ವಿಷಯಕ್ಕೆ ಹೋಗು

ಕೋಡಂಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಡಂಗಿ ಬಯಲು ನಾಟಕಗಳಲ್ಲಿನ ಮುಖ್ಯ ಪಾತ್ರಗಳಲ್ಲೊಂದು. ಈ ಪಾತ್ರಕ್ಕೆ ಹನುಮನಾಯಕ, ಹಾಸ್ಯಗಾರ, ಚಾರಕ, ಸಾರಥಿ ಮುಂತಾದ ಇತರ ಹೆಸರುಗಳೂ ಇವೆ. ಸಂಸ್ಕøತ ನಾಟಕದ ವಿದೂಷಕನ ಪಾತ್ರಕ್ಕೆ ಹೋಲಿಸಬಹುದಾದರೂ ಬಯಲಾಟದ ಕೋಡಂಗಿಯ ವ್ಯಾಪ್ತಿ ವಿದೂಷಕನಿಗಿಂತಲೂ ಹೆಚ್ಚಿನದು. ತನ್ನ ವೇಷಭೂಷಣದ, ಮಾತಿನ, ಆಚರಣೆಯ ವಕ್ರತೆಯಿಂದಾಗಿ ಈತ ಪ್ರೇಕ್ಷಕರಲ್ಲಿ ನಗೆಯ ಹೊಳೆ ಹರಿಸುತ್ತಾನೆ.

ಕೋಡಂಗಿ ನಾಟಕದ ಪ್ರಾರಂಭದಿಂದ ಹಿಡಿದು ಕೊನೆಯತನಕ ರಂಗದ ಮೇಲೆ ಕಾನಿಷಿಕೊಳ್ಳುತ್ತಾನೆ. ಯಾವ ರೀತಿಯ ಅಡ್ಡಿ ಆತಂಕ ಅಡೆತಡೆಗಳಿಲ್ಲದ ಪಾತ್ರ ಇವನದು. ಗಣಪನ ಪೂಜೆಯಿಂದ ಹಿಡಿದು ಕೊನೆಯ ಅಂಕದ ವರೆಗೂ ಬರುವ ಎಲ್ಲ ಪಾತ್ರಗಳನ್ನೂ ಇವನೇ ಮಾತಾಡಿಸಿ ಅವರವರ ಪರಿಚಯವನ್ನು ಸಭಿಕರಿಗೆ ಮಾಡಿ ಕೊಡುತ್ತಾನೆ. ಯಾರನ್ನು ಬೇಕಾದರೂ ನಗೆಪಾಡು ಮಾಡುವ ಪೂರ್ಣ ಸ್ವಾತಂತ್ರ್ಯ ಇವನಿಗಿದೆ. ರಂಗದ ಮೇಲೆ ಒಂದು ರೀತಿಯಲ್ಲಿ ಸರ್ವಾಧಿಕಾರಿಯಂತೆ ಈತ ಮೆರೆಯುತ್ತಾನೆ. ಕೆಲವು ವೇಳೆ ಭಾಗವತನನ್ನೇ ಹೀಯಾಳಿಸುವುದರ ಮೂಲಕ ಹಾಸ್ಯವನ್ನೊದಗಿಸುತ್ತಾನೆ. ಅನೇಕ ವೇಳೆ ಔಚಿತ್ಯ, ಸಭ್ಯತೆಗಳನ್ನು ಮೀರಿದ ತನ್ನ ಮಾತುಗಾರಿಕೆಯಿಂದ ಈತ ಪ್ರೇಕ್ಷಕರನ್ನು ನಗಿಸುವುದೂ ಉಂಟು.

ವೇಷಭೂಷಣ ಧರಿಸುವುದರಲ್ಲಿ ಕೋಡಂಗಿ ತನ್ನದೇ ಆದ ಸ್ವಾತಂತ್ರ್ಯ ಪಡೆದಿರುತ್ತಾನೆ. ಒಮ್ಮೊಮ್ಮೆ ನಾಯಕನಂತೆ ವೇಷವನ್ನು ಧರಿಸಿಕೊಂಡು ರಂಗದ ಮೇಲೆ ಸುಳಿಯುತ್ತಾನೆ. ಆದರೆ ಆ ವೇಷವನ್ನು ಅಸ್ತವ್ಯಸ್ತವಾಗಿ ವಿಚಿತ್ರವಾಗಿ ಧರಿಸಿ ಅದರ ಮೂಲಕವೂ ತನ್ನ ಹಾಸ್ಯ ಪ್ರವೃತ್ತಿಯನ್ನೀತ ಪ್ರದರ್ಶಿಸುತ್ತಾನೆ. ರಂಗದ ಮೇಲೆ ಮೊದಲ ಸಾರಿಗೆ ಬರುವ ಪ್ರತಿಯೊಂದು ಪಾತ್ರವನ್ನೂ ವಿಚಾರಿಸುವ ಈತ ತಾನೇ ಭಾಗವತನ್ನು ಕುರಿತು `ನನ್ನನ್ನು ವಿಚಾರಿಸುವವರು ಯಾರೂ ಇಲ್ಲವಲ್ಲ ಕಾರಣವೇನು?' ಎನ್ನುತ್ತಾನೆ. ಆಗ ಭಾಗವತನೇ `ನೀನು ದಾರು ಎಂದು ಪ್ರಶ್ನೆ ಹಾಕುತ್ತಾನೆ. `ನಾನು ಪಾತಾಳ ಲೋಕದ ಮರಕುಟುಕ ರಾಜನೆಂದು ತಿಳಿ ಎಂದು ಕೋಡಂಗಿ ಉತ್ತರಿಸುತ್ತಾನೆ. ಆಗ ಭಾಗವತ `ಬಂದ ಕಾರಣವೇನು ಎನ್ನಲು `ಇಲ್ಲಿ ಯಾರಾದರೂ ಮುದುಕರು ಕಂಡರೆ ಅವರನ್ನು ಕೊಂದು ಅವರ ರಕ್ತ ಕುಡಿಯೋಣವೆಂದು ಬಂದೆ ಎಂದು ಹೇಳುತ್ತ ಕೋಡಂಗಿ ರಂಗದ ಮುಂದೆ ಕುಳಿತಿರುವ ಯಾರಾದರೂ ಮುದುಕರನ್ನು ದೃಷ್ಟಿಸಿ ನೋಡುತ್ತಾನೆ. ಇದು ಇವನ ಹಾಸ್ಯಕ್ಕೊಂದು ಉದಾಹರಣೆ.

ಕೋಡಂಗಿಯದು ನಾಟಕದ ಜೀವಂತ ಪಾತ್ರ. ಉಳಿದ ಪಾತ್ರಗಳು ಆಗಾಗ ಕೋಡಂಗಿಯನ್ನು `ಭಲೇ ಸಾರಥಿ' ಎಂದೇ ಹೇಳುತ್ತ ತಾವು ಬಂದು ಮಾಡಲಿರುವ ಕಾರ್ಯವನ್ನು ಪ್ರೇಕ್ಷಕರ ಗಮನಕ್ಕೆ ತರುತ್ತವೆ. ಇಲ್ಲಿ ಕೋಡಂಗಿ ನಾಟಕಕ್ಕೂ ಪ್ರೇಕ್ಷಕರಿಗೂ ಒಂದು ರೀತಿಯಲ್ಲಿ ಮಧ್ಯಸ್ಥನಂತಿರುತ್ತಾನೆ. ನಾಟಕ ನಡೆಯುತ್ತರುವಾಗ ಪಾತ್ರಗಳು ಕುಣಿದು ಕುಪ್ಪಳಿಸುವ ಭರದಲ್ಲಿ ವಸ್ತ್ರ ಆಭರಣ ಕೆಳಕ್ಕೆ ಬಿದ್ದಾಗ ಅಥವಾ ಅಸ್ತವ್ಯಸ್ತವಾದಾಗ ಅವನ್ನು ಸರಿಪಡಿಸುವ ಕೆಲಸ ಕೋಡಂಗಿಯದೇ ಆಗಿರುತ್ತದೆ. ಕೆಲವು ಸಾರಿ ಪರದೆಯನ್ನು ತಾನೇ ಬಿಡುತ್ತಾನೆ, ಎಳೆಯುತ್ತಾನೆ. ಇವನದು ಇಲ್ಲಿ ಇಂಥದೇ ಕೆಲಸವೆಂದೇನೂ ಇಲ್ಲ.

ರಾಕ್ಷಸ ಮುಂತಾದ ದೈತ್ಯ ಪಾತ್ರಗಳ ಪ್ರವೇಶವಾದಾಗ ಕೋಡಂಗಿ ಅವರನ್ನು ಮಾತಾಡಿಸಲು ಹೆದರಿದಂತೆ ನಟಿಸಿ ಭಾಗವತನ ಸಹಾಯವನ್ನು ಯಾಚಿಸುತ್ತಾನೆ. ಆದರೆ ಉಪಾಯವಾಗಿ ಅವರ ದುಷ್ಟಸ್ವಭಾವಗಳನ್ನೀತ ಬಹಿರಂಗಪಡಿಸುತ್ತಾನೆ. ನಾಟಕದ ಎಲ್ಲ ಪಾತ್ರಗಳ ಸಾರಥಿಯೂ ಇವನೇ ಆದ್ದರಿಂದ ಎಲ್ಲರ ರಥವನ್ನೂ ಇವನೇ ನಡೆಯಿಸಬೇಕು. ಒಂದು ಮರದ ಕೋಲನ್ನೇ ಈತ ರಥವನ್ನಾಗಿ ಮಾಡಿಕೊಂಡಿರುತ್ತಾನೆ.

ರಥ ಎಲ್ಲಿಗೆ ಸಾಗಿತು ಎಂದು ಭಾಗವತರು ಕೇಳಿದರೆ ಕೋಡಂಗಿ ಬಾಯಿಗೆ ಬಂದಂತೆ `ಗೌಡರ ಮನೆಯ ಬಾಗಿಲಿಗೆ ಬಂದು ನಿಂತಿದೆ ಎಂದು ಉತ್ತರಿಸುತ್ತಾನೆ. ನಡುನಡುವೆ ಈತ ಕುಣಿಯುತ್ತ ಹಾಸ್ಯದ ಹಾಡುಗಳನ್ನು ಹೇಳುವುದೂ ಉಂಟು. ಸ್ತ್ರೀಪಾತ್ರಗಳು ಕಾಣಿಸಿಕೊಂಡಾಗಲಂತೂ ಅವರ ಸೌಂದರ್ಯವನ್ನು ವಕ್ರವಾಗಿ ಬಣ್ಣಿಸುವುದರ ಮೂಲಕ ನಗೆಯ ಬುಗ್ಗೆಯನ್ನೇ ಈತ ಹರಿಸುತ್ತಾನೆ.

ಕೆಲವು ಸಾರಿ ಪ್ರಮುಖಪಾತ್ರಗಳು ರಂಗದ ಮೇಲೆ ಪ್ರವೇಶವಾಗುವ ಮುನ್ನ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಲು ಅಂಕಪರದೆಯ ಹಿಂದೆ ತಾನು ನಿಂತು ಪರದೆಯನ್ನು ಅಲುಗಾಡಿಸುತ್ತ ಜೋರಾಗಿ ಕಿರುಚುತ್ತ ಕುಣಿಯುತ್ತಾನೆ. ಕೊನೆಗೆ ಪರದೆ ಸಂದಿನಲ್ಲಿ ತನ್ನ ಮುಖ ತೋರಿ `ನಾನು ಎಂದು ಅವರನ್ನು ನಿರಾಶೆಗೊಳಿಸುವುದರ ಮೂಲಕವೂ ನಗೆಯನ್ನುಂಟು ಮಾಡುತ್ತಾನೆ.

ಕೋಡಂಗಿಯ ವೇಷವೂ ಅಷ್ಟೇ ವಿಚಿತ್ರವಾದುದು. ಮುಖಕ್ಕೆ ನಾನಾರೀತಿಯ ಬಣ್ಣಗಳನ್ನು ಬಳಿದುಕೊಳ್ಳುವುದರ ಜೊತೆಗೆ ಈತ ಕಪ್ಪುಬಿಳುಪು ಮೀಸೆಗಳನ್ನು ಕಟ್ಟಿಕೊಂಡರುತ್ತಾನೆ. ವಿಚಿತ್ರವಾದ ಟೋಪಿ ತಲೆಯಲ್ಲಿರುತ್ತದೆ. ಇವನ ನಿಲುವಂಗಿಯೂ ಅಷ್ಟೇ ವಿಚಿತ್ರವಾದುದು. ಇವನ ನಡಿಗೆಯೂ ಅಷ್ಟೇ ವೈವಿದ್ಯಮಯವಾದುದು. ಕೆಲವು ವೇಳೆ ಈತ ವಿಚಿತ್ರವಾದ ಮುಖವಾಡವನ್ನು ಧರಿಸಿ ಕೈಯಲ್ಲಿ ಮರದ ಜರ್ಕು ಹಿಡಿದು ತಿರುಗಿಸುತ್ತ ಕಿರುಚುತ್ತ ಕುಣಿದು, ನಿದ್ದೆಯಲ್ಲಿದ್ದ ಪ್ರೇಕ್ಷಕರನ್ನು ಎಚ್ಚರಿಸುವುದೂ ಉಂಟು.

ನಾಟಕಗಳಲ್ಲಿ ಹಾಸ್ಯರಸವನ್ನು ಪೋಷಿಸಿಕೊಂದು ಬರುವುದು ಕೋಡಂಗಿಯ ಮುಖ್ಯ ಕೆಲಸ. ಪ್ರತಿಯೊಂದು ಪಾತ್ರವೂ ಕುಣಿದು ಸಾಕಾಗಿ ತನ್ನ ಸ್ಥಾನದಲ್ಲಿ ವಿಶ್ರಮಿಸುತ್ತಿರುವಾಗ ಕೋಡಂಗಿ ಪ್ರವೇಶಮಾಡಿ ಆ ಪಾತ್ರಗಳ ವೇಷಭೂಷಣದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ಪ್ರೇಕ್ಷಕರನ್ನು ನಗಿಸುವುದರ ಮೂಲಕ ಆ ಪಾತ್ರಗಳಿಗೆ ವಿಶ್ರಾಂತಿ ಕೊಡುತ್ತಾನೆ.

ಬಯಲುನಾಟಕಗಳ ಕಥೆಗಳಲ್ಲಿ ಗೋಡಂಗಿಯಲ್ಲದೆ ಬೇರೆ ಯಾವ ಹಾಸ್ಯ ಪಾತ್ರವೂ ಬರುವುದಿಲ್ಲ. ಪ್ರೇಕ್ಷಕರ ಗಮನವಂತೂ ಕೋಡಂಗಿಯ ಮೇಲೇ ಇರುತ್ತದೆ. ಮಕ್ಕಳುಗಳಾದಿಯಾಗಿ ಎಲ್ಲರೂ ತಮ್ಮ ನಿದ್ದೆಬಿಟ್ಟು ಬಾಯಿಬಿಟ್ಟು ಕಣ್ಣಿಟ್ಟು ಕೋಡಂಗಿಯ ಆಗಮನವನ್ನು ಕಾತರದಿಂದ ನರೀಕ್ಷಿಸುತ್ತಾರೆ.

ಚತುರನಾದ ನಟನಿಗೆ ಈ ಪಾತ್ರದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಉಂಟು. ತನ್ನೆಲ್ಲ ಜಾಣತನವನ್ನೂ ಇಲ್ಲಿ ಆತ ಪ್ರದರ್ಶಿಸಬಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೋಡಂಗಿ&oldid=892087" ಇಂದ ಪಡೆಯಲ್ಪಟ್ಟಿದೆ