ರಾಮನಗರ ಕೋಟೆ
ರಾಮನಗರ ಕೋಟೆ | |
---|---|
ರಾಮನಗರ, ವಾರಣಾಸಿ ಇದರ ಭಾಗ | |
ಉತ್ತರ ಪ್ರದೇಶ, ಭಾರತ | |
ಶೈಲಿ | ಕೋಟೆ |
ಸ್ಥಳದ ಇತಿಹಾಸ | |
ಕಟ್ಟಿದ್ದು | ೧೭೫೦ |
ಕಟ್ಟಿದವರು | ಕಾಶಿ ನರೇಶ ಮಹಾರಾಜ ಬಲ್ವಂತ್ ಸಿಂಗ್ |
ಸಾಮಗ್ರಿಗಳು | ಚುನಾರ್ ಮರಳು ಶಿಲೆ |
ರಕ್ಷಣಾದಳದ ಮಾಹಿತಿ | |
ನೆಲಸಿಗ | ಕಾಶಿ ನರೇಶ |
ರಾಮನಗರ ಕೋಟೆಯು ಭಾರತದ ಉತ್ತರ ಪ್ರದೇಶದ ವಾರಣಾಸಿಯ ರಾಮನಗರದಲ್ಲಿರುವ ಒಂದು ಕೋಟೆಯಾಗಿದೆ. ಇದು ತುಳಸಿ ಘಾಟ್‍ಗೆ ಎದುರಾಗಿ ಗಂಗಾನದಿಯ ಪೂರ್ವ ದಂಡೆಯ ಮೇಲೆ ಇದೆ. ಮರಳು ಶಿಲೆಯ ರಚನೆಯನ್ನು ಮೊಘಲ್ ಶೈಲಿಯಲ್ಲಿ ೧೭೫೦ರಲ್ಲಿ ಕಾಶಿ ನರೇಶ ಮಹಾರಾಜ ಬಲ್ವಂತ್ ಸಿಂಗ್ ನಿರ್ಮಿಸಿದರು. ಪ್ರಸ್ತುತ, ಕೋಟೆಯು ಉತ್ತಮ ಸ್ಥಿತಿಯಲ್ಲಿಲ್ಲ. ಪ್ರಸ್ತುತ ರಾಜ ಮತ್ತು ಕೋಟೆಯ ನಿವಾಸಿ ಅನಂತ ನಾರಾಯಣ ಸಿಂಗ್; ಇವರನ್ನು ಬನಾರಸ್ ಮಹಾರಾಜ ಎಂದೂ ಕರೆಯುತ್ತಾರೆ.[೧][೨]
ಭೂಗೋಳಶಾಸ್ತ್ರ
[ಬದಲಾಯಿಸಿ]ಈ ಕೋಟೆಯು ಗಂಗಾ ನದಿಯ ಪೂರ್ವದ ಬಲದಂಡೆಯಲ್ಲಿ ವಾರಣಾಸಿ ಘಾಟ್‌ಗಳಿಗೆ ಎದುರಾಗಿ ಇದೆ. ಇದು ವಾರಣಾಸಿಯಿಂದ ೧೪ ಕಿಲೋಮೀಟರ್ (೮.೭ ಮೈಲಿ) ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ (ಹೊಸದಾಗಿ ನಿರ್ಮಿಸಲಾದ ರಾಮನಗರ ಸೇತುವೆಯ ಮೂಲಕ) ೨ ಕಿಲೋಮೀಟರ್ (೧.೨ ಮೈಲಿ) ದೂರದಲ್ಲಿದೆ. ಸೇತುವೆಯ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ೧೦ ನಿಮಿಷದಲ್ಲಿ ಕೋಟೆಯನ್ನು ತಲುಪಬಹುದು. ವಾರಣಾಸಿಯ ದಶಾಶ್ವಮೇಧ ಘಾಟ್‌ನಿಂದ ಕೋಟೆಗೆ ದೋಣಿ ಸವಾರಿ ಮೂಲಕ ಸುಮಾರು ಒಂದು ಗಂಟೆಯಲ್ಲಿ ತಲುಪಬಹುದು. ಕುದುರೆಗಳ ರೂಪದಲ್ಲಿ ಅವಳಿ ಲಾಂಛನಗಳನ್ನು ಹೊಂದಿರುವ ನಾಡದೋಣಿಯನ್ನು ದಡದಲ್ಲಿ ಲಂಗರು ಹಾಕಿರುವುದನ್ನು ಕಾಣಬಹುದು.[೩] ಕೋಟೆಯೊಳಗೆ ಒಂದು ಉದ್ಯಾನವನವಿದೆ, ಇದು ಅರಮನೆಗೆ ಮಾರ್ಗವನ್ನು ರೂಪಿಸುತ್ತದೆ.[೩][೪]
ಇತಿಹಾಸ
[ಬದಲಾಯಿಸಿ]ರಾಮನಗರ ಕೋಟೆಯನ್ನು ಕಾಶಿ ನರೇಶ ಮಹಾರಾಜ ಬಲ್ವಂತ್ ಸಿಂಗ್ ೧೭೫೦ ರಲ್ಲಿ ನಿರ್ಮಿಸಿದರು. ಕೋಟೆಯ ಹೊರಗೋಡೆಗಳ ಮೇಲಿನ ಶಾಸನಗಳು ಹದಿನೇಳನೆಯ ಶತಮಾನದ್ದಾಗಿದೆ.[೩]
ವಾಸ್ತುಶಿಲ್ಪ
[ಬದಲಾಯಿಸಿ]ಕಟ್ಟಡವನ್ನು ಕೆನೆ ಬಣ್ಣದ ಚುನಾರ್ ಮರಳುಶಿಲೆಗಳಿಂದ ನಿರ್ಮಿಸಲಾಗಿದೆ. ಇದನ್ನು ವಿಶಿಷ್ಟವಾದ ಮೊಘಲ್ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ.[೧] ಕೋಟೆಯು ವೇದವ್ಯಾಸ ದೇವಾಲಯ, ವಸ್ತುಸಂಗ್ರಹಾಲಯ ಮತ್ತು ರಾಜನ ವಸತಿ ಸಂಕೀರ್ಣವನ್ನು ಹೊಂದಿದೆ.[೫] ಹನುಮಂತನ ದಕ್ಷಿಣ ಮುಖಿ ದೇವಸ್ಥಾನವೂ ಇದೆ, ಇದು ದಕ್ಷಿಣಕ್ಕೆ ಮುಖ ಮಾಡಿದೆ.[೬]
ಕೋಟೆಯನ್ನು ಎತ್ತರದ ನೆಲದ ಮೇಲೆ ನಿರ್ಮಿಸಲಾಗಿದೆ, ಇದು ಪ್ರವಾಹ ಮಟ್ಟಕ್ಕಿಂತ ಮೇಲಿದೆ.[೭] ಕೋಟೆಯು ಅನೇಕ ಕೆತ್ತಿದ ಬಾಲ್ಕನಿಗಳು, ತೆರೆದ ಪ್ರಾಂಗಣಗಳು ಮತ್ತು ಮಂಟಪಗಳನ್ನು ಹೊಂದಿದೆ.[೫] ಕಟ್ಟಡದ ಒಂದು ಭಾಗ ಮಾತ್ರ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ, ಉಳಿದ ಭಾಗವು ಕಾಶಿ ನರೇಶ ಮತ್ತು ಅವರ ಕುಟುಂಬದವರ ನಿವಾಸವಾಗಿದೆ. ಮಹಾರಾಜರು ತಮ್ಮ ಅರಮನೆಯ ಕೋಟೆಯಲ್ಲಿ ನೆಲೆಸಿರುವಾಗ ಕೋಟೆಯ ಮೇಲೆ ಧ್ವಜವನ್ನು ಏರಿಸಲಾಗುತ್ತದೆ.[೧] ಕೋಟೆಯೊಳಗೆ, ಅರಮನೆಯು ಎರಡು ಬಿಳಿ ಗೋಪುರಗಳನ್ನು ಹೊಂದಿದೆ, ಇವುಗಳನ್ನು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಮೆಟ್ಟಿಲುಗಳ ಕೊನೆಯಲ್ಲಿ, ಕಮಾನು ಮತ್ತು ಅನೇಕ ಪ್ರಾಂಗಣಗಳಿವೆ.[೩] ಮಹಾರಾಜರ ಖಾಸಗಿ ನಿವಾಸವು ಗೋಪುರದ ಒಂದು ಬದಿಯಲ್ಲಿದ್ದರೆ, ದರ್ಬಾರು ಮತ್ತು ಸ್ವಾಗತ ಕೊಠಡಿಗಳು ಇನ್ನೊಂದು ಬದಿಯಲ್ಲಿವೆ. ಕೋಟೆಯ ಗೋಡೆಯ ಮೇಲಿನ ಒಂದು ಶಾಸನವು ಬನಾರಸ್ ರಾಜನ ಕೋಟೆಯ ಮನೆ, ಅವನ ರಾಜ್ಯದ ದೋಣಿಯೊಂದಿಗೆ ದೃಢೀಕರಿಸುತ್ತದೆ.[೮]
ವಸ್ತುಸಂಗ್ರಹಾಲಯ
[ಬದಲಾಯಿಸಿ]ಈ ವಸ್ತುಸಂಗ್ರಹಾಲಯವನ್ನು ಸರಸ್ವತಿ ಭವನ ಎಂದು ಕರೆಯಲಾಗುತ್ತದೆ. ಕೋಟೆಯ ದರ್ಬಾರು ಅಥವಾ ಸಾರ್ವಜನಿಕ ಪ್ರೇಕ್ಷಕರ ಸಭಾಂಗಣದಲ್ಲಿ ವಸ್ತುಸಂಗ್ರಹಾಲಯವಿದೆ.[೫] ಇದು ಅಮೇರಿಕನ್ ವಿಂಟೇಜ್ ಕಾರುಗಳು, ಆಭರಣಾಲಂಕೃತ ಪಲ್ಲಕ್ಕಿ ಕುರ್ಚಿಗಳು, ದಂತದ ಕೆಲಸ, ಮಧ್ಯಕಾಲೀನ ವೇಷಭೂಷಣಗಳು, ಚಿನ್ನ ಮತ್ತು ಬೆಳ್ಳಿಯ ರಾಜ ಪಲ್ಲಕ್ಕಿ (ತಾವರೆ ಹೂವಿನ ಆಕಾರದಲ್ಲಿರುವ ಪಲ್ಲಕ್ಕಿ)ಗಳ ಅಸಾಮಾನ್ಯ ಮತ್ತು ಅಪರೂಪದ ಸಂಗ್ರಹಗಳಿಗೆ ಹೆಸರುವಾಸಿಯಾಗಿದೆ. ಈ ವಸ್ತುಸಂಗ್ರಹಾಲಯವು ಬೆಳ್ಳಿಯಿಂದ ಕೆತ್ತಿದ ಆನೆಯ ಆಸನಗಳು, ಆಭರಣಗಳು, ಕಿಮ್ಖ್ವಾಬ್ ರೇಷ್ಮೆಯಿಂದ ಮಾಡಿದ ವೇಷಭೂಷಣಗಳು (ವಾರಣಾಸಿಯ ನೇಕಾರರ ಅತ್ಯುತ್ತಮ ಉತ್ಪನ್ನ), ಕತ್ತಿಗಳೊಂದಿಗೆ ಪ್ರಭಾವಶಾಲಿ ಶಸ್ತ್ರಾಸ್ತ್ರ ಹಾಲ್, ಆಫ್ರಿಕಾ, ಬರ್ಮಾ ಮತ್ತು ಜಪಾನ್‌ನ ಹಳೆಯ ಬಂದೂಕುಗಳನ್ನು ಹೊಂದಿದೆ.[೯] ಇಲ್ಲಿ ಹಳೆಯ ಶಸ್ತ್ರಸಜ್ಜಿತ ಬೆಂಕಿಕಡ್ಡಿಗಳು, ಅಲಂಕೃತ ಹುಕ್ಕಾಗಳು, ಕಠಾರಿಗಳು, ಮಹಾರಾಜರ ಭಾವಚಿತ್ರಗಳು, ನಿರ್ವಹಣೆಯ ನಿರ್ಲಕ್ಷ್ಯದಿಂದ ಬಿಳಿ ಬಣ್ಣಕ್ಕೆ ತಿರುಗಿದ ಕಪ್ಪು ಸಂಗೀತ ವಾದ್ಯಗಳು ಮತ್ತು ಅಪರೂಪದ ಖಗೋಳ ಗಡಿಯಾರವಿದೆ.[೨] ಈ ಗಡಿಯಾರವು ಸಮಯವನ್ನು ಮಾತ್ರವಲ್ಲದೆ ವರ್ಷ, ತಿಂಗಳು, ವಾರ ಮತ್ತು ದಿನ ಹಾಗೂ ಸೂರ್ಯ, ಚಂದ್ರ ಮತ್ತು ಇತರ ಗ್ರಹಗಳ ಖಗೋಳ ವಿವರಗಳನ್ನು ತೋರಿಸುತ್ತದೆ. ಈ ಗಡಿಯಾರವನ್ನು ೧೮೫೨ ರಲ್ಲಿ ಆಸ್ಟ್ರೊನೊಮರ್ ಎಂಬ ವಿಜ್ಞಾನಿಯು ವಾರಣಾಸಿಯ ರಾಜಭವನದ ನ್ಯಾಯಾಲಯದಲ್ಲಿ ತಯಾರಿಸಿದ್ದಾರೆ. ಜೊತೆಗೆ, ಹಸ್ತಪ್ರತಿಗಳು, ವಿಶೇಷವಾಗಿ ಧಾರ್ಮಿಕ ಬರಹಗಳನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಮೊಘಲ್ ಚಿಕಣಿಗಳ ಶೈಲಿಯಲ್ಲಿ ವಿವರಿಸಲಾದ ಅನೇಕ ಪುಸ್ತಕಗಳು ಸಹ ಸಂಗ್ರಹಗಳ ಭಾಗವಾಗಿದೆ.[೧][೨][೭] ಇಸ್ಲಾಮಿಕ್ ನೀತಿಯನ್ನು ವ್ಯಕ್ತಪಡಿಸುವ ಐದು ನೂರ ಮೂವತ್ತೈದು ಚಿತ್ರಣಗಳಿವೆ, ಪ್ರತಿಯೊಂದೂ ಅಲಂಕೃತ ಹೂವಿನ ವಿನ್ಯಾಸಗಳು ಅಥವಾ ಅಲಂಕಾರಿಕ ಚೌಕಟ್ಟನ್ನು ಹೊಂದಿದೆ.[೧೦][೧೧]
ಹಬ್ಬಗಳು
[ಬದಲಾಯಿಸಿ]ಒಂದು ತಿಂಗಳ ಅವಧಿಯ ರಾಮ ಲೀಲಾ ಉತ್ಸವದ ಸಮಯದಲ್ಲಿ ಕೋಟೆ ಅರಮನೆಯು ಅತ್ಯಂತ ರೋಮಾಂಚಕ ಮತ್ತು ವರ್ಣಮಯವಾಗಿ ಕಾಣುತ್ತದೆ. ಹಾಗೂ ಈ ಸಮಯದಲ್ಲಿ ರಾಮಾಯಣದ ವಿವಿಧ ಪ್ರಸಂಗಗಳನ್ನು ರೂಪಿಸಲಾಗುತ್ತದೆ. ಈ ಸಂದರ್ಭದಲ್ಲಿ, ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್‌ನಲ್ಲಿ ನಡೆಯುವ ದಸರಾ ಆಚರಣೆಯ ಭಾಗವಾಗಿ ರಾಮಾಯಣ ಮಹಾಕಾವ್ಯದ ವರ್ಣರಂಜಿತ ಪ್ರದರ್ಶನ ಅಥವಾ ಮೆರವಣಿಗೆಯನ್ನು ಪ್ರಸ್ತುತಪಡಿಸಲಾಗುತ್ತದೆ, ರಾವಣ ಮತ್ತು ಅವನ ಸಹಚರರ ಪ್ರತಿಕೃತಿಯನ್ನು ಸುಡಲಾಗುತ್ತದೆ. ಉತ್ಸವವು ರಾಜಮನೆತನದ ಆಸ್ತಿಗಳ ವಿವಿಧ ಪುರಾತನ ಪ್ರದರ್ಶನಗಳ ಮೆರವಣಿಗೆಯನ್ನು ಸಹ ಒಳಗೊಂಡಿದೆ.[೫] ಮೆರವಣಿಗೆಯ ಮುಖ್ಯ ಭಾಗವಾಗಿ, ಅಲಂಕೃತವಾದ ಆನೆಯ ಮೇಲೆ ಸವಾರಿ ಮಾಡುವ ಮೂಲಕ ಮಹಾರಾಜರು, ಕೋಟೆಯ ಹಿಂದಿನ ಬೀದಿಗಳಲ್ಲಿ ನಡೆಯುವ ವಾರ್ಷಿಕ ರಾಮ್ ಲೀಲಾ ನಾಟಕೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಮೂಲಕ ತಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರೆಸುತ್ತಾರೆ.[೧೧] ಹಿಂದಿನ ಕಾಲದಲ್ಲಿ, ನಾಟಕವನ್ನು ಸ್ಥಳೀಯ ರೆಜಿಮೆಂಟ್‌ಗಳು ಪ್ರದರ್ಶಿಸುತ್ತಿದ್ದರು ಮತ್ತು ರಾಮಾಯಣ ಗ್ರಂಥದ ಮಹಾಕಾವ್ಯವನ್ನು ತಿಂಗಳ ಉತ್ಸವದ ಸಮಯದಲ್ಲಿ ಓದಲಾಗುತ್ತಿತ್ತು.[೧೨][೧೩] ಕೋಟೆಯಲ್ಲಿ ನಡೆಯುವ ಇತರ ಉತ್ಸವಗಳು ಮಾಘ ಮಾಸದಲ್ಲಿ (ಜನವರಿ ಮತ್ತು ಫೆಬ್ರವರಿ) ವೇದವ್ಯಾಸ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತದೆ. ಇಲ್ಲಿ ಯಾತ್ರಿಕರು ರಾಮನಗರಕ್ಕೆ ಭೇಟಿ ನೀಡುತ್ತಾರೆ. ಫಾಲ್ಗುಣ ಮಾಸದಲ್ಲಿ, (ಫೆಬ್ರವರಿ ಮತ್ತು ಮಾರ್ಚ್) ಕೋಟೆಯಲ್ಲಿ ರಾಜ್ ಮಂಗಲ್ ಎಂಬ ಉತ್ಸವವು ದೋಣಿಗಳ ಮೆರವಣಿಗೆಯೊಂದಿಗೆ, ನೃತ್ಯ ಮತ್ತು ಹಾಡುಗಾರಿಕೆಯೊಂದಿಗೆ ನಡೆಯುತ್ತದೆ. ಈ ಮೆರವಣಿಗೆಯು ಅಸಿ ಘಾಟ್‌ನಿಂದ ಪ್ರಾರಂಭವಾಗುತ್ತದೆ ಹಾಗೂ ಕೋಟೆಯ ಮುಂದೆ ನದಿಯ ಉದ್ದಕ್ಕೂ ಸಾಗುತ್ತದೆ.[೧೩]
ಜನಪ್ರಿಯ ಸಂಸ್ಕೃತಿ
[ಬದಲಾಯಿಸಿ]ಗಂಗಾನದಿಯ ದಡದಲ್ಲಿರುವ ರಮಣೀಯ ಸ್ಥಳದಿಂದಾಗಿ, ಕೋಟೆ ಮತ್ತು ಅರಮನೆಯನ್ನು ಚಲನಚಿತ್ರಗಳಿಗೆ ಹೊರಾಂಗಣ ಚಿತ್ರೀಕರಣದ ಸ್ಥಳವಾಗಿ ಬಳಸಲಾಗುತ್ತದೆ. ಬನಾರಸ್ ಎಂಬ ಶೀರ್ಷಿಕೆಯ ಚಿತ್ರವು ಇಲ್ಲಿ ಚಿತ್ರೀಕರಣಗೊಂಡ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿದೆ.[೧][೨] ಇದು ದಿ ಅಮೇಜಿಂಗ್ ರೇಸ್ 18 ರ ೭ ನೇ ಪಿಟ್ ಸ್ಟಾಪ್ ಆಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ Mitra, Swati (2002). Good Earth Varanasi city guide. Eicher Goodearth Limited. pp. 124–127. ISBN 9788187780045. Retrieved 6 ನವೆಂಬರ್ 2012.
- ↑ ೨.೦ ೨.೧ ೨.೨ ೨.೩ "Lonely Planet review for Ramnagar Fort & Museum". Lonely Planet. Retrieved 6 ನವೆಂಬರ್ 2012.
- ↑ ೩.೦ ೩.೧ ೩.೨ ೩.೩ "Fort, Ramnagar [Benares]". Online Gallery of British Library. Archived from the original on 30 ಜುಲೈ 2022. Retrieved 7 ನವೆಂಬರ್ 2012.
- ↑ "Rambag (Ramnagar) [Benares]". Online Gallery of British Library. Archived from the original on 5 ಅಕ್ಟೋಬರ್ 2022. Retrieved 7 ನವೆಂಬರ್ 2012.
- ↑ ೫.೦ ೫.೧ ೫.೨ ೫.೩ "Ramnagar Fort & Museum". Official Website of Eastern UP Tourism. Archived from the original on 30 ನವೆಂಬರ್ 2013. Retrieved 7 ನವೆಂಬರ್ 2012.
- ↑ "Ramnagar". National Informatics Centre. Retrieved 7 ನವೆಂಬರ್ 2012.
- ↑ ೭.೦ ೭.೧ Fodor's India, 5th Edition. Random House Digital, Inc. 2004. p. 168.
- ↑ "The Raja of Benares's palace at Ramnagar from the river, with the Raja's state boat". Online Gallery of British Library. Archived from the original on 28 ನವೆಂಬರ್ 2022. Retrieved 7 ನವೆಂಬರ್ 2012.
- ↑ Karkar, S.C. (2009). The Top Ten Temple Towns of India. Kolkota: Mark Age Publication. p. 13. ISBN 978-81-87952-12-1.
- ↑ Sāmarasya: studies in Indian art, philosophy, and interreligious dialogue : in honour of Bettina Bäumer. D.K. Printworld. 2006. p. 193. ISBN 9788124603383. Retrieved 7 ನವೆಂಬರ್ 2012.
- ↑ ೧೧.೦ ೧೧.೧ Limited, Eicher Goodearth (2003). Good Earth Varanasi City Guide. Eicher Goodearth Limited. pp. 124–127. ISBN 9788187780045.
{{cite book}}
:|last=
has generic name (help) - ↑ Heitzman, James (2008). The City in South Asia. Psychology Press. p. 54. ISBN 9780415343558.
- ↑ ೧೩.೦ ೧೩.೧ "Ram Leela Mela. As performed before at Ram Nugur before the Raja of Benares". Online Gallery of British Library. Archived from the original on 5 ಮಾರ್ಚ್ 2016. Retrieved 7 ನವೆಂಬರ್ 2012.