ವಿಷಯಕ್ಕೆ ಹೋಗು

ಹೈನ್ರಿಚ್ ರೂಡಾಲ್ಫ್ ಹರ್ಟ್ಝ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೈನ್ರಿಚ್ ಹರ್ಟ್ಝ್

ಹೈನ್ರಿಚ್ ರೂಡಾಲ್ಫ್ ಹರ್ಟ್ಝ್ (1857-94) ಜರ್ಮನಿಯ ಒಬ್ಬ ಭೌತವಿಜ್ಞಾನಿ.

ಈತ ಹ್ಯಾಂಬರ್ಗ್‌ನಲ್ಲಿ 1857 ಫೆಬ್ರವರಿ 22ರಂದು ಜನಿಸಿದ. ಮೊದಲು ಓದಿದ್ದು ಎಂಜಿನಿಯರಿಂಗ್. ಆದರೆ ಮಧ್ಯದಲ್ಲೇ ಇದನ್ನು ತೊರೆದು ಹೆಲ್ಮ್‌ಹೋಲ್ಝ್ (1821-94) ಮತ್ತು ಕಿರ್ಖಫ್ (1824-87) ಬಳಿ ಸೇರಿ ಭೌತವಿಜ್ಞಾನವನ್ನು ಅಧ್ಯಯನ ಮಾಡಿದ. ಕೀಲ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ (1883) ಹೆಲ್ಮ್‌ಹೋಲ್ಝನ ಸೂಚನೆ ಮೇರೆಗೆ ಈತನ ಆಸಕ್ತಿ ಮ್ಯಾಕ್ಸ್‌ವೆಲ್ (1831-79) ಆವಿಷ್ಕರಿಸಿದ್ದ ವಿದ್ಯುತ್ಕಾಂತಕ್ಷೇತ್ರ ಸಮೀಕರಣಗಳತ್ತ ಹೊರಳಿತು.[] ಅವುಗಳಿಂದ ಹೆಚ್ಚಿನ ಅರ್ಥ ಹಿಂಡಬಹುದೇ ಎಂಬುದು ಎದುರಿದ್ದ ಜಿಜ್ಞಾಸೆ. ಅಷ್ಟೇನೂ ಉತ್ಸಾಹದಾಯಕವಾಗಿ ಆರಂಭವಾಗದ ಈ ಶೋಧ 1888ರ ವೇಳೆಗೆ ಒಂದು ನಾಟಕೀಯ ತಿರುವು ತೆಗೆದುಕೊಂಡಿತು. ಅಲ್ಲಿಯ ತನಕ ಯಾರೂ ಊಹಿಸದಿದ್ದ ನವಪ್ರಪಂಚವನ್ನು ಇದು ಅನಾವರಣಿಸಿತು.

ವಾಯುತೆರಪಿನಿಂದ ಪ್ರತ್ಯೇಕಿಸಲ್ಪಟ್ಟಿರುವ ಲೋಹದ ಎರಡು ಚೆಂಡುಗಳ ನಡುವೆ ಆಂದೋಲಿಸುವ ಒಂದು ವಿದ್ಯುನ್ಮಂಡಲವನ್ನು ಈತ ನೆಲೆಗೊಳಿಸಿದ. ಪ್ರತಿಸಲವೂ ವಿಭವ (ಪೊಟೆನ್ಶಿಯಲ್) ಒಂದು ಅಥವಾ ಇನ್ನೊಂದು ದಿಶೆಯಲ್ಲಿ ಶೃಂಗವೈದಿದಾಗ ಅದರಿಂದ ತೆರಪಿನ ಅಡ್ಡ ಕಿಡಿ ಹಾರುತ್ತಿತ್ತು. ಮ್ಯಾಕ್ಸ್‌ವೆಲ್ಲನ ಸಮೀಕರಣಗಳ ಪ್ರಕಾರ ಆ ಸಂದರ್ಭದಲ್ಲಿ ವಿದ್ಯುತ್ಕಾಂತ ವಿಕಿರಣ ಉತ್ಪತ್ತಿಯಾಗಬೇಕು. ಪ್ರತಿಯೊಂದು ಆಂದೋಲನವೂ ಇದರ ಒಂದು ಅಲೆಗೆ ಕಾರಣವಾಗಬೇಕು. ಅಂದಮೇಲೆ ಈ ವಿಕಿರಣದ ಅಲೆಯುದ್ದ ಅತಿ ನೀಳವಾಗಿರುತ್ತದೆ. ಬೆಳಕು ಸೆಕೆಂಡಿಗೆ ಸು. 300,000 ಕಿಮೀ ದೂರ ಚಲಿಸುವುದರಿಂದ ಸೆಕೆಂಡಿನ ಸಾವಿರನೆ ಒಂದರಷ್ಟು ಸೂಕ್ಮಅವಧಿಯಲ್ಲಿ ಅದು ಚಲಿಸುವ ದೂರ 300 ಕಿಮೀಗಳಷ್ಟು ಗಣನೀಯವಾಗಿರುತ್ತದೆ.

ವಿಕಿರಣದ ಈ ಅಲೆಯನ್ನು ಪತ್ತೆ ಹಚ್ಚಲು ಈತ ತಂತಿಯ ಒಂದು ಪುಟ್ಟ ಸಿಂಬಿಯನ್ನು ಉಪಯೋಗಿಸಿದ. ಇದರ ಒಂದು ಬಿಂದುವಿನಲ್ಲಿ ಪುಟ್ಟ ವಾಯುತೆರಪಿತ್ತು. ಆಂದೋಲಿಸುವ ವಿದ್ಯುನ್ಮಂಡಲದ ಪ್ರಯೋಗದಲ್ಲಿ ವಿಕಿರಣದ ಉಗಮಕ್ಕೆ ವಿದ್ಯುತ್ತು ಕಾರಣವಾದಂತೆ ಈ ಪ್ರಯೋಗದಲ್ಲಿ ವಿದ್ಯುತ್ತಿನ ಉಗಮಕ್ಕೆ ವಿಕಿರಣ ಕಾರಣವಾಗಬೇಕು ಎಂಬುದು ಇವನ ನಿರೀಕ್ಷೆ. ನಿಸರ್ಗ ಇದನ್ನು ಒಪ್ಪಿಕೊಂಡಿತು. ಸಿಂಬಿಯ ತೆರಪಿನಲ್ಲಿ ಮರಿಕಿಡಿಗಳು ಸಿಡಿಯುತ್ತಿದ್ದುದನ್ನು ಆತ ಗಮನಿಸಿದ. ಸಿಂಬಿಯನ್ನು ಕೊಠಡಿಯ ವಿವಿಧೆಡೆಗಳಿಗೆ ಒಯ್ದು ಅಲ್ಲೆಲ್ಲ ಕಿಡಿಗಳ ತೀವ್ರತೆಯನ್ನು ಅಳೆದು ಅಲೆಯ ಆಕಾರವನ್ನು ನಿರ್ಧರಿಸುವುದು ಇವನಿಗೆ ಸಾಧ್ಯವಾಯಿತು. ಅಲೆಯುದ್ದ 66 ಸೆಂಮೀ ಎಂದು ಗಣಿಸಿ ಹೇಳಿದ. ಈ ಅಲೆಯಲ್ಲಿ ವೈದ್ಯುತ ಹಾಗೂ ಕಾಂತೀಯ ಗುಣಗಳೆರಡೂ ಸಮಾವೇಶಗೊಂಡಿದ್ದುದರಿಂದ ಸ್ವಭಾವತಃ ಇವು ಕೂಡ ವಿದ್ಯುತ್ಕಾಂತ ತರಂಗಗಳೆಂಬುದು ಸ್ಥಿರವಾಯಿತು.

ಹೀಗೆ ಈತ ಮ್ಯಾಕ್ಸ್‌ವೆಲ್ಲನ ಸಮೀಕರಣಗಳ ಉಪಯುಕ್ತತೆಯನ್ನು ವಿಸ್ತರಿಸಿದ. ಇಂಗ್ಲೆಂಡಿನಲ್ಲಿ ಲಾಡ್ಜ್ (1851-1940) ಎಂಬಾತ ಹರ್ಟ್ಝಿಯನ್ ತರಂಗಗಳ ಅಸ್ತಿತ್ವವನ್ನು ಸ್ಥಿರೀಕರಿಸಿದ. ಇತ್ತ ಇಟಲಿಯಲ್ಲಿ ರಿಘಿ (1850-1920) ಎಂಬಾತ ಇವುಗಳಿಗೆ ಬೆಳಕಿನ ಜೊತೆ ಇರುವ ಸಂಬಂಧ ತೋರಿಸಿಕೊಟ್ಟ. ಮಾರ್ಕೊನಿ (1874-1937) ಈ ಅಲೆಗಳನ್ನು ಸಂದೇಶಪ್ರೇಷಣೆಗೆ ನಿಸ್ತಂತು ವಾಹಕಗಳಾಗಿ ಬಳಸಿದಾಗ `ರೇಡಿಯೊಟೆಲಿಗ್ರಫಿ’ ಎಂಬ ಪದ ಬಳಕೆಗೆ ಬಂದು ಇದರ ಹ್ರಸ್ವರೂಪ ವಾದ `ರೇಡಿಯೊ’ ಎಂಬುದೇ `ಹರ್ಟ್ಝಿಯನ್’ ಪದದ ಬದಲು ರೂಢಿಗೆ ಬಂದಿತು. ಹರ್ಟ್ಝಿಯನ್ ತರಂಗಗಳೇ ರೇಡಿಯೊ ತರಂಗಗಳು.[][] ಮಾನವ ಸಮಾಜದಲ್ಲಿ ರೇಡಿಯೊ ಒಂದು ಪುಟ್ಟ ಸಂಪರ್ಕ ಮಾಧ್ಯಮವಾಗುವುದನ್ನು ನೋಡುವಷ್ಟು ಕಾಲ ಈತ ಬದುಕಬಹುದಾಗಿತ್ತು. ಆದರೆ ರಕ್ತವಿಷವೇರಿಕೆಯಿಂದ ದೀರ್ಘಕಾಲ ನರಳಿದ. ಈತ 1894 ಜನವರಿ 1ರಂದು ಬಾನ್ ಎಂಬಲ್ಲಿ ನಿಧನನಾದ.

ಉಲ್ಲೇಖಗಳು

[ಬದಲಾಯಿಸಿ]
  1. Jed Z. Buchwald, The Creation of Scientific Effects - Heinrich Hertz and Electric Waves, University of Chicago Press, 2011, page 218
  2. "Heinrich Hertz | German physicist". Encyclopedia Britannica (in ಇಂಗ್ಲಿಷ್). Retrieved 2021-05-21.
  3. "How Radio Works". HowStuffWorks. 7 December 2000. Retrieved 14 March 2019.


ಹೊರಗಿನ ಕೊಂಡಿಗಳು

[ಬದಲಾಯಿಸಿ]