ಮಿಖಾಯಿಲ್ ಗೊರ್ಬಚೆವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಖಾಯಿಲ್, ಗೋರ್ಬಚೆವ್-(1930-೨೦೨೨)ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ ದ ನಾಯಕ ಹಾಗೂ ಕಮ್ಯೂನಿಸ್ಟ್ ಪಕ್ಷದ ಮಹಾಕಾರ್ಯದರ್ಶಿ.

1930 ಮಾರ್ಚ್ 2ರಂದು ಕಾಕಸಸ್ ಪರ್ವತದ ಉತ್ತರಕ್ಕೆ ಸ್ಟಾವ್ರೂಪೋಲ್ ಪ್ರದೇಶದ ಪ್ರಿವೋಲ್ಯೆ ಗ್ರಾಮದಲ್ಲಿ ಜನನ. ಫಲವತ್ತಾದ ಈ ಪ್ರದೇಶ ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನ್ ಆಕ್ರಮಣಕ್ಕೆ ಒಳಗಾಗಿತ್ತು.

ವಿದ್ಯಾರ್ಥಿಯಾಗಿದ್ದಾಗಲೆ ಗೋರ್ಬಚೆವ್ ಟ್ರಾಕ್ಟರ್ ಚಾಲಕರಾಗಿ ಶ್ರಮದ ಅನುಭವ ಗಳಿಸಿದರು. ಹತ್ತೊಂಬತ್ತನೆಯ ವಯಸ್ಸಿನಲ್ಲಿ (1950) ಮಾಸ್ಕೋ ವಿಶ್ವವಿದ್ಯಾಲಯದ ಕಾನೂನು ಶಾಲೆಯನ್ನು ಪ್ರವೇಶಿಸಿ. ಕಾನೂನಿನೊಂದಿಗೆ ರಾಜಕೀಯದಲ್ಲೂ ಆಸಕ್ತಿಬೆಳೆಸಿಕೊಂಡರು. ಯುವ ಕಮ್ಯೂನಿಸ್ಟ್ ಕೂಟವಾದ ಕಾಮ್ಸೊಮೋಲಿನ ಸದಸ್ಯರಾಗಿ, ಅದರ ಕಾರ್ಯದರ್ಶಿಯಾಗಿ ಸಂಘಟನೆಯ ಕಾರ್ಯದಲ್ಲಿ ನುರಿತರು. ಇವರು ವಿದ್ಯಾರ್ಥಿಯಾಗಿದ್ದಾಗ ಸೋವಿಯತ್ ದೇಶದಲ್ಲಿ ಮಹಾಪರಿವರ್ತನೆಗಳಾಗ ತೊಡಗಿದ್ದವು.

ವಿದ್ಯಾರ್ಥಿ ಜೀವನ ಮುಗಿದಮೇಲೆ ಮಿಖಾಯಿಲ್ ಗೋರ್ಬಚೆವ್ ಸ್ಟಾವ್ರೊಪೋಲಿಗೆ ಹಿಂದಿರುಗಿ ಅಲ್ಲಿ ಇಪ್ಪತ್ತೆರಡು ವರ್ಷ ಇದ್ದರು. ಕಾಮ್ಸೊಮೋಲ್ ಕಾರ್ಯದರ್ಶಿಸ್ಥಾನದಿಂದ ಕ್ರಮಕ್ರಮವಾಗಿ ಮೇಲೇರಿ ಕಮ್ಯೂನಿಸ್ಟ್ ಪಕ್ಷದ ಪ್ರಾದೇಶಿಕ ಘಟಕದ ಪ್ರಥಮ ಕಾರ್ಯದರ್ಶಿಯಾದರು. 1971ರಲ್ಲಿ ಸೋವಿಯತ್ ಒಕ್ಕೂಟ ಕಮ್ಯೂನಿಸ್ಟ ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾದರು. 1958ರಲ್ಲಿ ಆ ಸಮಿತಿಯ ಕಾರ್ಯದರ್ಶಿ ಸ್ಥಾನಕ್ಕೆ ಏರಿದರು. ಮರುವರ್ಷ ಪಾಲಿಟ್‍ಬ್ಯೂರೋದ ಅಭ್ಯರ್ಥಿ ಸದಸ್ಯರಾದರು. 1980ರಲ್ಲಿ ಅದರ ಪೂರ್ಣ ಸದಸ್ಯರಾದರು.

ಸೋವಿಯತ್ ಅಧ್ಯಕ್ಷ ಹಾಗೂ ಪಕ್ಷದ ಮಹಾಕಾರ್ಯದರ್ಶಿಯಾಗಿದ್ದ ಲಿಯೊನಿಡ್ ಬ್ರೆಜ್ನೇವ್ ಅವರ ಇಳಿವಯಸ್ಸಿನಲ್ಲಿ ಗೋರ್ಬಚೆವ್‍ರ ಪ್ರಭಾವ ಕ್ರಮೇಣ ಏರುತ್ತಿತ್ತು. ಕೃಷಿ ಕ್ಷೇತ್ರದಲ್ಲಿ ಅವರು ಮಹತ್ತರ ಬದಲಾವಣೆಗಳನ್ನು ತಂದರು. ಅದನ್ನು ವಿಕೇಂದ್ರೀಕರಿಸಲು ಸ್ಥಳೀಯ ತಂಡಗಳಿಗೆ ಅಧಿಕಾರ ಹಾಗೂ ಹೊಣೆಯನ್ನು ವರ್ಗಾಯಿಸುವ ಕ್ರಮ ತೆಗೆದುಕೊಂಡರು.

ಬ್ರೆಜ್ನವರ ನಿಧನಾನಂತರ ಸೋವಿಯತ್ ಒಕ್ಕೂಟದ ನಾಯಕರಾದ ಆಂದ್ರೊಪೋವರ ಅಧಿಕಾರದ ಕಾಲದಲ್ಲಿ ಗೋರ್ಬಚೆವರಿಗೆ ಹೆಚ್ಚಿನ ಅವಕಾಶ ದೊರಕಿತು. ಅಂದ್ರೋಪೋವ್ ತೀರಿಕೊಂಡಾಗ ಹಿರಿಯನಾಯಕ ಚೆರ್ನೈಂಕೊ ಅಧಿಕಾರಕ್ಕೆ ಬಂದರು. ಅವರು ತೀರಿಕೊಂಡ ಕೆಲವೇ ಘಂಟೆಗಳಲ್ಲಿ ಮಿಖಾಯಿಲ್ ಗೋರ್ಬಚೆವ್ ಸೋವಿಯತ್ ಒಕ್ಕೂಟ ಕಮ್ಯೂನಿಸ್ಟ್ ಪಕ್ಷದ ಮಹಾಕಾರ್ಯದರ್ಶಿ ಹಾಗೂ ದೇಶದ ಅಧ್ಯಕ್ಷ ಆದರು (11ಮಾರ್ಚ್ 1985).

ಮಿಖಾಯಿಲ್ ಗೊರ್ಬಚೆವ್ ದೇಶವನ್ನು ಆಧುನೀಕರಣಗೊಳಿಸಲು ಗ್ಲಾಸ್ನೊಸ್ಟ್ (ಮುಕ್ತತೆ) ಮತ್ತು ಪೆರೆಸ್ಟ್ರೊಯಿಕಾ (ಪುನರ್ನಿಮಾಣ) ಎಂಬ ಎರಡು ನೀತಿಗಳನ್ನು ಜಾರಿಗೊಳಿಸಿದರು. USSRನ ಆರ್ಥಿಕತೆ ವಿಭಜನೆಯ ಮುಂಚೆ ವಿಶ್ವದಲ್ಲಿಯೇ ಎರಡನೇ ದೊಡ್ಡ ಆರ್ಥಿಕತೆಯಾಗಿತ್ತು. [155]. ತನ್ನ ಕೊನೆಯ ವರ್ಷಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಕಿರಾಣಿಗಳ ಆಭಾವ, ಭಾರೀ ಪ್ರಮಾಣದ ಕೊರತೆಯ ಬಜೆಟ್ ಮತ್ತು ಹಣ ಪೂರೈಕೆ ಹೆಚ್ಚಾಗಿ ಹಣದುಬ್ಬರ - ಈ ಕಾರಣಗಳಿಂದಾಗಿ ಆರ್ಥಿಕತೆಗೆ ಬಹಳ ತೊಂದರೆಯಾಯಿತು.[157] ಆಗಸ್ಟ್ 1991ರಲ್ಲಿ, ಸೋವಿಯತ್ ಒಕ್ಕೂಟವನ್ನು ಉಳಿಸುವ ಉದ್ದೇಶ ಹೊತ್ತ ಗೊರ್ಬಚೆವ್ ವಿರುದ್ಧ ನಡೆಸಿ ವಿಫಲವಾದ ಸೇನಾ ದಂಗೆ ಸೋವಿಯತ್‌ ಒಕ್ಕೂಟದ ಕುಸಿತಕ್ಕೆ ನಾಂದಿಯಾಯಿತು.ರಷ್ಯಾದಲ್ಲಿ ಬೊರಿಸ್ ಯೆಲ್ಟ್ಸಿನ್ ಅಧಿಕಾರಕ್ಕೆ ಬಂದು ಸಮಾಜವಾದಿ ಆಡಳಿತಕ್ಕೆ ಅಂತ್ಯ ಸೂಚಿಸಿದರು. USSR ಡಿಸೆಂಬರ್ 1991ರಲ್ಲಿ ಹದಿನೈದು ಸ್ವತಂತ್ರ ಗಣರಾಜ್ಯಗಳಾಗಿ ಭಾಗಗೊಂಡು ಅಧಿಕೃತವಾಗಿ ವಿಭಜನೆಗೊಂಡಿತು.

ಪ್ರಶಸ್ತಿಗಳು , ಗೌರವಗಳು[ಬದಲಾಯಿಸಿ]

ಅವರಿಗೆ ೧೯೯೦ರ ನೊಬೆಲ್ ಶಾಂತಿ ಪ್ರಶಸ್ತಿ ಮತ್ತು ಇನ್ನೂ ಅನೇಕ ಗೌರವಗಳು ದೊರಕಿವೆ.

ನಿಧನ[ಬದಲಾಯಿಸಿ]

೯೧ ವರ್ಷದ, 'ಮಿಖಾಯಿಲ್ ಗೊರ್ಬಚೇವ್' ಅವರು ೩೦ ಆಗಸ್ಟ್, ೨೦೨೨ ರಂದು ನಿಧನರಾದರು. ಆವರು ಬಹಳದಿನಗಳಿಂದ ಕಾಯಿಲೆಯಿಂದ ನರಳುತ್ತಿದ್ದರು. [೧]

ಉಲ್ಲೇಖಗಳು[ಬದಲಾಯಿಸಿ]

  1. Mikhail Gorbachev, the last Soviet president, dies aged 91, Hindu news paper,Aug,31,2022


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: