ವಿಷಯಕ್ಕೆ ಹೋಗು

ಗಾಂಧಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gandhara
1500 BC–500 BC
Location of Gandhara
Approximate boundaries of the Gandharan Empire, in present-day northern ಪಾಕಿಸ್ತಾನ, and northeast Afghanistan.
ರಾಜಧಾನಿ Not specified
ಸರ್ಕಾರ Monarchy
ಐತಿಹಾಸಿಕ ಯುಗ Ancient Era
 -  ಸ್ಥಾಪಿತ 1500 BC
 -  ಸ್ಥಾಪನೆ ರದ್ದತಿ 500 BC
ಇಂದು ಇವುಗಳ ಭಾಗ  ಅಫ್ಘಾನಿಸ್ತಾನ
 ಪಾಕಿಸ್ತಾನ

ಗಾಂಧಾರ ಆಧುನಿಕ ಉತ್ತರ ಪಾಕಿಸ್ತಾನ ಹಾಗೂ ಈಶಾನ್ಯ ಅಫ್ಘಾನಿಸ್ತಾನದ ರಾಜ್ಯಗಳಲ್ಲಿನ ಸ್ವಾತ್ ಹಾಗೂ ಕಾಬುಲ್ ನದಿ ಕಣಿವೆಗಳು ಮತ್ತು ಪೋಠೋಹಾರ್ ಪ್ರಸ್ಥಭೂಮಿಯಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು. ಪುರುಷಪುರ ಹಾಗೂ ತಕ್ಷಶಿಲಾ ಅದರ ಮುಖ್ಯ ನಗರಗಳಾಗಿದ್ದವು. ಗಾಂಧಾರ ರಾಜ್ಯವು ವೈದಿಕ ಯುಗದಲ್ಲಿ (ಕ್ರಿ.ಪೂ ೧೫೦೦-೫೦೦) ಅಸ್ತಿತ್ವದಲ್ಲಿತ್ತು.

Ancient Indian kingdoms, 600 B.C.
Ancient Indian kingdoms, 600 B.C.

ಇತಿವೃತ್ತ

[ಬದಲಾಯಿಸಿ]
  • ಪ್ರಾಚೀನ ಭಾರತದ ವಾಯವ್ಯ ಭಾಗದಲ್ಲಿ ಹಬ್ಬಿದ್ದ ಪ್ರದೇಶ. ಈ ಪ್ರದೇಶದ ಜನರನ್ನೂ ಗಾಂಧಾರರೆಂದು ಕರೆಯುತ್ತಿದ್ದದ್ದುಂಟು. ಇದರ ಮೇರೆಗಳು ಅಸ್ಪಷ್ಟವಾಗಿದ್ದುವಲ್ಲದೆ ಇದರ ವಿಸ್ತಾರ ಕಾಲಕಾಲಕ್ಕೆ ಬದಲಾಯಿಸುತ್ತಿತ್ತೆಂದು ತೋರುತ್ತದೆ. ಗಾಂಧಾರದ ಉಲ್ಲೇಖ ಮೊದಲು ಋಗ್ವೇದ ದಲ್ಲಿ ದೊರಕುತ್ತದೆ. ಅನಂತರದ ಬ್ರಾಹ್ಮಣಗಳು, ಪುರಾಣಗಳು ಮತ್ತು ಬೌದ್ಧ ಗ್ರಂಥಗಳಲ್ಲೂ ಇದರ ಪ್ರಸ್ತಾಪವಿದೆ.
  • ನಿಶ್ಚಿತ ಚಾರಿತ್ರಿಕ ದಾಖಲೆಗಳಲ್ಲಿ ಗಾಂಧಾರದ ಹೆಸರು ಮೊದಲು ಕಾಣಸಿಗುವುದು ಪರ್ಷಿಯದ ದೊರೆ ೧ನೆಯ ಡೇರಿಯಸನ (ಪ್ರ.ಶ.ಪು. ೫೨೨-೪೮೬) ಬೇಹಿಸ್ತಾನ್ ಶಾಸನದಲ್ಲಿ. ಹಿಂದೂಕುಷ್ ಪರ್ವತಶ್ರೇಣಿಯ ದಕ್ಷಿಣಕ್ಕಿದ್ದ ಪ್ರದೇಶಕ್ಕೆ ಗಾಂಧಾರವೆಂಬ ಹೆಸರಿತ್ತೆಂದು ಆ ಕಾಲದ ಇತರ ಆಧಾರಗಳಿಂದ ಸ್ಥೂಲವಾಗಿ ತಿಳಿಯುತ್ತದೆ.
  • ಯುವಾನ್ ಚಾಂಗ್ ಮತ್ತು ಇತರ ಚೀನೀ ಯಾತ್ರಿಕರ ಇತಿವೃತ್ತಗಳಲ್ಲಿ ಗಾಂಧಾರದ ಪ್ರಸಿದ್ಧ ನಗರಗಳು ಮತ್ತು ಬೌದ್ಧ ಕೇಂದ್ರಗಳನ್ನು ವಿಶೇಷವಾಗಿ ವಿವರಿಸಿರುವುದರಿಂದ, ಆ ಪ್ರದೇಶದ ಅಂದಿನ ವ್ಯಾಪ್ತಿಯನ್ನು ಊಹಿಸಬಹುದು. ಇವುಗಳ ಪ್ರಕಾರ ಗಾಂಧಾರ ಈಗಿನ ಉತ್ತರ ಪಾಕಿಸ್ತಾನದಲ್ಲಿ, ಸಿಂಧೂ ನದಿಯ ಪಶ್ಚಿಮದಿಂದ ಪೆಷಾವರ್ ತಗ್ಗಿನವರೆಗಿನ ಪ್ರದೇಶವನ್ನೂ ಪಶ್ಚಿಮೋತ್ತರದಲ್ಲಿ ಈಗಿನ ಆಫ್ಘಾನಿಸ್ತಾನದ ಸ್ವಾತ್ ಮತ್ತು ಕಾಬುಲ್ ಕಣಿವೆಯ ಪ್ರದೇಶವನ್ನೂ ಒಳಗೊಂಡಿತ್ತೆಂದು ತಿಳಿಯುತ್ತದೆ.
  • ತಕ್ಷಶಿಲೆ (ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯಲ್ಲಿರುವ ಈಗಿನ ಟ್ಯಾಕ್ಸಿಲ) ಗಾಂಧಾರದ ರಾಜಧಾನಿ ಯಾಗಿತ್ತು. ಪುಷ್ಕಳಾವತಿಯೂ (ಪಾಕಿಸ್ತಾನದ ಪೆಷಾವರ್ ಜಿಲ್ಲೆಯಲ್ಲಿರುವ ಚಾರ್ಸದ) ಕೆಲಕಾಲ ರಾಜಧಾನಿಯಾಗಿತ್ತು.ಅಕ್ಬರನ ಕಾಲದ ಐನ್-ಇ-ಆಕ್ಬರಿ ಗ್ರಂಥದ ಪ್ರಕಾರ ಅಂದಿನ ಗಾಂಧಾರ ಕಾಶ್ಮೀರ ಮತ್ತು ಅಟ್ಟಕ್ ಮಧ್ಯದ ಪ್ರದೇಶವಾಗಿದ್ದಿತು.
  • ಈಗ ಆಫ್ಘಾನಿಸ್ತಾನದಲ್ಲಿರುವ ಕಂದಹಾರ್ ನಗರದ ಹೆಸರಿನಲ್ಲಿ ಹಳೆಯ ಗಾಂಧಾರ ಪ್ರಾಂತ್ಯದ ಸ್ಮರಣೆ ಉಳಿದುಬಂದಿದೆ. ಗಾಂಧಾರದ ಮುಂಡಿಗಕ್, ಬೆಗ್ರಾಮ್, ಹಡ್ಡ, ತಕ್ಷಶಿಲಾ, ಚಾರ್ಸದ ಮುಂತಾದ ಅನೇಕ ಪ್ರಾಚೀನ ನೆಲೆಗಳಲ್ಲಿ ಉತ್ಖನನಗಳು ನಡೆದಿವೆ. ಮುಂಡಿಗಕ್ ನಲ್ಲಿ ಪ್ರ.ಶ.ಪು. 4ನೆಯ ಸಹಸ್ರಮಾನದಿಂದ ಚಾರಿತ್ರಿಕ ಕಾಲದವರೆಗೂ ಪ್ರಚಲಿತವಿದ್ದ ಸಂಸ್ಕೃತಿಗಳು ಬೆಳಕಿಗೆ ಬಂದಿವೆ.

ಅವಶೇಷಗಳು

[ಬದಲಾಯಿಸಿ]
  • ಹಡ್ಡ ಮತ್ತು ಬೆಗ್ರಾಮ್ ಬಹು ಮಟ್ಟಿಗೆ ಪ್ರಸಕ್ತಶಕದ ಆದಿ ಶತಮಾನಗಳಿಗೆ ಸೇರಿದ ನಗರಾವಶೇಷಗಳು. ಹಡ್ಡದಲ್ಲಿ ಅನೇಕ ವಾಸ್ತುಶಿಲ್ಪ ಕಲಾಕೃತಿಗಳೂ ಬೆಗ್ರಾಮ್‍ನಲ್ಲಿ ಇವುಗಳ ಜೊತೆಗೆ ಕೆತ್ತನೆಗಳೂ ದೊರಕಿವೆ. ತಕ್ಷಶಿಲಾದಲ್ಲಿ ಮೂರು ಕಾಲಗಳ ಅವಶೇಷಗಳು ಬೇರೆಬೇರೆ ದಿಬ್ಬ ಗಳಲ್ಲಿದ್ದವು. ಮೊದಲನೆಯ ಬೀರ್ ದಿಬ್ಬ ಪ್ರ.ಶ. ಪು. 6ನೆಯ ಶತಮಾನದಿಂದಅಲೆಗ್ಸಾಂಡರನ ಕಾಲದವರೆಗೆ ಉಪಸ್ಥಿತವಿದ್ದ ನಗರಾವಶೇಷ.
  • ಮುಂದಿನ ಸಿರ್ಕಪ್ ಪ್ರ.ಶ.ಪು. 2ನೆಯ ಶತಮಾನದಿಂದ 12ನೆಯ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ತದನಂತರದ ಸಿಸುರ್ಕ್‍ನಲ್ಲಿ ಕುಶಾನರ ಕಾಲದ ಅವಶೇಷಗಳಿವೆ. ತಕ್ಷಶಿಲಾ ನಗರ 5ನೆಯ ಶತಮಾನದ ಹೊತ್ತಿಗೆ ಕೊನೆಗೊಂಡಿತೆಂದು ತೋರುತ್ತದೆ. ಇಲ್ಲಿ ಕೋಟೆ, ಅರಮನೆ, ದೇವಾಲಯಗಳು, ಬೌದ್ಧಸ್ತೂಪಗಳು, ಮಠಗಳು, ವಾಸದ ಮನೆಗಳು ಮುಂತಾದ ಅನೇಕ ವಾಸ್ತು ಅವಶೇಷಗಳಲ್ಲದೆ ಕಲ್ಲು ಮತ್ತು ಲೋಹ ಕಲಾಕೃತಿಗಳೂ ಅನೇಕ ನಾಣ್ಯಗಳೂ ನಿತ್ಯೋಪಯೋಗಿ ಉಪಕರಣಗಳೂ ಆಯುಧಗಳೂ ಅಲಂಕರಣ ಸಾಮಗ್ರಿಗಳೂ ದೊರೆತಿವೆ.
  • ಚಾರ್ಸದದಲ್ಲಿ ಈಚೆಗೆ ನಡೆದಿರುವ ಉತ್ಖನನದಲ್ಲಿ ಪ್ರಚಲಿತಶಕದ ಆರಂಭದ ಶತಮಾನಗಳ ಅವಶೇಷಗಳು ಕಂಡುಬಂದಿವೆ. ಭಾರತದಲ್ಲಿ ಕ್ರೈಸ್ತಧರ್ಮದ ಅಸ್ತಿತ್ವದ ಬಗ್ಗೆ ಮಾಹಿತಿ ನೀಡುವ ಸಂತ ಪೀಟರನ ಪ್ರತಿಮೆ ಇವುಗಳಲ್ಲಿ ಬಹುಮುಖ್ಯವಾದದ್ದು. ಈ ಪ್ರದೇಶದಲ್ಲಿ ನಡೆದಿರುವ ಇತರ ಅನ್ವೇಷಣೆಗಳಿಂದ ಅನೇಕ ಪ್ರಾಗೈತಿಹಾಸಿಕ ನೆಲೆಗಳು, ಬಾಮಿಯಾನ್, ದರುಂತ, ಮುಂತಾದೆಡೆಗಳಲ್ಲಿ ಗುಹಾದೇವಾಲಯಗಳು, ಅನೇಕ ಶಾಸನಗಳು ಮತ್ತು ನಾಣ್ಯಗಳು ಗೋಚರವಾಗಿವೆ.
  • ಶಾಸನಗಳಲ್ಲಿ ಮಾನ್ಸೇರಾ ಶಾಬಾಸ್ಗರ್ಹಿಗಳ ಅಶೋಕನ ಶಿಲಾಲಿಪಿಗಳು ಮುಖ್ಯ. ಇತ್ತೀಚೆಗೆ ಕಂದಹಾರ್ ಬಳಿ ದೊರಕಿದ ಅದೇ ದೊರೆಯ ಗ್ರೀಕ್ ಮತ್ತು ಆರಮೇಯಿಕ್ ಶಾಸನಗಳೂ ಅನೇಕ ಶಿಲಾವಿಗ್ರಹಗಳ ಮೇಲಿರುವ ಖರೋಷ್ಠಿ ಶಾಸನಗಳೂ ಮುಖ್ಯವಾದವು. ಅನೇಕ ಉತ್ಖನನಗಳಲ್ಲಿ ಭಾರತದ ಅತ್ಯಂತ ಪ್ರಾಚೀನ ನಾಣ್ಯಗಳಾದ ಮುದ್ರಾಂಕಿತ ನಾಣ್ಯಗಳೂ ಗ್ರೀಕರ, ಪಾರ್ಥಿಯನರ, ಶಕರ, ಕುಷಾಣರ, ಸ್ಯಾಸಾನೀಯನರ ಮತ್ತು ಅನಂತರದ ರಾಜವಂಶೀಯರ ನಾಣ್ಯಗಳು ಬೆಳಕಿಗೆ ಬಂದಿವೆ.
Female spouted figure, terracotta, Charsadda, Gandhara, 3rd to 1st century BC Victoria and Albert Museum

ಗಾಂಧಾರದ ಪ್ರಾಮುಖ್ಯತೆ

[ಬದಲಾಯಿಸಿ]
  • ಭಾರತದ ಚರಿತ್ರೆಯಲ್ಲಿ ಗಾಂಧಾರಕ್ಕೆ ಪ್ರಾಮುಖ್ಯತೆ ಇದೆ. ಖೈಬರ್, ಬೋಲಾನ್ ಕಣಿವೆಗಳ ಸುತ್ತಲಿನ ಪ್ರದೇಶವನ್ನು ಒಳಗೊಂಡು, ಪಶ್ಚಿಮ ಮತ್ತು ಮಧ್ಯ ಏಷ್ಯದಿಂದ ಭಾರತದ ಕಡೆಯ ಪ್ರವೇಶ ದ್ವಾರದಲ್ಲಿರುವುದೇ ಗಾಂಧಾರದ ಮಹತ್ತ್ವಕ್ಕೆ ಕಾರಣ. ಇದು ಭಾರತೀಯ ಮತ್ತು ಪಶ್ಚಿಮ ಸಂಗಮ ಸ್ಥಾನ. ಇತಿಹಾಸಪೂರ್ವ ಕಾಲದಲ್ಲೇ ಗಾಂಧಾರದಲ್ಲಿ ಇರಾನ್ ಪ್ರಸ್ಥ ಭೂಮಿಯಿಂದ ಹಬ್ಬಿದ ಹಲವು ಸಂಸ್ಕೃತಿಗಳು ಪ್ರಚಲಿತವಿದ್ದವು.
  • ಅನಂತರ ಇದರ ಕೆಲವು ಭಾಗಗಳು ಪ್ರಸಿದ್ಧ ಹರಪ್ಪ ಸಂಸ್ಕೃತಿಯ ಪ್ರಭಾವಕ್ಕೆ ಒಳಪಟ್ಟಿದ್ದವು. ಪ್ರಾಯಶಃ ಆರ್ಯ ಭಾಷಾಭಾಷಿಗಳು ಭಾರತವನ್ನು ಪ್ರವೇಶಿಸಿದ್ದು ಈ ಭಾಗದಿಂದಲೇ. ಮುಂದೆ ಇತಿಹಾಸ ಯುಗದ ಆರಂಭದಲ್ಲಿ ಇದು ಸುಮಾರು ಎರಡು ಶತಮಾನಗಳ ಕಾಲ ಪರ್ಷಿಯನ್ ಸಾಮ್ರಾಜ್ಯದ ಭಾಗವಾಗಿತ್ತು. ಗ್ರೀಕ್ ಚರಿತ್ರಕಾರ ಹೆಕ್ಟೀಯಸ್ನ ಒಂದು ಹೇಳಿಕೆಯ ಪ್ರಕಾರ ಪರ್ಷಿಯನ್ ಸಾಮ್ರಾಜ್ಯದ ಇಪ್ಪತ್ತೆರಡು ಪ್ರಾಂತ್ಯಗಳಲ್ಲಿ (ಸತ್ರಪಿ) ಗಾಂಧಾರ ಹದಿನೇಳನೆಯದು.
  • ಬೇಹಿಸ್ತಾನ್ ಶಾಸನವೂ ಹಿರಾಡೊಟಸನ ಉಲ್ಲೇಖಗಳೂ ಇದಕ್ಕೆ ಇಂಬುಗೊಡುತ್ತವೆ. ಗಾಂಧಾರ ಪರ್ಷಿಯನ್ ಸಾಮ್ರಾಜ್ಯದ ಅಧೀನವಾದ್ದು ಪ್ರಾಯಶಃ ಸೈರಸ್ ದೊರೆಯ (ಪ್ರ.ಶ.ಪು. 559-530) ಕಾಲದಲ್ಲಿ. ಪರ್ಷಿಯನ್ ಸಾಮ್ರಾಜ್ಯದ ಅಂತ್ಯದ ಅನಂತರ ಪ್ರ.ಶ.ಪು. ಸು. 327ರಲ್ಲಿ ಮ್ಯಾಸಿಡಾನ್ ದೊರೆ ಅಲೆಕ್ಸಾಂಡರನ ಕೈವಶವಾಯಿತು.
  • ಅನಂತರ ಅವನ ದಂಡಾಧಿಕಾರಿ ಸೆಲ್ಯೂಕಸನ ಕೈಸೇರಿ ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯದಲ್ಲಿ ಲೀನವಾಯಿತು. ಅಶೋಕಮೌರ್ಯನ ಮರಣಾನಂತರ ಆ ಸಾಮ್ರಾಜ್ಯ ಒಡೆದಾಗ, ಪ್ರ.ಶ.ಪು. 208ರಲ್ಲಿ ಸೆಲ್ಯೂಕಸನ ವಂಶೀಯರು ಪುನಃ ಇದನ್ನು ಆಕ್ರಮಿಸಿದರು. ಅಲ್ಲಿಂದ ಪ್ರಚಲಿತಶಕಾರಂಭದ ವರೆಗೆ ಗ್ರೀಕ್-ಬ್ಯಾಕ್ಟ್ರಿಯನರು, ಶಕರು ಇಲ್ಲಿ ಆಳಿದರು.
  • 1ನೆಯ ಶತಮಾನದ ಮೊದಲ ಭಾಗದಲ್ಲಿ ಮಧ್ಯ ಏಷ್ಯದಿಂದ ಬಂದ ಯೂ-ಚಿ ಕುಲದ ಕುಜುಲ ಕಡ್ಫೀಸಿಸನ ಕಾಲದಲ್ಲಿ ಕುಶಾಣರ ಅಧೀನವಾಗಿ, ಅನಂತರ ಆ ವಂಶದ ವಿಮ, ಕನಿಷ್ಕ, ವಾಸುದೇವ ಮುಂತಾದವರ ಆಳ್ವಿಕೆಯಲ್ಲಿದ್ದು, 3ನೆಯ ಶತಮಾನದ ಅಂತ್ಯದ ಹೊತ್ತಿಗೆ ಸ್ಯಾಸಾನೀಯ ಕುಲದ 1ನೆಯ ಆರ್ದಶಿರ ಮತ್ತು 2ನೆಯ ಶಾಪುರನ ಧಾಳಿಗಳಿಂದ ಸ್ಯಾಸಾನೀಯ ಸಾಮ್ರಾಜ್ಯದ ಭಾಗವಾಯಿತು.
  • ಸುಮಾರು 477ರಲ್ಲಿ ಶ್ವೇತ ಹೂಣರು ಇದರ ಮೇಲೆ ಧಾಳಿ ಮಾಡಿದರು. ಹೂಣರನ್ನು ಗುಪ್ತ ವಂಶೀಯರು ಸೋಲಿಸಿದ ಮೇಲೆ ಗಾಂಧಾರ ಸ್ವಲ್ಪಕಾಲ ಗುಪ್ತಸಾಮ್ರಾಜ್ಯದಲ್ಲಿ ಸೇರಿತ್ತು. ಅನಂತರ ಅದು ಕನೌಜಿನ ಹರ್ಷವರ್ಧನನ ಆಸರೆಯಲ್ಲಿತ್ತು. 7ನೆಯ ಶತಮಾನಾಂತ್ಯದಲ್ಲಿ ಅರಬರು ಈ ಪ್ರದೇಶವನ್ನು ಆಕ್ರಮಿಸಿದರು.
  • ಬಹುಶಃ ಈ ಕಾಲದಿಂದ ಗಾಂಧಾರ ಪ್ರಾಂತ್ಯ ತನ್ನ ವೈಶಿಷ್ಟ್ಯವನ್ನು ಕಳೆದುಕೊಂಡಿತು. ಮುಂದೆ ಈ ಭಾಗ ಶಾಹಿ ಮುಂತಾದ ಅನೇಕ ಹಿಂದೂರಾಜರು, ದೆಹಲಿಯ ಸುಲ್ತಾನರು, ಆಫ್ಘಾನಿಸ್ತಾನದ ರಾಜವಂಶೀಯರು, ಮೊಗಲರು, ಸಿಕ್ಖರು ಮುಂತಾದವರ ಆಧೀನವಾಗಿ 19ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಆಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತಗಳಲ್ಲಿ ಹಂಚಿಹೋಯಿತು.
Mother Goddess (fertility divinity), possibly derived from the Indus Valley Civilization, terracotta, Sar Dheri, Gandhara, 1st century BC, Victoria and Albert Museum

ಹೊರದೇಶಗಳ ಸಂಸ್ಕೃತಿಗಳ ಪ್ರಭಾವ

[ಬದಲಾಯಿಸಿ]
  • ಗಾಂಧಾರ ಕಾಲಕಾಲಕ್ಕೆ ಭಾರತೀಯರ ಇಲ್ಲವೇ ಪರಕೀಯರ ಆಳ್ವಿಕೆಗೆ ಒಳಪಡುತ್ತಿದ್ದುದರಿಂದ ಇಲ್ಲಿಯ ಸಾಂಸ್ಕೃತಿಕ ಸ್ವರೂಪದ ಮೇಲೆ ಪರಿಣಾಮವುಂಟಾಗಿದೆ. ಈ ಪ್ರಾಂತ್ಯ ಹಿಂದೂ ಮತ್ತು ಅನ್ಯ ಸಂಸ್ಕೃತಿಗಳನ್ನು ಬೆಸೆಯುತ್ತಿದ್ದ ಪ್ರದೇಶ. ಆದರೂ ಹೊರದೇಶಗಳ ಸಂಸ್ಕೃತಿಗಳ ಪ್ರಭಾವವೇ ಇಲ್ಲಿ ವಿಶೇಷವಾಗಿತ್ತು. ಗಾಂಧಾರದ ಜನ ವೇದಧರ್ಮ ನಿಷ್ಠರಲ್ಲವೆಂದೂ ಆದ್ದರಿಂದ ಅಲ್ಲಿಗೆ ಹೋದವರು ಪ್ರಾಯಶ್ಚಿತ್ತ ಮಾಡಿಕೊಳ್ಳ ಬೇಕೆಂದೂ ಕೆಲವು ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿ ವಿಧಿಸಲಾಗಿದೆ.
  • ಈ ಪ್ರದೇಶಗಳಲ್ಲಿ ಹರಡಿದ್ದುದು ಮೊದಲು ಪ್ರಾಚೀನ ಇರಾನೀಯ, ಅನಂತರ ವೇದಕಾಲೀನ ಹಿಂದು, ಅನಂತರ ಬಹುಮಟ್ಟಿಗೆ ಗ್ರೀಕ್-ರೋಮನ್ ಸಂಸ್ಕೃತಿಗಳು. ಪ್ರಚಲಿತ ಶಕದ ಆರಂಭದ ಶತಮಾನಗಳಲ್ಲಿ ಮಹಾಯಾನ ಬೌದ್ಧಧರ್ಮ ಇಲ್ಲಿ ಪ್ರಬಲಿಸಿ ಗ್ರೀಕ್-ರೋಮನ್ ಮತ್ತು ಭಾರತೀಯ ಅಂಶಗಳನ್ನೊಳಗೊಂಡಿದ್ದು ಒಂದು ವಿಶಿಷ್ಟ ಸಂಸ್ಕೃತಿ ಹರಡಿತು. 11-12ನೆಯ ಶತಮಾನಗಳಿಂದ ಇಸ್ಲಾಂ ಇಲ್ಲಿಯ ಪ್ರಧಾನ ಧರ್ಮವಾಗಿ, ಇಸ್ಲಾಮೀ ಸಂಸ್ಕೃತಿ ಇಲ್ಲಿ ಹರಡಿತು.
  • ಇಸ್ಲಾಮೀ ಸಂಸ್ಕೃತಿ ಹರಡಿದ ಮೇಲೆ ಗಾಂಧಾರ ಪ್ರಾಂತ್ಯದ ಕಲೆಯಲ್ಲಿ ಸತ್ವವೇನೂ ಕಾಣುವುದಿಲ್ಲ. ಇದಕ್ಕೆ ಮುನ್ನ ಶ್ವೇತಹೂಣರ ಅಥವಾ ಅರಬ್ಬರ ಆಕ್ರಮಣದಿಂದಾಗಿ ಈ ಪ್ರದೇಶ ಆರ್ಥಿಕ ಹಾಗೂ ಸಾಂಸ್ಕೃತಿವಾಗಿ ಜರ್ಝರಿತವಾದ್ದರಿಂದ ಆ ಕಾಲದ ಕೃತಿಗಳೂ ಕಲೈೕತಿಹಾಸಿಕ ದೃಷ್ಟಿಯಿಂದ ಬರಡೇ. ಆದರೆ ಅದಕ್ಕೂ ಹಿಂದೆ, ಎಂದರೆ ಪ್ರ.ಶ. 6ನೆಯ ಶತಮಾನಕ್ಕೆ ಹಿಂದೆ, ಇಲ್ಲಿ ಬೆಳೆದ ಕಲಾ ಸಂಪ್ರದಾಯ ವೈಭವವಾಗಿತ್ತು.

ಗಮನಾರ್ಹ ವಾಸ್ತುಕೃತಿ

[ಬದಲಾಯಿಸಿ]
  • ಗಾಂಧಾರದ ಅತ್ಯಂತ ಪ್ರಾಚೀನ ಗಮನಾರ್ಹ ವಾಸ್ತುಕೃತಿಯೆಂದರೆ ಪ್ರ.ಶ.ಪು. 3ನೆಯ ಸಹಸ್ರಮಾನಕ್ಕೆ ಸೇರಿದ ಮಂಡಿಗಕ್ನ ಅರಮನೆ. ಇತ್ತೀಚೆಗೆ ಉತ್ಖನನದಲ್ಲಿ ಬೆಳಕಿಗೆ ಬಂದಿರುವ ಇದರ ಅವಶೇಷಗಳಲ್ಲಿ, ಆ ಕಾಲದಲ್ಲಾಗಲೇ ಇಲ್ಲಿ ಹರಡಿದ್ದ ಸುಮೇರಿಯ ವಾಸ್ತುಸಂಪ್ರದಾಯದ ಕುರುಹುಗಳು ಎದ್ದು ಕಾಣುತ್ತವೆ. ಸುಮಾರು ಚೌಕಾಕೃತಿಯಲ್ಲಿರುವ ಈ ಕಟ್ಟಡದ ಹೊರಗೋಡೆಗಳಲ್ಲಿ ಮೆಸಪೊಟೇಮಿಯದ ಸಮಕಾಲೀನ ದೇವಾಲಯಗಳ ರೀತಿಯ ಅರೆಗಂಬಗಳ ಅಲಂಕರಣ ಇದೆ.
  • ಅಲ್ಲದೆ ಈ ಕಾಲದ ಚಿತ್ರಿತ ಮಡಕೆಗಳು, ಸುಟ್ಟ ಮಣ್ಣಿನ ಬೊಂಬೆಗಳು ಮತ್ತು ಇತರ ಶಿಲ್ಪಗಳು ಮೆಸಪೊಟೇಮಿಯ ಮತ್ತು ಹರಪ್ಪ ಸಂಸ್ಕೃತಿಯ ಸಂಪ್ರದಾಯದವುಗಳಾಗಿವೆ. ಅಶೋಕನ ಕಾಲದಲ್ಲಿ ಬೌದ್ಧಧರ್ಮ ಇಲ್ಲಿ ಹರಡಿದಾಗಿನಿಂದ ಶಿಲೆಯ ಬಳಿಯ ಧರ್ಮರಾಜಿಕಾ ಎಂಬ ಬೌದ್ಧ ಸ್ತೂಪವನ್ನು ಅನಂತರದ ಕಾಲದಲ್ಲಿ ಬಹುವಾಗಿ ನವೀಕರಿಸಲಾಗಿದ್ದರೂ, ಅದರ ಮೂಲಭಾಗ ಮೌರ್ಯಕಾಲದ್ದಾಗಿದೆ.
  • ಧರ್ಮರಾಜಿಕಾ ಸ್ತೂಪ ಒಂದು ವೃತ್ತಾಕಾರದ ಕಟ್ಟಡ. ಇದರಲ್ಲಿ ತಳದಲ್ಲಿ ವೃತ್ತಾಕಾರದ ಜಗತಿಯೂ ಅದರ ಮೇಲೆ ಅರ್ಧಗೋಳಾಕಾರದ ಅಂಡವೂ ಇದ್ದವು. ಜಗತಿಗೆ ಹತ್ತಲು ನಾಲ್ಕು ಮುಖ್ಯದಿಕ್ಕುಗಳಲ್ಲಿ ಮೆಟ್ಟಿಲುಗಳಿದ್ದವು. ಸ್ತೂಪದ ಒಳಭಾಗವನ್ನು ಒರಟು ಕಲ್ಲುಗಳನ್ನು ಪೇರಿಸಿ ಕಟ್ಟಲಾಗಿದೆ. ಇದರ ಸುತ್ತ ಸಕೇಂದ್ರದ ಇನ್ನೊಂದು ವೃತ್ತಾಕಾರದ ಕಲ್ಲು ಗೋಡೆಯಿದೆ; ಒಳಹೊರಗೋಡೆಗಳನ್ನು ಅನೇಕ ಅಡ್ಡಗೋಡೆಗಳಿಂದ ಸೇರಿಸಲಾಗಿದೆ.
  • ಈ ಭಾಗ ಕುಶಾಣರ ಕಾಲದ್ದಿರಬಹುದೆಂದು ಊಹೆ. ಸ್ತೂಪದ ಹೊರಮೈಯಲ್ಲಿ ಸುಣ್ಣಕಲ್ಲಿನ ಸೈಜುಗಲ್ಲುಗಳಿದ್ದು ಅವುಗಳ ಮಧ್ಯೆ ದೇವಕೋಷ್ಠಗಳೂ ಇವೆ. ಈಗ ಇರುವ ಜಗತಿ ಪ್ರಾಯಶಃ ಶಕ ಅರಸರ (ಪ್ರ.ಶ.ಪು. 1ನೆಯ ಶತಮಾನ) ಕಾಲದ್ದು. ಸ್ತೂಪದ ಸುತ್ತಲೂ ಪ್ರದಕ್ಷಿಣೆ ಮಾಡಲು ಇದರಲ್ಲಿ ಪ್ರದಕ್ಷಿಣಾಪಥವಿದೆ. ಗಾಂಧಾರದಲ್ಲಿ ಈ ಸ್ತೂಪವೇ ಬಹು ಪ್ರಸಿದ್ಧವಾದ್ದು.

ಗಾಂಧಾರದ ಸ್ತೂಪ ಶೈಲಿಯ ಬೆಳೆವಣಿಗೆ

[ಬದಲಾಯಿಸಿ]
  • ಇಲ್ಲಿ ಕಂಡುಬರುವ ವಾಸ್ತುರೂಪ ಎಲ್ಲೆಡೆಯೂ ಹರಡಿ ಗಾಂಧಾರದ ಸ್ತೂಪ ಶೈಲಿಯ ಬೆಳೆವಣಿಗೆಗೆ ಕಾರಣವಾಯಿತು. ತಕ್ಷಶಿಲೆಯ ಸಿರ್ಸುಕ್ ಅವಶೇಷಗಳ ಬಳಿ ಇರುವ ಶಿರೋಧಾನ ಸ್ತೂಪ ಸುಮಾರು ಇದೇ ಮಾದರಿಯಲ್ಲಿ, ಪುರ್ಣ ಭಾರತೀಯ ಸ್ತೂಪ ವಾಸ್ತುವಿನೊಡನೆ ಕೊರಿಂಥಿಯನ್ ಕಂಬ ಮುಂತಾದ ಗ್ರೀಕ್-ರೋಮನ್ ಅಂಶಗಳನ್ನೂ ಅಳವಡಿಸಿಕೊಂಡಿದೆ. ಈ ಪ್ರದೇಶದ ಸ್ತೂಪವಾಸ್ತು ಕುಶಾಣರ ಕಾಲದಲ್ಲಿ ಒಂದು ವಿಶಿಷ್ಟ ರೂಪ ತಳೆಯಿತು.
  • ಇವುಗಳಲ್ಲಿ ಚೌಕದ ಜಗತಿ, ಮೇಲೆ ಅನೇಕ ಸ್ತರಗಳ ಸ್ತೂಪಪೀಠ, ಅದರ ಛತ್ರಾವಳಿ ಇರುತ್ತವೆ. ಅಲ್ಲದೆ ಸ್ತೂಪದ ಸುತ್ತಲೂ ದೇವಕೋಷ್ಠಗಳ ಅಥವಾ ಸುದ್ದೆಯ ಉಬ್ಬುಶಿಲೆಗಳ ಅಲಂಕರಣ ಸಾಮಾನ್ಯ. ಈ ರೀತಿಯ ಸ್ತೂಪಗಳು ಮೊಹ್ರಾಮೊರಡು, ಪಿಪ್ಪಲ, ಜೌಲಿಯನ್ ಮುಂತಾದೆಡೆಗಳಲ್ಲಿ ಕಂಡುಬಂದಿವೆ.
  • ಅಲ್ಲದೆ ಈ ಕಾಲದ ಸ್ತೂಪಗಳ ಸುತ್ತಲೂ ಶ್ರದ್ಧಾನ್ವಿತರು ಆಗಿಂದಾಗ್ಗೆ ಸೇರಿಸಿದ ಅನೇಕ ಸಣ್ಣ ಸ್ತೂಪಗಳೂ ಬುದ್ಧಗೃಹಗಳೂ ಈ ಪ್ರಾಂತ್ಯದ ಸ್ತೂಪ ಕಟ್ಟಡಗಳಿಗೆ ಬೋರುಗಲ್ಲುಗಳನ್ನೇ ಸಾಮಾನ್ಯವಾಗಿ ಬಳಸುತ್ತಿದ್ದರು. ಹೊರಮೈ ಮಾತ್ರ ಕಡೆದ ಸೈಜುಗಲ್ಲುಗಳು ಮತ್ತು ಚಪ್ಪಡಿಗಳಿಂದ ಕೂಡಿರುತ್ತದೆ. ಒಮ್ಮೊಮ್ಮೆ ಇಟ್ಟಿಗೆಯನ್ನು ಬಳಸಿರುವುದೂ ಉಂಟು.
  • ಈ ಸ್ತೂಪಗಳ ಸಮೀಪದಲ್ಲೇ ಬೌದ್ಧ ಭಿಕ್ಷುಗಳಿಗಾಗಿ ವಿಹಾರಗಳು ಇದ್ದು ಇವುಗಳಲ್ಲಿ ಸಾಮಾನ್ಯವಾಗಿ ಚೌಕ ಅಂಗಳದ ಸುತ್ತ ಅನೇಕ ಕೋಣೆಗಳನ್ನು ಅಳವಡಿಸಲಾಗಿರುತ್ತದೆ. ಅನೇಕ ಗೋಡೆಗಳ ಮೇಲೆ ಬೌದ್ಧ ಪ್ರತಿಮೆಗಳು ಮತ್ತು ಚಿಹ್ನೆಗಳನ್ನು ಸುದ್ದೆಯಲ್ಲಿ ರೂಪಿಸಿ ಇವನ್ನು ಬಣ್ಣದಿಂದ ಅಲಂಕರಿಸುತ್ತಿದ್ದರು. ಇದು ಗಾಂಧಾರ ಶೈಲಿಯ ಸಂಘಾರಾಮಗಳ ವೈಶಿಷ್ಟ್ಯ.

ಗ್ರೀಕ್ ಮಾದರಿ

[ಬದಲಾಯಿಸಿ]
  • ಬೌದ್ಧವಾಸ್ತುವಲ್ಲದೆ ಇತರ ರೀತಿಯ ಕಟ್ಟಡಗಳೂ ಈ ಪ್ರದೇಶದಲ್ಲಿವೆ. ತಕ್ಷಶಿಲೆಯ ಬಳಿಯ ಜಂಡಿಯಾಲ್ನಲ್ಲಿರುವ ದೇವಾಲಯ ಅವುಗಳ ಪೈಕಿ ಮುಖ್ಯವಾದ್ದು. ಪ್ರ.ಶ.ಪು. 2ನೆಯ ಶತಮಾನದ್ದಿರಬಹುದಾದ ಈ ಕಟ್ಟಡ, ಗ್ರೀಕ್ ವಾಸ್ತುರೀತಿಯಲ್ಲಿದೆ. ಇದರ ವಿಸ್ತಾರ 47.40ಘಿ24 ಚ.ಮೀ. ಮಾತ್ರ. ಆದರೂ ಗ್ರೀಕರ ದೇವಸ್ಥಾನಗಳಲ್ಲಿರುವಂತೆ ಒಂದು ಗರ್ಭಗೃಹ, ಮುಂಭಾಗದಲ್ಲಿ ಎರಡು ಕಂಬಗಳಿರುವ ಒಂದು ಮುಮ್ಮಂಟಪ, ಹಿಂಭಾಗದಲ್ಲೊಂದು ಸಣ್ಣ ಆವರಣ ಮತ್ತು ಸುತ್ತಲೂ ಕಂಬಗಳ ಮೇಲೆ ಎತ್ತಿರುವ ಪಡಸಾಲೆ ಇವೆ.
  • ಇಲ್ಲಿ ಉಪಯೋಗಿಸಿರುವ ಕಂಬಗಳು ಐಯೋನಿಯನ್ ರೀತಿಯವು. ಕಟ್ಟಡ ಗ್ರೀಕ್ ಮಾದರಿಯಲ್ಲಿದ್ದರೂ ಇದು ಇರಾನಿನ ಜೋ಼ರೋಆಸ್ಟ್ರಿಯನ್ ಪಂಥದ ಅಗ್ನಿ ದೇವಾಲಯವಿರಬೇಕೆಂದು ವಿದ್ವಾಂಸರ ಊಹೆ. ಗಾಂಧಾರ ಕಲಾ ಸಂಪ್ರದಾಯದ ಪರಮೋಚ್ಛಸಾಧನೆಯೆಂದರೆ ಶಿಲ್ಪಗಳು. ಈ ಶೈಲಿಯ ಶಿಲಾಶಿಲ್ಪಗಳು ತಕ್ಷಶಿಲೆ, ಹಡ್ಡ, ಚಾರ್ಸದ ಮುಂತಾದೆಡೆಗಳಲ್ಲಿ ಬಹುಸಂಖ್ಯೆಯಲ್ಲಿ ದೊರಕಿವೆ.
  • ಆ ಪ್ರದೇಶದ ಸಾಂಸ್ಕೃತಿಕ ಸಂಕರವೇ ಆ ಶೈಲಿಯ ರೂಪಣೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಇದುವರೆಗೆ ದೊರಕಿರುವ ಶಿಲ್ಪಗಳೇ ಬಹುಮಟ್ಟಿಗೆ ಬೌದ್ಧ ಶಿಲ್ಪಗಳು. ಇವುಗಳಲ್ಲಿ ಹಲವು ಬುದ್ಧ ಮತ್ತು ಬೋಧಿಸತ್ತ್ವ ವಿಗ್ರಹಗಳಿವೆ. ಸ್ತೂಪಗಳಲ್ಲಿ ಕಡೆದ ಅರೆ ಉಬ್ಬುಶಿಲ್ಪವಿರುವ ಚಪ್ಪಡಿಗಳೂ ವಿಶೇಷವಾಗಿವೆ. ಈ ಶಿಲ್ಪಗಳ ವಸ್ತು ಬೌದ್ಧಧರ್ಮವಾದರೂ ಇವುಗಳ ರೂಪಣೆಯ ರೀತಿ ಗ್ರೀಕ್ ರೋಮನ್. ಇದರಲ್ಲಿ ಕೆಲವು ಇರಾನೀಯ ಅಂಶಗಳೂ ಬೆರೆತುಕೊಂಡಿವೆ.

ಗಾಂಧಾರದ ಶಿಲಾ ಶಿಲ್ಪಗಳು

[ಬದಲಾಯಿಸಿ]
  • ಗಾಂಧಾರದ ಶಿಲಾ ಶಿಲ್ಪಗಳೆಲ್ಲ ಸಾಮಾನ್ಯವಾಗಿ ಒಂದು ರೀತಿಯ ಕಂದು ಬಣ್ಣದ ಪದರಶಿಲೆಯಲ್ಲಿ ಮಾಡಿದವಾಗಿವೆ. ಬುದ್ಧನನ್ನು ಭಾರತೀಯ ಬೌದ್ಧ ಸಂಪ್ರದಾಯದ ನಂಬಿಕೆಗಳಂತೆ ಕಾವಿ ಧರಿಸಿದ ಯತಿಯೊಬ್ಬ ಅಭಯ ನೀಡುತ್ತಿರುವಂತೆಯೋ ಧ್ಯಾನಾಸಕ್ತನಾಗಿರುವಂತೆಯೋ ನಿರೂಪಿಸಿದ್ದರೂ ಬುದ್ಧನ ಮುಖಭಾವ, ದೈಹಿಕ ಪ್ರಮಾಣಗಳು ಮುಂತಾದವುಗಳಲ್ಲಿ ಇವು ಗ್ರೀಕ್, ದೇವತೆಗಳ ಶಿಲ್ಪಗಳನ್ನು ಹೋಲುತ್ತವೆ.
  • ಇಲ್ಲಿ ಭಾರತೀಯ ಆದರ್ಶವಾದ ಅಂತಃಶಕ್ತಿಯ ನಿರೂಪಣೆಗಿಂತಲೂ ಬಾಹ್ಯ ಸೌಂದರ್ಯಕ್ಕೇ ಹೆಚ್ಚು ಗಮನ ಕೊಡಲಾಗಿದೆ. ಕೆಲವು ಬುದ್ಧ ವಿಗ್ರಹಗಳಲ್ಲಿ ಮೀಸೆಯನ್ನು ತೋರಿಸಿರುವುದೂ ಉಂಟು. ತಲೆಗೂದಲು ಗುಂಗುರು ಗುಂಗುರಾಗಿ ಮೇಲೇರಿರುತ್ತದೆ. ಧರಿಸಿರುವ ಉಡುಪು ಗ್ರೀಕರ ಟೋಗ ಮಾದರಿಯದು. ಅಲ್ಲದೆ ಭಾರತೀಯ ಸಂಪ್ರದಾಯಗಳಲ್ಲಿರುವಂತೆ ತೆಳುವಾಗಿರದೆ ಅಂಗಗಳು ಪೂರ್ತ ಮುಚ್ಚುವಂತೆ ದಪ್ಪ ಬಟ್ಟೆಯಲ್ಲಿ ಮಾಡಿದಂತಿದ್ದು ಹಲವು ನೆರಿಗೆಗಳನ್ನು ರೂಪಿಸಲಾಗಿರುತ್ತದೆ.
  • ಬುದ್ಧನ ಜನ್ಮ, ನಿಷ್ಕ್ರಮಣ, ಶ್ರಾವಸ್ತಿಯ ಪವಾಡ, ಚೇತವನದ ಆತಿಥ್ಯ, ಸಾರನಾಥದಲ್ಲಿ ಧರ್ಮಪ್ರಸಾರ ಮುಂತಾದವೂ ಕುರು, ಶಿಬಿ, ಮಹಾಕಪಿ ಮುಂತಾದ ಭಾರತೀಯ ಬೌದ್ಧ ಕಥೆಗಳೂ ಉಬ್ಬು ಶಿಲ್ಪಗಳಲ್ಲಿ ಕಂಡುಬಂದರೂ ಈ ನಿರೂಪಣೆಯಲ್ಲಿ ಬರುವ ಪಾತ್ರಧಾರಿಗಳೆಲ್ಲ ಗ್ರೀಕರಂತಿವೆ. ಇವುಗಳಲ್ಲಿಯೂ ದೇಹಸೌಂದರ್ಯ, ಮಾಟ, ನಿಲುವು ಎಲ್ಲವೂ ಗ್ರೀಕ್ ಸಂಪ್ರದಾಯದ್ದು.
  • ಅಲ್ಲದೆ ದಪ್ಪ ಹಾರವನ್ನು ಹೊತ್ತಿರುವ ಬೆತ್ತಲೆ ಕುಬ್ಜರ ಚಿತ್ರಗಳೂ ಡೋರಿಕ್, ಐಯೋನಿಯನ್ ಮತ್ತು ಕೊರೆಂಥಿಯನ್ ಮಾದರಿಯ ಅರೆಗಂಬಗಳೂ ಇರುತ್ತವೆ. ಕೆಲವೊಮ್ಮೆ ಇಂದ್ರ, ಬ್ರಹ್ಮ ಮುಂತಾದ ಉಪದೇವತೆಗಳ ಅಥವಾ ಮಾಯಾದೇವಿ ಯಶೋಧರಾ ಮುಂತಾದ ವ್ಯಕ್ತಿಗಳ ನಿರೂಪಣೆ ಗ್ರೀಕ್ ದೇವತೆಗಳ ಪ್ರತಿಕೃತಿಗಳಂತೆ ಕಾಣುತ್ತವೆ. ಹಲವೊಮ್ಮೆ ಸುಂದರ ಸ್ತ್ರೀಯರು, ಮಧ್ಯಪಾನಾಸಕ್ತರು ಮುಂತಾದವರ ನಿರೂಪಣೆಗಳು ಪುರ್ಣ ಗ್ರೀಕ್ ಮಾದರಿಯಲ್ಲಿ ಬರುವುದೂ ಉಂಟು.
  • ಈ ಶಿಲ್ಪಗಳಲ್ಲಿ ಅಲ್ಲಲ್ಲಿ ಕಂಡುಬರುವ ನಾನೀ ದೇವತೆ, ರೆಕ್ಕೆಯುಳ್ಳ ಸಿಂಹಗಳು, ನಿತಂಬಕ್ಕೆ ನಿತಂಬವನ್ನು ಅನಿಸಿ ಕುಳಿತ ಸಿಂಹಗಳು ಅಥವಾ ಗೂಳಿಗಳು ಇರುವ ಬೋದಿಗೆಗಳನ್ನೊಳಗೊಂಡ ಕಂಬಗಳು, ನರಶಿರಗಳುಳ್ಳ ಅನೇಕ ವಿಚಿತ್ರ ಪ್ರಾಣಿಗಳು ಇರಾನೀಯ ಶಿಲ್ಪಶೈಲಿಯಲ್ಲಿ ರೂಪಿಸಲಾದವು. ಇದೇ ರೀತಿಯಲ್ಲಿ ಸುದ್ದಿಯಲ್ಲಿ ಮಾಡಿದ ಅನೇಕ ಶಿಲ್ಪಗಳೂ ದೊರಕಿವೆ. ಇವು ಪ್ರಾಯಶಃ ಶಿಲಾಶಿಲ್ಪಗಳ ಅನಂತರದ ಕಾಲದವೆಂದು ಕೆಲವು ವಿದ್ವಾಂಸರ ಊಹೆ.

ಇರಾನಿ ಸಂಕರ ಶಿಲ್ಪಶೈಲಿ

[ಬದಲಾಯಿಸಿ]
  • ಈ ಭಾರತೀಯ ಗ್ರೀಕ್ ರೋಮನ್ ಇರಾನಿ ಸಂಕರ ಶಿಲ್ಪಶೈಲಿ ಸು. 2ನೆಯ ಶತಮಾನದಿಂದ 6ನೆಯ ಶತಮಾನದವರೆಗೆ ಪ್ರಚಲಿತವಾಗಿತ್ತೆಂಬುದು ಅನೇಕ ಮಂದಿ ವಿದ್ವಾಂಸರ ಮತ. ಆದರೆ ಈ ಗಾಂಧಾರ ಶೈಲಿಯ ಕಾಲ ನಿಷ್ಕರ್ಷೆ ಅಷ್ಟೇನೂ ನಿಖರವಾಗಿಲ್ಲ. ಕೆಲವು ವಿದ್ವಾಂಸರ ಪ್ರಕಾರ ಇದು ಪ್ರ.ಶ.ಪು. 2ನೆಯ ಶತಮಾನದಲ್ಲೇ ಹುಟ್ಟಿ 7ನೆಯ ಶತಮಾನದ ವರೆಗೂ ಮುಂದುವರಿದಿತ್ತು.
  • ಇನ್ನು ಕೆಲವು ವಿದ್ವಾಂಸರ ಪ್ರಕಾರ ಇದರ ಕಾಲ 1ನೆಯ ಶತಮಾನದಿಂದ 3ನೆಯ ಶತಮಾನದ ವರೆಗೆ ಮಾತ್ರ. ಈ ಶೈಲಿಯ ಸಹಸ್ರಾರು ಶಿಲ್ಪಗಳು ದೊರಕಿದ್ದರೂ ಕೇವಲ ನಾಲ್ಕು ಶಿಲ್ಪಗಳ ಮೇಲೆ ಮಾತ್ರ ತೇದಿಯಿರುವ ಶಾಸನಗಳಿವೆ. ಆದರೆ ಈ ತೇದಿಗಳ ಬಗ್ಗೆಯೇ ಭಿನ್ನಾಭಿಪ್ರಾಯ ಗಳಿರುವುದು ಸಮಸ್ಯೆಗೆ ಕಾರಣವಾಗಿದೆ. ಗಾಂಧಾರ ಶೈಲಿ ಒಂದು ಪ್ರದೇಶದ ಹೆಸರನ್ನು ಹೊತ್ತಿದ್ದರೂ ಅದು ಆ ಪ್ರದೇಶಕ್ಕಷ್ಟೇ ಸೀಮಿತವಾಗಿರಲಿಲ್ಲ.
  • ಅದರ ಮುಖ್ಯ ಕೇಂದ್ರ ಮಾತ್ರ ಗಾಂಧಾರದಲ್ಲಿತ್ತು. ಈ ಶೈಲಿಯ ಶಾಖೆಗಳು ಗಾಂಧಾರದ ಉತ್ತರದ ಬ್ಯಾಕ್ಟ್ರಿಯದಲ್ಲೂ ಅಲ್ಲಿಂದಲೂ ಮುಂದೆ ಮಧ್ಯ ಏಷ್ಯದಲ್ಲೂ ಭಾರತದಲ್ಲೂ ಕಾಶ್ಮೀರದಲ್ಲೂ ಕಂಡುಬಂದಿದೆ. ಅಲ್ಲದೆ ಇದರ ಪ್ರಭಾವವನ್ನು ಭಾರತದ ಮಥುರಾ ಮತ್ತು ಅಮರಾವತಿ ಕಲಾಶೈಲಿಗಳಲ್ಲೂ ಟಿಬೆಟ್ ಚೀನಗಳ ಬೌದ್ಧ ಕಲೆಯಲ್ಲೂ ಕಾಣಬಹುದಾಗಿದೆ, ಗಾಂಧಾರ ಶೈಲಿಗೆ ಸೇರಿದ ಅನೇಕ ಲೋಹ ಮತ್ತು ದಂತಕೃತಿಗಳು ಬೆಗ್ರಾಮ್ ಮುಂತಾದೆಡೆಗಳಲ್ಲಿ ದೊರೆತಿವೆ.

ಛಾಯಾಂಕಣ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಗಾಂಧಾರ&oldid=1178731" ಇಂದ ಪಡೆಯಲ್ಪಟ್ಟಿದೆ