ನಾ.ಶ್ರೀ.ರಾಜಪುರೋಹಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾ.ಶ್ರೀ.ರಾಜಪುರೋಹಿತರು ೧೮೮೭ ಜುಲೈ ೧೭ ರಂದು ಹಾವೇರಿ ತಾಲೂಕಿನ ಅಗಡಿಯಲ್ಲಿ ಜನಿಸಿದರು. ಅಗಡಿಯಲ್ಲಿಯೆ ಪ್ರಾಥಮಿಕ ಶಿಕ್ಷಣ ಮುಗಿಸಿ ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ ಮೊದಲಿಗರಾಗಿ ಉತ್ತೀರ್ಣರಾದರು. ಧಾರವಾಡದ ಶಿಕ್ಷಕರ ಟ್ರೇನಿಂಗ ಕಾಲೇಜಿನಲ್ಲಿ ೩ ವರ್ಷದ ತರಬೇತಿ ಮುಗಿಸಿ ೧೯೦೫ರಲ್ಲಿ ಶಿಕ್ಷಕರಾದರು. ೧೯೦೮ರಲ್ಲಿ ಆಲೂರು ವೆಂಕಟರಾಯರು ತೆರೆದ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾದರು. ಮುಂದೆ ಈ ಶಾಲೆ ಬಂದಾದ ಮೇಲೆ ೧೯೧೩ರಲ್ಲಿ ಕಾಶಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದರು.


ಅಧ್ಯಯನ[ಬದಲಾಯಿಸಿ]

ರಾಜಪುರೋಹಿತರು ೧೯೦೮‍ರಿಂದ ೧೯೧೩‍ರವರೆಗಿನ ಸಮಯದಲ್ಲಿ ಆಲೂರು ವೆಂಕಟರಾಯರ ವಾಚನಾಲಯದಲ್ಲಿದ್ದ ಎಲ್ಲ ಗ್ರಂಥಗಳ ಅಧ್ಯಯನ ಮಾಡಿದರು. ೧೯೧೦ರಲ್ಲಿ “ದಾನ, ಧರ್ಮ, ಪದ್ಧತಿ” ಎನ್ನುವ ಕೃತಿ ರಚಿಸಿದರು. ಇದು ತೆಲುಗು ಭಾಷೆಗೂ ಸಹ ಅನುವಾದಗೊಂಡಿತು. ಕಾಶಿಯಿಂದ ಕರ್ನಾಟಕಕ್ಕೆ ಬರುವ ಮೊದಲು ಬರೋಡಾದ ಸಯ್ಯಾಜಿರಾವ ಅವರ ವಾಚನಾಲಯದಲ್ಲಿ ಆಳವಾದ ಅಧ್ಯಯನ ಮಾಡಿದರು.

ಸಂಶೋಧನೆ[ಬದಲಾಯಿಸಿ]

೧೯೧೨ರ ಸುಮಾರಿಗೆ ರಾಜಪುರೋಹಿತರು ಕರ್ನಾಟಕ ಹಾಗು ಮಹಾರಾಷ್ಟ್ರ ವಿಷಯವಾಗಿ ಸಂಶೊಧನಾತ್ಮಕ ಲೇಖನಗಳನ್ನು ಮರಾಠಿಯಲ್ಲಿ ಬರೆದು ಕೇಸರಿ ಪತ್ರಿಕೆಯಲ್ಲಿ ಪ್ರಕಟಿಸಿದರು. ಆನಂತರ ಪಂಢರಪುರವಿಠ್ಠಲನ ಬಗೆಗೆ “ವಿಠ್ಠಲ ಭಕ್ತಿ” ಎನ್ನುವ ಸಂಶೋಧನೆಯನ್ನು ಪ್ರಕಟಿಸಿದರು. ಈ ಎಲ್ಲ ಲೇಖನಗಳಲ್ಲಿ ಮಹಾರಾಷ್ಟ್ರದ ಮೇಲೆ ಆಗಿರುವ ಕರ್ನಾಟಕದ ಪ್ರಭಾವವನ್ನು ವಿವರಿಸಿದ್ದಾರೆ.

೧೯೧೪‍ರ ದಸರೆಯಲ್ಲಿ ರಾಜಪುರೋಹಿತರು ಆಲೂರು ವೆಂಕಟರಾಯರ ಜೊತೆಗೆ ಕೂಡಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವನ್ನು ಸ್ಥಾಪಿಸಿದರು. ಇತಿಹಾಸ ಸಂಶೋಧನೆಗಾಗಿ ಊರೂರು ಅಲೆದು ಶಿಲಾಶಾಸನ, ತಾಳೆಗರಿ ಬರಹ, ತಾಮ್ರಲಿಪಿ ಮೊದಲಾದವುಗಳ ಅಧ್ಯಯನ ಮಾಡಿದರು. ಸಂಶೋಧನೆಗಳ ಪ್ರಕಟಣೆಗೆಂದೇ “ಪ್ರಾಚೀನ ಕರ್ನಾಟಕ” ಎಂಬ ಪತ್ರಿಕೆಯನ್ನು ಹೊರಡಿಸಿದರು.

ಇತಿಹಾಸಕ್ಕೆ ಸಂಬಂಧಿಸಿದಂತೆ ಅವರು ಕನ್ನಡದಲ್ಲಿ ೨೧ ಹಾಗು ಮರಾಠಿಯಲ್ಲಿ ೬ ಲೇಖನಗಳನ್ನು ಬರೆದಿದ್ದಾರೆ. ಇವುಗಳಲ್ಲಿ ವಿದ್ಯಾರಣ್ಯ, ಗೊಮ್ಮಟೇಶ್ವರ, ಕುಮಾರ ರಾಮ, ಇಮ್ಮಡಿ ಪುಲಿಕೇಶಿ, ವಲ್ಲಭ ಮಹಾರಾಜ ಇವರ ಬಗೆಗೆ ಲೇಖನಗಳಿವೆ.ಇವರು ಏಕಾಂಗಿಯಾಗಿ ಉತ್ಖನನ ನಡೆಯಿಸಿ, ವಿಜಯನಗರ ಸಾಮ್ರಾಜ್ಯದ ಪತನದ ಸ್ಥಳವು ತಾಳಿಕೋಟೆಯಲ್ಲ,ರಕ್ಕಸತಂಗಡಗಿ ಎನ್ನುವದನ್ನು ತೋರಿಸಿಕೊಟ್ಟರು.

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ರನ್ನ, ಕುಮಾರವ್ಯಾಸ, ಹರಿಹರ, ಗಜಾಂಕುರ, ಚಾಂಡರಸ, ರತ್ನಾಕರವರ್ಣಿ ಮೊದಲಾದವರ ಕಾಲನಿರ್ಣಯದ ಸಂಶೋಧನೆಗಳಿವೆ.

ಧರ್ಮಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ಯಾಜ್ಞವಲ್ಕ್ಯ, ಸುರೇಶ್ವರಾಚಾರ್ಯ, ಮಧ್ವಾಚಾರ್ಯ ಮೊದಲಾದವರ ಚರಿತ್ರೆಗಳಿವೆ.

ಇವರ ಮರಣಾನಂತರ ಇವರ ಪುತ್ರಿ ಶ್ರೀಮತಿ ಸರೋಜಿನಿ ಕುಲಕರ್ಣಿಯವರು ಇವರ "ಶುಕ್ಲಯಜುರ್ವೇದಿ ಮಹಾತ್ಮರು" ಕೃತಿಸಂಕಲನವನ್ನು ಪ್ರಕಟಿಸಿದ್ದಾರೆ.


ಶ್ರೀ ನಾ.ಶ್ರೀ.ರಾಜಪುರೋಹಿತರು ೧೯೫೩ರಲ್ಲಿ ನಿಧನರಾದರು.