ವಿಷಯಕ್ಕೆ ಹೋಗು

ವಿಲ್ಹೆಮ್ ರಾಂಟ್‌ಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಲ್‌ಹೆಲ್ಮ್ ರೆಂಟ್‌ಗನ್ ಇಂದ ಪುನರ್ನಿರ್ದೇಶಿತ)
ವಿಲ್ಹೆಮ್ ರಾಂಟ್‌ಜನ್
ಜನನವಿಲ್ಹೆಮ್ ಕಾನ್ರಾಡ್ ರಾಂಟ್‌ಜನ್
(೧೮೪೫-೦೩-೨೭)೨೭ ಮಾರ್ಚ್ ೧೮೪೫
ಲೆನ್ನೆಪ್, ಪ್ರುಷ್ಯ
ಮರಣ10 February 1923(1923-02-10) (aged 77)
ಮ್ಯೂನಿಕ್, ಜರ್ಮನಿ
ರಾಷ್ಟ್ರೀಯತೆಜರ್ಮನಿ
ಕಾರ್ಯಕ್ಷೇತ್ರಗಳುಭೌತಶಾಸ್ತ್ರ
ಸಂಸ್ಥೆಗಳುUniversity of Strassburg
Hohenheim
University of Giessen
University of Würzburg
University of Munich
ಅಭ್ಯಸಿಸಿದ ಸಂಸ್ಥೆಇಟಿಎಚ್ ಜೂರಿಕ್
ಜೂರಿಕ್ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುAugust Kundt
ಡಾಕ್ಟರೆಟ್ ವಿದ್ಯಾರ್ಥಿಗಳುHerman March
Abram Ioffe
ಪ್ರಸಿದ್ಧಿಗೆ ಕಾರಣಕ್ಷ ಕಿರಣ
ಗಮನಾರ್ಹ ಪ್ರಶಸ್ತಿಗಳುಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೦೧)

ವಿಲ್ಹೆಮ್ ರಾಂಟ್‌ಜನ್ (ಮಾರ್ಚ್ ೨೭ ೧೮೪೫ಫೆಬ್ರುವರಿ ೧೦ ೧೯೨೩) ಜರ್ಮನಿಯ ಭೌತಶಾಸ್ತ್ರಜ್ಞ.[] ಇವರು ೧೮೯೫ ರಲ್ಲಿ ಕ್ಷ ಕಿರಣವನ್ನು ಕಂಡುಹಿಡಿದರು. ಇದಕ್ಕಾಗಿ ಇವರಿಗೆ ೧೯೦೧ರಲ್ಲಿ ಪ್ರಥಮ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[][]

ವಿದ್ಯುತ್-ಆಯಸ್ಕಾಂತೀಯ ಪ್ರಕಾಶದಿಂದ ಉದ್ಭವಿಸುವ ಈ ಕಿರಣಗಳನ್ನು ಕಂಡುಹಿಡಿದು ಅಪಾರ ಗೌರವ ಮನ್ನಣೆ ಗಳಿಸಿದವರು ರೋಂಟ್‌ಗೇನ್. ಪ್ರಕಟವಾದ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಇದೊಂದು ಅತ್ಯಂತ ಮಹತ್ವದ ಶೋಧನೆಯಾಗಿದೆ. ವೈದ್ಯರು ಈಗ ರೋಗ ನಿದಾನಕ್ಕಾಗಿ ಬಳಸುವ ಸಾಧನ ಸಲಕರಣೆಗಳಲ್ಲಿ ಶೇಕಡ ೫೦ ಕ್ಕಿಂತ ಹೆಚ್ಚು ಎಕ್ಸ್ ರೇ ಗೆ ಸಂಬಂಧಿಸಿದ ಸಲಕರಣೆಯಿಂದಾಗುತ್ತದೆ. ವೈಜ್ಞಾನಿಕ ಹಾಗೂ ಕೈಗಾರಿಕಾ ವಲಯಗಳಲ್ಲೂ ಇದರ ಪಾತ್ರ ಹಿರಿದು.

ಬಾಲ್ಯ, ವಿದ್ಯಾಭ್ಯಾಸ

[ಬದಲಾಯಿಸಿ]

ವಿಲ್ಹೆಲ್ಮ್ ರೋಂಟ್‌ಗೇನ್ ಜನಿಸಿದ್ದು ರ‍್ಹೀನಿಶ್ ಪ್ರಷ್ಯದ ಲೆನೆಪ್ ಎಂಬ ಹಳ್ಳಿಯಲ್ಲಿ. ತಂದೆ ಜವಳಿ ವ್ಯಾಪರಸ್ಥ. ಕಾರಣಾಂತರದಿಂದ ಅವನ ಕುಟುಂಬದವರು ನೆರೆಯ ಹಾಲೆಂಡ್ ದೇಶಕ್ಕೆ ವಲಸೆ ಹೋಗಬೇಕಾಯಿತು.[] ಬಾಲ್ಯದ ದಿನಗಳಲ್ಲಿ ವಿಲ್ಹೆಲ್ಮ್ ಸ್ವಲ್ಪ ಪುಂಡಾಟಿಕೆಯವನೆಂಬ ಅಭಿಪ್ರಾಯ ಮೂಡಿಸಿದ್ದ. ಕೆಲವು ಅಹಿತಕರ ಘಟನೆಗಳಿಗೆ ಕಾರಣನಾಗಿ ಅವನನ್ನು ಪ್ರೌಢಶಾಲೆಯಿಂದ ವಜಾ ಮಾಡಿದ್ದರು. ಅವನಿದ್ದ ಊರಿನ ಯುಟ್ರೆಕ್ ವಿಶ್ವವಿದ್ಯಾಲಯದವರು ಅವನಿಗೆ ಪ್ರವೇಶವನ್ನು ನಿರಾಕರಿಸಿದ್ದರು. ಅದರಿಂದ ಸ್ವಿಟ್ಸರ್‌ಲ್ಯಾಂಡಿನ ಜೂರಿಕ್ ವಿಶ್ವವಿದ್ಯಾಲಯದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳಬೇಕಾಯಿತು. ಜೂರಿಚ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ನಾತಕ ಪದವಿ ಗಳಿಕೆ. ಗಣಿತ ಮತ್ತು ಭೌತಶಾಸ್ತ್ರಗಳು ವಿಲ್‍ಹೆಲ್ಮ್ ಪದವಿಗಾಗಿ ಆರಿಸಿಕೊಂಡ ವಿಷಯಗಳು. ಜರ್ಮನ್ ಭೌತವಿಜ್ಞಾನಿ ಆಗಸ್ಟ್ ಅಡಾಲ್ಫ್ ಎಡ್ವರ್ಡ್ ಎಬರ್‌ಹಾರ್ಡ್ ಕೂಂಟ್‌ನ (1839-94) ಪ್ರಭಾವದಿಂದ ಭೌತವಿಜ್ಞಾನ ಅಧ್ಯಯನವನ್ನು ವೃತ್ತಿಯಾಗಿ ಆಯ್ಕೆ; ಅನಿಲಗಳ ವಿಷಯದಲ್ಲಿ ವಿಲ್‍ಹೆಲ್ಮ್ ತಯಾರಿಸಿದ್ದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ದೊರೆಯಿತು (1869).

ವೃತ್ತಿಜೀವನ, ಸಾಧನೆಗಳು

[ಬದಲಾಯಿಸಿ]

ಕೂಂಟ್‌ನ ಸಹಾಯಕನಾಗಿ ವೃತ್ತಿಪ್ರವೇಶ. ಸ್ಟ್ರಾಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಅನುಭವ ಗಳಿಕೆ (1876).[] ಕೂಂಟ್‌ನ ಒಡನಾಡಿಯಾಗಿ ಜರ್ಮನಿಗೆ ಪ್ರಯಾಣ. ಅನುಕ್ರಮವಾಗಿ ಗಿಸ್ಸೆನ್(1879), ವೂರ್ಝ್‌ಬರ್ಗ್(1888) ಮತ್ತು ಮ್ಯೂನಿಚ್(1899-1919) ವಿಶ್ವವಿದ್ಯಾಲಯಗಳಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕ ವೃತ್ತಿ.

ವೂಜ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಬೋಧಕ/ ಸಂಶೋಧಕರಾಗಿ ಕಾರ್ಯಪ್ರವೃತ್ತರಾದರು. ಹಲವು ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಒಳ್ಳೆಯ ಪ್ರತಿಭಾವಂತನೆಂದು ಹೆಸರು ಗಳಿಸಿದರು. ಇನ್ನು ಕೆಲವೇ ವರ್ಷಗಳಲ್ಲಿ ಪ್ರಾಧ್ಯಾಪಕ ಹುದ್ದೆಯು ಅವರದಾಯಿತು. ಅವರ ವಿದ್ವತ್ತನರಿತ ಹಲವಾರು ವಿಶ್ವವಿದ್ಯಾಲಯಗಳಿಂದ ಪ್ರಾಧ್ಯಾಪಕ ಸ್ಥಾನವನ್ನು ಅಲಂಕರಿಸಲು ಆಹ್ವಾನಗಳು ಬರುತ್ತಿದ್ದವು. ಅವುಗಳಲ್ಲಿ ಹಿಂದೆ ಅವರನ್ನು ವಿದ್ಯಾರ್ಥಿಯನ್ನಾಗಿ ಸೇರಿಸಿಕೊಳ್ಳಲು ನಿರಾಕರಿಸಿದ್ದ ಯೂಟ್ರೆಕ್ ವಿಶ್ವವಿದ್ಯಾಲಯದಿಂದಿಲೂ ಬೇಡಿಕೆ ಬಂದಿತ್ತೆಂದರೆ ರೋಂಟ್‌ಗೇನ್‌ಗೆ ಆಗಿದ್ದ ಸ್ಥಾನಮಾನಗಳ ಅರಿವಾಗಬಹುದು. ಆದರೆ ವೂಜ್‌ಬರ್ಗ್‌ನಲ್ಲಿ ಹಿತಕರ ಪರಿಸರ ಮತ್ತು ಸೌಕರ್ಯಗಳು ಇದ್ದುದ್ದರಿಂದ ಅವರು ಅಲ್ಲೇ ಮುಂದುವರೆದರು. ಆಗ ಈತ ವೂರ್ಝ್ ಬರ್ಗ್ ವಿಶ್ವವಿದ್ಯಾಲಯದ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ.

ಒಂದು ಸಲ ರೋಂಟ್‌ಗೇನ್- ೮ ನವೇಂಬರ್ ೧೮೯೫ ರಂದು ವಿಲಿಯಮ್ ಕ್ರೂಕ್ಸ್‌ನ ನಿರ್ವಾತ ಕೊಳವೆ ಮೂಲಕ ವಿದ್ಯುತ್ ಪ್ರವಾಹವನ್ನು ಹರಿಸುವ ಪ್ರಯೋಗದಲ್ಲಿ ನಿರತರಾಗಿದ್ದರು. ಕ್ಯಾಥೋಡ್ ಕಿರಣಗಳಿಗೆ ಸಂಬಂಧಿಸಿದಂತೆ ಲೆನಾರ್ಡ್ ಮತ್ತು ಸರ್ ವಿಲಿಯಮ್ ಕ್ರೂಕ್ಸ್ (ಬ್ರಿಟಿಷ್ ಭೌತವಿಜ್ಞಾನಿ, 1832-1919) ಮಾಡಿದ್ದ ಪ್ರಯೋಗಗಳನ್ನು ಈತ ಪುನಃ ಮಾಡುತ್ತಿದ್ದ. ಕಾರಣ: ನಿರ್ದಿಷ್ಟ ರಾಸಾಯನಿಕಗಳಲ್ಲಿ ಕ್ಯಾಥೋಡ್ ಕಿರಣಗಳು ಉಂಟು ಮಾಡುತ್ತಿದ್ದ ದೀಪ್ತಿ ಇವನ ಕುತೂಹಲ ಕೆರಳಿಸಿತ್ತು. ಪ್ರಯೋಗ ಕತ್ತಲಲ್ಲಿ ನಡೆಯಬೇಕಾದುದ್ದರಿಂದ ಬಾಗಿಲು ಕಿಟಕಿಯನ್ನು ಮುಚ್ಚಿದರು. ಕಿಟಕಿಗೆ ಕಪ್ಪು ಪರದೆಯನ್ನು ನೇತು ಹಾಕಿದ್ದರು. ನಳಿಗೆಗೆ ತೆಳು ಕಪ್ಪುರಟ್ಟಿನ ಆವರಣ ಹಾಕಿದ (1895 ನವೆಂಬರ್ 5). ಕಿಟಕಿಯಲ್ಲಿ ವಿದ್ಯುತ್ ಹರಿಯಲಾರಂಬಿಸಿದಾಕ್ಷಣ ಸುಮಾರು ಎರಡು ಮೀಟರ್ ದೂರದಲ್ಲಿ ಕಿಟಕಿಗೆ ನೇತು ಹಾಕಿದ್ದ ಪರದೆ ಪ್ರಕಾಶಮಾನವಾಗಿ ಬೆಳಗಲಾರಂಭಿಸಿತು. ವಿದ್ಯುತ್ ಹರಿವನ್ನು ಸ್ಥಗಿತಗೊಳಿಸಿದರೆ ಪರದೆಯ ಹೊಳಪು ಸಹ ಮಾಯಾವಾಗುತ್ತಿತ್ತು. ಇನ್ನಾವುದೋ ಒಂದು ಪ್ರಯೋಗಾರ್ಥವಾಗಿ ಆ ಪರದೆಗೆ ಬೇರಿಯಂ ಪ್ಲಾಟಿನೊ- ಸಯನೈಡ್‌ನ್ನು ಹಿಂದೆ ಲೇಪಿಸಲಾಗಿತ್ತು. ಯಾವುದೋ ಅಗೋಚರ ಕಿರಣಗಳು ಪರದೆಗೆ ಲೇಪಿಸಿದ್ದ ಬೇರಿಯಂನ್ನು ತಲುಪಿದಾಗ ಅವು ಪ್ರತಿಫಲಿತವಾಗಿ ಹೊಳಪು ಕಾಣಿಸಿಕೊಳ್ಳುತ್ತದೆಂಬುದು ಅವರ ಅಂದಾಜಾಯಿತು.[] ತಡೆಗಳ ಮೂಲಕ ಹಾಯಬಲ್ಲ ಅಗೋಚರ ವಿಕಿರಣವನ್ನು ನಳಿಗೆ ಉತ್ಸರ್ಜಿಸುತ್ತಿರಬೇಕೆಂದು ಅನುಮಾನಿಸಿದ. ಕಾಗದ ಹಾಗೂ ಲೋಹದ ವಿಭಿನ್ನ ದಪ್ಪದ ಹಾಳೆಗಳನ್ನು ಬಳಸಿ ಪ್ರಯೋಗ ಪುನರಾವರ್ತಿಸಿ ತನ್ನ ಅನುಮಾನ ಸರಿ ಎಂಬುದನ್ನು ಖಚಿತ ಪಡಿಸಿಕೊಂಡ. ಅವು ಪ್ರತಿಫಲಿತವಾಗಿ ಹೊಳಪು ಕಾಣಿಸಿಕೊಳ್ಳುತ್ತೆ ಎಂಬುದು ಅವರ ಅಂದಾಜಾಯಿತು. ಕೊಳವೆ ಮತ್ತು ಕಿಟಕಿಯ ಪರದೆಯ ನಡುವೆ ದಪ್ಪ ಗಾತ್ರದ ಮರದ ಹಲಗೆ ಪುಸ್ತಕ ಇತ್ಯಾದಿಗಳನ್ನು ಅಡ್ಡಲಾಗಿ ಇರಿಸಿ ವಿದ್ಯುತ್ ಹಾಯಿಸಿದಾಗಲೂ ಪರದೆಯಲ್ಲಿ ಹೊಳಪು ಪ್ರತಿಫಲಿತವಾಗುವುದನ್ನು ತಡೆಯಲಾಗಲಿಲ್ಲ. ಆಶ್ಚರ್ಯದಿಂದ ಭಾವಾವೇಶಕ್ಕೊಳಗಾದ ರೋಂಟ್‌ಗೇನ್ ತಮ್ಮ ಪತ್ನಿಯನ್ನು ಕರೆದು ವಿಸ್ಮಯವನ್ನು ಪ್ರದರ್ಶಿಸಿದಲ್ಲದೇ, ಆಕೆಯ ಹಸ್ತವನ್ನು ಅಡ್ಡಲಾಗಿಟ್ಟು ಪ್ರಯೋಗ ನಡೆಸಿದಾಗ, ಹಸ್ತ ಮತ್ತು ಬೆರಳಿನ ಮೂಳೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಮೃದುವಾದ ಮಾಂಸಖಂಡದ ಭಾಗಗಳು ಗೋಚರಿಸುತ್ತಿರಲಿಲ್ಲ. ತಮಗರಿವಿಲ್ಲದೆ ಪ್ರಕಟವಾದ ಈ ಹೊಸ ಶೋಧನೆಯಿಂದ ಮುಂದಾಗಬಹುದಾದ ಅಪಾರ ಸಾಧ್ಯತೆಗಳು ಅವರ ಸ್ಮೃತಿ ಪಟಲದಲ್ಲಿ ಹಾಯ್ದು ಹೋದವು. ಆಕಸ್ಮಿಕವಾಗಿ ತಮಗೆ ಕಂಡುಬಂದ ಈ ಅಗೋಚರ ರಶ್ಮಿಗಳ ಸ್ವಭಾವದ ಪರಿಚಯವಾಗದಿದ್ದರಿಂದ ಅವುಗಳಿಗೆ ‘ಎಕ್ಸ್ ಕಿರಣ’ ಗಳೆಂದು ನಾಮಕರಣ ಮಾಡಿದರು. ಏಳು ವಾರಗಳ ಕಾಲ ಸತತವಾಗಿ ಅನೇಕ ಪ್ರಯೋಗಗಳನ್ನು ಮಾಡಿದ. ಈ ಅವಧಿಯಲ್ಲಿ  ಎಕ್ಸ್-ಕಿರಣದ ಅನಿಲಗಳನ್ನು ಅಯಾನೀಕರಿಸುವ ಸಾಮರ್ಥ್ಯ, ಕಾಂತೀಯ ಅಥವಾ ವೈದ್ಯುತ ಕ್ಷೇತ್ರಕ್ಕೆ ಅನುಕ್ರಿಯಿಸದಿರುವಿಕೆ ಮುಂತಾದ ಎಲ್ಲ ಮೂಲ ಲಕ್ಷಣಗಳನ್ನೂ ಆವಿಷ್ಕರಿಸಿದ. ಅನಂತರ, ತನ್ನ ಆವಿಷ್ಕಾರದ ಸಂಪೂರ್ಣ ವರದಿಯನ್ನು ಪ್ರಕಟಿಸಿದ (1895 ಡಿಸೆಂಬರ್ 28). ಮುಂದೆ ಒಂದೇ ತಿಂಗಳಲ್ಲಿ (೨೩ ಜನವರಿ ೧೮೯೬) ತಮ್ಮ ವಿಸ್ಮಯಕಾರಿ ಶೋಧನೆಯ ವಿವರಗಳನ್ನು ವಿಜ್ಞಾನಿಗಳ ಸಮ್ಮೇಳನವೊಂದರಲ್ಲಿ ವಿವರಿಸಿದಾಗ, ಅವರೆಲ್ಲ ಅತ್ಯಾಶ್ಚರ್ಯಪಟ್ಟು ಹರ್ಷೋದ್ಗಾರ ಮಾಡಿದರು. ಆವಿಷ್ಕಾರದ ಕುರಿತು ರಂಟ್‌ಜನ್ ಮಾಡಿದ ಮೊದಲನೆಯ ಸಾರ್ವಜನಿಕ ಭಾಷಣದ (1896 ಜನವರಿ 23) ಅವಧಿಯಲ್ಲಿ ತೆಗೆದ ಸ್ವಪ್ರೇರಿತ ಶ್ರೋತೃವಿನ ಹಸ್ತದ ಎಕ್ಸ್-ಕಿರಣ ಫೋಟೊಗ್ರಾಫ್ ವೈದ್ಯಕೀಯ ಕ್ಷೇತ್ರದಲ್ಲಿ ಕಿರಣದ ವ್ಯಾಪಕ ಬಳಕೆಗೆ ನಾಂದಿಯಾಯಿತು. ಎಕ್ಸ್-ಕಿರಣ ಗುಟ್ಟಿಯ (ಡೋಸೇಜ್) ಏಕಮಾನಕ್ಕೆ ರಂಟ್‌ಜನ್ ಎಂದು ಹೆಸರಿಸಲಾಯಿತು.

ಇದರ ಶೋಧನೆಗಾಗಿ ಇವನಿಗೆ ಮತ್ತು ಫಿಲಿಪ್ ಎಡ್ವರ್ಡ್ ಆ್ಯಂಟನ್ ವಾನ್ ಲೆನಾರ್ಡ್ (ಹಂಗೇರಿಯನ್-ಜರ್ಮನ್ ಭೌತವಿಜ್ಞಾನಿ, 1862-1947) ಜಂಟಿಯಾಗಿ ರಮ್‌ಫರ್ಡ್ ಪದಕ ಪ್ರದಾನ (1896). ನೊಬೆಲ್ ಪ್ರಶಸ್ತಿ ಸ್ಥಾಪನೆಯಾದ ವರ್ಷವೇ ಭೌತವಿಜ್ಞಾನದ ಪ್ರಶಸ್ತಿ ನೀಡಿಕೆಯ ಪುರಸ್ಕಾರ (1901). ಬವೇರಿಯ ರಾಜ ನೀಡಿದ ‘ಫಾನ್’ ಬಿರುದನ್ನು ತಿರಸ್ಕರಿಸಿದ್ದು ಹಾಗೂ ಆವಿಷ್ಕಾರಕ್ಕೆ ಏಕಸ್ವ (ಪೇಟೆಂಟ್) ಪಡೆದು ಆರ್ಥಿಕ ಲಾಭ ಗಳಿಸಲು ನಿರಾಕರಿಸಿದ್ದು ಈತನ ನಿಸ್ವಾರ್ಥತೆಯ ಸೂಚಕಗಳು.

ಜರ್ಮನಿಯಲ್ಲಿ ಎಕ್ಸ್ ರೇ ಸಂಶೋಧನೆ ಪ್ರಕಟವಾದ ಒಂದೇ ತಿಂಗಳಲ್ಲಿ ಇಂಗ್ಲಂಡ್, ಅಮೇರಿಕಗಳಲ್ಲಿ ಅವುಗಳ ವಿಷಯ ಪ್ರಚಾರಕ್ಕೆ ಬಂದವು. ಎಕ್ಸ್ ರೇ ಗಳಿಗೆ ಅಪಾರದರ್ಶಕ ಬೇರಿಯಂನಂತಹ ಸಾಮಗ್ರಿಗಳನ್ನು ಮಾರ್ನೆಲೆಯಾಗಿ ಬಳಿಸಿಕೊಂಡು ಇಡೀ ಜೀರ್ಣಾಂಗ ಮಂಡಲ, ಮೂತ್ರಾಂಗಮಂಡಲ, ಪಿತ್ತನಾಳ, ಪಿತ್ತಕೋಶ ಮುಂತಾದ ಅವಯವಗಳೊಳಗೆ ಮುಂತಾದ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತು. ಮಾನವ ಶರೀರದಲ್ಲಿ ಎಕ್ಸ್ ರೇ ಗಳು ಎಟುಕಲಾಗದ ತಾಣಗಳೇ ಇಲ್ಲದಂತಾಯಿತು. ಕೈಗಾರಿಕಾ ಕ್ಷೇತ್ರದಲ್ಲಿ ಅದರ ಬಳಕೆ ಗಣನೆಗೆ ನಿಲುಕಲಾರದಷ್ಟು ಸಾಧ್ಯೆಗಳನ್ನು ಅನಾವರಣಗೊಳಿಸಿತ್ತು. ಇತೀಚಿನ ವೈಜ್ಞಾನಿಕ ಕೊಡುಗೆಗಳಾದ ಸಿ. ಓ ಸ್ಕಾನರ್, ಅಲ್ಟ್ರಾ ಸೌಂಡ್‍ನಂತಹ ಉಪಕರಣಗಳ ಆವಿಷ್ಕಾರಕ್ಕೆ ಎಕ್ಸ್ ರೇ ತತ್ವವೇ ಮೂಲಾಧಾರ. ಪ್ರಪಂಚದ ಹಲವು ಕಡೆಗಳಿಂದ ಗೌರವ ಬಹುಮಾನಗಳು ಅವರಿಗೆ ದೊರಕಿದ್ದರು ಅವರೊಬ್ಬ ಸಾಮಾನ್ಯರಂತೆ ಜೀವನ ನಡೆಸಿದರು.

ಸ್ಫಟಿಕಗಳ ಉಷ್ಣವಾಹಕತೆ, ಅನಿಲಗಳ ವಿಶಿಷ್ಟ ಉಷ್ಣ ಮತ್ತು ಪರಾವೈದ್ಯುತಗಳಲ್ಲಿ (ಡೈಎಲೆಕ್ಟ್ರಿಕ್) ಉತ್ಪತ್ತಿಯಾಗುವ ಕಾಂತೀಯ ಪರಿಣಾಮಗಳು-ಈ ಕ್ಷೇತ್ರಗಳಲ್ಲಿಯೂ ಈತನ ಮಹತ್ತ್ವದ ಕೊಡುಗೆಗಳಿವೆ.

ಒಂದನೆಯ ಮಹಾಯುದ್ಧಾನಂತರದ ಜರ್ಮನಿಯನ್ನು ಕಾಡಿದ ಹಣದುಬ್ಬರದ ಪರಿಣಾಮವಾಗಿ ಈತ ಕೂಡ ಆರ್ಥಿಕವಾಗಿ ದುರ್ಬಲನಾದ. ಜೀವನ ನಡೆಸುವುದೇ ಕಷ್ಟಕರವಾಯಿತು.

ಎಕ್ಸ್ ರೇ ವಿಕಿರಣಗಳಿಂದುಂಟಾಗುವ ಅಪಾಯಗಳ ಬಗೆಗೆ ಹೆಚ್ಚಿನ ಅರಿವಿಲ್ಲದ ಮೊದಲ ವರ್ಷಗಳಲ್ಲಿ ಬಹಳ ಸಮಯ ಎಕ್ಸ್ ರೇ ಗಳ ಸಂಶೋಧನೆಗಳಲ್ಲಿ ತೊಡಗಿರುತ್ತಿದ್ದ ವಿಲ್‍ಹೆಲ್ಮ್ ರೋಂಟ್‌ಗೇನ್ ವಿಕಿರಣದ ದುಷ್ಪರಿಣಾಮಗಳಲ್ಲಿ ಒಂದಾದ ಲ್ಯುಕೇಮಿಯದಿಂದ ನರಳಿ ತನ್ನ ೭೮ನೇ ವರ್ಷದಲ್ಲಿ (೧೯೨೩) ಅಸುನೀಗಿದರು.

ಉಲ್ಲೇಖಗಳು

[ಬದಲಾಯಿಸಿ]
  1. "Wilhelm Röntgen (1845–1923) – Ontdekker röntgenstraling". historiek.net. 31 October 2010.
  2. Novelize, Robert. Squire's Fundamentals of Radiology. Harvard University Press. 5th edition. 1997. ISBN 0-674-83339-2 p. 1.
  3. Stoddart, Charlotte (1 March 2022). "Structural biology: How proteins got their close-up". Knowable Magazine. doi:10.1146/knowable-022822-1. Retrieved 25 March 2022.
  4. "Wilhelm Röntgen". University of Washington: Department of Radiology. 7 January 2015. Archived from the original on 7 ಅಕ್ಟೋಬರ್ 2022. Retrieved 14 ಆಗಸ್ಟ್ 2023.
  5. Trevert, Edward (1988). Something About X-Rays for Everybody. Madison, Wisconsin: Medical Physics Publishing Corporation. p. 4. ISBN 0-944838-05-7.
  6.  Chisholm, Hugh, ed. (1911). "Röntgen, Wilhelm Konrad" . Encyclopædia Britannica. Vol. 23 (11th ed.). Cambridge University Press. p. 694. {{cite encyclopedia}}: Cite has empty unknown parameters: |separator= and |HIDE_PARAMETER= (help)
  1. ಡಾ. ಎಚ್. ಡಿ ಚಂದ್ರಪ್ಪಗೌಡ, ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು, ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ೧೯೯೨.
  2. ಎನ್. ಶಂಕರಪ್ಪ ತೋರಣಗಲ್ಲು, ವಿಜ್ಞಾನಿಗಳು: ಜೀವನ ಸಾಧನೆ, ಮೆ. ಕಾವ್ಯಕಲಾ ಪ್ರಕಾಶನ, ಬೆಂಗಳೂರು, ೨೦೦೮.
ವಿಲ್ಹೆಮ್ ರಾಂಟ್‌ಜನ್ ರವರು ತೆಗೆದ ಕ್ಷ ಕಿರಣ ಚಿತ್ರ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]