ವಿಷಯಕ್ಕೆ ಹೋಗು

ತಂಬುಚೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿ ಆರ್ ಎ ತಂಬುಚೆಟ್ಟಿ ಎಂಬುವವರು ೧೯ನೇ ಶತಮಾನದ ಒಬ್ಬ ಯಶಸ್ವೀ ಭಾರತೀಯ ಅಧಿಕಾರಿಯಾಗಿದ್ದರು. ರಾಜಧರ್ಮಪ್ರವೀಣ ಸರ್ ತಿರುಚಿರಾಪಳ್ಳಿ ರಾಯುಲು ಆರೋಗ್ಯಸ್ವಾಮಿ ತಂಬುಚೆಟ್ಟಿ (೧೮೩೭-೧೯೦೭) ಅವರು ತಮಿಳುನಾಡಿನ ತಿರುಚಿಯಲ್ಲಿ ಜನಿಸಿದರು. ಕೃಷಿಕ ಸಮುದಾಯಕ್ಕೆ ಸೇರಿದ ಅವರು ತಮ್ಮ ೧೨ನೇ ವಯಸ್ಸಿನಲ್ಲಿ ತಂದೆತಾಯಿಯರನ್ನು ಕಳೆದುಕೊಂಡರು. ಆದರೂ ವಿದ್ಯಾಭ್ಯಾಸವನ್ನು ಪಡೆದು ಅಂದಿನ ಗ್ರಿಜಿತ್ಸ್ ಅಂಡ್ ಕಂಪೆನಿ ಎಂಬ ವ್ಯಾಪಾರೀ ಸಂಸ್ಥೆಯಲ್ಲಿ ನೌಕರಿಗೆ ಸೇರಿದರು. ಮೆಟ್ರಿಕ್ಯುಲೇಷನ್ ಆದಮೇಲೆ ಅಂದರೆ ೧೮೫೫ ಡಿಸೆಂಬರಿನಲ್ಲಿ ಅವರು ನೀಲಗಿರಿಯಲ್ಲಿನ ಸೈನಿಕ ಶಿಬಿರದ ಒವಾರ್ಟರ್ ಮಾಸ್ಟರ್ ಜನರಲ್ಲರ ಕಚೇರಿಯಲ್ಲಿ ಗುಮಾಸ್ತ ಹುದ್ದೆಗೆ ನೇಮಕವಾದರು. ತಮ್ಮ ಬದ್ದತೆ ಮತ್ತು ಶ್ರಮದ ಫಲವಾಗಿ ಅವರು ೧೮೬೨ರಲ್ಲಿ ಮದರಾಸು ವಿಧಾನಪರಿಷತ್ತಿನ ಕಾರ್ಯಾಲಯದಲ್ಲಿ ಕಾರ್ಯದರ್ಶಿಗಳಾಗಿದ್ದ ಮಾನ್ಯ ಜಾನ್ ಡಾಸನ್ ಎಂಬುವರ ಕೈಕೆಳಗೆ ಮೇನೇಜರ‍್ ಕೆಲಸಕ್ಕೆ ಸೇರಿಕೊಂಡರು. ಆನಂತರ ಡಾಸನ್ನರ ಪ್ರೋತ್ಸಾಹದಿಂದಾಗಿ ಅವರು ಕಾನೂನು ಅಧ್ಯಯನ ಮಾಡಿ ಬಳ್ಳಾರಿ ಜಿಲ್ಲಾ ಮುನ್ಸಿಫರಾಗಿ ನೇಮಿತರಾದರು. ತಮ್ಮ ಕಾನೂನು ಅಭ್ಯಾಸವನ್ನು ಮುಂದುವರಿಸುತ್ತಾ ಅವರು ಹಿಂದೂ ನ್ಯಾಯಶಾಸ್ತ್ರದಲ್ಲಿ ಪರಿಣತಿ ಹೊಂದಿದರು. ಅವರ ಪರಿಶ್ರಮವನ್ನು ಗುರುತಿಸಿದ ಅಂದಿನ ಬ್ರಿಟಿಷ್ ಸರ್ಕಾರವು ಅವರನ್ನು ಮೈಸೂರಿಗೆ ವರ್ಗಾಯಿಸಿ ಅಲ್ಲಿ ಜುಡಿಷಿಯಲ್ ಕಮಿಷನರ್ ಆಗಿದ್ದ ಜೆ ಆರ್ ಕಿಂಡರ್ಲೀ ಅವರ ಅಧೀನದಲ್ಲಿ ರಿಜಿಸ್ಟ್ರಾರ್ ಆಗಿ ನೇಮಕ ಮಾಡಿತು. ಕಾಲಾಂತರದಲ್ಲಿ ಅವರು ಬೆಂಗಳೂರಿನ ಪುಟ್ಟವ್ಯಾಜ್ಯಗಳ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದರು. ೧೮೮೧ರಲ್ಲಿ ರಾಜಾಳ್ವಿಕೆಯ ಸುಧಾರಣೆ ಹಾಗೂ ಮೈಸೂರು ಪ್ರಜಾಪ್ರತಿನಿಧಿ ಸಭೆಗಳ ರಚನೆಯ ಪರಿಣಾಮವಾಗಿ ಮಹಾರಾಜರು ತಂಬುಚೆಟ್ಟಿಯವರನ್ನು ಸಭೆಯ ಹಿರಿಯ ಕಾರ್ಯಕಾರಿ ಸದಸ್ಯರನ್ನಾಗಿ ನೇಮಿಸಿದರು. ೧೮೯೧ರ ಮಾರ್ಚ್ ೧ರಂದು ಅವರು ಮೈಸೂರು ರಾಜ್ಯದ ಉಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದರು. ಅಲ್ಲಿಂದಾಚೆಗೆ ತಮ್ಮ ನಿವೃತ್ತಿಯ ದಿನದವರೆಗೂ ಅಂದರೆ ೧೯೦೦ ಆಗಸ್ಟ್ ೧೧ ರವರೆಗೂ ಅವರು ಅದೇ ಸ್ಥಾನದಲ್ಲಿ ಮುಂದುವರಿದಿದ್ದರು. ಆ ಮೂಲಕ ಅವರು ನಮ್ಮ ದೇಶದ ಇತಿಹಾಸದಲ್ಲಿ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊತ್ತಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಿವೃತ್ತಿಯ ನಂತರವೂ ಅವರು ನಾಲ್ವಡಿ ಕೃಷ್ಣರಾಜ ಒಡೆಯರು ೧೯೦೨ರಲ್ಲಿ ರಾಜಪದವಿ ಸ್ವೀಕರಿಸುವವರೆಗೂ ಮಹಾರಾಣಿ ಲಕ್ಷ್ಮೀದೇವಿಯವರ ಸಲಹೆಗಾರರಾಗಿ ರಾಜ್ಯವನ್ನು ಮುನ್ನಡೆಸಿದರು. ಅಂದು ಐರೋಪ್ಯರಿಗಷ್ಟೇ ಮೀಸಲಾಗಿದ್ದ ಬೌರಿಂಗ್ ಆಸ್ಪತ್ರೆಯಲ್ಲಿ ತಂಬುಚೆಟ್ಟಿಯವರು ನಮ್ಮ ನೆಲದ ಜನರಿಗೆಂದೇ ಹೊಸ ವಿಭಾಗವೊಂದನ್ನು ಕಟ್ಟಿದರು. ಇಂದು ತಂಬುಚೆಟ್ಟಿಪಾಳ್ಯವೆಂದು ಕರೆಸಿಕೊಂಡಿರುವ ಸಣ್ಣತಮ್ಮನಹಳ್ಳಿಗೆ ಹೊಸರೂಪ ಕೊಡುವಲ್ಲಿ ಇವರ ಪಾತ್ರ ಗಣನೀಯ. ಸರ್ ಟಿ ಆರ್ ಎ ತಂಬುಚೆಟ್ಟಿಯವರ ಮಕ್ಕಳಲ್ಲೊಬ್ಬರಾದ ಟಿ ತಂಬುಚೆಟ್ಟಿಯವರು ಸಹಾ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಗಣ್ಯಸ್ಥಾನ ಹೊಂದಿದ್ದರು.