ದರ್ಬಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಾಠರ ದರ್ಬಾರು

ದರ್ಬಾರು ಅನೇಕ ದಕ್ಷಿಣ ಏಷ್ಯಾದ ಭಾಷೆಗಳಲ್ಲಿ ಸಾಮಾನ್ಯವಾದ ಶಬ್ದವಾಗಿದೆ. ಇದು ಭಾರತೀಯ ರಾಜರು ಮತ್ತು ಇತರ ಆಡಳಿತಗಾರರು ತಮ್ಮ ಔಪಚಾರಿಕ ಮತ್ತು ಅನೌಪಚಾರಿಕ ಸಭೆಗಳನ್ನು ನಡೆಸುವ ಸ್ಥಳಕ್ಕೆ ಬಳಸಲಾದ ಶಬ್ದವಾಗಿತ್ತು, ಅಂದರೆ ರಾಜನ ಆಸ್ಥಾನಕ್ಕೆ ಸಮಾನವಾದ ಪದವಾಗಿತ್ತು. ದರ್ಬಾರು ಪದ ಪರ್ಷಿಯನ್ ಭಾಷೆಯಿಂದ ಹುಟ್ಟಿಕೊಂಡಿದೆ. ಇದರರ್ಥ ರಾಜನು ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಚರ್ಚೆಗಳನ್ನು ನಡೆಸುತ್ತಿದ್ದ ಔಪಚಾರಿಕ ಸಭೆ. ನಂತರ ಈ ಪದವನ್ನು ಅರಸನ ಆಸ್ಥಾನ ಅಥವಾ ಊಳಿಗಮಾನ್ಯ ತೆರಿಗೆಗೆ ಬಳಸಲಾಗಿತ್ತು ಏಕೆಂದರೆ ನಂತರ ರಾಜ್ಯಗಳು ವಿದೇಶಿಯರಿಂದ ಆಳಲ್ಪಟ್ಟವು. ದರ್ಬಾರು ದೇಶಿ ರಾಜ್ಯದ ವ್ಯವಹಾರಗಳನ್ನು/ಅಧಿಕಾರಗಳನ್ನು ನಿರ್ವಹಿಸುವ ಊಳಿಗಮಾನ್ಯ ರಾಜ್ಯ ಪರಿಷತ್ತು ಅಥವಾ ಸಂಪೂರ್ಣವಾಗಿ ವಿಧ್ಯುಕ್ತ ಸಭೆಯಾಗಿರಬಹುದು, ಉದಾಹರಣೆಗೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಮಯದಲ್ಲಿ.

ಅತ್ಯಂತ ಪ್ರಸಿದ್ಧ ದರ್ಬಾರುಗಳು ಮಹಾನ್ ಸಾಮ್ರಾಟರು ಮತ್ತು ರಾಜರಿಗೆ ಸೇರಿದ್ದವು. ಉತ್ತರದಲ್ಲಿ, ಉದಯಪುರ, ಜೈಪುರ, ಜೋಧ್‍ಪುರ್, ಜೈಸಲ್ಮೇರ್, ಮತ್ತು ಆಗ್ರಾದಂತಹ ನಗರಗಳು ಇಂತಹ ಭವ್ಯವಾದ ಸಭಾಂಗಣಗಳಿಂದ ಅಲಂಕೃತವಾದ ಅರಮನೆಗಳನ್ನು ಹೊಂದಿವೆ. ಮುಘಲ್ ಸಾಮ್ರಾಟ ಅಕ್ಬರ್ ಎರಡು ಸಭಾಂಗಣಗಳನ್ನು ಹೊಂದಿದ್ದನು; ಒಂದು ತನ್ನ ಮಂತ್ರಿಗಳಿಗಾಗಿ ಮತ್ತು ಇನ್ನೊಂದು ಸಾರ್ವಜನಿಕರಿಗಾಗಿ. ಸಾಮಾನ್ಯವಾಗಿ ದರ್ಬಾರು ಸಭಾಂಗಣಗಳು ಆ ಕಾಲದಲ್ಲಿ ಲಭ್ಯವಾದ ಸಾಧ್ಯವಾದಷ್ಟು ಅತ್ಯುತ್ತಮ ಸಾಮಗ್ರಿಗಳಿಂದ ಅದ್ದೂರಿಯಾಗಿ ಅಲಂಕೃತವಾಗಿರುತ್ತವೆ. ಭಾರತದ ದಕ್ಷಿಣದಲ್ಲಿ, ಮೈಸೂರು ಅರಮನೆಯು ಇಂತಹ ಅನೇಕ ಸಭಾಂಗಣಗಳನ್ನು ಹೊಂದಿರ್ರು, ವಿಶೇಷವಾಗಿ ವಿವಾಹ ಸಮಾರಂಭಗಳಿಗೆ ಬಳಸಲ್ಪಡುತ್ತಿದ್ದ ನವಿಲು ಸಭಾಂಗಣವು ಬೆಲ್ಜಿಯಮ್‍ನಿಂದ ಆಮದು ಮಾಡಿಕೊಂಡ ಬಣ್ಣದ ಗಾಜುಗಳನ್ನು ಹೊಂದಿತ್ತು. ಆಂಧ್ರ ಪ್ರದೇಶದ ಹೈದರಾಬಾದ್ ನಗರದಲ್ಲಿನ ಖಿಲಾವತ್ ಮುಬಾರಕ್‍ನಲ್ಲಿನ ದರ್ಬಾರು ಸಭಾಂಗಣವು ಹೈದರಾಬಾದ್‍ನ ನಿಜ಼ಾಮರ ದರ್ಬಾರು ಸಭಾಂಗಣವಾಗಿತ್ತು. ರಾಷ್ಟ್ರಪತಿ ಭವನದ ಮುಖ್ಯ ಪ್ರಾಸಾದದ ಕೆಳಗೆ ಭವ್ಯ ದರ್ಬಾರ್ ಹಾಲ್ ಇದೆ. ಇಲ್ಲಿ ಭಾರತದ ರಾಷ್ಟ್ರಪತಿಗಳ ಅಧ್ಯಕ್ಷತೆಯಲ್ಲಿ ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

"https://kn.wikipedia.org/w/index.php?title=ದರ್ಬಾರು&oldid=913268" ಇಂದ ಪಡೆಯಲ್ಪಟ್ಟಿದೆ