ಸೌರ್ ಗುಹೆ
ಸೌರ್ ಗುಹೆ | |
---|---|
ಸೌರ್ ಗುಹೆ (ಅರಬ್ಬಿ: غار ثور) — ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಸೌರ್ ಪರ್ವತದ ಒಂದು ಗುಹೆ. ಮುಸ್ಲಿಮರ ನಂಬಿಕೆಯ ಪ್ರಕಾರ ಮುಹಮ್ಮದ್ ಪೈಗಂಬರ್ ಮತ್ತು ಅವರ ಸಂಗಡಿಗ ಅಬೂ ಬಕರ್ ಮದೀನಕ್ಕೆ ಹಿಜ್ರ (ವಲಸೆ) ಹೋಗುವಾಗ ಮೂರು ದಿನಗಳ ಕಾಲ ಈ ಗುಹೆಯಲ್ಲಿ ಅಡಗಿದ್ದರು. ಈ ಪರ್ವತ ಮಕ್ಕಾ ಮಹಾ ಮಸೀದಿಯ ದಕ್ಷಿಣ ದಿಕ್ಕಿನಲ್ಲಿ ಸುಮಾರು 5 ಕಿ.ಮೀ. ದೂರದಲ್ಲಿದೆ. ಗುಹೆಯು ಪರ್ವತದ ಉತ್ತರ ದಿಕ್ಕಿನಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು 760 ಮೀ. ಎತ್ತರದಲ್ಲಿದೆ.
ಐತಿಹಾಸಿಕ ಹಿನ್ನೆಲೆ
[ಬದಲಾಯಿಸಿ]ಮಕ್ಕಾದಲ್ಲಿ ಕುರೈಷರ ಹಿಂಸೆ ಮಿತಿ ಮೀರಿ ಅವರು ತನ್ನನ್ನು ಕೊಲ್ಲುವ ಹಂತಕ್ಕೆ ತಲುಪಿದಾಗ, ಮುಹಮ್ಮದ್ ಮಕ್ಕಾದಿಂದ ಮದೀನಕ್ಕೆ ವಲಸೆ ಹೋಗಲು ನಿರ್ಧರಿಸಿದರು. ಅದರಂತೆ ಅವರು ರಾತ್ರಿಯಲ್ಲಿ ರಹಸ್ಯವಾಗಿ ತಮ್ಮ ಆಪ್ತ ಸಂಗಡಿಗ ಅಬೂ ಬಕರ್‌ರೊಡನೆ ಮಕ್ಕಾದಿಂದ ಹೊರಟು ಸುಮಾರು 5 ಕಿ.ಮೀ. ದೂರದಲ್ಲಿರುವ ಸೌರ್ ಪರ್ವತದ ಗುಹೆಯಲ್ಲಿ ತಂಗಿದರು. ಮುಹಮ್ಮದ್‌ರನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಹೋದಾಗ ಕುರೈಷರು ಅವರನ್ನು ಹಿಡಿದು ತರುವವರಿಗೆ ನೂರು ಒಂಟೆಗಳ ಬಹುಮಾನವನ್ನು ಘೋಷಿಸಿದರು. ಬಹುಮಾನದ ಆಸೆಯಿಂದ ಮಕ್ಕಾದ ಜನರು ಎಲ್ಲಾ ಕಡೆಯೂ ಮುಹಮ್ಮದ್‌ರನ್ನು ಹುಡುಕತೊಡಗಿದರು. ಅವರು ಹುಡುಕುತ್ತಾ ಸೌರ್ ಗುಹೆಯ ಬಳಿಗೂ ಬಂದರು. ಅಬೂ ಬಕರ್‌ಗೆ ಅವರ ಕಾಲುಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಅವರೇನಾದರೂ ಬಗ್ಗಿ ನೋಡಿದರೆ ನಾವು ಸಿಕ್ಕಿ ಬೀಳುವುದು ಖಚಿತ ಎಂದು ಅಬೂ ಬಕರ್ ಹೇಳಿದಾಗ, ಮುಹಮ್ಮದ್ ಅವರನ್ನು ಸಂತೈಸುತ್ತಾ, "ಗಾಬರಿಯಾಗಬೇಡ, ನಮ್ಮ ಜೊತೆ ದೇವರಿದ್ದಾನೆ" ಎಂದರು. ಈ ಘಟನೆಯ ಬಗ್ಗೆ ಮುಸಲ್ಮಾನರ ಪವಿತ್ರ ಗ್ರಂಥ ಕುರ್‌ಆನ್‌ನಲ್ಲಿ ಹೀಗೆ ಹೇಳಲಾಗಿದೆ:
"ನೀವು ಅವರಿಗೆ (ಮುಹಮ್ಮದ್‌ಗೆ) ಸಹಾಯ ಮಾಡದಿದ್ದರೆ (ತೊಂದರೆಯಿಲ್ಲ, ಏಕೆಂದರೆ) ಸತ್ಯನಿಷೇಧಿಗಳು ಅವರನ್ನು ಹೊರಹಾಕಿದಾಗ ಮತ್ತು ಅವರು ಇಬ್ಬರಲ್ಲಿ ಒಬ್ಬರಾಗಿ ಅಥವಾ ಅವರಿಬ್ಬರೂ ಒಂದು ಗುಹೆಯಲ್ಲಿದ್ದಾಗ, ದೇವರು ಅವರಿಗೆ ಸಹಾಯ ಮಾಡಿದ್ದಾನೆ. ಅವರು ತಮ್ಮ ಸಂಗಡಿಗನೊಡನೆ, "ಗಾಬರಿಯಾಗಬೇಡ, ದೇವರು ನಮ್ಮ ಜೊತೆಗಿದ್ದಾನೆ" ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ದೇವರು ಅವರ ಮೇಲೆ ತನ್ನ ವತಿಯ ಶಾಂತಿಯನ್ನು ಇಳಿಸಿದನು, ನೀವು ಕಾಣದಂತಹ ಸೈನ್ಯಗಳೊಂದಿಗೆ ಅವರಿಗೆ ಬೆಂಬಲವನ್ನು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಅತ್ಯಂತ ಕೆಳಮಟ್ಟಕ್ಕಿಳಿಸಿದನು. ದೇವರ ವಚನವು ಅತ್ಯುನ್ನತವಾಗಿದೆ. ದೇವರು ಪ್ರತಾಪಶಾಲಿ ಮತ್ತು ಯುಕ್ತಿಪೂರ್ಣನಾಗಿದ್ದಾನೆ." (ಕುರ್‌ಆನ್ 9:40)