ಫಾದರ್ ಅಂತಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಕ್ರೈಸ್ತ ಗ್ರಾಮವಾದ ಹಾರೋಬೆಲೆಯಲ್ಲಿ ಇನ್ನಾಸಪ್ಪ ಮತ್ತು ಅಂತೋಣಮ್ಮನವರ ಪುತ್ರನಾಗಿ ೧೨-೦೯-೧೯೨೯ರಂದು ಅಂತಪ್ಪ ಜನಿಸಿದರು. ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು ಸಂತ ಅಲೋಶಿಯಸ್ ಶಾಲೆ ಹಾಗೂ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು.
ಶಾಲಾ ಶಿಕ್ಷಣದ ನಂತರ ಗುರುಮಠ ಸೇರಿ ಆಗ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿದ್ದ ಸಂತ ಮರಿಯಮ್ಮ ಗುರುಮಂದಿರದಲ್ಲಿ ಲತೀನ್ ಭಾಷಾಕಲಿಕೆಯ ನಂತರ ಮಲ್ಲೇಶ್ವರದಲ್ಲಿರುವ ಸಂತ ರಾಯಪ್ಪರ ಗುರುಮಠದಲ್ಲಿ ವ್ಯಾಸಂಗ ಮುಂದುವರಿಸಿ ೬-೪-೧೯೫೭ರಲ್ಲಿ ಗುರುದೀಕ್ಷೆ ಪಡೆದರು. ಇವರ ಅನುಪಮ ಮೇಧಾಶಕ್ತಿಯನ್ನು ಅರಿತಿದ್ದ ಪ್ರಾಚಾರ್ಯರು ಹಾಗೂ ಬಿಷಪರು ಇವರನ್ನು ಉನ್ನತ ವ್ಯಾಸಂಗಕ್ಕಾಗಿ ರೋಮಿನ ಪ್ರತಿಷ್ಠಿತ ಗ್ರೆಗರಿಯನ್ ವಿಶ್ವವಿದ್ಯಾಲಯಕ್ಕೆ ಕಳಿಸಿಕೊಟ್ಟರು. ನಮ್ಮ ದೇಶದಿಂದ ಆ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ಮೊದಲಿಗರಾದ ಇವರು ಅಲ್ಲಿ ಸೇಕ್ರೆಡ್ ಥಿಯೊಲಾಜಿಯೋ ಡಾಕ್ಟರೇಟ್ ಪಡೆದ ಮೊದಲಿಗರೂ ಹೌದು.
ಇಂಡಿಯಾ ದೇಶಕ್ಕೆ ಹಿಂದಿರುಗಿದ ನಂತರ ಬೆಂಗಳೂರು ಮಹಾಧರ್ಮಪೀಠದ ಕುಲಪತಿಯಾಗಿ ನೇಮಕಗೊಂಡರು. ನಂತರ ಕಬ್ಬನ್ ಪೇಟೆಯ ಲೂರ್ದುಪಾಠಶಾಲೆ, ಸರ್ವಜ್ಞನಗರದ ಅಲೋಶಿಯಸ್ ಪ್ರೌಢಶಾಲೆ ಹಾಗೂ ಹಲಸೂರಿನ ಲೂರ್ದು ಪ್ರೌಢಶಾಲೆಗಳ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಬೆಳಕಾದರು. ಕೆಲಕಾಲ ಕರ್ನಾಟಕತಾರೆ ಮಾಸಿಕದ ಸಂಪಾದಕರೂ ಆಗಿದ್ದರು. ಎರಡನೇ ವ್ಯಾಟಿಕನ್ ಸಮಾವೇಶದ ನಿರ್ಣಯಗಳು ಹೊರಬರುತ್ತಿದ್ದಂತೆ ಕನ್ನಡದಲ್ಲಿ ಧಾರ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಇವರು ಸ್ವಪ್ರೇರಣೆಯಿಂದ ರಚಿಸಿದ / ಅನುವಾದಿಸಿದ / ಸಂಪಾದಿಸಿದ ಕೃತಿಗಳು ಇಂದಿಗೂ ಕನ್ನಡ ಕಥೋಲಿಕ ಜನಮಾನಸದಲ್ಲಿ ಅಮರವಾಗಿವೆ ಹಾಗೂ ಪ್ರೇರಣಾತ್ಮಕವಾಗಿವೆ. ಬೆಂಗಳೂರು ಮಹಾಧರ್ಮಪೀಠದ ಶಿಕ್ಷಣಮಂಡಲಿಯ ಕಾರ್ಯದರ್ಶಿಯಾಗಿದ್ದಾಗ ಇವರ ಪ್ರಯತ್ನದಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅಂದರೆ ತಂಬುಚೆಟ್ಟಿಪಾಳ್ಯ, ಬೇಗೂರು, ಹಾರೋಬೆಲೆ, ಮರಿಯಾಪುರ, ಶಿಲ್ವೆಪುರ ಮುಂತಾದೆಡೆಗಳಲ್ಲಿ ಪ್ರೌಢಶಾಲೆಗಳು ಪ್ರಾರಂಭವಾದವು.
ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಲತೀನ್, ಹೀಬ್ರು, ಗ್ರೀಕ್ ಮತ್ತು ಇಟಾಲಿಯನ್ ಭಾಷೆಗಳ ಪರಿಚಯ ಇವರಿಗಿದ್ದುದರಿಂದ 'ಪವಿತ್ರಬೈಬಲಿನ ಕರ್ನಾಟಕ ಪ್ರಾದೇಶಿಕ ಭಾಷಾಂತರ ಸಮಿತಿ'ಯ ಕಾರ್ಯದರ್ಶಿಯಾಗಿ ನೇಮಕಗೊಂಡು ಕಥೋಲಿಕ ಅವತರಣಿಕೆಯೂ ಸೇರಿದಂತೆ ಉಭಯ ಬಳಕೆಯ ಸಮಗ್ರ ಕನ್ನಡ ಬೈಬಲಿನ ಪ್ರಕಟಣೆ ಇವರ ಜೀವನದ ಮಹತ್ಸಾಧನೆಯಾಯಿತು. ೧೭-೧೮ನೇ ಶತಮಾನಗಳಲ್ಲಿ ಕನ್ನಡನಾಡಿನಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದ ಜೆಸ್ವಿತ್ಪಾದ್ರಿಗಳು ರೋಮಿನಲ್ಲಿದ್ದ ತಮ್ಮ ವರಿಷ್ಠರಿಗೆ ಕಳಿಸಿದ್ದ ವರದಿಗಳನ್ನು ಅಂತಪ್ಪನವರು ಸಂಪಾದಿಸಿ ಕನ್ನಡದಲ್ಲಿ ಪ್ರಕಟಿಸಿ ಕರ್ನಾಟಕ ಇತಿಹಾಸದ ಪುನರ್ರಚನೆಗೆ ನಾಂದಿಯಾದರು.
ಇವರ ಸಾಚಾ ಕನ್ನಡತನ, ಮೇರುವ್ಯಕ್ತಿತ್ವ ಹಾಗೂ ಶ್ರದ್ಧಾಕಾಳಜಿಗಳ ಕಾರ್ಯಕೌಶಲ್ಯಗಳನ್ನು ಹಲವಾರು ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ೬೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಿದೆ. ಇವೆಲ್ಲಕ್ಕಿಂತ ಮಿಗಿಲೆನ್ನುವಂತೆ ಕರ್ನಾಟಕ ಘನಸರ್ಕಾರವು ೨೦೦೧ರ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇವರನ್ನು ಕೀರ್ತಿಯ ಔನ್ನತ್ಯಕ್ಕೇರಿಸಿದೆ.
ಜೆಸ್ವಿತ್ ಪತ್ರಗಳನ್ನಾಧರಿಸಿ ಸ್ವಾಮಿ ಅಂತಪ್ಪನವರು ಬರೆದಿರುವ ಇತಿಹಾಸದ ಚರ್ಚಾಪುಸ್ತಕಗಳನ್ನು ಹೀಗೆ ಪಟ್ಟಿ ಮಾಡಬಹುದು:
- ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಕ್ರೈಸ್ತ ಧರ್ಮದ ಉಗಮ (೧೯೯೦)
- ಆನೆಕಲ್ಲು ತಾಲೂಕಿನಲ್ಲಿ ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ (೧೯೯೩)
- ಶ್ರೀರಂಗಪಟ್ಟಣದಲ್ಲಿ ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ (೧೯೯೪)
- ಕೊಳ್ಳೇಗಾಲ ತಾಲೂಕಿನಲ್ಲಿ ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ (೧೯೯೭)
- ಕನಕಪುರ ತಾಲೂಕಿನಲ್ಲಿ ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ (೧೯೯೭)
- ಬೆಂಗಳೂರು ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ (೨೦೦೦)
- ಉತ್ತರ ಕರ್ನಾಟಕದಲ್ಲಿ ಕ್ರೈಸ್ತ ಧರ್ಮದ ಉಗಮ (೨೦೦೧)
- ನಡು ಕರ್ನಾಟಕದಲ್ಲಿ ಕ್ರೈಸ್ತ ಧರ್ಮದ ಉಗಮ (೨೦೦೩)
- ಹೊಸಗನ್ನಡದ ಪ್ರಥಮ ಗ್ರಂಥಕಾರ ಲಿಯೊನಾರ್ಡೊ ಚಿನ್ನಮಿ (೨೦೦೫)
- ಶ್ರೀ ಕನಕದಾಸ, ಶ್ರೀ ತಿಮ್ಮಪ್ಪದಾಸ ಇವರು ಕ್ರೈಸ್ತರಾದರೇ? (೨೦೦೬)
- ವೀರಶೈವ (ಲಿಂಗಾಯತ) ಧರ್ಮ ಮತ್ತು ಕ್ರೈಸ್ತಧರ್ಮ / ಅಲ್ಲಮಪ್ರಭು ಕುರಿತ ಒಂದು ಊಹೆ (೨೦೦೯)
- ಕ್ರೈಸ್ತಧರ್ಮದ ದೃಷ್ಟಿಯಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳು ’ದ್ವಿತೀಯ ಅಲ್ಲಮ’ (೨೦೧೦)
- ಮಂಡ್ಯ ಮತ್ತು ಚನ್ನಪಟ್ಟಣ-ರಾಮನಗರ ಜಿಲ್ಲೆಗಳಲ್ಲಿ ಕ್ರೈಸ್ತಧರ್ಮದ ಉಗಮ (೨೦೧೦)
- ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕ್ರೈಸ್ತಧರ್ಮದ ಉಗಮ (೨೦೧೦)