ವಿಷಯಕ್ಕೆ ಹೋಗು

ಅಕ್ಕಿನೇನಿ ನಾಗೇಶ್ವರರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಕಿನೇನಿ ನಾಗೇಶ್ವರರಾವ್
Born
ಅಕ್ಕಿನೇನಿ ನಾಗೇಶ್ವರ ರಾವ್

ಸೆಪ್ಟೆಂಬರ್ ೨೦, ೧೯೨೪
ಆಂಧ್ರಪ್ರದೇಶದ ರಾಮಪುರಂ
Diedಜನವರಿ ೨೨, ೨೦೧೪
ಹೈದರಾಬಾದ್
Other namesನಟಸಾಮ್ರಾಟ್
Occupation(s)ನಟ, ನಿರ್ಮಾಪಕ, ಸ್ಟುಡಿಯೋ ಮಾಲೀಕರು
Height5 ft 7 in (170 cm)
Spouseಅನ್ನಪೂರ್ಣ ಅಕ್ಕಿನೇನಿ
Childrenವೆಂಕಟ್ ಅಕ್ಕಿನೇನಿ
ಅಕ್ಕಿನೇನಿ ನಾಗಾರ್ಜುನ
ಸತ್ಯವತಿ ಅಕ್ಕಿನೇನಿ
ನಾಗ ಸುಶೀಲ
ಸರೋಜಾ ಅಕ್ಕಿನೇನಿ

ಅಕ್ಕಿನೇನಿ ನಾಗೇಶ್ವರರಾವ್ (ಸೆಪ್ಟೆಂಬರ್ ೨೦, ೧೯೨೪ - ಜನವರಿ ೨೨, ೨೦೧೪) ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಮ್ಮಾನಿತರಾದ ಕಳೆದ ಶತಮಾನದ ಮಹಾನ್ ಚಲನಚಿತ್ರ ನಟರಲ್ಲಿ ಒಬ್ಬರೆಂದು ಪ್ರಖ್ಯಾತರಾದವರು. ಅಕ್ಕಿನೇನಿ ಅವರು ಪ್ರಧಾನವಾಗಿ ತೆಲುಗು ಚಿತ್ರರಂಗದ ಕಲಾವಿದ, ನಿರ್ಮಾಪಕ ಮತ್ತು ಚಲನಚಿತ್ರ ನಿರ್ಮಾಣ ಸ್ಟುಡಿಯೋ ಮಾಲೀಕರಾಗಿ ಹೆಸರಾದವರು.ಕನ್ನಡದ ಡಾ.ರಾಜಕುಮಾರ್, ತಮಿಳಿನ ಎಂ. ಜಿ. ರಾಮಚಂದ್ರನ್, ಮಲಯಾಳಂನ ಪ್ರೇಮ್ ನಜೀರ್ರವರಿಗೆ ಸಮಕಾಲೀನ ನಟರೂ ಆತ್ಮೀಯ ಸ್ನೇಹಿತರೂ ಆಗಿದ್ದರು.

ಅಕ್ಕಿನೇನಿ ನಾಗೇಶ್ವರರಾವ್ ಅವರು ಆಂಧ್ರಪ್ರದೇಶದ ರಾಮಾಪುರಂ ಎಂಬಲ್ಲಿ ಸೆಪ್ಟೆಂಬರ್ ೨೦, ೧೯೨೪ರ ವರ್ಷದಲ್ಲಿ ಬಡ ರೈತ ಕುಟುಂಬವೊಂದರಲ್ಲಿ ಜನಿಸಿದರು. ತಮ್ಮ ಕುಟುಂಬದ ಬಡತನದ ದೆಸೆಯಿಂದಾಗಿ ಪ್ರೈಮರಿ ಶಾಲೆಯ ನಂತರದಲ್ಲಿ ಅವರಿಗೆ ಓದು ಮುಂದುವರೆಸಲಾಗಲಿಲ್ಲ.

ಚಿತ್ರರಂಗದಲ್ಲಿ

[ಬದಲಾಯಿಸಿ]

ಅಂದಿನ ದಿನಗಳಲ್ಲಿ ನಾಟಕಗಳಲ್ಲಿ ಹೆಣ್ಣುಪಾತ್ರದಲ್ಲಿ ಅಭಿನಯಿಸಿ ಖ್ಯಾತಿ ಪಡೆದ ನಾಗೇಶ್ವರಾವ್ ಅವರು ೧೯೪೧ರ ವರ್ಷದಲ್ಲಿ ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ‘ಧರ್ಮಪತ್ನಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದರು. ತಮ್ಮ ಚಲನಚಿತ್ರ ಜೀವನದ ಸುಮಾರು ೭೫ ವರ್ಷಗಳ ಸುದೀರ್ಘ ಅವಧಿಯಲ್ಲಿ ಒಟ್ಟು ೨೫೬ ಚಿತ್ರಗಳಲ್ಲಿ ನಟಿಸಿದ ಅಕ್ಕಿನೇನಿ ನಾಗೇಶ್ವರರಾವ್ ಅವರ ಪ್ರಸಿದ್ಧ ಚಿತ್ರಗಳಲ್ಲಿ ಮಾಯಾಬಜಾರ್, ಚೆಂಚು ಲಕ್ಷ್ಮಿ, ಶ್ರೀ ಕೃಷ್ಣ ಯುದ್ಧಂ, ಬಾಲರಾಜು, ರೋಜುಲು ಮಾರಾಯಿ, ಮಿಸ್ಸಮ್ಮ, ಚಕ್ರಪಾಣಿ, ಪ್ರೆಮಿಂಚಿ ಚೂಡು, ಲೈಲಾ ಮಜ್ನು, ಅನಾರ್ಕಲಿ, ದೇವದಾಸು, ಬಟಸಾರಿ, ಪ್ರೇಂ ನಗರ್, ಪ್ರೇಮಾಭಿಷೇಕಂ, ಮೇಘ ಸಂದೇಶಂ, ನವರಾತ್ರಿ, ಸಂಸಾರಂ, ಬ್ರತುಕು ತೆರುವು, ಆರಾಧನಾ, ದೊಂಗ ರಾಮುಡು, ಡಾ. ಚಕ್ರವರ್ತಿ, ಅರ್ಧಾಂಗಿ, ಮಾಂಗಲ್ಯ ಬಲಂ, ಇಲ್ಲಾರಿಕಂ, ಶಾಂತಿನಿವಾಸಂ, ವೆಲುಗು ನೀಡಲು, ದಸರಾ ಬುಲ್ಲೋಡು, ಭಾರ್ಯಾ ಭರ್ತುಲು, ಧರ್ಮಧಾತ, ಸೀತಾರಾಮಯ್ಯಗಾರಿ ಮನವರಾಲು ಮುಂತಾದ ಅನೇಕ ಪ್ರಸಿದ್ಧ ಯಶಸ್ವೀ ಚಿತ್ರಗಳು ಸೇರಿವೆ.

ಸಾಂಸ್ಕೃತಿಕ ವೈವಿಧ್ಯತೆ

[ಬದಲಾಯಿಸಿ]

ಕಾಳಿದಾಸ, ಜಯದೇವ, ಜಕ್ಕಣಾಚಾರಿ, ವಿಪ್ರನಾರಾಯಣ, ತುಕಾರಾಂ ಮುಂತಾದ ಭಾರತದ ವಿಭಿನ್ನ ಪ್ರಾದೇಶಿಕ ಸಾಂಸ್ಕೃತಿಕ ಪಾತ್ರಗಳನ್ನು ಸಮರ್ಥವಾಗಿ ಬಿಂಬಿಸಿದ ಕೀರ್ತಿಗೂ ಸಹಾ ಅಕ್ಕಿನೇನಿ ಪಾತ್ರರಾಗಿದ್ದಾರೆ.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಅಕ್ಕಿನೇನಿ ನಾಗೇಶ್ವರರಾವ್ ಅವರಿಗೆ ನಟನೆಗಾಗಿನ ಹಲವಾರು ಆಂಧ್ರಪ್ರದೇಶ ಸರ್ಕಾರದ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಎನ್ ಟಿ ಆರ್ ಪ್ರಶಸ್ತಿ ಗೌರವಗಳಲ್ಲದೆ, ಭಾರತ ಸರ್ಕಾರದ ಎರಡನೇ ಅತ್ಯುಚ್ಛ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ಮತ್ತು ಚಲನಚಿತ್ರ ಸಾಧನೆಗಾಗಿನ ಶ್ರೇಷ್ಠ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. ಇದಲ್ಲದೆ ಅವರು ಬಹುತೇಕ ರಾಷ್ಟ್ರಗಳಲ್ಲಿ ಭಾರತೀಯ ಕಲಾ ಲೋಕದ ಸಾಂಸ್ಕೃತಿಕ ರಾಯಭಾರಿಯಾಗಿ ವಿಶಿಷ್ಟ ಗೌರವಗಳಿಗೆ ಪಾತ್ರರಾಗಿದ್ದರು.

ಪ್ರಖ್ಯಾತ ಪುತ್ರ

[ಬದಲಾಯಿಸಿ]

ಅಕ್ಕಿನೇನಿ ನಾಗೇಶ್ವರರಾವ್ ಅವರ ಪುತ್ರ ನಾಗಾರ್ಜುನ ಅವರು ಕೂಡಾ ಪ್ರಖ್ಯಾತ ಚಲನಚಿತ್ರ ನಟರಾಗಿದ್ದಾರೆ.

ವಿದಾಯ

[ಬದಲಾಯಿಸಿ]

ಅಕ್ಕಿನೇನಿ ನಾಗೇಶ್ವರ ರಾವ್ ಅವರು ಕ್ಯಾನ್ಸರ್ ಕಾಯಿಲೆಯ ಕಾರಣದಿಂದಾಗಿ ಕೆಲವು ತಿಂಗಳುಗಳ ಕಾಲ ಅಸ್ವಸ್ಥತೆ ಅನುಭವಿಸಿದ ನಂತರದಲ್ಲಿ ಜನವರಿ ೨೨, ೨೦೧೪ ರಂದು ಈ ಲೋಕವನ್ನಗಲಿದರು. ಹಳೆಯ ತಲೆಮಾರಿನ ಬಹುತೇಕ ಪ್ರಸಿದ್ಧ ನಾಯಕ ಶ್ರೇಷ್ಠರುಗಳು ನಿರ್ಗಮಿಸಿದ್ದು, ಅಕ್ಕಿನೇನಿ ನಾಗೇಶ್ವರರಾಯರ ನಿಧನದಿಂದ ಸಿನಿಮಾ ಸಾಂಸ್ಕ್ರತಿಕ ಲೋಕ ಮತ್ತಷ್ಟು ಬಡವಾಗಿದೆ.

ಆಕರಗಳು

[ಬದಲಾಯಿಸಿ]
  1. ಅಕ್ಕಿನೇನಿ ಇನ್ನಿಲ್ಲ: NDTV ಸುದ್ಧಿ