ವಿಷಯಕ್ಕೆ ಹೋಗು

ಬ್ರಿಟಿಷ್ ಆಡಳಿತದ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಬ್ರಿಟಿಷ್ ಆಡಳಿತದ ಇತಿಹಾಸ" ವು ಭಾರತದ ಉಪಖಂಡದಲ್ಲಿ ೧೮೫೮ಮತ್ತು ೧೯೪೭ರ ನಡುವೆ ಬ್ರಿಟಿಷ್ ಆಡಳಿತದ ಅವಧಿಯನ್ನು ಉಲ್ಲೇಖಿಸುತ್ತದೆ. ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಯ ಆಡಳಿತವನ್ನು ರಾಣಿ ವಿಕ್ಟೋರಿಯ ( ೧೮೭೬ರಲ್ಲಿ ಅವರನ್ನು ಭಾರತದ ಚಕ್ರವರ್ತಿನಿ ಎಂದು ಘೋಷಿಸಲಾಯಿತು) ಆಳ್ವಿಕೆಯ ರಾಜಪ್ರಭುತ್ವಕ್ಕೆ ವರ್ಗಾಯಿಸಿದಾಗ, ೧೮೫೮ರಲ್ಲಿ ಆಡಳಿತದ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ೧೯೪೭ರವರೆಗೆ ಈ ಆಡಳಿತವು ಉಳಿದುಕೊಂಡಿತು. ಬ್ರಿಟಿಷ್ ಭಾರತದ ಸಾಮ್ರಾಜ್ಯವು ಎರಡು ಸಾರ್ವಬೌಮ ಆಡಳಿತದ ರಾಜ್ಯಗಳಾಗಿ ವಿಭಜನೆಯಾಯಿತು: ಭಾರತದ ಒಕ್ಕೂಟ (ನಂತರ ಭಾರತದ ಗಣರಾಜ್ಯ)ಮತ್ತು ಪಾಕಿಸ್ತಾನದ ಆಡಳಿತ (ನಂತರ ಪಾಕಿಸ್ತಾನದ ಇಸ್ಲಾಮಿಕ್ ಗಣರಾಜ್ಯ, ಅದರ ಪೂರ್ವಾರ್ಧ ಭಾಗವು ಇನ್ನೂ ಸ್ವಲ್ಪ ಕಾಲದ ನಂತರ ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶ ರಚನೆಯಾಯಿತು). ಭಾರತದ ಸಾಮ್ರಾಜ್ಯಕ್ಕೆ ಪೂರ್ವ ಪ್ರದೇಶದಲ್ಲಿದ್ದ ಬರ್ಮಾ ಪ್ರಾಂತ್ಯವನ್ನು ೧೯೩೭ರಲ್ಲಿ ಪ್ರತ್ಯೇಕ ವಸಾಹತಾಗಿ ನಿರ್ಮಿಸಲಾಯಿತು ಮತ್ತು ೧೯೪೮ರಲ್ಲಿ ಅದು ಸ್ವತಂತ್ರವಾಯಿತು.

ಪೀಠಿಕೆ

[ಬದಲಾಯಿಸಿ]

ಆರ್ಥಿಕತೆಯ ಮೇಲೆ ಪರಿಣಾಮ

[ಬದಲಾಯಿಸಿ]

೧೯ನೇ ಶತಮಾನದ ಉತ್ತರಾರ್ಧದಲ್ಲಿ, ಬ್ರಿಟಿಷ್ ರಾಜಪ್ರಭುತ್ವದಿಂದ ಭಾರತದ ನೇರ ಆಡಳಿತ ಮತ್ತು ಕೈಗಾರಿಕೆ ಕ್ರಾಂತಿಯಿಂದ ಉಂಟಾದ ತಾಂತ್ರಿಕ ಬದಲಾವಣೆಯು ಭಾರತ ಮತ್ತು ಗ್ರೇಟ್ ಬ್ರಿಟನ್ ಆರ್ಥಿಕತೆಗಳನ್ನು ನಿಕಟವಾಗಿ ಹೆಣೆಯುವ ಪರಿಣಾಮ ಉಂಟುಮಾಡಿತು.[] ವಾಸ್ತವವಾಗಿ ಸಾರಿಗೆ ಮತ್ತು ಸಂಪರ್ಕಗಳಲ್ಲಿ ಅನೇಕ ಪ್ರಮುಖ ಬದಲಾವಣೆಗಳು(ಸಾಮಾನ್ಯವಾಗಿ ಭಾರತದ ರಾಜಪ್ರಭುತ್ವದ ಆಡಳಿತದೊಂದಿಗೆ ಸಂಬಂಧಿಸಿದೆ)ಸಿಪಾಯಿದಂಗೆಗೆ ಮುಂಚಿತವಾಗಿ ಅದಾಗಲೇ ಆರಂಭವಾಗಿತ್ತು. ಡಾಲ್‌ಹೌಸಿ ಗ್ರೇಟ್ ಬ್ರಿಟನ್‌ನಲ್ಲಿ ತಡೆಯಿಲ್ಲದೇ ಹರಡುತ್ತಿದ್ದ ತಾಂತ್ರಿಕ ಬದಲಾವಣೆಯನ್ನು ಅವಲಂಬಿಸಿದ ಸಂದರ್ಭದಲ್ಲಿ, ಇವೆಲ್ಲ ತಂತ್ರಜ್ಞಾನಗಳಲ್ಲಿ ಭಾರತ ಕೂಡ ಕ್ಷಿಪ್ರಗತಿಯ ಬೆಳವಣಿಗೆಯನ್ನು ಕಂಡಿತು. ರೈಲ್ವೆಗಳು, ರಸ್ತೆಗಳು, ಕಾಲುವೆಗಳು ಮತ್ತು ಸೇತುವೆಗಳನ್ನು ಕ್ಷಿಪ್ರಗತಿಯಲ್ಲಿ ಭಾರತದಲ್ಲಿ ನಿರ್ಮಿಸಲಾಯಿತು ಮತ್ತು ಟೆಲಿಗ್ರಾಫ್(ತಂತಿಸುದ್ದಿ)ಸಂಪರ್ಕಗಳು ಕೂಡ ಅಷ್ಟೇ ವೇಗವಾಗಿ ವ್ಯವಸ್ಥಿತವಾಗಿ ಸ್ಥಾಪನೆಯಾಯಿತು. ಇದರಿಂದ ಕಚ್ಚಾವಸ್ತುಗಳಾದ ಹತ್ತಿ ಮುಂತಾದವನ್ನು ಭಾರತದ ಒಳನಾಡು ಪ್ರದೇಶದಿಂದ ಮುಂಬಯಿ ಮುಂತಾದ ಬಂದರುಗಳಿಗೆ ಪರಿಣಾಮಕಾರಿಯಾಗಿ ಸಾಗಣೆ ಮಾಡಿದ ತರುವಾಯ ಇಂಗ್ಲೆಂಡ್‌ಗೆ ರಫ್ತು ಮಾಡಲು ಸಾಧ್ಯವಾಯಿತು.[] ಇದೇ ರೀತಿ, ಇಂಗ್ಲೆಂಡ್‌ನಿಂದ ಸಿದ್ಧಪಡಿಸಿದ ವಸ್ತುಗಳನ್ನು ಭಾರತದ ಅಂಕುರಿಸಿದ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಪುನಃ ಸಮರ್ಥವಾಗಿ ಸಾಗಣೆ ಮಾಡಲಾಯಿತು.[] ಆದಾಗ್ಯೂ, ಮೂಲಸೌಕರ್ಯ ಅಭಿವೃದ್ಧಿಯ ಮಾರುಕಟ್ಟೆ ಅಪಾಯಗಳನ್ನು ಖಾಸಗಿ ಹೂಡಿಕೆದಾರರು ಬ್ರಿಟನ್‌ನಲ್ಲಿ ವಹಿಸಿಕೊಂಡರು. ಅದಕ್ಕೆ ಭಿನ್ನವಾಗಿ, ಭಾರತದಲ್ಲಿ ತೆರಿಗೆದಾರರು ಮುಖ್ಯವಾಗಿ ರೈತರು ಮತ್ತು ಕೃಷಿ ಕಾರ್ಮಿಕರು ಈ ಅಪಾಯಗಳನ್ನು ಅನುಭವಿಸುತ್ತಿದ್ದರು. ಅದು ಕೊನೆಯಲ್ಲಿ ೫೦ದಶಲಕ್ಷ ಡಾಲರ್‌ಗಳ ಮೊತ್ತದಷ್ಟಾಯಿತು.[] ಈ ವೆಚ್ಚಗಳ ನಡುವೆಯೂ ಅತೀ ಕಡಿಮೆ ಕೌಶಲದ ಉದ್ಯೋಗವನ್ನು ಭಾರತೀಯರಿಗಾಗಿ ಸೃಷ್ಟಿಸಲಾಯಿತು. ೧೯೨೦ರಷ್ಟರಲ್ಲಿ, ವಿಶ್ವದಲ್ಲೇ ನಾಲ್ಕನೇ ದೊಡ್ಡ ರೈಲ್ವೆ ಜಾಲ ಮತ್ತು ಅದರ ನಿರ್ಮಾಣವಾಗಿ ೬೦ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ರೈಲ್ವೆಯ "ಮೇಲ್ಮಟ್ಟದ ಹುದ್ದೆಗಳ" ಪೈಕಿ ಶೇಕಡ ಹತ್ತರಷ್ಟು ಹುದ್ದೆಗಳನ್ನು ಮಾತ್ರ ಭಾರತೀಯರು ಹೊಂದಿದ್ದರು.[]

ತಂತ್ರಜ್ಞಾನದ ಆಕ್ರಮಣವು ಭಾರತದ ಕೃಷಿ ಆರ್ಥಿಕತೆಯ ಮೇಲೆ ಬದಲಾವಣೆಯನ್ನು ಉಂಟುಮಾಡಿತು: ೧೯ನೇ ಶತಮಾನದ ಕೊನೆಯ ದಶಕದಲ್ಲಿ, ಹತ್ತಿ ಮಾತ್ರವಲ್ಲದೇ ಕೆಲವು ಕಚ್ಚಾ ವಸ್ತುಗಳ ದೊಡ್ಡ ಭಾಗ ಮತ್ತು ಆಹಾರ ಪದಾರ್ಥಗಳನ್ನು ದೂರದ ಮಾರುಕಟ್ಟೆಗಳಿಗೆ ರಫ್ತು ಮಾಡಲಾಯಿತು.[] ಇದರ ಪರಿಣಾಮವಾಗಿ, ಅನೇಕ ಸಣ್ಣ ರೈತರು, ಈ ಮಾರುಕಟ್ಟೆಗಳ ಗೀಳುಗಳ ಮೇಲೆ ಅವಲಂಬಿತರಾಗಿ, ಭೂಮಿ, ಪ್ರಾಣಿಗಳು ಮತ್ತು ಸಾಮಗ್ರಿಗಳನ್ನು ಲೇವಾದೇವಿಗಾರರಿಗೆ ಕಳೆದುಕೊಂಡರು.[] ಹೆಚ್ಚು ಪರಿಣಾಮಕಾರಿಯಾಗಿ, ೧೯ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದಲ್ಲಿ ಬರಗಾಲಗಳ ದೊಡ್ಡ ಪ್ರಮಾಣದ ಹೆಚ್ಚಳವು ಕಂಡುಬಂತು. ಉಪಖಂಡಕ್ಕೆ ಬರಗಾಲಗಳು ಹೊಸದಲ್ಲವಾದರೂ, ಇವು ವಿಶೇಷವಾಗಿ ತೀವ್ರಸ್ವರೂಪದ್ದಾಗಿದ್ದು, ಹತ್ತಾರು ಲಕ್ಷ ಜನರು ಸಾಯುತ್ತಿದ್ದರು.[] ಬ್ರಿಟಿಷ್ ಮತ್ತು ಭಾರತೀಯರು ಸೇರಿದಂತೆ ಅನೇಕ ಟೀಕಾಕಾರರು ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದ ವಸಾಹತುಶಾಹಿ ಆಡಳಿತಗಳ ವಿರುದ್ಧ ಆರೋಪ ಹೊರಿಸಿದರು.[]

ಚಿತ್ರಸಂಪುಟ ಚಿತ್ರ :ಭಾರತೀಯ ರೈಲ್ವೆ1909a.jpg|ಭಾರತೀಯ ರೈಲ್ವೆಯ ೧೯೦೯ನಕ್ಷೆ, ಭಾರತ ವಿಶ್ವದಲ್ಲೇ ನಾಲ್ಕನೇ ದೊಡ್ಡ ರೈಲ್ವೆ ಜಾಲವನ್ನು ಹೊಂದಿತ್ತು. ಭಾರತದಲ್ಲಿ ರೈಲ್ವೆ ನಿರ್ಮಾಣವು ೧೯೫೩ರಲ್ಲಿ ಆರಂಭವಾಯಿತು. ಚಿತ್ರ:ವಿಕ್ಟೋರಿಯ ರೈಲ್ವೆನಿಲ್ದಾಣ 1903.JPG|" ವಿಶ್ವದಲ್ಲೇ ಅತ್ಯಂತ ಭವ್ಯ ರೈಲ್ವೆ ನಿಲ್ದಾಣ." ಮುಂಬಯಿನ ವಿಕ್ಟೋರಿಯ ನಿಲ್ದಾಣದ ತ್ರಿವಿಮಿತೀಯ ಚಿತ್ರಣ. ಅದು ೧೮೮೮ರಲ್ಲಿ ಪೂರ್ಣಗೊಂಡಿತು. ಚಿತ್ರ: ಆಗ್ರಾ ಕಾಲುವೆ ಹೆಡ್‌ವರ್ಕ್ಸ್ 1871a.jpg| ಆಗ್ರಾ ಕಾಲುವೆ (c. ೧೮೭೩), ಪೂರ್ಣಗೊಳಿಸಲು ಒಂದು ವರ್ಷ ಬಾಕಿಯಿತ್ತು. ನೀರಾವರಿಯನ್ನು ಹೆಚ್ಚಿಸಲು ಮತ್ತು ಬರಗಾಲ ನಿವಾರಣೆಗೆ ನೆರವಾಗುವುದಕ್ಕಾಗಿ ಕಾಲುವೆಯನ್ನು ೧೯೦೪ರಲ್ಲಿ ಸಂಚಾರಕ್ಕೆ ಮುಚ್ಚಲಾಯಿತು. ಚಿತ್ರ:ಜಾರ್ಜ್ ರಾಬಿನ್‌ಸನ್ , Ripon.jpg|ಲಾರ್ಡ್ ರಿಪನ್‌ರ ಮೊದಲನೇ ಮಾರ್ಕೆಸ್, ಭಾರತದ ಲಿಬರಲ್ ವೈಸರಾಯ್, ಬರಗಾಲ ಸಂಹಿತೆಯನ್ನು ಸ್ಥಾಪಿಸಿದರು. ಚಿತ್ರಸಂಪುಟ

ಸ್ವಯಮಾಡಳಿತದ ಆರಂಭಗಳು

[ಬದಲಾಯಿಸಿ]

ಬ್ರಿಟಿಷ್ ವೈಸರಾಯ್‌ಗೆ ಸಲಹೆ ನೀಡಲು ಭಾರತೀಯ ಸಲಹೆಗಾರರ ನೇಮಕ ಮತ್ತು ಭಾರತೀಯ ಸದಸ್ಯರೊಂದಿಗೆ ಪ್ರಾಂತೀಯ ಮಂಡಳಿಗಳ ಸ್ಥಾಪನೆಯೊಂದಿಗೆ ಬ್ರಿಟಿಷ್ ಭಾರತದಲ್ಲಿ ಸ್ವಯಮಾಡಳಿತದ ಮೊದಲ ಹೆಜ್ಜೆಗಳನ್ನು ೧೯ನೇ ಶತಮಾನದ ಕೊನೆಯಲ್ಲಿ ತೆಗೆದುಕೊಳ್ಳಲಾಯಿತು. ೧೮೯೨ರ ಭಾರತೀಯ ಮಂಡಳಿಗಳ ಕಾಯ್ದೆಯೊಂದಿಗೆ ಬ್ರಿಟಿಷ್ ತರುವಾಯ ಲೆಜಿಸ್ಲೇಟಿವ್ ಕೌನ್ಸಿಲ್‌ಗಳಲ್ಲಿ ಪಾಲ್ಗೊಳ್ಳುವಿಕೆಯನ್ನು ವ್ಯಾಪಕಗೊಳಿಸಿತು. ಸ್ಥಳೀಯ ಆಡಳಿತಕ್ಕಾಗಿ ಮುನಿಸಿಪಲ್ ಕಾರ್ಪೊರೇಷನ್ ಮತ್ತು ಜಿಲ್ಲಾ ಮಂಡಳಿಗಳನ್ನು ಸೃಷ್ಟಿಸಲಾಯಿತು ಮತ್ತು ಅದರಲ್ಲಿ ಆಯ್ಕೆಯಾದ ಭಾರತೀಯ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು.

ಮಾರ್ಲೆ-ಮಿಂಟೊ ಸುಧಾರಣೆಗಳು ಎಂದು ಹೆಸರಾದ ೧೯೦೯ರ ಭಾರತ ಸರ್ಕಾರದ ಕಾಯ್ದೆ(ಜಾನ್ ಮಾರ್ಲೆ ಭಾರತದ ಸೆಕ್ರೆಟರಿ ಆಫ್ ಸ್ಟೇಟ್ ಮತ್ತು ಮಿಂಟೊದ ನಾಲ್ಕನೇ ಅರ್ಲ್ ಗಿಲ್ಬರ್ಟ್ ಎಲಿಯಟ್ ವೈಸರಾಯ್ ಆಗಿದ್ದರು)- ಲೆಜಿಸ್ಲೇಟಿವ್ ಕೌನ್ಸಿಲ್‌ಗಳು ಎಂದು ಹೆಸರಾದ ಕೇಂದ್ರ ಮತ್ತು ಪ್ರಾಂತೀಯ ಶಾಸಕಾಂಗಗಳಲ್ಲಿ ಭಾರತೀಯರಿಗೆ ಸೀಮಿತ ಪಾತ್ರಗಳು ಸಿಕ್ಕಿತು. ಭಾರತೀಯರು ಇದಕ್ಕೆ ಮುಂಚಿತವಾಗಿ ಲೆಜಿಸ್ಲೇಟಿವ್ ಕೌನ್ಸಿಲ್‌ಗಳಿಗೆ ನೇಮಕವಾಗುತ್ತಿದ್ದರು. ಆದರೆ ಸುಧಾರಣೆಗಳ ನಂತರ ಕೆಲವರು ಮಾತ್ರ ನೇಮಕವಾದರು. ಕೇಂದ್ರದಲ್ಲಿ ಕೌನ್ಸಿಲ್ ಸದಸ್ಯರಲ್ಲಿ ಬಹುತೇಕ ಮಂದಿ ಸರ್ಕಾರಿ ನೇಮಕದ ಅಧಿಕಾರಿಗಳಾಗಿ ಮುಂದುವರಿದರು. ವೈಸರಾಯ್ ಯಾವುದೇ ರೀತಿಯಲ್ಲೂ ಶಾಸಕಾಂಗಕ್ಕೆ ಜವಾಬ್ದಾರಿಯಾಗಿರಲಿಲ್ಲ. ಪ್ರಾಂತೀಯ ಮಟ್ಟದಲ್ಲಿ ಆಯ್ಕೆಯಾದ ಸದಸ್ಯರು, ಅನಧಿಕೃತ ನೇಮಿತರ ಜತೆಯಲ್ಲಿ ನೇಮಕವಾದ ಅಧಿಕಾರಿಗಳನ್ನು ಸಂಖ್ಯೆಯಲ್ಲಿ ಮೀರಿಸಿದರು. ಆದರೆ ಶಾಸಕಾಂಗಕ್ಕೆ ಗವರ್ನರ್ ಜವಾಬ್ದಾರಿಯನ್ನು ಪರಿಭಾವಿಸಿರಲಿಲ್ಲ. ಸಂಸದೀಯ ಸ್ವಯಮಾಡಳಿತವು ಬ್ರಿಟಿಷ್ ಸರ್ಕಾರದ ಗುರಿಯಲ್ಲ ಎಂದು ಬ್ರಿಟಿಷ್ ಸಂಸತ್‌‌ಗೆ ಶಾಸನವನ್ನು ಪರಿಚಯಿಸುವ ಸಂದರ್ಭದಲ್ಲಿ ಮಾರ್ಲೆ ಸ್ಪಷ್ಟಪಡಿಸಿದ್ದರು.

ಮಾರ್ಲೆ-ಮಿಂಟೊ ಸುಧಾರಣೆಗಳು ಮೈಲುಗಲ್ಲಾಯಿತು. ಹಂತ ಹಂತವಾಗಿ, ಭಾರತೀಯ ಲೆಜಿಸ್ಲೇಟಿವ್ ಕೌನ್ಸಿಲ್‌ಗಳಲ್ಲಿ ಸದಸ್ಯತ್ವಕ್ಕಾಗಿ ಚುನಾಯಿತ ನಿಯಮವನ್ನು ಪರಿಚಯಿಸಲಾಯಿತು. ಆದಾಗ್ಯೂ, ಮತದಾರರನ್ನು ಮೇಲ್ವರ್ಗದ ಭಾರತೀಯರ ಸಣ್ಣ ಗುಂಪಿಗೆ ಸೀಮಿತಗೊಳಿಸಲಾಯಿತು. ಈ ಆಯ್ಕೆಯಾದ ಸದಸ್ಯರು "ಅಧಿಕೃತ ಸರ್ಕಾರ"ಕ್ಕೆ ಹೆಚ್ಚೆಚ್ಚು ವಿರೋಧಿಯಾದರು. ಒಂದು ಸಮುದಾಯದ ಮತದಾರರನ್ನು ನಂತರ ಇತರ ಸಮುದಾಯಗಳಿಗೆ ವಿಸ್ತರಿಸಲಾಯಿತು ಮತ್ತು ಧರ್ಮದ ಮೂಲಕ ಗುಂಪನ್ನು ಗುರುತಿಸುವ ಭಾರತೀಯ ಪ್ರವೃತ್ತಿಗೆ ಇದು ರಾಜಕೀಯ ಅಂಶವಾಯಿತು.

ಚಿತ್ರಸಂಪುಟ ಚಿತ್ರ:ಜಾನ್ ಮಾರ್ಲೆ,ಮೊದಲನೇ ವಿಸ್ಕೌಂಟ್ ಮಾರ್ಲೆ ಆಫ್ ಬ್ಲಾಕ್‌ಬರ್ನ್ - ಪ್ರಾಜೆಕ್ಟ್ ಗಟನ್‌ಬರ್ಗ್ eText ೧೭೯೭೬.jpg|ಜಾನ್ ಮಾರ್ಲೆ,೧೯೦೫ ರಿಂದ ೧೯೧೦ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯ ಮತ್ತು ಗ್ಲಾಡ್‌ಸ್ಟೋನಿಯನ್ ಲಿಬರಲ್. ಮಿಂಟೊ-ಮಾರ್ಲೆ ಸುಧಾರಣೆಗಳು ಎಂದು ಹೆಸರಾದ ೧೯೦೯ರ ಭಾರತೀಯ ಸರ್ಕಾರದ ಕಾಯ್ದೆ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಆಯ್ಕೆಯಾಗಲು ಭಾರತೀಯರಿಗೆ ಅವಕಾಶ ನೀಡಿತು. ಚಿತ್ರ:ಡೆಲ್ಲಿದರ್ಬಾರ್ pc1911.jpg| ೧೯೧೧ರ ಡಿಸೆಂಬರ್ ೧೨ರಂದು ದೆಹಲಿ ದರ್ಬಾರ್‌ನಲ್ಲಿ ಕಿಂಗ್ ಜಾರ್ಜ್ Vಮತ್ತು ಕ್ವೀನ್ ಮೇರಿ ಅವರು ಗೌರವ ರಕ್ಷೆ ಸ್ವೀಕರಿಸಲು ಗಾರ್ಡನ್ ಹೈಲ್ಯಾಂಡರ್ಸ್(ಬ್ರಿಟನ್ ಸೈನಿಕ ತುಕಡಿ) ಪಥಸಂಚಲನ ನಡೆಸುತ್ತಿರುವ ಅಂಚೆ ಕಾರ್ಡ್ ಚಿತ್ರ. ರಾಜನನ್ನು ಭಾರತದ ಚಕ್ರವರ್ತಿ ಎಂದು ಕಿರೀಟಧಾರಣೆ ಮಾಡಿದ ಸಂದರ್ಭದಲ್ಲಿ ಇದು ನಡೆಯಿತು. ಚಿತ್ರ:ಭಾರತೀಯಪಡೆಗಳು ವೈದ್ಯಕೀಯ ww1.jpg| ಭಾರತೀಯ ವೈದ್ಯಕೀಯ ಸಹವರ್ತಿಗಳು ಒಂದನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಮೆಸೊಪೊಟೇಮಿಯ ದಂಡಯಾತ್ರೆಯ ಸೈನ್ಯಬಲ ದೊಂದಿಗೆ ಗಾಯಗೊಂಡ ಸೈನಿಕರ ಆರೈಕೆ ಮಾಡುತ್ತಿರುವುದು. ಚಿತ್ರ:ಖುದಾದಾದ್ ಖಾನ್ vc1915.jpg|ಸಿಪಾಯಿ ಖುದಾದಾದ್‌ಖಾನ್,ಶೌರ್ಯ ಪ್ರದರ್ಶನಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯದ ಅತ್ಯುನ್ನತ ಯುದ್ಧಕಾಲದ ಪದಕವಾದ ವಿಕ್ಟೋರಿಯ ಕ್ರಾಸ್ ಪುರಸ್ಕೃತರಾದ ಪ್ರಥಮ ಭಾರತೀಯ. ಖಾನ್, ಪ್ರಸಕ್ತ ದಿನದಪಾಕಿಸ್ತಾನದ ಪಂಜಾಬಿನ ಚಾಕ್ವಾಲ್ ಜಿಲ್ಲೆಯವರಾಗಿದ್ದು, ೧೯೭೧ರಲ್ಲಿ ಅಸುನೀಗಿದರು. ಚಿತ್ರಸಂಪುಟ

ಒಂದನೇ ವಿಶ್ವಯುದ್ಧ ಮತ್ತು ನಂತರ

[ಬದಲಾಯಿಸಿ]

ಬ್ರಿಟನ್ ಮತ್ತು ಭಾರತದ ನಡುವೆ ಸಾಮ್ರಾಜ್ಯಶಾಹಿ ಸಂಬಂಧದಲ್ಲಿ ಒಂದನೇ ವಿಶ್ವ ಮಹಾಯುದ್ಧವು ಮುಖ್ಯ ಐತಿಹಾಸಿಕ ಬದಲಾವಣೆಯಾಗಿ ರುಜುವಾತಾಯಿತು. ಬ್ರಿಟಿಷ್ ಭಾರತೀಯ ಸೇನೆಯ ೧.೪ದಶಲಕ್ಷ ಭಾರತೀಯ ಮತ್ತು ಬ್ರಿಟಿಷ್ ಸೈನಿಕರು ಯುದ್ಧದಲ್ಲಿ ಭಾಗವಹಿಸಿದರು ಮತ್ತು ಅವರ ಭಾಗವಹಿಸುವಿಕೆಯು ವಿಶಾಲ ಸಾಂಸ್ಕೃತಿಕ ಪರಿಣಾಮವನ್ನು ಬೀರಿತು: ಬ್ರಿಟಿಷ್ ಸೈನಿಕರ ಜತೆ ಬ್ರಿಟಿಷ್ ಆಧಿಪತ್ಯದ ಪ್ರದೇಶಗಳಾದ ಕೆನಡಾ ಮತ್ತು ಆಸ್ಟ್ರೇಲಿಯದ ಸೈನಿಕರು ಹೋರಾಡುತ್ತಿರುವ ಮತ್ತು ಸಾಯುತ್ತಿರುವ ಸುದ್ದಿಗಳು ಸುದ್ದಿಮಾಧ್ಯಮ ಮತ್ತು ರೇಡಿಯೊದ ಹೊಸ ಮಾಧ್ಯಮದ ಮೂಲಕ ವಿಶ್ವದ ದೂರಪ್ರದೇಶಗಳಲ್ಲಿ ಪ್ರಸಾರವಾಯಿತು.[] ಭಾರತದ ಅಂತಾರಾಷ್ಟ್ರೀಯ ಚಿತ್ರಣವು ವರ್ಧಿಸಿತು ಮತ್ತು ೧೯೨೦ರ ದಶಕದಲ್ಲಿ ಇನ್ನಷ್ಟು ವರ್ಧಿಸುವುದು ಮುಂದುವರಿಯಿತು.[] ಇತರೆ ವಿಷಯಗಳ ನಡುವೆ, ಅದೇ ಹೆಸರಿನಲ್ಲಿ ಭಾರತಕ್ಕೆ ಲೀಗ್ ಆಫ್ ನೇಷನ್ಸ್‌ನ ಸಂಸ್ಥಾಪಕ ಸದಸ್ಯರಾಷ್ಟ್ರವಾಗಲು ೧೯೨೦ರಲ್ಲಿ ದಾರಿಕಲ್ಪಿಸಿತು. "ಲೆಸ್ ಇಂಡೆಸ್ ಆಂಗ್ಲೈಸಸ್(ಬ್ರಿಟಿಷ್ ಇಂಡೀಸ್)ಹೆಸರಿನಲ್ಲಿ ಆಂಟ್‌ವರ್ಪ್‌ನ ೧೯೨೦ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತು.[] ಭಾರತದಲ್ಲಿ, ವಿಶೇಷವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಖಂಡರ ನಡುವೆ, ಭಾರತೀಯರಿಗೆ ಹೆಚ್ಚಿನ ಸ್ವಯಮಾಡಳಿತದ ಕರೆಗೆ ಇದು ದಾರಿಕಲ್ಪಿಸಿತು.[]

೧೯೧೬ರಲ್ಲಿ, ಲಕ್ನೊ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ರಾಷ್ಟ್ರೀಯವಾದಿಗಳು ಪ್ರದರ್ಶಿಸಿದ ಹೊಸ ಬಲ ಮತ್ತು ಹೋಮ್ ರೂಲ್ ಲೀಗ್‌ಗಳ ಸ್ಥಾಪನೆ ಮತ್ತು ಮೆಸೊಪೊಟೇಮಿಯ ದಂಡಯಾತ್ರೆಯ ಹಾನಿಯ ನಂತರ, ಯುದ್ಧವು ಇನ್ನಷ್ಟು ಅವಧಿವರೆಗೆ ಮುಂದುವರಿಯಬಹುದೆಂಬ ಅರಿವಿನಿಂದ, ಹೊಸ ವೈಸರಾಯ್ ಲಾರ್ಡ್ ಚೆಲ್ಮ್ಸ್‌ಫೋರ್ಡ್, ಭಾರತ ಸರ್ಕಾರವು ಭಾರತೀಯರ ಅಭಿಪ್ರಾಯಕ್ಕೆ ಹೆಚ್ಚು ಸ್ಪಂದಿಸಬೇಕೆಂದು ಎಚ್ಚರಿಸಿದರು.[೧೦] ವರ್ಷದ ಕೊನೆಯಲ್ಲಿ, ಲಂಡನ್‌ನಲ್ಲಿರುವ ಸರ್ಕಾರದ ಜತೆ ಚರ್ಚೆಗಳ ನಂತರ, ಭಾರತವು ಯುದ್ಧದಲ್ಲಿ ತೋರಿಸಿದ ಪಾತ್ರಕ್ಕಾಗಿ ಬ್ರಿಟಿಷರು ತಮ್ಮ ಸದ್ಭಾವನೆಯನ್ನು ಸಾರ್ವಜನಿಕ ಕ್ರಮಗಳ ಮೂಲಕ ಪ್ರದರ್ಶಿಸಬೇಕು ಎಂದು ಸಲಹೆ ಮಾಡಿದರು. ಇವುಗಳಲ್ಲಿ ರಾಜರಿಗೆ ಬಿರುದುಗಳು ಮತ್ತು ಗೌರವಗಳ ಪ್ರಶಸ್ತಿಗಳು, ಭಾರತೀಯರಿಗೆ ಸೇನೆಯಲ್ಲಿ ಕಮೀಷನ್‌ಗಳನ್ನು(ಅಧಿಕಾರಗಳು) ನೀಡುವುದು, ಹೆಚ್ಚು ದೂಷಣೆಗೆ ಗುರಿಯಾದ ಹತ್ತಿ ಅಬ್ಕಾರಿ ತೆರಿಗೆ ತೆಗೆದುಹಾಕುವುದು, ಆದರೆ ಅತೀ ಮುಖ್ಯವಾಗಿ, ಬ್ರಿಟನ್ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಕಟಣೆ ಮತ್ತು ಕೆಲವು ದೃಢ ಕ್ರಮಗಳ ಸೂಚನೆಯು ಸೇರಿವೆ.[೧೦] ಹೆಚ್ಚು ಚರ್ಚೆಯ ನಂತರ, ಭಾರತದ ಹೊಸ ಲಿಬರಲ್ ಸೆಕ್ರೆಟರಿ ಆಫ್ ಸ್ಟೇಟ್ ಎಡ್ವಿನ್ ಮೊಂಟಾಗು, ಆಡಳಿತದ ಎಲ್ಲ ವಿಭಾಗದಲ್ಲಿ ಭಾರತೀಯರ ಜತೆ ಸಹಯೋಗ ಹೆಚ್ಚಿಸುವುದು, ಸ್ವಯಮಾಡಳಿತದ ಸಂಸ್ಥೆಗಳ ಕ್ರಮೇಣ ಅಭಿವೃದ್ಧಿಯನ್ನು ಕೈಗೊಳ್ಳುವ ಬ್ರಿಟಿಷ್ ಗುರಿಯ ಬಗ್ಗೆ ಪ್ರಕಟಿಸಿದರು. ಬ್ರಿಟಿಷ್ ಸಾಮ್ರಾಜ್ಯದ ಅವಿಭಾಜ್ಯ ಅಂಗವಾಗಿ ಭಾರತದಲ್ಲಿ ಜವಾಬ್ದಾರಿ ಸರ್ಕಾರದ ಪ್ರಗತಿಪರ ಸಾಫಲ್ಯವನ್ನು ಕಾಣುವ ದೃಷ್ಟಿಕೋನವನ್ನು ಇದು ಹೊಂದಿತ್ತು.[೧೦] ಇಲ್ಲಿಯವರೆಗೆ ಪ್ರಾತಿನಿಧ್ಯವಿಲ್ಲದ ಅಲ್ಪಸಂಖ್ಯಾತರು ಎಂದು ಅಲಕ್ಷ್ಯಕ್ಕೆ ಒಳಗಾಗಿದ್ದ ವಿದ್ಯಾವಂತ ಭಾರತೀಯರಲ್ಲಿ ವಿಶ್ವಾಸ ಹುಟ್ಟಿಸಿತು. ಅವರನ್ನು ಮೊಂಟಾಗು"ಬೌದ್ಧಿಕವಾಗಿ ನಮ್ಮ ಮಕ್ಕಳು" ಎಂದು ಬಣ್ಣಿಸಿದರು.[೧೧] ಸುಧಾರಣೆಗಳ ಗತಿಯನ್ನು ಭಾರತೀಯರು ಸಂಪಾದಿಸಿದ್ದಾರೆಂದು ಕಂಡುಬಂದ ಸಂದರ್ಭದಲ್ಲಿ ಬ್ರಿಟನ್ ನಿರ್ಧರಿಸುತ್ತದೆ.[೧೧] ಆದಾಗ್ಯೂ, ಯೋಜನೆಯು ಭಾರತ ನಿಶ್ಚಿತವಾಗಿ ಬ್ರಿಟಿಷ್ ಸಾಮ್ರಾಜ್ಯದೊಳಕ್ಕೆ ಇರುವುದರೊಂದಿಗೆ ಮೊದಲಿಗೆ ಪ್ರಾಂತ್ಯಗಳಲ್ಲಿ ಸೀಮಿತ ಸ್ವಯಮಾಡಳಿತದ ಕಲ್ಪನೆಯನ್ನು ಹೊಂದಿತ್ತು ಮತ್ತು - ಬಿಳಿಯೇತರ ವಸಾಹತಿನಲ್ಲಿ ಯಾವುದೇ ಸ್ವರೂಪದ ಪ್ರಾತಿನಿಧ್ಯ ಸರ್ಕಾರಕ್ಕೆ ಪ್ರಥಮ ಬ್ರಿಟಿಷ್ ಪ್ರಸ್ತಾವನೆಯನ್ನು ಇದು ಬಿಂಬಿಸುತ್ತದೆ.

ಇದಕ್ಕೆ ಮುಂಚೆ, ಒಂದನೇ ವಿಶ್ವಮಹಾಯುದ್ಧ ಆರಂಭದಲ್ಲಿ, ಭಾರತದ ಬಹುಮಟ್ಟಿನ ಬ್ರಿಟಿಷ್ ಸೇನೆಯನ್ನು ಯುರೋಪ್ ಮತ್ತು ಮೆಸೊಪೊಟೇಮಿಯಕ್ಕೆ ಮರುನಿಯೋಜನೆ ಮಾಡಿದ್ದರಿಂದ ಮುಂಚಿನ ವೈಸರಾಯ್ ಲಾರ್ಡ್ ಹಾರ್ಡಿಂಗ್, ಭಾರತದಿಂದ ಸೇನಾಪಡೆಗಳನ್ನು ತೆಗೆಯುವಲ್ಲಿ ಒಳಗೊಂಡ ಅಪಾಯಗಳ ಬಗ್ಗೆ ಚಿಂತಿತರಾಗಿದ್ದರು.[] ಕ್ರಾಂತಿಕಾರಿ ಹಿಂಸಾಚಾರ ಬ್ರಿಟಿಷ್ ಭಾರತದಲ್ಲಿ ಈಗಾಗಲೇ ಆತಂಕದ ವಿಷಯವಾಗಿತ್ತು. ಅದರ ಪರಿಣಾಮವಾಗಿ ೧೯೧೫ರಲ್ಲಿ, ಹಿಂಸಾಚಾರಕ್ಕೆ ಹೆಚ್ಚು ಒಳಪಟ್ಟಿರುವುದಾಗಿ ಕಂಡುಬಂದಿರುವ ಅವಧಿಯಲ್ಲಿ ಅದರ ಅಧಿಕಾರಗಳನ್ನು ಬಲಗೊಳಿಸಲು ಭಾರತ ಸರ್ಕಾರ ಭಾರತದ ರಕ್ಷಣಾ ಕಾಯ್ದೆಗೆ ಅನುಮೋದನೆ ನೀಡಿತು. ಇದು ರಾಜಕೀಯವಾಗಿ ಅಪಾಯಕಾರಿಯಾದ ಭಿನ್ನಮತೀಯರನ್ನು ಯಾವುದೇ ಪ್ರಕ್ರಿಯೆಯಿಲ್ಲದೇ ಬಂಧಿಸಲು ಅವಕಾಶ ನೀಡಿತು ಮತ್ತು ೧೯೧೦ರ ಪತ್ರಿಕಾ ಕಾಯ್ದೆಯನ್ವಯ ವಿಚಾರಣೆಯಿಲ್ಲದೇ ಪತ್ರಕರ್ತರನ್ನು ಸೆರೆಮನೆಗೆ ಹಾಕುವ ಮತ್ತು ಮಾಧ್ಯಮದ ಮೇಲೆ ಸೆನ್ಸರ್ ವಿಧಿಸುವ, ಅದಕ್ಕೆ ಈಗಾಗಲೇ ಇದ್ದ ಅಧಿಕಾರಕ್ಕೆ ಸೇರ್ಪಡೆಯಾಯಿತು.[೧೨] ಈಗ,ಸಂವಿಧಾನಿಕ ಸುಧಾರಣೆ ಬಗ್ಗೆ ಶ್ರದ್ಧೆಯಿಂದ ಚರ್ಚೆ ಆರಂಭವಾಗುತ್ತಿದ್ದಂತೆ, ಹೇಗೆ ಹೊಸ ಸೌಮ್ಯವಾದಿ ಭಾರತೀಯರನ್ನು ಸಂವಿಧಾನಿಕ ರಾಜಕೀಯದ ವ್ಯಾಪ್ತಿಗೆ ತರಬಹುದು ಮತ್ತು ಏಕಕಾಲದಲ್ಲಿ ಹೇಗೆ ಸ್ಥಾಪಿತ ಸಂವಿಧಾನತಜ್ಞರ ಕೈ ಬಲಪಡಿಸಬಹುದು ಎಂದು ಬ್ರಿಟಿಷ್ ಪರಿಗಣಿಸಲಾರಂಭಿಸಿತು.[೧೨] ಆದಾಗ್ಯೂ, ಯುದ್ಧ ಕಾಲದ ಸರ್ಕಾರದ ನಿಯಂತ್ರಣದ ಹೆಚ್ಚಳದ ಫಲವಾಗಿ ಉಗ್ರಗಾಮಿ ಹಿಂಸಾಚಾರ ಇಳಿಮುಖವಾಗಿದ್ದ ಸಂದರ್ಭದಲ್ಲಿ ಸುಧಾರಣೆ ಯೋಜನೆಯನ್ನು ರೂಪಿಸಿದ್ದರಿಂದ, ಈಗ ಕ್ರಾಂತಿಕಾರಕ ಹಿಂಸಾಚಾರ ಪುನಶ್ಚೇತನಗೊಳ್ಳಬಹುದೆಂಬ ಭೀತಿ ವ್ಯಕ್ತವಾಯಿತು.[೧೧] ಅವುಗಳ ಕೆಲವು ಯುದ್ಧ ಕಾಲದ ಅಧಿಕಾರಗಳನ್ನು ಶಾಂತಿ ಕಾಲಕ್ಕೆ ಹೇಗೆ ವಿಸ್ತರಿಸಬಹುದು ಎಂದು ಸರ್ಕಾರ ಪರಿಗಣಿಸಲು ಆರಂಭಿಸಿತು.[೧೨][೧೨]

ಭಾರತದ ಸೆಕ್ರೇಟರಿ ಆಫ್ ಸ್ಟೇಟ್ ಎಡ್ವಿನ್ ಮೋಂಟಾಗು ವರದಿಯಿಂದ 1919ರ ಗವರ್ನಮೆಂಟ್ ಆಫ್ ಇಂಡಿಯ ಆಕ್ಟ್‌ಗೆ ದಾರಿ ಕಲ್ಪಿಸಿತು. ಇವು ಮೊಂಟ್‌ಪೋರ್ಡ್ ಸುಧಾರಣೆಗಳು ಅಥವಾ ಮೊಂಟಾಗು-ಚೆಲ್ಮ್ಸ್‌ಪೋರ್ಡ್ ಸುಧಾರಣೆಗಳು ಎಂದು ಹೆಸರಾಗಿವೆ.

ತರುವಾಯ ೧೯೧೭ರಲ್ಲಿ ಎಡ್ವಿನ್ ಮೊಂಟಾಗು ಹೊಸ ಸಂವಿಧಾನಿಕ ಸುಧಾರಣೆಗಳನ್ನು ಪ್ರಕಟಿಸಿದರೂ, ಬ್ರಿಟಿಷ್ ನ್ಯಾಯಾಧೀಶ S. A. T. ರೌಲಟ್ ಅಧ್ಯಕ್ಷರಾಗಿದ್ದ ರಾಷ್ಟ್ರದ್ರೋಹ ವಿಚಾರಣೆ ಸಮಿತಿಗೆ ಯುದ್ಧ ಕಾಲದ ಕ್ರಾಂತಿಕಾರಿ ಒಳಸಂಚುಗಳು ಮತ್ತು ಭಾರತದಲ್ಲಿ ಹಿಂಸಾಚಾರಕ್ಕೆ ಜರ್ಮನ್ ಮತ್ತು ಬೋಲ್ಶೆವಿಕ್ ನಂಟುಗಳನ್ನು ಕುರಿತು ವಿಚಾರಣೆ ನಡೆಸಲು ನೇಮಿಸಲಾಯಿತು.[೧೩][೧೪][೧೫] ಸರ್ಕಾರದ ಯುದ್ಧಕಾಲದ ಅಧಿಕಾರಗಳನ್ನು ವಿಸ್ತರಿಸುವ ವ್ಯಕ್ತಪಡಿಸದ ಗುರಿಯನ್ನು ಇದು ಒಳಗೊಂಡಿತ್ತು.[೧೦] ರೌಲಟ್ ಸಮಿತಿಯು ೧೯೧೮ರ ಜುಲೈನಲ್ಲಿ ತನ್ನ ವರದಿಯನ್ನು ಮಂಡಿಸಿತು ಮತ್ತು ಒಳಸಂಚಿನ ಬಂಡುಕೋರ ಕೃತ್ಯಗಳಿಗೆ ಮೂರು ಪ್ರದೇಶಗಳನ್ನು ಗುರುತಿಸಿತು: ಬಂಗಾಳ, ಮುಂಬಯಿ ಪ್ರೆಸಿಡೆನ್ಸಿ ಮತ್ತು ಪಂಜಾಬ್.[೧೦] ಈ ಪ್ರದೇಶಗಳಲ್ಲಿ ಬಂಡುಕೋರ ಚಟುವಟಿಕೆಗಳನ್ನು ದಮನಿಸಲು, ಸರ್ಕಾರವು ತನ್ನ ಯುದ್ಧಕಾಲದ ಅಧಿಕಾರಕ್ಕೆ ಹೋಲಿಕೆಯಾಗುವ ತುರ್ತು ಅಧಿಕಾರಗಳನ್ನು ಬಳಸಿಕೊಳ್ಳಬೇಕು ಎಂದು ಸಮಿತಿಯು ಶಿಫಾರಸು ಮಾಡಿತು. ಮೂರು ನ್ಯಾಯಾಧೀಶರ ಸಮಿತಿಯಿಂದ ಮತ್ತು ನ್ಯಾಯದರ್ಶಿ ಮಂಡಳಿಯಿಲ್ಲದೇ ರಾಷ್ಟ್ರದ್ರೋಹದ ಪ್ರಕರಣಗಳನ್ನು ವಿಚಾರಣೆ ನಡೆಸುವ ಸಾಮರ್ಥ್ಯ, ಶಂಕಿತರಿಂದ ಭದ್ರತೆಗಳನ್ನು ಒತ್ತಾಯಿಸುವುದು, ಶಂಕಿತರ ನಿವಾಸಗಳ ಮೇಲೆ ಸರ್ಕಾರದ ಮೇಲ್ವಿಚಾರಣೆ,[೧೦] ಅಲ್ಪಾವಧಿಯ ಬಂಧನ ಸೌಲಭ್ಯಗಳು ಮತ್ತು ವಿಚಾರಣೆಯಿಲ್ಲದೇ ಶಂಕಿತರನ್ನು ಬಂಧಿಸಿ ಸೆರೆಯಲ್ಲಿಡಲು ಪ್ರಾಂತೀಯ ಸರ್ಕಾರಗಳಿಗೆ ಅಧಿಕಾರ.[೧೬]

ಒಂದನೇ ವಿಶ್ವ ಯುದ್ಧದ ಮುಕ್ತಾಯದೊಂದಿಗೆ, ಆರ್ಥಿಕ ವಾತಾವರಣದಲ್ಲಿ ಕೂಡ ಬದಲಾವಣೆಯಾಯಿತು. ೧೯೧೯ರ ವರ್ಷದ ಕೊನೆಯಲ್ಲಿ, ಸಶಸ್ತ್ರ ಸೇವೆಗಳಲ್ಲಿ ೧ .೫ದಶಲಕ್ಷ ಭಾರತೀಯರು ಯುದ್ಧದ ಅಥವಾ ಯುದ್ಧರಹಿತ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಭಾರತವು ಯುದ್ಧಕ್ಕಾಗಿ ೧೪೬ ದಶಲಕ್ಷ ಡಾಲರ್ ಹಣವನ್ನು ಆದಾಯದ ರೂಪದಲ್ಲಿ ಒದಗಿಸಿದೆ.[೧೭] ಹೆಚ್ಚಿದ ತೆರಿಗೆಗಳು ಮತ್ತು ಅದರ ಜತೆಯಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅಡ್ಡಿಗಳಿಂದ ೧೯೧೪ಮತ್ತು ೧೯೨೦ರ ನಡುವೆ ಒಟ್ಟಾರೆ ದರಗಳ ಸೂಚ್ಯಂಕ ಸರಿಸುಮಾರು ದುಪ್ಪಟ್ಟುಗೊಳಿಸಿದ ಪರಿಣಾಮ ಉಂಟುಮಾಡಿತು.[೧೭] ಹಿಂತಿರುಗಿದ ಯುದ್ಧ ವೀರರಿಂದ ವಿಶೇಷವಾಗಿ ಪಂಜಾಬ್‌ನಲ್ಲಿ ನಿರುದ್ಯೋಗದ ಬಿಕ್ಕಟ್ಟು ಬೆಳೆಯಿತು [೧೮] ಮತ್ತು ಯುದ್ಧದ ನಂತರದ ಹಣದುಬ್ಬರವು ಮುಂಬಯಿ, ಮದ್ರಾಸ್ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ಆಹಾರಕ್ಕಾಗಿ ಗಲಭೆಗಳಿಗೆ ದಾರಿ ಕಲ್ಪಿಸಿತು.[೧೮] ೧೯೧೮-೧೯ರ ಮುಂಗಾರುವಿನ ವೈಫಲ್ಯ, ಲಾಭಬಡುತಕನ ಮತ್ತು ಸಟ್ಟಾ ವ್ಯಾಪಾರದಿಂದ ಪರಿಸ್ಥಿತಿ ಹದಗೆಟ್ಟಿತು.[೧೭] ಜಾಗತಿಕ ಇನ್‌ಫ್ಲುಯೆನ್ಸ ಸಾಂಕ್ರಾಮಿಕ ಮತ್ತು ೧೯೧೭ರ ಬೋಲ್ಶೆವಿಕ್ ಕ್ರಾಂತಿಯು ಗಾಬರಿಗೆ ಮತ್ತಷ್ಟು ಸೇರ್ಪಡೆ ಮಾಡಿತು. ಜನಸಂಖ್ಯೆಯು ಇನ್‌ಫ್ಲುಯೆನ್ಸ ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿತು[೧೮] ಮತ್ತು ಬೋಲ್ಶೆವಿಕ್ ಕ್ರಾಂತಿಯಿಂದ ಇದೇ ರೀತಿಯ ಕ್ರಾಂತಿ ಭಾರತದಲ್ಲಿ ಸರ್ಕಾರಿ ಅಧಿಕಾರಿಗಳ ನಡುವೆ ಉಂಟಾಗುವ ಬಗ್ಗೆ ಭೀತಿ ವ್ಯಕ್ತವಾಯಿತು.[೧೯]

ಮುಂಬರುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರವು ರೌಲಟ್ ಸಮಿತಿಯ ಶಿಫಾರಸುಗಳನ್ನು ಎರಡು ರೌಲಟ್ ಮಸೂದೆಗಳಾಗಿ ಸಿದ್ಧಮಾಡಿತು.[೧೬] ಆದರೂ ಮಸೂದೆಗಳಿಗೆ ಶಾಸಕಾಂಗ ಪರಿಗಣನೆಗಾಗಿ ಎಡ್ವಿನ್ ಮೊಂಟಾಗು ಅವರಿಗೆ ಅಧಿಕಾರ ನೀಡಲಾಯಿತು. ಅವುಗಳನ್ನು ಇಚ್ಛೆಯಿಲ್ಲದಿದ್ದರೂ ಜತೆಗೂಡಿದ ಘೋಷಣೆಯೊಂದಿಗೆ ಮಾಡಲಾಯಿತು " ರೌಲಟ್ ಮತ್ತು ಅವರ ಸ್ನೇಹಿತರು ಅವಶ್ಯಕವೆಂದು ಯೋಚಿಸಿದ ಪ್ರಮಾಣದಲ್ಲಿ ಶಾಂತಿ ಕಾಲದ ಡಿಫೆನ್ಸ್ ಆಫ್ ಇಂಡಿಯ ಆಕ್ಟ್‌(ಭಾರತದ ರಕ್ಷಣಾ ಕಾಯ್ದೆ) ರಕ್ಷಿಸುವ ಸಲಹೆಗೆ ಒಪ್ಪಿಕೊಳ್ಳಲು ತಮಗೆ ಮೊದಲ ನೋಟಕ್ಕೆ ಇಷ್ಟವಿರಲಿಲ್ಲ" [೧೦] ಇದರ ಫಲವಾದ ಚರ್ಚೆಯಲ್ಲಿ ಮತ್ತು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಮತದಾನದಲ್ಲಿ ಅಖಿಲ ಭಾರತ ಸದಸ್ಯರು ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿದರು. ಭಾರತ ಸರ್ಕಾರ ೧೯೧೯ರ ಆರಂಭದಲ್ಲಿ ಮಸೂದೆಗಳ ಅನುಮೋದನೆ ಖಾತರಿಪಡಿಸಿಕೊಳ್ಳಲು ಅದರ "ಅಧಿಕೃತ ಬಹುಮತ"ವನ್ನು ಅದೇನೇ ಇದ್ದರೂ ಬಳಸಿಕೊಳ್ಳಲು ಸಮರ್ಥವಾಯಿತು.[೧೦] ಆದಾಗ್ಯೂ, ಭಾರತೀಯರ ವಿರೋಧಕ್ಕೆ ಅನುಸರಣೆಯಾಗಿ ಅನುಮೋದನೆಯಾಗಿದ್ದು, ಪ್ರಥಮ ಮಸೂದೆಯ ಸಣ್ಣ ರೂಪಾಂತರವಾಗಿತ್ತು. ಇದು ಈಗ ನ್ಯಾಯಾಲಯದ ಹೊರಗಿನ ಅಧಿಕಾರಗಳಿಗೆ ಅವಕಾಶ ನೀಡಿತು. ಆದರೆ ನಿಖರವಾಗಿ ಮೂರು ವರ್ಷಗಳ ಅವಧಿಗೆ ಮತ್ತು ಅರಾಜಕತೆ ಹಾಗು ಕ್ರಾಂತಿಕಾರಿ ಆಂದೋಳನಗಳಿಗೆ ಮಾತ್ರ ಕ್ರಮ ಜರುಗಿಸಬಹುದಾಗಿತ್ತು. ಭಾರತೀಯ ದಂಡ ಸಂಹಿತೆಯ ಬದಲಾವಣೆ ಒಳಗೊಂಡ ಎರಡನೇ ಮಸೂದೆಯನ್ನು ಸಂಪೂರ್ಣವಾಗಿ ಕೈಬಿಡಲಾಯಿತು.[೧೦] ಆದರೂ ಸಹ, ಅದು ಅನುಮೋದನೆಯಾದ ಸಂದರ್ಭದಲ್ಲಿ ಹೊಸ ರೌಲಟ್ ಕಾಯಿದೆ ಭಾರತದಾದ್ಯಂತ ವ್ಯಾಪಕ ಕೋಪವನ್ನು ಹುಟ್ಟುಹಾಕಿತು ಮತ್ತು ರಾಷ್ಟ್ರೀಯವಾದಿ ಚಳವಳಿಯ ಮುಂಚೂಣಿಯಲ್ಲಿ ಮೋಹನ್‌ದಾಸ್ ಗಾಂಧಿ ಅವರನ್ನು ತಂದಿತು.[೧೬]

ಏತನ್ಮಧ್ಯೆ, ಮೊಂಟಾಗು ಮತ್ತು ಚೆಲ್ಮ್ಸ್‌ಫೋಲ್ಡ್ ಹಿಂದಿನ ಚಳಿಗಾಲದಲ್ಲಿ ಭಾರತದಲ್ಲಿ ಸತ್ಯಶೋಧಕ ಪ್ರವಾಸ ಕೈಗೊಂಡ ನಂತರ, ೧೯೧೮ರ ಜುಲೈನಲ್ಲಿ ಅಂತಿಮವಾಗಿ ತಮ್ಮ ವರದಿಯನ್ನು ಮಂಡಿಸಿದರು.[೨೦] ಬ್ರಿಟನ್‌ನಲ್ಲಿ ಸರ್ಕಾರ ಮತ್ತು ಸಂಸತ್ತಿನಿಂದ ಹೆಚ್ಚು ಚರ್ಚೆಯ ಬಳಿಕ, ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನಸಂಖ್ಯೆ ಪೈಕಿ ಯಾರು ಮತದಾನ ಮಾಡಬೇಕೆಂಬುದನ್ನು ಗುರುತಿಸುವ ಉದ್ದೇಶದಿಂದ ಫ್ರಾಂಚೈಸಿ ಮತ್ತು ಕಾರ್ಯಚಟುವಟಿಕೆಗಳ ಸಮಿತಿಯ ಇನ್ನೊಂದು ಪ್ರವಾಸದ ನಂತರ,೧೯೧೯ರ ಭಾರತ ಸರ್ಕಾರದ ಕಾಯಿದೆ(ಮೊಂಟಗು-ಚೆಲ್ಮ್ಸ್‌ಫೋರ್ಡ್ ಸುಧಾರಣೆಗಳು ಎಂದು ಕೂಡ ಹೆಸರಾಗಿದೆ)ಯನ್ನು ೧೯೧೯ರ ಡಿಸೆಂಬರ್‌ನಂದು ಅನುಮೋದಿಸಲಾಯಿತು.[೨೦] ಹೊಸ ಕಾಯಿದೆಯು ಪ್ರಾಂತೀಯ ಮಂಡಳಿಗಳನ್ನು ದೊಡ್ಡದು ಮಾಡಿತು ಮತ್ತು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ನ್ನು ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ ಯಾಗಿ ಹಿಗ್ಗಿಸಿತು. ಪ್ರತಿಕೂಲ ಮತಗಳ ಮೂಲಕ ಅಧಿಕೃತ ಬಹುಮತಕ್ಕೆ ಭಾರತ ಸರ್ಕಾರದ ಅವಲಂಬನೆಯನ್ನು ರದ್ದುಮಾಡಿತು.[೨೦] ರಕ್ಷಣೆ, ವಿದೇಶಾಂಗ ವ್ಯವಹಾರಗಳು, ಕ್ರಿಮಿನಲ್ ಕಾನೂನು, ಸಂಪರ್ಕ ಮತ್ತು ಆದಾಯತೆರಿಗೆ ಇಲಾಖೆಗಳನ್ನು ವೈಸರಾಯ್ ಮತ್ತು ನವದೆಹಲಿಯ ಕೇಂದ್ರ ಸರ್ಕಾರ ಉಳಿಸಿಕೊಂಡಿತು ಮತ್ತು ಸಾರ್ವಜನಿಕ ಆರೋಗ್ಯ, ಶಿಕ್ಷಣ, ಭೂಕಂದಾಯ ಮುಂತಾದ ಇತರ ಇಲಾಖೆಗಳು ಮತ್ತು ಸ್ಥಳೀಯ ಸ್ವಯಮಾಡಳಿತವನ್ನು ಪ್ರಾಂತ್ಯಗಳಿಗೆ ವರ್ಗಾಯಿಸಲಾಯಿತು.[೨೦] ಪ್ರಾಂತ್ಯಗಳನ್ನು ಸ್ವತಃ ಹೊಸ ದ್ವಿಆಡಳಿತ ವ್ಯವಸ್ಥೆ ಅನ್ವಯ ಆಡಳಿತ ನಡೆಸಲಾಯಿತು. ಶಿಕ್ಷಣ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸ್ಥಳೀಯ ಸ್ವಯಮಾಡಳಿತವು ಭಾರತೀಯ ಸಚಿವರು ಮತ್ತು ಶಾಸಕಾಂಗಗಳಿಗೆ ಅಂತಿಮವಾಗಿ ಭಾರತೀಯ ಮತದಾರರಿಗೆ ಮೀಸಲಿಡಲಾಯಿತು. ಇನ್ನುಳಿದ ನೀರಾವರಿ, ಭೂಕಂದಾಯ, ಪೊಲೀಸ್, ಸೆರೆಮನೆಗಳು ಮತ್ತು ಮಾಧ್ಯಮದ ನಿಯಂತ್ರಣವನ್ನು ಬ್ರಿಟನ್ ಗವರ್ನರ್ ಮತ್ತು ಅವರ ಕಾರ್ಯನಿರ್ವಾಹಕ ಮಂಡಳಿಯ ವ್ಯಾಪ್ತಿಯಲ್ಲಿ ಉಳಿಸಲಾಯಿತು.[೨೦] ಹೊಸ ಕಾಯ್ದೆಯು ಭಾರತೀಯರಿಗೆ ನಾಗರಿಕ ಸೇವೆ ಮತ್ತು ಸೇನಾಧಿಕಾರಿ ತುಕಡಿಗೆ ಸೇರಲು ಸುಲಭವಾಗಿಸಿತು.

ಹೆಚ್ಚಿನ ಪ್ರಮಾಣದ ಭಾರತೀಯರು ಮತದಾನದ ಹಕ್ಕನ್ನು ಪಡೆದರು. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಮತದಾನಕ್ಕೆ ಒಟ್ಟು ವಯಸ್ಕ ಪುರುಷ ಜನಸಂಖ್ಯೆಯಲ್ಲಿ ಶೇಕಡ ೧೦ರಷ್ಟು ಜನರು ಒಳಗೊಂಡಿದ್ದರು. ಒಟ್ಟು ಪುರುಷ ಜನಸಂಖ್ಯೆಯಲ್ಲಿ ಅನೇಕ ಮಂದಿ ಅನಕ್ಷರಸ್ಥರಾಗಿದ್ದರು.[೨೦] ಪ್ರಾಂತೀಯ ಶಾಸಕಾಂಗಗಳಲ್ಲಿ, ಬ್ರಿಟಿಷರು ಸಹಕಾರಿ ಅಥವಾ ಉಪಯುಕ್ತ ಎಂದು ಪರಿಗಣಿಸಿದ ವಿಶೇಷ ಆಸಕ್ತಿಗಳ ಗುಂಪುಗಳಿಗೆ ಕೆಲವು ಸ್ಥಾನಗಳನ್ನು ಮೀಸಲಿರಿಸುವ ಮೂಲಕ ತಮ್ಮ ನಿಯಂತ್ರಣವನ್ನು ಚಲಾಯಿಸುವುದನ್ನು ಮುಂದುವರಿಸಿದರು. ವಿಶೇಷವಾಗಿ, ಬ್ರಿಟಿಷ್ ಆಡಳಿತಕ್ಕೆ ಸಹಾನುಭೂತಿ ಹೊಂದಿರುವ ಮತ್ತು ಕಡಿಮೆ ಸಂಘರ್ಷದಿಂದ ಕೂಡಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಅವರ ನಗರ ಸಹವರ್ತಿಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೊತ್ತುಮಾಡಲಾಯಿತು.[೨೦] ಬ್ರಾಹ್ಮಣೇತರರಿಗೆ, ಭೂಮಾಲೀಕರಿಗೆ, ಉದ್ಯಮಿಗಳಿಗೆ ಮತ್ತು ಕಾಲೇಜು ಪದವೀಧರರಿಗೆ ಸ್ಥಾನಗಳನ್ನು ಮೀಸಲಿರಿಸಲಾಯಿತು. ಮಿಂಟೊ-ಮಾರ್ಲೆ ಸುಧಾರಣೆಗಳ ಅವಿಭಾಜ್ಯ ಭಾಗವಾಗಿ ಕೋಮು ಪ್ರಾತಿನಿಧ್ಯದ ತತ್ವವನ್ನು ಮತ್ತು ಇನ್ನೂ ಇತ್ತೀಚೆಗೆ ಕಾಂಗ್ರೆಸ್-ಮುಸ್ಲಿಂ ಲೀಗ್ ಲಕ್ನೊ ಒಪ್ಪಂದವನ್ನು ಪುನರ್ದೃಢೀಕರಿಸಲಾಯಿತು. ಪ್ರಾಂತೀಯ ಮತ್ತು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ಗಳು ಎರಡರಲ್ಲೂ ಮುಸ್ಲಿಮರು ಸಿಖ್ಖರು, ಭಾರತೀಯ ಕ್ರೈಸ್ತರು, ಆಂಗ್ಲೊ-ಇಂಡಿಯನ್ನರು ಮತ್ತು ಯುರೋಪಿಯನ್ ನಿವಾಸಿಗಳಿಗೆ ಸ್ಥಾನಗಳನ್ನು ಮೀಸಲಿರಿಸಲಾಯಿತು.[೨೦] ಮೊಂಟಾಗು-ಚೆಲ್ಮ್ಸ್‌ಫೋರ್ಡ್ ಸುಧಾರಣೆಗಳು ಭಾರತೀಯರಿಗೆ ಶಾಸಕಾಂಗ ಅಧಿಕಾರವನ್ನು ವಿಶೇಷವಾಗಿ ಪ್ರಾಂತೀಯ ಮಟ್ಟದಲ್ಲಿ ಚಲಾಯಿಸಲು ಗಮನಾರ್ಹ ಅವಕಾಶವನ್ನು ಒದಗಿಸಿತು. ಆದಾಗ್ಯೂ, ಸೀಮಿತ ಸಂಖ್ಯೆಯ ಅರ್ಹ ಮತದಾರರ ಮೂಲಕ, ಪ್ರಾಂತೀಯ ಶಾಸಕಾಂಗಗಳಿಗೆ ಕಡಿಮೆ ಬಜೆಟ್(ಆಯವ್ಯಯ)ಗಳು ಮತ್ತು ಬ್ರಿಟಿಷ್ ನಿಯಂತ್ರಣದ ಸಾಧನಗಳು ಎಂದು ಭಾವಿಸಲಾದ ಗ್ರಾಮೀಣ ಮತ್ತು ವಿಶೇಷ ಆಸಕ್ತಿಯ ಸ್ಥಾನಗಳ ಉಪಸ್ಥಿತಿ ಮೂಲಕ ಆ ಅವಕಾಶವನ್ನು ಕೂಡ ನಿರ್ಬಂಧಿಸಲಾಗಿತ್ತು.[೨೦]

೧೯೩೦ರ ದಶಕ: ಭಾರತ ಸರ್ಕಾರದ ಕಾಯಿದೆ(೧೯೩೫)

[ಬದಲಾಯಿಸಿ]
1931ರ ಅಕ್ಟೋಬರ್‌ನಲ್ಲಿ ಲಂಡನ್‌ನಲ್ಲಿ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಮಹಾತ್ಮ ಗಾಂಧಿಯವರ ಬಲಪಕ್ಕದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ರಾಮ್ಸಾಯ್ ಮೆಕ್‌ಡೊನಾಲ್ಡ್.

೧೯೩೫ರಲ್ಲಿ, ದುಂಡು ಮೇಜಿನ ಸಭೆಗಳ ಬಳಿಕ, ಬ್ರಿಟಿಷ್ ಸಂಸತ್ತು ೧೯೩೫ರ ಭಾರತ ಸರ್ಕಾರದ ಕಾಯಿದೆಯನ್ನು ಅನುಮೋದಿಸಿತು. ಬ್ರಿಟಿಷ್ ಭಾರತದ ಎಲ್ಲ ಪ್ರಾಂತ್ಯಗಳಲ್ಲಿ ಸ್ವತಂತ್ರ ಶಾಸಕಾಂಗ ಅಸೆಂಬ್ಲಿಗಳ ಸ್ಥಾಪನೆಗೆ ಅದು ಅಧಿಕಾರ ನೀಡಿತು. ಬ್ರಿಟಿಷ್ ಪ್ರಾಂತ್ಯಗಳು ಮತ್ತು ರಾಜಪ್ರಭುತ್ವದ ರಾಜ್ಯಗಳನ್ನು ಒಳಗೊಂಡ ಕೇಂದ್ರ ಸರ್ಕಾರದ ರಚನೆಗೆ ಮತ್ತು ಮುಸ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಅದು ಅಧಿಕಾರ ನೀಡಿತು.[] ಮುಂದಿನ ಸ್ವತಂತ್ರ ಭಾರತದ ಸಂವಿಧಾನವು ಈ ಕಾಯಿದೆಯ ಮೂಲಪಾಠಕ್ಕೆ ಅತ್ಯಂತ ಋಣಿಯಾಗಿದೆ.[೨೧] ಆ ಕಾಯಿದೆಯು ಎರಡು ಶಾಸನಸಭೆಗಳುಳ್ಳ ರಾಷ್ಟ್ರೀಯ ಸಂಸತ್ತಿಗೆ ಮತ್ತು ಬ್ರಿಟಿಷ್ ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಾಹಕ ಶಾಖೆಗೆ ಅವಕಾಶ ಕಲ್ಪಿಸಿತು. ರಾಷ್ಟ್ರೀಯ ಒಕ್ಕೂಟ ವ್ಯವಸ್ಥೆ ಈಡೇರದಿದ್ದರೂ, ಪ್ರಾಂತೀಯ ಅಸೆಂಬ್ಲಿಗಳಿಗೆ ೧೯೩೭ರಲ್ಲಿ ರಾಷ್ಟ್ರವ್ಯಾಪಿ ಚುನಾವಣೆಗಳು ನಡೆದವು. ಆರಂಭದ ಅನಿಶ್ಚಯತೆಯ ನಡುವೆಯೂ, ಕಾಂಗ್ರೆಸ್ ಚುನಾವಣೆಗಳಲ್ಲಿ ಭಾಗವಹಿಸಿತು ಮತ್ತು ಬ್ರಿಟಿಷ್ ಭಾರತದ ಹನ್ನೊಂದು ಪ್ರಾಂತ್ಯಗಳ ಪೈಕಿ ಏಳರಲ್ಲಿ ಜಯಗಳಿಸಿದವು.[೨೨] ಈ ಪ್ರಾಂತ್ಯಗಳಲ್ಲಿ ವ್ಯಾಪಕ ಅಧಿಕಾರಗಳೊಂದಿಗೆ ಕಾಂಗ್ರೆಸ್ ಸರ್ಕಾರಗಳನ್ನು ಸ್ಥಾಪಿಸಲಾಯಿತು. ಗ್ರೇಟ್ ಬ್ರಿಟನ್‌ನಲ್ಲಿ, ಈ ಜಯಗಳು ನಂತರ ಭಾರತದ ಸ್ವಾತಂತ್ರ್ಯದ ಕಲ್ಪನೆಗೆ ಘಟನೆಗಳ ದಿಕ್ಕನ್ನು ಬದಲಾಯಿಸಿತು.[೨೨]

೨ನೇ ಜಾಗತಿಕ ಸಮರ

[ಬದಲಾಯಿಸಿ]

೧೯೩೯ರಲ್ಲಿ ಎರಡನೇ ಜಾಗತಿಕ ಸಮರದ ಆಸ್ಫೋಟನದೊಂದಿಗೆ, ವೈಸರಾಯ್ ಲಾರ್ಡ್ ಲಿನ್‌ಲಿತ್‌ಗೋ ಭಾರತೀಯ ನಾಯಕರ ಜತೆ ಸಮಾಲೋಚಿಸದೇ ಭಾರತದ ಪರವಾಗಿ ಯುದ್ಧ ಘೋಷಿಸಿದರು. ಇದು ಕಾಂಗ್ರೆಸ್ ಪ್ರಾಂತೀಯ ಸಚಿವಾಲಯಗಳು ಪ್ರತಿಭಟನಾರ್ಥವಾಗಿ ರಾಜೀನಾಮೆ ನೀಡುವಲ್ಲಿ ದಾರಿಯಾಯಿತು. ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಲೀಗ್ ಯುದ್ಧದ ಪ್ರಯತ್ನದಲ್ಲಿ ಬ್ರಿಟನ್‌ಗೆ ಬೆಂಬಲವಾಗಿ ನಿಂತಿತು. ಆದಾಗ್ಯೂ, ಈ ನಿಲುವಿನಿಂದಾಗಿ ಕಾಂಗ್ರೆಸ್ ಪ್ರಾಬಲ್ಯದ ಸ್ವತಂತ್ರ ಭಾರತದಲ್ಲಿ ಮುಸ್ಲಿಮರ ವಿರುದ್ಧ ಪಕ್ಷಪಾತದ ಧೋರಣೆ ಅನುಸರಿಸಲಾಗುತ್ತದೆಂಬ ದೃಷ್ಟಿಕೋನವನ್ನು ಉಂಟುಮಾಡಿತು. ಬ್ರಿಟಿಷ್ ಸರ್ಕಾರ ಕ್ರಿಪ್ಸ್ ನಿಯೋಗದ ಮೂಲಕ, ನಂತರ ಸ್ವಾತಂತ್ರ್ಯ ನೀಡುವುದಕ್ಕೆ ಪ್ರತಿಯಾಗಿ ಯುದ್ಧ ಪ್ರಯತ್ನದಲ್ಲಿ ಭಾರತೀಯ ರಾಷ್ಟ್ರೀಯವಾದಿಗಳ ಸಹಕಾರ ಪಡೆಯಲು ಯತ್ನಿಸಿದರು. ಆದಾಗ್ಯೂ, ಕಾಂಗ್ರೆಸ್ ಮತ್ತು ಅವರ ನಡುವಿನ ಮಾತುಕತೆಗಳು ವಿಫಲವಾಯಿತು. ಗಾಂಧಿ ತರುವಾಯ ಭಾರತ ಬಿಟ್ಟು ತೊಲಗಿ(ಕ್ವಿಟ್ ಇಂಡಿಯ)ಚಳವಳಿಯನ್ನು ೧೯೪೨ರ ಆಗಸ್ಟ್‌ನಲ್ಲಿ ಆರಂಭಿಸುವ ಮೂಲಕ ಬ್ರಿಟಿಷರು ಭಾರತ ಬಿಟ್ಟು ಹೋಗುವಂತೆ ಒತ್ತಾಯಿಸಿದರು ಅಥವಾ ರಾಷ್ಟ್ರವ್ಯಾಪಿ ನಾಗರಿಕ ಅಸಹಕಾರ ಚಳವಳಿ ಎದುರಿಸುವಂತೆ ಎಚ್ಚರಿಸಿದರು. ಇನ್ನಿತರ ಕಾಂಗ್ರೆಸ್ ಮುಖಂಡರ ಜತೆ, ಗಾಂಧಿಯವರನ್ನು ತಕ್ಷಣವೇ ಸೆರೆಮನೆಯಲ್ಲಿ ಇರಿಸಲಾಯಿತು. ವಿದ್ಯಾರ್ಥಿಗಳು ಮತ್ತು ನಂತರ ರೈತ ರಾಜಕೀಯ ಗುಂಪುಗಳಿಂದ ದೇಶದಲ್ಲಿ ಹಿಂಸಾಚಾರದ ಪ್ರತಿಭಟನೆಗಳು ಭುಗಿಲೆದ್ದವು. ವಿಶೇಷವಾಗಿ ಪೂರ್ವ ಸಂಯುಕ್ತ ಪ್ರಾಂತ್ಯಗಳು, ಬಿಹಾರ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಇವು ಉಲ್ಬಣಿಸಿದವು. ಭಾರತದಲ್ಲಿ ದೊಡ್ಡ ಯುದ್ಧ ಕಾಲದ ಬ್ರಿಟಿಷ್ ಸೇನೆಯ ಉಪಸ್ಥಿತಿಯಿಂದ ೬ ವಾರಗಳಿಗಿಂತ ಸ್ವಲ್ವ ಹೆಚ್ಚಿನ ಕಾಲದಲ್ಲಿ ಬಹುಮಟ್ಟಿನ ಚಳವಳಿಯನ್ನು ಹತ್ತಿಕ್ಕಲು ದಾರಿ ಕಲ್ಪಿಸಿತು.[೨೩] ಆದರೆ ಈ ಚಳವಳಿಯ ಒಂದು ಭಾಗವು ಸ್ವಲ್ಪ ಕಾಲ ನೇಪಾಳದ ಗಡಿಯಲ್ಲಿ ಭೂಗತ ಹಂಗಾಮಿ ಸರ್ಕಾರವನ್ನು ರಚಿಸಿಕೊಂಡಿತು.[೨೩] ಭಾರತದ ಇತರ ಭಾಗಗಳಲ್ಲಿ, ಈ ಚಳವಳಿಯು ಕಡಿಮೆ ಸ್ವಯಂಪ್ರೇರಿತವಾಗಿತ್ತು ಮತ್ತು ಪ್ರತಿಭಟನೆ ತೀವ್ರಸ್ವರೂಪ ಪಡೆದಿರಲಿಲ್ಲ. ಆದರೆ ಇದು ೧೯೪೩ರ ಬೇಸಿಗೆವರೆಗೆ ವಿರಳವಾಗಿ ಉಳಿದುಕೊಂಡಿತು.[೨೪]

ಕಾಂಗ್ರೆಸ್ ಮುಖಂಡರು ಜೈಲಿನಲ್ಲಿರುವುದರೊಂದಿಗೆ, ಸುಭಾಶ್ ಬೋಸ್ ಕಡೆಗೆ ಗಮನ ಹರಿಯಿತು. ೧೯೩೯ರಲ್ಲಿ ಹೆಚ್ಚು ಸಂಪ್ರದಾಯವಾದಿ ವರಿಷ್ಠ ಮಂಡಳಿಯ ಜತೆ ಭಿನ್ನಾಭಿಪ್ರಾಯದಿಂದ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು.[೨೫] ಭಾರತಕ್ಕೆ ಬಲಾತ್ಕಾರದಿಂದ ವಿಮೋಚನೆ ಪಡೆಯಲು ಬೋಸ್ ಆಕ್ಸಿಸ್ ಶಕ್ತಿಗಳ(ಜರ್ಮನಿ, ಜಪಾನ್, ಇಟಲಿ) ನೆರವಿಗೆ ತಿರುಗಿದರು.[೨೬] ಜಪಾನಿನ ಬೆಂಬಲದೊಂದಿಗೆ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸಂಘಟಿಸಿದರು. ಈ ಸೇನೆಯು ಬಹುತೇಕ ಬ್ರಿಟಿಷ್ ಭಾರತೀಯ ಸೇನೆಗೆ ಸೇರಿದ್ದ, ಜಪಾನ್ ಸಿಂಗಪುರದಲ್ಲಿ ಸೆರೆಹಿಡಿದುಕೊಂಡಿದ್ದ ಭಾರತೀಯ ಸೇನೆಯನ್ನು ಒಳಗೊಂಡಿತ್ತು. ಯುದ್ಧದ ಆರಂಭದೊಂದಿಗೆ, ಜಪಾನಿನ ರಹಸ್ಯ ಸೇವೆಯು ಆಗ್ನೇಯ ಏಷ್ಯಾದಲ್ಲಿ ಬ್ರಿಟಿಷ್ ಯುದ್ಧ ಪ್ರಯತ್ನವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಅಶಾಂತಿಯನ್ನು ಉತ್ತೇಜಿಸಿತು.[೨೭] ವಶಪಡಿಸಿಕೊಂಡ ಪ್ರದೇಶಗಳಲ್ಲಿ ಅನೇಕ ಕೈಗೊಂಬೆ ಮತ್ತು ಹಂಗಾಮಿ ಸರ್ಕಾರಗಳಿಗೆ ಬೆಂಬಲವಾಗಿ ನಿಂತಿತು. ಇವುಗಳಲ್ಲಿ ಬರ್ಮಾ, ಫಿಲಿಪ್ಪೀನ್ಸ್ ‌ಮತ್ತು ವಿಯೆಟ್ನಾಂ,ಬೋಸ್ ಮುಖಂಡತ್ವದ ಅಜಾದ್ ಹಿಂದ್ (ಸ್ವತಂತ್ರ ಭಾರತ), ಹಂಗಾಮಿ ಸರ್ಕಾರ ಸೇರಿವೆ.[೨೮] ಬೋಸ್ ಪ್ರಯತ್ನಗಳು ಆದಾಗ್ಯೂ ಅಲ್ಪಕಾಲೀನವಾಗಿತ್ತು. ೧೯೪೪ರ ಹಿಮ್ಮೊಗಗಳ ನಂತರ, ಬಲವನ್ನು ಹೆಚ್ಚಿಸಿಕೊಂಡ ಬ್ರಿಟಿಷ್ ಭಾರತೀಯ ಸೇನೆ ೧೯೪೫ರಲ್ಲಿ ಮೊದಲಿಗೆ ಜಪಾನಿನ ಯು ಗೊ ಕಾರ್ಯಾಚರಣೆಯನ್ನು ಮೊದಲಿಗೆ ನಿಲ್ಲಿಸಿತು ಮತ್ತು ನಂತರ ಹಿಮ್ಮೊಗ ಚಲಿಸುವಂತೆ ಮಾಡಿ, ಬರ್ಮಾ ದಂಡಯಾತ್ರೆಯ ಯಶಸ್ವಿ ಭಾಗವನ್ನು ಆರಂಭಿಸಿತು. ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಸಿಂಗಪುರದ ಮರುವಶದೊಂದಿಗೆ ಶರಣಾಯಿತು. ಅದಾದ ನಂತರ ಶೀಘ್ರದಲ್ಲೇ ಬೋಸ್ ವಿಮಾನ ಅಪಘಾತದಲ್ಲಿ ಅಸುನೀಗಿದರು. ಕೆಂಪು ಕೋಟೆಯಲ್ಲಿ ೧೯೪೫ರ ಕೊನೆಯಲ್ಲಿ ನಡೆದ INAಸೈನಿಕರ ವಿಚಾರಣೆಗಳಿಂದ ಭಾರತದಲ್ಲಿ ವ್ಯಾಪಕ ಸಾರ್ವಜನಿಕ ಅಶಾಂತಿ ಮತ್ತು ರಾಷ್ಟ್ರೀಯವಾದಿ ಹಿಂಸಾಚಾರಗಳು ಭುಗಿಲೆದ್ದವು.[೨೯]

ಅಧಿಕಾರದ ವರ್ಗಾವಣೆ

[ಬದಲಾಯಿಸಿ]
1909ರ ಚಾಲ್ತಿಯಲ್ಲಿದ್ದ ಧರ್ಮಗಳು, 1909ರ ಬ್ರಿಟಿಷ್ ಭಾರತ ಸಾಮ್ರಾಜ್ಯದ ನಕ್ಷೆ, ವಿವಿಧ ಜಿಲ್ಲೆಗಳಲ್ಲಿ ಜನಸಂಖ್ಯೆಯ ಚಾಲ್ತಿಯಲ್ಲಿದ್ದ ಬಹುತೇಕ ಧರ್ಮಗಳನ್ನು ತೋರಿಸಿವೆ.

೧೯೪೬ರ ಜನವರಿಯಲ್ಲಿ ಸಶಸ್ತ್ರ ಸೇವೆಗಳಲ್ಲಿ ಅನೇಕ ದಂಗೆಗಳು ಹುಟ್ಟಿದವು. RAFಯೋಧರಿಂದ ಇದು ಆರಂಭವಾಗಿದ್ದು, ಬ್ರಿಟನ್‌ಗೆ ಅವರನ್ನು ನಿಧಾನವಾಗಿ ಕಳಿಸುತ್ತಿರುವ ಬಗ್ಗೆ ಹತಾಶರಾಗಿದ್ದರು.[೩೦] ಮುಂಬಯಿನಲ್ಲಿ ೧೯೪೬ರ ಫೆಬ್ರವರಿಯಲ್ಲಿ ರಾಯಲ್ ಇಂಡಿಯನ್ ನೇವಿಯ ದಂಗೆ, ಅದನ್ನು ಅನುಸರಿಸಿ ಕೊಲ್ಕತ್ತಾ, ಮದ್ರಾಸ್ ಮತ್ತು ಕರಾಚಿಯಲ್ಲಿ ಇತರೆ ದಂಗೆಗಳಿಂದ ಗಂಭೀರ ಹಂತವನ್ನು ತಲುಪಿದವು. ದಂಗೆಗಳನ್ನು ಶೀಘ್ರಗತಿಯಲ್ಲಿ ದಮನಿಸಲಾಯಿತಾದರೂ,ಭಾರತದಲ್ಲಿ ಅದಕ್ಕೆ ವಿಪುಲ ಸಾರ್ವಜನಿಕ ಬೆಂಬಲ ಸಿಕ್ಕಿತು ಮತ್ತು ಬ್ರಿಟನ್‌ನ ಹೊಸ ಲೇಬರ್ ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಪ್ರೇರೇಪಣೆ ನೀಡಿತು. ಸೆಕ್ರೆಟರಿ ಆಫ್ ಸ್ಟೇಟ್ ಲಾರ್ಡ್ ಪೆಥಿಕ್ ಲಾರೆನ್ಸ್ ನೇತೃತ್ವದಲ್ಲಿ ನಾಲ್ಕು ವರ್ಷಗಳ ಮುಂಚೆ ಭೇಟಿ ನೀಡಿದ್ದ ಸರ್ ಸ್ಟಾಫರ್ಡ್ ಕ್ರಿಪ್ಸ್ ಅವರು ಸೇರಿದಂತೆ ಭಾರತಕ್ಕೆ ಕ್ಯಾಬಿನೆಟ್ ನಿಯೋಗ ಹೊರಟಿತು.[೩೦]

೧೯೪೬ರ ಆರಂಭದಲ್ಲಿ, ಭಾರತದಲ್ಲಿ ಹೊಸ ಚುನಾವಣೆಗಳಿಗೆ ಕರೆ ನೀಡಲಾಯಿತು. ಹನ್ನೊಂದು ಪ್ರಾಂತ್ಯಗಳ ಪೈಕಿ ಎಂಟರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಗಳಿಸಿತು.[೩೧] ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಮಾತುಕತೆಗಳು ವಿಭಜನೆಯ ವಿಷಯಕ್ಕೆ ಸಂಬಂಧಿಸಿದಂತೆ ಕುಂಠಿತವಾಯಿತು. ಜಿನ್ನಾ ಬ್ರಿಟಿಷ್ ಭಾರತದಲ್ಲಿ ಮುಸ್ಲಿಮರಿಗೆ ತಾಯ್ನಾಡು ಬೇಡಿಕೆಯ ಬಗ್ಗೆ ಗಮನಸೆಳೆಯುವ ಗುರಿಯೊಂದಿಗೆ ೧೯೪೬ರ ಆಗಸ್ಟ್ ೧೬ರನ್ನು ಡೈರೆಕ್ಟ್ ಆಕ್ಷನ್ ಡೇ ಎಂದು ಘೋಷಿಸಿದರು. ಆ ದಿನದಂದು ಕೊಲ್ಕತಾದಲ್ಲಿ ಹಿಂದು-ಮುಸ್ಲಿಂ ಕೋಮುಗಲಭೆ ಭುಗಿಲೆದ್ದು, ಶೀಘ್ರದಲ್ಲೇ ಅದು ಭಾರತದಾದ್ಯಂತ ವ್ಯಾಪಿಸಿತು. ಭಾರತ ಸರ್ಕಾರ ಮತ್ತು ಕಾಂಗ್ರೆಸ್ ಈ ವಿದ್ಯಮಾನಗಳ ಕಾಲಗತಿಯಿಂದ ಕಂಪಿಸಿದರೂ, ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ನೇತೃತ್ವದ ಮಧ್ಯಂತರ ಸರ್ಕಾರ ಸ್ಥಾಪಿಸಲಾಯಿತು. ಸಂಯುಕ್ತ ಭಾರತದ ಪ್ರಧಾನ ಮಂತ್ರಿಯಾಗಿ ಜವಾಹರ್‌ಲಾಲ್ ನೆಹರೂ ನೇಮಕವಾದರು.

ನಂತರ,ಅದೇ ವರ್ಷ ಎರಡನೇ ಜಾಗತಿಕ ಯುದ್ಧದ ಪರಿಣಾಮವಾಗಿ ಬೊಕ್ಕಸ ಬರಿದಾಗಿದ್ದ ಬ್ರಿಟನ್ನಿನ ಲೇಬರ್ ಪಕ್ಷದ ಸರ್ಕಾರ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲು ನಿರ್ಧರಿಸಿತು. ೧೯೪೭ರ ಪೂರ್ವದಲ್ಲಿ ಬ್ರಿಟನ್ ೧೯೪೮ರ ಜೂನ್‌ಗೆ ಮುಂಚಿತವಾಗಿ ಅಧಿಕಾರ ಹಸ್ತಾಂತರದ ಇಚ್ಛೆಯನ್ನು ಪ್ರಕಟಿಸಿತು.

ಸ್ವಾತಂತ್ರ್ಯ ಸಮೀಪಿಸುತ್ತಿದ್ದಂತೆ, ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ಹಿಂದುಗಳು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿಯಿತು. ಹೆಚ್ಚಿದ ಹಿಂಸಾಚಾರದ ಸಂಭಾವ್ಯತೆಗೆ ಬ್ರಿಟಿಷ್ ಸೇನೆ ಸಿದ್ಧವಾಗಿಲ್ಲದಿದ್ದ ನಡುವೆ, ಹೊಸ ವೈಸರಾಯ್ ಲೂಯಿಸ್ ಮೌಂಟ್‌ಬೇಟನ್ ಅಧಿಕಾರ ಹಸ್ತಾಂತರದ ದಿನಾಂಕವನ್ನು ಮುಂದಕ್ಕೆ ತಂದರು. ಸ್ವಾತಂತ್ರ್ಯಕ್ಕಾಗಿ ಪರಸ್ಪರ ಒಪ್ಪಿಗೆಯ ಯೋಜನೆಗೆ ಆರು ತಿಂಗಳಿಗಿಂತ ಕಡಿಮೆ ಕಾಲಾವಧಿಗೆ ಅವಕಾಶ ನೀಡಿದರು. ೧೯೪೭ರ ಜೂನ್‌ನಲ್ಲಿ, ಕಾಂಗ್ರೆಸ್ ಪರವಾಗಿ ನೆಹರೂ ಮತ್ತು ಅಬ್ದುಲ್ ಕಲಾಂ ಆಜಾದ್, ಮುಸ್ಲಿಂ ಲೀಗ್ ಪ್ರತಿನಿಧಿಸುವ ಜಿನ್ನಾ, ಅಸ್ಪೃಶ್ಯರ ಸಮುದಾಯವನ್ನು ಪ್ರತಿನಿಧಿಸುವ ಬಿ.ಆರ್.ಅಂಬೇಡ್ಕರ್ ಮತ್ತು ಸಿಖ್ಖರನ್ನು ಪ್ರತಿನಿಧಿಸುವ ಮಾಸ್ಟರ್ ತಾರಾ ಸಿಂಗ್ ಮುಂತಾದ ರಾಷ್ಟ್ರೀಯವಾದಿ ಮುಖಂಡರು ಧಾರ್ಮಿಕತೆಯ ಆಧಾರದ ಮೇಲೆ ರಾಷ್ಟ್ರದ ವಿಭಜನೆಗೆ ಒಪ್ಪಿಗೆ ಸೂಚಿಸಿದರು. ಹಿಂದು ಮತ್ತು ಸಿಖ್ ಪ್ರಾಬಲ್ಯದ ಪ್ರದೇಶಗಳನ್ನು ನೂತನ ಭಾರತದಲ್ಲಿ ಸೇರಿಸಲಾಯಿತು ಮತ್ತು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳನ್ನು ಒಂದುಗೂಡಿಸಿ ನೂತನ ರಾಷ್ಟ್ರ ಪಾಕಿಸ್ತಾನ ರಚನೆಯಾಯಿತು. ಈ ಯೋಜನೆಯಲ್ಲಿ ಪಂಜಾಬ್ ಮತ್ತು ಬಂಗಾಳದ ಮುಸ್ಲಿಂ ಬಹುಮತದ ಪ್ರಾಂತ್ಯಗಳ ವಿಭಜನೆಯೂ ಸೇರಿತ್ತು.

ಲಕ್ಷಾಂತರ ಮುಸ್ಲಿಂ, ಸಿಖ್ಖರು ಮತ್ತು ಹಿಂದು ನಿರಾಶ್ರಿತರು ನೂತನವಾಗಿ ರಚಿಸಿದ ಗಡಿಗಳತ್ತ ವಲಸೆ ಹೋದರು. ಪಂಜಾಬ್‌ನಲ್ಲಿ, ಹೊಸ ಗಡಿ ರೇಖೆಗಳಿಂದ ಸಿಖ್ ಪ್ರದೇಶಗಳು ಇಬ್ಭಾಗ ಉಂಟಾದಾಗ, ವ್ಯಾಪಕ ರಕ್ತಪಾತ ಉಂಟಾಯಿತು. ಬಂಗಾಳ ಮತ್ತು ಬಿಹಾರದಲ್ಲಿ ಗಾಂಧಿಯವರ ಉಪಸ್ಥಿತಿಯು ಕೋಮು ಉದ್ವಿಗ್ನತೆಯನ್ನು ಶಮನಗೊಳಿಸಿತು ಮತ್ತು ಹಿಂಸಾಚಾರವು ಸೀಮಿತಗೊಂಡಿತ್ತು. ಒಟ್ಟಾರೆಯಾಗಿ, ಹೊಸ ಗಡಿಗಳ ಎರಡೂ ಬದಿಗಳಲ್ಲಿ ಹಿಂಸಾಚಾರದಿಂದ ೨೫೦,೦೦೦ಮತ್ತು ೫೦೦,೦೦೦ ನಡುವೆ ಜನರು ಅಸುನೀಗಿದರು.[೩೨] ೧೯೪೭ರ ಆಗಸ್ಟ್ ೧೪ರಂದು, ಹೊಸ ಪಾಕಿಸ್ತಾನದ ಪ್ರದೇಶ ಅಸ್ತಿತ್ವಕ್ಕೆ ಬಂದಿತು. ಮುಹಮ್ಮದ್ ಅಲಿ ಜಿನ್ನಾ ಕರಾಚಿಯಲ್ಲಿ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕವಾದರು. ಮರುದಿನ ೧೯೪೭ರ ಆಗಸ್ಟ್ ೧೫ರಂದು ಈಗ ಸಣ್ಣ ಯೂನಿಯನ್ ಆಫ್ ಇಂಡಿಯ ಆಗಿದ್ದ ಭಾರತವು ಸ್ವತಂತ್ರ ರಾಷ್ಟ್ರವಾಯಿತು ಮತ್ತು ನವದೆಹಲಿಯಲ್ಲಿ ಅಧಿಕೃತ ಸಮಾರಂಭಗಳು ನಡೆದವು. ಜವಾಹರಲಾಲ್ ನೆಹರೂ ಪ್ರಧಾನಮಂತ್ರಿ ಹುದ್ದೆಯನ್ನು ವಹಿಸಿಕೊಂಡರು ಮತ್ತು ವೈಸರಾಯ್ ಲೂಯಿಸ್ ಮೌಂಟ್‌ಬ್ಯಾಟನ್ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ಉಳಿದರು.

ಟಿಪ್ಪಣಿಗಳು

[ಬದಲಾಯಿಸಿ]
  1. (Stein 2001, p. 259), (Oldenburg 2007)
  2. (Oldenburg 2007), (Stein 2001, p. 258)
  3. ೩.೦ ೩.೧ (Oldenburg 2007)
  4. (Stein 2001, p. 258)
  5. (Stein 2001, p. 159)
  6. ೬.೦ ೬.೧ ೬.೨ (Stein 2001, p. 260)
  7. (Bose & Jalal 2003, p. 117)
  8. ೮.೦ ೮.೧ ೮.೨ ೮.೩ Brown 1994, pp. 197–198
  9. ಒಲಿಂಪಿಕ್ ಗೇಮ್ಸ್ ಆಂಟ್‌ವರ್ಪ್ 1920: ಅಫಿಶಿಯಲ್ ರಿಪೋರ್ಟ್ ನಾಂಬ್ರೆ ಡೆ ಬ್ಯಾಷನ್ಸ್ ರೆಪ್ರೆಸೆಂಟೀಸ್ ಪುಟ ೧೬೮ ಕ್ವೋಟ್: "೩೧ ನೇಷನ್ಸ್ avaient accepté l'invitation du Comité Olympique Belge: ... la Grèce - la Hollande Les Indes Anglaises - l'Italie - le Japon ..."
  10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ೧೦.೭ ೧೦.೮ Brown 1994, pp. 203–204
  11. ೧೧.೦ ೧೧.೧ ೧೧.೨ Metcalf & Metcalf 2006, p. 166
  12. ೧೨.೦ ೧೨.೧ ೧೨.೨ ೧೨.೩ Brown 1994, pp. 201–203
  13. Lovett 1920, p. 94, 187-191
  14. Sarkar 1921, p. 137
  15. Tinker 1968, p. 92
  16. ೧೬.೦ ೧೬.೧ ೧೬.೨ Spear 1990, p. 190
  17. ೧೭.೦ ೧೭.೧ ೧೭.೨ Brown 1994, pp. 195–196
  18. ೧೮.೦ ೧೮.೧ ೧೮.೨ Stein 2001, p. 304
  19. Ludden 2002, p. 208
  20. ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ ೨೦.೬ ೨೦.೭ ೨೦.೮ Brown 1994, pp. 205–207
  21. (Low 1993, pp. 40, 156)
  22. ೨೨.೦ ೨೨.೧ (Low 1993, p. 154)
  23. ೨೩.೦ ೨೩.೧ (Metcalf & Metcalf 2006, pp. 206–207)
  24. Bandyopadhyay 2004, pp. 418–420
  25. Nehru 1942, p. 424
  26. (Low 1993, pp. 31–31)
  27. Lebra 1977, p. 23
  28. Lebra 1977, p. 31, (Low 1993, pp. 31–31)
  29. Chaudhuri 1953, p. 349, Sarkar 1983, p. 411,Hyam 2007, p. 115
  30. ೩೦.೦ ೩೦.೧ (Judd 2004, pp. 172–173)
  31. (Judd 2004, p. 172)
  32. (Khosla 2001, p. 299)

ಉಲ್ಲೇಖಗಳು

[ಬದಲಾಯಿಸಿ]

ಸಮಕಾಲೀನ ಸಾಮಾನ್ಯ ಇತಿಹಾಸಗಳು

[ಬದಲಾಯಿಸಿ]

ಪ್ರಬಂಧಗಳು ಮತ್ತು ಸಂಗ್ರಹಗಳು

[ಬದಲಾಯಿಸಿ]

ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್. ೨೧೬ ಪುಟಗಳು. ISBN ೦-೧೯-೫೭೯೫೫೧-೨.

ಪತ್ರಿಕೆಗಳಲ್ಲಿ ಲೇಖನಗಳು ಅಥವಾ ಸಂಗ್ರಹಗಳು

[ಬದಲಾಯಿಸಿ]
  • .

ಪತ್ರಿಕೆಗಳಲ್ಲಿ ಲೇಖನಗಳು ಅಥವಾ ಸಂಗ್ರಹಗಳು

[ಬದಲಾಯಿಸಿ]

ಶ್ರೇಷ್ಠ ಇತಿಹಾಸಗಳು ಮತ್ತು ಗೆಜೆಟಿಯರ್‌ಗಳು

[ಬದಲಾಯಿಸಿ]
  • Imperial Gazetteer of India vol. IV (1907), The Indian Empire, Administrative, Published under the authority of His Majesty's Secretary of State for India in Council, Oxford at the Clarendon Press. Pp. xxx, 1 map, 552.
  • Lovett, Sir Verney (1920), A History of the Indian Nationalist Movement, New York, Frederick A. Stokes Company, ISBN 81-7536-249-9
  • Majumdar, R. C.; Raychaudhuri, H. C.; Datta, Kalikinkar (1950), An Advanced History of India, London: Macmillan and Company Limited. 2nd edition. Pp. xiii, 1122, 7 maps, 5 coloured maps. {{citation}}: Text "authorlink1" ignored (help).
  • Smith, Vincent A. (1921), India in the British Period: Being Part III of the Oxford History of India, Oxford: At the Clarendon Press. 2nd edition. Pp. xxiv, 316 (469-784) {{citation}}: Text "authorlink1" ignored (help).

ತೃತೀಯಕ ಮೂಲಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಇವನ್ನೂ ಗಮನಿಸಿ

[ಬದಲಾಯಿಸಿ]
  • ಬ್ರಿಟಿಷ್ ಆಡಳಿತ
  • ಭಾರತದಲ್ಲಿ ಕಂಪನಿ ಆಡಳಿತ
  • ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿ