ವೀರ್ಯಾಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವ ವೀರ್ಯಾಣುವಿನ ರೇಖಾಚಿತ್ರ

ವೀರ್ಯಾಣು ಎಂದರೆ ಪುರುಷರ ವೀರ್ಯದಲ್ಲಿ (ರೇತಸ್ಸು, ಧಾತು-ಸೀಮೆನ್) ಕಂಡುಬರುವ, ಪ್ರಜನನಕಾರಕವೆನಿಸುವ ಸೂಕ್ಷ್ಮಕೋಶ (ಸ್ಪರ್ಮ್). ಶುಕ್ಲಾಣು, ಶುಕ್ರಾಣು, ರೇತ್ರಾಣು ಎಂಬ ಹೆಸರುಗಳೂ ಇವೆ. ವೀರ್ಯಾಣುಗಳು ಪುರುಷ ಪ್ರಜನನಕೋಶವಾದ ವೃಷಣದಲ್ಲಿ (ಟೆಸ್ಟಿಕಲ್) ಉತ್ಪತ್ತಿ ಆಗುತ್ತವೆ.[೧] ಒಂದೊಂದು ವೀರ್ಯಾಣುವಿನ ಉದ್ದ ಸುಮಾರು 50-60 ಮೈಕ್ರಾನುಗಳು (1 ಮೈಕ್ರಾನ್ = 1 ಮೀಟರಿನ ಒಂದು ದಶಲಕ್ಷ ಭಾಗ). ತಲೆಭಾಗ ದುಂಡಗೆ ದಪ್ಪವಾಗಿದ್ದು 5 ಮೈಕ್ರಾನುಗಳಷ್ಟು ಉದ್ದವಿರುತ್ತದೆ. ತಲೆಭಾಗವೇ ವೀರ್ಯಾಣುವಿನ ಕೇಂದ್ರಭಾಗ. ಇದಕ್ಕೆ ಸೇರಿದಂತೆ ಕತ್ತು ಮತ್ತು ಬಾಲಭಾಗಗಳಿವೆ. ಕತ್ತಿನ ಉದ್ದ ಸುಮಾರು 0.1 ಮೈಕ್ರಾನು. ಬಾಲದ ಸಹಾಯದಿಂದ ವೀರ್ಯಾಣುಗಳು ಚಲನವಲನಗಳನ್ನು ಪ್ರದರ್ಶಿಸುತ್ತವೆ.[೨][೩][೪] ಇವು ಸ್ತ್ರೀ ಜನನೇಂದ್ರಿಯ ನಾಳದೊಳಗೆ ಹೋಗಿ ಅಲ್ಲಿರುವ ಲೋಳೆರಸದಲ್ಲಿ ಮಿನಿಟಿಗೆ 2-7 ಮಿಮೀ ದೂರದಲ್ಲಿ ಈಜಿಕೊಂಡು ಹೋಗಿ ಅಂಡಾಣುಗಳನ್ನು ಸಮೀಪಿಸಿ ಅವುಗಳೊಡನೆ ಮಿಲನಗೊಳ್ಳುತ್ತವೆ. ಈ ಕ್ರಿಯೆಗೆ 'ನಿಷೇಚನೆ' ಎಂದು ಹೆಸರು. ಒಂದು ಸಂಭೋಗದಲ್ಲಿ ಅನೇಕ ವೀರ್ಯಾಣುಗಳು ಯೋನಿಯನ್ನು ಪ್ರವೇಶಿಸಿದಾಗ ಅಲ್ಲಿ ಅಂಡಾಣುಗಳು ಸಿದ್ಧವಾಗಿದ್ದರೆ ಮಾತ್ರ ನಿಷೇಚನೆ ಜರಗುತ್ತದೆ. ವೀರ್ಯಾಣುಗಳು ಮನುಷ್ಯನ ಪ್ರವರ್ಧಮಾನ ಕಾಲದಿಂದ ಅಂದರೆ, 16-18ನೆಯ ವಯಸ್ಸಿನಿಂದ 60-65 ವಯಸ್ಸಿನ ತನಕವೂ ಉತ್ಪತ್ತಿಯಾಗುತ್ತಿರುತ್ತವೆ.

ವಿಂಗಡಣೆ[ಬದಲಾಯಿಸಿ]

ಇವನ್ನು ಸಹಜ (ನ್ಯಾಚುರಲ್) ಮತ್ತು ಸಂಶ್ಲೇಷಿತ (ಸಿಂತೆಟಿಕ್) ವೀರ್ಯಾಣುಗಳೆಂದು ಎರಡು ಬಗೆಗಳಲ್ಲಿ ವಿಂಗಡಿಸಲಾಗಿದೆ.

ಸಹಜ ವೀರ್ಯಾಣುಗಳು ದಿನವೊಂದರಲ್ಲಿ ಪುರುಷ ವೃಷಣದಿಂದ 3-12 ಮಿಲಿಗ್ರಾಮ್ ಉತ್ಪತ್ತಿಯಾಗುತ್ತವೆ. ಇವು ಕ್ರಮೇಣ ದೇಹದಲ್ಲಿ ಪರಿವರ್ತನೆಗೊಳ್ಳುತ್ತ ಹೋಗಿ ಕೊನೆಗೆ ವೀರ್ಯಾಣುಗಳ ಕ್ರಿಯಾಸಾಮರ್ಥ್ಯ ಹತ್ತನೆಯ ಒಂದು ಭಾಗಕ್ಕೆ ಇಳಿಯುತ್ತದೆ. ಅಡ್ರಿನಲ್ ಗ್ರಂಥಿಯ ಹೊರಭಾಗದಲ್ಲಿ (ಕಾರ್ಟೆಕ್ಸ್) ಡೀಹೈಡ್ರೋಎಪಿಯಾಂಡ್ರೋಸ್ಟಿರೋನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದರ ಕ್ರಿಯಾಸಾಮರ್ಥ್ಯ 1/20-1/80ರಷ್ಟು ಇರುತ್ತದೆ. ಇದು ಸಹಜ ವೀರ್ಯಾಣುಗಳ ಉತ್ಪತ್ತಿಗೆ ಸಹಾಯಕವಾಗುವುದು.

ಪುರುಷ ವೃಷಣದಲ್ಲಿಯೇ ಉತ್ಪತ್ತಿಯಾಗುವ ಸಂಶ್ಲೇಷಿತ ವೀರ್ಯಾಣುಗಳಿಂದ ದ್ವಿತೀಯಕ ಜನನೇಂದ್ರಿಯ ಗುಣಗಳು ಅಂದರೆ, ಕೂದಲಿನ ಬೆಳೆವಣಿಗೆ, ಧ್ವನಿ ಗಡಸಾಗುವುದು, ಚರ್ಮ ದಪ್ಪವಾಗುವುದು ಹಾಗೂ ಅದರ ಕೆಳಭಾಗದಲ್ಲಿ ಮೇದಸ್ಸು ಕಡಿಮೆಯಾಗುವುದು ಮುಂತಾದವು ಕಂಡುಬರುತ್ತವೆ.

ವೀರ್ಯಾಣುಗಳು ಉತ್ಪತ್ತಿಯಾಗಿ ಸುಸ್ಥಿತಿಯಲ್ಲಿರುವಾಗ ವ್ಯಕ್ತಿ ಆರೋಗ್ಯವಾಗಿದ್ದಾನೆ ಎಂದರ್ಥ. ಆಗ ಮೂಳೆ ಮತ್ತು ಮಾಂಸಖಂಡಗಳು ದೃಢವಾಗುತ್ತವೆ. ಅಂಡಾಣುಗಳೊಡನೆ ವೀರ್ಯಾಣುಗಳು ಮಿಲನಗೊಂಡ ಬಳಿಕ ಗರ್ಭಕೋಶದಲ್ಲಿ ಗರ್ಭಾಂಕುರಿಸಿದ ಭ್ರೂಣ ಬೆಳೆಯಲು ತೊಡಗುತ್ತದೆ. ಮಿಲನಕ್ರಿಯೆ ವಿಫಲಗೊಂಡರೆ ವೀರ್ಯಾಣುಗಳು ನಾಶಹೊಂದುತ್ತವೆ.

ಸಂಶ್ಲೇಷಿತ ವೀರ್ಯಾಣುಗಳ ಉಪಯೋಗಗಳು[ಬದಲಾಯಿಸಿ]

ಪುರುಷ ವೃಷಣದಲ್ಲಿ ಯಾವುದಾದರೂ ಕೊರತೆ ಏರ್ಪಟ್ಟಲ್ಲಿ ಸಂಶ್ಲೇಷಿತ ವೀರ್ಯಾಣುಗಳು ಉಪಯೋಗಕ್ಕೆ ಬರುತ್ತವೆ. ಪಿಟ್ಯೂಟರಿ ಗ್ರಂಥಿಯ ಅಲ್ಪಕ್ರಿಯೆಯಲ್ಲೂ ಸ್ತನಕ್ಯಾನ್ಸರ್ ರೋಗದ ಚಿಕಿತ್ಸೆಯಲ್ಲೂ ಇವುಗಳ ಉಪಯೋಗ ಉಂಟು. ಉಪಚಯಕ (ಅನಬಾಲಿಕ್) ಸ್ಟೀರಾಯ್ಡ್ ಎಂಬ ಕೃತಕ ಪುರುಷ ವೃಷಣರಸಗಳನ್ನು ವೃದ್ಧಾಪ್ಯದಲ್ಲಿ ಮೂಳೆಗಳ ಸವೆತಕ್ಕೆ, ಶಸ್ತ್ರಚಿಕಿತ್ಸೆಯಾದ ಬಳಿಕ ಉಂಟಾಗುವ ವ್ರಣಗಳಿಗೆ ಹಾಗೂ ಇನ್ನಿತರ ಬೇರೆ ಬೇರೆ ಕಾಯಿಲೆಗಳಿಗೆ, ದೇಹದಲ್ಲಿ ತಲೆದೋರುವ ರಕ್ತಹೀನತೆಗೆ ಹಾಗೂ ಕಾರ್ಟಿಕೋಸ್ಟೀರಾಯ್ಡ್ ಎಂಬ ಸ್ರಾವಗಳನ್ನು ಉಂಟುಮಾಡಲು ಉಪಯೋಗಿಸುವುದಿದೆ. ಮೂತ್ರಪಿಂಡಗಳ ಕ್ರಿಯೆ ಕಡಿಮೆಯಾಗಿರುವ ಸಂದರ್ಭಗಳಲ್ಲಿ, ಮಕ್ಕಳಲ್ಲಿ ಯುಕ್ತ ಬೆಳೆವಣಿಗೆ ಇಲ್ಲದಿರುವಾಗ, ದೇಹದಲ್ಲಿ ನಿತ್ರಾಣ ಉಂಟಾಗಿರುವಾಗ ಈ ಸ್ಟೀರಾಯ್ಡ್‌ಗಳ ಉಪಯೋಗ ಇದೆ.

ವೀರ್ಯಾಣುಗಳ ಕೊರತೆಯಿಂದ ಆಗುವ ತೊಂದರೆಗಳು[ಬದಲಾಯಿಸಿ]

ವೀರ್ಯಾಣುಗಳ ಕೊರತೆಯಿಂದ ಕೆಲವೊಂದು ತೊಂದರೆಗಳು ಉದ್ಭವಿಸುತ್ತವೆ: ಪುಂಸತ್ವನಾಶ, ಸ್ತ್ರೀಯರಲ್ಲಿ ಮುಟ್ಟಿಗೆ ಸಂಬಂಧಿಸಿದ ರೋಗಗಳು, ಮುಖದಲ್ಲಿ ಮೊಡವೆಗಳು,  ಧೈರ್ಯನಾಶ, ಮಕ್ಕಳಲ್ಲಿ ಯುಕ್ತ ಬೆಳೆವಣಿಗೆ ಇಲ್ಲದಿರುವುದು, ದೇಹದ ಊತ ಮತ್ತು ಕಾಮಾಲೆ ಇತ್ಯಾದಿ.

ಉಲ್ಲೇಖಗಳು[ಬದಲಾಯಿಸಿ]

  1. "Animal reproductive system - Male systems". Encyclopedia Britannica (in ಇಂಗ್ಲಿಷ್). Retrieved 2020-02-20.
  2. Fawcett, D. W. (1981) Sperm Flagellum. In: The Cell. D. W. Fawcett. Philadelphia, W. B. Saunders Company. 14: pp. 604-640.
  3. Lehti, M. S. and A. Sironen (2017). "Formation and function of sperm tail structures in association with sperm motility defects." Bi
  4. Ishijima, Sumio; Oshio, Shigeru; Mohri, Hideo (1986). "Flagellar movement of human spermatozoa". Gamete Research. 13 (3): 185–197. doi:10.1002/mrd.1120130302.

ಹೊರಗಿನ ಕೊಂಡಿಗಳು[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: