ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಚಿಟ್ಟು ಮಡಿವಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಟ್ಟು ಮಡಿವಾಳ
ಕ್ಯಾಂಬಾಯಿಯೆನ್ಸಿಸ್ ಜಾತಿಯ ಗಂಡು
ಕ್ಯಾಂಬಾಯಿಯೆನ್ಸಿಸ್ ಜಾತಿಯ ಹೆಣ್ಣು (ಹರಿಯಾಣ)
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
Lesson, 1831
ಪ್ರಜಾತಿ:
ಸ್ಯಾ. ಫ಼್ಯೂಲಿಕೇಟಸ್
Binomial name
ಸ್ಯಾಕ್ಸಿಕೊಲಾಯ್ಡೀಸ್ ಫ಼್ಯೂಲಿಕೇಟಸ್
(Linnaeus, 1766)
Synonyms

Motacilla fulicata
Saxicoloides fulicata
Thamnobia cambaiensis
Thamnobia fulicata
Sylvia ptymatura

ಚಿಟ್ಟು ಮಡಿವಾಳ (Indian Robin) ಒಂದು ಪಕ್ಷಿ. ಇದು ಹೆಚ್ಚು ಕಡಿಮೆ ಗುಬ್ಬಚ್ಚಿಯ ಗಾತ್ರದ್ದು. ಮಡಿವಾಳ ಹಕ್ಕಿಯ ಸಂಕ್ಷಿಪ್ತ ರೂಪವೆಂದು ಹೇಳಬಹುದಾದ ಈ ಹಕ್ಕಿಯು ಮಸ್ಕಿಕ್ಯಾಪಿಡೇ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಸ್ಯಾಕ್ಸಿಕೊಲಾಡೀಸ್ ಫ಼್ಯೂಲಿಕೇಟಸ್.

ಈ ಪಕ್ಷಿಗಳು ಸಾಮಾನ್ಯವಾಗಿ ಹುಲ್ಲುಛಾವಣಿ, ರಸ್ತೆ ಬದಿಯ ಬೇಲಿ ಪೊದೆಗಳು ಅಥವಾ ಕಲ್ಲುಗಳ ಮೇಲೆ ಕುಳಿತು ಅತ್ತ ಇತ್ತ ತಿರುಗಿ ನೋಡುತ್ತ ಅಹ್ಲಾದಕರ ಸ್ವರಗೈಯ್ಯುತ್ತಿರುತ್ತವೆ. ತೆರೆದ ಬಯಲುಗಾಡುಗಳಲ್ಲಿ ಜೋಡಿಜೋಡಿಯಾಗಿ ಕಾಣಬರುತ್ತದೆ.

ವಿವರಣೆ

[ಬದಲಾಯಿಸಿ]

ಚಿಟ್ಟು ಮಡಿವಾಳ ಗಂಡು ಹಕ್ಕಿಯು ಸಂಪೂರ್ಣ ಕಪ್ಪು ಬಣ್ಣ ಹೊಂದಿದ್ದು, ರೆಕ್ಕೆಗಳ ಮೇಲೆ ಬಿಳಿ ಪಟ್ಟಿ ಇರುತ್ತದೆ. ಕಿಬ್ಬೊಟ್ಟೆ ಮತ್ತು ಬಾಲದ ಬುಡದಲ್ಲಿ ಅಚ್ಚ ಕೆಂಗಂದು ಬಣ್ಣವಿರುತ್ತದೆ. ಉತ್ತರ ಭಾಗದಲ್ಲಿ ಕಂಡುಬರುವ ಗಂಡು ಚಿಟ್ಟು ಮಡಿವಾಳಗಳು ಬೆನ್ನಿನಲ್ಲಿ ಬೂದುಬಣ್ಣವನ್ನು ಹೊಂದಿರುತ್ತವೆ.

ಹೆಣ್ಣು ಹಕ್ಕಿಗಳು ಸಂಪೂರ್ಣವಾಗಿ ಬೂದುಗಂದು ಬಣ್ಣವನ್ನು ಹೊಂದಿದ್ದು, ಕಿಬ್ಬೊಟ್ಟೆ ಮತ್ತು ಬಾಲದ ಬುಡದಲ್ಲಿ ಕೆಂಗಂದು ಬಣ್ಣವನ್ನು ಹೊಂದಿರುತ್ತವೆ. ಬಾಲವನ್ನು ಎತ್ತಿಕೊಂಡು ಓಡಾಡುವುದು ಈ ಹಕ್ಕಿಗಳ ವಿಶೇಷ.

ಕಾಡು ವಿರಳವಾಗಿರುವೆಡೆ ಅಥವಾ ಕುರುಚಲು ಕಾಡುಗಳಲ್ಲಿ ವಾಸಿಸುವ ಈ ಹಕ್ಕಿಗಳು ಜೇಡ, ನೊಣ ಮುಂತಾದ ಕೀಟಗಳನ್ನು ತಿನ್ನುತ್ತವೆ. ಮರಿಗಳಿಗೆ ಆಹಾರ ನೀಡುವ ಸಂದರ್ಭದಲ್ಲಿ ಕಪ್ಪೆ, ಹಲ್ಲಿ, ಓತಿಗಳನ್ನು ಸಹ ಬೇಟೆಯಾಡುತ್ತವೆ.[] ಹೆಚ್ಚಿನದಾಗಿ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಇವು ಆಹಾರಾನ್ವೇಷಣೆ ನಡೆಸುತ್ತವೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಇವುಗಳ ಸಂತಾನೋತ್ಪತ್ತಿ ಸಮಯವು ಸ್ಥಳ ಬದಲಾವಣೆಯಾದಂತೆ ಬದಲಾಗುತ್ತದೆ.ಉತ್ತರ ಭಾರತದಲ್ಲಿ ಇವು ಜೂನ್‍ನಲ್ಲಿ ಅಂದರೆ ಮುಂಗಾರಿನ ಸಮಯದಲ್ಲಿ[] ಸಂತಾನಾಭಿವೃದ್ಧಿ ನಡೆಸಿದರೆ, ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್‌ದಿಂದ ಡಿಸೆಂಬರ್‌ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ಶ್ರೀಲಂಕಾದಲ್ಲಿ ಮಾರ್ಚ್‌ದಿಂದ ಜೂನ್‍ವರೆಗೆ ಮತ್ತು ಅಗಸ್ಟ್‌ದಿಂದ ಸೆಪ್ಟೆಂಬರ್‌ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ.[] ಸಂತಾನ ಋತುವಿನಲ್ಲಿ ಗಂಡು ಪಕ್ಷಿಯು ಮಧುರವಾಗಿ ಸಿಳ್ಳೆ ಹಾಕಿ ಹೆಣ್ಣು ಹಕ್ಕಿಯನ್ನು ಆಕರ್ಷಿಸುತ್ತದೆ. ಗಂಡು ಹಾಡುವಾಗ ತನ್ನ ಎದೆಯನ್ನು ಉಬ್ಬಿಸಿಕೊಂಡು, ಹೆದರಿಸುವಂತೆ ತನ್ನ ದೇಹವನ್ನು ಮೇಲಕ್ಕೆ ಎತ್ತುತ್ತ ಬಾಲ ತನ್ನ ಬೆನ್ನಮೇಲೆ ಪೂರ್ತಿಯಾಗಿ ಬರುವಂತೆ ಮಾಡಿಕೊಳ್ಳುತ್ತದೆ.

ಗೂಡು ಮತ್ತು ಮರಿ ಮಾಡುವಿಕೆ

[ಬದಲಾಯಿಸಿ]

ಚಿಟ್ಟು ಮಡಿವಾಳಗಳು ಹುಲ್ಲು, ಹತ್ತಿ, ಬಟ್ಟೆ ಚೂರು, ಪುಕ್ಕ, ಕೂದಲು, ಹಾವಿನ ಪೊರೆ ಮುಂತಾದವುಗಳನ್ನು ಉಪಯೋಗಿಸಿ ಕಲ್ಲುಗಳ ಬಿರುಕುಗಳಲ್ಲಿ ಅಥವಾ ಗೋಡೆಗಳ ಮೇಲೆ ಅಥವಾ ಭೂಮಿಗೆ ಸಮಾನಾಂತರವಾಗಿ ಟೊಳ್ಳು ರಚಿಸಿ ಗೂಡುಕಟ್ಟಿ ನೀಲಿ ಚುಕ್ಕೆಗಳಿರುವ 3 ರಿಂದ 5 ಮೊಟ್ಟೆಗಳನ್ನಿಡುತ್ತವೆ.[][] ಮೊಟ್ಟೆಗಳಿಗೆ 10 ರಿಂದ 12 ದಿನಗಳವರೆಗೆ ಹೆಣ್ಣು ಹಕ್ಕಿಯು ಮಾತ್ರ ಕಾವು ಕೊಡುತ್ತದೆ.[][] ಮರಿಗಳಿಗೆ ಹೆಣ್ಣು ಮತ್ತು ಗಂಡು ಹಕ್ಕಿಗಳೆರಡೂ ಆಹಾರ ನೀಡುತ್ತವೆ. ಕೆಲವೊಮ್ಮೆ ಗಂಡು ಹಕ್ಕಿಯು ಆಹಾರವನ್ನು ಹೆಣ್ಣಿಗೆ ವರ್ಗಾಯಿಸಿ ನಂತರ ಹೆಣ್ಣು, ಮರಿಗಳಿಗೆ ಆಹಾರ ನೀಡುತ್ತದೆ.[]

ಹರಡುವಿಕೆ ಮತ್ತು ಆವಾಸಸ್ಥಾನ

[ಬದಲಾಯಿಸಿ]

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ವಾಸಿಸುವ ಈ ಹಕ್ಕಿಗಳು ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾಗಳ ಕುರುಚಲು ಕಾಡುಗಳಲ್ಲಿ ಕಾಣಸಿಗುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Sivasubramanian, C (1991). "Frog and lizard in the dietary of the Indian Robin Saxicoloides fulicata (Linn.)". J. Bombay Nat. Hist. Soc. 88 (3): 458.
  2. Betts, F N (1951). "The birds of Coorg. Part 1". J. Bombay Nat. Hist. Soc. 50 (1): 20–63.
  3. Rasmussen PC; Anderton, JC (2005). Birds of South Asia: The Ripley Guide. Volume 2. Smithsonian Institution and Lynx Edicions. p. 396.
  4. Shanbhag, AB; Gramopadhye, A (1996). "Peculiar nesting site and some observations on the breeding behaviour of Indian Robin Saxicoloides fulicata Linn". Newsletter for Birdwatchers. 36 (1): 3–5.
  5. Oates, E. W. 1890 (1889–98). The Fauna of British India, Including Ceylon and Burma. Birds. Volume 2. Taylor and Francis London. pp. 115.{{cite book}}: CS1 maint: numeric names: authors list (link)
  6. Ali, S (1997). The Book of Indian Birds (12th ed.). Oxford University Press. ISBN 978-0-19-563731-1. OCLC 214935260.
  7. Ali, S; S Dillon Ripley (1998). Handbook of the birds of India and Pakistan. Vol. 9 (2nd ed.). Oxford University Press. pp. 61–67.
  8. George, JC (1961). "Parental cooperation in the feeding of nestlings in the Indian Robin". J. Bombay Nat. Hist. Soc. 58 (1): 267–268.


ಬಾಹ್ಯ ಕೊಂಡಿಗಳು

[ಬದಲಾಯಿಸಿ]