ಸದಸ್ಯ:Praptha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಳಮದ್ದಳೆ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ಯಕ್ಷಗಾನ ಎಂದು ಕರೆಯಲಾಗುವ ಕಲಾ ಪ್ರಕಾರದಲ್ಲಿ ಬಯಲಾಟ ಮತ್ತು ತಾಳಮದ್ದಳೆ ಎಂಬ ಎರಡು ಕವಲುಗಳಿವೆ. ಬಯಲಾಟ ಯಕ್ಷಗಾನದ ಸಮಗ್ರ ರೂಪವಾದರೆ, ತಾಳಮದ್ದಳೆ ಅದರ ಸಂಕ್ಷಿಪ್ತ ರೂಪ. ಹಾಗೆಂದು ಇವೆರಡೂ ಪ್ರತ್ಯೇಕವೆಂದಾಗಲಿ ಅಥವಾ ಒಂದೇ ಎಂದಾಗಲಿ ಭಾವಿಸುವಂತಿಲ್ಲಾ. ತಮ್ಮದೆ ಆದ ವಿಶಿಷ್ಟತೆಯಿಂದ ಏಕ ಕಾಲಕ್ಕೆ ಭಿನ್ನವೂ ಸಾಧ್ಯತೆ ಇದೆ. ತಾಳಮದ್ದಳೆಯು ಕರಾವಳಿ ಕರ್ನಾಟಕದ ಒಂದು ಕಲೆ ಸಾಮಾನ್ಯವಾಗಿ ಇದನ್ನು ಬೈಠಕ್, ಪ್ರಸಂಗ ಓದಿಕೆ ಮತ್ತು ಜಾಗರ ಎಂದು ಕರೆಯುವುದಿದೆ. ತಾಳಮದ್ದಳೆ ಎಂಬ ಶಬ್ಧವು ತಾಳ ಮತ್ತು ಮದ್ದಳೆ ಎಂಬೆರಡು ಪಂದಗಳಿಂದ ನಿಷ್ಪತ್ತಿಯಾಗಿದೆ. ನಾಟ್ಯ ಆಭರಣ ಮತ್ತು ರಂಗ ಪರಿಕರಗಳಿಲ್ಲದ ಯಕ್ಷಗಾನವಿದು. ಇದರ ಶಾಬ್ದಕ ವಿವರಣೆಯನ್ನು ಈ ರೀತಿಯಾಗಿ ಸಂಗ್ರಹಿಸಬಹುದು. ಒಬ್ಬ ಭಾಗವತ, ಮದ್ದಳೆಗಾರ ಮತ್ತು ಚಂಡೆವಾದಕ ವೇದಿಕೆಯ ನಡುವೆ ಕುಳಿತಿರುತ್ತಾರೆ. ಅವರ ಮುಂದೆ ಅರ್ಥಧಾರಿಗಳು ಸಾಲಾಗಿ ಇಲ್ಲವೇ ಅರ್ಧಚಂದ್ರಾಕಾರವಾಗಿ ಕುಳಿತಿರುತ್ತಾರೆ. ಇಲ್ಲವೇ ಸ್ಥಳದಲ್ಲಿಯೇ ಅದರ ನಿರ್ಣಯವಾಗುತ್ತದೆ. ಆಮೇಲೆ ಗಣಪತಿ ಸ್ತುತಿಯಾಗುತ್ತದೆ. ಬಳಿಕ ಭಾಗವತನು ಪ್ರಸಂಗದಿಂದ ಪದ್ಯಗಳನ್ನು ಆಯ್ದುಕೊಂಡು ಹಾಡುತ್ತಾನೆ. ಆಗ ಅರ್ಥಧಾರಿಗಳು ನಾಟಕೀಯ ಗದ್ಯದಲ್ಲಿ ಪ್ರಸಂಗದ ಪದ್ಯಗಳನ್ನು ವಿವರಿಸುತ್ತಾ ಕಥೆಯನ್ನು ಬೆಳೆಸುತ್ತಾರೆ. ಸಾಮಾನ್ಯವಾಗಿ ಅರ್ಥಧಾರಿಗಳು ಭಾಗವತನಿಗೆ ಮುಂದಿನ ಪದ್ಯವನ್ನು ಹಾಡಲು ಅನುವು ಮಾಡಿಕೊಡುತ್ತಾರೆ. ಕಥೆ, ಸಂದರ್ಭದ ವಿವರ, ಸಂಭಾಷಣೆ, ತರ್ಕ, ಪದ್ಯಗಳ ಆಯ್ಕೆ ಸಮಯಾವಕಾಶ ಮತ್ತು ವಾಖ್ಯಾನ ಮುಂತಾದವು ಕಲಾವಿದರಿಂದ ಒಂದು ತೊಡಕಾದ ಸಂಪ್ರದಾಯಿಕ ಒಡಂಬಡಿಕೆಯ ಆಧಾರದ ಮೇಲೆ ನಡೆಯುತ್ತದೆ.

ತಾಳಮದ್ದಳೆ ಪ್ರಾಚೀನತೆ[ಬದಲಾಯಿಸಿ]

ತಾಳಮದ್ದಳೆಯ ಪ್ರಾಚೀನತೆಯನ್ನು ಕೆಲವು ವಿದ್ವಾಂಸರು ಕ್ರಿ.ಶ ೧೫೫೬ರಲ್ಲಿ ಕುರುಕೋಡು ಶಾಸನದ ಕಾಲಕ್ಕೆ ಕೊಂಡೊಯ್ಯುತ್ತಾರೆ. ಈ ಶಾಸನದಲ್ಲಿ ತಾಳಮದ್ದಳೆಯು ಸೇವೆ ಎಂಬ ಉಲ್ಲೇಖವಿದ್ದು, ಅದು ಇಂದಿನ ತಾಳಮದ್ದಳೆಯೇ ಆಗಿದೆ ಎಂಬುದು ಅವರ ಅಭಿಪ್ರಾಯ. ಆದರೆ ಈ ಬಗೆಗೆ ನಿಖರ ಹೇಳುವಷ್ಟು ಪುರಾವೆಗಳು ನಮ್ಮಲಿಲ್ಲ. ಈ ಸಂಧರ್ಭದಲ್ಲಿ ಆಟ ಮೊದಲೋ ತಾಳಮದ್ದಳೆ ಮೊದಲೋ ಎಂಬ ಪ್ರಶ್ನೆ ಇದೆ. ಯಕ್ಷಗಾನ ಬಯಲಾಟವು ಮಳೆಗಾಲದಲ್ಲಿ ಪ್ರದರ್ಶನಗೊಳ್ಳದೇ ಇರುವುದರಿಂದ, ಆ ಸಮಯದಲ್ಲಿ ಕಲಾವಿದರಿಗೆ ಮಾತುಗಾರಿಕೆಯನ್ನು ಅಭ್ಯಾಸ ಮಾಡುವುದಕ್ಕೆ ತಾಳಮದ್ದಳೆಯಂತಹ ಮಾಧ್ಯಮವನ್ನು ಕಂಡುಕೊಂಡಿರಬೇಕೆಂಬುದು ಒಂದು ಅಭಿಪ್ರಾಯ. ತಾಳಮದ್ದಳೇಯೇ ಯಕ್ಷಗಾನದ ಮೊದರ ರೂಪ, ಬಯಲಾಟ ಅದರ ಮುಂದುವರಿಕೆ ಎಂಬುದು ಇನ್ನೊಂದು ವಾದ. ಅದೆನೇ ಇದ್ದರೂ ಅಂತಹ ಬೀಜವೃಕ್ಷನ್ಯಾಯದ ಬಗೆಗೆ ಯಾರೂ ಆಸಕ್ತರಾಗಿಲ್ಲ.

ಪ್ರಾಚೀನ ಸ್ವರೂಪ[ಬದಲಾಯಿಸಿ]

ತಾಳಮದ್ದಳೆ ಇಂದು ಸ್ವತಂತ್ರವಾದ ಕಲಾ ಪ್ರಕಾರವಾಗಿ, ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ಆದರೆ ಅದರ ಹಿಂದಿನ ರೂಪ ಈ ರೀತಿಯದ್ದಾಗಿರಲಿಲ್ಲ, ಬದಲಾಗಿ ಬಯಲಾಟದ ವೇಷಧಾರಿಗಳೇ ತಾಳಮದ್ದಳೆಯ ಕಲಾವಿದರೂ ಆಗಿದ್ದರು. ತಾಳಮದ್ದಳೆಗಳು ಪೂಜೆ, ಮದುವೆ, ಉಪನಯನ ಇತ್ಯಾದಿ ಸಂದರ್ಭಗಳಲ್ಲಿ ನಡೆಯುತ್ತಿದ್ದವು, ಪೂರ್ವಸಿದ್ಧತೆಗಳಿರುತ್ತಿರಲಿಲ್ಲ, ಬಯಲಾಟದ ಪ್ರಭಾವ ಹೆಚ್ಚಾಗಿತ್ತು, ಮರ್ಯಾದಸ್ಥರು ತಾಳಮದ್ದೆಳೆಯನ್ನು ಬಹಿಷ್ಕರಿಸಿದ್ದರು. ಆದರೆ ಮುಂದಕ್ಕೆ ಇದಕ್ಕೆ ತದ್ವಿರುದ್ಧವಾದ ಚಿತ್ರಗಳು ದೊರೆಯುತ್ತವೆ. ಸಂಸ್ಕೃತ ವಿದ್ವಾಂಸರು ತಾಳಮದ್ದಳೆಯಲ್ಲಿ ಪಾಲ್ಗೊಂಡಿದ್ದರು, ತಾಳಮದ್ದಳೆ ಆಗ ವಾದದ ಭೂಮಿಕೆಯಾಯಿತು, ನಾಗರಿಕರು ನಿಸ್ಸಂಕೋಚವಾಗಿ ಬಹು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಳಮದ್ದಳೆಯಲ್ಲಿ ಹಿಮ್ಮೇಳ[ಬದಲಾಯಿಸಿ]

ತಾಳಮದ್ದಳೆಯು ಹಿಮ್ಮೇಳಭಾಗವತ, ಮದ್ದಲೆಗಾರ ಮತ್ತು ಚಂಡೆವಾದಕರನ್ನು ಒಳಗೊಂಡಿರುತ್ತುದೆ. ಇಂದರೊಂದಿಗೆ ಅಷ್ಟೊಂದು ಪ್ರಮುಖವಲ್ಲದ ಶೃತಿವಾದಕನೂ ಇರುತ್ತಾನೆ. ಕೆಲವೊಂದು ಪ್ರದರ್ಶನದಲ್ಲಿ ನಿಶ್ಚಿತವಾದ ಶೃತಿವಾದಕನು ಇದ್ದರೂ ಇರಬಹುದು. ಶೃತಿವಾದಕನಿರದಿದ್ದರೂ ಶೃತಿಯಂತೂ ಹಿಮ್ಮೇಳದಲ್ಲಿ ಪ್ರಮುಖ ಪರಿಕರ. ತಾಳ, ಮದ್ದಳೆ, ಚಂಡೆ ಮತ್ತು ಶೃತಿ ಇದ್ದಾಗಲೇ ಹಿಮ್ಮೇಳನವೂ ಪರಿಪೂರ್ಣವಾಗುತ್ತದೆ. ಈ ರೀತಿಯ ಹಿಮ್ಮೇಳನವು ಯಕ್ಷಗಾನದ ಪ್ರಮುಖ ಪ್ರಕಾರಗಳಲ್ಲಿಯೂ ಸಾಮಾನ್ಯವಾದದು. ತಾಳಮದ್ದಳೆಹಿಮ್ಮೇಳವು ಮೂರು ಅಂಶಗಳನ್ನು ನಿಯಂತ್ರಿಸುತ್ತದೆ. ೧.ಅದು ಕಥೆಯ ಓಟವನ್ನು ನಿಯಂತ್ರಿಸುತ್ತದೆ. ೨.ಪ್ರದರ್ಶನದ ನಡೆಯನ್ನು ರೂಪಿಸುತ್ತದೆ. ಭಾಗವತನು ಪದ್ಯವನ್ನು, ಪಾತ್ರದ ಭಾವನೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಹಾಡಬೇಕಾಗುತ್ತದೆ.

ತಾಳಮದ್ದಳೆ ಆಶುನಾಟಕ[ಬದಲಾಯಿಸಿ]

ಹಲವು ಪಾತ್ರಧಾರಿಗಳು ಸೇರಿ ನಡೆಸುವ ಆಶುನಾಟಕವಿದು. ನಾಟಕದಲ್ಲಿ ಮಾತು ಪೂರ್ವ ನಿಯೋಜಿತ. ಆದರೆ ತಾಳಮದ್ದಳೆಯಲ್ಲಿ ತಾವು ಆಡಬಹುದಾದ ಮಾತುಗಳ ಬಗೆಗೆ ಪಾತ್ರಧಾರಿಗಳ ಖಚಿತತೆ ಇರುವುದಿಲ್ಲ. ನಿರ್ದಿಷ್ಟವಾದ ಪಾತ್ರಧಾರಿಗಳು ಮತ್ತು ನಿರ್ದಿಷ್ಟವಾದ ವೇದಿಕೆಯನ್ನು ಹೆಸರಿಸುವ ಔಚಿತ್ಯವಿದೆ. ಏಕೆಂದರೆ ಪಾತ್ರಧಾರಿಗಳು ಹಾಗೂ ವೇದಿಕೆ ಬದಲಾದಂತೆ ಅರ್ಥವೂ ಬದಲಾಗುತ್ತದೆ. ಮೂಲಭೂತವಾಗಿ ಈಗ ಹೇಳಿದ ಎರಡೂ ದೃಷ್ಟಿಕೋನಗಳಲ್ಲಿ ವ್ಯತ್ಯಾಸವಿಲ್ಲ. ಮೊದಲನೇ ದೃಷ್ಟಿಕೋನ ತಾಳಮದ್ದಳೆಯ ಲಕ್ಷಣವನ್ನು ಹೇಳಿದರೆ, ಎರಡನೆಯದು ಅದರ ಗುಣವನ್ನು ಹೇಳುತ್ತದೆ. ಲಿಪ್ತನಾಟ್ಯವೆಂಬುದು ಕಾವ್ಯ ಮೀಮಾಂಸಾತ್ಮಕ ವಿವರಣೆಯಾದರೆ, ಆಶುನಾಟಕವೆಂಬುದು ಆಧುನಿಕ ವಿಮರ್ಶೆಯ ಒಳನೋಟ.

ತಾಳಮದ್ದಳೆಯಲ್ಲಿ ಪೂರ್ವರಂಗ[ಬದಲಾಯಿಸಿ]

ಯಕ್ಷಗಾನ ಬಯಲಾಟದಲ್ಲಿ ಪೂರ್ವರಂಗ ಸಶಕ್ತವಾದುದು. ಇದು ಪ್ರದಶ‍ನಕ್ಕೆ ಹಿನ್ನಲೆಯನ್ನು ಒದಗಿಸುತ್ತದೆ. ವಿವಿಧ ದೇವತಾ ಸ್ತುತಿಯಲ್ಲದೆ, ನಿತ್ಯವೇಷ, ಸ್ತ್ರೀ ವೇಷ, ಬಾಲಗೋಪಾಲ, ಕೋಡಂಗಿ ಮೊದಲಾದ ವೇಷಗಳಿರುತ್ತವೆ. ಪೂರ್ವರಂಗಕ್ಕೆ ಸಂಭಂದಿಸಿದಂತೆ ಸಭಾಲಕ್ಷಣ ಎಂಬ ಹೆಸರಿನ ಸಾಹಿತ್ಯವೇ ಇದೆ. ಆದರೆ ತಾಳಮದ್ದಳೆಯಲ್ಲಿ ಪೂರ್ವರಂಗ ಇಷ್ಟು ಸಶಕ್ತವಲ್ಲ. ಮುಖ್ಯವಾಗಿ ಗಣಪತಿ ಸ್ತುತಿಯ ಒಂದೆರಡು ಪದ್ಯಗಳನ್ನು ಮಾತ್ರ ಹೇಳಿ ನೇರವಾಗಿ ಕಥಾರಂಭ ಮಾಡಲಾಗುತ್ತದೆ.

ಪಠ್ಯದ ಪರಿಕಲ್ಪನೆ[ಬದಲಾಯಿಸಿ]

ತಾಳಮದ್ದಳೆಯಲ್ಲಿ ಪಠ್ಯವನ್ನು ಮೂರು ಹಂತದಲ್ಲಿ ಗ್ರಹಿಸಬಹುದು. ಮೊದಲನೆಯದು ಕೃತಿ. ಈ ಕೃತಿಯು ಒಂದು ಕಥೆಯನ್ನು ಒಳಗೂಂಡಿರುತ್ತದೆ. ಅದೊಂದು ಹಾಡುಗಬ್ಬ. ವಿವಿಧ ರಾಗತಾಳಗಳು, ಛಂದಸ್ಸುಗಳು ಇರುವ ಕವಿಯೊಬ್ಬ ರಚಿಸಿದ ಕೃತಿ. ಉದಾಹರಣೆಗೆ, ಪಾರ್ವತಿ ಸುಬ್ಬನ ಯಕ್ಷಗಾನ ಚೂಡಾಮಣಿ ಅಥವ ಉಂಗುಸಂಧಿ.

ಮನೋರಂಗ ಭೂಮಿಯ ಪರಿಕ್ಪನೆ[ಬದಲಾಯಿಸಿ]

ಹೀಗೆ ತಾಳಮದ್ದಳೆಯು ಜಗತ್ತಿನ ರಂಗಕಲ್ಪನೆಯಲ್ಲಿಯೇ ವಿಶಿಷ್ಟವಾದುದು. ರಂಗಭೂಮಿಯನ್ನು ಅತ್ಯಂತ ಸರಳೀಕರಿಸಿದುದು ಅದರ ಹೆಗ್ಗಳಿಕೆಯೂ ಕೂಡಾ. ರಂಗ ಸಜ್ಜಿಕೆ , ವೇಷಭೂಷಣ, ನರ್ತನಗಳಿಲ್ಲದೆ ಕೇವಲ ಆಕರ್ಷಕ ಹಾಗೂ ಅರ್ಥಗರ್ಭಿತ ಮಾತುಗಾರಿಕೆಯ ಮೂಲಕ ರಂಗನಿರ್ಮಿತಿಯನ್ನು ತಂದು ಕೊಡುವುದು ತಾಳಮದ್ದಳೆಗೆ ಮಾತ್ರ ಸೀಮಿತವಾದ ವಿಶೆಷಣಗಳು. ಈ ದೃಷ್ಟಿಯಿಂದ ತಾಳಮದ್ದಳೆ ರಂಗಭೂಮಿಯ ಹೊಸ ಸಾಧ್ಯತೆಯೊಂದರತ್ತ ಬೆರಳು ಮೂಡುತ್ತದೆ. ಅದುವೆ ಮನೋರಂಗಭೂಮಿಪರಿಕಲ್ಪನೆ. ಇದು ಏಕಮುಖಿಯಾದುದಲ್ಲ. ಕಲಾವಿದರು ಮತ್ತು ಪ್ರೇಕ್ಷಕರೀರ್ವರು ನಿಮಿ‍ಸಿಕೊಳ್ಳುವಂಥದ್ದು. ಕಲಾವಿದರು ಮಾತುಗಾರಿಕೆಯ ಮೂಲಕ ತಮ್ಮದೇ ಆದ ಮನೋರಂಗ ಭೂಮಿಯನ್ನು ನಿರ್ಮಿಸಿಕೊಳ್ಳುವಾಗ ಪ್ರೇಕ್ಷಕರು ತಮ್ಮದೇ ಆದ ರಂಗಭೂಮಿಯನ್ನು ಪರಿಕಲ್ಪಿಸಿಕೊಳ್ಳುತ್ತಾರೆ. ಒಟ್ಟು ಜಾನಪದ ರಂಗಭೂಮಿಯಲ್ಲಿ ಮನೋರಂಗ ಭೂಮಿಯ ಅಸ್ವಷ್ಟ ಕಲ್ಪನೆಯೊಂದಿದೆ. ಆದರೇ ತಾಳಮದ್ದಳೆಯಲ್ಲಿ ಅದು ಖಚಿತಗೊಂಡಿದೆ ಎಂಬುದೇ ಬೇರೆಲ್ಲಾ ಪ್ರಕಾರಗಳಿಗಿಂತ ಅದು ವಿಶಿಷ್ಟವಾಗುವುದಕ್ಕೆ ಕಾರಣವಾಗಿದೆ.

ಉಲ್ಲೇಖ[ಬದಲಾಯಿಸಿ]

೧. ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪುಟಸಂಖ್ಯೆ ೨೬೦-೨೬೨