ಆಲೂರು ವೆಂಕಟರಾಯರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆಲೂರು ವೆಂಕಟರಾಯರು -ಆಲೂರು ವೆಂಕಟ ರಾವ್-ಕನ್ನಡ ಸಾಹಿತ್ಯಲೋಕದ ಪ್ರಮುಖರೊಲ್ಲಬ್ಬರು.

ಬಿಜಾಪುರದಲ್ಲಿ ಜನಿಸಿದ ಆಲೂರ್ ವೆಂಕಟರಾಯರು, ಅನೇಕ ಕನ್ನಡ ಪ್ರಮುಖಪತ್ರಿಗೆಗಳನ್ನು ಸಂಪಾದಿಸಿದರು[ಬದಲಾಯಿಸಿ]

ಆಲೂರು ವೆಂಕಟರಾಯರು೧೮೮೦ ,ಜುಲೈ ೧೨ರಂದು ಬಿಜಾಪುರದಲ್ಲಿ ಜನಿಸಿದರು. ತಂದೆ ಭೀಮರಾಯರು, ತಾಯಿ ಭಾಗೀರಥಮ್ಮ. ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ೧೯೦೩ರಲ್ಲಿ ಬಿ.ಏ. ಪದವಿ ಪಡೆದರು. ೧೯೦೫ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು. ಆ ಕಾಲದಲ್ಲಿ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಕನ್ನಡಿಗರನ್ನು ಜಾಗೃತಗೊಳಿಸಲು ವೆಂಕಟರಾಯರು ೧೯೦೬ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. ೧೯೨೨ ನವೆಂಬರ್ ೪ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷಗಳವರೆಗೆ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇದರಂತೆಯೆ ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು.

ಸಾಮಾಜಿಕ ಕಾರ್ಯಗಳಲ್ಲಿ ಮಂಚೂಣಿಯಲ್ಲಿದ್ದರು.[ಬದಲಾಯಿಸಿ]

ಆಲೂರು ವೆಂಕಟರಾಯರು ಆ ಕಾಲದ ಸಾಮಾಜಿಕ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ(ಧಾರವಾಡ), ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ. ೧೯೦೭ರಲ್ಲಿಯೆ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕಾಶಕರಿಗೆ ಅನುಕೂಲವಾಗಲು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ್ದರು.

ಉದ್ಯಮಶೀಲತೆ[ಬದಲಾಯಿಸಿ]

[೧] ಆಲೂರರ ಉದ್ಯಶೀಲತೆ ಅಸಾಧಾರಣವಾದದ್ದು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಬೆಂಕಿಪೆಟ್ಟಿಗೆ ಕಾರಖಾನೆ, ಪೆನ್ಸಿಲ್ ಕಾರಖಾನೆ, ಉಡುಗೆ ಫ್ಯಾಕ್ಟರಿ, ಡ್ರಾಯಿಂಗ್ ಪೆಯಿಂಟಿಂಗ್ ಕ್ಲಾಸು, ಮತ್ತು ಪ್ರಿಂಟಿಂಗ್ ಕ್ಲಾಸುಗಳನ್ನೂ ಪ್ರಾರಂಭಿಸಿದರು. ಆಗಿನ ಬ್ರಿಟಿಷ್ ಆಳ್ವಿಕೆಯ ಹತ್ತಿಕ್ಕುವ ನೀತಿಯಿಂದಾಗಿ ಈ ಸಂಸ್ಥೆಯನ್ನು ಮುಚ್ಚಬೇಕಾಗಿ ಬಂತು. ನಂತರ ಸಕ್ಕರೆ ಕಾರಖಾನೆ, ಬೆಳಗಾವಿಯ ಹತ್ತಿರ ಖಾನಾಪುರದಲ್ಲಿ ಹಂಚಿನ ಕಾರಖಾನೆ,ಹೊಳೆ ಆಲೂರಿನಲ್ಲಿ ಹತ್ತಿಯ ಮಿಲ್ಲು, ಹೀಗೆ ಒಂದಾದಮೇಲೊಂದು ಉದ್ಯಮಗಳನ್ನು ಹುಟ್ಟುಹಾಕಿದರು. ನಂತರ ಮಿತ್ರರೊಂದಿಗೆ ಅಗ್ರಿಕಲ್ಚರಲ್ ಸೊಸೈಟಿ ತೆರೆದರು. ನಂತರ ಬಟ್ಟೆ ಅಂಗಡಿ ತೆರೆದರು. ತದನಂತರ ಮ್ಯೂಚುವಲ್ ಹೆಲ್ಪ್ ಫಂಡ್ ತೆರೆದರು. ದುರದೃಷ್ಟವಶಾತ್ ಇವು ಯಾವುದೂ ಯಶಸ್ವಿಯಾಗಲಿಲ್ಲ. ಈ ಪ್ರಯತ್ನಗಳಲ್ಲಿ ಬರಿಯ ಲಾಭ ಮಾಡಿಕೊಳ್ಳುವ ದೃಷ್ಟಿಯಿರದೆ, ಅವೆಲ್ಲವುಗಳಲ್ಲಿ ಒಂದು ವಿಶಿಷ್ಟ ರಾಷ್ಟ್ರೀಯ ಸೊಗಡಿದ್ದು, ಭಾರತದ ಔದ್ಯೋಗಿಕ ಪ್ರಗತಿಯ ಅಂಗವಾಗಿದ್ದವು.

ಸಾಹಿತ್ಯ[ಬದಲಾಯಿಸಿ]

ಆಲೂರು ವೆಂಕಟರಾಯರು ಸುಮಾರು ಇಪ್ಪತ್ತೈದು ಕೃತಿಗಳನ್ನು ಬರೆದಿದ್ದು ಕೆಲವು ಇಂತಿವೆ: ಶ್ರೀ ವಿದ್ಯಾರಣ್ಯ ಚರಿತ್ರೆ , ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಶಿಕ್ಷಣ ಮೀಮಾಂಸೆ, ರಾಷ್ಟ್ರೀಯತ್ವದ ಮೀಮಾಂಸೆ, ಕನ್ನಡಿಗರ ಭ್ರಮನಿರಸನ(ನಾಟಕ), ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಸ್ವಾತಂತ್ರ್ಯಸಂಗ್ರಾಮ, ಗೀತಾಪ್ರಕಾಶ, ಗೀತಾಸಂದೇಶ, ಗೀತಾಪರಿಮಳ, ಗೀತಾಭಾವ ಪ್ರದೀಪ, ಶ್ರೀ ಮಧ್ವಾಚಾರ್ಯರ ಮೂಲ ಸಿದ್ಧಾಂತ, ಶ್ರೀ ಮಧ್ವಾಚಾರ್ಯರ ಪೂರ್ಣ ಬ್ರಹ್ಮವಾದ. ತಮ್ಮ ಜೀವನದ ಅನುಭವಗಳನ್ನು ನನ್ನ ಜೀವನ ಸ್ಮೃತಿಗಳು ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಿದ್ದಾರೆ. ಲೋಕಮಾನ್ಯ ತಿಲಕರ ಗೀತಾ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಲೂರು ವೆಂಕಟರಾಯರು ೧೯೩೦ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಜನತೆ ಇವರಿಗೆ ದೇಶಸೇವಾಧುರೀಣ , ಸ್ವಭಾಷಾರಕ್ಷಕ ಎಂದು ಕರೆದು ಸನ್ಮಾನಿಸಿದೆ. ಅಲ್ಲದೆ ಕರ್ನಾಟಕದ ಕುಲಪುರೋಹಿತ ಎಂದು ಗೌರವಿಸಿದೆ. ಆಲೂರು ವೆಂಕಟರಾಯರು ೧೯೬೪ಫೆಬ್ರುವರಿ ೨೫ ರಂದು ನಿಧನ ಹೊಂದಿದರು.

ಜಯ ಕರ್ನಾಟಕದ ಲೇಖನ[ಬದಲಾಯಿಸಿ]

ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರು ಉಜ್ವಲ ದೇಶಭಕ್ತರು. ತಮ್ಮ ಬದುಕನ್ನೇ ದೇಶಸೇವೆಗೆ ಮುಡುಪಿಟ್ಟು ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿಯೂ ದುಡಿದವರು. ಕರ್ನಾಟಕದಲ್ಲಿ ಭಾರತವಿದೆ ಎನ್ನುವ ವಿಶಿಷ್ಟ ತತ್ವದ ಮೂಲಕ ನಾಡಿಗೆ ಕರ್ನಾಟಕತ್ವದ ಬೀಜಮಂತ್ರ ಕೊಟ್ಟವರು. ಭಾರತೀಯತೆ ಮತ್ತು ಕರ್ನಾಟಕತ್ವಗಳ ನಡುವಿನ ಸಂಬಂಧಗಳನ್ನು ಸ್ಪಷ್ಟವಾಗಿ ಎಳೆ‍ಎಳೆಯಾಗಿ ಬಿಡಿಸಿಡುವ ರಾಯರು ರಾಷ್ಟ್ರೀಯತೆಯ ಬಗ್ಗೆ ಬರೆದಿರುವ ಕೆಲ ಮಾತುಗಳನ್ನು ನೆನಪಿಸಿಕೊಳ್ಳುವುದು ಸೂಕ್ತವಾಗಿದೆ. ಭಾರತೀಯ ಸಂಸ್ಕೃತಿಯೆಂಬ ಬಂಗಾರ! ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳು, ಬಂಗಾಲ ಮುಂತಾದ ಪ್ರಾಂತಗಳು ಭಿನ್ನ ಭಿನ್ನ ಜೀವಿಗಳೆಂದು ತಿಳಿಯಲು ಅಡ್ಡಿಯಿಲ್ಲ. ಏಕೆಂದರೆ ಆ ಪ್ರಾಂತಗಳು ತಮ್ಮ ತಮ್ಮ ಭಾಷೆಯ ದ್ವಾರದಿಂದ ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ. ತಮ್ಮ ತಮ್ಮ ಸಂಸ್ಕೃತಿಗಳನ್ನು ವಿಶಿಷ್ಟ ಎರಕದಲ್ಲಿ ಹೊಯ್ದುಕೊಂಡಿರುತ್ತವೆ. ಭಾರತೀಯ ಸಂಸ್ಕೃತಿಯೆಂಬ ಬಂಗಾರವನ್ನು ತೆಗೆದುಕೊಂಡು ಅದರಿಂದ, ತಮತಮಗೆ ಇಷ್ಟವಾದ ಆಭರಣಗಳನ್ನು ಮಾಡಿಕೊಂಡಿರುತ್ತವೆ. ಪರಮಾತ್ಮನು ಭಿನ್ನ ಭಿನ್ನ ಜೀವಿಗಳಲ್ಲಿ ಅಂತರ್ಯಾಮಿ ರೂಪದಿಂದ ಇದ್ದಂತೆ, ಭಾರತಮಾತೆಯು ಈ ಭಿನ್ನ ಭಿನ್ನ ಪ್ರಾಂತಗಳಲ್ಲಿ ಅಂತರ್ಯಾಮಿಯಾಗಿದ್ದಾಳೆ. ಕರ್ನಾಟಕದಿಂದ ಭಾರತ! ಪೃಥ್ವಿ ದೇವತೆಗೆ ತನ್ನ ಶಕ್ತಿಯ ಅವಿರ್ಭಾವವಾಗುವುದಕ್ಕೆ ಭಾರತ ಮಾತೆಯ ಅವಶ್ಯಕತೆಯಿದ್ದಂತೆ, ಭಾರತಮಾತೆಗೆ ಕರ್ನಾಟಕ ಮಾತೆಯ ಅವಶ್ಯಕತೆಯಿರುತ್ತದೆ. ಸಾರಾಂಶ, ಜಗತ್ತಿನ ಉದ್ಧಾರವಾಗುವುದಕ್ಕೆ ಭರತಖಂಡವು ಜೀವದಿಂದುಳಿಯುವುದು ಎಷ್ಟು ಅವಶ್ಯವಿರುತ್ತದೆಯೋ ಅಷ್ಟೇ ಭರತ ಖಂಡದ ಉದ್ಧಾರಕ್ಕೆ ಕರ್ನಾಟಕವು ಜೀವದಿಂದುಳಿಯುವುದು ಅವಶ್ಯವಿರುತ್ತದೆ. ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತಗಳು ಇಲ್ಲವೆಂಬುದು ಎಷ್ಟು ನಿಜವೋ ಅಷ್ಟೇ, ಕರ್ನಾಟಕ ಮುಂತಾದ ಪ್ರಾಂತಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜವು. ಭಾರತೀಯನಲ್ಲದವನು ಹೇಗೆ ನಿಜವಾದ ಕರ್ನಾಟಕೀಯನಾಗಲಾರನೋ ಹಾಗೆಯೇ ಕರ್ನಾಟಕೀಯನಲ್ಲದವನು ನಿಜವಾದ ಭಾರತೀಯನಾಗಲಾರನು. ಕರ್ನಾಟಕವು ಕನ್ನಡಿಗರ ದೇಹವು ಮತ್ತು ಜೀವವು. ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದ್ದೋ ಹಾಗೆ, ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಮಾತೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು. ಅವರಿಗೆ ಅನ್ಯಮಾರ್ಗವಿಲ್ಲ. ಅನ್ಯಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು. ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಛಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡುವುದಕ್ಕೆ ಹದಿನಾರಾಣೆ ಕರ್ನಾಟಕತ್ವವನ್ನು ಹೊಂದಿರುವುದರಿಂದ ಮಾತ್ರಾ ಸಾಧ್ಯ. ಅರೆಕೊರೆ ಕರ್ನಾಟಕಸ್ಥರು ಹಾಗೆ ಮಾಡಲಾರರೆಂಬುದು ಸ್ಪಷ್ಟ!! ಕರ್ನಾಟಕಾಂತರ್ಗತ ಭಾರತಮಾತೆಯನ್ನು ಕಾಣಿರಿ! ನಾಳೆ, ಜಗತ್ತೆಲ್ಲವೂ ಒಂದೇ ಧರ್ಮದಿಂದ, ಒಂದೇ ರಾಜ್ಯಪದ್ದತಿಯಿಂದ, ಒಂದೇ ಭಾಷೆಯಿಂದ, ಒಂದೇ ಸಂಸ್ಕೃತಿಯಿಂದ, ಒಂದೇ ತೆರನಾದ ಆಚಾರ ವಿಚಾರಗಳಿಂದ, ಒಂದೇ ತರಹದ ಉಡುಪು ತೊಡಪುಗಳಿಂದ ಬದ್ಧವಾದರೆ ಅದು ಎಷ್ಟು ಸುಂದರವಾಗಿ ಕಂಡೀತು? ನಿಜಕ್ಕೂ ಇದು ಅತ್ಯಂತ ಸ್ಪೃಹಣೀಯವಾದ ಕಲ್ಪನೆಯು. ಈ ಕಲ್ಪನೆಯಲ್ಲಿ ಅದ್ಭುತವಾದ ಶಕ್ತಿಯಿದೆ. ಆದರೆ, ದುರ್ದೈವದಿಂದ, ಅದು ತಪ್ಪು ಕಲ್ಪನೆಯು, ಅಸಾಧ್ಯವಾದ ಕಲ್ಪನೆಯು, ಅದು ಮೃಗಜಲವು. ಹಾಗಾದರೆ ಜಗತ್ತನ್ನು ಒಡೆದು ತುಂಡು ತುಂಡಾಗಿ ಮಾಡಿಬಿಡಬೇಕೋ? ಅವುಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನೇ ಮಾಡಬಾರದೋ? ಜಗತ್ತು ಯಾವಾಗಲೂ ಭಿನ್ನ ಭಿನ್ನ ಪ್ರಾಣಿಗಳ ಬಡಿದಾಟದ ಕ್ಷೇತ್ರವಾಗಿಯೇ ಉಳಿಯಬೇಕೋ ಎಂದು ಕೇಳಿದರೆ ಇಲ್ಲ, ಅದೂ ದೊಡ್ಡತಪ್ಪು. ಒಂದುಗೂಡಿಸುವ ತತ್ವವು ಯಾವಾಗಲೂ ಸ್ತುತ್ಯವೇ. ಒಂದುಗೂಡಿಸುವಾಗ ಜೀವಿಗಳನ್ನು ಕೊಂದು ಒಂದುಗೂಡಿಸಲೆತ್ನಿಸಬಾರದೆಂಬುದೇ ನಮ್ಮ ಅಂಬೋಣದ ಅರ್ಥ. ಜೀವಂತ ಸಂಸ್ಕೃತಿಗಳನ್ನು ಏಕಸೂತ್ರದಿಂದ ಬದ್ಧಮಾಡುವುದು ಪುಣ್ಯವು. ಕರ್ನಾಟಕತ್ವದ ಈ ಸೂತ್ರವನ್ನು ಅನುಸರಿಸಿ, ರಾಷ್ಟ್ರೀಯತ್ವದ ನಿಜವಾದ ಕಲ್ಪನೆಯನ್ನು ಜನತೆಯಲ್ಲಿ ಬೇರೂರಿ ಇಡೀ ಹಿಂದೂಸ್ಥಾನದಲ್ಲಿ ಸನಾತನ ರಾಷ್ಟ್ರೀಯತ್ವವನ್ನು ಪ್ರತಿಷ್ಠಾಪಿಸುವರೆಂದು ಆಶಿಸುತ್ತೇವೆ. ಈ ಮಾತಿನ ಅರಿವಾದರೆ ಅಪರೋಕ್ಷ, ಮರೆವಾದರೆ ವಿನಾಶ. ಕೊನೆಗೆ, ಈ ವಿವಿಧ ಸಂಸ್ಕೃತಿಗಳ ನವರತ್ನದ ಹಾರವನ್ನು ಧರಿಸಿದ - ಅಲ್ಲ, ಮಂಗಳ ಸೂತ್ರವನ್ನು ಕೊರಳಲ್ಲಿ ಕಟ್ಟಿಕೊಂಡ ಕರ್ನಾಟಕಾಂತರ್ಗತ ಭಾರತ ಮಾತೆಗೆ ನಮಸ್ಕರಿಸಿ ಈ ಲೇಖನವನ್ನು ಮುಗಿಸುತ್ತೇವೆ.

ಆಕರಗಳು[ಬದಲಾಯಿಸಿ]

  1. ಕರ್ನಾಟಕ ಏಕೀಕರಣದ ನಾಲ್ವರು ಚಿಂತಕರು, ಮೂಲ:ಕೆ.ರಾಘವೇಂದ್ರ ರಾವ್, ಕನ್ನಡಕ್ಕೆ : ಆರ್ಯ, ಮನೋಹರ ಗ್ರಂಥ ಮಾಲಾ, ಧಾರವಾಡ ,2005 ಪುಟ 98-99

ಕ್ಫ್ಹ್ಜ್ಕ್ಞ್ದ್ಗ್;ಫ್ದ್ಕ್ಲ್ಗ್ ಪ್ಫ್ದ್'ಜ್;'ಘೊ ಜ್]ಹ್ಕ್ಮ್.ವ್ಬ್ಜ್ಫ್ ಮ್