ಬಾಗಲಕೋಟೆ ಲೋಕಸಭಾ ಕ್ಷೇತ್ರ
ಬಾಗಲಕೋಟೆ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು 1967ರಲ್ಲಿ ರಚಿಸಲಾಯಿತು. ಅದಕ್ಕೂ ಮುಂಚೆ ವಿಜಾಪುರ ದಕ್ಷಿಣ ಲೋಕಸಭಾ ಕ್ಷೇತ್ರ ಆಗಿತ್ತು.
ಕ್ಷೇತ್ರದ ಇತಿಹಾಸ
[ಬದಲಾಯಿಸಿ]ದೇಶದಲ್ಲಿ 1951ರಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ಜರುಗಿತು. 1951ರಿಂದ 1962ರವರೆಗೂ ವಿಜಯಪುರ ಉತ್ತರ/ವಿಜಯಪುರ ದಕ್ಷಿಣ ಎಂದು ದ್ವಿಸದಸ್ಯ ಕ್ಷೇತ್ರಗಳಿದ್ದವು. ಈಗಿನ ಬಾಗಲಕೋಟ ಆ ಮೂರು ಚುನಾವಣೆಗಳಲ್ಲಿಯೂ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರ ಎಂಬ ಹೆಸರಿನಲ್ಲಿತ್ತು. 1951ರಲ್ಲಿ ವಿಜಯಪುರ ಉತ್ತರ ಲೋಕಸಭೆ ಕ್ಷೇತ್ರದಲ್ಲಿ ರಾಜಾರಾಮ ದುಬೆ, ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಆರ್.ಬಿ.ಬಿದರಿ ಆಯ್ಕೆಯಾಗಿದ್ದರು.1957ರಲ್ಲಿ ಕ್ರಮವಾಗಿ ಸುಗಂಧಿ ಮುರಿಗೆಪ್ಪ/ಆರ್.ಬಿ.ಬಿದರಿ, 1962ರಲ್ಲಿ ರಾಜಾರಾಮ ದುಬೆ/ ಎಸ್.ಬಿ. ಪಾಟೀಲ(ಎಲ್ಲರೂ ಕಾಂಗ್ರೆಸ್) ಆಯ್ಕೆಯಾಗಿದ್ದರು.
1967ರ ನಾಲ್ಕನೇ ಸಾರ್ವತ್ರಿಕ ಚುನಾವಣೆ ವೇಳೆಗೆ ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಿದ್ದವು. 1967ರ ಲೋಕಸಭೆ ಚುನಾವಣೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಎದುರಿಸಿದ ಮೊದಲ ಚುನಾವಣೆಯಾಗಿತ್ತು. ಅಲ್ಲಿವರೆಗೆ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ (ಐಎನ್‌ಸಿ) ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತಿತ್ತು. 1967ರ ಚುನಾವಣೆಯಲ್ಲಿ ಬಾಗಲಕೋಟ ಲೋಕಸಭೆ ಕ್ಷೇತ್ರ ಸೇರಿದಂತೆ ದೇಶದ 283 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಅಗ ಅಸ್ತಿತ್ವಕ್ಕೆ ಬಂದ ಬಾಗಲಕೋಟ ಲೋಕಸಭೆದಿಂದ ಕಾಂಗ್ರೆಸ್‌ನ ಎಸ್.ಬಿ.ಪಾಟೀಲ ಎಂಪಿ ಆಗಿ ಆಯ್ಕೆಯಾದರು. ಅವರು ತಮ್ಮ ಎದುರಾಳಿ ಪಕ್ಷೇತರ ಅಭ್ಯರ್ಥಿ ಎ.ಡಿ.ತೊಂಡಿಹಾಳ ಅವರನ್ನು 1.25ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಜನಸಂಘದ ಎನ್.ಕೆ.ಛಾಟಿ 57,315 ಮತಗಳನ್ನು ಪಡೆದಿದ್ದರು. ಎಸ್.ಬಿ.ಪಾಟೀಲ 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿ ವಿಜಾಪುರ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಾಗಲಕೋಟ ಲೋಕಸಭೆ ಕ್ಷೇತ್ರ ಆಗ ವಿಜಯಪುರ ಜಿಲ್ಲೆಯ ಬಾಗಲಕೋಟ, ಜಮಖಂಡಿ, ಮುಧೋಳ, ಬೀಳಗಿ, ಹುನಗುಂದ, ಬದಾಮಿ, ಗುಳೇದಗುಡ್ಡ ಹಾಗೂ ಧಾರವಾಡ ಜಿಲ್ಲೆಯ ರೋಣ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿತ್ತು. ಸತತ ಐದು ದಶಕದ ಕಾಲ 13 ಚುನಾವಣೆಗಳು ಇಲ್ಲಿ ನಡೆದು ಘಟಾನುಘಟಿಗಳೇ ಲೋಕಸಭೆ ಪ್ರವೇಶಿಸಿದ್ದಾರೆ.
ಐದು ದಶಕದ ಅವಧಿಯಲ್ಲಿ ಬಾಗಲಕೋಟ ಲೋಕಸಭೆ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಅಂದಿನ ರೋಣ ವಿಧಾನಸಭೆ ಕ್ಷೇತ್ರ ಇಲ್ಲಿಂದ ಕಳಚಿಕೊಂಡು ಈಗ ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರ ಸೇರಿಕೊಂಡಿದೆ. 1967ರಿಂದ 1996ವರೆಗಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಭದ್ರಕೋಟೆ ಎನ್ನಿಸಿದ್ದ ಬಾಗಲಕೋಟ ಕ್ಷೇತ್ರ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಭದ್ರಕೋಟೆಯಾಗಿ ಬದಲಿಸಿದೆ. ಈ ಮಧ್ಯೆ ಕಾಂಗ್ರೆಸ್ಸೇತರ ಪಕ್ಷಗಳಾದ ಜನತಾದಳ, ಲೋಕಶಕ್ತಿಗೂ ಈ ಕ್ಷೇತ್ರ ಒಂದೊಂದು ಸಲ ಒಲಿದಿದೆ. ಇನ್ನುಳಿದ ಚುನಾವಣೆಗಳಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ಗೆ ಜೈ ಎಂದಿದೆ. 50 ವರುಷಗಳ ಅವಧಿಯಲ್ಲಿ ಬಾಗಲಕೋಟ ಲೋಕಸಭೆ ಕ್ಷೇತ್ರದ ಸಂಸದರಿಗೆ ಕೇಂದ್ರದಲ್ಲಿ ಸಚಿವರಾಗುವ ಅವಕಾಶ ಎರಡು ಸಲ ಒದಗಿ ಬಂದಿತ್ತು.50 ವರ್ಷಗಳ ಇತಿಹಾಸದಲ್ಲಿ ಮಾಜಿ ಸಿಎಂ ಒಬ್ಬರಿಗೆ ರಾಜಕೀಯ ಮರುಜನ್ಮ ನೀಡಿದ ಬಾಗಲಕೋಟ ಲೋಕಸಭೆ ಕ್ಷೇತ್ರ ಇನ್ನೊಬ್ಬ ಮಾಜಿ ಸಿಎಂ ಅವರನ್ನು ತಿರಸ್ಕರಿಸಿದೆ.
ಗಮನ ಸೆಳೆದ ಸಿದ್ದು ನ್ಯಾಮಗೌಡ
[ಬದಲಾಯಿಸಿ]1991ರ ಲೋಕಸಭೆ ಚುನಾವಣೆ ಇಬ್ಬರು ಸಿದ್ದುಗಳಿಗೆ ಪ್ರಮುಖವಾಯಿತು.
ಹಾಲಿ ಸಿಎಂ ಸಿದ್ದರಾಮಯ್ಯ ನೆರೆಯ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಸೋತರೆ, ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಸಿದ್ದು ನ್ಯಾಮಗೌಡ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರನ್ನು ಮಣಿಸಿ ಬಾಗಲಕೋಟ ಕ್ಷೇತ್ರ ದೇಶದಲ್ಲೇ ಗಮನ ಸೆಳೆಯುವಂತೆ ಮಾಡಿದರು.
ಸಂಸತ್ತಿನ ಸದಸ್ಯರು
[ಬದಲಾಯಿಸಿ]ಬಾಂಬೆ ರಾಜ್ಯ(ವಿಜಾಪುರ ದಕ್ಷಿಣ ಲೋಕಸಭಾ ಕ್ಷೇತ್ರ)
- 1951 - ರಾಮಪ್ಪ ಬಾಳಪ್ಪ ಬಿದರಿ(ಕಾಂಗ್ರೆಸ್)
ಮೈಸೂರು ರಾಜ್ಯ
- 1957 - ರಾಮಪ್ಪ ಬಾಳಪ್ಪ ಬಿದರಿ(ಕಾಂಗ್ರೆಸ್) (ವಿಜಾಪುರ ದಕ್ಷಿಣ ಲೋಕಸಭಾ ಕ್ಷೇತ್ರ)
- 1967- ಎಸ್.ಬಿ.ಪಾಟೀಲ(ಕಾಂಗ್ರೆಸ್)
- 1972- ಎಸ್.ಬಿ.ಪಾಟೀಲ(ಕಾಂಗ್ರೆಸ್)
ಕರ್ನಾಟಕ ರಾಜ್ಯ
1977 - ಎಸ್.ಬಿ.ಪಾಟೀಲ(ಕಾಂಗ್ರೆಸ್)
1980 - ವೀರೇಂದ್ರ ಪಾಟೀಲ(ಕಾಂಗ್ರೆಸ್)
1984 - ಎಚ್.ಬಿ.ಪಾಟೀಲ(ಕಾಂಗ್ರೆಸ್)
1989 - ಎಸ್.ಟಿ.ಪಾಟೀಲ(ಕಾಂಗ್ರೆಸ್)
1991 - ಸಿದ್ದು ನ್ಯಾಮಗೌಡ(ಕಾಂಗ್ರೆಸ್)
1996 - ಎಚ್.ವೈ.ಮೇಟಿ(ಜನತಾ ದಳ)
1998 - ಅಜಯಕುಮಾರ ಸರನಾಯಕ(ಲೋಕಶಕ್ತಿ)
1999 - ಆರ್.ಎಸ್.ಪಾಟೀಲ(ಕಾಂಗ್ರೆಸ್)
2004 - ಪಿ.ಸಿ.ಗದ್ದಿಗೌಡರ (ಬಿಜೆಪಿ)
2009 - ಪಿ.ಸಿ.ಗದ್ದಿಗೌಡರ (ಬಿಜೆಪಿ)
2014 - ಪಿ.ಸಿ.ಗದ್ದಿಗೌಡರ (ಬಿಜೆಪಿ)
2019 - ಪಿ.ಸಿ.ಗದ್ದಿಗೌಡರ (ಬಿಜೆಪಿ)
ರಾಜಕೀಯ ಇತಿಹಾಸ
[ಬದಲಾಯಿಸಿ]ರಾಜಕೀಯವನ್ನೇ ಹೊದ್ದು ಮಲಗುವ ಅವಿಭಜಿತ ವಿಜಯಪುರದ ಈಗಿನ ಬಾಗಲಕೋಟ ಜಿಲ್ಲೆ ರಾಜಕೀಯ ಕ್ಷೇತ್ರ ಹಲವು ತಾರೆಗಳನ್ನು ಉದಯಿಸುವಂತೆ ಮಾಡಿದೆ. ಘಟಾನುಘಟಿ ರಾಜಕಾರಣಿಗಳಿಗೆ ರಾಜಕೀಯ ನೆಲೆಯನ್ನೂ ಕಲ್ಪಿಸಿದೆ. ಇಂಥ ರಾಜಕೀಯ ಅಖಾಡದಂತಿರುವ ಇಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ನಡುವೆ ಜನತಾದಳ, ಬಿಜೆಪಿ ಎರಡು ದಶಕದಲ್ಲಿ ಅರಳಿದರೂ ಹೊಸ ಗಟ್ಟಿ ನಾಯಕರ ಹುಟ್ಟಿಗೆ ಅವಕಾಶ ನೀಡಿಲ್ಲ.
ನಾಲ್ಕು ದಶಕದ ರಾಜಕಾರಣದ ಹಾದಿಯನ್ನು ಒಮ್ಮೆ ತಿರುವು ಹಾಕಿದರೆ ಮೊದಲ ಎರಡು ದಶಕದಲ್ಲಿ ಬರೋಬ್ಬರಿ ಐವರು ಮುಖ್ಯಮಂತ್ರಿಗಳ ರಾಜಕೀಯ ಏಳು ಬೀಳುಗಳ ದೊಡ್ಡ ಸಮರವೇ ಇಲ್ಲಿ ನಡೆದಿದೆ. ಇಬ್ಬರು ಜಿಲ್ಲೆಯವರಾದರೆ ಇನ್ನು ಮೂವರು ಹೊರಗಿನವರು. ಹೊಸ ಜಿಲ್ಲೆ ರಚನೆಯಾದ ನಂತರ ಆರು ಸರಕಾರಗಳು ರಚನೆಯಾದರೂ ಹಳೆಯ ತಲೆಗಳ ಜತೆಗೆ ಹೊಸ ಮುಖಗಳಿಗೂ ಜನ ಮಣೆ ಹಾಕಿದ್ದಾರೆ. ರಾಜಕೀಯವಾಗಿ ಸಾಕಷ್ಟು ನೀರು ಹರಿದು ಹೋದರೂ ನಿರೀಕ್ಷೆಯಂಥ ಸಮೃದ್ದಿಯ ಫಸಲನ್ನು ಮಾತ್ರ ತೆಗೆಯಲು ಆಗಿಲ್ಲ.
ರಾಜ್ಯದಲ್ಲಿನ ಜಿಲ್ಲೆಗಳ ಪುನರ್ ವಿಂಗಡಣೆ ವೇಳೆ ಬಾಗಲಕೋಟ ಅಖಂಡ ವಿಜಯಪುರದಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗುತ್ತಿದ್ದಂತೆ ರಾಜಕೀಯ ಮುಖಂಡರಿಗೆ ಹೊಸ ಅವಕಾಶಗಳು ತೆರೆದುಕೊಂಡವು. ಹೊಸ ಜಿಲ್ಲಾ ಕೇಂದ್ರ ಘೋಷಣೆ ಆಗುತ್ತಿದ್ದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಇನ್ನಿಲ್ಲದ ಮಹತ್ವ ಬಂದಿತು. ರಾಜ್ಯ ಸಚಿವ ಸಂಪುಟದಲ್ಲಿ ಬಾಗಲಕೋಟ ಜಿಲ್ಲೆಗೂ ಪ್ರತ್ಯೇಕ ಮಾನ್ಯತೆ ಭಾಗ್ಯ ಲಭಿಸಲಾರಂಭಿಸಿತು. ಪರಿಣಾಮವಾಗಿ ಅಂದಿನಿಂದ ಇಂದಿನವರೆಗೂ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಕಾಯಂ ಅವಕಾಶ ಸಿಕ್ಕುತ್ತಲೇ ಇದೆ.
ಸಚಿವ ಸಂಪುಟದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆದ್ಯತೆ ಸಿಗಲಾರಂಭಿಸಿದ್ದರಿಂದ ಜಿಲ್ಲಾ ರಾಜಕಾರಣದಲ್ಲೂ ಪೈಪೋಟಿ, ಭಿನ್ನಮತ, ಗುಂಪುಗಾರಿಕೆ ಸಹಜವಾಗಿಯೇ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಲೇ ಇದೆ. ಯಾವುದೇ ಸರಕಾರ ಅಧಿಕಾರಕ್ಕೆ ಬಂದಾಗಲೂ ಇದು ಸಾಮಾನ್ಯ ಎನ್ನುವಂತಾಗಿದೆ. ಅಧಿಕಾರ ರಾಜಕಾರಣದ ಹಿನ್ನೆಲೆಯಲ್ಲಿ ಆಗಾಗ್ಗೆ ಅಭಿವೃದ್ಧಿಗೆ ಅಡೆತಡೆಗಳಾದ ಉದಾಹರಣೆಗಳೂ ಇವೆ.
ಕಳೆದ ಎರಡು ದಶಕಗಳ ಅವಧಿಯಲ್ಲಿ ಜಾತಿ ರಾಜಕಾರಣ ಕೂಡ ಸಾಕಷ್ಟು ಮುನ್ನೆಲೆಗೆ ಬಂದಿದೆ. ಹಿಂದೆಲ್ಲ ಒಂದೇ ಸಮುದಾಯದವರಿಗೆ ಸೀಮಿತವಾಗಿರುತ್ತಿದ್ದ ಪಕ್ಷ ರಾಜಕಾರಣಕ್ಕಿಂತ ಜಾತಿ ರಾಜಕಾರಣವೇ ಅನೇಕ ಸಲ ಮೇಲುಗೈ ಸಾಧಿಸುತ್ತಲೇ ಬಂದಿದೆ. ಪಕ್ಷ ನಿಷ್ಠೆಗಿಂತ ಜಾತಿ ನಿಷ್ಠೆಗೆ ಜನಪ್ರತಿನಿಧಿಗಳು ಆದ್ಯತೆ ನೀಡಿದ ಸಮಯದಲ್ಲಿ ಅಧಿಕಾರ ಎನ್ನುವುದು ಪ್ರಾಬಲ್ಯರ ಕೈಗೆ ಸಿಕ್ಕಿದೆ.
ಕಾಂಗ್ರೆಸ್ ಕುಟುಂಬ
ಹಿಂದಿನಿಂದಲೂ ಬಾಗಲಕೋಟದಲ್ಲಿ ಕಾಂಗ್ರೆಸ್ ನೆಲೆ ಭದ್ರವಾಗಿದ್ದರೂ ಕುಟುಂಬ ರಾಜಕಾರಣದ ಎಳೆಯೂ ಅಲ್ಲಲ್ಲಿ ಇದೆ. ನಂಜಯ್ಯನವರಮಠ ಕುಟುಂಬದಲ್ಲಿ ತಂದೆ ನಂತರ ಮಗ ಎಸ್.ಜಿ.ನಂಜಯ್ಯನಮಠ ಕೂಡ ಶಾಸಕರಾದವರು. 1978ರಲ್ಲಿಯೇ ವಿಧಾನಸಭೆ ಪ್ರವೇಶಿಸಿ ಈಗಲೂ ಶಾಸಕರಾಗಿರುವ ಬಿ.ಬಿ.ಚಿಮ್ಮನಕಟ್ಟಿ, ಹುನಗುಂದದ ಎಸ್.ಆರ್.ಕಾಶಪ್ಪನವರ ಜಿಲ್ಲೆಯಲ್ಲಿ ಪ್ರಖರವಾಗಿದ್ದವರೇ. ಹೈಕಮಾಂಡ್ ನೆಂಟಸ್ತಿಕೆ ಕಾರಣಕ್ಕೆ ಚಿಮ್ಮನಕಟ್ಟಿ ಟಿಕೆಟ್ ಗಿಟ್ಟಿಸಿಕೊಂಡು ಬಂದು ಗೆದ್ದರು. ಅಪ್ಪನಿಲ್ಲದೇ ಇದ್ದರೂ ಹುನಗುಂದದಲ್ಲಿ ವಿಜಯಾನಂದ ಕಾಶಪ್ಪನವರ ಗೆದ್ದು ಶಾಸನಸಭೆ ಪ್ರವೇಶಿಸಿದ್ದು ವಿಶೇಷವೇ. ಈಗ ಚಿಮ್ಮನಕಟ್ಟಿ ಮಕ್ಕಳ ಸರದಿ. 1999ರಲ್ಲಿ ಗೆದ್ದು ಸಚಿವರೂ ಆಗಿದ್ದ ಆರ್.ಬಿ.ತಿಮ್ಮಾಪುರ ಈಗ ಮೇಲ್ಮನೆ ಮೂಲಕ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಇನ್ನು ಮೂರು ದಶಕದ ಹಿಂದೆಯೇ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಗೇಯಿಂಟ್ ಕಿಲ್ಲರ್ ಎನ್ನಿಸಿದ್ದ ಸಿದ್ದು ನ್ಯಾಮಗೌಡ ಅವರಿಗೆ ಜಿಲ್ಲೆಯಾದ 17ವರ್ಷದ ನಂತರ ಶಾಸಕರಾಗುವ ಅವಕಾಶ ಒದಗಿ ಬಂದಿತು. ಬೀಳಗಿಯ ಜೆ.ಟಿ.ಪಾಟೀಲ ಕೂಡ ದಶಕಗಳ ನಂತರ ವಿಧಾನಸಭೆ ಪ್ರವೇಶಿಸಿದ್ದಾರೆ.
ಜನತಾದಳ ಮೂಲದ ಗೋವಿಂದಕಾರಜೋಳ ನಂತರ ಬಿಜೆಪಿಯಲ್ಲಿ ನೆಲೆ ಕಂಡುಕೊಂಡು ಸಚಿವರಾಗುವ ಜತೆಗೆ ಮುಧೋಳದಲ್ಲಿ ಹ್ಯಾಟ್ರಿಕ್ ಸಾಧಿಸಿದರೆ, ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿದ ಎಚ್.ವೈ.ಮೇಟಿ 2 ಬಾರಿ ಸಚಿವರಾಗಿ, ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಬಾಗಲಕೋಟ ಕಾಂಗ್ರೆಸ್ ಧ್ವಜ ಹಾರಿಸಿದ್ದಾರೆ. ಜನತಾದಳದಲ್ಲೇ ಇದ್ದು ಮೊದಲ ಉಸ್ತುವಾರಿ ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರ ನೀಲಿ ಗಣ್ಣಿನ ಹುಡುಗ ಅಜಯಕುಮಾರ ಸರನಾಯಕ ಸಂಸದರಾದರೂ ಮುಂದೆ ಶಾಸನ ಸಭೆಗಳನ್ನು ಪ್ರವೇಶಿಸುವ ಅವಕಾಶವೇ ಸಿಗಲಿಲ್ಲ. ಹೊರ ಜಿಲ್ಲೆಯವರಾದರೂ ಸಿನಿಮಾ ನಂಟಿನ ಜತೆಗೆ ಕುಲವಧು ಎಂಬ ಕಾರಣಕ್ಕೆ ತೇರದಾಳದ ಜನ ಒಮ್ಮೆ ಕೈ ಬಿಟ್ಟು ನಂತರ ವಿಧಾನಸಭೆಗೆ ಕಳುಹಿಸಿದ್ದರಿಂದ ಸಚಿವೆ ಸ್ಥಾನದ ಜತೆಗೆ ಈಗ ಉಸ್ತುವಾರಿ ಭಾಗ್ಯವನ್ನೂ ಉಮಾಶ್ರೀ ಪಡೆದುಕೊಂಡು ಅಧಿಕಾರದ ಕೇಂದ್ರ ಬಿಂದುವಾಗಿದ್ದಾರೆ.
ಬಿಜೆಪಿ ತಂದ ಹೊಸ ಅಲೆ
ಕಾಂಗ್ರೆಸ್ ಹಾಗೂ ಜನತಾಪಕ್ಷದ ಭದ್ರಕೋಟೆಯಂತಿದ್ದ ಬಾಗಲಕೋಟ ಮುಂದೆ ಜನತಾದಳಕ್ಕೂ ಒಲಿದಿತ್ತು.ಆದರೂ ಕಾಂಗ್ರೆಸ್ ಆಡಳಿತವೇ ಇಲ್ಲಿ ಹೆಚ್ಚು ನಡೆದಿದೆ. ಆದರೆ ಎರಡು ದಶಕದ ಅವಧಿಯಲ್ಲಿ ರಾಜಕೀಯದಲ್ಲೂ ಹೊಸಬರ ಪ್ರವೇಶಕ್ಕೆ ಅವಕಾಶ ನೀಡಿದ್ದು ಬಿಜೆಪಿ. ಸಾಮಾನ್ಯ ಕುಟುಂಬದವರೇ ಆಗಿದ್ದ ಮುರುಗೇಶ್ ನಿರಾಣಿ ಎರಡು ಬಾರಿ ಗೆದ್ದು ಮಹತ್ವದ ಕೈಗಾರಿಕೆ ಸಚಿವರೂ ಆದರು. ಆರ್‌ಎಸ್‌ಎಸ್ ಹಿನ್ನೆಲೆಯ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ, ರಾಜಕೀಯ ಕುಟುಂಬ ಹಿನ್ನೆಲೆಯ ಎಂ.ಕೆ.ಪಟ್ಟಣಶೆಟ್ಟಿ ಅವರೊಟ್ಟಿಗೆ ಸಿದ್ದು ಸವದಿ, ದೊಡ್ಡನಗೌಡ ಪಾಟೀಲ ಶಾಸನ ಸಭೆ ಪ್ರವೇಶಿಸಿದರು. ಪಿ.ಎಚ್.ಪೂಜಾರ, ರಾಜಶೇಖರ ಶೀಲವಂತ ಸಹಿತ ಹಲವರಿಗೂ ಬಿಜೆಪಿಯಿಂದಲೇ ರಾಜಕೀಯ ನೆಲೆ ಸಿಕ್ಕಿದ್ದು. ಜಿಲ್ಲೆಯವರೇ ಆದ ಅರವಿಂದ ಲಿಂಬಾವಳಿ ದೂರದ ಬೆಂಗಳೂರು, ಶಿವರಾಜ ತಂಗಡಗಿ ನೆರೆಯ ಕೊಪ್ಪಳ ಜಿಲ್ಲೆಗಳಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದಾರೆ.
ಸಿಎಂಗಳ ನಡುವೆ ಅರಣ್ಯ
ಬಾಗಲಕೋಟ ಜಿಲ್ಲೆಯ ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಮಹತ್ವದ ಸಂಗತಿಗಳು ಗಮನಕ್ಕೆ ಬರುತ್ತವೆ. ಅದರಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ, ಮೂವರು ಸಿಎಂಗಳಿಗೆ ರಾಜಕೀಯ ನೆಲೆ ಕಲ್ಪಿಸಿದ, ಹೆಚ್ಚು ಅರಣ್ಯ ಸಚಿವರನ್ನು ನೀಡಿದ ಜಿಲ್ಲೆ ಬಾಗಲಕೋಟವೇ.
ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಗಳಲ್ಲಿ ಬಾಗಲಕೋಟ ಕೂಡ ಒಂದು. ನಾಲ್ಕು ದಶಕದ ಹಿಂದೆಯೇ ಇಬ್ಬರು ಮುಖ್ಯಮಂತ್ರಿಗಳನ್ನು ಅವಿಭಜಿತ ವಿಜಯಪುರ ಜಿಲ್ಲೆ ಕಂಡಿತ್ತು. ಜಮಖಂಡಿಯ ಬಿ.ಡಿ.ಜತ್ತಿ. ಹುನಗುಂದದ ಎಸ್.ಆರ್.ಕಂಠಿ ಉನ್ನತ ಸ್ಥಾನಕ್ಕೆ ಏರಿದ್ದರು. ನಂತರ ಬಿಡಿ ಜತ್ತಿ ಉಪರಾಷ್ಟ್ರಪತಿಯಾಗಿ, ಹಂಗಾಮಿ ರಾಷ್ಟ್ರಪತಿಯಾಗಿಯೂ ಕಾರ‍್ಯನಿರ್ವಹಿಸಿದ್ದು ಇತಿಹಾಸ.
ರಾಜ್ಯದ ಮೂವರು ಮುಖ್ಯಮಂತ್ರಿಗಳಾಗಿದ್ದವರು ಬಾಗಲಕೋಟ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಓರೆಗೆ ಹಚ್ಚಿದವರು. ಅದರಲ್ಲಿ ಮೊದಲಿಗರು ನಿಜಲಿಂಗಪ್ಪ. ಅವರು ಇಲ್ಲಿಂದ ವಿಧಾನಸಭೆಗೆ ಕಣಕ್ಕಿಳಿದು ಗೆದ್ದಿದ್ದರು. ಆನಂತರ ವೀರೇಂದ್ರ ಪಾಟೀಲ್. 1980ರಲ್ಲಿ ಸ್ವ ಕ್ಷೇತ್ರ ಕಲಬುರಗಿ ಬಿಟ್ಟು ಬಾಗಲಕೋಟದಲ್ಲಿ ಸ್ಪರ್ಧಿಸಿ ಲೋಕಸಭೆಗೂ ಆಯ್ಕೆಯಾಗಿದ್ದರು. ಇದಾದ ನಂತರ ಕಣಕ್ಕೆ ಇಳಿದವರು ರಾಮಕೃಷ್ಣ ಹೆಗಡೆ ಇಲ್ಲಿನ ಕೆಲ ಆತ್ಮೀಯರ ಮಾತಿಗೆ ಕಟ್ಟು ಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸಿದ್ದು ನ್ಯಾಮಗೌಡ ವಿರುದ್ಧ ಸೋತಿದ್ದರು. ಇದಾದ ನಂತರ ಇಲ್ಲಿ ಯಾವೊಬ್ಬ ಮುಖ್ಯಮಂತ್ರಿಯೂ ಚುನಾವಣೆಗೆ ಸ್ಪರ್ಧಿಸುವ ಸಾಹಸ ಮಾಡಿಲ್ಲ.
ಇನ್ನು ಜಿಲ್ಲೆಯಿಂದ ಸಚಿವ ಸ್ಥಾನ ಗಿಟ್ಟಿಸಿದವರಲ್ಲಿ ಹೆಚ್ಚು ಅರಣ್ಯ ಸಚಿವರಾಗಿರುವುದು ವಿಶೇಷ. ಜಮಖಂಡಿಯಿಂದ ಆಯ್ಕೆಯಾಗಿದ್ದ ಪತ್ತಾರ, ಜಿ.ಎಸ್.ಬಾಗಲಕೋಟ ಅವರಿಗೆ ಒಲಿದಿದ್ದು ಅರಣ್ಯ ಖಾತೆ. ಹಿಂದೆ ಗುಳೇದಗುಡ್ಡದಿಂದ ಆಯ್ಕೆಯಾಗುತ್ತಿದ್ದ ಎಚ್.ವೈ.ಮೇಟಿ ಅವರೂ ಮೊದಲಿಗೆ ಅರಣ್ಯ ಸಚಿವರಾಗಿದ್ದರು. ಸೀಮಿತ ಅರಣ್ಯವಿದ್ದರೂ ಜಿಲ್ಲೆಗೆ ಅರಣ್ಯ ಖಾತೆ ದಕ್ಕಿ ಬಂದಿದ್ದು ಮಾತ್ರ ಕಾಕತಾಳೀಯ.
ಮೆಟ್ಟಿಲಾಗದ ಪಂಚಾಯಿತಿ
ಹಿಂದೆಲ್ಲಾ ತಾಲೂಕು ಮಂಡಳಿ ಅಧ್ಯಕ್ಷರಾದರೆ ಸಚಿವರಾಗುವುದು ಗ್ಯಾರಂಟಿ ಎನ್ನುವಂತಿತ್ತು. ಬಾಗಲಕೋಟದಲ್ಲಿ ಹೀಗೆ ಅವಕಾಶ ಪಡೆದವರೂ ಇದ್ದಾರೆ. ಪಂಚಾಯಿತಿ ವ್ಯವಸ್ಥೆ ಬಂದ ಮೇಲೆ ಅದು ರಾಜಕೀಯಕ್ಕೆ ಮೆಟ್ಟಿಲಾಯಿತು. ಪರಿಷತ್ ಸದಸ್ಯರಾಗಿದ್ದ ಎಸ್.ಆರ್.ಪಾಟೀಲ್ ನಂತರ ಸತತ ವಿಧಾನಪರಿಷತ್‌ಗೆ ಆಯ್ಕೆಯಾದರೆ, ಗೌರಮ್ಮ ಕಾಶಪ್ಪನವರ ಪತಿ ಅಕಾಲಿಕ ನಿಧನದ ವೇಳೆ ಹುನಗುಂದದಿಂದ ಚುನಾಯಿತರಾದರು. ಆನಂತರದ ದಶಕದಲ್ಲಿ ಶಾಸನಸಭೆಗೆ ಪ್ರವೇಶ ಪಡೆದವರು ಹನುಮಂತ ನಿರಾಣಿ ಮಾತ್ರ. ಕಳೆದ ವರ್ಷ ಅವರು ಪದವೀಧರರ ಕ್ಷೇತ್ರದಿಂದ ವಿಧಾಪರಿಷತ್‌ಗೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಗಾದಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ವಿಚಾರ ಬಂದಾಗ ಕಾಂಗ್ರೆಸ್ ಅವಕಾಶ ಸಿಕ್ಕಿದ್ದು ಡಾ.ಎಸ್.ಬಿ.ನಾಗರಾಳ ಅವರಿಗೆ ಮಾತ್ರ. ನಂತರ ಚಿಮ್ಮನಕಟ್ಟಿ ಹೆಸರು ಕೇಳಿ ಬಂದರೂ ಅವಕಾಶ ಸಿಗಲಿಲ್ಲ. ಈಗ ಎಸ್.ಆರ್.ಪಾಟೀಲ ಹೆಸರು ಇನ್ನೂ ಚಾಲ್ತಿಯಲ್ಲಿದೆ. ಬಿಜೆಪಿಯಲ್ಲಿ ಶಾಸಕ ಗೋವಿಂದಕಾರಜೋಳ ಹೆಸರು ಇತ್ತಾದರೂ ಅವಕಾಶ ಸಿಕ್ಕಿಲ್ಲ.
ಕಳೆದ 20 ವರ್ಷಗಳ ಅವಧಿಯಲ್ಲಿ ಜಿಲ್ಲೆ ಸಾಕಷ್ಟು ಪ್ರಗತಿ ಕಂಡಿದೆ. ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಾಗಲಕೋಟನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದ ಪ್ರಾಥಃಸ್ಮರಣೀಯರು. ಅವರನ್ನೂ ನೆನೆಯದಿದ್ದರೆ ತಪ್ಪಾದೀತು. ವಿಜಯಪುರ ಅಖಂಡ ಜಿಲ್ಲೆಯಾಗಿದ್ದ ವೇಳೆ ಎಲ್ಲ ರಾಜಕೀಯ ಲಾಭಗಳೂ ಅಲ್ಲಿನವರಿಗೆ ಮೀಸಲಾಗಿದ್ದವು. ಈ ಭಾಗದವರಿಗೆ ರಾಜಕೀಯ, ಸರಕಾರದ ಸೌಲಭ್ಯ ಸಿಕ್ಕುತ್ತಿರಲಿಲ್ಲ. ಹೊಸ ಜಿಲ್ಲೆ ಆದ ಮೇಲೆ ರಾಜಕೀಯ ಅವಕಾಶಗಳು ಇಲ್ಲಿನವರಿಗೆ ಸಿಕ್ಕುತ್ತಿವೆ. ಮುಳುಗಡೆ ಸಂತ್ರಸ್ತರಿಗೆ ಪರಿಹಾರ,ಪುನರ್ ವಸತಿ, ಅಗತ್ಯ ಮೂಲಸೌಲಭ್ಯಗಳ ನೆಪದಲ್ಲಿ ಆದ ಅಭಿವೃದ್ಧಿ ಜಿಲ್ಲೆಗೆ ಪೂರಕವಾಗಿದೆ. ಎಸ್.ಎಂ. ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಕೊಟ್ಟ 530 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಕೂಡ ಅಭಿವೃದ್ದಿಗೆ ವೇಗ ಹೆಚ್ಚಳಕ್ಕೆ ಕಾರಣವಾಗಿದೆ. ಅಂದು ನೀರಾವರಿ ಸಚಿವರಾಗಿದ್ದ ಎಚ್.ಕೆ. ಪಾಟೀಲ ಕೂಡ ಪ್ರಮುಖ ಮೂರು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದರು. ಜಿಲ್ಲೆಯ ಅಭಿವೃದ್ಧಿಯಲ್ಲಿ ಡಾ. ಎಸ್.ಎಂ. ಜಾಮದಾರ್ ಅವರ ಕೊಡುಗೆ ಕೂಡಾ ಸಾಕಷ್ಟಿದೆ. ಯಾವುದೇ ಸರಕಾರ ಬಂದಾಗಲೂ ಜಿಲ್ಲೆಯ ಜನಪ್ರತಿನಿಧಿಗಳು ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ.