ವಿಷಯಕ್ಕೆ ಹೋಗು

ದೋರನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೋರನಹಳ್ಳಿ
ಕ್ರಿಶ್ಚಿಯನ್ ಕೊಪ್ಪಲು
ಹಳ್ಳಿ
Country India
ರಾಜ್ಯಕರ್ನಾಟಕ
ಜಿಲ್ಲೆಮೈಸೂರು
Languages
 • Officialಕನ್ನಡ
Time zoneUTC+5:30 (IST)
ಪಿನ್
571602
Telephone code08223
Nearest cityMysore

ದೋರನಹಳ್ಳಿಯು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಒಂದು ಹಳ್ಳಿ. ಈ ದೋರನಹಳ್ಳಿ ನೂರಕ್ಕೆ ನೂರು ಕ್ರಿಶ್ಚಿಯನ್ನರೇ ನೆಲೆಸಿರುವ ಗ್ರಾಮ. ಸ್ಥಳೀಯವಾಗಿ ಕ್ರಿಶ್ಚಿಯನ್ ಕೊಪ್ಪಲು ಎನಿಸಿಕೊಳ್ಳುವ ಈ ಊರಿಗೆ ಸುಮಾರು ಇನ್ನೂರು ವರ್ಷಗಳ ಇತಿಹಾಸವಿದೆ.

ಹೋಗುವ ದಾರಿ

[ಬದಲಾಯಿಸಿ]

ಮೈಸೂರು ನಗರದಿಂದ ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೨೫ ಕಿಲೋಮೀಟರುಗಳ ನಂತರ, ಹುಣಸೂರುರಸ್ತೆಯಿಂದ ಬಲಕ್ಕೆ ಕವಲೊಡೆಯುವ ರಸ್ತೆಯಲ್ಲಿ ಸಾಗಿ ಸುಮಾರು ಹತ್ತು ಕಿಲೋಮೀಟರು ಅನಂತರ ದೊಡ್ಡೇಕೊಪ್ಪಲು ಎಂಬ ಊರು ಸಿಗುತ್ತದೆ. ಈ ದೊಡ್ಡೇಕೊಪ್ಪಲು ಗ್ರಾಮದ ಬಳಿ ಬಲಕ್ಕೆ ತಿರುಗಿ ಊರು ಹಾಗೂ ತೋಪು ದಾಟಿದ ಕೂಡಲೇ ರಸ್ತೆಯ ತುದಿಯಲ್ಲಿ, ದೂರದಲ್ಲಿ ಬಾನಿಗೆ ಗುರಿಯಿಟ್ಟ ಜೋಡಿಗೋಪುರಗಳು ಕಾಣುತ್ತವೆ. ಅವು ಇಲ್ಲಿಂದ ಮೂರು ಕಿಲೋಮೀಟರು ದೂರದಲ್ಲಿರುವ ಪ್ರಸಿದ್ಧ ದೋರನಹಳ್ಳಿ ಗ್ರಾಮದ ಚರ್ಚ್ ಗೋಪುರ. ಅದೇ ರಸ್ತೆಯಲ್ಲಿ ಮುಂದುವರಿದಂತೆ ಕಾವೇರಿಗೆ ಸೇರುವ ನೀರ ತೊರೆಯೊಂದು ಹರಿವುದನ್ನು ಕಾಣುತ್ತೀರಿ. ಅಲ್ಲೇ ನಿಂತು ಎಡಕ್ಕೆ ದೃಷ್ಟಿ ಹಾಯಿಸಿದರೆ ಅನತಿ ದೂರದಲ್ಲಿ ದಿಬ್ಬದಂತಹ ಸ್ಥಳದಲ್ಲಿ ಭಾರೀ ಮರಗಳ ಗುಂಪು ಇದೆ, ಅದೇ ಪುರಾತನ ದೋರನಹಳ್ಳಿ ಇದ್ದ ಸ್ಥಳ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಸಂಭವಿಸಿದ ಘೋರ ಪ್ಲೇಗ್ ದುರಂತಗಳಲ್ಲಿ ಈ ಊರು ಸರ್ವನಾಶವಾದ ಮೇಲೆ ಕ್ರೈಸ್ತ ಪಾದ್ರಿಗಳ ಪ್ರಯತ್ನದ ಫಲವಾಗಿ ಈಗಿನ ಊರು ಯೋಜಿತವಾಗಿ ಕಟ್ಟಲ್ಪಟ್ಟಿತು.

ಹಿನ್ನೆಲೆ

[ಬದಲಾಯಿಸಿ]

ಅದಕ್ಕಿಂತ ಮುಂಚೆ ಅಂದರೆ ಕ್ರಿಸ್ತಶಕ ೧೮೦೦ರ ಆಚೀಚೆಯ ಆ ದಿನಗಳಲ್ಲಿ ದೋರನಹಳ್ಳಿಯ ರೈತನೊಬ್ಬ ಹೊಲ ಉಳುತ್ತಿರುವಾಗ ಆತನ ನೇಗಿಲಿಗೆ ಏನೋ ಸಿಲುಕಿದಂತಾಯಿತು. ಆ ವಸ್ತುವನ್ನು ಕೈಗೆತ್ತಿಕೊಂಡು ಪರೀಕ್ಷಿಸಲಾಗಿ ಅದೊಂದು ಮನುಷ್ಯಾಕೃತಿಯ ಮರದ ಗೊಂಬೆಯಾಗಿತ್ತು. ಹಲವರ್ಷಗಳ ಕಾಲ ಅದು ನೆಲದೊಳಗಿದ್ದರೂ ಅದಕ್ಕೆ ಗೆದ್ದಲು ಹತ್ತಿರಲಿಲ್ಲ. ರೈತ ಅದನ್ನು ತನ್ನ ಮಕ್ಕಳಿಗೆ ಆಟಿಕೆಯಾದೀತೆಂದು ಬಗೆದು ಬದಿಯಲ್ಲಿರಿಸಿ ಉಳುಮೆ ಮುಂದುವರಿಸಿದ. ಸಂಜೆ ಆ ಗೊಂಬೆ ರೈತನೊಂದಿಗೇ ಮನೆಗೆ ತೆರಳಿ ಆತನ ಮುಗ್ದ ಮಕ್ಕಳ ಕೈಸೇರಿ ನಲುಗಿತು. ಅದೇ ರಾತ್ರಿ ಆ ರೈತನ ಕನಸಿನಲ್ಲಿ ಸಂನ್ಯಾಸಿಯೊಬ್ಬ ದರ್ಶನ ನೀಡಿ ಹೊಲದಲ್ಲಿ ಸಿಕ್ಕಿದ ಆ ಗೊಂಬೆ ತನ್ನ ಪ್ರತಿರೂಪವೆಂದೂ ಅದನ್ನು ಅಪಮಾನಿಸಬಾರದೆಂದೂ ನುಡಿದಂತಾಯಿತು. ರೈತನಿಗೆ ಎಲ್ಲ ಒಳಿತನ್ನೂ ಹರಸಿದಂತಾಯಿತು. ಆದರೆ ಮರುದಿನ ಆ ರೈತ ಕನಸನ್ನು ಮರೆತ ಹಾಗೂ ದೈನಂದಿನ ಕೆಲಸದಲ್ಲಿ ತೊಡಗಿಕೊಂಡ. ನಂತರದ ಕೆಲದಿನಗಳಲ್ಲಿ ಆತ ಎತ್ತುಗಳನ್ನು ಕಳೆದುಕೊಂಡ, ಆಪ್ತರು ತೀರಿಕೊಂಡರು, ಮಕ್ಕಳಿಗೆ ರೋಗ ತಗುಲಿತು. ಈ ಎಲ್ಲ ಘಟನೆಗಳಿಂದ ರೈತ ಬಹುವಾಗಿ ವಿಚಲಿತನಾಗಿ ಹಿಂದಿನ ನೆನಪುಗಳನ್ನು ಒರೆಗೆ ಹಚ್ಚಿದ. ಹಿಂದೊಮ್ಮೆ ತಾನು ಕಂಡ ಕನಸನ್ನು ನೆನೆಸಿಕೊಂಡು ತನ್ನಿಂದಾದ ತಪ್ಪಿಗಾಗಿ ಪರಿತಪಿಸಿದ. ಆ ಸಂನ್ಯಾಸಿಯ ಪ್ರತಿಮೆ ದೊರೆತ ಸ್ಥಳಕ್ಕೆ ತೆರಳಿ ಅದಕ್ಕೊಂದು ಮಂಟಪ ಕಟ್ಟಿ ಅದನ್ನು ಭಕ್ತಿಯಿಂದ ಪೂಜಿಸತೊಡಗಿದ. ಅವನ ದುರ್ದೆಸೆ ಅಳಿದು ಕ್ರಮೇಣ ಆತ ಏಳಿಗೆ ಹೊಂದಿದ. ಅನೇಕ ವರ್ಷಗಳ ನಂತರ ಆ ರೈತ ತನ್ನ ಹೊಲದಲ್ಲಿನ ಪ್ರತಿಮೆಯ ವಸ್ತ್ರವಿನ್ಯಾಸವನ್ನೇ ಹೋಲುವ ಉಡುಪು ತೊಟ್ಟ ಕ್ರೈಸ್ತ ಪಾದ್ರಿಯೊಬ್ಬರನ್ನು ಮೈಸೂರಿನಲ್ಲಿ ಕಂಡ, ಅವರ ಬಳಿ ಸಾಗಿ ತನ್ನ ವೃತ್ತಾಂತವನ್ನು ನಿವೇದಿಸಿಕೊಂಡ. ಅಚ್ಚರಿಗೊಂಡ ಅವರು ಆ ರೈತನ ಕೋರಿಕೆಯ ಮೇರೆಗೆ ದೋರನಹಳ್ಳಿಗೆ ಬಂದು ಹದಿಮೂರ ಅಂಗುಲ ಎತ್ತರದ ಆ ಪ್ರತಿಮೆಯನ್ನು ಪರಿಶೀಲಿಸಿದರು. ಸೂಕ್ಷ್ಮವಾಗಿ ಗಮನಿಸಿದಾಗ ಆ ಪ್ರತಿಮೆ ಫ್ರಾನ್ಸಿಸ್ಕನ್ ಧರ್ಮಪ್ರಚಾರಕ ಸಂಸ್ಥೆಯ ಸಂತ ಅಂತೋಣಿಯ ಪ್ರತಿರೂಪವೆಂದು ಅರಿವಾಯಿತು. ಆ ಪಾದ್ರಿಯು ಮಂಟಪವನ್ನು ಪವಿತ್ರೀಕರಿಸಿ ಚರ್ಚ್ ಆಗಿ ಮಾರ್ಪಡಿಸಿದರು. ತದನಂತರದಲ್ಲಿ ನಡೆದ ಪವಾಡಗಳ ಕಾರಣದಿಂದ ಆ ಊರು ಪ್ರಸಿದ್ಧಿ ಹೊಂದಿತು. ಆ ಯೂರೋಪ್ ನಾಡಿನ ಸಂತ ಅಂತೋಣಿ ತನ್ನ ಜೀವಿತಾವಧಿಯಲ್ಲೂ ಪವಾಡಗಳನ್ನು ಎಸಗಿದ್ದ ಅಂಶ ಇತಿಹಾಸದಿಂದ ತಿಳಿದು ಬರುತ್ತದೆ.

(ಫ್ರಾನ್ಸಿಸ್ಕನ್ ಮಿಷನರಿಗಳು ದಕ್ಷಿಣ ಇಂಡಿಯಾದಲ್ಲಿ ಧರ್ಮಪ್ರಚಾರ ನಡೆಸಿದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಎಂದು ತಿಳಿದುಬರುತ್ತದೆ. ಕ್ರಿಸ್ತಶಕ ೧೬೪೮ ರಿಂದೀಚೆಗೆ ಮೈಸೂರು ಸೀಮೆಯಲ್ಲಿ ಧರ್ಮಪ್ರಚಾರ ನಡೆಸಿದ ಜೆಸ್ವಿತರಿಗೆ ಸಂತ ಫ್ರಾನ್ಸಿಸ್ ಝೇವಿಯರ್ ಹಾಗೂ ಇಗ್ನೇಷಿಯಸ್ ಲೊಯೊಲವರವರು ಅಪ್ಯಾಯಮಾನರಾಗಿದ್ದರು. ಟಿಪ್ಪುಸುಲ್ತಾನನ ಮರಣಾನಂತರ (೧೭೯೯) ಇಲ್ಲಿಗೆ ಬಂದ ಅಬ್ಬೆದ್ಯುಬುವಾ (೧೮೦೩) ಅವರೊಂದಿಗೆ ಮೈಸೂರು ಸೀಮೆಗೆ ಫ್ರೆಂಚ್ ಮಿಷನರಿಗಳ ಪ್ರವೇಶವಾಯಿತು. ಈ ಎಲ್ಲ ಕಾರಣಗಳಿಂದ ಅಂತೋಣಿಯವರ ಪ್ರತಿಮೆಯು ವಿಜಯನಗರ ಸಾಮ್ರಾಜ್ಯದ ಕಾಲಕ್ಕಾಗಲೇ ಈ ಪ್ರದೇಶಕ್ಕೆ ಬಂದಿರಬಹುದು ಎನಿಸುತ್ತದೆ.)

ದೋರನಹಳ್ಳಿ ಬಳಿಯ ಪ್ರಾಚೀನ ಶಿಲುಬೆ

ಸಂತ ಅಂತೋಣಿ

[ಬದಲಾಯಿಸಿ]

ಪೋರ್ಚುಗಲ್ ದೇಶದ ಲಿಸ್ಬನ್ ಪಟ್ಟಣದಲ್ಲಿ ಆಗಸ್ಟ್ ೧೫,೧೧೯೫ ರಲ್ಲಿ ಜನಿಸಿದ ಅಂತೋಣಿಯವರ ಮೂಲ ಹೆಸರು ಫರ್ಡಿನಾಂಡ್. ತಂದೆ ಮಾರ್ಟಿನ್ ಥೀಬಿಯೊರವರು ಆ ಪಟ್ಟಣದ ಉನ್ನತಾಧಿಕಾರಿಯಾಗಿದ್ದರು. ಚಿಕ್ಕವಯಸ್ಸಿನಲ್ಲೇ ಫರ್ಡಿನಾಂಡ್ ಅವರು ಲಿಸ್ಬನ್ನಿನ ಸಂತ ವಿನ್ಚೆಂಸಿ ಕಾನ್ವೆಂಟ್ ಸೇರಿ ಸಂನ್ಯಾಸಿಯಾದರು. ಅಲ್ಲಿದ್ದಾಗ ಪದೇ ಪದೇ ಸ್ನೇಹಿತರೂ ಬಂಧುಗಳೂ ಭೇಟಿ ನೀಡುತ್ತಿದ್ದುರಿಂದ ಬೇಸತ್ತ ಅವರು ಮೇಲಧಿಕಾರಿಗಳ ಅನುಮತಿ ಪಡೆದು ದೂರದ ಕೊಯಿಂಬ್ರ ಎಂಬ ಊರಿನ ಪವಿತ್ರ ಶಿಲುಬೆ ಕಾನ್ವೆಂಟ್ ಸೇರಿ ತಮ್ಮ ಹೆಸರನ್ನು ಅಂತೋಣಿ ಎಂದು ಬದಲಾಯಿಸಿಕೊಂಡರು. ಅಲ್ಲಿಂದ ಅವರನ್ನು ಯಾತ್ರೆಗಾಗಿ ಮೊರೊಕ್ಕೊಗೆ ಕಳಿಸಲಾಯಿತು ಅಲ್ಲಿ ಅವರು ಫ್ರಾನ್ಸಿಸ್ಕನ್ ಸಂಸ್ಥೆಗೆ ಸೇರಿದರು.

ಅಂತೋಣಿಯವರು ಉತ್ತಮ ವಾಗ್ಮಿಯೂ ಚತುರ ಪ್ರತಿಭೆಯೂ ಆಗಿದ್ದರು. ಮೀನುಗಳೂ ಅವರ ಭಾವಪೂರ್ಣ ಮಾತುಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದುದಾಗಿ ದಂತಕಥೆಯಿದೆ. ಒಂದು ರಾತ್ರಿ ಸರಿಹೊತ್ತಿನಲ್ಲಿ ಸಹಪಾಠಿಯೊಬ್ಬರು ಅಂತೋಣಿಯವರ ಕೊಠಡಿಯಿಂದ ಅಪೂರ್ವ ಬೆಳಕು ಹೊಮ್ಮುತ್ತಿರುವುದನ್ನು ಗಮನಿಸಿ ಬಾಗಿಲ ಕಂಡಿಯಿಂದ ಇಣುಕಿ ನೋಡಿದಾಗ ಅಂತೋಣಿಯವರು ಕೈಯಲ್ಲಿ ಹಿಡಿದು ಓದುತ್ತಿದ್ದ ಜಪದ ಪುಸ್ತಕದ ಮೇಲೆ ಬಾಲಕ ಯೇಸುಕ್ರಿಸ್ತನು ಕುಳಿತು ತೊದಲು ನುಡಿಗಳಾಡುತ್ತಿದ್ದರಂತೆ. ಹಾಗಾಗಿ ಸಂತ ಅಂತೋಣಿಯವರ ಸ್ವರೂಪಗಳನ್ನು ಆ ರೀತಿಯಾಗಿಯೇ ಚಿತ್ರಿಸುವುದು ವಾಡಿಕೆಯಾಗಿದೆ. ಅಂತೋಣಿಯವರು ೧೨೩೧ನೇ ಜೂನ್ ೧೩ರಂದು ಪಾದ್ವ ಎಂಬಲ್ಲಿ ತೀರಿಕೊಂಡರು. ನಂತರ ೧೨೩೨ನೇ ಮೇ ೩೦ರಂದು ಪೋಪ್ ಗ್ರೆಗರಿ-೯ ರವರು ಅವರನ್ನು ಸಂತ ಪದವಿಗೇರಿಸಿದರು.

ದೋರನಹಳ್ಳಿ ಚರ್ಚ್

[ಬದಲಾಯಿಸಿ]
ದೋರನಹಳ್ಳಿ ಚರ್ಚಿನ ಪಕ್ಷಿನೋಟ

ಪ್ರತಿಮೆ ದೊರೆತ ಸ್ಥಳದಲ್ಲಿ ರೈತನಿಂದ ಕಟ್ಟಲಾದ ಗುಡಿಯು ಅಳಿದ ಮೇಲೆ ಮಂಗಳೂರಿನ ಚಂದಪ್ಪಶೆಟ್ಟಿ ಎಂಬುವರು ೧೯೭೭ರಲ್ಲಿ ಸುಂದರವಾದ ಪುಟ್ಟ ಗುಡಿ ಕಟ್ಟಿಸಿದ್ದಾರೆ. ಅದರ ಹಿಂಬದಿಯಲ್ಲಿ ಮಣ್ಣು ತುಂಬಿದ ತೊಟ್ಟಿಯಿದ್ದು ಭಕ್ತರು ಅಂತೋಣಿಯವರ ನೆನಪಿಗೆ ಸ್ವಲ್ಪ ಮಣ್ಣನ್ನು ಕಣ್ಣಿಗೊತ್ತಿಕೊಂಡು ತಮ್ಮೂರಿಗೆ ಒಯ್ಯುತ್ತಾರೆ. ೧೯ನೇ ಶತಮಾನದ ನಡುವಿನಲ್ಲಿ ಮತ್ತೊಂದು ಚರ್ಚ್ ಕಟ್ಟಲಾಗಿತ್ತಾದರೂ ಕಾಲಕ್ರಮೇಣ ಅದು ಪಾದ್ರಿಗಳ ನಿವಾಸವಾಯಿತು. ಅದರ ಬದಿಯಲ್ಲೇ ಮತ್ತೊಂದು ಚರ್ಚ್ ಅನ್ನು ದಾನಿಗಳಾದ ಧರ್ಮರಾಜಶೆಟ್ಟಿ ಎಂಬುವರು ೧೯೨೦ರಲ್ಲಿ ಪೂರ್ವಾಭಿಮುಖವಾಗಿ ಕಟ್ಟಿಸಿದರು. ಅದು ಬಹುವಾಗಿ ಬಿರಿಯತೊಡಗಿದಾಗ ಮುಂಭಾಗದ ಗೋಡೆಯನ್ನಷ್ಟೇ ಉಳಿಸಿಕೊಂಡು ೧೯೯೫ರಲ್ಲಿ ಮತ್ತೆ ಕಟ್ಟಲಾಯಿತು. ಈಗ ಈ ಕಟ್ಟಡವನ್ನು ಹಬ್ಬದ ದಿನಗಳಲ್ಲಿ ಹರಕೆಯ ಗುಡಿಯನ್ನಾಗಿಯೂ ಉಳಿದ ದಿನಗಳಲ್ಲಿ ಪ್ರಾರ್ಥನಾಮಂದಿರವಾಗಿಯೂ ಬಳಸಲಾಗುತ್ತಿದೆ. ಇದರ ಹಿಂದೆ ಪಶ್ಚಿಮಾಭಿಮುಖವಾಗಿ ಇರುವ ಹೊಸ ದೇವಾಲಯವನ್ನು ೧೩ನೇ ಜೂನ್ ೧೯೬೯ರಲ್ಲಿ ಪ್ರತಿಷ್ಠಾಪಿಸಲಾಯಿತು. ಟಾವು ಶಿಲುಬೆಯ ಅಂದರೆ ಇಂಗ್ಲಿಷಿನ T ಆಕಾರದಲ್ಲಿರುವ ಈ ಗುಡಿ ವಿಶಾಲವಾಗಿದ್ದು ಸುಮಾರು ಒಂದು ಸಾವಿರ ಮಂದಿಗೆ ಸ್ಥಳ ನೀಡುತ್ತದೆ. ಇದರ ನಿರ್ಮಾಣ ಮೊನ್ಸಿನೊರ್ ಐ ಎಚ್ ಲೋಬೊಅವರಿಂದ ೧೯೬೪ರಲ್ಲಿ ಪ್ರಾರಂಭವಾಗಿ ೧೯೬೯ರಲ್ಲಿ ಫೆಲಿಕ್ಸ್ ತಾವ್ರೊರವರಿಂದ ಸಂಪೂರ್ಣವಾಯಿತು. ರೋಮಿನಿಂದ ತರಿಸಲಾದ ಸಂತ ಅಂತೋಣಿಯವರ ಅವಶೇಷದ ಚೂರನ್ನೂ ಇಲ್ಲಿ ಇಡಲಾಗಿದೆ.

ದೋರನಹಳ್ಳಿ ಜಾತ್ರೆ

[ಬದಲಾಯಿಸಿ]

ದೋರನಹಳ್ಳಿಗೆ ಹರಕೆ ಹೊತ್ತು ಬರುವವರ ದಂಡು ಪ್ರತಿದಿನವೂ ಇರುತ್ತದಾದರೂ ಸಂತನ ಪುಣ್ಯತಿಥಿಯ ದಿನವಾದ ಜೂನ್ ಹದಿಮೂರರಂದು ದೊಡ್ಡಜಾತ್ರೆಯೇ ನೆರೆಯುತ್ತದೆ. ವಿವಿಧ ಊರುಗಳಿಂದ ಎತ್ತಿನ ಗಾಡಿಗಳಲ್ಲಿ ವಾರಮುಂಚಿತವಾಗಿ ಬಂದು ಜಾತ್ರೆ ಮುಗಿಸಿಕೊಂಡು ಹೋಗುವುದು ಕ್ರೈಸ್ತ ಜನಪದರಿಗೆ ಒಂದು ಪದ್ಧತಿಯಾಗಿದೆ. ಅವರ ತ್ರಿಪದಿಗಳಲ್ಲೂ ದೋರನಹಳ್ಳಿ ಒಂದು ಸ್ಥಾನ ಪಡೆದಿದೆ. ಗುದ್ದಾಲಿ ತರಿಸಿರಿ ದಿಬ್ಬಾನೆ ಅಗೆಸಿರಿ
ದಪ್ಪಾನೆ ಡೋಲ ಬಡಿಸಿರಿ ದೋರ್ನಳ್ಳಿ
ದಿಬ್ಬದ ಮ್ಯಾಲೆ ತೇರ ಹರಿಸಿರಿ
ಹಬ್ಬದ ದಿನ ಅಂದರೆ ಜೂನ್ ೧೩ ರಂದು ಇಲ್ಲಿ ಲಕ್ಷಾಂತರ ಜನ ನೆರೆಯುತ್ತಾರಾದ್ದರಿಂದ ಈ ಊರು ಹಾಗೂ ಸುತ್ತಮುತ್ತಲ ಊರುಗಳಲ್ಲಿ ಎಲ್ಲಿ ನೋಡಿದರಲ್ಲಿ ವಾಹನಗಳೂ ಜನಗಳೂ ತುಂಬಿರುತ್ತಾರೆ. ಸರ್ಕಾರವು ಈ ದಿನಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಸ್ತೆಗಳನ್ನು ದುರಸ್ತಿಗೊಳಿಸುತ್ತದೆ, ವಿಶೇಷ ಬಸ್ಸುಗಳನ್ನು ಓಡಿಸುತ್ತದೆ, ಜಲಾಶಯದ ನೀರನ್ನು ಈ ಊರಿನ ಕಾಲುವೆಗಳಲ್ಲಿ ಹರಿಸುತ್ತದೆ, ಸರ್ಕಾರದ ಆರೋಗ್ಯ ಶಿಬಿರಗಳೂ ಪೊಲೀಸು ಠಾಣೆಗಳೂ ತಾತ್ಕಾಲಿಕವಾಗಿ ಇಲ್ಲಿ ಬೀಡುಬಿಡುತ್ತವೆ. ಹಬ್ಬದ ದಿನ ಮೈಸೂರು ಅರಸೀಕೆರೆ ಮಾರ್ಗದಲ್ಲಿ ವಿಶೇಷ ರೈಲುಗಳ ವ್ಯವಸ್ಥೆಯೂ ಇರುತ್ತದೆ. ಅಂದು ದೋರನಹಳ್ಳಿಗೆ ಬರುವ ಎಲ್ಲ ಮಾರ್ಗಗಳೂ ಎಲ್ಲ ರೀತಿಯ ವಾಹನಗಳಿಂದ ತುಂಬಿಹೋಗಿ ದೋರನಹಳ್ಳಿ ಮಾತ್ರವಲ್ಲದೆ ಸುತ್ತಮುತ್ತಲ ಊರುಗಳಲ್ಲಿ ಜನಜಾತ್ರೆ ತುಂಬಿ ತುಳುಕುತ್ತದೆ. ದೋರನಹಳ್ಳಿ ಜಾತ್ರೆ ಎಂದೇ ಕರೆಸಿಕೊಳ್ಳುವ ಇದು ಇತರ ಜಾತ್ರೆಗಳಿಗಿಂತ ತೀರಾ ಭಿನ್ನವಾಗೇನೂ ಇಲ್ಲ. ಹಗ್ಗ ಕಟ್ಟಿ ಎಳೆಯುವ ದೊಡ್ಡ ತೇರಿಲ್ಲ ಎಂಬುದನ್ನು ಬಿಟ್ಟರೆ ಇಲ್ಲಿ ದೈತ್ಯ ಜೋಕಾಲಿಗಳು, ಅಂಗಡಿ ಮುಂಗಟ್ಟೆಗಳು, ಬೆಂಡುಬತ್ತಾಸುಗಳು, ಹೂವು ಬತ್ತಿಗಳು, ಪಟಾಕಿ ಸಿಡಿಮದ್ದುಗಳು, ಹೋಟೆಲುಗಳು, ಮೋಜಿನ ಕೇಂದ್ರಗಳು, ಸರ್ಕಸ್ಸು ಜಾದೂಗಳು, ಬೊಂಬೆ ಆಟಿಕೆಗಳು ಅಪಾರ ಸಂಖ್ಯೆಯಲ್ಲಿರುತ್ತವೆ. ಇವೆಲ್ಲದರ ನಡುವೆ ಜಾತ್ರೆಯ ಕೇಂದ್ರಬಿಂದು ಸಂತ ಅಂತೋಣಿಯವರ ದೇವಾಲಯದಲ್ಲಿ ದಿನವಿಡೀ ಪೂಜೆ ಪ್ರಾರ್ಥನೆಗಳು ನಡೆಯಲಿದ್ದು ಕರ್ನಾಟಕ ಮಾತ್ರವಲ್ಲದೆ ಗೋವಾ, ಕೇರಳ, ತಮಿಳುನಾಡುಗಳಿಂದಲೂ ಬಂದ ಜನರು ಭಕ್ತಿಪೂರ್ವಕವಾಗಿ ಸಂತ ಅಂತೋಣಿಯವರಿಗೆ ಮಣಿದು ಹರಕೆ ತೀರಿಸಿ ಹೋಗುತ್ತಾರೆ.

ಪೂಜಾಸಮಯ

[ಬದಲಾಯಿಸಿ]
ವಾರದ ದಿನಗಳು ಭಾನುವಾರ

೦೬:೩೦

೦೬:೩೦
೧೦:೦೦