು ಬಂದಿದ್ದರು. ಇವರು ನೆಲೆಸಿದ್ದುದು, ದಕ್ಷಿಣ ಸಮುದ್ರತೀರಪ್ರದೇಶಗಳಲ್ಲಿ. ಅರೇಬಿಯದ ಇತರ ಭಾಗಗಳೆಲ್ಲ ಮರಳುಗಾಡು, ಇದರಲ್ಲಿ ಅಲ್ಲಲ್ಲೆ ನೀರಿನ ಆಸರೆ ಇದ್ದ ತಂಪುಜಾಗಗಳು (ಓಯೆಸಿಸ್) ಇದ್ದುವು. ಇಲ್ಲಿನ ಬೆದೂಯಿನ್ ಜನ ಒಂದು ಕಡೆ ನೆಲೆಸದೆ ಸ್ಥಳದಿಂದ ಸ್ಥಳಕ್ಕೆ ಸುತ್ತಬೇಕಾಗಿತ್ತು. ಒಂಟೆ ಅವರ ವಾಹನ, ಮುಖ್ಯ ಜೀವನಾಧಾರ. ಏಬ್ರಹಾಂ ಮತ್ತು ಅವನ ಹೆಣ್ಣಾಳು (ಈಜಿಪ್ಟಿನವಳು ) ಹೇಗರರ ಮಗನಾದ ಇಸ್ಮೇಲ್ ಇವರಲ್ಲಿ ಹನ್ನೆರಡು ಪಂಗಡಗಳಿಗೆ ಮೂಲಪುರುಷನೆಂದೂ ಅವರು ಮಿಶ್ರಜನಾಂಗದವರೆಂದೂ ಪರಿಗಣಿಸಲ್ಪಟ್ಟಿದ್ದರು. ಬೆದೂಯಿನ್ನರ ವ್ಯಾಪ್ತಿ ಉತ್ತರದ ಸಿರಿಯ, ಮೆಸಪೋಟೇಮಿಯ ರಾಜ್ಯಗಳವರೆಗೂ ಇತ್ತು. ದಕ್ಷಿಣ ಅರೇಬಿಯದಲ್ಲಿ ನೆಲೆಸಿದ್ದ ಅರಬ್ಬೀಯರು ಉಚ್ಛ್ರಾಯಸ್ಥಿತಿಯಲ್ಲಿದ್ದಾಗ ಬೆದೂಯಿನ್ನರ ಮೇಲೂ ಅವರ ಸಂಸ್ಕೃತಿಯ ಪ್ರಭಾವ ಕೊಂಚ ಬಿದ್ದಿತ್ತು; ಏಕೆಂದರೆ ಅವರು ಅರೇಬಿಯದ ಮಧ್ಯ ಮತ್ತು ಉತ್ತರ ಭಾಗಗಳಲ್ಲಿ ನೆಲಸುನಾಡುಗಳನ್ನು ನಿರ್ಮಿಸಿಕೊಂಡಿದ್ದರು.

ಪ್ರಸಕ್ತಶಕೆ ಪ್ರಾರಂಭವಾದ ಮೇಲೆ ಅರೇಬಿಯದ ಜನ ಅರೇಮಿಯನ್ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದರು. ಅಲ್ಲಲೇ ವಾಸಿಸುತ್ತಿದ್ದ ಯಹೂದ್ಯರು ಮತ್ತು ಕೈಸರ ಸಂಪರ್ಕದಿಂದ ಈ ಪ್ರಭಾವ ಬಲಗೊಂಡಿತು. ಪ್ರ. ಶಕೆಯ ಮೊದಲಿನ ಎರಡು ಮೂರು ಶತಮಾನಗಳಲ್ಲಿ ಅರೇಮಿಯನ್ ಸಂಸ್ಕೃತಿವನ್ನು ಹೊಂದಿದ್ದ ಕೆಲವು ಸಣ್ಣ ರಾಜ್ಯಗಳು ಹೆಚ್ಚಾಗಿ ಸ್ಥಾಪಿಸಲಟ್ಟುವು. ಇವುಗಳಲ್ಲಿ ಟ್ರಾನ್ಸ್ ಜೊರ್ಡಾನಿನ ನಬಟೆಯನ್ ರಾಜ್ಯ ಮತ್ತು ಎಡೆಸ್ಸ, ಪಾಲ್ಮೈರ ರಾಜ್ಯಗಳು ಮುಖ್ಯವಾದವು. 5ನೆಯ ಶತಮಾನದಿಂದ 7ನೆಯ ಶತಮಾನದವರೆಗಿನ ಅವದಿಯಲ್ಲಿ ಟ್ರಾನ್ಸ್ ಜೋರ್ಡಾನಿನ ದೊರೆಗಳು ಉತ್ತರದ ಬಜಾಂಟೀಯನ್ ದೊರೆಗಳೊಂದಿಗೆ ಮೈತ್ರಿ ಬೆಳೆಸಿಕೊಂಡು ಪ್ರಬಲರಾದರು. ಪೂರ್ವಭಾಗದ ರಾಜ್ಯಗಳು, ಪರ್ಷಿಯದ ಸಸ್ಸೇನಿಯನ್ ದೊರೆಗಳೊಂದಿಗೆ ಮೈತ್ರಿ ಬೆಳೆಸಿದುವು.

ದಕ್ಷಿಣ ಅರೇಬಿಯದ ಜನ ಪ್ರ ಶ.ಪೂ. 6ನೆಯ ಶತಮಾನದಿಂದ 2ನೆಯ ಶತಮಾನದ ವರೆಗೂ ಉಚ್ಛ್ರಾಯ ಸ್ಥಿತಿಯಲ್ಲಿದ್ದರು. ಉತ್ತಮ ರೀತಿಯಲ್ಲಿ ಭೂವ್ಯವಸಾಯ ನಡೆಸುತ್ತಿದ್ದರು. ಸಾಂಬ್ರಾಣಿ ಮುಂತಾದ ಧೂಪದ ವಸ್ತುಗಳನ್ನೂ ಮೆಣಸು ಮುಂತಾದ ಸಾಂಬಾರ ದಿನಸಿಗಳನ್ನೂ ಹೊರದೇಶಗಳಿಗೆ ಕಳುಹಿಸುತ್ತಿದ್ದ ರು. ಭಾರತ ಮತ್ತು ಆಪ್ರಿಕಗಳೊಂದಿಗೆ ವ್ಯಾಪಾರ ಸಂಪರ್ಕವಿತ್ತು. ಆದರೆ ಈಕಾಲದ ಉತ್ತರಾರ್ಧದಲ್ಲಿ ಹಿಮ್ಯಾರೈಟ್ ಎಂಬ ಜನರ ಪ್ರಾಬಲ್ಯ ಹೆಚ್ಚಿ ಇವರ ಅವನತಿ ಪ್ರಾರಂಭವಾಯಿತು. ಮಾರಿಬ್ ಎಂಬ ಭಾರಿ ಜಲಾಶಯದ ಅಣೆಕಟ್ಟೆ ಒಡೆದು ಫಲವತ್ತಾದ ಪ್ರದೇಶಗಳು ನಗರಗಳು ಕೊಚ್ಚಿಹೋದದ್ದು ಈ ಜನರ ಅವನತಿಗೆ ಕಾರಣ ಎಂದು ಹೇಳಲಾಗಿದೆ. ಇವರಲ್ಲಿ ಅನೇಕರು ಉತ್ತರದ ಪ್ರದೇಶಗಳಿಗೆ ವಲಸೆ ಹೋದರು; ಬೆದೂಯಿನ್ ಜನರ ಮೇಲೆ ತಮ್ಮ ಪ್ರಭಾವ ಬೀರಿದರು. ಆದರೆ ಈ ಕಾಲದ ಘಟನೆಗಳ ವಿವರ ಅಸ್ಪಷ್ಟ.

5-6ನೆಯ ಶತಮಾನಗಳು ಅರೇಬಿಯದ ಚರಿತ್ರೆಯಲ್ಲಿ ವೀರಯುಗಗಳೆಂದು ಕೆಲವರು ಭಾವಿಸುತ್ತಾರೆ. ಆ ಕಾಲದ ಬೆದೂಯಿನ್ನರ ಹುರುಪು, ಉತ್ಸಾಹ, ಚೈತನ್ಯ , ಔದಾರ್ಯ, ಭಾತೃತ್ವ, ಅವರ ಸ್ವಾತಂತ್ರ್ಯಪ್ರಿಯತೆ ಮತ್ತು ಪ್ರತಿವೈರ ಸಾಧನೆ - ಇವಲ್ಲ ಆಗಿನ ಕವಿತೆಗಳಲ್ಲಿ ಚಿತ್ರಿತವಾಗಿವೆ. ಎಲ್ಲ ಬೆದೂಯಿನ್ ಜನರೂ ಅಲೆಮಾರಿಜೀವನ ನಡೆಸುತ್ತಿರಲಿಲ್ಲ. ನೆಲೆಸಿ ನಿಂತು ವ್ಯವಸ್ಥಿತ ಜೀವನ ನಡೆಸಿಕೊಂಡು ಬಂದಿದ್ದ ಪಂಗಡಗಳೂ ಕೆಲವು ಕಡೆಗಳಲ್ಲಿ ಇದ್ದವು. ಆದರೆ, ಕುರಾನಿನಲ್ಲಿ ವರ್ಣತವಾಗಿರುವ ಬೆದೂಯಿನ್ ಜೀವನಚಿತ್ರದಲ್ಲಿ ಅವರ ಅನಾಗರೀಕತೆ, ವಂಚನೆ, ಕುಡಿತ, ಹೆಣ್ಣು ಶಿಶುಗಳನ್ನು ಸಜೀವವಾಗಿ ಹೂಳುವುದು, ಸ್ತ್ರೀದಾಸ್ಯ ಮುಂತಾದವೇ ಹೆಚ್ಚಾಗಿ ವರ್ಣಿತವಾಗಿವೆ.

ದಕ್ಷಿಣದ ಯೆಮೆನ್ ಪ್ರಾಂತ್ಯದಲ್ಲಿ ಪ್ರಾಚೀನಕಾಲದ ವೈಭವ ಅಳಿಸಿಹೋಗಿದ್ದರೂ ಹಿಂದಿನ ಸಂಸ್ಕೃತಿ ನಡೆದುಬಂದಿತ್ತು. 525ರಲ್ಲಿ ಇವರು ಅಬಿಸೀನಿಯ (ಇಂದಿನ ಇಥಿಯೋಪಿಯ) ಸೈನ್ಯದ ದಾಳಿವನ್ನು ಎದುರಿಸಬೇಕಾಯಿತು. ಐವತ್ತು ವರ್ಷಗಳ ತರುವಾಯ ಪರ್ಷಿಯದ ಸೈನ್ಯ ನುಗ್ಗಿ ಬಂದು ಅಪಾರ ಕಷ್ಟನಷ್ಟ್ಟಗಳನ್ನುಂಟುಮಾಡಿತು. ಇವೆgಡು ದಾಳಿಗಳ ಪರಿಣಾಮವಾಗಿ ಯೆಮೆನ್ ರಾಜ್ಯ ನಾಶಹೊಂದಿತು. ಹೀಗೆ 7ನೆಯ ಶತಮಾನದವರೆಗೂ ಅರೇಬಿಯ ನಾನಾ ರೀತಿಯ ರಾಜಕೀಯ ವಿಪ್ಲವಗಳಿಗೆ ಸಿಕ್ಕಿ ಐಕ್ಯವನ್ನೇ ಕಂಡಿರಲಿಲ್ಲ. ರೋಮನರು, ಕಾನ್‍ಸ್ಟಾಂಟಿನೋಪಲ್‍ನ ದೊರೆಗಳು, ಪರ್ಷಿಯನ್ನರು, ಅರೇಬಿಯ ತಮಗೆ ಸೇರಿದ್ದೆಂದು ಹೇಳಿಕೊಳ್ಳುತ್ತಾ ಬಂದರು, ಆದರೆ ವಾಸ್ತವವಾಗಿ ಅರಬ್ಬರು ಸ್ವತಂತ್ರರಾಗಿಯೇ ಉಳಿದಿದ್ದರು. ಕ್ರೈಸ್ತರು, ಯಹೂದ್ಯರು, ಪರ್ಷಿಯನ್ನರು ಮುಂತಾದವರ ಮತ, ಸಂಸ್ಕೃತಿಗಳು ಗಡಿ ಪ್ರದೇಶಗಳ ಅರಬ್ಬೀಯರ ಮೇಲೆ ಪ್ರಭಾವ ಬೀರಿದ್ದುವು. ಒಮಾನ್ ಮತ್ತು ಪರ್ಷಿಯ ಕೊಲ್ಲಿ ಪ್ರಾಂತ್ಯಗಳಲ್ಲಿ ವ್ಯಾಪಾರದಲ್ಲಿ ತೊಡಗಿ ಸ್ತಿಮಿತ ಜೀವನ ನಡೆಸುತ್ತಿದ್ದ ಗುಂಪುಗಳಿದ್ದುವು. ಪಶ್ಚಿಮ ಭಾಗದ ಹೆಜಾಜ್ ಮತ್ತು ನೆಜ್ಡ್ ನಂಥ ಮಧ್ಯ ದ ವಿಶಾಲ ತಂಪುಜಾಗಗಳಲ್ಲಿ ಚಿಕ್ಕ ನಗರರಾಜ್ಯಗಳು ಬೆಳೆದಿದ್ದುವು. ಇವುಗಳಲ್ಲಿ ಮದೀನ ಮತ್ತು ಮೆಕ್ಕ ಮುಖ್ಯವಾದುವು. ಮದೀನ ನಗರದಲ್ಲಿ ಯೆಮೆನ್ನಿಂದ ವಲಸೆ ಬಂದು ನೆಲಸಿದ್ದ ಜನರೇ ಹೆಚ್ಚಾಗಿದ್ದರು. ಜನಸಂಖ್ಯೆ ಸು. 15,000. ಮೆಕ್ಕ ಅದಕ್ಕಿಂತ ಕೊಂಚ ದೊಡ್ಡ ನಗರ, ಇವೆರಡೂ ಕಾರವಾನ್ ಮೂಲಕ ನಡೆಯುತ್ತಿದ್ದ ದೊಡ್ಡ ವ್ಯಾಪಾರಕೇಂದ್ರ್ರಗಳೂ ಆಗಿದ್ದವು. ಮೆಕ್ಕ ನಗರದ ಪ್ರಾಮುಖ್ಯ. ಅದು ಅರಬ್ಬೀಯರೆಲರಿಗೂ ಯಾತ್ರಾಸ್ಥಳವಾಗಿದ್ದುದರಿಂದ ಹೆಚ್ಚಾಗಿತು. ಇಲ್ಲಿ ವಾಸಿಸಿದ್ದವರು ಬಹುಮಟ್ಟಿಗೆ ಅರಬ್ಬೀಯರು. ಇವರೆಲ್ಲ ಮೆಕ್ಕದಲ್ಲಿದ್ದ ಕಾಬ ಎಂಬ ಉಲ್ಕಾಶಿಲೆಯೊಂದವನ್ನು ಪೂಜಿಸುತ್ತಿದ್ದರು.

ಬಹುಸಂಖ್ಯಾತ ಅರಬರು ಮೂರ್ತಿಪೂಜೆವನ್ನು ಮಾಡುತ್ತಿದ್ದ ರೂ ಗಡಿ ಪ್ರದೇಶಗಳ ಜನರಲ್ಲಿ ಅನೇಕರು ಕ್ರೈಸ್ತಧರ್ಮದ ಪ್ರಭಾವಕ್ಕೆ ಒಳಗಾಗಿದ್ದುದರಿಂದ ಅನೇಕರ ಮನಸ್ಸು ದೇವರೊಬ್ಬನೇ ಎಂಬ ಕಲ್ಪನೆಯ ಕಡೆಗೆ ಹರಡಿತ್ತು ಎಂದು ಹೇಳಬಹುದು. ಇಂಥವರಲ್ಲಿ ಖುರೈಷ್ ಪಂಗಡವೇ ಮುಖ್ಯವಾದುದು. ಈ ಜನ ವ್ಯಾಪಾರ ನಡೆಸುತ್ತ ಹೊರದೇಶ ಗಳೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಈ ಗುಂಪಿನವನಾದ ಮಹಮ್ಮದ್ ಪೈಗಂಬರನೇ ಅರಬ್ಬೀಯರನ್ನ ಲ್ಲ ಒಟ್ಟುಗೂಡಿಸಿ, ಇಸ್ಲಾಂ ಧರ್ಮವನ್ನು ಸ್ಥಾಪಿಸಿ, ಮುಸ್ಲಿಮರ ಏಳಿಗೆಗೆ ಕಾರಣನಾದ.

ಅವನ ಉಪದೇಶವೇ ಪವಿತ್ರ ಕುರಾನು. ಶಾಂತಿ, ವಿಶ್ವಬಂಧುತ್ವ - ಇವು ಅವನ ಸಂದೇಶದ ತಿರುಳು. ಹಿಂದಿನಿಂದಲೂ ವ್ಯಾಪಾರರಕೇಂದ್ರ್ರವಾಗಿ, ಅರಬ್ಬರೆಲ್ಲ ಸಂಧಿಸುತ್ತಿದ್ದ ಯಾತ್ರಾಸ್ಥಳವಾದ ಮೆಕ್ಕಪಟ್ಟಣ ಹೀಗೆ ಅವರನ್ನು ಒಟ್ಟುಗೂಡಿಸಿ ಅವರಲ್ಲಿ ನವಚೈತನ್ಯ, ಸ್ಫೂರ್ತಿಗಳನ್ನು ತುಂಬಿ ಹೊಸ ರಾಷ್ಟ್ರನಿರ್ಮಾಣಕ್ಕೆ ಯೋಗ್ಯವಾದ ಕೇಂದ್ರ್ರವಾಯಿತು. ಇಸ್ಲಾಂ ರಾಜ್ಯಸ್ಥಾಪನೆ ಆದದ್ದು ಪೈಗಂಬರ್ ಮೆಕ್ಕದಿಂದ ಮದೀನಕ್ಕೆ ಹೋದ ವರ್ಷ (622) ಎಂದು ಹೇಳಬಹುದು. ಏಕೆಂದರೆ, ಆಗಿನಿಂದಲೇ ಆತ ಹೆಜಾಜ್ ಮತ್ತು ನೆಜ್ಡ್ ಜನರಲ್ಲಿ ತನ್ನ ಸಂದೇಶವನ್ನು ಬೀರಿ, ಮೆಕ್ಕ ವರ್ತಕರು ಕಾರವಾನ್ ಮೂಲಕ ನಡೆಸುತ್ತಿದ್ದ ವ್ಯಾಪಾರಕ್ಕೆ ತಡೆಹಾಕುವಂತೆ ಮಾಡಿ, ಕೊನೆಗೆ ಮೆಕ್ಕದ ಜನರೂ ತನಗೆ ಶರಣಾಗತರಾಗುವಂತೆ ಮಾಡುವ ಕಾರ್ಯವನ್ನು ಕೈಗೊಂಡದ್ದು. ಈ ಕೆಲಸಕ್ಕೆ ಎಂಟು ವರ್ಷ ಬೇಕಾಯಿತು.; ಕೊನೆಗೆ 630ರಲ್ಲಿ ಮೆಕ್ಕದ ಜನರೂ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. 632ರಲ್ಲಿ ಆತ ಮರಣಹೊಂದಿದಾಗ ಪಶ್ಚಿಮ ಅರೇಬಿಯದ ಜನರೆಲ್ಲ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು; ಇಸ್ಲಾಂ ರಾಜ್ಯ ಸ್ಥಾಪನೆ ಆಗಿತ್ತು.

ಪೈಗಂಬರನ ತರುವಾಯ ಅವನ ಸ್ಥಾನಕ್ಕೆ ಬಂದು ಅಬೂಬಕರ್‍ನ ಕಾಲದಲ್ಲಿ ಅರೇಬಿಯದ ಪೂರ್ವಭಾಗವೂ ಹೊಸ ಇಸ್ಲಾಂ ರಾಜ್ಯಕ್ಕೆ ಸೇರಿ, ಅರಬ್ಬೀಯರು ಸುತ್ತಲಿನ ರಾಜ್ಯಗಳಲ್ಲೆಲ್ಲ ನುಗ್ಗಿದರು. ಕೆಲವೇ ವರ್ಷಗಳಲ್ಲಿ ಪಶ್ಚಿಮ ಏಷ್ಯದ ಮತ್ತು ಆಫ್ರಿಕದ ಉತ್ತರತೀರ ಪ್ರದೇಶಗಳೂ ಅವರ ಕೈವ±ವಾಗಿ ಇಸ್ಲಾಂ ಚಕ್ರಾದಿಪತ್ಯ ವೇ ನಿರ್ಮಿತವಾಯಿತು. ಅಷ್ಟು ದೂರ ವ್ಯಾಪಿಸಿದ ರಾಜ್ಯವನ್ನಾಳಲು ಮದೀನ ಅನುಕೂಲವಾದ ಕೇಂದ್ರ್ರವಾಗಿರಲಿಲ್ಲ; ಆದ್ದರಿಂದ 660ರಲ್ಲಿ ರಾಜಧಾನಿವನ್ನು ಡಮಾಸ್ಕಸ್‍ಗೆ ವರ್ಗಾಯಿಸಿದರು. 745ರವರೆಗೂ ಉಮ್ಮಾಯಿದ್ ಮನೆತನದ ಅರಸರು ಆಳಿದರು. ಅವರ ಕಾಲದಲ್ಲಿ ಸಾಮ್ರಾಜ್ಯದ ಒಗ್ಗಟಿಗೆ ಭಂಗವುಂಟಾಗಲಿಲ್ಲ. ತರುವಾಯ ಆಳಿದ ಅಬ್ಬಾಸಿದ್ ಕಲೀಫರ ಕಾಲದಲ್ಲಿ ಅರೇಬಿಯದ ಮೇಲೆ ಕೇಂದ್ರ್ರ ಸರ್ಕಾರದ ಹಿಡಿತ ಕಡಿಮೆಯಾಗಿ, ಅಲ್ಲಿನ ಬೆದೂಯಿನ್ ಗುಂಪುಗಳು ಸ್ವತಂತ್ರಜೀವನ ನಡೆಸತೊಡಗಿದುವು. ಎಲ್ಲರೂ ಮುಸ್ಲಿಮರೇ ಆಗಿದ್ದರೂ ಅವರ ಆಚಾರವಿಚಾರಗಳಲ್ಲಿ ವೈವಿಧ್ಯ ಬೆಳೆಯತೊಡಗಿತು. ಅರೇಬಿಯದ ರಾಜಕೀಯ ಏಕತೆ ಮಾಯವಾಯಿತು.

ಯೆಮೆನ್ ಮತ್ತು ಒಮೆನ್ ಪ್ರಾಂತ್ಯಗಳು ಮೊದಲು ಸ್ವತಂತ್ರವಾದವು. ಅಲ್ಲಿನ ಬೆದೂಯಿನ್ನರು ಸುತಲಿನ ಪ್ರಾಂತ್ಯಗಳಿಗೆ ನುಗ್ಗಿ ಲೂಟಿ ದರೋಡೆ ನಡೆಸತೊಡಗಿದರು; ಮೆಕ್ಕ ಯಾತ್ರಿಕರೂ ಇವರ ಹಾವಳಿಗೆ ತ್ತ್ತು.ಾದರು. ಇಸ್ಲಾಂ ಧರ್ಮದ ಜನ್ಮಸ್ಥಳಗಳಾದ ಮೆಕ್ಕ, ಮದೀನ ಮತ್ತು ಅವುಗಳ ಸುತಮುತ್ತಲಿನ ಪ್ರಾಂತ್ಯಗಳ ಮೇಲೆ, ಧರ್ಮಗುರುಗಳು ಎಂಬ ತಮ್ಮ ಗೌರವವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಕಲೀಫರು ತಮ್ಮ ಹತೋಟಿಯನ್ನು ಇಟ್ಟುಕೊಳ್ಳಲೆತ್ನಿಸಿದರು. ಆದರೆ ಆ ಹತೋಟಿ ಹೆಸರಿಗೆ ಮಾತ್ರ. ಅಲ್ಲಿ ಪೈಗಂಬರನ ವಂಶೀಯರಾದ ಷರೀಫರು ಯಾದವೀ ಕಲಹಗಳಲ್ಲಿ ತೊಡಗಿ ಬಹುಮಟ್ಟಿಗೆ ಸ್ವತಂತ್ರರಾಗಿಯೇ ಇದ್ದರು. ಈಜಿಪ್ಟಿನ ದೊರೆಗಳ ಬೆಂಬಲ ತಮ್ಮ ವ್ಯಾಪಾರಕ್ಕೆ ಅತ್ಯವಶ್ಯವಾಗಿದ್ದುದರಿಂದ ಹೆಸರಿಗೆ ಮಾತ್ರ ಅವರಿಗೆ ಪ್ರಭುನಿಷ್ಠಾಪ್ರತಿಜ್ಞೆಯನ್ನು ಸಲ್ಲಿಸುತ್ತಿದ್ದರು. ಯೆಮೆನ್ ಪ್ರಾಂತ್ಯದಲ್ಲೂ ಇದೇ ರೀತಿ ಪರಸ್ಪರ ಕಲಹಗಳಲ್ಲಿ ತೊಡಗಿದ್ದ ಗುಂಪುಗಳು ಇದ್ದವು. 1174ರಲ್ಲಿ ಈಜಿಪ್ಟಿನ ಸುಲ್ತಾನ ಸಲಾವುದ್ದೀನನ ತಮ್ಮ ಈ ಪ್ರಾಂತ್ಯವನ್ನು ಗೆದ್ದು ಸ್ವಾಧೀನಪಡಿಸಿಕೊಂಡ. ಕೊಂಚ ಕಾಲದಲೇ ಆ ಹತೋಟಿ ಸಡಿಲವಾಗಿ ಅಲ್ಲಿನ ಪಂಗಡಗಳಲ್ಲಿ ಪರಸ್ಪರ ಕಲಹಗಳು ಮತ್ತೆ ಪ್ರಾರಂಭವಾದವು. ಏಡನ್ ಮತ್ತು ಅದರ ಸುತ್ತಣ ಪ್ರಾಂತ್ಯಗಳ ಪರಿಸ್ಥಿತಿ ಮಾತ್ರ ಬಹುಮಟ್ಟಿಗೆ ಉತ್ತಮವಾಗಿತ್ತು. ಕೆಂಪು ಸಮುದ್ರ್ರ ಮತ್ತು ಅರಬ್ಬೀ ಸಮುದ್ರಗಳ ಮೇಲಿನ ವ್ಯಾಪಾರಕ್ಕೆ ಇದು ಮಧ್ಯ ಪ್ರದೇಶವಾಗಿದ್ದುದೇ ಇದಕ್ಕೆ ಕಾರಣ. ಜೈದಿ ಷಿಯೈಟರ ಮನೆತನದ ಆಳ್ವಿಕೆಯಲ್ಲಿತ್ತು ಆ ಪ್ರಾಂತ್ಯ. ಒಮೆನ್ ಪ್ರಾಂತ್ಯವನ್ನು ಖಾರಿಜೈಟ್ ಪಂಗಡದವರು ಆಳುತ್ತಿದ್ದರು. ಪರ್ಷಿಯ ಕೊಲ್ಲಿಯ ಮೂಲಕ ನಡೆಯುತ್ತಿದ್ದ ವ್ಯಾಪಾರದಲ್ಲಿ ತೊಡಗಿದ್ದ ಈ ಜನರ ಜೀವನ ಪ್ರತ್ಯೇಕವಾಗಿದ್ದು ಅರೇಬಿಯದ ಇತರ ಭಾಗಗಳೊಂದಿಗೆ ಯಾವ ಸಂಪರ್ಕವನ್ನೂ ಹೊಂದಿರಲಿಲ್ಲ.

15ನೆಯ ಶತಮಾನದಲ್ಲೇ ಮುಸ್ಲಿಮರು ಕಾನ್‍ಸ್ಟ್ಯಾಂಟಿನೋಪಲ್ ಅಥವಾ ಬೈಸಾಂಟಿಯಂ ನಗರವನ್ನು ಸ್ವಾದೀನಪಡಿಸಿಕೊಂಡು ಯುರೋಪಿನೊಳಗೂ ವ್ಯಾಪಿಸತೊಡಗಿ ದರು. ಆಟೋಮನ್‍ರ ಸುಲ್ತಾನರಂದು ಅವರ ಹೆಸರು. 16ನೆಯ ಶತಮಾನದಲ್ಲಿ ಇವರ ಸಾರ್ವಭೌಮತ್ವವನ್ನು ಹೆಜಾಜ್ ಜನರೂ ಒಪ್ಪಿಕೂಂಡರು; ಏಕೆಂದರೆ ಈಜಿಪ್ಟ್ ಕೂಡ ಆ ಸುಲ್ತಾನರ ಕೈವಶವಾಗಿತ್ತು. ಮದೀನಸಲ್ಲೊಬ್ಬ ಪ್ರಾಂತ್ಯಾದಿಕಾರಿವನ್ನು ನೇಮಿಸಲಾಯಿತು. 1536ರಲ್ಲಿ ಯೆಮೆನ್ ಪ್ರಾಂತ್ಯವೂ ಸುಲ್ತಾನರ ಕೈವಶವಾಯಿತು. ಆದರೆ ಮುಂದಿನ ಶತಮಾನದಲ್ಲೇ ಅಲ್ಲಿನ ಜೈದಿಗಳು ಅಲ್ಲಿದ್ದ ಆಟೊಮನ್ ಅಧಿಕಾರಿಗಳನ್ನು ಓಡಿಸಿ ಸ್ವತಂತ್ರರಾದರು. ಅವರ ಆಳ್ವಿಕೆ (19ನೆಯ ಶತಮಾನದಲ್ಲಿ ಕೊಂಚ ಕಾಲ ಹೊರತು) ಇಂದಿನವರೆಗೂ ನಡೆದುಕೊಂಡು ಬಂದಿದೆ. ಆದರೆ ಏಡನ್ ಮತ್ತು ಲಾಹೆಜ್‍ಗಳಲ್ಲಿ ಅಬ್ದಾಲಿಗಳು, ಹಧ್ರಮೌತ್‍ನಲ್ಲಿ ಕಾಥೀರಿಗಳು ಸ್ವತಂತ್ರರಾದರು. ಪೂರ್ವದ ಓಮೆನ್ ಪ್ರಾಂತ್ಯ 16ನೆಯ ಶತಮಾನದಲ್ಲಿ ಪರ್ಷಿಯನ್ ಖಾರಿವನ್ನು ತಮ್ಮ ಹತೋಟಿಗೆ ತಂದುಕೊಂಡ ಪೋರ್ಚುಗೀಸರ ಪ್ರಭಾವಕ್ಕೆ ಸಿಕ್ಕಿತು. ಆದರೆ ಬ್ರಿಟಿಷರ ಸಹಾಯದಿಂದ ಪರ್ಷಿಯನ್ನರು ಅವರನ್ನು ಹೊಡೆದೋಡಿಸಿದರು; ಸ್ಥಳಿಯ ಮುಸ್ಲಿಂ ನಾಯಕರು ಓಮೆನ್ನಿಂದಲೂ ಅವರನ್ನೂ ಓಡಿಸಿದರು. ಈ ಘಟನೆಗಳಿಗೆ ಮುಖ್ಯ ಕಾರಣ, ಅರಬ್ಬೀ ಸಮುದ್ರದ ಮೂಲಕ ಬಹುಕಾಲದಿಂದಲೂ ಅರಬ್ಬೀಯರು ಪೂರ್ವದೇಶಗಳೊಂದಿಗೆ ನಡೆಸುತ್ತಿದ್ದ ವ್ಯಾಪಾರವನ್ನು ವಶಪಡಿಸಿಕೊಳ್ಳುವುದಕ್ಕೆ ಮೊದಲು ಪೋರ್ಚುಗೀಸರು, ಅನಂತರ ಬ್ರಿಟಿಷರು ನಡೆಸಿದ ಸ್ಪರ್ಧೆ.

18ನೆಯ ಶತಮಾನದ ಮಧ್ಯ ಕಾಲ ಕಳೆದ ಅನಂತರ ಅರೇಬಿಯದ ಚರಿತ್ರೆ ಬದಲಾವಣೆ ಹೊಂದಿತು. ವಹಾಬೀ ಎಂಬ ವೀರನಿಯಮಿಗಳಾದ ಮುಸ್ಲಿಂ ಪಂಗಡದವರು ನೆಜ್ಡ್ ಪ್ರಾಂತ್ಯದಲ್ಲಿ ರಾಜ್ಯವೊಂದನ್ನು ಕಟ್ಟಿದರು. ದರೈ ಯದ ಸೌದಿ ಅಮೀರರು ಇವರ ಮುಖಂಡರು. 18ನೆಯ ಶತಮಾನದ ಅಂತ್ಯಕಾಲಕ್ಕೆ ಇವರ ರಾಜ್ಯ ಉತ್ತರ ಅರೇಬಿಯವನ್ನೆಲ್ಲ ಒಳಗೊಂಡು ಸಿರಿಯ ಮತ್ತು ಇರಾಕ್ ದೇಶಗಳವರೆಗೂ ಹರಡಿತು. ಆದರೆ ಇದರಿಂದ ಆಟೊಮನ್ ಸುಲ್ತಾನನ ಅಧೀನನಾಗಿದ್ದ ಈಜಿಪ್ಟಿನ ಸುಲ್ತಾನ್ ಮೆಹಮ್ಮೆಟ್ ಆಲಿಗೂ ಸೌದಿ ಅಮೀರರಿಗೂ ಯುದ್ಧ ಪ್ರಾಪ್ತವಾಯಿತು. ಮೆಹಮ್ಮೆಟ್ ಆಲಿಗೆ ಬ್ರಿಟಿಷರ ಬೆಂಬಲ ಇತ್ತು. ಮೆಕ್ಕ, ಮದೀನ ಮತ್ತು ರಾಜಧಾನಿಯಾದ ದರೈ ಯ ಶತ್ರುಗಳ ಕೈಸೇರಿದುವು; ರಿಯಾದ್ ಎಂಬ ನಗರ ಹೊಸ ರಾಜಧಾನಿಯಾಯಿತು. ಯುದ್ಧ ಬಹುಕಾಲ ನಿಲ್ಲದೆ ಅರೇಬಿಯದ ಈ ಪ್ರಾಂತ್ಯ ಬಹಳ ರಾಜಕೀಯ ಗೊಂದಲಕ್ಕೆ ಸಿಕ್ಕಿತು. ಹತ್ತೊಂಭತ್ತನೆಯ ಶತಮಾನ ಪೂರ್ತ ಈ ಪರಿಸ್ಥಿತಿ ಮುಂದುವರೆಯಿತು. ಕೊನೆಗೆ 1902ರಲ್ಲಿ ಸಮರ್ಥನಾದ ಅಬ್ದುಲ್ ಅಜೀಜ್ ಇಬ್ನ್‍ಸೌದ್ ಎಂಬ ಅಮೀರ ರಾಜಧಾನಿಯಾದ ರಿಯಾದನ್ನು ವಶಪಡಿಸಿಕೊಂಡು ವಹಾಬೀ ರಾಜ್ಯವನ್ನು ಪುನರುಜ್ಜೀವಿತಗೊಳಿಸುವ ಪ್ರಯತ್ನ ಕೈಗೊಂಡ. ತುರ್ಕಿ ಸುಲ್ತಾನರ ಅಧಿಕಾರ ಸಡಿಲವಾದರೂ ಪೂರ್ತ ಹೋಗಿರಲಿಲ್ಲ; 1869 ರಲ್ಲಿ ಸೂಯೆಜ್ ಕಾಲುವೆ ನಿರ್ಮಿತವಾದ ಮೇಲೆ ಅವರು ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳಲೆತ್ನಿಸಿದರು. ಆದರೆ ಬ್ರಿಟಿಷರಿಗೂ ತಮ್ಮ ಸಾಮ್ರಾಜ್ಯ ರಕ್ಷಣೆಗಾಗಿ ಆ ಕಾಲುವೆಯ ಮೇಲೆ ಹತೋಟಿಯನ್ನಿಟ್ಟುಕೊಳ್ಳುವುದು ಅತ್ಯವಶ್ಯವಾಗಿತ್ತು. ಈ ಮಧ್ಯೆ ಮೆಕ್ಕದ ಷರೀಫರು ಪ್ರಬಲರಾಗುತ್ತ ಬಂದರು. ಅವರಲ್ಲಿ ಅತ್ಯಂತ ಸಮರ್ಥನಾದ ಹುಸೇನ್ ಇಬ್ನ್ ಆಲಿ ಕೊಂಚ ಕೊಂಚವಾಗಿ ತನ್ನ ಅಧಿಕಾರವ್ಯಾಪ್ತಿ ವನ್ನು ಹೆಚ್ಚಿಸಿಕೊಳ್ಳುತ್ತ ಬಂದ. ಮೊದಲನೆಯ ಮಹಾಯುದ್ಧಕ್ಕೆ ಮುಂಚೆಯೇ ಇಬ್ನ್ ಸೌದನಿಗೂ ಅವನಿಗೂ ಘರ್ಷಣೆ ಪ್ರಾರಂಭವಾಯಿತು.

ಆಟೊಮನ್ ರಾಜ್ಯದ ಶಕ್ತಿ 18ನೆಯ ಶತಮಾನದಲ್ಲಿ ಕ್ರಮೇಣ ಕುಂದುತ್ತ ಬಂತು. ಪಶ್ಚಿಮ ಅರೇಬಿಯದಲ್ಲಿ ಪ್ರಾಬಲ್ಯ ಬೆಳೆಸಿಕೊಂಡು ತನ್ನ ಸಾಮ್ರಾಜ್ಯರಕ್ಷಣೆಗೆ ಅನುಕೂಲ ಮಾಡಿಕೊಳ್ಳಬೇಕೆಂದು ಇಂಗ್ಲೆಂಡ್ 19ನೆಯ ಶತಮಾನದ ಮೊದಲಿನಿಂದಲೂ ಪ್ರಯತ್ನಿಸುತ್ತ ಬಂದಿತ್ತು. ನೆಪೋಲಿಯನ್ನನೊಡನೆ ನಡೆಸಿದ ಯುದ್ಧದ (1802-15) ಕಾಲದಲ್ಲೆ ಪರ್ಷಿಯ ಕೊಲ್ಲಿಯನ್ನು ತನ್ನ ಹತೋಟಿಗೆ ತಂದುಕೊಂಡಿತು. 1839ರಲ್ಲಿ ಬ್ರಿಟಿಷ್ ಸೈನ್ಯ ಏಡನನ್ನು ವಶಪಡಿಸಿಕೊಂಡಿತು. ಆಟೊಮನ್ ಸುಲ್ತಾನರೂಂದಿಗೂ ಸ್ಥಳೀಯ ಸಮೀರರೂಂದಿಗೂ ಒಪ್ಪಂದಗಳನ್ನು ಮಾಡಿಕೊಂಡು ಅದರ ಉತ್ತರದ ಮತ್ತು ಪೂರ್ವದ ತೀರಪ್ರದೇಶಗಳ ಮೇಲೆ ತನ್ನ ಪ್ರಭಾವ ಬೆಳೆಸಿತು. 1914ರಲ್ಲಿ ಒಂದನೆಯ ಮಹಾಯುದ್ಧ ಪ್ರಾರಂಭವಾದ ಮೇಲೆ, ತುರ್ಕಿ ಸುಲ್ತಾನನಿಗೆ ವಿರೋಧವಾಗಿ ನಿಂತ ಅರಬ್ಬೀ ಅಮೀರರಿಗೆಲ್ಲ ಇಂಗ್ಲೆಂಡಿನ ಸಹಾಯ ದೊರಕಿತು. ಷರೀಫ್ ಹುಸೇನನ ಮಗ ಫೈ ಸಲ್ ಅಕಾಬವನ್ನು ಸ್ವಾದೀನಪಡಿಸಿ ಕೊಂಡ. ಉತ್ತರ ಅರೇಬಿಯದ ಜನ ಅವನೂಂದಿಗೆ ಸೇರಿಕೊಂಡರು. ಫೈ ಸಲ್ ಹೆಜಾಜಿನ ದೊರೆಯಾದ. ಇದರಿಂದ ಇಬ್ನ್ ಸೌದನೂಂದಿಗೆ ಯುದ್ಧ ಪ್ರಾರಂಭವಾಯಿತು. 1924ರಲ್ಲಿ ಮೆಕ್ಕ ಕೂಡ ವಹಾಬಿಗಳ ಕೈಸೇರಿತು.

ನಾಲ್ಕು ಶತಮಾನಗಳ ಕಾಲ ಅರೇಬಿಯ ಆಟೊಮನ್ ಚಕ್ರಾದಿಪತ್ಯ ಕ್ಕೆ ಸೇರಿದ್ದರೂ ಅರೇಬಿಯರು ತಮ್ಮ ಸಂಸ್ಕೃತಿ, ಜೀವನ ಕ್ರಮಗಳನ್ನು ಕಳೆದುಕೊಂಡಿರಲಿಲ್ಲ. ಅವುಗಳನ್ನು ಬೆಳೆಸಬೇಕೆಂಬ ಆಸೆ 19ನೆಯ ಶತಮಾನದಲ್ಲಿ ತೀವ್ರವಾಯಿತು. ಮೊದಲ ಮಹಾಯುದ್ಧಾ ನಂತರ 1919ರಲ್ಲಿ ಆದ ಒಪ್ಪಂದದಲ್ಲಿ ಬ್ರಿಟಿಷರ ಮತ್ತು ಫ್ರೆಂಚರ ಮೇಲ್ವಿಚಾರಣೆಗೆ ಒಳಪಟ್ಟ ಅನೇಕ ಸಣ್ಣ ರಾಜ್ಯಗಳು ನಿರ್ಮಿತವಾದುವು. ಸೌದಿ ಅರೇಬಿಯ ಮತ್ತು ಯೆಮೆನ್ ಮಾತ್ರ ಸ್ವತಂತ್ರ ರಾಜ್ಯಗಳಾಗಿ ಉಳಿದುವು. 1943ರ ಕಾಲಕ್ಕೆ ಇವಲ್ಲ ಸ್ವತಂತ್ರವಾದುವು. 1944ರಲ್ಲಿ ಅರೇಬಿಯದ ಎಲ್ಲಾ ರಾಜ್ಯಗಳ ಸಮ್ಮೇಳನವೊಂದು ನಡೆದು ಅರಬ್ಬೀ ಒಕ್ಕೂಟ ವೊಂದನ್ನು ಸ್ಥಾಪಿಸಬೇಕೆಂದು ತೀರ್ಮಾನವಾಯಿತು. ಮರುವರ್ಷ ಒಪ್ಪಂದವೂ ಆಯಿತು. ಈಗ ಇರುವ ಅರಬ್ಬೀ ರಾಜ್ಯಗಳು-ಸೌದಿ ಅರೇಬಿಯದ, ಯೆಮನ್, ಮಸ್ಕತ್ ಮತ್ತು ಒಮೆನ್, ಬೆಹರೀನ್, ಕುವೈಟ್, ಕ್ವಾತಾರ್, ಕೆಲವು ಷೇಕ್ ರಾಜ್ಯಗಳು ಮತ್ತು ಏಡನ್, ಏಡನ್ ಮಾತ್ರ ಇನ್ನೂ ಬ್ರಿಟಿಷರ ರಕ್ಷಣಾವ್ಯವಸ್ಥೆಗೆ ಸೇರಿದೆ. ಈ ಎಲ್ಲ ರಾಜ್ಯಗಳ ಮುಖ್ಯ ಆಸ್ತಿ ತೈಲ. ಇದಕ್ಕಾಗಿ ಪಶ್ಚಿಮದ ದೊಡ್ಡ ರಾಷ್ರ್ಟಗಳು-ಮುಖ್ಯವಾಗಿ ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲೆಂಡ್-ಅಪಾರ ಹಣ ವೆಚ್ಚ ಮಾಡಿರುವುದರಿಂದ ಆ ಸರ್ಕಾರಗಳ ರಾಜಕೀಯ ಪ್ರಭಾವ ಇದ್ದೇ ಇದೆ. ಏಡೆನ್ನಿನಲ್ಲಿ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ. ಚಳುವಳಿ ನಡೆಯುತ್ತಿದೆ.

ಅರಬ್ಬೀ ಗಣರಾಜ್ಯ (ನೋಡಿ *ಅರಬ್ಬೀ ಗಣರಾಜ್ಯ ) 1958-61 ರವರೆಗೆ ಅಸ್ತಿತ್ವದಲ್ಲಿತ್ತು.

ಭಾರತದಲ್ಲಿ ಅರಬ್ಬೀಯರು[ಬದಲಾಯಿಸಿ]

ಪೈಗಂಬರ್ ಮಹಮ್ಮದನ ಇಸ್ಲಾಂ ಧರ್ಮಬೋಧೆ ಅರಬ್ಬೀಯರಿಗೆ ಹೊಸ ಹುರುಪನ್ನು ಕೊಟ್ಟಿತ್ತು. ಬಾಗ್ದಾದಿನ ಕಲೀಫರ ಕಾಲದಲ್ಲಿ ಏಳನೆಯ ಶತಮಾನ ಮುಗಿಯುವುದರೊಳಗೇ ಅರಬ್ಬರು ಉತ್ತರ ಆಫ್ರಿಕದ ಮೆಡಿಟರೇನಿಯನ್ ತೀರಪ್ರದೇಶಗಳನ್ನಲ್ಲದೆ ಭಾರತದ ವಾಯವ್ಯ ಸರಹದ್ದಿನವರೆಗೂ ಇದ್ದ ಪಶ್ಚಿಮ ಏಷ್ಯ ಪ್ರದೇಶಗಳನ್ನೆಲ್ಲ ವಶಪಡಿಸಿಕೊಂಡಿದ್ದರು. ವ್ಯಾಪಾರಕ್ಕಾಗಿ ಬರುತ್ತಲೇ ಇದ್ದ ಅರಬ್ಬರಿಗೆ ಭಾರತದ ಪರಿಚಯವಿತ್ತು. ಬಲೂಚಿಸ್ತಾನ್ ಮತ್ತು ಆಫ್ಘಾನಿಸ್ತಾನ್ ಪ್ರಾಂತ್ಯಗಳನ್ನು ಗೆದ್ದ ಮೇಲೆ ಭಾರತಕ್ಕೆ ನುಗ್ಗುವ ಯೋಚನೆ ಮಾಡಿದರು. ಆಗ ದಾಹಿರ್ ಸಿಂಧೂದೇಶವನ್ನಾಳುತ್ತಿದ್ದ. ಇರಾಕಿನ ಪ್ರಾಂತ್ಯಾಧಿಪತಿಯಾಗಿದ್ದ ಅಲ್ ಹಜಾಜ್ ಎಂಬುವನು ಸಿಂಧೂ ದೇಶಕ್ಕೆ ಸೈನ್ಯವೊಂದನ್ನು ಕಳುಹಿಸಿದ. ದಾಹಿರ್ ಅದನ್ನು ಸೋಲಿಸಿ ಹಿಮ್ಮೆಟಿಸಿದ. ಇಂಥ ಪ್ರಯತ್ನಗಳು ಹಲವು ನಡೆದು ವಿಫಲವಾದವು. ಕೊನೆಗೆ ಅಲ್ ಹಜಾಜ್ ತನ್ನ ಅಳಿಯ ಮಹಮ್ಮದ್ ಬಿನ್ ಕಾಸಿಂನ ಕೈಕೆಳಗೆ ದೊಡ್ಡ ಸುಸಜ್ಜಿತ ಸೈನ್ಯವೊಂದನ್ನು ಕಳುಹಿಸಿದ. ಸ್ವಧರ್ಮಭ್ರಷ್ಠರಾದ ಕೆಲವು ಅಧಿಕಾರಿಗಳು, ಕೆಲವು ಬೌದ್ಧ ಪುರೋಹಿತರು, ದಾಹಿರ್‍ನನ್ನು ತ್ಯಜಿಸಿ ಶತ್ರುವಿನ ಕಡೆ ಸೇರಿದರು. ಇದರಿಂದ ಸಿಂಧೂನದಿಯವರೆಗಿನ ಪ್ರಾಂತ್ಯಗಳನ್ನು ಗೆದ್ದು ಆ ನದಿಯನ್ನು ದಾಟಿಬರುವುದಕ್ಕೂ ಕಾಸಿಂನಿಗೆ ಅನುಕೂಲವಾಯಿತು. ರಾವೋರ್ ಎಂಬಲ್ಲಿ ಭೀಕರ ಕದನ ನಡೆಯಿತು(712). ದಾಹಿರ್ ಸೋತದ್ದಲ್ಲದೆ ರಣರಂಗದಲ್ಲಿ ಮಡಿದ. ರಾವೋರ್ ಕೋಟೆ ಕಾಸಿಂನ ಕೈವಶವಾಯಿತು. ಸಿಂಧೂರಾಜ್ಯದ ದಕ್ಷಿಣ ಭಾಗವೆಲ್ಲ ಅರಬರ ಸ್ವಾಧೀನವಾ ಯಿತು. ಮುಸ್ಲಿಮರ ಈ ಆಕ್ರಮಣದಿಂದ ಪಶ್ಚಿಮ ಏಷ್ಯದ ರಾಜ್ಯಗಳಿಗೂ ಭಾರತಕ್ಕೂ ನಡುವೆ ಹೆಚ್ಚು ಸಾಂಸ್ಕೃತಿಕ ಸಂಪರ್ಕವೇರ್ಪಡಲು ಅನುಕೂಲವಾಯಿತೆನ್ನ ಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: