ಬದನೆಕಾಯಿ ಭರ್ತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದನೆಕಾಯಿ ಭರ್ತಾ
ವಿವರಗಳು
ಮುಖ್ಯ ಘಟಕಾಂಶ(ಗಳು)ಬದನೆ, ಈರುಳ್ಳಿ, ಟೊಮೇಟೊ ಮತ್ತು ಸಂಬಾರ ಪದಾರ್ಥಗಳೊಂದಿಗೆ

ಬದನೆಕಾಯಿ ಭರ್ತಾ  ಪಂಜಾಬ್‍ನಲ್ಲಿ ಹುಟ್ಟಿಕೊಂಡ ದಕ್ಷಿಣ ಏಷ್ಯಾದ ಒಂದು ಖಾದ್ಯ. ಬದನೆಕಾಯಿ ಭರ್ತಾ  ಭಾರತ, ಪಾಕಿಸ್ತಾನ, ಮತ್ತು ಬಾಂಗ್ಲಾದೇಶದ ರಾಷ್ಟ್ರೀಯ ಪಾಕಶೈಲಿಗಳ ಭಾಗವಾಗಿದೆ. ಇದು ಒಂದು ಸಸ್ಯಾಹಾರಿ ಖಾದ್ಯವಾಗಿದೆ. ಇದನ್ನು ಇದ್ದಲು ಅಥವಾ ನೇರ ಉರಿ ಮೇಲೆ ಸುಡಲಾದ ಬದನೆಕಾಯಿಯನ್ನು ಕೊಚ್ಚಿ ತಯಾರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಖಾದ್ಯಕ್ಕೆ ಧೂಮದ ಪರಿಮಳ ಬರುತ್ತದೆ. ಸುಟ್ಟು ಹಿಸುಕಿದ ಬದನೆಕಾಯಿಯನ್ನು ನಂತರ ಬೇಯಿಸಲಾದ ಕತ್ತರಿಸಿದ ಟೊಮೇಟೊ, ಕಂದು ಬಣ್ಣಕ್ಕೆ ತಿರುಗಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ತಾಜಾ ಕೊತ್ತಂಬರಿ,ಮೆಣಸಿನಕಾಯಿ, ಮತ್ತು ಸಾಸಿವೆ ಎಣ್ಣೆ ಅಥವಾ ಸೌಮ್ಯವಾದ ತರಕಾರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಲಾಗುತ್ತದೆ.[೧] ಸಾಂಪ್ರದಾಯಿಕವಾಗಿ, ಈ ಖಾದ್ಯವನ್ನು ಹಲವುವೇಳೆ ರೋಟಿ ಅಥವಾ ಪರಾಠಾದೊಂದಿಗೆ ತಿನ್ನಲಾಗುತ್ತದೆ ಮತ್ತು ಅನ್ನ ಅಥವಾ ರಾಯಿತಾದ ಜೊತೆಗೂ ಬಡಿಸಲಾಗುತ್ತದೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ, ಇದನ್ನು ಬಿಸಿಯಾಗಿ "ಲಿಟ್ಟಿ" ಎಂಬ ಪ್ರಸಿದ್ಧ ಖಾದ್ಯದೊಂದಿಗೆ ಬಡಿಸಲಾಗುತ್ತದೆ.

ರೂಪಗಳು[ಬದಲಾಯಿಸಿ]

ಕೆಲವು ಪಂಜಾಬೇತರ ರೂಪಗಳು ಟೊಮೇಟೊ ಮತ್ತು ಕೆಲವೊಮ್ಮೆ ಈರುಳ್ಳಿಯನ್ನೂ ಬಿಟ್ಟುಬಿಡುತ್ತವೆ.

ಕರ್ನಾಟಕದಲ್ಲಿ, ಇದನ್ನು ಎಣ್ಣೆಗಾಯಿ ಎಂದು ಕರೆಯಲಾಗುತ್ತದೆ. ಇದನ್ನು ಇಡಿಯಾದ ಬದನೆಕಾಯಿಯನ್ನು ಬೇಯಿಸಿ ಎಣ್ಣೆ ಸೇರಿಸಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಅಕ್ಕಿ ರೊಟ್ಟಿಯೊಂದಿಗೆ ಬಡಿಸಲಾಗುತ್ತದೆ. ತಮಿಳುನಾಡಿನಲ್ಲಿ, ತಮಿಳರು ಕತ್ರಿಕಾಯಿ ತಯಿರ್ ಕೋತ್ಸು ಎಂಬ ಹೆಸರಿನ ಇದಕ್ಕೆ ಹೋಲುವ ಭಕ್ಷ್ಯವನ್ನು ತಯಾರಿಸುತ್ತಾರೆ. ಇದರಲ್ಲಿ ಬದನೆಕಾಯಿಯನ್ನು ಬೇಯಿಸಿ, ಹಿಸುಕಿ, ಸಾಸಿವೆ, ಕೆಂಪು ಮೆಣಸಿನಕಾಯಿ ಹಾಗೂ ಎಳ್ಳೆಣ್ಣೆಯೊಂದಿಗೆ ಸೇರಿಸಿ ಬಿಸಿ ಮಾಡಲಾಗುತ್ತದೆ. ಅಂತಿಮ ಹಂತದಲ್ಲಿ ಮಿಶ್ರಣಕ್ಕೆ ಮೊಸರನ್ನು ಸೇರಿಸಿ ಕೊತ್ತಂಬರಿ ಎಲೆಗಳಿಂದ ಅಲಂಕರಿಸಲಾಗುತ್ತದೆ.

ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಉತ್ತರ ಖಾಂದೇಶ್ ಪ್ರದೇಶದಲ್ಲಿ, ಇದರ ಹೆಸರು ವಾಂಗ್ಯಾಚೆ ಭರಿತ್. ಇದನ್ನು ವಿವಾಹ ಸಮಾರಂಭಗಳು ಸೇರಿದಂತೆ ಸಾಮಾಜಿಕ ಕೂಟಗಳಲ್ಲಿ ಬಡಿಸಲಾಗುತ್ತದೆ. ಸುಗ್ಗಿಯ ಋತುವಿನಲ್ಲಿ, ವಿಶೇಷ ಭರಿತ್ ಕೂಟವನ್ನು ಆಯೋಜಿಸಲಾಗುತ್ತದೆ. ಭರಿತ್ ಅನ್ನು ಸಾಮಾನ್ಯವಾಗಿ ಪೂರಿಯೊಂದಿಗೆ ಬಡಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಎರಡು ರೂಪಗಳು ಜನಪ್ರಿಯವಾಗಿವೆ: ಕಚ್ಚಾ ಭರಿತ್ ಮತ್ತು ಫೋಡ್ನಿ ಚಾ ಭರಿತ್. ಕಚ್ಚಾ ಭರಿತ್‍ನಲ್ಲಿ ಬದನೆಕಾಯಿಯನ್ನು ಹೊರತುಪಡಿಸಿ ಇತರ ಎಲ್ಲ ಪದಾರ್ಥಗಳನ್ನು ಬೇಯಿಸದೆ ಬಳಸಲಾಗುತ್ತದೆ. ಹಸಿ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಮತ್ತು ಕೆಲವೊಮ್ಮೆ ತಾಜಾ ಮೆಂತ್ಯದ ಎಲೆಗಳನ್ನು ಸುಟ್ಟ ಬದನೆಯೊಂದಿಗೆ ಮಿಶ್ರಣಮಾಡಲಾಗುತ್ತದೆ. ಜೊತೆಗೆ ಹಸಿ ಅಗಸೆ ಎಣ್ಣೆ ಅಥವಾ ಕಡಲೆಕಾಯಿ ಎಣ್ಣೆಯನ್ನು ಸೇರಿಸಲಾಗುತ್ತದೆ. ಫೋಡ್ನಿ ಚಾ ಭರಿತ್‍ನಲ್ಲಿ, ಮೇಲಿನ ಪದಾರ್ಥಗಳನ್ನು ಮೊದಲು ಎಣ್ಣೆಯಲ್ಲಿ ಸಂಬಾರ ಪದಾರ್ಥಗಳೊಂದಿಗೆ ಸ್ವಲ್ಪ ಕರಿಯಲಾಗುತ್ತದೆ; ನಂತರ, ಹಿಸುಕಿದ ಬದನೆಕಾಯಿಗಳನ್ನು ಅದರಲ್ಲಿ ಮಿಶ್ರಣಮಾಡಿ ಬೇಯಿಸಲಾಗುತ್ತದೆ. ವಿದರ್ಭಾ ಮತ್ತು ಖಾಂದೇಶ್‍ನಲ್ಲಿ, ಬದನೆಕಾಯಿಗಳನ್ನು ಒಣ ಹತ್ತಿ ಸಸ್ಯದ ಕಾಂಡಗಳ ಮೇಲೆ ಸುಡಲಾದಾಗ ಇದನ್ನು ಒಂದು ರಸಭಕ್ಷ್ಯವೆಂದು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆಯು ಖಾದ್ಯಕ್ಕೆ ವಿಶಿಷ್ಟ ಧೂಮದ ಪರಿಮಳವನ್ನು ನೀಡುತ್ತದೆ. ಖಾದ್ಯವನ್ನು ತೊವ್ವೆ, ಜೋಳದ ರೊಟ್ಟಿ, ಮತ್ತು ಅನ್ನದೊಂದಿಗೆ ಬಡಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Jaffrey, M. – World of the East Vegetarian Cooking – Knopf (1983) ISBN 0-394-40271-5