ಜೆಸ್ವಿತ್ ಪತ್ರಗಳು
ಹದಿನೇಳು ಮತ್ತು ಹದಿನೆಂಟನೇ ಶತಮಾನಗಳಲ್ಲಿ ಇಂಡಿಯಾ ದೇಶಕ್ಕೆ ಐರೋಪ್ಯನಾಡುಗಳಿಂದ ಆಗಮಿಸಿ ಕ್ರೈಸ್ತ ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ. ಮಿಷನರಿಗಳು ಅವುಗಳನ್ನೆಲ್ಲ ಅಧ್ಯಯನ ಮಾಡಿ ನಗಣ್ಯವೆನಿಸಬಹುದಾದ ಸಣ್ಣ ವಿವರವನ್ನೂ ದಾಖಲಿಸುವುದರ ಜೊತೆಗೆ ತಾವು ಆ ವರ್ಷ ಎಷ್ಟು ಜನರಿಗೆ ಕ್ರೈಸ್ತದೀಕ್ಷೆ ನೀಡಿದರೆಂಬುದರ ಲೆಕ್ಕ ಹೇಳಬೇಕಿತ್ತು. ಇದರೊಂದಿಗೆ ಧರ್ಮಪ್ರಚಾರಕಾರ್ಯದಲ್ಲಿ ಅವರು ಅನುಭವಿಸುತ್ತಿರುವ ಕಷ್ಟಸಂಕಟ ಯಾತನೆಗಳ ಚಿತ್ರಣವೂ ಇರುತ್ತಿತ್ತು.
ದಕ್ಷಿಣ ಕರ್ನಾಟಕದಲ್ಲಿ
[ಬದಲಾಯಿಸಿ]"ಮೈಸೂರು ಪ್ರಾಂತ್ಯದ ಜೆಸ್ವಿತ್ ಪತ್ರಗಳು" ಎನಿಸಿಕೊಳ್ಳುವ ಈ ವಾರ್ಷಿಕ ವರದಿಗಳು ಕ್ರಿಸ್ತಶಕ ೧೬೪೦ ರಿಂದ ೧೭೫೦ ಅವಧಿಯವಾಗಿದ್ದು ಲತೀನ್, ಸ್ಪಾನಿಷ್, ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಬರೆಯಲಾಗಿವೆ. ಇಂದಿಗೂ ಈ ವರದಿಗಳನ್ನು ಕ್ರೈಸ್ತ ಜಗದ್ಗುರುಪೀಠವಿರುವ ವ್ಯಾಟಿಕನ್ನಿನ ಗ್ರೆಗರಿಯನ್ ವಿಶ್ವವಿದ್ಯಾಲಯದ ಪತ್ರಾಗಾರದಲ್ಲಿ ಸಂಗ್ರಹಿಸಿಡಲಾಗಿದೆ.
ಇತಿಹಾಸಾಧ್ಯಯನ
[ಬದಲಾಯಿಸಿ]ಜೆಸ್ವಿತ್ ಪತ್ರಗಳನ್ನು ಇತಿಹಾಸಾಧ್ಯಯನದ ದೃಷ್ಟಿಯಿಂದ ಅವಲೋಕಿಸಿದರೆ ರಾಜರುಗಳ ಪೂರ್ವೋತ್ತರಗಳಕುರಿತ ವರದಿಗಳು ಕರ್ನಾಟಕದ ಇತಿಹಾಸದ ಪುನರ್ ರಚನೆಗೆ ಕಾರಣವಾಗಿವೆ ಎಂದು ಘಂಟಾಘೋಷವಾಗಿ ಹೇಳಬಹುದು. ನಮ್ಮ ದೇಶದ ಪ್ರಾಚೀನ ಇತಿಹಾಸದ ದಾಖಲಿಸುವ ಸಂದರ್ಭದಲ್ಲಿ ಸ್ಥಳೀಯ ಬರಹಗಾರನಿಗೆ ತನ್ನೊಡೆಯನ ಉಪ್ಪಿನ ಋಣವೇ ಭಾರವಾಗುವುದರಿಂದ ಆತ ಒಡೆಯನ ಉನ್ನತಿಯ ವಿಷಯಗಳನ್ನಷ್ಟೇ ದಾಖಲಿಸುತ್ತಾನೆ, ಅವನತಿಯ ವಿಷಯಗಳನ್ನು ಮರೆಮಾಚುತ್ತಾನೆ. ಆದ್ದರಿಂದ ನಮ್ಮ ದೇಶದ ಚರಿತ್ರೆಯನ್ನು ಪುನರ್ ನಿರೂಪಿಸುವಾಗ ನಮ್ಮ ನಾಡಿನ ಆಕರಗಳು ಪೂರ್ಣ ನ್ಯಾಯ ಒದಗಿಸುವುದಿಲ್ಲ. ಆದರೆ ವಿದೇಶೀ ವ್ಯಕ್ತಿಗೆ ಈ ಹಂಗು ಇರುವುದಿಲ್ಲವಾದ್ದರಿಂದ ಆತ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ದಾಖಲಿಸುತ್ತಾನೆ. ಈ ಒಂದು ದೃಷ್ಟಿಯಿಂದ ಜೆಸ್ವಿತ್ ಪತ್ರಗಳ ಬೆಳಕಲ್ಲಿ ನಮಗೆ ನಮ್ಮ ನಾಡಿನ ಇತಿಹಾಸದ ಸ್ಪಷ್ಟ ದೃಶ್ಯಗಳು ಕಾಣತೊಡಗುತ್ತವೆ.
ಕ್ರಿಸ್ತಶಕ ೧೭೫೬ರ ಒಂದು ಜೆಸ್ವಿತ್ ಪತ್ರದ ಮೂಸೆಯಲ್ಲಿ ನೋಡಿದಾಗ ಹೈದರಾಲಿಯು ಒಬ್ಬ ರಾಜಕೀಯ ಮುತ್ಸದ್ದಿಯಾಗಿರಲಿಲ್ಲ, ಅವನ ರಣತಂತ್ರ ನಡೆನುಡಿ ಎಲ್ಲವೂ ಕುಲೀನ ಧೀಮಂತಿಕೆಯಿಲ್ಲದ, ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ದುರುಳ ದುಂಡಾವರ್ತಿಯ 'ಗೂಂಡಾ' ಅಥವಾ 'ರೌಡಿ'ತನವಾಗಿತ್ತೆಂದು ತಿಳಿಯಬಹುದಾಗಿದೆ. ಹೀಗೆ ಹೈದರನ ಕಾಲದ ಕಾಣದ ಮಗ್ಗಲುಗಳ ಪರಿಚಯ ನಮಗಾಗುವುದು ಜೆಸ್ವಿತ್ ಪತ್ರಗಳಿಂದಲೇ.
ಸಂಪಾದನೆ
[ಬದಲಾಯಿಸಿ]ಜೆಸ್ವಿತ್ ಪತ್ರಗಳ ಮೂಲಕ ಸಮಗ್ರ ಇತಿಹಾಸದರ್ಶನವನ್ನು ನಮಗೆ ಕಟ್ಟಿಕೊಡುವ ಕೆಲಸದಲ್ಲಿ ಮೊತ್ತಮೊದಲು ಅಂದರೆ ೧೯೫೦ರ ದಶಕದಲ್ಲಿ ತೊಡಗಿಕೊಂಡವರು ಜೆಸ್ವಿತ್ ಪಾದ್ರಿಯವರಾದ ಜೆ ಫೆರೋಲಿಯವರು. Jesuits in Malabar ಮತ್ತು Jesuits in Mysore ಎಂಬ ತಮ್ಮ ಅಮೂಲ್ಯ ಗ್ರಂಥಗಳ ಮೂಲಕ ಫೆರೋಲಿಯವರು ನಮ್ಮ ನಾಡಿನ ಇತಿಹಾಸದ ನವೀಕರಣಕ್ಕೆ ಕೈಹಾಕಿದ್ದರು. ಆ ಸಮಯದಲ್ಲಿ ಅವರಿಗೆ ಜೆಸ್ವಿತರ ಸಮಗ್ರ ಪತ್ರಗಳು ಲಭ್ಯವಿರಲಿಲ್ಲವೆಂಬುದು ಒಂದು ನ್ಯೂನತೆಯಾಗಿ ಪರಿಣಮಿಸುತ್ತದೆ. ಅವರ ಪುಸ್ತಕಗಳನ್ನು ಪರಾಮರ್ಶಿಸಿದಾಗ ಇತಿಹಾಸವನ್ನು ಕುರಿತಂತೆ ಅವರ ಅಪಾರ ಪಾಂಡಿತ್ಯವನ್ನು ಮೆಚ್ಚದಿರಲು ಸಾಧ್ಯವಾಗದು.
ಕನ್ನಡಾನುವಾದ
[ಬದಲಾಯಿಸಿ]ರೋಮ್ ನ ಪ್ರತಿಷ್ಠಿತ ಗ್ರೆಗರಿಯನ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆದ ಮೊದಲ ಕನ್ನಡಿಗ ಫಾದರ್ ಅಂತಪ್ಪ. ೬೦ನೇ ದಶಕದ ಆ ವಿದ್ಯಾರ್ಥಿದೆಸೆಯಲ್ಲಿ ಅವರು ಅಲ್ಲಿನ ಪತ್ರಾಗಾರದಲ್ಲಿ ನಮ್ಮ ಕನ್ನಡನಾಡಿನ ಕುರಿತ ಉಲ್ಲೇಖಗಳಿಗಾಗಿ ತಡಕಾಡಿದ್ದರು. ಆ ನಿಟ್ಟಿನಲ್ಲಿ ಅವರು ನಮ್ಮ ನಾಡಿನಲ್ಲಿ ಧರ್ಮಪ್ರಚಾರ ಮಾಡಿದ ವಿದೇಶೀ ಜೆಸ್ವಿತ್ ಮತಪ್ರಚಾರಕರ ವಾರ್ಷಿಕ ವರದಿಗಳ ಅತ್ಯಮೂಲ್ಯ ಸಂಗ್ರಹವನ್ನು ಅಲ್ಲಿ ಕಂಡರು. ಆದರೆ ತಮಗೆ ನೀಡಿದ್ದ ಒಂದು ವರ್ಷದ ಗಡುವಿನಲ್ಲಿ ಅವರು ಪವಿತ್ರ ಧರ್ಮಶಾಸ್ತ್ರದಲ್ಲಿ ಡಾಕ್ಟರೆಟ್ ಪಡೆದು ಇಂಡಿಯಾಕ್ಕೆ ಹಿಂದಿರುಗಬೇಕಾಗಿತ್ತು. ಅವರ ಮನದಲ್ಲಿ ಆ ಗ್ರೆಗರಿಯನ್ ವಿಶ್ವವಿದ್ಯಾಲಯದಲ್ಲಿ ಕಂಡ ಅಮೂಲ್ಯ ನಿಧಿಯನ್ನು ಪಡೆಯುವ ಕನಸು ಅದಮ್ಯವಾಗಿತ್ತು. ಯಾರು ರೋಮ್ ಗೆ ಹೋದರೂ ಆ ಅಮೂಲ್ಯ ನಿಧಿಯ ಕುರಿತು ಹೇಳಿಕಳುಹಿಸಿ ನಂತರ ಅವರು ಬರಿಗೈಯಲ್ಲಿ ಬರುತ್ತಿದ್ದುದನ್ನು ತಿಳಿದು ನಿರಾಶರಾಗುತ್ತಿದ್ದರು. ನೆರಳಚ್ಚು ತಂತ್ರಜ್ಞಾನದ ಪ್ರವೇಶವಾದ ಮೇಲೆ ಅವರು ಸ್ವಪ್ರಯತ್ನದಿಂದಲೇ ಅವನ್ನು ರೋಮ್ ನಿಂದ ತರಿಸಿ ಲತೀನ್, ಸ್ಪಾನಿಷ್, ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಗಳಲ್ಲಿದ್ದ ಅವುಗಳ ಹೂರಣವನ್ನು ಬಲ್ಲವರಿಂದ ಇಂಗ್ಲಿಷ್ ಭಾಷೆಗೆ ತರ್ಜುಮೆಮಾಡಿಸಿ ಅನಂತರ ಅವನ್ನು ಕನ್ನಡಕ್ಕೆ ಭಾಷಾಂತರಿಸಿ ಲಭ್ಯವಿರುವ ಇತರ ಇತಿಹಾಸ ಗ್ರಂಥಗಳೊಂದಿಗೆ ತುಲನೆ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.