ಸಂತ ಫಿಲೋಮಿನಾ

ವಿಕಿಪೀಡಿಯ ಇಂದ
Jump to navigation Jump to search
ಸಂತ ಫಿಲೋಮಿನಾ

ಸಂತ ಫಿಲೋಮಿನಾ ರೋಮನ್ ಕ್ಯಾಥೊಲಿಕ್ ಚರ್ಚಿನ ಒಬ್ಬ ಹುತಾತ್ಮ ಸಂತರೆನಿಸಿದ್ದಾರೆ. ಈಕೆ ಸುಮಾರು ೪ನೇ ಶತಮಾನದಲ್ಲಿ ಜೀವಿತಳಿದ್ದ ಗ್ರೀಸ್ ದೇಶದ ರಾಜಕುಮಾರಿ ಎಂದು ಊಹಿಸಲಾಗಿದೆ.

ಗುಪ್ತಸಮಾಧಿಯ ಉತ್ಖನನ[ಬದಲಾಯಿಸಿ]

ಕ್ರಿಸ್ತಶಕ ೧೮೦೨ರ ಮೇ ೨೪ರಂದು ಇಟಲಿಯ ವಿಯಾ ಸಲಾರಿಯಾ ನೊವಾ ಎಂಬಲ್ಲಿ ಪಾಷಂಡಿಗಳಿಗೆ ಹೆದರಿ ಕ್ರೈಸ್ತರನ್ನು ಗುಪ್ತವಾಗಿ ಸಮಾಧಿ ಮಾಡಲಾಗಿದ್ದ ಸುರಂಗದಲ್ಲಿ ಅವಶೇಷಗಳನ್ನು ಪರಿಶೀಲಿಸುತ್ತಿದ್ದಾಗ ಆ ಸುರಂಗದ ಗೋಡೆಯ ಒಂದು ಭಾಗದಲ್ಲಿ ಟೊಳ್ಳಾದ ಸ್ಥಳವೊಂದು ಕಂಡುಬಂತು. ಮೂರು ಹಾಸುಗಲ್ಲುಗಳನ್ನು ಹೊದಿಸಲಾಗಿದ್ದ ಆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೆಂಬಣ್ಣದಲ್ಲಿ ಬರೆಯಲಾಗಿದ್ದ LUMENA | PAX TE | CUM FI ಎಂಬ ಅಕ್ಷರಗಳು ಗೋಚರಿಸಿದವು. ಲ್ಯಾಟಿನ್ ಭಾಷೆಯಲ್ಲಿ PAX TE CUM ಎಂದರೆ ಶಾಂತಿ ಲಭಿಸಲಿ ಎಂದರ್ಥ. ಸತ್ತವರಿಗೆ ಬೇಕಾಗಿರುವುದೂ, ಅವರಿಗೆ ನಾವು ಆಶಿಸುವುದೂ ಅದೇ ತಾನೇ? ಆ ಪದಗುಚ್ಛದ ಜೊತೆಗೆ ಒಂದು ಭರ್ಜಿ, ಎರಡು ಬಾಣ, ಎರಡು ಲಂಗರು, ಆಲಿವ್ ಗರಿ, ಶಲಾಕೆಯ ಹೂ (ಪಂಜು?) ಮೊದಲಾದ ಚಿಹ್ನೆಗಳನ್ನೂ ಗುರುತಿಸಲಾಯಿತು.

ಉತ್ಖನನಕಾರರು ಮೇಲಿನ ವಾಕ್ಯದಲ್ಲಿ ಬಹುಶಃ ಮೊದಲ ಮತ್ತು ಕೊನೆಯ ಎರಡೆರಡು ಅಕ್ಷರಗಳು ಮಾಸಿರಬಹುದೆಂದು ಭಾವಿಸಿ (FI)LUMENA PAX TE CUM FI(AT) ಎಂದು ಪ್ರಕ್ಷಿಪ್ತಗೊಳಿಸಿದರು. ಅದರರ್ಥ "ಫಿಲ್ಯೂಮೆನಾ, ನಿನಗೆ ಶಾಂತಿ ಲಭಿಸಲಿ, ತಥಾಸ್ತು". ಹೀಗೆಯೇ ಆ ಶಿಲಾಶಾಸನಗಳ ಬಗ್ಗೆ ಅಧ್ಯಯನ ನಡೆಸುತ್ತಿರಬೇಕಾದರೆ ಇನ್ನೊಂದು ಸಿದ್ಧಾಂತ ಹೊಳೆಯಿತು. ಬಹುಶಃ ಸಮಾಧಿಗೆ ಕಲ್ಲು ಹಾಸುವವನ ಅನಕ್ಷರತೆ ಅಥವಾ ಗಡಿಬಿಡಿಯಲ್ಲಿ ಮೂರು ಕಲ್ಲುಹಾಸುಗಳಲ್ಲಿ ಮೊದಲನೆಯದು ಪಲ್ಲಟಗೊಂಡು ಕೊನೆಗೆ ಬಂದಿದೆ ಎಂದು ಅಭಿಪ್ರಾಯ ಪಡಲಾಯಿತು. ಅದರ ಪ್ರಕಾರ ಹೊಸ ಅಕ್ಷರಗಳನ್ನು ಸೇರಿಸದೆಯೇ ಕೇವಲ ಕಲ್ಲುಗಳ ಸ್ಥಳಪಲ್ಲಟದಿಂದ PAX TE CUM FILUMENA (ಶಾಂತಿಯಿರಲಿ ಫಿಲ್ಯೂಮೆನಾ) ಎಂಬ ವಾಕ್ಯವನ್ನು ಪಡೆಯಲಾಯಿತು. ಎಲ್ಲರೂ ಇದನ್ನು ಒಪ್ಪಿದರು.

ಆ ಸಮಾಧಿಯ ಒಳಗೇನಿತ್ತು? ಅದರೊಳಗೆ ಸುಮಾರು ೧೩ರಿಂದ ೧೫ರ ವಯೋಮಾನದ ಹುಡುಗಿಯ ಅಸ್ಥಿಪಂಜರವಿತ್ತು. ಅದರ ತಲೆಬುರುಡೆ ಸೀಳಿದ್ದುದನ್ನು ಬಿಟ್ಟರೆ ಇನ್ನೆಲ್ಲಾ ಪ್ರಮುಖ ಮೂಳೆಗಳೂ ಸುಸ್ಥಿತಿಯಲ್ಲಿದ್ದವು. ಎಲುವುಗೂಡಿನ ಬದಿಯಲ್ಲಿ ಗಾಜಿನ ಒಂದು ಸಣ್ಣ ಸೀಸೆ ಇತ್ತು. ಅದರಲ್ಲಿ ಬಹುಶಃ ಆಕೆಯ ನೆತ್ತರನ್ನು ತುಂಬಿಸಿಡಲಾಗಿತ್ತು ಎನಿಸುತ್ತದೆ. ಈ ನೆತ್ತರ ಸೀಸೆ ಮತ್ತು ಸಮಾಧಿಯ ಮೇಲಿನ ಇತರ ಚಿಹ್ನೆಗಳ ಆಧಾರದಿಂದ ಆ ಸಮಾಧಿಯು ಹುತಾತ್ಮ ಕನ್ಯೆಯದೆಂದು ತೀರ್ಮಾನಿಸಲಾಯಿತು. ಆಮೇಲೆ ಪವಿತ್ರ ಅವಶೇಷಗಳನ್ನು ಸಂರಕ್ಷಿಸುವ ಸಂಸ್ಥೆಯು ಅವನ್ನೆಲ್ಲ ಸುಪರ್ದಿಗೆ ತೆಗೆದುಕೊಂಡಿತು.

ಸಮಾಧಿಯಿಂದ ದೇವಾಲಯಕ್ಕೆ[ಬದಲಾಯಿಸಿ]

ಜಗತ್ತಿನ ವಿವಿಧ ಭಾಗಗಳಲ್ಲಿ ಕ್ರೈಸ್ತ ಗುಡಿಗಳನ್ನು ಕಟ್ಟುವಾಗ ಅವಕ್ಕೆ ವಿವಿಧ ಕ್ರೈಸ್ತ ಸಾಧುಸಂತರನ್ನು ಪಾಲಕರನ್ನಾಗಿ ಆರೋಪಿಸುವುದು ರೂಢಿಯಲ್ಲಿದೆ. ಎಲ್ಲ ಚರ್ಚುಗಳಲ್ಲೂ ಕ್ರಿಸ್ತಾರಾಧನೆ ದೈವಪೂಜೆಗಳು ನಡೆವುದಾದರೂ ಅವನ್ನು ಸಂತ ಜೋಸೆಫರ ಚರ್ಚ್, ಸಂತ ತೆರೇಸಾ ಚರ್ಚ್, ಸಂತ ಮರಿಯಾ ಚರ್ಚ್ ಇತ್ಯಾದಿಯಾಗಿ ನಾಮಕರಣ ಮಾಡುವುದರಿಂದ ಆ ಚರ್ಚ್‌ಗಳನ್ನು ಒಂದು ಹೆಸರಿನಿಂದ ಗುರುತಿಸುವಲ್ಲಿ ಸಹಕಾರಿಯಾಗುತ್ತದೆ.

ಹೀಗೆಯೇ ೧೮೦೫ರ ಬೇಸಿಗೆಯಲ್ಲಿ ಇಟಲಿಯ ನೋಲಾ ಡಯೊಸೀಸ್‌ನ ಮಗ್ನಾನೋ ಎಂಬ ಸ್ಥಳದ ಪಾದ್ರಿಯೊಬ್ಬರು ತಮ್ಮ ಊರಿನಲ್ಲಿನ ಹೊಸ ದೇವಸ್ಥಾನಕ್ಕೆ ನಾಮಕರಣ ಮಾಡಲು ಒಬ್ಬ ಸಾತ್ವಿಕ ವ್ಯಕ್ತಿಯ ಹೆಸರು ಕೋರಿದಾಗ ಅಂದಿನ ಜಗದ್ಗುರು ಪೋಪ್ ಏಳನೇ ಪಯಸ್ ಅವರು ಮೇಲೆ ಪ್ರಸ್ತಾಪಿಸಿದ ಅವಶೇಷಗಳನ್ನು ಕೊಡುಗೆಯಾಗಿ ನೀಡಿದರು. ಅವನ್ನು ಜೂನ್ ೮ರಂದು ಆ ಹೊಸ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ನಂತರದ ಕೆಲವೇ ದಿನಗಳಲ್ಲಿ ಅಲ್ಲಿನ ಭಕ್ತಾದಿಗಳು ವಿಭಿನ್ನ ರೀತಿಯ ಆಧ್ಯಾತ್ಮಿಕ ಸಂಚಲನೆ ಅನುಭವಿಸಿದರು. ಅವರ ತಾಪತ್ರಯಗಳು ಸರಿದುಹೋದವು, ಕೋರಿಕೆಗಳು ಈಡೇರಿದವು, ಬದುಕೆಲ್ಲ ಸುಗಮವಾದವು. ಬಹುಬೇಗನೇ ಆ ಗುಡಿಯ ಪಾಲಕಸಂತರ ಕುರಿತ ಸುದ್ದಿ ಎಲ್ಲೆಡೆ ಹಬ್ಬಿತು. ಮರೀಯೆ ಲೂಯಿಸಾ ದೆ ಜೇಸುಸ್ ಎಂಬ ಸನ್ಯಾಸಿನಿಗೆ ಕನಸಿನಲ್ಲಿ ಕಂಡ ಸಾಧ್ವಿಯೊಬ್ಬಳು ತನ್ನ ಹೆಸರು ಲ್ಯಾಟಿನ್ ಮೂಲದ FILLIA LUMINIS (ಬೆಳಕಿನಪುತ್ರಿ) ಎಂದು ಸೂಚಿಸಿದಳಂತೆ.

ಮಗ್ನಾನೋ ಪುಣ್ಯಕ್ಷೇತ್ರ[ಬದಲಾಯಿಸಿ]

ಅಂದಿನಿಂದ ಮಗ್ನಾನೋ ದೇವಾಲಯವು ಒಂದು ಪ್ರಸಿದ್ಧ ಯಾತ್ರಾಸ್ಥಳವಾಯಿತು. ಫಿಲೋಮಿನಾ ಎಂಬ ಕಾಲ್ಪನಿಕ ವ್ಯಕ್ತಿಯ ಬಾಳ್ಗತೆಗಳು ಪ್ರಚಾರಕ್ಕೆ ಬಂದವು. ಮೂರು ದಶಕಗಳವರೆಗೆ ಇದು ಮುಂದುವರಿಯಿತು. ಕ್ರೈಸ್ತ ಧರ್ಮಮಂಡಲಿಯೂ ಇದರ ಕುರಿತು ಯಾವುದೇ ಅಧಿಕೃತತೆ ಘೋಷಿಸಲಿಲ್ಲ ಅಥವಾ ನಿಷೇಧವನ್ನೂ ಹೇರಲಿಲ್ಲ. ಆದರೆ ಈ ಎಲ್ಲ ದಂತಕತೆಗಳಿಗೆ ಗಟ್ಟಿರೂಪ ಕೊಡುವ ಒಂದು ಘಟನೆ ನಡೆಯಿತು.

ಪೌಲಿನ್ ಮೇರಿ ಜರಿಕೋ ಎಂಬಾಕೆ ಆರೋಗ್ಯಸ್ಥಿತಿ ತೀರಾ ಹದಗೆಟ್ಟು ಬದುಕುವ ಭರವಸೆಯನ್ನು ಕಳೆದುಕೊಂಡಿದ್ದಾಗ ಆ "ಫಿಲೋಮಿನಾ ಪುಣ್ಯಕ್ಷೇತ್ರ" ವನ್ನು ಸಂದರ್ಶಿಸಲು ನಿಶ್ಚಯಿಸಿ ಯಾತ್ರೆ ಹೊರಟಳು. ಅಂತೆಯೇ ತನ್ನ ನೆಲೆಯೂರಾದ ಲಿಯೋನ್ಸ್‌ನಿಂದ ಮಗ್ನಾನೋವರೆಗೆ ಕುದುರೆಗಾಡಿಯಲ್ಲಿ ಅಕ್ಷರಶಃ ಮಲಗಿಕೊಂಡೇ ಪಯಣಿಸಿದಳು. ರೋಮ್ ನಗರದ ಮೂಲಕ ಸಾಗುವಾಗ ಅಲ್ಲಿನ ಕನ್ಯಾಮಠದಲ್ಲಿ ತಂಗಿದ್ದಾಗ ಜಗದ್ಗುರುಗಳಾದ ಆರನೇ ಗ್ರೆಗರಿಯವರು ಆಕೆಯ ಮರಣ ಸನ್ನಿಹಿತವಾಗಿರುವುದನ್ನು ಕಂಡು ಸ್ವರ್ಗ ಸೇರಿದಾಗ ತಮಗಾಗಿ ಪ್ರಾರ್ಥಿಸುವಂತೆ ವಿನಂತಿಸಿಕೊಂಡರು.

೧೮೩೫ ಆಗಸ್ಟ್ ೮ರಂದು ಸಾವಿನ ಅಂಚಿನಲ್ಲಿದ್ದ ಜರಿಕೋ ಮಗ್ನಾನೋ ತಲುಪಿದಳು. ಮೂರು ದಿನಗಳ ನಂತರ ಅಂದರೆ ಆಗಸ್ಟ್ ೧೧ರಂದು ಅಲ್ಲಿನ ದೇವಾಲಯದಲ್ಲಿ ಪರಮಪ್ರಸಾದ ಸ್ವೀಕರಿಸುತ್ತಿರುವಾಗಲೇ ಅತ್ಯದ್ಭುತಕರವಾಗಿ ಗುಣಹೊಂದಿದಳು. ಅಸ್ವಸ್ಥ ಜರಿಕೋ ಒಮ್ಮೆಲೇ ಸುಸ್ವಸ್ಥಳಾಗಿದ್ದಳು. ಈ ಘಟನೆ ಅಲ್ಲಿ ಸೇರಿದ್ದ ಎಲ್ಲ ಜನರಲ್ಲಿ ವಿದ್ಯುತ್ ಸಂಚಾರ ಉಂಟುಮಾಡಿತು. ಅಲ್ಲಿಂದ ಊರಿಗೆ ಹಿಂದಿರುಗುವಾಗ ಜರಿಕೋ ಪೋಪರನ್ನು ಭೇಟಿಯಾಗಲು ರೋಮ್‌ನಲ್ಲಿ ಉಳಿದುಕೊಂಡಳು.

ಪೋಪ್ ಏಳನೇ ಗ್ರೆಗರಿಯವರಿಗೂ ಇದು ಅತ್ಯಂತ ಸೋಜಿಗದ ಸಂಗತಿಯಾಗಿತ್ತು. ಅಂದೇ ಪವಾಡಕರ್ತೆ ಫಿಲೋಮಿನಾ ಕುರಿತು ಅಧ್ಯಯನ ಮಾಡಲು ನಿಶ್ಚಯಿಸಿದರು. ಸಮಾಧಿಯಲ್ಲಿದ್ದ ನೆತ್ತರ ಕರಂಡಕ ಹಾಗೂ ಶಿಲಾಲೇಖದಲ್ಲಿದ್ದ ಚಿಹ್ನೆಗಳ ಆಧಾರದಿಂದ "ಪವಿತ್ರ ಆಚಾರವಿಧಿಗಳ ಪರಿಷತ್ತು" (The Congregation of Sacred Rites) ಇದು ಹುತಾತ್ಮರ ಸಮಾಧಿಯೇ ಸರಿ ಎಂದು ತೀರ್ಮಾನಿಸಿತು. ಅದರ ಪ್ರಕಾರ ಪೋಪರು ೧೮೩೭ ಜನವರಿ ೩೦ರಂದು "ಫಿಲೋಮಿನಾರವರ ಜೀವನ, ಕಾರ್ಯಪ್ರವೃತ್ತಿ ಮತ್ತು ಆತ್ಮಾಹುತಿಯ ಕಾರಣಗಳನ್ನು ತಿಳಿಯಲಾಗಿಲ್ಲ ಆದರೆ ಸತ್ಯಧರ್ಮಕ್ಕಾಗಿ ಹುತಾತ್ಮರಾದವರು ಎಂದು ಘೋಷಿಸಬಹುದಾಗಿದೆ" ಎಂಬ ನಿರ್ಣಯಕ್ಕೆ ಸಹಿ ಹಾಕಿದರು. ಹಾಗೂ ಆಕೆಯನ್ನು ಸಾರ್ವಜನಿಕವಾಗಿ ಗೌರವಿಸುವುದಕ್ಕೆ ಪ್ರಾರ್ಥಿಸುವುದಕ್ಕೆ ಅನುಮತಿಯಿತ್ತು ಆಗಸ್ಟ್ ೧೧ರಂದು ಸಂತ ಫಿಲೋಮಿನಾರವರ ಹಬ್ಬವಾಚರಿಸುವಂತೆ ವಿಧಿಸಿದರು.

ಹಲವು ವರ್ಷಗಳ ನಂತರ ಇಟಲಿಯ ಆ ಗುಪ್ತಸುರಂಗದ ಸಮಾಧಿಯ ಬಗ್ಗೆ ಆಳವಾದ ಸಂಶೋಧನೆ ನಡೆಸಿದ ಪ್ರೊಫೆಸರ್ ಮರುಷಿ ಎಂಬುವವರು "ಸಮಾಧಿಯ ಮೇಲೆ ಮುಚ್ಚಲಾದ ಕಲ್ಲುಗಳು ಆಕಸ್ಮಿಕವಾಗಿ ಪಲ್ಲಟಗೊಂಡುದಲ್ಲ! ಅದು ಮೂಲತಃ ಎರಡನೇ ಶತಮಾನದಲ್ಲಿ ಜೀವಿಸಿದ್ದ ಫಿಲೋಮಿನಾ ಎಂಬಾಕೆಯ ಸಮಾಧಿ. ಆದರೆ ಅನಂತರ ಅದೇ ಗೋರಿಯಲ್ಲಿ ಅನಾಮಧೇಯ ಹುಡುಗಿಯೊರ್ವಳ ದೇಹವನ್ನು ಹೂಳಿ ಕಲ್ಲುಹಾಸುಗಳನ್ನು ಉದ್ದೇಶಪೂರ್ವಕವಾಗಿ ಹಿಂದುಮುಂದು ಮಾಡಲಾಗಿದೆ. ಮೂಲ ಫಿಲೋಮಿನಾರವರ ಅವಶೇಷವನ್ನು ಬಹುಶಃ ೮-೯ನೇ ಶತಮಾನಗಳಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅದೇ ಸಮಾಧಿಯಲ್ಲಿ ದ್ವಿತೀಯ ಅಂತ್ಯಸಂಸ್ಕಾರದಲ್ಲಿ ಹೂಳಿದ ಅವಶೇಷಗಳನ್ನು ಮಗ್ನಾನೋ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ" ಎಂದು ಪ್ರತಿಪಾದಿಸಿದರು.

ಈ ಅನ್ವೇಷಣೆ ಇಟಲಿ ನಾಡಿನಾದ್ಯಂತ ಪ್ರಚಂಡ ಬಿರುಗಾಳಿಯೆಬ್ಬಿಸಿತು. ತಮ್ಮ ಪಾಲಕಿಯನ್ನು ತಮ್ಮಿಂದ ದೂರೀಕರಿಸುವ ಪ್ರಯತ್ನವಿದೆಂದು ಜನ ಭಾವಿಸಿದರು. ಆದರೆ ಧರ್ಮನಿಷ್ಠೆಯ ಹೆಸರಿನಲ್ಲಿ ನಮ್ಮನ್ನು ನಾವೇ ವಂಚಿಸಿಕೊಳ್ಳುವುದು ತರವಲ್ಲ ಎನ್ನುವವರ ಸಂಖ್ಯೆ ಹೆಚ್ಚಾಗಿತ್ತು. ಇಂದಿಗೂ ಫಿಲೋಮಿನಾ ಎಂಬುವರು ನಿಜವಾಗಿ ಜೀವಿಸಿದ್ದರೇ? ಅದೇ ಹೆಸರನ್ನು ಹೊಂದಿದ್ದರೇ? ಧರ್ಮಕ್ಕಾಗಿಯೇ ಹುತಾತ್ಮರಾದರೇ? ಮಗ್ನಾನೋ ದೇವಾಲಯದಲ್ಲಿರುವ ಅವಶೇಷಗಳು ಈಕೆಯವೇ ಅಥವಾ ಬೇರೆಲ್ಲಿಯಾದರೂ ಇವೆಯೇ? ಎಂಬಿತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಈ ಕಾರಣದಿಂದ ಧಾರ್ಮಿಕರಂಗದಲ್ಲಿ ಫಿಲೋಮಿನಾರ ಹೆಸರನ್ನು ಬಳಸಲು ಕ್ರೈಸ್ತ ಧರ್ಮಮಂಡಲಿ ತಡೆಯೊಡ್ಡಿದೆ. ಆದರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಫಿಲೋಮಿನಾ ಎಂಬ ಹೆಸರಿಟ್ಟುಕೊಳ್ಳಲು ನಿರ್ಬಂಧವಿಲ್ಲ. ಫಿಲೋಮಿನಾ (ಬೆಳಕಿನ ಪುತ್ರಿ) ಎಂಬ ಹೆಸರು ಚೆಂದವಾಗಿ ತೋರುತ್ತದೆ.