ವಿಷಯಕ್ಕೆ ಹೋಗು

ಶಿಲುಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅವಶೇಷಗಳಲ್ಲಿ ಸಿಕ್ಕಿದ ಕಲಾತ್ಮಕ ಕೆತ್ತನೆಯುಳ್ಳ ಶಿಲುಬೆ

ಧಾರ್ಮಿಕ ಸಂಕೇತಗಳ ಪ್ರಸ್ತಾಪ ಬಂದಾಗ ಶಿಲುಬೆಯನ್ನು ಕ್ರೈಸ್ತಧರ್ಮದೊಂದಿಗೆ ವಿಶೇಷವಾಗಿ ಗುರುತಿಸಲಾಗುತ್ತದೆ. ಹಾಗೆ ನೋಡಿದರೆ ಶಿಲುಬೆಗುರುತು ಒಂದು ಮೂಲಭೂತ ವಿನ್ಯಾಸವಾಗಿದ್ದು ಕುಂಬಾರಕಲೆಯಲ್ಲಿ, ನೆಯ್ಗೆಯಲ್ಲಿ, ಕೆತ್ತನೆಯಲ್ಲಿ, ಚಿತ್ರಕಲೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಲೇ ಇರುವುದನ್ನು ಕಾಣುತ್ತೇವೆ. ಅದನ್ನು ಅಲಂಕಾರಕ್ಕಾಗಲೀ ಗುರುತಿಗಾಗಲೀ ಬಳಸಿರುವ ಸಾಧ್ಯತೆ ಇರುತ್ತದೆ.

ಇತಿವೃತ್ತ

[ಬದಲಾಯಿಸಿ]
  • ಜನರ ಗಮನವನ್ನು ಸುಲಭವಾಗಿ ಸೆಳೆಯಲು ಸ್ತಂಭದ ಮೇಲೆ ಬರೆಯುವ, ಸ್ತಂಭದ ತುದಿಯಲ್ಲಿ ಬಾವುಟ ಹಾರಿಸುವ, ಸ್ತಂಭದ ತುದಿಯಲ್ಲಿ ದೀಪ ಬೆಳಗುವ ಪರಿಪಾಠ ಮೊದಲಿನಿಂದಲೂ ಇದೆ. ನಮ್ಮ ಗುಡಿಗಳ ಮುಂದಿನ ಗರುಡಗಂಬ, ಮುಖ್ಯಸ್ಥಳಗಳಲ್ಲಿನ ಧ್ವಜಸ್ತಂಭ, ದಾರಿ ಸೂಚಿಸುವ ಕೈಮರ ಇವುಗಳನ್ನು ಮಾತ್ರವಲ್ಲದೆ ರಾಜನ ಗುರುತಿಗೆ ತೆರೆದು ಹಿಡಿಯುವ ಬೆಳ್ಗೊಡೆ, ರಥದ ಮೇಲಿನ ಬಾವುಟ, ದೇವಾಲಯಗಳ ಗೋಪುರ ಮುಂತಾದವುಗಳನ್ನು ಉದಾಹರಿಸಬಹುದು.
  • ಹಿಂದೆ ಶಿಲುಬೆಯು ಇಂಥ ಗೌರವಯುತ ಲಾಂಛನವಾಗಿರದೆ ಯಕಶ್ಚಿತ್ ನೇಣುಗಂಬದಂತೆ ಅಪಮಾನದ ಲಾಂಛನವಾಗಿತ್ತು. ಆದರೆ ಯೇಸುಕ್ರಿಸ್ತನನ್ನು ಶಿಲುಬೆಗೆ ಹಾಕಿದ ನಂತರ ಅದು ನೇಣುಗಂಬದ ಸ್ಥಾನವನ್ನು ಕಳೆದುಕೊಂಡು ಪೂಜ್ಯ ಲಾಂಛನವಾಗಿ ಮಾರ್ಪಟ್ಟಿದೆ. ಇಂದು ಕ್ರೈಸ್ತರನ್ನು ಶಿಲುಬೆಯಿಂದ ಗುರುತಿಸುವ ಪರಿಪಾಠ ತಾನೇ ತಾನಾಗಿ ಬಳಕೆಗೆ ಬಂದುಬಿಟ್ಟಿದೆ.
  • ಆದರೂ ವಿಶ್ವದ ಹಲವು ಧರ್ಮ ಮತ್ತು ಸಂಸ್ಕೃತಿಗಳಲ್ಲಿ ಶಿಲುಬೆಯ ಬಳಕೆ ಹಾಸುಹೊಕ್ಕಾಗಿದೆ. ಶಿಲುಬೆಯಾಕೃತಿಯು ಪುರಾತನ ಈಜಿಪ್ಟ್ ನಾಡಿಗರಿಗೆ ಜೀವಂತಿಕೆಯ ಸಂಕೇತವಾಗಿತ್ತು. ಚಕ್ರದೊಂದಿಗೆ ಮಿಳಿತವಾಗಿದ್ದ ಶಿಲುಬೆಯನ್ನು ಅನಂತತೆಗೆ ಹೋಲಿಸಲಾಗುತ್ತಿತ್ತು. ಗ್ರೀಕ್ ಶಿಲುಬೆಯು ಸೃಷ್ಟಿಭೂತಗಳಾದ ಭೂಮಿ, ಬೆಂಕಿ, ಗಾಳಿ ಮತ್ತು ನೀರು ಇವುಗಳ ಅಮರತ್ವವನ್ನು ಸಾರುತ್ತಿತ್ತು.

ಗ್ರೀಕ್ ಭಾಷೆಯಲ್ಲಿ

[ಬದಲಾಯಿಸಿ]
  • ಗ್ರೀಕ್ ಭಾಷೆಯಲ್ಲಿ ಕ್ರಿಸ್ತೋಸ್ (ΧΡΙΣΤOΣ) ಎಂಬ ಪದದ ಮೊದಲಕ್ಷರಗಳಾದ 'ಚಿ' (Χ) ಮತ್ತು 'ರೋ' (Ρ) ಇವುಗಳನ್ನು ಸಂಗಮಿಸಿ ಮಾಡಿದ ಲಾಂಛನವನ್ನು ಪೂಜಾವಸ್ತ್ರ, ಪೂಜಾಪಾತ್ರೆ ಹಾಗೂ ಪ್ರಸಾದ ಸಂಪುಟ ಇತ್ಯಾದಿಗಳ ಮೇಲೆ ಕಾಣುತ್ತೇವೆ. ಈ ಲಾಂಛನವು ಮೊದಲ ಕ್ರೈಸ್ತರ ಹಾಗೂ ಬೈಜಾಂಟೈನ್ ಕಲೆಯ ಪ್ರಾತಿನಿಧಿಕ ಸಂಕೇತವಾಗಿದೆ. ಅದೇ ರೀತಿ ಶಿಲುಬೆಯೂ ಕ್ರೈಸ್ತಧರ್ಮದ ಒಂದು ಪ್ರಮುಖ ಚಿಹ್ನೆಯಾಗಿದೆ.
  • ಬಲಗೈಯಿಂದ ಶಿಲುಬೆ ಗುರುತು ಹಾಕುವುದು, ವಿಶ್ವಾಸವನ್ನು ವ್ಯಕ್ತಪಡಿಸುವುದರ ಹಾಗೂ ಪವಿತ್ರೀಕರಿಸುವುದರ ಸಂಕೇತವಾಗಿದೆ. ಮೊದಲ ಕ್ರೈಸ್ತರು ಶಿಲುಬೆಗಳನ್ನು ಕೈಗಳಲ್ಲಿ ಹಿಡಿದುಕೊಂಡೇ ಓಡಾಡುತ್ತಿದ್ದರಂತೆ. ಕ್ರಮೇಣ ಅವು ಪೂಜಾಪೀಠಗಳನ್ನೂ ಬೀದಿಬದಿಯ ಪೂಜಾಮಂಟಪಗಳನ್ನೂ ಅಲಂಕರಿಸಿದವು. ಸಂನ್ಯಾಸಿ ಸಂನ್ಯಾಸಿನಿಯರ ಕುತ್ತಿಗೆಯಲ್ಲೂ ನೇತಾಡತೊಡಗಿದವು. ಶಿಲುಬೆಯಾಕಾರದ ತಳಹದಿಯಲ್ಲೇ ಚರ್ಚುಗಳನ್ನೂ ಕಟ್ಟಲಾಯಿತು.
  • ಕನ್ನಡಕ್ರೈಸ್ತರಲ್ಲಿ ಶಿಲುಬೆ ಎಂಬ ಪದವು ಕಷ್ಟತೊಂದರೆ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಮನೆಯ ಗೋಡೆಯಲ್ಲಿ ಶಿಲುಬೆ ನೇತುಹಾಕಿದರೆ ಆ ಮನೆಯಲ್ಲಿ ತಾಪತ್ರಯ ಯಾತನೆ ಹೆಚ್ಚು ಎಂಬ ನಂಬುಗೆಯಿದೆ. ಮದುವೆ ಮುಂತಾದ ಮಂಗಳಕರ ಸಂದರ್ಭಗಳ ಆಹ್ವಾನಪತ್ರಿಕೆಗಳಲ್ಲಿ ಶಿಲುಬೆ ಬಳಸುವುದಿಲ್ಲ. ಯಾರೂ ಶಿಲುಬೆಯನ್ನು ಉಡುಗೊರೆಯಾಗಿ ಕೊಡುವುದಿಲ್ಲ. ಆದರೆ ಸಾವು, ತಿಥಿ ಮುಂತಾದವುಗಳ ಸಂದರ್ಭಗಳಲ್ಲಿ ಕಪ್ಪುಶಿಲುಬೆಯ ಚಿತ್ರವನ್ನು ಯಥೇಚ್ಛವಾಗಿ ಬಳಸುತ್ತಾರೆ.

ಇತರ ಧರ್ಮಗಳ ಸಂಕೇತವಾಗಿ

[ಬದಲಾಯಿಸಿ]
  • ಸ್ವಸ್ತಿಕ ಶಿಲುಬೆಯಂತೂ ದೇಶಕಾಲಗಳೆನ್ನದೆ ತನ್ನ ಸಂಕೇತವನ್ನು ಮೆರೆದಿದೆ. ಬಲಕ್ಕೆ ಬಾಗಿದ ಅಂಚುಗಳುಳ್ಳ ಸ್ವಸ್ತಿಕ ಶಿಲುಬೆಯು ಸೂರ್ಯ, ಬೆಂಕಿ, ಜೀವ ಮತ್ತು ಅದೃಷ್ಟಗಳನ್ನು ಪ್ರತಿನಿಧಿಸಿವೆ. ಬೌದ್ಧಧರ್ಮದಲ್ಲಿ ಇದು ನಿರ್ವಾಣವನ್ನು ಸೂಚಿಸಿದರೆ, ಜೈನಧರ್ಮದಲ್ಲಿ ಏಳನೆಯ ತೀರ್ಥಂಕರನ ಸಂಕೇತವಾಗಿದೆ.
  • ಎಡಕ್ಕೆ ಬಾಗಿದ ಅಂಚುಗಳುಳ್ಳ ಸ್ವಸ್ತಿಕವು ಹಿಂದೂಗಳಿಗೆ ಅಂಧಕಾರದ, ತಂತ್ರದ ಹಾಗೂ ಕಾಳಿಯ ಸಂಕೇತವಾಗಿದೆ. ಸ್ವಲ್ಪ ಬಲಕ್ಕೆ ವಾಲಿಕೊಂಡ ಸ್ವಸ್ತಿಕವು ಜರ್ಮನ್ ನಾಜಿಗಳ ಲಾಂಛನವಾಗಿತ್ತು.ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಶಿಲುಬೆಗೆ ಅವಮಾನಕರ ದುಃಸ್ಥಿತಿ ಪ್ರಾಪ್ತವಾಗಿತ್ತು. ಕೆಳದರ್ಜೆಯ ಪಾತಕಿಗಳನ್ನು ಗಲ್ಲಿಗೇರಿಸುವುದಕ್ಕಾಗಿ ಇದನ್ನು ಬಳಕೆಗೆ ತಂದುದರಿಂದ ಶಿಲುಬೆಯಾಕೃತಿಯು ಅಮಂಗಳದ ಸಂಕೇತವೆನಿಸಿತ್ತು.
  • ಅಂಥ ಅಪಮಾನದ ಸಾವಿಗೆ ಯೇಸುಕ್ರಿಸ್ತನನ್ನು ದೂಡಿದ ನಂತರ ಆ ಶಿಲುಬೆ ಪವಿತ್ರ ಪಾವನ ಸಂಕೇತವಾಗಿ ಮಾರ್ಪಟ್ಟು ಈ ಎರಡು ಸಾವಿರ ವರ್ಷಗಳಿಂದೀಚೆಗೆ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವಾಗಿ ಪರಿಭಾವಿಸುವ ಚಿಹ್ನೆಯಾಗಿದೆ. ಅದನ್ನು ವಿವಿಧ ರೀತಿಗಳಲ್ಲಿ ಕಲಾತ್ಮಕವಾಗಿ ಕುಸುರಿ ಕೆಲಸಗಳಿಂದಲೂ ಕೆತ್ತನೆಗಳಿಂದಲೂ ಅಲಂಕರಿಸಿ ಆಭರಣಗಳಂತೆ ಬಳಸುತ್ತಿರುವುದನ್ನೂ ನೋಡುತ್ತಿದ್ದೇವೆ.
  • ಕ್ರೈಸ್ತಧರ್ಮದ ಈ ಶಿಲುಬೆಯು ಎಲ್ಲಾ ಕಡೆ ಒಂದೇ ರೀತಿಯಾಗಿಲ್ಲ. ಕಾಲ ಮತ್ತು ದೇಶಗಳು ಬದಲಾದಂತೆ ಶಿಲುಬೆಯ ಆಕಾರವೂ ಬದಲಾಗುತ್ತಾ ಬಂದಿತು. ಟಾವು ಶಿಲುಬೆಯು ಗ್ರೀಕ್ ಅಕ್ಷರ T ಆಕಾರದಲ್ಲಿದ್ದರೆ ಸಾಲ್ಟೇರ್ ಶಿಲುಬೆಯು ಇಂಗ್ಲಿಷಿನ X ಆಕಾರದಲ್ಲಿದೆ. ಲ್ಯಾಟಿನ್ ಶಿಲುಬೆಯಲ್ಲಿ ಅಡ್ಡಪಟ್ಟಿಯು ಲಂಬಪಟ್ಟಿಗಿಂತ ಚಿಕ್ಕದಾಗಿದ್ದು ಮೇಲಕ್ಕೆ ಏರಿದ್ದರೆ, ಗ್ರೀಕ್ ಶಿಲುಬೆಯಲ್ಲಿ ಅಡ್ಡ ಮತ್ತು ಲಂಬಪಟ್ಟಿಗಳೆರಡೂ ಸಮಾನವಾಗಿರುತ್ತವೆ.
  • ರಷ್ಯನ್ ಶಿಲುಬೆಯಲ್ಲಿ ವಿವಿಧ ಗಾತ್ರದ ಎರಡು ಅಡ್ಡಪಟ್ಟಿಗಳಿರುತ್ತವೆ. ಅದನ್ನೇ ಹೋಲುವ ಪೋಪರ ಶಿಲುಬೆಯಲ್ಲಿ ಮೇಲ್ತುದಿಯಲ್ಲೂ ಒಂದು ಚಿಕ್ಕ ಅಡ್ಡಪಟ್ಟಿಯನ್ನೂ ಕಾಣಬಹುದು. ಮಾಲ್ಟೀಸ್ ಶಿಲುಬೆಯು ಗ್ರೀಕ್ ಶಿಲುಬೆಯೇ ಆದರೂ ಶಿಲುಬೆಯ ಮಧ್ಯಭಾಗದಿಂದ ಎರಡು ಕವಲುಗಳು ಇಂಗ್ಲಿಷಿನ V ಆಕಾರದಲ್ಲಿ ಹೊರಟು ಅಡ್ಡ ಪಟ್ಟಿಯ ಎರಡು ತುದಿಗಳನ್ನು ಸೇರುತ್ತವೆ.
  • ಸೆಲ್ಟಿಕ್ ಶಿಲುಬೆಯು ಲ್ಯಾಟಿನ್ ಶಿಲುಬೆಯನ್ನೇ ಹೋಲುವುದಾಗಿದ್ದರೂ ಅಡ್ಡಲಂಬಗಳ ಕೂಡುಸ್ಥಳದ ಸುತ್ತ ಒಂದು ಚಕ್ರ ಇರುತ್ತದೆ. ಇದನ್ನು ಲ್ಯಾಟಿನ್ ಭಾಷೆಯಲ್ಲಿ crux ansata (ಕ್ರುಸ್ ಅನ್ಸತ) ಎನ್ನುತ್ತಾರೆ. ಸ್ವಸ್ತಿಕ ಶಿಲುಬೆಯು ಗ್ರೀಕ್ ಶಿಲುಬೆಯನ್ನೇ ಹೋಲುವುದಾಗಿದ್ದರೂ ಪಟ್ಟಿಗಳ ಕೊನೆಗಳು ಬಾಗಿರುತ್ತವೆ.
  • ಒಂದು ಕೇಂದ್ರಬಿಂದುವಿನಿಂದ ಹೊರಟ ನಾಲ್ಕು ತ್ರಿಭುಜಾಕೃತಿಗಳು ಶಿಲುಬೆಯಾಕೃತಿ ಹೊಂದಿರುವುದನ್ನು ಹಲವೆಡೆ ಕಾಣುತ್ತೇವೆ. ಅವು ಗ್ರೀಕ್ ಶಿಲುಬೆಯ ಹೋಲಿಕೆಯಾಗಿದ್ದು ಅವು ಇಂಡಿಯಾಕ್ಕೆ ಬಂದುದು ಇತ್ತೀಚೆಗೆ ಎಂದು ಹೇಳಬಹುದು. ಇಂಡಿಯಾ ದೇಶಕ್ಕೆ ಜಲಮಾರ್ಗವನ್ನು ಕಂಡು ಹಿಡಿಯುವ ಮೊದಲು ಧರ್ಮಪ್ರಚಾರಕರೆಲ್ಲ ನೆಲಮಾರ್ಗವಾಗಿಯೇ ಬರಬೇಕಿತ್ತು.

ಧರ್ಮಪ್ರಚಾರ

[ಬದಲಾಯಿಸಿ]
  • ಹಾಗೆ ಅವರು ಬಂದಿದ್ದಲ್ಲಿ ಗ್ರೀಕ್ ಸಂಸ್ಕೃತಿಯು ಹರಡಿದ್ದ ಪ್ರದೇಶಗಳನ್ನು ಹಾದು ಬರಬೇಕಿತ್ತಷ್ಟೆ. ಅಂದರೆ ಪೋರ್ಚುಗೀಸರು ಇಂಡಿಯಾಕ್ಕೆ ಬರುವ ಮುನ್ನ ನೆಲಮಾರ್ಗವಾಗಿ ಯಾರೂ ಧರ್ಮಪ್ರಚಾರಕ್ಕಾಗಿ ಬರಲಿಲ್ಲ ಎಂದು ಹೇಳಬೇಕಾಗುತ್ತದೆ.

ಯೆಹೂದ್ಯರು ಪ್ರತಿಮಾರಾಧನೆಗೆ ಇಂಬುಗೊಡುತ್ತಿರಲಿಲ್ಲವಾದ್ದರಿಂದ ಪ್ರಾರಂಭಿಕ ಶಿಲುಬೆಗಳಲ್ಲಿ ಯೇಸುಕ್ರಿಸ್ತನ ದೇಹವನ್ನು ಲಗತ್ತಿಸುತ್ತಿರಲಿಲ್ಲ.

  • ಯೇಸುಕ್ರಿಸ್ತ ಪುನರುತ್ಥಾನವಾದ ನಂತರ ಶಿಲುಬೆ ಬರಿದೇ ಆಯಿತು ಎಂಬುದನ್ನೂ ಅದು ಸೂಚಿಸುತ್ತದೆ. ಕೆಲವು ಶಿಲುಬೆಗಳಲ್ಲಿ ಕುರಿಮರಿಯ ಚಿತ್ರವಿರುವುದನ್ನೂ ನೀವು ಗಮನಿಸಿರಬಹುದು. ಚೊಚ್ಚಲ ಕುರಿಮರಿಯನ್ನು ದೇವರಿಗೆ ಬಲಿಕೊಡುವುದು ಯೆಹೂದ್ಯರಲ್ಲಿ ನಡೆದು ಬಂದ ಪದ್ಧತಿ. ಅಂತೆಯೇ ಯೇಸುಕ್ರಿಸ್ತನನ್ನು ಬಲಿಪಶುವಾಗಿ ಚಿತ್ರಿಸಿದ ಪರಿಯಿದು.
  • ಏಳನೆಯ ಶತಮಾನದಿಂದೀಚೆಗೆ ಯೇಸುಕ್ರಿಸ್ತನ ಆಳೆತ್ತರದ ಪ್ರತಿಮೆಗಳನ್ನು ಮಾಡಿ ಮೆರುಗಿನ ವಸ್ತ್ರಗಳಿಂದ ಅಲಂಕರಿಸಿ ಶಿಲುಬೆಯ ಬದಿಯಲ್ಲಿ ನಿಲ್ಲಿಸುವ ಪರಿಪಾಠ ಮೊದಲಾಯಿತು. ಕ್ರಮೇಣ ಯೇಸುಕ್ರಿಸ್ತನ ಯಾತನೆ ಮತ್ತು ಸಾವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಲುವಾಗಿ ಯೇಸುಕ್ರಿಸ್ತನ ದೇಹವನ್ನು ನೈಜತೆಗೆ ಅತ್ಯಂತ ಹತ್ತಿರವಾಗಿ ರೂಪಿಸುವ ಪದ್ಧತಿ ಬೆಳೆದುಬಂತು.
  • ಮೈಸೂರು ಸೀಮೆಯಲ್ಲಿ ಕ್ರೈಸ್ತ ಧರ್ಮದ ಪ್ರಚಾರ ನಡೆಸಲು ಕ್ರಿಸ್ತಶಕ ೧೬೪೮ರಲ್ಲಿ ಶ್ರೀರಂಗಪಟ್ಟಣಕ್ಕೆ ಆಗಮಿಸಿದ ಇಟಾಲಿಯನ್ ಜೆಸ್ವಿತರು ಊರಿಂದೂರಿಗೆ ಪ್ರಚಾರಗೈಯುತ್ತ ಸಾಗುವಾಗ್ಗೆ ಇಂಥಲ್ಲಿ ಪ್ರಚಾರ ಕಾರ್ಯ ಯಶಸ್ವಿಯಾಗಿ ಮುಗಿದಿದೆ ಎನ್ನುವುದನ್ನು ಸೂಚಿಸ ಲು ಶಿಲುಬೆಕಲ್ಲೊಂದನ್ನು ನೆಡುತ್ತಿದ್ದರು. ಅವುಗಳಲ್ಲಿ ಹೆಚ್ಚಿನವು ಲ್ಯಾಟಿನ್ ಶಿಲುಬೆಗಳೇ ಆಗಿವೆ. ಅವುಗಳ ಮಧ್ಯದ ಕೂಡುಸ್ಥಳದಲ್ಲಿ IHS (ಐಎಚ್‌ಎಸ್) ಎಂಬ ಅಕ್ಷರಗಳಿರುತ್ತವೆ. ಇಯೇಸುಸ್ ಹೊಮಿನೆಸ್ ಸಾಲ್ವೆತೋರುಮ್ (ಯೇಸು ನಮ್ಮ ರಕ್ಷಕ)ಎಂಬುದು ಅದರ ಪೂರ್ಣರೂಪ.
  • ಕೇರಳದ ಕೋಡುಂಗಲ್ಲೂರಿನಲ್ಲಿ ಸಂತ ತೋಮಸರದೆಂದು ಹೇಳಲಾಗುವ ಸ್ಮಾರಕವಿದೆ. ಅಲ್ಲಿನ ಶಿಲುಬೆಯ ಪಟ್ಟಿಗಳ ಕೊನೆಯಲ್ಲಿ ಹೂದಳಗಳಿವೆ. ಶಿಲುಬೆಯ ಪೀಠವು ಅರ್ಧಚಂದ್ರಾಕೃತಿಯ ಪಟ್ಟಿಯ ಮೇಲೆ ಕುಳಿತಿದ್ದು ಆ ಪಟ್ಟಿಯ ಮೊನೆಗಳೂ ಹೂವಿನದಳಗಳನ್ನು ಧರಿಸಿವೆ. ಒಟ್ಟಾರೆ ಶಿಲುಬೆಯು ಹಡಗಿನ ಲಂಗರಿನಂತಿದೆ. ಕೇರಳದ ಚರ್ಚುಗಳಲ್ಲಿ ಇಂದಿಗೂ ಈ ಪ್ರಕಾರದ ಶಿಲುಬೆಗಳನ್ನು ಕಾಣಬಹುದು.
"https://kn.wikipedia.org/w/index.php?title=ಶಿಲುಬೆ&oldid=703224" ಇಂದ ಪಡೆಯಲ್ಪಟ್ಟಿದೆ