ಪ್ರಯಾಗ್ ರಾಜ್
ಪ್ರಯಗ್ರಾಜ್, ಹಿಂದಿ:प्रयागराज; ಉರ್ದು: پریاگراج), ಉತ್ತರ ಪ್ರದೇಶದಲ್ಲಿರುವ ಒಂದು ಪ್ರಮುಖ ಪಟ್ಟಣ ಹಾಗೂ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಅಕ್ಟೋಬರ್ ೧೬, ೨೦೧೮ ರಂದು ರಾಜ್ಯಸರ್ಕಾರವು ನಗರದ ಹೆಸರನ್ನು ಅಲಹಾಬಾದ್ (ಹಿಂದಿನ ಮೊಘಲ್ ಹೆಸರು) ನಿಂದ ಪ್ರಯಗರಾಜ್ಗೆ ಬದಲಾಯಿಸಿತು.ಇದರ ಮೂಲ ಹೆಸರು ಪ್ರಯಾಗ (ಹಿಂದಿ:प्रयाग), ಮೊಘಲ್ ದೊರೆ ಅಕ್ಬರನು ಈ ನಗರಕ್ಕೆ ಅಲಹಾಬಾದ್ ಎಂಬ ಹೆಸರಿಟ್ಟನು. ಇದು ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ದಕ್ಷಿಣಕ್ಕೆ ಸುಮಾರು ೨೦೫ ಕಿಲೊಮೀಟರ್ಸ್ ದೂರದಲ್ಲಿದೆ. ಅಲಹಾಬಾದ್ ಜಿಲ್ಲೆಯ ಆಡಳಿತ ಕೇಂದ್ರವಾಗಿರುವ ಈ ನಗರವು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ೧೩೦ನೆಯದಾಗಿದೆ.(೨೦೧೧ರಲ್ಲಿನ ಬೆಳವಣಿಗೆಯ ಪ್ರಮಾಣ ಶೇ.೨.೦೯) ಗಂಗಾ, ಯಮುನಾ ಮತ್ತು ಪುರಾತನ ಸರಸ್ವತಿ ನದಿಗಳ ಸಂಗಮಸ್ಥಳವಾದುದರಿಂದ ಹಿಂದೂಗಳಿಗೆ ಇದು ಪ್ರಮುಖ ತೀರ್ಥಸ್ಥಳವಾಗಿದೆ.[೧] ಅಲ್ಲದೆ ಇದು ಕುಂಭ ಮೇಳ ನಡೆಯುವ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಇತರ ಮೂರು ಸ್ಥಳಗಳು ಹರಿದ್ವಾರ, ಉಜ್ಜಯಿನಿ ಮತ್ತು ನಾಶಿಕ್. ರಾಜ್ಯಸರ್ಕಾರೀ ಮತ್ತು ಕೇಂದ್ರಸರ್ಕಾರಗಳ ಅನೇಕ ಕಚೇರಿಗಳು ಇಲ್ಲಿದ್ದು ಪ್ರಯಗ್ರಾಜ್ ನಗರವು ದೇಶದ ನಾಲ್ಕನೇ ಹಳೆಯ ವಿಶ್ವವಿದ್ಯಾಲಯವನ್ನು ಹಾಗೂ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಹೊಂದಿದೆ. ದೇಶದ ೧೪ ಪ್ರಧಾನಮಂತ್ರಿಗಳಲ್ಲಿ ೭ ಮಂದಿಗೆ ಪ್ರಯಗ್ರಾಜ್ ಸ್ವಂತನೆಲೆಯಾಗಿದೆ. ಜವಹರಲಾಲ್ ನೆಹರೂ, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಗುಲ್ಜಾರಿಲಾಲ್ ನಂದಾ, ವಿ ಪಿ ಸಿಂಗ್ ಹಾಗೂ ಚಂದ್ರಶೇಖರ್ ಇವರು ಪ್ರಯಗ್ರಾಜ್ನನಲ್ಲೇ ಹುಟ್ಟಿದವರು ಅಥವಾ ಪ್ರಯಗ್ರಾಜ್ ವಿವಿಯ ವಿದ್ಯಾರ್ಥಿಗಳು ಅಥವಾ ಪ್ರಯಗ್ರಾಜ್ ಕ್ಷೇತ್ರದಿಂದ ಆಯ್ಕೆಯಾದವರು. ಇತರ ಪ್ರಮುಖ ನಗರಗಳಾದ ಕಾನ್ಪುರ, ಲಕ್ನೋ, ವಾರಣಾಸಿ ಮತ್ತು ಮಧ್ಯಪ್ರದೇಶದ ರೇವಾಗಳು ಪ್ರಯಗ್ರಾಜ್ ನೆರೆಹೊರೆಯಲ್ಲಿವೆ.
ಇತಿಹಾಸ
[ಬದಲಾಯಿಸಿ]ಈ ಪ್ರದೇಶವು ಕನೌಜ್ ಸಾಮ್ರಾಜ್ಯಕ್ಕೆ ಸೇರುವ ಮುನ್ನ ಮೌರ್ಯರ ಗುಪ್ತರ ಹಾಗೂ ಕುಶಾನರ ಆಳ್ವಿಕೆಯಲ್ಲಿತ್ತು. ೧೫೨೬ರ ಮೊಘಲ್ ದಾಳಿಯ ನಂತರ ಪ್ರಯಗ್ರಾಜು ಮೊಘಲ್ ಸಾಮ್ರಾಜ್ಯಕ್ಕೆ ಸೇರಿತು. ಮೊಘಲ್ ದೊರೆ ಅಕ್ಬರನು ಬಲು ಅಮೋಘವಾದ ಅಲಹಾಬಾದ್ ಕೋಟೆಯನ್ನು ಕಟ್ಟಿಸಿದನು. ವಸಾಹತು ಆಡಳಿತಕ್ಕೆ ಮುನ್ನ ಪ್ರಯಗ್ರಾಜು ಮರಾಠಾ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿಸ್ತಶಕ ೧೭೬೫ರಲ್ಲಿ ಬ್ರಿಟಿಷರು ಅಲಹಾಬಾದ್ ಕೋಟೆಯಲ್ಲಿ ಸೇನೆಯಿರಿಸಿದರು. ೧೮೫೭ರ ಸಿಪಾಯಿದಂಗೆಯಲ್ಲಿ ಪ್ರಯಗ್ರಾಜ್ ಕ್ರಿಯಾಶೀಲವಾಗಿತ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ವಾರ್ಷಿಕ ಅಧಿವೇಶನವು ೧೮೮೮ ಮತ್ತು ೧೮೯೨ರಲ್ಲಿ ಪ್ರಯಗ್ರಾಜಿನ ದರ್ಬಾಂಗ ಅರಮನೆಯಲ್ಲಿ ನಡೆಯಿತು.[೨][೩] ೧೯೩೧ರಲ್ಲಿ ಬ್ರಿಟಿಷ್ ಪಡೆಗಳು ಪ್ರಯಗ್ರಾಜ್ನಲ್ಲಿ ಆಲ್ಫ್ರೆಡ್ ಪಾರ್ಕ್ನಲ್ಲಿ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ರನ್ನು ಸುತ್ತುವರಿದಾಗ ಅವರು ಸ್ವಯಂ ಗುಂಡು ಹಾರಿಸಿಕೊಂಡು ಸತ್ತರೆಂದು ಹೇಳಲಾಗುತ್ತದೆ. ಪ್ರಯಗ್ರಾಜ್ನಲ್ಲಿರುವ ನೆಹರೂ ಕುಟುಂಬದ ನಿವಾಸಗಳಾದ ಆನಂದ ಭವನ ಮತ್ತು ಸ್ವರಾಜ್ ಭವನಗಳು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ರಾಜಕೀಯ ಚಟುವಟಿಕೆಗಳ ತಾಣಗಳಾಗಿದ್ದವು.
ಭೂಸಮೀಕ್ಷೆ
[ಬದಲಾಯಿಸಿ]ಪ್ರಯಗ್ರಾಜ್ ಉತ್ತರಪ್ರದೇಶದ ದಕ್ಷಿಣಭಾಗದಲ್ಲಿ 25°27′N 81°50′E / 25.45°N 81.84°E ರೇಖೆಗಳಲ್ಲಿ ಸಮುದ್ರ ಮಟ್ಟದಿಂದ ೯೮ ಮೀಟರ್ಸ್ ಎತ್ತರದಲ್ಲಿ ಗಂಗೆ ಯಮುನೆಯರು ಕೂಡುವಲ್ಲಿ ನೆಲೆಗೊಂಡಿದೆ. ಇದರ ಆಗ್ನೇಯ ದಿಕ್ಕಿನಲ್ಲಿ ಬಘೇಲ್ ಖಂಡ್ ಪ್ರದೇಶವಿದ್ದು, ಮೂಡಣದ ಕಡೆ ಪೂರ್ವಾಂಚಲ್ ಎನ್ನುವ ಗಂಗಾ ಕಣಿವೆಯಿದೆ, ನೈರುತ್ಯದಲ್ಲಿ ಬುಂದೇಲ್ ಖಂಡವಿದ್ದರೆ ಉತ್ತರದ ಕಡೆಗೆ ಅವಧ್ ಇದ್ದು, ಪಡುವಣದಲ್ಲಿ ಕೌಶಾಂಬಿಯೊಂದಿಗೆ ದೋ ಆಬ್ ಕೆಳಪ್ರದೇಶವನ್ನು ಹೊಂದಿದೆ. ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಯಗ್ರಾಜು ಗಂಗೆ ಮತ್ತು ಯಮುನಾ ನದಿಗಳ ನಡುವೆ ಒಳ್ಳೆಯ ಆಯಕಟ್ಟಿನ ತಾಣದಲ್ಲಿದೆ. ಯಮುನಾ ನದಿಯೊಂದಿಗೆ ಇಂಡಿಯಾದ ಪಶ್ಚಿಮ ಭಾಗವೂ ಇಲ್ಲಿ ಕೊನೆಯಾಗುತ್ತದೆ. ಪ್ರಯಗ್ರಾಜಿನ ದೋಆಬ್ ಪ್ರದೇಶದ ನೆಲವು ಹೆಚ್ಚು ತೇವವಿಲ್ಲದೆ ಫಲವತ್ತಾಗಿದ್ದು ಗೋಧಿ ಬೆಳೆಗೆ ಅತ್ಯಂತ ಸೂಕ್ತವಾಗಿದೆ. ಇನ್ನು ಬುಂದೇಲಖಂಡ ಮತ್ತು ಬಾಗೆಲಖಂಡಗಳಿಗೆ ಹೊಂದಿಕೊಂಡ ನೆಲವು ಒಣಗಿದ್ದು ಕಲ್ಲುಬಂಡೆಗಳಿಂದ ಕೂಡಿದೆ. ಪ್ರಯಗ್ರಾಜು ಜಬಲ್ಪುರಕ್ಕೆ 343 km (213 mi) ಉತ್ತರದಲ್ಲಿ ಅದೇ ರೇಖಾಂಶದಲ್ಲಿದ್ದು ಸಮೀಪದ ಮಿರ್ಜಾಪುರ ಪಟ್ಟಣಕ್ಕೆ ಪಡುವಣದಲ್ಲಿರುವ ೮೨.೫ ಡಿಗ್ರಿ ಪೂರ್ವ ರೇಖಾಂಶದಲ್ಲಿ ಇಂಡಿಯಾದ ಮಾನಕ ಸಮಯವನ್ನು ಲೆಕ್ಕಿಸಲಾಗುತ್ತದೆ.
ಧುರೀಣರು
[ಬದಲಾಯಿಸಿ]ಪ್ರಯಗ್ರಾಜ್ ಹಲವಾರು ಧುರೀಣರ ಪ್ರಾತಿನಿಧಿಕ ಕ್ಷೇತ್ರವಾಗಿದೆ. ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರೀ, ಇಂದಿರಾಗಾಂಧಿ, ರಾಜೀವ್ ಗಾಂಧಿ, ವಿಶ್ವನಾಥಪ್ರತಾಪ್ ಸಿಂಗ್, ಎಚ್ ಎನ್ ಬಹುಗುಣ, ಅಮಿತಾಭ್ ಬಚ್ಚನ್, ಮುರ್ಲಿ ಮನೋಹರ ಜೋಷಿ ಇವರೆಲ್ಲ ಇಲ್ಲಿಂದಲೇ ಉಗಮಿಸಿದವರು.
ಜನಸಂಖ್ಯಾ ಲೆಕ್ಕಾಚಾರ
[ಬದಲಾಯಿಸಿ]೨೦೧೧ರ ಜನಗಣತಿಯ ಪ್ರಕಾರ ಪ್ರಯಗ್ರಾಜಿನ ಜನಸಂಖ್ಯೆಯು ೧೨,೧೬,೭೧೯.[೪] ಇದು ಇಂಡಿಯಾದ ಅತಿ ಜನನಿಬಿಡ ಪಟ್ಟಣಗಳಲ್ಲಿ ೩೨ನೆಯದು. ಇದರ ಲಿಂಗಾನುಪಾತವು ೮೮೮ ಇದ್ದು ೬ಕ್ಕಿಂತ ಕಡಿಮೆ ವಯಸ್ಸಿನವರು ಶೇ.೧೨.೪ ಇದ್ದಾರೆ. ಸಾಕ್ಷರತಾ ಪ್ರಮಾಣವು ಶೇ.೭೮.೨೯ ಪ್ರಯಗ್ರಾಜ್ನಲ್ಲಿ ಹಿಂದಿ, ಉರ್ದು ಮತ್ತು ಇಂಗ್ಲಿಷ್ ಮಾತುಗಾರಿಕೆಯಿದೆ. ನಗರಪ್ರದೇಶದಲ್ಲಿ ಹಿಂದಿಯ ಖಡೀಬೋಲಿಯಲ್ಲಿ ಜನ ಮಾತನಾಡುತ್ತಾರಾದರೂ ಉಳಿದಂತೆ ಎಲ್ಲರೂ ಅವಧ್ ಭಾಷೆ- ಅವಧೀ ಪ್ರಕಾರದ ಹಿಂದಿಯನ್ನು ಆಡುತ್ತಾರೆ. ದೋಆಬಿ ಅಲ್ಲದ ಪೂರ್ವಭಾಗದಲ್ಲಿ ಬಘೇಲಿ ಉಪಭಾಷೆಯು ಸಾಮಾನ್ಯ. ಕೆಲ ಪ್ರದೇಶಗಳಲ್ಲಿ ಬಂಗಾಳಿ ಮತ್ತು ಪಂಜಾಬಿಯೂ ಚಲಾವಣೆಯಲ್ಲಿದೆ. ಪ್ರಯಗ್ರಾಜ್ನಲ್ಲಿ ಎಲ್ಲ ಪ್ರಮುಖ ಧರ್ಮಗಳೂ ಇವೆ. ಹಿಂದೂಗಳು ಶೇ ೮೬.೮೧, ಮುಸ್ಲಿಮರು ಶೇ ೧೨.೭೨, ಕ್ರೈಸ್ತರು ಶೇ ೦.೧೮, ಸಿಖ್ಖರು ಶೇ ೦.೧೩ ಮತ್ತು ಬೌದ್ಧರು ಶೇ ೦.೦೪ ಇದ್ದಾರೆ.
ಜನಾಡಳಿತ
[ಬದಲಾಯಿಸಿ]ಪ್ರಯಗ್ರಾಜ್ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಪ್ರಯಗ್ರಾಜ್ ನಗರನಿಗಮವು ರಾಜ್ಯದ ಅತ್ಯಂತ ಹಳೆಯ ಮುನಿಸಿಪಾಲಿಟಿಗಳಲ್ಲೊಂದು. ಇಂಡಿಯಾ ಸರ್ಕಾರದಿಂದ ಲಕ್ನೋ ಪೌರಾಡಳಿತ ಕಾಯಿದೆ ಬಂದಾಗ ೧೮೬೪ರಲ್ಲಿ ಈ ನಗರಾಡಳಿತವು ಅಸ್ತಿತ್ವಕ್ಕೆ ಬಂದಿದೆ.[೫] ಮುನ್ಸಿಪಲ್ ಪ್ರದೇಶವನ್ನು ೮೦ ವಾರ್ಡುಗಳಾಗಿ ವಿಂಗಡಿಸಿದ್ದು ಅವನ್ನು ಕಾರ್ಪೊರೇಟರುಗಳು ಪ್ರತಿನಿಧಿಸುತ್ತಾರೆ.[೬] ಎಲ್ಲ ಕಾರ್ಪೊರೇಟರುಗಳು ಸೇರಿ ಮೇಯರ್ ಅನ್ನು ಆಯ್ಕೆ ಮಾಡುತ್ತಾರೆ. ಪ್ರಯಗ್ರಾಜ್ ಕಮಿಷನರ್ ಆಯ್ಕೆಯನ್ನು ಸರ್ಕಾರವು ಮಾಡುತ್ತದೆ.
ಕುಂಭಮೇಳ
[ಬದಲಾಯಿಸಿ]ಪ್ರತಿ ೧೨ ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ಜರುಗುತ್ತದೆ. ಕಳೆದ ೨೦೦೧ನೇ ಸಾಲಿನಲ್ಲಿ ಈ ಮೇಳ ನಡೆದಿತ್ತು. ಸುಮಾರು 40 ಮಿಲಿಯನ್ ಗೂ ಹೆಚ್ಚು ಜನ ವಿಶ್ವದಾದ್ಯಂತ ಆಗಮಿಸಿದ್ದರಿಂದ ದಾಖಲೆ ಸ್ಥಾಪಿಸಿತ್ತು. ಇದರ ಹೊರತಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳಲ್ಲಿ ಮಾಘ ಮೇಳವು ಸಂಗಮದ ಪ್ರದೇಶದಲ್ಲಿ ಜರುಗುತ್ತದೆ. ಮೈ ಕೊರೆಯುವ ಚಳಿಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಮುಳುಗೆದ್ದು ತಮ್ಮ ಪಾಪಗಳನ್ನು ಭಕ್ತಾದಿಗಳು ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಪ್ರಯಗ್ರಾಜ್ ಪ್ರವಾಸೋದ್ಯಮ ಇಲಾಖೆ ಉತ್ತುಂಗಕ್ಕೆ ಏರಿದೆ. ಸುಮಾರು ಕಾಲದಿಂದಲೂ ಪ್ರಯಗ್ರಾಜ್ ಭಾರತದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ವಿಷಯಗಳಿಗೆ ಸಂಬಂಧ ಪಟ್ಟ ಹಾಗೆ ಅನೇಕ ಘಟ್ಟಗಳಲ್ಲಿ ತನ್ನದೇ ಆದ ಮುಖ್ಯ ಪಾತ್ರವನ್ನು ವಹಿಸಿದೆ. ಅನೇಕ ಸುಪ್ರಸಿದ್ಧ ಜನರು, ವಿದ್ವಾಂಸರು ಈ ಭೂಮಿಯಲ್ಲಿ ಜನ್ಮ ತಳೆದಿದ್ದಾರೆ. ಅವರುಗಳ ಪೈಕಿ ಮಹಾದೇವಿ ವರ್ಮಾ, ಹರಿವಂಶರಾಯ್ ಬಚ್ಚನ್, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಮುರಳಿ ಮನೋಹರ ಜೋಶಿ ಪ್ರಮುಖರು. ಪ್ರಯಗ್ರಾಜ್ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ, ಸಾಂಸ್ಕೃತಿ ಮತ್ತು ಐತಿಹಾಸಿಕ ಛಾಯೆ ಹೊಂದಿರುವುದರಲ್ಲಿ ಸಂಶಯವೇ ಇಲ್ಲ.
ಪ್ರವಾಸಿ ತಾಣಗಳು
[ಬದಲಾಯಿಸಿ]ಆಸಕ್ತಿಯಿರುವ ಪ್ರವಾಸಿಗನಿಗೆ ಪ್ರಯಗ್ರಾಜ್ ಪ್ರವಾಸೋದ್ಯಮ ಒಂದು ದೊಡ್ಡ ಕೊಡುಗೆಯಾಗಿದೆ. ಮಂದಿರಗಳು, ಕೋಟೆಗಳು ಹಾಗು ವಿಶ್ವವಿದ್ಯಾಲಯಗಳು ಮುಂತಾದ ಹಲವಾರು ಪ್ರವಾಸಿ ತಾಣಗಳಿವೆ. ಇದು ಒಂದು ದೊಡ್ಡ ತೀರ್ಥಯಾತ್ರಾ ಸ್ಥಳವಾಗಿರುವುದರಿಂದ ಇಲ್ಲಿ ಅನೇಕ ಮಂದಿರಗಳನ್ನು ಕಾಣುತ್ತೇವೆ. ಅವುಗಳಲ್ಲಿ ಪಾತಾಲ್ ಪುರಿ ಮಂದಿರ, ಹನುಮಾನ್ ಮಂದಿರ, ಬಡೇ ಹನುಮಾನ್ ಜಿ ಮಂದಿರ, ಶಿವಕೋಟಿ ಮಹಾದೇವ್ ಮಂದಿರ, ಅಲೋಪಿ ದೇವಿ ಮಂದಿರ, ಕಲ್ಯಾಣಿದೇವಿ ಮಂದಿರ, ಮಂಕಮೇಶ್ವರ ಮಂದಿರ, ನಾಗವಾಸುಕಿ ಮಂದಿರ ಮತ್ತು ಬೇಣಿಮಾಧವ ಮಂದಿರ ಮುಖ್ಯವಾದವುಗಳು. ಜವಾಹರಲಾಲ್ ನೆಹರೂರವರ ಪೂರ್ವಜರ ಮನೆಯಾದ ಆನಂದ್ ಭವನಕ್ಕೂ ಭೇಟಿ ಕೊಡಲೇಬೇಕು. ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕ ಮುಖ್ಯ ರಾಜಕೀಯ ಧುರೀಣರ ಕೇಂದ್ರ ಕಚೇರಿ ಇದಾಗಿತ್ತು. ಮುಘಲ್ ಹಾಗು ಬ್ರಿಟಿಷರ ಕಾಲದ ಅನೇಕ ಅವಶೇಷಗಳು ಈ ಪಟ್ಟಣದಲ್ಲಿವೆ. ಅವುಗಳಲ್ಲಿ ಪ್ರಯಗ್ರಾಜ್ ಕೋಟೆ, ಮಿಂಟೋ ಪಾರ್ಕ್, ಹಚ್ಚಹರಿಸಿನಿಂದ ಕೂಡಿರುವ ಆಲ್ಫ್ರೆಡ್ ಪಾರ್ಕ್, ಥಾರ್ನ್ ಹಿಲ್ ಮೇನ್ ಮೆಮೋರಿಯಲ್ ಮತ್ತು ಮುಘಲ್ ಉದ್ಯಾನವನ ಖುಸ್ರೋ ಭಾಗ್. ಪ್ರಯಗ್ರಾಜ್ ಬಹುಮುಖ್ಯ ಶೈಕ್ಷಣಿಕ ಕೇಂದ್ರವೂ ಆಗಿತ್ತು. ಪುರಾತನ ಆಂಗ್ಲ ಭಾಷಾ ವಿಶ್ವವಿದ್ಯಾಲಯಗಳಲ್ಲಿ ಪ್ರಯಗ್ರಾಜ್ ವಿಶ್ವವಿದ್ಯಾಲಯವೂ ಒಂದು. ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು ಸರ್ ವಿಲಿಯಂ ಮುಯಿರ್. ಈ ಪಟ್ಟಣದಲ್ಲಿ ಇವರದ್ದೇ ಹೆಸರಿನ ಕಾಲೇಜೂ ಇದೆ. ಇವಿಂಗ್ ಕ್ರಿಶ್ಚಿಯನ್ ಕಾಲೇಜು ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದೆ. ಇದು ಸಾರ್ವಜನಿಕ ಗ್ರಂಥಾಲಯವನ್ನೂ ಒಳಗೊಂಡಿದೆ. ಪ್ರಯಗ್ರಾಜ್ ನಲ್ಲಿರುವ ಜವಾಹರ ಪ್ಲಾನಿಟೇರಿಯಂನಲ್ಲಿ ಸೋಲಾರ್ ಸಿಸ್ಟಂ ಹಾಗು ಬಾಹ್ಯಾಕಾಶದ ನಕ್ಷತ್ರಗಳ ವೀಕ್ಷಣೆ ಮಾಡಬಹುದು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಸ್ಥಾಪಿತಗೊಂಡ ಅಲಹಾಬಾದ್ ಹೈಕೋರ್ಟ್ ಕೂಡ ಭೇಟಿ ನೀಡತಕ್ಕಂಥ ಸ್ಥಳ.
ನಗರಸೌಂದರ್ಯ
[ಬದಲಾಯಿಸಿ]ಪ್ರಯಗ್ರಾಜು ಗಂಗೆ ಯಮುನೆಯರು ಕೂಡುವ ಮುನ್ನಿನ ವಿಶಾಲ ಭೂಪ್ರದೇಶವನ್ನು ತನ್ನದಾಗಿಸಿಕೊಂಡಿದೆ. ವಾಸ್ತವವಾಗಿ ಅದು ಮೂರು ಕಡೆ ನೀರು ಹಾಗೂ ಒಂದು ಕಡೆ ನೆಲಸಂಪರ್ಕ ಹೊಂದಿದ್ದು ಒಂದು ರೀತಿಯಲ್ಲಿ ಒಳನಾಡಿನ ಪ್ರತಿದ್ವೀಪವಾಗಿದೆ. ನಗರ ಬೆಳೆದಂತೆ ಸಂಪರ್ಕಕ್ಕಾಗಿ ಗಂಗಾನದಿ ಮತ್ತು ಯಮುನಾನದಿಗಳ ಮೇಲೆ ಹಲವಾರು ಸೇತುವೆಗಳನ್ನು ಕಟ್ಟಲಾಗಿದೆ.
ನಗರಪ್ರದೇಶವನ್ನು ಮೂರು ತೆರನಾಗಿ ವರ್ಗೀಕರಿಸಬಹುದು;
- ಹಳೆನಗರವು ವಾಣಿಜ್ಯಕೇಂದ್ರವಾಗಿದ್ದು ಹೆಚ್ಚು ಜನಸಾಂದ್ರತೆಯಿಂದಿದೆ. ಇಲ್ಲಿನ ಎಲ್ಲ ಪ್ರಮುಖರಸ್ತೆಗಳೂ ಸಾರಿಗೆಗಾಗಿ ಹಾಗೂ ಸಂತೆಗಾಗಿ ಬಳಕೆಯಾಗುತ್ತಿವೆ.
- ಹೊಸನಗರವು ಬ್ರಿಟಿಷ್ ಆಳ್ವಿಕೆಯಲ್ಲಿ ಜನವಸತಿ ಪ್ರದೇಶದ ಸುತ್ತ ನಿರ್ಮಾಣವಾಗಿದೆ. ಬಲು ಯೋಜಿತವಾದ ಹಾದಿಬೀದಿಗಳನ್ನೂ ತಿರುವುಗಳನ್ನೂ ಸಾಲುಮರಗಳನ್ನೂ ಹೊಂದಿದ್ದು ಕಡಿಮೆ ಜನಸಾಂದ್ರತೆಯಿಂದಿದೆ. ಈ ಪ್ರದೇಶದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಗಳೂ, ಹೈಕೋರ್ಟು, ಉತ್ತರಪ್ರದೇಶ ಜನಸೇವಾ ಆಯೋಗ, ಕಚೇರಿಗಳು, ಉದ್ಯಾನಗಳು, ಸೇನಾನೆಲೆ, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ಗಳಿವೆ.
- ಹೊರವಲಯದಲ್ಲಿ ಹೆದ್ದಾರಿಗಳುದ್ದಕ್ಕೂ ನೈನಿ, ಜುನ್ಸಿ, ಪಫಮಾವು ಮುಂತಾದ ಉಪನಗರಗಳು ತಲೆಯೆತ್ತಿವೆ.
ಹಲವಾರು ಕಟ್ಟಡ ಯೋಜಕರು ಪ್ರಯಗ್ರಾಜ್ನಲ್ಲಿ ಬಂಡವಾಳ ತೊಡಗಿಸುತ್ತಿದ್ದಾರೆ. ಒಮ್ಯಾಕ್ಸ್ ಗುಂಪಿನವರು ನೈನಿ ಉಪನಗರದಲ್ಲಿ 1,535 acres (6.21 km2) ನಷ್ಟು ವ್ಯಾಪ್ತಿಯಲ್ಲಿ "ಒಮ್ಯಾಕ್ಸ್ ವಾಟರ್ ಫ್ರಂಟ್" ಎಂಬ ಹೈಟೆಕ್ ನಗರ ನಿರ್ಮಿಸುತ್ತಿದ್ದಾರೆ.
ಪ್ರಯಗ್ರಾಜಿನ ಒಳ್ಳೆಯ ವೈದ್ಯಕೀಯ ಕಾಲೇಜುಗಳಿದ್ದು ಆಸ್ಪತ್ರೆಗಳೂ ಸಮಕಾಲೀನ ವೈದ್ಯಸೌಲಭ್ಯಗಳೂ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವರೂಪರಾಣಿ ಆಸ್ಪತ್ರೆ, ಕಮಲಾನೆಹರೂ ಆಸ್ಪತ್ರೆ, ಮಧ್ಯೋತ್ತರ ರೇಲ್ವೆ ಆಸ್ಪತ್ರೆ, ತೇಜ್ ಬಹದ್ದೂರ್ ಸಪ್ರು ಆಸ್ಪತ್ರೆ, ರಾಜ್ಯ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಹಾಗೂ ಮೋತಿಲಾಲ್ ನೆಹರೂ ಆಸ್ಪತ್ರೆಗಳಿವೆ. ಇವಲ್ಲದೆ ಅಲೋಪತಿಕ್, ಹೋಮಿಯೋಪತಿಕ್, ಯುನಾನಿ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳೂ ಇವೆ.
ಪ್ರಯಗ್ರಾಜ್ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ
[ಬದಲಾಯಿಸಿ]ನವೆಂಬರ್ ನಿಂದ ಮಾರ್ಚ್ ಇಲ್ಲಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಉಳಿದ ಎಲ್ಲಾ ತಿಂಗಳಲ್ಲಿ ಒಣಹವೆಯಿಂದ ಕೂಡಿರುತ್ತದೆ. ಬಿಸಿಲು ಹೆಚ್ಚಾಗಿರುತ್ತದೆ. ಇದು ಒಂದು ಮುಖ್ಯವಾದ ತೀರ್ಥಯಾತ್ರಾ ಸ್ಥಳವಾಗಿರುವುದರಿಂದ ಅನೇಕ ಪ್ರವಾಸಿಗರನ್ನು ಹಬ್ಬಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ತನ್ನತ್ತ ಸೆಳೆಯುತ್ತದೆ. ಪ್ರಯಗ್ರಾಜ್ ತಲುಪುವ ಬಗೆಯಾತ್ರಾರ್ಥಿಗಳು ಪ್ರಯಗ್ರಾಜ್ ಪಟ್ಟಣ ತಲುಪಲು ಯಾವುದೇ ವಾಯುಯಾನ, ರೈಲುಯಾನ ಅಥವಾ ಬಸ್ ಪ್ರಯಣವನ್ನು ಆಯ್ಕೆ ಮಾಡಿಕೊಳ್ಳಬಹುದು
ರಾಯ್ ಬರೇಲಿ | ಪ್ರತಾಪಗಡ | ಜಾವುನ್ ಪುರ | ||
ಕೌಶಾಂಬಿ | ಸಂತ ರವಿದಾಸ್ ನಗರ(ಭದೋಹಿ) | |||
ಪ್ರಯಗ್ರಾಜ್ | ||||
ಚಿತ್ರಕೂಟ | ರೇವಾ | ಮಿರ್ಜಾಪುರ |
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-05-20. Retrieved 2012-06-11.
- ↑ ದಿ ಕಾಂಗ್ರೆಸ್ –ಮೊದಲ ಇಪ್ಪತ್ತು ವರ್ಷಗಳು; ಪುಟ ೩೮,೩೯
- ↑ ಸ್ವಾತಂತ್ರ‍್ಯಕ್ಕಾಗಿ ಇಂಡಿಯಾ ಸೆಣಸಿದ ಬಗೆ: ಅಧಿಕೃತ ದಾಖಲೆಗಳು ಹೇಳಿದ ರಾಷ್ಟ್ರಿಯ ಕಾಂಗ್ರೆಸ್ ಕತೆ (೧೯೧೫) ಲೇ: ಅನಿ ಬೆಸೆಂತ್.
- ↑ "Allahabad : Census 2011". 2011 census of India. Retrieved 3 August 2012.
{{cite web}}
: Italic or bold markup not allowed in:|publisher=
(help) - ↑ "About Nagar Nigam Archived 2012-07-02 ವೇಬ್ಯಾಕ್ ಮೆಷಿನ್ ನಲ್ಲಿ.", Allahabad Nagar Nigam.
- ↑ "ಆರ್ಕೈವ್ ನಕಲು". Archived from the original on 2011-07-21. Retrieved 2012-06-11.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಅಲಹಾಬಾದ್ ನಗರದ ಅಧಿಕೃತ ತಾಣ
- ಅಲಹಾಬಾದ್ ಅಭಿವೃದ್ಧಿ ಪ್ರಾಧಿಕಾರ Archived 2010-04-26 ವೇಬ್ಯಾಕ್ ಮೆಷಿನ್ ನಲ್ಲಿ.
- ಅಲಹಾಬಾದ್ ನಗರಸಭೆ Archived 2009-09-09 ವೇಬ್ಯಾಕ್ ಮೆಷಿನ್ ನಲ್ಲಿ.
- ಅಲಹಾಬಾದ್ ನ್ಯಾಯಾಲಯ
- ವಿಕಿಟ್ರಾವೆಲ್ನಲ್ಲಿ ಅಲಹಾಬಾದ್
- North Western Provinces Archived 2018-12-01 ವೇಬ್ಯಾಕ್ ಮೆಷಿನ್ ನಲ್ಲಿ.
- Allahabad at Wikimapia - Showing places, geography, terrain, routes in and around Allahabad using satellite images