ಮರಿಯಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುವಗುರು ಫಾದರ್ ಫಿಲಿಪ್ ಸಿಝನ್,MEP ರವರು ಬಿಷಪ್ ಷೆವಾಲಿಯೇ ಅವರ ಅಣತಿಯಂತೆ ಮೈಸೂರು ಮಹಾರಾಜರ ಅಪೇಕ್ಷೆಯ ಮೇರೆಗೆ ಕ್ರಿಸ್ತಶಕ ೧೮೭೬-೭೬ರ ಅವಧಿಯ ಭೀಕರ ಬರಗಾಲ ಹಾಗೂ ಪ್ಲೇಗಿನಿಂದ ಅನಾಥರಾದ ಮಕ್ಕಳನ್ನು ಪೋಷಿಸುವ ಹೊಣೆ ಹೊತ್ತು ಆ ಮಕ್ಕಳು ಬೆಳೆದ ಮೇಲೆ ಅವರಿಗಾಗಿ ಈ ಊರನ್ನು ಕಟ್ಟಿದರು. ಈ ಊರಿಗೆ ಸನಿಹದಲ್ಲೇ ಇದ್ದ ತಟ್ಟುಗುಪ್ಪೆ ಎಂಬ ಪಾಳುಬಿದ್ದು ನಿರ್ವಸಿತವಾಗಿದ್ದ ಗ್ರಾಮವನ್ನು ಮಹಾರಾಜರಿಂದ ಪಡೆದು ಮರಿಯಾಪುರವನ್ನು ಕಟ್ಟಿದರು.

ಕ್ರಿಸ್ತಶಕ ೧೮೯೯ರಲ್ಲಿ ಪುನರ್ ನಿರ್ಮಾಣಗೊಂಡ ಮರಿಯಾಪುರ ದೇವಾಲಯ ಕ್ರಿಸ್ತಶಕ ೧೯೮೬ರಲ್ಲಿ ಜೀರ್ಣೋದ್ಧಾರ ಹೊಂದಿತು. ಖ್ಯಾತ ಉದ್ಯಮಿ ಹರೀಶ್ ಖೋಡೆ ಹಾಗೂ ಅಂದಿನ ಬೆಂಗಳೂರು ಮಹಾಧರ್ಮಪ್ರಾಂತ್ಯದ ವರಿಷ್ಠರ ಧನಸಹಾಯದಿಂದ ಸ್ವಾಮಿ ಎಡ್ವಿನ್ ಕಾಗೂರವರ ನೇತೃತ್ವದಲ್ಲಿ ಮರಿಯಾಪುರ ದೇವಾಲಯ ಹೊಸ ರೂಪ ತಳೆಯಿತು. ಮೂಲತಃ ಮೊಗಲಾಯಿ ಶೈಲಿಯಲ್ಲಿದ್ದ ಈ ದೇವಾಲಯದ ರೂಪ ಈಗ ಮೇಲಿನರ್ಧ ಮೊಗಲಾಯಿ ಶೈಲಿಯಲ್ಲೇ ಇದ್ದು, ಕೆಳಗಿನರ್ಧ ಗ್ರೀಕೋ- ರೋಮನ್ ಶೈಲಿ ಹೊಂದಿದೆ. ಆದರೆ ದೇವಾಲಯದ ಒಳಭಾಗ ಮಾತ್ರ ಹಿಂದಿನ ದೃಕ್ ಸಂಪತ್ತನ್ನೇ ಉಳಿಸಿಕೊಂಡಿದೆ. ಪೀಠದ ಮೇಲೆ ಉತ್ತರಿಕೆ ದೇವಮಾತೆಯ ಸುಂದರ ಪ್ರತಿಮೆ ಮಾತೃವಾತ್ಸಲ್ಯದಿಂದ ಸ್ವಾಗತಿಸುತ್ತಿದೆ. ಅಮ್ಮನ ಎರಡೂ ಪಕ್ಕದಲ್ಲಿ ಸಂತ ಅಂತೋಣಿ ಹಾಗೂ ಸಂತ ಝೇವಿಯರ್ ಅವರ ಪ್ರತಿಮೆಗಳಿವೆ. ಪೀಠದ ಮೇಲಿನ ಚಾವಣಿ ಗುಮ್ಮಟಾಕಾರವಾಗಿದ್ದು ಕ್ರಿಸ್ತಶಕ ೧೯೮೪ರಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿತ್ತು. ಆಗ ಒಂದೂಕಾಲು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅದರ ದುರಸ್ತಿ ಕಾರ್ಯ ನಡೆಯಿತು. ದೇವಾಲಯದ ಒಳಾಂಗಣವು ಶಿಲುಬೆಯಾಕಾರದಲ್ಲಿದ್ದು ಪೀಠದ ಎರಡೂ ಬದಿ ರೆಕ್ಕೆಗಳಿವೆ. ಒಂದಾನೊಂದು ಕಾಲದಲ್ಲಿ ಒಂದು ರೆಕ್ಕೆ ದಲಿತರಿಗೆಂದೇ ಮೀಸಲಾಗಿತ್ತು. ಪೀಠಾಭಿಮುಖವಾಗಿ ನಿಂತಾಗ ಬಲಪಾರ್ಶ್ವದಲ್ಲಿ ಸ್ವಾಮಿ ಸಿಝನ್ ಅವರ ಸಮಾಧಿಯೂ ಸಮಾಧಿಗಲ್ಲೂ ಇದೆ.

ಕಾರ್ಮೆಲೈಟ್ ಸೋದರಿಯರು ಊರಿನಲ್ಲಿ ಕನ್ಯಾಮಠ ಹೊಂದಿದ್ದಾರೆ. ಇಲ್ಲಿನ ನವಜ್ಯೋತಿ ಪ್ರೌಢಶಾಲೆ ಸುತ್ತ ಮುತ್ತಲ ಊರುಗಳಲ್ಲೆಲ್ಲಾ ತುಂಬಾ ಹೆಸರು ಪಡೆದಿದೆ. ದೇವಾಲಯದಿಂದ ಸುಮಾರು ೨೦೦ ಮೀಟರು ಪಶ್ಚಿಮಕ್ಕೆ ಜಲದೇವರ ತಾಯಿಯ ಪ್ರತಿಮೆಯು ಬಾವಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟದೆ. ಪ್ರತಿವರ್ಷ ಜುಲೈ ೧೬ ರಂದು ಊರಿನ ಕಾರ್ಮೆಲ್ ಮಾತೆಯ ಉತ್ಸವವನ್ನು ಉತ್ಸಾಹದಿಂದ ಆಚರಿಸಿ ಬೇಡುದಲೆ ಊಟ ಏರ್ಪಡಿಸುತ್ತಾರೆ. ತೇರಿನ ಮೆರವಣಿಗೆಯ ನಂತರ ನಾಟಕಾಭಿನಯವೂ ಇರುತ್ತದೆ. ಮರಿಯಾಪುರದ ಸ್ಥಾಪಕ ಫಿಲಿಫ್ ಸಿಝನ್ ಸ್ವಾಮಿಯವರ ನೆನಪಿನಲ್ಲಿ ಊರಿನ ಜನರು ಪ್ರತಿವರ್ಷ ತಪಸ್ಸುಕಾಲದ ಒಂದು ಶನಿವಾರದಂದು ರಾತ್ರಿಯಿಡೀ ಚರ್ಚಿನ ಹಿಂಬದಿಯಿರುವ ಕಿರುಗುಡ್ಡದ ಮೇಲೆ ಧ್ವನಿಬೆಳಕಿನ ಸಂಯೋಜನೆಯಲ್ಲಿ ನಾಟಕ ಆಡುತ್ತಾರೆ.