ಹಿರಾ ಗುಹೆ

Coordinates: 21°22′38″N 39°50′59″E / 21.377191°N 39.849755°E / 21.377191; 39.849755
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿರಾ ಗುಹೆ
ಮಕ್ಕಾದ ಜಬಲ್ ನೂರ್ ಪರ್ವತದಲ್ಲಿರುವ ಹಿರಾ ಗುಹೆ
ಕಕ್ಷೆಗಳು21°22′38″N 39°50′59″E / 21.377191°N 39.849755°E / 21.377191; 39.849755

ಹಿರಾ ಗುಹೆ (ಅರಬ್ಬಿ: غار حراء) — ಮುಹಮ್ಮದ್ ಪೈಗಂಬರರಿಗೆ ಮೊತ್ತಮೊದಲು ದೇವವಾಣಿ ಅವತೀರ್ಣವಾಯಿತೆಂದು ನಂಬಲಾಗುವ ಗುಹೆ. ಇದು ಮಕ್ಕಾದ ಈಶಾನ್ಯ ದಿಕ್ಕಿನಲ್ಲಿ 5 ಕಿ.ಮೀ. ದೂರದಲ್ಲಿರುವ ಜಬಲ್ ನೂರ್ ಪರ್ವತದಲ್ಲಿದೆ. ಮುಸಲ್ಮಾನರ ನಂಬಿಕೆಯ ಪ್ರಕಾರ ಮುಹಮ್ಮದ್‌ರಿಗೆ ಈ ಗುಹೆಯಲ್ಲಿ ದೇವವಾಣಿಯು ಮೊತ್ತಮೊದಲು ಅವತೀರ್ಣವಾಯಿತು.[೧]

ಹಿರಾ ಗುಹೆಯು ಒಳಗೊಂಡಿರುವ ಜಬಲ್ ನೂರ್ ಪರ್ವತವು 642 ಮೀ. (2,106 ಅಡಿ) ಎತ್ತರವಿದ್ದು, 634 ಮೀ. ಎತ್ತರದಲ್ಲಿ ಈ ಗುಹೆಯಿದೆ. ಗುಹೆಯ ಬಾಗಿಲು ಪರ್ವತದ ಉತ್ತರ ದಿಕ್ಕಿನಲ್ಲಿದೆ. ಈ ಗುಹೆಯಲ್ಲಿ ಮುಹಮ್ಮದ್ ಧ್ಯಾನ ನಿರತರಾಗುತ್ತಿದ್ದರು ಮತ್ತು ದೇವದೂತ ಗೇಬ್ರಿಯಲ್ ಈ ಗುಹೆಯಲ್ಲಿ ಪ್ರತ್ಯಕ್ಷವಾಗಿ ಮುಹಮ್ಮದ್‌ರಿಗೆ ಮೊತ್ತಮೊದಲ ದೇವವಾಣಿಯನ್ನು ತಲುಪಿಸಿದರು ಎಂದು ಮುಸಲ್ಮಾನರು ನಂಬುತ್ತಾರೆ. ಈ ಗುಹೆಯು ಪರ್ವತದ ಉತ್ತರ ದಿಕ್ಕಿನಲ್ಲಿದ್ದು, 3.7 ಮೀಟರ್ (12 ಅಡಿ) ಉದ್ದ ಮತ್ತು 1.6 ಮೀಟರ್ (5 ಕಾಲು ಅಡಿ) ಅಗಲವಾಗಿದೆ. ಒಮ್ಮೆಗೆ ಐದು ಜನರು ಇದರೊಳಗೆ ಕೂರಬಹುದು. ಇದೊಂದು ಪ್ರವಾಸಿ ತಾಣವಾಗಿದ್ದು ಹಜ್ಜ್ ಸಮಯದಲ್ಲಿ ದಿನನಿತ್ಯ 5,000 ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಐತಿಹಾಸಿಕ ಹಿನ್ನೆಲೆ[ಬದಲಾಯಿಸಿ]

ಹಿರಾ ಗುಹೆಯಲ್ಲಿ ಮುಹಮ್ಮದ್‌ಗೆ ದೇವವಾಣಿ ಅವತೀರ್ಣವಾದ ಬಗ್ಗೆ ಮುಸ್ಲಿಮರು ಅತ್ಯಧಿಕ ಅಧಿಕೃತವೆಂದು ಪರಿಗಣಿಸುವ ಬುಖಾರಿಯ ಹದೀಸ್ ಗ್ರಂಥದಲ್ಲಿ ಹೀಗೆ ಹೇಳಲಾಗಿದೆ:

ಆಯಿಶ ಹೇಳುತ್ತಾರೆ: ಮುಹಮ್ಮದ್‌ರಿಗೆ ಮೊಟ್ಟಮೊದಲು ದೇವವಾಣಿ ಅವತೀರ್ಣವಾಗಲು ಪ್ರಾರಂಭವಾದದ್ದು ಉತ್ತಮ ಕನಸುಗಳ ಮೂಲಕ. ಆ ಕನಸುಗಳು ಹಗಲ ಬೆಳಕಿನಂತೆ ನಿಜವಾಗುತ್ತಿದ್ದವು. ನಂತರ ಅವರಿಗೆ ಏಕಾಂತವಾಸವು ಇಷ್ಟವಾಗತೊಡಗಿತು. ಅವರು ಹಿರಾ ಗುಹೆಯಲ್ಲಿ ಹಲವಾರು ದಿನಗಳ ಕಾಲ ಧ್ಯಾನ ನಿರತರಾಗುವುದಕ್ಕಾಗಿ ಸಿದ್ಧತೆ ಮಾಡಿಕೊಂಡು ಹೋಗುತ್ತಿದ್ದರು. ನಂತರ ಅವರು ಪತ್ನಿ ಖದೀಜರ ಬಳಿಗೆ ಬಂದು ಪುನಃ ಅಂತಹ ಏಕಾಂತವಾಸಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಹೀಗೆ ಒಂದಿನ ಅವರು ಹಿರಾ ಗುಹೆಯಲ್ಲಿದ್ದಾಗ, ಒಬ್ಬ ದೇವದೂತನು ಅವರ ಬಳಿಗೆ ಬಂದು, "ಓದು" ಎಂದು ಹೇಳಿದನು. ಮುಹಮ್ಮದ್ ಹೇಳಿದರು, "ನನಗೆ ಓದಲು ಬರುವುದಿಲ್ಲ." ಮುಹಮ್ಮದ್ ಆ ಘಟನೆಯನ್ನು ವಿವರಿಸುತ್ತಾ ಹೇಳುತ್ತಾರೆ: ಆ ದೇವದೂತನು ನನ್ನನ್ನು ಗಟ್ಟಿಯಾಗಿ ಹಿಡಿದು ಬಲವಾಗಿ ಅದುಮಿದನು. ನನಗೆ ನೋವು ತಡೆಯಲಾಗಲಿಲ್ಲ. ನಂತರ ನನ್ನನ್ನು ಬಿಟ್ಟು "ಓದು" ಎಂದನು. ನಾನು ಹೇಳಿದೆ, "ನನಗೆ ಓದಲು ಬರುವುದಿಲ್ಲ." ಅವನು ಪುನಃ ನನ್ನನ್ನು ಗಟ್ಟಿಯಾಗಿ ಹಿಡಿದು ಬಲವಾಗಿ ಅದುಮಿದನು. ನನಗೆ ನೋವು ತಡೆಯಲಾಗಲಿಲ್ಲ. ನಂತರ ನನ್ನನ್ನು ಬಿಟ್ಟು "ಓದು" ಎಂದನು. ನಾನು ಹೇಳಿದೆ, "ನನಗೆ ಓದಲು ಬರುವುದಿಲ್ಲ." ಅವನು ಪುನಃ ನನ್ನನ್ನು ಗಟ್ಟಿಯಾಗಿ ಹಿಡಿದು ಬಲವಾಗಿ ಅದುಮಿದನು. ನಂತರ ನನ್ನನ್ನು ಬಿಟ್ಟು "ಸೃಷ್ಟಿಸಿದ ನಿನ್ನ ಸಂರಕ್ಷಕನ ಹೆಸರಿನಿಂದ ಓದು, ಅವನು ಮನುಷ್ಯನನ್ನು ಹೆಪ್ಪುಗಟ್ಟಿದ ರಕ್ತದಿಂದ ಸೃಷ್ಟಿಸಿದನು. ಓದು, ನಿನ್ನ ಸಂರಕ್ಷಕನು ಪರಮ ಉದಾರಿಯಾಗಿದ್ದಾನೆ" ಎಂದನು. ಮುಹಮ್ಮದ್ ನಡುಗುವ ಹೃದಯದೊಂದಿಗೆ ಗುಹೆಯಿಂದ ಹೊರಬಂದರು. ಅವರು ನೇರವಾಗಿ ಪತ್ನಿ ಖದೀಜರ ಬಳಿಗೆ ಹೋಗಿ ಹೇಳಿದರು, "ನನ್ನನ್ನು ಹೊದಿಯಿರಿ, ನನ್ನನ್ನು ಹೊದಿಯಿರಿ." ಅವರು ಮುಹಮ್ಮದ್‌ರಿಗೆ ಹೊದಿಸಿದರು. ಭಯ ನಿವಾರಣೆಯಾದಾಗ ಅವರು ನಡೆದ ಸಂಗತಿಯನ್ನು ವಿವರಿಸಿದರು. "ನನಗೆ ಏನಾದರೂ ಕೇಡು ಸಂಭವಿಸಬಹುದೆಂದು ನನಗೆ ಭಯವಾಗುತ್ತಿದೆ" ಎಂದರು. ಖದೀಜ ಹೇಳಿದರು, "ಇಲ್ಲ! ದೇವರಾಣೆಗೂ ನಿಮಗೆ ಏನೂ ಆಗಲಾರದು. ದೇವರು ನಿಮಗೆ ಅವಮಾನ ಮಾಡಲಾರ. ನೀವು ಕುಟುಂಬ ಸಂಬಂಧವನ್ನು ಕಾಪಾಡುತ್ತೀರಿ, ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುತ್ತೀರಿ, ಅತಿಥಿಗಳನ್ನು ಗೌರವಿಸುತ್ತೀರಿ, ಮತ್ತು ದುರಂತಕ್ಕೀಡದಾವರಿಗೆ ನೆರವಾಗುತ್ತೀರಿ." ನಂತರ ಖದೀಜ ಅವರನ್ನು ತಮ್ಮ ಸೋದರ ಸಂಬಂಧಿ ವರಕ ಬಿನ್ ನೌಫಲ್‌ರ ಬಳಿಗೆ ಕರೆದೊಯ್ದರು. ವರಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಅವರು ಹೀಬ್ರೂ ಭಾಷೆಯಲ್ಲಿ ಬೈಬಲ್‌ನ ಭಾಗಗಳನ್ನು ಬರೆಯುತ್ತಿದ್ದರು. ಅವರು ವಯೋವೃದ್ಧರಾಗಿ ದೃಷ್ಟಿಯನ್ನು ಕಳೆದುಕೊಂಡಿದ್ದರು. ಖದೀಜ ಹೇಳಿದರು, "ಸೋದರಾ! ನಿನ್ನ ಸೋದರ ಪುತ್ರನ ಮಾತಿಗೆ ಕಿವಿಗೊಡು." ವರಕ ಮುಹಮ್ಮದ್‌ರೊಡನೆ ಕೇಳಿದರು, "ಸೋದರ ಪುತ್ರಾ! ನೀನೇನು ನೋಡಿದೆ?" ಮುಹಮ್ಮದ್ ನಡೆದ ಘಟನೆಯನ್ನು ವಿವರಿಸಿದಾಗ ವರಕ ಹೇಳಿದರು, "ಇದು ದೇವರು ಮೋಸೆಯ ಬಳಿಗೆ ಕಳುಹಿಸಿದ ಅದೇ ದೇವದೂತ. ನಾನು ಇನ್ನೂ ಯುವಕನಾಗಿದ್ದು ನಿಮ್ಮ ಜನರು ನಿಮ್ಮನ್ನು ಊರಿಂದ ಹೊರಗಟ್ಟುವ ಸಂದರ್ಭದಲ್ಲಿ ನಾನು ಜೀವಂತವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಮುಹಮ್ಮದ್ ಕೇಳಿದರು, "ನನ್ನ ಜನರು ನನ್ನನ್ನು ಊರಿಂದ ಹೊರಗಟ್ಟುವರೇ?" ವರಕ ಉತ್ತರಿಸಿದರು, "ಹೌದು! ನೀವು ತಂದಂತಹ ಸಂದೇಶವನ್ನು ತಂದ ಎಲ್ಲಾ ಪ್ರವಾದಿಗಳೂ ಕ್ರೌರ್ಯಕ್ಕೆ ಒಳಗಾಗಿದ್ದಾರೆ. ಆದರೆ ಆ ಕಾಲದಲ್ಲಿ ನಾನು ಜೀವಂತವಿದ್ದರೆ ನಾನು ಖಂಡಿತ ನಿಮಗೆ ಬೆಂಬಲವಾಗಿ ನಿಲ್ಲುವೆನು." ಆದರೆ ಕೆಲವೇ ದಿನಗಳಲ್ಲಿ ವರಕ ಇಹಲೋಕ ತ್ಯಜಿಸಿದರು. ಸ್ವಲ್ಪ ಸಮಯದ ತನಕ ದೇವವಾಣಿ ಅವತೀರ್ಣವಾಗುವುದು ನಿಂತಿತು."[೨]

ಇದನ್ನೂ ನೋಡಿ[ಬದಲಾಯಿಸಿ]

ಗ್ಯಾಲರಿ[ಬದಲಾಯಿಸಿ]

  • ಹಿರಾ ಗುಹೆಯ ಕೆಲವು ಚಿತ್ರಗಳು

ಉಲ್ಲೇಖಗಳು[ಬದಲಾಯಿಸಿ]

  1. The Encyclopedia of Islam. Vol. 3. Brill. 1986. p. 462. ISBN 9004094199.
  2. Sahih al-Bukhari: Hadith No. 3. "Revelation". Retrieved 01-03-2023. {{cite web}}: Check date values in: |access-date= (help)CS1 maint: numeric names: authors list (link)