ವಿಷಯಕ್ಕೆ ಹೋಗು

ಲಾರ್ಡ್ ಡಾಲ್ಹೌಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾರ್ಡ್ ಡಾಲ್ಹೌಸಿ (1812-1860.) ಡಾಲ್‍ಹೌಸಿಯ ಪ್ರಥಮ ಮಾಕ್ರ್ವೆಸ್ ಮತ್ತು ಹತ್ತನೆಯ ಅರ್ಲ್. ಬ್ರಿಟಿಷ್ ರಾಜಕಾರಣಿ. ಭಾರತದ ಗವರ್ನರ್-ಜನರಲ್ (1848-1856). ಜೇಮ್ಸ್ ಆಂಡ್ರೂ ಬ್ರೌನ್ ರ್ಯಾಮ್ಸೆ ಎಂಬುದು ಈತನ ಮೊದಲ ಹೆಸರು. ಈತನ ಅಧಿಕಾರ ಕಾಲದಲ್ಲಿ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಿಶೇಷವಾಗಿ ವಿಸ್ತಾರಗೊಂಡಿತು.

ಭಾರತಕ್ಕೆ ಬರುವ ಮೊದಲು[ಬದಲಾಯಿಸಿ]

ಸ್ಕಾಟ್ಲೆಂಡಿನ ಡಾಲ್‍ಹೌಸಿ ದುರ್ಗದಲ್ಲಿ 1812ರಲ್ಲಿ ಏಪ್ರಿಲ್ 22ರಂದು ಈತ ಜನಿಸಿದ. ಇವನು ಕೆನಡದ ಗವರ್ನರನೂ ಭಾರತದ ಮಹಾದಂಡನಾಯಕನೂ ಆಗಿದ್ದ ಜಾರ್ಜ್ ರ್ಯಾಮ್ಸೆಯ (1770-1838) ಮಗ.

ಇವನು ಹ್ಯಾರೋದಲ್ಲೂ ಆಕ್ಸ್‍ಫರ್ಡ್‍ನ ಕ್ರೈಸ್ಟ್ ಚರ್ಚ್ ಕಾಲೇಜಿನಲ್ಲೂ ಓದಿ 1833ರಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲವು ವರ್ಷಗಳ ಕಾಲ ವಿದೇಶಗಳಲ್ಲಿದ್ದ. 1836ರಲ್ಲಿ ಮಾಕ್ರ್ವೆಸ್ ಆಫ್ ಟ್ವೇಡೇಲನ ಮಗಳಾದ ಲೇಡಿ ಸುಸ್ಯಾನ್ ಹೇ ಜೊತೆ ಇವನ ವಿವಾಹವಾಯಿತು. 1837ರಲ್ಲಿ ಈಸ್ಟ್‍ಲೋತಿಯನ್ ಕ್ಷೇತ್ರದಿಂದ ಕಾಮನ್ಸ್ ಸಭೆಗೆ ಇವನು ಚುನಾಯಿತನಾದ.

ತಂದೆ ಕಾಲವಾದ ಅನಂತರ ಡಾಲ್‍ಹೌಸಿ ತಂದೆಯ ಪೀರೇಜ್‍ಗೆ ವಾರಸುದಾರನಾಗಿ ಲಾರ್ಡ್ಸ್ ಸಭೆಯನ್ನು ಪ್ರವೇಶಿಸಿದ. 1840ರ ಜೂನ್ 16ರಂದು ಲಾರ್ಡ್ ಆಬರ್ಡೀನ್ ಲಾರ್ಡ್ಸ್ ಸಭೆಯಲ್ಲಿ ಮಂಡಿಸಿದ ಸ್ಕಾಟ್ಲೆಂಡ್ ಚರ್ಚಿನ ಧರ್ಮಾದಾಯಗಳನ್ನು ಕುರಿತ ವಿಧೇಯಕವನ್ನು ಬುದ್ಧಿವಂತಿಕೆಯಿಂದ ಸಮರ್ಥಿಸಿ ಹೆಸರು ಗಳಿಸಿದ. 1843ರ ಮೇ ತಿಂಗಳಲ್ಲಿ ಬೋರ್ಡ್ ಆಫ್ ಟ್ರೇಡ್‍ನ ಉಪಾಧ್ಯಕ್ಷನಾದ. 1845ರಲ್ಲಿ ಗ್ಲಾಡ್‍ಸ್ಟನನ ಅನಂತರ ಅದರ ಅಧ್ಯಕ್ಷ ಪದವಿಗೂ ಏರಿದ. ಆಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಸರ್ ರಾಬರ್ಟ್ ಪೀಲನ ಧಾನ್ಯ ಕಾನೂನುಗಳನ್ನು ಬೆಂಬಲಿಸಿದ. ಮುಂದೆ ಡಾಲ್‍ಹೌಸಿಗೆ ಇಂಗ್ಲೆಂಡಿನ ಸಂಪುಟಕ್ಕೆ ಪ್ರವೇಶ ದೊರಕಿತು (1845). ರಾಬರ್ಟ್ ಪೀಲನ ಸಂಪುಟ 1846ರಲ್ಲಿ ರಾಜಿನಾಮೆ ನೀಡಿತು. ಅನಂತರ ಲಾರ್ಡ್ ಜಾನ್ ರಸೆಲ್‍ನ ಮಂತ್ರಿಮಂಡಲದಲ್ಲಿ ಸೇರಲು ಈತನಿಗೆ ಆಮಂತ್ರಣವಿದ್ದರೂ ಇವನು ಅದನ್ನು ನಿರಾಕರಿಸಿದ. ಆದರೆ ಪಕ್ಷರಾಜಕಾರಣದಲ್ಲಿ ತಾನು ವೈಯಕ್ತಿಕ ಸ್ವಾತಂತ್ರ್ಯ ಹೊಂದಿರಬಹುದೆಂಬ ವಾಗ್ದಾನದ ಮೇಲೆ ಈತ ಲಾರ್ಡ್ ಹಾರ್ಡಿಂಜನ ಅನಂತರ ಭಾರತದ ಗವರ್ನರ್-ಜನರಲ್ ಹುದ್ದೆಯನ್ನೊಪ್ಪಿಕೊಂಡ (1847).

ಭಾರತದಲ್ಲಿ[ಬದಲಾಯಿಸಿ]

ಭಾರತದ ಗವರ್ನರ್-ಜನರಲ್ ಹಾಗೂ ಬಂಗಾಳದ ಗವರ್ನರ್ ಆಗಿ 1848ರ ಜನವರಿ 12ರಂದು ಡಾಲ್‍ಹೌಸಿ ಅಧಿಕಾರಿ ವಹಿಸಿಕೊಂಡ. ಇಬ್ಬರು ಬ್ರಿಟಿಷ್ ಅಧಿಕಾರಿಗಳು ಮುಲ್ತಾನಿನಲ್ಲಿ ಕೊಲೆಯಾಗಿದ್ದರು. ಸ್ವಲ್ಪ ಕಾಲದಲ್ಲೇ ಸಿಖ್ಖರ ಸೇನೆ ದಂಗೆ ಎದ್ದಿತು. ದಂಗೆ ಪ್ರಬಲವಾಗಿ ಹರಡಬಹುದೆಂಬ ಭೀತಿಯಿತ್ತು. ಕೇವಲ ಮುಲ್ತಾನನ್ನು ವಶಪಡಿಸಿಕೊಳ್ಳುವುದರಿಂದ ಪ್ರಯೋಜನವಿಲ್ಲವೆಂದು ಗ್ರಹಿಸಿದ ಡಾಲ್‍ಹೌಸಿ ಪೂರ್ಣ ಪಂಜಾಬನ್ನು ಆಕ್ರಮಿಸಿಕೊಳ್ಳಬೇಕೆಂಬ ತೀರ್ಮಾನ ತಳೆದ. ಇದಕ್ಕಾಗಿ ಒಂದು ಪ್ರಬಲ ಸೇನೆಯನ್ನು ಸಜ್ಜುಗೊಳಿಸಿ, ಎರಡನೆಯ ಸಿಖ್ ಯುದ್ಧವನ್ನು ಹೂಡಿದ (1848). ಈ ಯುದ್ಧ ಚಿಲಿಯನ್‍ವಾಲಾ ಮತ್ತು ಗುಜರಾತ್ ಕದನಗಳ ಅನಂತರ ಅಂತ್ಯಗೊಂಡಿತು. ಗುಜರಾತ್ ಕದನದಲ್ಲಿ ಇಂಗ್ಲಿಷರು ಪೂರ್ಣ ವಿಜಯವನ್ನು ಗಳಿಸಿದರು. ಸಿಖ್ಖರು ಶಸ್ತ್ರಗಳ ಸಮೇತ ಶರಣಾದರು. ಇಂಗ್ಲೆಂಡಿನಲ್ಲಿದ್ದ ಕಂಪನಿಯ ಆಡಳಿತವರ್ಗದಿಂದ ಯಾವ ಸೂಚನೆಯೂ ಇಲ್ಲದಿದ್ದರೂ ಡಾಲ್‍ಹೌಸಿ 1849ರ ಮಾಚ್ ತಿಂಗಳಲ್ಲಿ ಪಂಜಾಬನ್ನು ಕಂಪನಿಯ ಆಳ್ವಿಕೆಗೆ ಒಳಪಡಿಸಿಕೊಂಡ. ಸಿಕ್ಕಿಮಿನಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳು ದುರ್ವರ್ತನೆಗೆ ಗುರಿಯಾದರೆಂಬ ನೆವದ ಮೇಲೆ ಅದರ ಒಂದು ಭಾಗವನ್ನು ಸೇರಿಸಿಕೊಂಡ.

ಡಾಲ್‍ಹೌಸಿಯ ಮತ್ತೊಂದು ವಿಜಯ ಎರಡನೆಯ ಬರ್ಮ ಯುದ್ಧ. 1826ರಲ್ಲಿ ಕಂಪನಿ ಸರ್ಕಾರಕ್ಕೂ ಬರ್ಮದ ದೊರೆಯ ನಡುವೆ ಆಗಿದ್ದ ಯಾಂಡಬೂ ಕೌಲಿನ ಷರತ್ತುಗಳಂತೆ ಬರ್ಮೀ ದೊರೆ ನಡೆದುಕೊಳ್ಳುತ್ತಿಲ್ಲವೆಂಬ ಕಾರಣದಿಂದ ಡಾಲ್‍ಹೌಸಿ ಅವನ ಮೇಲೆ ಯುದ್ಧ ಹೂಡಿದ (1853). ಬರ್ಮದ ಕೆಳಭಾಗ ಇಂಗ್ಲಿಷರ ವಶವಾಯಿತು. ಬ್ರಿಟಿಷ್ ಭಾರತ ಸಾಮ್ರಾಜ್ಯ ಪೆಷಾವರಿನಿಂದ ಬರ್ಮದವರೆಗೆ ವಿಸ್ತರಿಸಿತು. ಇನ್ನೂ ಮುಂದುವರಿದು ಬರ್ಮವನ್ನು ಪೂರ್ಣವಾಗಿ ಆಕ್ರಮಿಸಿಕೊಳ್ಳುವ ಸಾಹಸಕ್ಕೆ ಈತ ಕೈಹಾಕಲಿಲ್ಲ. ಕೈವಶವಾಗಿದ್ದ ಪ್ರದೇಶಗಳಲ್ಲಿ ಆಡಳಿತವನ್ನು ಬಿಗಿಗೊಳಿಸಿ ಆರಕಾನ್ ಮತ್ತು ಟೆನಾಸ್ಸೆರಿಮ್‍ಗಳನ್ನು ಒಂದುಗೂಡಿಸುವಷ್ಟಕ್ಕೆ ತೃಪ್ತಿಹೊಂದಿದ. ಅದಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ, ತಂತಿ ಮತ್ತು ಸಂಪರ್ಕ ವ್ಯವಸ್ಥೆಗಳನ್ನು ಏರ್ಪಡಿಸಿ ಮುಂದೆ ಯಾವ ತೊಂದರೆಯು ಅಲ್ಲಿ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ.

ಅದುವರೆಗೂ ಅವ್ಯವಸ್ಥಿತವಾಗಿ ಹರಡಿಕೊಂಡಿದ್ದ ಕಂಪನಿಯ ಭೂಭಾಗವನ್ನು ಉತ್ತಮ ರೀತಿಯಲ್ಲಿ ಸಂಘಟಿಸಲು ಡಾಲ್‍ಹೌಸಿ ಪ್ರಯತ್ನಿಸಿದ. ದೇಶೀಯ ರಾಜರ ಆಡಳಿತಕ್ಕಿಂತ ಬ್ರಿಟಿಷರ ನೇರ ಆಡಳಿತವೇ ಭಾರತೀಯರಿಗೆ ಉತ್ತಮವೆಂಬುದು ಇವನ ಭಾವನೆಯಾಗಿತ್ತು. ಇದನ್ನು ಸಾಧಿಸಲು ಒಂದು ಹೊಸ ಸೂತ್ರ ಅನುವಾಗಿ ಒದಗಿಬಂದಿತ್ತು. ಇದು ವ್ಯಪಗತ ಸಿದ್ಧಾಂತ (ಡಾಕ್ಟ್ರಿನ್ ಆಫ್ ಲ್ಯಾಪ್ಸ್) ಎಂದು ಪ್ರಸಿದ್ಧಿ ಪಡೆದಿತ್ತು. ಯಾವುದೇ ಸಂಸ್ಥಾನವು ಕಂಪನಿ ಸರ್ಕಾರದಿಂದ ರಚಿತವಾಗಿದ್ದರೆ ಅಥವಾ ಕಂಪನಿ ಸರ್ಕಾರಕ್ಕೆ ಅಧೀನವಾಗಿದ್ದರೆ, ಅಂಥ ಸಂಸ್ಥಾನದ ರಾಜನಿಗೆ ಗಂಡು ಸಂತಾನವಿಲ್ಲದಿದ್ದಲ್ಲಿ ಅವನ ಸಿಂಹಾಸನ ಅವನ ಅನಂತರ ಕಂಪನಿಗೆ ಸೇರುವುದಿತ್ತು. ಈ ಸೂತ್ರವನ್ನನುಸರಿಸಿ ಡಾಲ್‍ಹೌಸಿ 1849ರ ಜನವರಿಯಲ್ಲಿ ಸಾತಾರ, ಜೈತ್‍ಪುರ ಹಾಗೂ ಸಂಬಾಲ್‍ಪುರ ಸಂಸ್ಥಾನಗಳನ್ನು ಕಂಪನಿಯ ಆಡಳಿತಕ್ಕೆ ಒಳಪಡಿಸಿಕೊಂಡ. ಈ ಕ್ರಮವನ್ನು ಇಂಗ್ಲೆಂಡಿನಲ್ಲಿದ್ದ ಕಂಪೆನಿಯ ಆಡಳಿತವರ್ಗ ಅನುಮೋದಿಸಿತು. ಆದರೆ 1849ರಲ್ಲಿ ಕರೌಲಿ ಸಂಸ್ಥಾನವನ್ನು ಸೇರಿಸಿಕೊಳ್ಳಬೇಕೆಂದು ಈತ ಮಾಡಿದ್ದ ಶಿಫಾರಸುಗಳನ್ನು ತಳ್ಳಿಹಾಕಲಾಯಿತು. 1851 ಮತ್ತು 1852ರಲ್ಲಿ ಈತ ಸೇರ್ಪಡೆ ಮಾಡಿಕೊಂಡಿದ್ದ ಭಗತ್ ಮತ್ತು ಉದಯಪುರ ಸಂಸ್ಥಾನಗಳನ್ನೂ ಆಯಾ ಸಂಸ್ಥಾನಾಧೀಶ್ವರ ದತ್ತು ಪುತ್ರರಿಗೆ ಹಿಂದಿರುಗಿ ಕೊಡಲಾಯಿತು. ಇವನ ಆಡಳಿತದ ಕಾಲದಲ್ಲಿ ಕರ್ನಾಟಕ ಮತ್ತು ತಂಜಾವೂರ್ ರಾಜಮನೆತನಗಳ ಆಡಳಿತಗಳು ರದ್ದಾದುವು. ಮಾಜಿ ಪೇಷ್ವೆ 2ನೆಯ ಬಾಜಿರಾಯನ ಮರಣಾನಂತರ ಅವನ ದತ್ತುಪುತ್ರ ನಾನಾ ಸಾಹೇಬನಿಗೆ ವರ್ಷಾಶನ ಮುಂದುವರಿಯಲಿಲ್ಲ. 1856ರಲ್ಲಿ ಔಧ್ ಸಂಸ್ಥಾನ ಕಂಪನಿಯ ನಿರ್ದೇಶಕ ಮಂಡಲಿಯ ಆದೇಶದಂತೆ ಕಂಪನಿಗೆ ಸೇರಿಹೋಯಿತು. ಒಟ್ಟಿನಲ್ಲಿ ಇವನ ಕ್ರಮಗಳಿಂದ ಭಾರತದ ರಾಜಕೀಯ ಭೂಪಟವೇ ಗಮನಾರ್ಹವಾಗಿ ಬದಲಾವಣೆಗೆ ಒಳಗಾಯಿತು.

ಡಾಲ್‍ಹೌಸಿ ಅನೇಕ ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದ. ಬಂಗಾಳ ಬಹಳ ಕಾಲದಿಂದಲೂ ಗವರ್ನರ್-ಜನರಲ್ ಅಥವಾ ಅವನ ಪ್ರತಿನಿಧಿಯಿಂದ ಆಳಲ್ಪಡುತ್ತಿತ್ತು. ಈತನ ಕಾಲದಲ್ಲಿ ಅದಕ್ಕೆ ಒಬ್ಬ ಪ್ರತ್ಯೇಕ ಲೆಫ್ಟೆನಂಟ್-ಗವರ್ನರನ್ನು ನೇಮಿಸಲಾಯಿತು (1854). ಪ್ರತಿ ಪ್ರಾಂತ್ಯದಲ್ಲೂ ಇವನು ಒಂದು ಮರಾಮತ್ತು ಇಲಾಖೆಯನ್ನು ರಚಿಸಿದ. ತಾಂತ್ರಿಕ ಕಾಲೇಜುಗಳು ಸ್ಥಾಪಿತವಾದುವು. ತಂತಿ ವ್ಯವಸ್ಥೆಯ ನಿರ್ಮಾಣವಾಯಿತು. ದೇಶದಲ್ಲಿ ರೈಲ್ವೆ ನಿರ್ಮಾಣಕ್ಕೆ ವ್ಯಾಪಕ ಯೋಜನೆ ತಯಾರಾಯಿತು. 1853ರಲ್ಲಿ ಪ್ರಥಮ ರೈಲ್ವೆ ಮಾರ್ಗ ಪೂರೈಸಿತು. ಗಂಗಾನದಿಯ ನೀರನ್ನು ಕಾಲುವೆಗಳ ಮೂಲಕ ಹರಿಸಿ ವ್ಯವಸಾಯ ಹಾಗೂ ವಾಣಿಜ್ಯಕ್ಕೆ ಉಪಯೋಗವಾಗುವಂತೆ ಇವನು ವ್ಯವಸ್ಥೆ ಮಾಡಿದ. ಪಂಜಾಬ್ ಮತ್ತು ಬರ್ಮ ಯುದ್ಧಗಳಿಂದ ಕಂಪನಿಯ ಸರ್ಕಾರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದರೂ ಕಂಕರು ರಸ್ತೆಗಳ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಉದಾರವಾಗಿ ಹಣ ಒದಗಿಸಿದ. ಅಂಚೆಯ ಸ್ಟಾಂಪುಗಳು ಜಾರಿಗೆ ಬಂದುವು. ಟಪಾಲುದರಗಳು ನಿಯಂತ್ರಿತವಾದುವು. ಎಲ್ಲಕ್ಕೂ ಮಿಗಿಲಾಗಿ ಭಾರತದಲ್ಲೇ ಪ್ರಪ್ರಥಮವಾಗಿ ಸಾರ್ವಜನಿಕ ವಿದ್ಯಾ ಇಲಾಖೆಯನ್ನು ಸ್ಥಾಪಿಸಿದವನು ಡಾಲ್‍ಹೌಸಿ. ಕಲ್ಕತ್ತ, ಮುಂಬಯಿ ಮತ್ತು ಮದರಾಸ್ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇವನು ಪೂರ್ವಭಾವಿ ಕ್ರಮಗಳನ್ನು ಕೈಗೊಂಡ. ಬಂದಿಗಳಿಗೆ ಮುದ್ರೆ ಹಾಕುತ್ತಿದ್ದುದನ್ನು ರದ್ದುಪಡಿಸಿದ. ನರಬಲಿ ಕೊನೆಗೊಂಡಿತು. ಕ್ರೈಸ್ತಮತಕ್ಕೆ ಪರಿವರ್ತಿತರಾದವರು ತಮ್ಮ ಸಾಮಾನ್ಯ ಹಕ್ಕುಗಳನ್ನು ಅನುಭವಿಸುವಂತೆ ಮಾಡಿದ. ಆಡಳಿತವರದಿಗಳ ಪದ್ಧತಿಯನ್ನು ಜಾರಿಗೆ ತಂದುದಲ್ಲದೆ ಭಾರತೀಯ ಶಾಸನಸಭೆಯನ್ನು ಪ್ರತಿಷ್ಠಿತಗೊಳಿಸಿ ಅದರ ಪ್ರಾತಿನಿಧ್ಯವನ್ನು ವಿಸ್ತರಿಸಿದ.

ಚಹ ತೋಟಗಳ ಅಭಿವೃದ್ಧಿಗೆ ಈತ ಶ್ರಮಿಸಿದ. ಅರಣ್ಯಗಳ ಹಾಗೂ ಪ್ರಾಚೀನ ಐತಿಹಾಸಿಕ ಅವಶೇಷಗಳ ರಕ್ಷಣೆಗೆ ಗಮನಕೊಟ್ಟ. ಕಲ್ಕತ್ತದಲ್ಲಿದ್ದ ಒಂದು ಕಾಲೇಜನ್ನು ಮುಚ್ಚಿ ಅದರ ಸ್ಥಾನದಲ್ಲಿ ಯುವಜನರನ್ನು ತಾಂತ್ರಿಕ ಕೇಂದ್ರಗಳಲ್ಲಿ ತರಬೇತು ಮಾಡುವ ಏರ್ಪಾಡು ಮಾಡಿದ. ಇವರು ಇಲಾಖಾ ಪರೀಕ್ಷೆಗಳನ್ನೆದುರಿಸಬೇಕಾಯಿತು. ಸಾರ್ವಜನಿಕ ಉದ್ಯಾನಗಳು ನಿರ್ಮಾಣವಾದುವು. ಸಾರ್ವಜನಿಕ ಆಡಳಿತದಲ್ಲಿ ಇವನು ನೌಕರನಿಗೆ ಸೂಕ್ತ ರಜೆ ಮತ್ತು ವಿರಾಮವೇತನ ಸೌಲಭ್ಯಗಳನ್ನು ಕಲ್ಪಿಸಿದ. ಅಧಿಕಾರಿಗಳ ನೈತಿಕ ಮಟ್ಟವನ್ನು ಹೆಚ್ಚಿಸಲು, ಅವರು ಯಾವುದೇ ವ್ಯಾಪಾರೀ ಸಂಸ್ಥೆಯಲ್ಲಿ ಪಾಲು ಹೊಂದಿರಕೂಡದೆಂಬ ನಿರ್ಬಂಧವನ್ನು ವಿಧಿಸಿದ.

ಗವರ್ನರ್-ಜನರಲ್ ಆಗಿ ಏಳು ವರ್ಷಗಳ ಅಧಿಕಾರ ನಡೆಸಿ 1856ರ ಮಾರ್ಚ್ 6ರಂದು ಡಾಲ್‍ಹೌಸಿ ಇಂಗ್ಲೆಂಡಿಗೆ ಹೊರಟು ಮೇ 13ರಂದು ಸ್ವದೇಶವನ್ನು ತಲುಪಿದ. ಆ ವೇಳೆಗೆ ಭಾರತದಲ್ಲಿ ರಾಜಕೀಯ ಪರಿಸ್ಥಿತಿ ವಿಷಮಿಸಿತ್ತು. ಇದಕ್ಕೆ ಡಾಲ್‍ಹೌಸಿ ಅನುಸರಿಸಿದ ನೀತಿಯೇ ಕಾರಣವೆಂಬ ತೀವ್ರ ಟೀಕೆ ಬಂತು. ಡಾಲ್‍ಹೌಸಿಯದು ನಿರಂಕುಶಪ್ರವೃತ್ತಿ. ತನಗೆ ಸರಿಯೆಂದು ತೋರಿದ್ದನ್ನು, ಹಿತಕಾರಿಯೆಂದು ಅನಿಸಿದ್ದನ್ನು ಮಾಡುತ್ತಿದ್ದ. ಇತರರ ಭಾವನೆಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದಾಗಿ ಜನರಲ್ಲಿ ಉಂಟಾದ ಅಸಮಾಧಾನವೇ 1857ರ ಬಂಡಾಯಕ್ಕೆ ಒಂದು ಮುಖ್ಯ ಕಾರಣವಾಯಿತೆನ್ನಬಹುದು.

ಮರಣ[ಬದಲಾಯಿಸಿ]

ಲಾರ್ಡ್ ಡಾಲ್‍ಹೌಸಿ 1860ರ ಡಿಸೆಂಬರ್ 19ರಂದು ಕ್ಯಾಸಲ್‍ನಲ್ಲಿ ಮರಣ ಹೊಂದಿದ.

ಒಟ್ಟಾರೆ ಕೊಡುಗೆ[ಬದಲಾಯಿಸಿ]

ಭಾರತೀಯ ಇತಿಹಾಸದಲ್ಲಿ ಈತ ಸಾಮ್ರಾಜ್ಯಶಾಹಿ ನೀತಿಯ ಆದ್ಯ ಪ್ರವರ್ತಕನೆನಿಸಿಕೊಂಡಿದ್ದರೂ ಈತ ಸಮರ್ಥ ಆಡಳಿತಗಾರನೂ ಆಗಿದ್ದ. ಈತ ಹಾಕಿದ ಮಾರ್ಗದಲ್ಲಿ ಮುಂದೆ ಬ್ರಿಟಿಷರ ಆಡಳಿತ ರೂಪುಗೊಂಡಿತು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: