ಸಂತ ಫಿಲೋಮಿನಾ ಚರ್ಚ್

ವಿಕಿಪೀಡಿಯ ಇಂದ
Jump to navigation Jump to search
ಸಂತ ಜೋಸೆಫರ ಪ್ರಧಾನಾಲಯದ ಪಾರ್ಶ್ವ ನೋಟ

೧೯೬ ವರ್ಷಗಳ ಇತಿಹಾಸವಿರುವ ಸಂತ ಫಿಲೋಮಿನ ಚರ್ಚ್ ನ ಸ್ಥಾಪನೆಗೆ ರೂಪರೇಷೆಗಳನ್ನು ಹಾಕಿಕೊಟ್ಟವರು, ಸ್ವಾಮಿ ಎಫ್. ಜಾರಿಗೆ ಎಂಬ ಫ್ರೆಂಚ್ ಮಿಶನರಿ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ದೇವಾಲಯವು ನಗರದ ಹೊರಗಿನ ಯಾವ ದಿಕ್ಕಿನಿಂದ ನೋಡಿದರೂ ಎದ್ದು ಕಾಣುತ್ತದೆ. ಭಾರತದಲ್ಲಿಯೇ ಅತ್ಯಂತ ಎತ್ತರದ ಗೋಪುರಗಳನ್ನು ಹೊಂದಿರುವ ಈ ದೇವಾಲಯವು ಗೋಥಿಕ್ ಶೈಲಿಯಲ್ಲಿದೆ.

ಇತಿವೃತ್ತ[ಬದಲಾಯಿಸಿ]

  • ಇಪ್ಪತ್ತನೇ ಶತಮಾನದ ಶುರುವಿನಲ್ಲಿ ಯೂರೋಪ್ ದೇಶಗಳಲ್ಲಿ ಸಂತ ಫಿಲೋಮಿನಾರವರ ಮಹತ್ತು ಹಾಗೂ ಆಕೆಯಿಂದ ಭಕ್ತರು ಪಡೆದ ವರದಾನಗಳ ಕುರಿತು ಪ್ರಚಲಿತವಾಗಿದ್ದ ಸುದ್ದಿಯ ಬಗ್ಗೆ ಅಂದಿನ ಮೈಸೂರು ಮಹಾರಾಜರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ತಂಬುಚೆಟ್ಟಿಯವರು ಆಸಕ್ತಿ ತಳೆದರು. ಅವರ ಪ್ರಯತ್ನದ ಫಲವಾಗಿ ಸುಮಾರು ೧೯೨೬ರಲ್ಲಿ ಪೌರ್ವಾತ್ಯ ದೇಶಗಳ ಪ್ರೇಷಿತ ಪ್ರತಿನಿಧಿಯಾಗಿದ್ದ ಮೊನ್ಸಿಙೊರ್ ಪೀಟರ್ ಪಿಸಾದಿಯವರ ಮೂಲಕ ಸಂತ ಫಿಲೋಮಿನಾ ಅವರ ಅವಶೇಷದ ತುಣುಕನ್ನು ಮೈಸೂರಿಗೆ ತರಲಾಯಿತು. *ಅದನ್ನು ಅಂದು ಮೈಸೂರು ಧರ್ಮಕೇಂದ್ರದ ಗುರುವಾಗಿದ್ದ ಫಾದರ್ ಕೋಬೆಯವರಿಗೆ ಒಪ್ಪಿಸಲಾಯಿತು. ೧೯೨೭ರಲ್ಲಿ ಸಂತ ಫಿಲೋಮಿನಾರವರ ಪ್ರತಿಮೆಯನ್ನು ಫ್ರಾನ್ಸ್‌ ನಿಂದ ತರಿಸಿ ಮೈಸೂರಿನ ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಪ್ರತಿಮೆಯೂ ಅಲ್ಪಕಾಲದಲ್ಲೇ ಅಪಾರ ಜನರನ್ನು ತನ್ನತ್ತ ಸೆಳೆಯಿತು. ಸಂತ ಫಿಲೋಮಿನಾರ ಪವಾಡಗಳ ಬಗೆಗಿನ ಮಾತುಗಳು ತರಗೆಲೆಯಲ್ಲಿ ಬೆಂಕಿ ಸಂಚರಿಸಿದಂತೆ ಎಲ್ಲೆಡೆ ಪಸರಿಸಿ ಅವರ ಅವಶೇಷ ದರ್ಶನಾಕಾಂಕ್ಷಿಗಳು ಪ್ರವಾಹದಂತೆ ನುಗ್ಗಿಬಂದರು.
  • ಗೌರವರ್ಣದ ವಿದೇಶೀ ಕನ್ಯೆಯ ಸ್ನಿಗ್ದ ಸೌಂದರ್ಯವು ಮೈಸೂರು ಅರಮನೆಯ ರಾಜವನಿತೆಯರನ್ನೂ ಆಕರ್ಷಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಭಕ್ತಸಮೂಹಕ್ಕೆ ನೆರಳಾಗಿ ಮೈಸೂರು ನಗರಕ್ಕೆ ಕಿರೀಟಪ್ರಾಯವಾಗಿ ಕಂಗೊಳಿಸುವಂತೆ ದಿವ್ಯ ಭವ್ಯ ಗುಡಿಯೊಂದನ್ನು ಕಟ್ಟಲು ದಾನಿಗಳು ಮುಂದೆ ಬಂದರು.
  • ಜನಸಾಗರದ ಹಿರಿಯ ಕಿರಿಯ ಹಾಗೂ ಬಡವ ಬಲ್ಲಿದರೆನ್ನದೆ ಎಲ್ಲ ವರ್ಗದ ಜನರ ಸಹಕಾರದಿಂದ ಯಾವುದೇ ಅಡೆತಡೆಯಿಲ್ಲದೆ ಗುಡಿಯ ನಿರ್ಮಾಣ ಕಾರ್ಯ ಸಾಗಿತು. ಅವಿಭಜಿತ ಇಂಡಿಯಾ ಮಾತ್ರವಲ್ಲದೆ ಬರ್ಮಾ ಸಿಲೋನ್‌ಗಳಿಂದಲೂ ದೇಣಿಗೆಗಳು ಹರಿದುಬಂದು ಸಂತ ಫಿಲೋಮಿನಾರ ಗುಡಿಯು ಎತ್ತರಕ್ಕೆ ನಿರ್ಮಾಣಗೊಂಡಿತು.

ಪವಾಡ[ಬದಲಾಯಿಸಿ]

  • ಈ ನಿರ್ಮಾಣಕಾರ್ಯದಲ್ಲಿ ಕೆಲವೊಮ್ಮೆ ಅಲೌಕಿಕ ಶಕ್ತಿಯೂ ತನ್ನ ಕೈಜೋಡಿಸಿತು. ಒಂದೇ ಒಂದು ಉದಾಹರಣೆ ನೋಡಿ. ಗುಡಿಯ ಪಾದ್ರಿಯವರು ಇಟಲಿಯಿಂದ ಹಾಲುಗಲ್ಲಿನ ಪೀಠ ತರಿಸಿದರು. ಬೊಂಬಾಯಿಯಿಂದ ಮೈಸೂರಿಗೆ ಅದು ತಲಪಿದಾಗ ರೈಲಿನ ಸಾಗಣೆ ಖರ್ಚೆಂದು ರೂ.೩೦೯/- ತೆರಬೇಕಾಯಿತು. ಆದರೆ ಆ ಕ್ಷಣಕ್ಕೆ ಗುರುಗಳ ಬಳಿ ಹಣವೇ ಇರಲಿಲ್ಲ. ಸ್ವಲ್ಪ ಹೊತ್ತಿನಲ್ಲೆ ಅಂಚೆಯವನು ಬಂದು ದಾನಿಗಳು ಕಳಿಸಿದ ಹಲವು ಮನಿಯಾರ್ಡರುಗಳನ್ನು ಕೊಟ್ಟುಹೋದ.
  • ಅವನ್ನೆಲ್ಲ ಒಟ್ಟುಗೂಡಿಸಿದಾಗ ಅದರ ಮೊತ್ತ ಸರಿಯಾಗಿ ರೂ.೩೦೯/- ಆಗಿತ್ತು. ಇದು ಸಂತ ಫಿಲೋಮಿನಾರವರೇ ನಡೆಸಿದ ಅದ್ಭುತವಲ್ಲದೇ ಮತ್ತೇನು? ೨೮ನೇ ಅಕ್ಟೋಬರ್ ೧೯೩೩ರಂದು ಆ ಮಹಾಗುಡಿಗೆ ಅಡಿಗಲ್ಲು ಇಡುತ್ತಾ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು "ಈ ಗುಡಿಯನ್ನು ದೈವಾನುಗ್ರಹ ಮತ್ತು ಮನುಷ್ಯಸಂತೃಪ್ತಿ ಎಂಬ ಎರಡು ಬಲವಾದ ಅಡಿಪಾಯದ ಮೇಲೆ ಕಟ್ಟಲಾಗುವುದು" ಎಂದು ಹೇಳಿದ್ದರಲ್ಲವೇ ಆ ಮಾತು ಇಂದಿಗೂ ಬಲು ಅರ್ಥಪೂರ್ಣವಾಗಿದೆ.

ಭವ್ಯ ಒಳಾಂಗಣ[ಬದಲಾಯಿಸಿ]

  • ಕೊಲೋನ್ ಕೆಥೆಡ್ರಲ್ ಹೋಲಿಕೆಯಲ್ಲಿ ಕಟ್ಟಲಾದ ‌ಈ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ಒಳಗಿನ ಪ್ರಶಾಂತ ವಾತಾವರಣವು ಬಂದವರನ್ನು ಮೂಕರನ್ನಾಗಿಸುತ್ತದೆ. ಜನರು ಅವರಿಗೇ ಗೊತ್ತಿಲ್ಲದಂತೆ ಹಣೆಯ ಮೇಲೆ ಎದೆಯ ಮೇಲೆ ಪವಿತ್ರ ಶಿಲುಬೆಯ ಗುರುತು ಹಾಕಿ ಪುಳಕಗೊಳ್ಳುತ್ತಾರೆ. ತದೇಕಚಿತ್ತದಿಂದ ಶಿಲುಬೆಯನ್ನೂ ಯೇಸುವಿನ ಪ್ರತಿಮೆಯನ್ನೂ ದಿಟ್ಟಿಸುತ್ತಾರೆ. ಪೂಜಾ ಪೀಠದ ಅಲಂಕಾರವನ್ನು ಅದರ ಸೌಂದರ್ಯವನ್ನೂ ಆಸ್ವಾದಿಸುತ್ತಾ ಹಾಗೇ ತಲೆಯೆತ್ತಿ ಮೇಲೆ ನೋಡುತ್ತಾರೆ.
  • ಅವರ ಆಶ್ಚರ್ಯವೆಂಬಂತೆ ಕಿಟಕಿಗಳ ಬಣ್ಣದ ಗಾಜಿನ ಚಿತ್ತಾರದ ಜೋಡಣೆಗೆ ಬೆರಗಾಗುತ್ತಾರೆ. ದೇವಾಲಯದ ಮಧ್ಯಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಇಳಿದು catacomb ನಲ್ಲಿ ಮಲಗಿರುವ ಸಂತ ಫಿಲೋಮಿನಾ ಎಂಬ ಯುವರಾಣಿಯ ಮುಗ್ದತೆ ಹಾಗೂ ದೈವಕಳೆಗೆ ಮಾರು ಹೋಗುತ್ತಾರೆ.ನೋಡನೋಡುತ್ತಿದ್ದಂತೆ ಭಕ್ತಿಪರವಶರಾಗಿ ಕೈಜೋಡಿಸುತ್ತಾರೆ. ಅನಿರ್ವಚನೀಯ ಧನ್ಯತಾಭಾವ ಅವರಲ್ಲಿ ಮೂಡುತ್ತದೆ.
  • ಮೈಸೂರು ನಗರದ ಸಂತ ಫಿಲೋಮಿನಾ ಚರ್ಚ್ ಬಗ್ಗೆ ಕ್ರೈಸ್ತರಿಗೂ, ಕ್ರೈಸ್ತರಲ್ಲದವರಿಗೂ ಹೆಮ್ಮೆಯೆನಿಸುತ್ತದೆ ಏಕೆಂದರೆ ಇದು ದಕ್ಷಿಣ ಏಷ್ಯಾದಲ್ಲಿಯೇ ಅಪೂರ್ವವಾದ ಹಾಗೂ ಅತಿ ಎತ್ತರವಾದ ಗೋಥಿಕ್ ಶೈಲಿಯ ಕ್ರೈಸ್ತ ದೇವಾಲಯ. ಇದಕ್ಕೆ ಎರಡು ಗಗನಚುಂಬಿ ಗೋಪುರಗಳಿವೆ. ಗೋಪುರದ ಎತ್ತರ ಸುಮಾರು ೧೭೫ ಅಡಿಗಳಿದ್ದು ಎಷ್ಟೋ ದೂರದಿಂದ ಗೋಚರಿಸುತ್ತ ಎಲ್ಲರನ್ನೂ ಕೈಬೀಸಿ ಕರೆಯುತ್ತಿರುವಂತೆ ಕಾಣುತ್ತದೆ.
  • ಪ್ರತಿವರ್ಷ ಆಗಸ್ಟ್ ಹನ್ನೊಂದರಂದು ಇಲ್ಲಿ ಸಂತ ಫಿಲೋಮಿನಾ ಅವರ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ಅಲ್ಲದೆ ಪ್ರತಿ ವರ್ಷದ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಅರಮನೆಯು ಈ ಚರ್ಚಿಗೆ ಸೀರೆ ಮತ್ತು ಇತರ ಪರಿಕರಗಳನ್ನು ನೀಡುತ್ತದೆ. ಮೈಸೂರು ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಐಟಿಐ, ಸಂತ ಫಿಲೋಮಿನಾ ಬೋರ್ಡಿಂಗ್, ಸಂತ ಫಿಲೋಮಿನಾ ಪ್ರೆಸ್ ಇತ್ಯಾದಿ ಸಂಸ್ಥೆಗಳಿವೆ.
  • ಇಂದಿಗೂ ಫಿಲೋಮಿನಾ, ಫಿಲೋಮಿನರಾಜು ಎಂಬ ಹೆಸರುಳ್ಳ ವ್ಯಕ್ತಿಗಳನ್ನೂ ಕಾಣುತ್ತೇವೆ. ಅದೇ ರೀತಿ ಜನರ ಬಾಯಲ್ಲಿ, ಪ್ರವಾಸಿಗರ ಬಾಯಲ್ಲಿ ಸಂತ ಫಿಲೋಮಿನಾ ಚರ್ಚ್ ಎಂದೇ ಕರೆಸಿಕೊಳ್ಳುವ ಈ ಚರ್ಚ್ 'ಸಂತ ಜೋಸೆಫರ ಪ್ರಧಾನಾಲಯ'ವೆಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದೆ.