ವಿಷಯಕ್ಕೆ ಹೋಗು

ನಾಲ್ವಡಿ ಕೃಷ್ಣರಾಜ ಒಡೆಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಾಲ್ಮಡಿ ಕೃಷ್ಣರಾಜ ಒಡೆಯರ್ ಇಂದ ಪುನರ್ನಿರ್ದೇಶಿತ)

ನಾಲ್ವಡಿ ಕೃಷ್ಣರಾಜ ಒಡೆಯರ್
ಮೈಸೂರು ದೊರೆಗಳು
ಕೃಷ್ಣರಾಜ ಒಡೆಯರ್ (೧೯೦೫ರಲ್ಲಿ ಕಲಾವಿದರಾದ ಕೆ.ಕೇಶವಯ್ಯ ವಿರಚಿತ)
ರಾಜ್ಯಭಾರ೧೮೯೫-೧೯೪೦
ಪಟ್ಟಾಭಿಷೇಕ01 ಫೆಬ್ರವರಿ 1895, ಮೈಸೂರು ಅರಮನೆ
ಜನನ೦೪ ಜೂನ್ ೧೮೮೪
ಜನ್ಮ ಸ್ಥಳಮೈಸೂರು ಅರಮನೆ, ಮೈಸೂರು, ಮೈಸೂರು ರಾಜ್ಯ
ಮರಣ೦೩ ಆಗಸ್ಟ್ ೧೯೪೦ (ವಯಸ್ಸು ೫೬)
ಮರಣ ಸ್ಥಳಬೆಂಗಳೂರು ಅರಮನೆ, ಬೆಂಗಳೂರು, ಮೈಸೂರು ರಾಜ್ಯ
ಪೂರ್ವಾಧಿಕಾರಿಹತ್ತನೇ ಚಾಮರಾಜ ಒಡೆಯರ್ (ತಂದೆ)
ಉತ್ತರಾಧಿಕಾರಿಜಯಚಾಮರಾಜೇಂದ್ರ ಒಡೆಯರ್
Consort toಲಕ್ಷ್ಮೀ ವಿಲಾಸ ಸನ್ನಿಧಾನ ಶ್ರೀ ಪ್ರತಾಪ ಕುಮಾರಿ ಅಮ್ಮಣ್ಣಿಯವರು
ಅರಮನೆಒಡೆಯರ್ ಸಾಮ್ರಾಜ್ಯ
ತಂದೆಹತ್ತನೇ ಚಾಮರಾಜ ಒಡೆಯರ್
ತಾಯಿಮಹಾರಾಣಿ ಕೆಂಪನಂಜಮ್ಮಣ್ಣಿ
ಧಾರ್ಮಿಕ ನಂಬಿಕೆಗಳುಹಿಂದೂ
ನಾಲ್ವಡಿ ಕೃಷ್ಣರಾಜ ಒಡೆಯರು
ನಾಲ್ವಡಿ ಕೃಷ್ಣರಾಜ ಒಡೆಯರು

ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.[]

ಜನನ/ ಜೀವನ

[ಬದಲಾಯಿಸಿ]

ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ್ ಸನ್ನಿಧಾನ ಅವರ ಮೊದಲ ಮಗನಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ೧೮೮೪ ಜೂನ್ ೪ರಂದು ಮೈಸೂರು ಅರಮನೆಯಲ್ಲಿ ಜನಿಸಿದರು. ೧೮೯೪ರಲ್ಲಿ ಕಲ್ಕತ್ತ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಹತ್ತನೇ ಚಾಮರಾಜೇಂದ್ರ ಒಡೆಯರ್ ಗಂಟಲು ನೋವಿನಿಂದಾಗಿ ಆಕಸ್ಮಿಕ ವಾಗಿ ಮರಣ ಹೊಂದಿದರು, ಇನ್ನೂ ಹತ್ತು ವರ್ಷ ವಯಸ್ಸಿನವರಾಗಿದ್ದ ಕೃಷ್ಣರಾಜ ಒಡೆಯರ್ ಅವರು ರಾಜ್ಯಭಾರವನ್ನು ವಹಿಸಿಕೊಳ್ಳಬೇಕಾಯಿತು. ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಕೃಷ್ಣರಾಜ ಒಡೆಯರ್ ೧೯೦೨ರಲ್ಲಿ ೧೮ ವಯಸ್ಸು ತಲುಪುವವರೆಗೆ ರಾಜ್ಯವನ್ನು ರಾಜಪ್ರತಿನಿಧಿಯಾಗಿ ಆಳಿದರು. ೧೯೦೨ ಫೆಬ್ರವರಿ ೨ರಂದು ಕೃಷ್ಣರಾಜ ಒಡೆಯರ್ ಅವರು ತಾಯಿಯಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ಆಗಸ್ಟ್ ಎಂಟರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಆಗಿನ ಬ್ರಿಟೀಷ್ ಭಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿದ್ಯುಕ್ತವಾಗಿ ಮೈಸೂರಿನ ಮಹಾರಾಜರೆಂದು ಘೋಷಿಸಿದರು.[]

ಮಹಾರಾಜರು ಪಿ. ರಾಘವೇಂದ್ರ ರಾವ್ ಅವರ ನಿರ್ದೇಶನದಡಿಯಲ್ಲಿ ಲೋಕರಾಜನ್ ಅರಮನೆಯಲ್ಲಿ ತನ್ನ ಆರಂಭಿಕ ಶಿಕ್ಷಣ ಮತ್ತು ತರಬೇತಿಯನ್ನು ಹೊಂದಿದರು. ಪಾಶ್ಚಿಮಾತ್ಯ ಅಧ್ಯಯನಗಳು ಜೊತೆಗೆ, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಶಿಕ್ಷಣ ಪಡೆದರು. ಕುದುರೆ ಸವಾರಿ ಮತ್ತು ಭಾರತೀಯ ಮತ್ತು ಪಶ್ಚಿಮ ಶಾಸ್ತ್ರೀಯ ಸಂಗೀತವನ್ನು ಕೂಡ ಕಲಿತರು. ಮುಂದೆ ಅಜ್ಮೀರ್ ನ ಮೇಯೊ ಕಾಲೇಜ್‍ನಲ್ಲಿ ಶಿಕ್ಷಣ ಮುಂದುವರೆಸಿದರು, ಆದರೆ ಅನಾರೋಗ್ಯದ ಕಾರಣ ಮೈಸೂರಿಗೆ ಮರಳಬೇಕಾಯ್ತು. ಬಾಂಬೆ ಸಿವಿಲ್ ಸರ್ವೀಸ್‍ನ ಸರ್ ಸ್ಟುವರ್ಟ್ ಫ್ರೇಸರ್ ಅವರು ಆಡಳಿತ ನಿರ್ವಹಣೆ, ನ್ಯಾಯಶಾಸ್ತ್ರ, ತತ್ವಶಾಸ್ತ್ರ ಬಗ್ಗೆ ಶಿಕ್ಷಣವನ್ನು ನೀಡಿದರು. ಬಳಿಕ ರಾಜ್ಯದಲ್ಲಿ ಪ್ರವಾಸಗಳನ್ನು ಮಾಡುವ ಮೂಲಕ ರಾಜ್ಯದ ಅವಶ್ಯಕತೆ ಹಾಗೂ ಆಡಳಿತದ ಬಗ್ಗೆ ವ್ಯಾಪಕವಾದ ಜ್ಞಾನವನ್ನು ಪಡೆದರು.

ಆಡಳಿತ ಸುಧಾರಣೆ

[ಬದಲಾಯಿಸಿ]

ಇವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ 'ಪ್ರಜಾ ಪ್ರತಿನಿಧಿ ಸಭೆ'ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು.

  • ಮೊದಲ ಸಭೆಯಲ್ಲಿ ಅವರು ಮಾತನಾಡುತ್ತಾ, " ಮೈಸೂರು ರಾಜ್ಯದ ಆಡಳಿತದಲ್ಲಿ ನಾವು ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇವೆ. ನಮ್ಮ ಪ್ರಜೆಗಳಿಗೆ ಅಖಂಡ ಸುಖ ಸಂಪತ್ತನ್ನು ಒದಗಿಸಿ ಕೊಡಬೇಕೆಂಬುದು ನನ್ನ ಜೀವನದ ಪರಮೊದ್ದೇಶ" ಎಂದರು. ಅದಕ್ಕಾಗಿ ೧೯೨೩ರರಲ್ಲಿ ಹೊಸ , ಪ್ರಜಾ ಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ ಮಾರ್ಪಡಿಸಿದರು.
  • ಇದು ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ಪ್ರಜಾ ಪ್ರತಿನಿಧಿ ಸಭೆಯು ವರ್ಷಕ್ಕೆ ಎರಡು ಬಾರಿ (೧ ಜೂನ್ - ಮಹಾರಾಜರ ವರ್ಧಂತಿ, ೨ ಅಕ್ಟೋಬರ್ - ದಸರಾ ಮಹೋತ್ಸವ ) ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು.
  • ಅಲ್ಲಿ ವಾರ್ಷಿಕ ಆಯ-ವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು, ಠರಾವುಗಳನ್ನು ಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು. ಪ್ರತಿನಿಧಿ ಸಭೆಯಲ್ಲಿದ್ದ ೨೭೫ ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು. ಕಾಲಕ್ಕೆ ತಕ್ಕ ಹಾಗೇ ಚುನಾವಣೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದರು.

ನ್ಯಾಯ ವಿಧಾಯಕ ಸಭೆ

[ಬದಲಾಯಿಸಿ]
  • ಪ್ರಜಾ ಪ್ರತಿನಿಧಿ ಸಭೆ ಜೊತೆಗೆ ೧೯೦೭ ರಲ್ಲಿ 'ನ್ಯಾಯ ವಿಧೇಯಕ' ಸಭೆಯನ್ನೂ ಸಹ ಸ್ಥಾಪಿಸಲಾಯಿತು. ಇದರ ಸದಸ್ಯರ ಸಂಖ್ಯೆ ೫೦. ಇದರಲ್ಲಿ

ಜನರಿಂದ ಆಯ್ಕೆಯಾದವರು ೨೨ ಸದಸ್ಯರು. ಮೇಲ್ಮನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ, ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು.

  • ಪ್ರಜಾ ಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ಸಹ ವಿಮರ್ಶಿಸುವ ಅಧಿಕಾರ ಆ ಸಭೆಗೆ ಇದ್ದಿತು. ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಆ ಸಭೆಯ ಅನುಮತಿ ಅಗತ್ಯವಾಗಿತ್ತು. ಆ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇದ್ದಿತು .

ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ

[ಬದಲಾಯಿಸಿ]
  • ೧೯೧೮ರಲ್ಲಿ ಸರ್ಕಾರದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್.ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಎಲ್ಲಾ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರತಿನಿಧ್ಯ ದೊರಕುವಂತೆ ಅಧ್ಯಯನ ಮಾಡಿ, ವರದಿ ನೀಡಲು ಆದೇಶ ಮಾಡಿದರು. ನಂತರ ಆಯೋಗದ ಶಿಫಾರಸ್ಸುಗಳಂತೆ ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತು ಪಡಿಸಿ ಉಳಿದ ಎಲ್ಲಾ ಜಾತಿಗಳನ್ನು ಹಿಂದೂಗಳೆಂದು ಪರಿಗಣಿಸಿ, ೧೯೨೧ರಲ್ಲಿ ಪ್ರಥಮ ಭಾರಿಗೆ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ.೭೫ ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು "ಮೀಸಲಾತಿಯ ಜನಕ" ಎನ್ನುತ್ತಾರೆ.
  • "ಮಿಲ್ಲರ್ ಆಯೋಗ" ರಚನೆ ಸಾಮಾಜಿಕ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಯಿತು. ಮಿಲ್ಲರ್ ಆಯೋಗ ಜಾರಿಗೆ ಬರಲಾಗಿ ಮೊಟ್ಟ ಮೊದಲ ಬಾರಿಗೆ ಮೈಸೂರು ಸಂಸ್ಥಾನಕ್ಕೆ ಕಾಂತರಾಜೇ ಅರಸ್ ದಿವಾನರಾಗಲು ಸಾಧ್ಯವಾಯಿತು. ಈ ಕಾಲದಲ್ಲೇ ಒಕ್ಕಲಿಗರ ಸಂಘ, ರೆಡ್ಡಿ ಜನಸಂಘ, ವೀರಶೈವರ ಜಾತಿ ಆಧಾರಿತ ಶಾಲಾ- ಕಾಲೇಜುಗಳು ಆರಂಭವಾದುವು.
  • ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ, ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟುದು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು.
  • ಇವರ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು 1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.
  1. ಗ್ರಾಮ ನೈರ್ಮಲೀಕರಣ
  2. ವೈದ್ಯ ಸಹಾಯ
  3. ವಿದ್ಯಾ ಪ್ರಚಾರ
  4. ನೀರಿನ ಸೌಕರ್ಯ
  5. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಸಂಸ್ಥೆಗಳಾದವು.

ಹೊಸ ರೈಲು ದಾರಿಗಳ ನಿರ್ಮಾಣ

[ಬದಲಾಯಿಸಿ]
  1. ಮೈಸೂರು - ಅರಸೀಕೆರೆ,
  2. ಬೆಂಗಳೂರು - ಚಿಕ್ಕಬಳ್ಳಾಪುರ,
  3. ಚಿಕ್ಕಜಾಜೂರು - ಚಿತ್ರದುರ್ಗ,
  4. ನಂಜನಗೂಡು - ಚಾಮರಾಜನಗರ,
  5. ತರೀಕೆರೆ - ನರಸಿಂಹರಾಜಪುರ,
  6. ಶಿವಮೊಗ್ಗ ಆನಂದಪುರ [೧][permanent dead link] ಈ ಎಲ್ಲ ರೈಲು ಮಾರ್ಗಗಳನ್ನು ೧೯೩೧ ರ ವೇಳೆಗೆ ಪೂರೈಸಲಾಯಿತು .

ನೀರಾವರಿ

[ಬದಲಾಯಿಸಿ]
  • ೧೯೦೭ರಲ್ಲಿ 'ವಾಣೀವಿಲಾಸ ಸಾಗರ'(ಮಾರಿ ಕಣಿವೆ) ಕಟ್ಟಲ್ಪಟ್ಟಿತು. ೧೯೧೧ ರಲ್ಲಿ ಆರಂಭವಾದ 'ಕೃಷ್ಣರಾಜ ಸಾಗರ' ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ.[] ೧೯೦೦ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿ ಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು.
  • ಇದು ಭಾರತದ ಮೊದಲ ಜಲ ವಿದ್ಯುತ್ ಕೇಂದ್ರ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ ೧೯೦೫ ಆಗಸ್ಟ್ ೩ ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.

ಗೆಜೆಟ್ ಪ್ರಕಟಣೆ

[ಬದಲಾಯಿಸಿ]

"ಜಾತಿ ಆಧಾರದ ಮೇಲೆ ಯಾರನ್ನೂ ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪರಿಪಾಠಗಳನ್ನು ಸರ್ಕಾರ ಎತ್ತಿ ಹಿಡಿಯದು. ಸಾರ್ವಜನಿಕ ಶಾಲೆಗಳನ್ನು ತೆರಿಗೆ ಆದಾಯದದಿಂದ ನಡೆಸುತ್ತಿರುವುದರಿಂದ ಶಿಕ್ಷಣವು ಸಹ, ಆಸ್ಪತ್ರೆ, ನ್ಯಾಯಾಲಯ, ರೈಲು ಪ್ರಯಾಣ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಂತೆ ರಾ ಜ್ಯದ ಎಲ್ಲಾ ವರ್ಗದ ಜನರಿಗೂ ಲಭ್ಯವಾಗಬೇಕು".

ಶೈಕ್ಷಣಿಕ ಕೊಡುಗೆ ಮತ್ತು ಸುಧಾರಣೆ

[ಬದಲಾಯಿಸಿ]
  • ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ನಾಲ್ವಡಿ ಕೃಷ್ಣರಾಜರ ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು.

. ದೇಶದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ೨೭೦ ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು.

  • ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ೧೯೦೬ ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.
  1. ಬುಡಕಟ್ಟು, ಗಿರಿಜನ, ಅರಣ್ಯವಾಸಿಗಳಿಗೆ ಮೊಟ್ಟ ಮೊದಲು ಶಾಲೆಗಳನ್ನು ತೆರೆಯಲಾಯಿತು. ಅಸ್ಪೃಶ್ಯರಿಗಾಗಿಯೇ ಹುಸ್ಕೂರು ಹಾಗೂ ಟಿ.ನರಸೀಪುರದಲ್ಲಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ನಂತರ ಇವರ ಆಡಳಿತಾವಧಿಯಲ್ಲಿ ಸುಮಾರು ೮೦೦ ಶಾಲೆಗಳನ್ನು ತೆರೆಯಲಾಯಿತು.
  2. ಮೊಟ್ಟ ಮೊದಲ ಬಾರಿಗೆ ಸ್ತ್ರೀ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು.
  3. ೧೯೦೨ - ಬೆಂಗಳೂರಿನ ಪ್ರಥಮ ವಾಣಿಜ್ಯಶಾಲೆ ಪ್ರಾರಂಭಿಸಲಾಯಿತು.
  4. ೧೯೦೩ - ಮೈಸೂರಿನಲ್ಲಿ ತಾಂತ್ರಿಕ ಶಾಲಾ ಸ್ಥಾಪನೆ.
  5. ೧೯೦೬ - ಕುರುಡ ಹಾಗೂ ಮೂಕ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದರು.
  6. ೧೯೧೧ - ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಆರಂಭಿಸಲಾಯಿತು.
  7. ೧೯೧೨ - ಮೊದಲ ಬಾರಿಗೆ ವಯಸ್ಕರ ಶಿಕ್ಷಣ ಆಂದೋಲನ ಪ್ರಾರಂಭಿಸಿ, ೭೦೦೦ ಸಾಕ್ಷರತಾ ಕೇಂದ್ರಗಳನ್ನು ತೆರೆದಿದ್ದರು.
  8. ೧೯೧೬ - ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ. ಉರ್ದು ಶಾಲೆಗಳ ಸ್ಥಾಪನೆ.
  9. ೧೯೧೮ - ಶಾಲಾ ಪ್ರವೇಶಕ್ಕೆ ಜಾತಿ ಪದ್ದತಿಯನ್ನು ನಿರ್ಮೂಲನೆ ಮಾಡಲಾಯಿತು.
  10. ೧೯೧೯ - ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕವನ್ನು ರದ್ದು ಮಾಡಿದರು.

ಮೈಸೂರು ಘಟಿಕೋತ್ಸವದಲ್ಲಿ ಮಾಡಿದ ಭಾಷಣ

[ಬದಲಾಯಿಸಿ]

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊಟ್ಟ ಮೊದಲ ಘಟಿಕೋತ್ಸವದಲ್ಲಿ - "ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ. ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯಲಿ ಎಂಬ ಕಾರಣಕ್ಕಾಗಿಯೇ ಮೈಸೂರು ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ. ಇದು ದೇಶದ ಅಸ್ಪೃಶ್ಯ, ಹಿಂದುಳಿದ, ಅಲ್ಪಸಂಖ್ಯಾತರುಗಳಿಗೆ ಅಂದರೆ ಶೇ.೮೫ ರಷ್ಟಿರುವ ಹಿಂದುಳಿದ ಎಲ್ಲಾ ಸಮುದಾಯದವರಿಗೆ ಇದೆ. ಇಲ್ಲಿನ ಬೋಧಕರು ಅವರ ತಿಳುವಳಿಕೆಯ ಮಟ್ಟಕ್ಕೆ ಇಳಿದು ತಮ್ಮ ಜ್ಞಾನವನ್ನು ಅವರೊಂದಿಗೆ ಹಂಚಿಕೊಳ್ಳಬೇಕು" ಎಂದಿದ್ದರು.

ಜಾರಿ ಮಾಡಿದ ಸಾಮಾಜಿಕ ಕಾನೂನುಗಳು

[ಬದಲಾಯಿಸಿ]
  • ೧೯೦೯ ರಲ್ಲಿ ದೇವದಾಸಿ ಪದ್ಧತಿ ನಿಷೇಧ
  • ೧೯೧೦ ರಲ್ಲಿ ಬಸವಿ ಪದ್ಧತಿ ರದ್ಧತಿ
  • ೧೯೧೦ ರಲ್ಲಿ ’ಗೆಜ್ಜೆಪೂಜೆ’ ಪದ್ಧತಿ ಸಂಪೂರ್ಣ ನಿರ್ಮೂಲನೆ
  • ೧೯೩೬ ಜುಲೈ ೧೪ ರಂದು ವೇಶ್ಯಾ ವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ
  • ೧೯೩೬ ಜುಲೈ ೭ ರಂದು ವಿಧವೆಯರಿಗೆ ಮರು ವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ
  • ೧೯೩೬ ಜುಲೈ ೭ ರಂದು ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ
  • ೧೯೧೪ ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ
  • ೧೯೧೯ ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ
  • ೧೯೨೭ ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟ ಮೊದಲ ಬಾರಿಗೆ ಕಲ್ಪಿಸಿಕೊಟ್ಟರು
  • ೧೯೦೫ ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು
  • ೧೯೧೩ ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು
  • ೧೯೧೮ ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತಂದರು

ಆರ್ಥಿಕ ಸುಧಾರಣೆಗಳು

[ಬದಲಾಯಿಸಿ]
  1. ಭಾರತದ ಆರ್ಥಿಕತೆಯ ಬೆನ್ನೆಲುಬು ಕೃಷಿ ಎಂದು ಅರಿತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ಅನುಕೂಲವಾಗಲು ೧೯೦೫ರಲ್ಲಿ ಸಹಕಾರಿ ಸೊಸೈಟಿಗಳನ್ನು ಜಾರಿಗೆ ತಂದರು. ಆ ಮೂಲಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕು ಮತ್ತು ಭೂ ಅಭಿವೃದ್ದಿ ಬ್ಯಾಂಕ್‍ಗಳು ಪ್ರಾರಂಭಗೊಂಡವು.
  2. ಮಂಡ್ಯ ಮತ್ತು ಮೈಸೂರು ಪ್ರಾಂತ್ಯದ ರೈತರ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಕಟ್ಟಿಸಿ, ೧,೨೦,೦೦೦ ಎಕರೆ ಜಮೀನಿಗೆ ನೀರಾವರಿ ಕಲ್ಪಿಸಿದರು.
  3. ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ೧೯೧೮ ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು.
  4. ಗ್ರಾಮೀಣ ಜನರಿಗೆ ಶೀಘ್ರ ನ್ಯಾಯ ಒದಗಿಸಲು ಅವರಿಗೆ ೧೯೧೩ರಲ್ಲಿ 'ದಿ ಮೈಸೂರು ವಿಲೇಜ್ ಕೋರ್ಟ್ ಆಕ್ಟ್' ನ್ನು ಜಾರಿಗೆ ತಂದರು.
  5. ರೈತರು ಸಾಲದ ಅಡಿಯಲ್ಲಿ ಸಿಕ್ಕಿ ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ೧೯೨೮ರಲ್ಲಿ 'ಅಗ್ರಿಕಲ್ಚರಿಸ್ಸ್ ಡಿಬೆಟ್ ರಿಲೀಫ್ ಆಕ್ಟ್" ನ್ನು ಜಾರಿ ಗೊಳಿಸಿದರು.
  6. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ೧೯೦೨ ರಲ್ಲಿ ಕಾವೇರಿ ನದಿಗೆ ಶಿವನ ಸಮುದ್ರದಲ್ಲಿ ಜಲವಿದ್ಯುತ್ ಕಾರ್ಯಾಗಾರ ಸ್ಥಾಪನೆಯಾಯಿತು. ಜೊತೆಗೆ ಪ್ರಥಮ ಬಾರಿಗೆ ವಿದ್ಯುತ್‍ನ್ನು ಕೋಲಾರದ ಗಣಿ ಪ್ರದೇಶಕ್ಕೆ ವರ್ಗಾಯಿಸಲಾಯಿತು.
  7. ೧೯೩೯ರ ಫೆಬ್ರವರಿ ೫ರಂದು ಜೋಗ ಜಲಪಾತದ ಬಳಿ ಶರಾವತಿ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಯಿತು.

ಕೈಗಾರಿಕ ಅಭಿವೃದ್ದಿಗಳು

[ಬದಲಾಯಿಸಿ]

೧೯೧೪ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಆರಂಭಗೊಂಡ ಕೈಗಾರಿಕೆಗಳೆಂದರೆ-

  1. ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ
  2. ಬೆಂಗಳೂರಿನ ಸಾಬೂನು ಕಾರ್ಖಾನೆ
  3. ಮೈಸೂರಿನ ಗಂಧದೆಣ್ಣೆ ಕಾರ್ಖಾನೆ
  4. ಸಿಮೆಂಟ್ ಕಾರ್ಖಾನೆ
  5. ೧೯೩೪ - ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪೆನಿ ಪ್ರಾರಂಭ
  6. ೧೯೩೬ - ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್ ಆರಂಭ
  7. ಮಂಗಳೂರು ಹೆಂಚು ಕಾರ್ಖಾನೆ
  8. ಷಹಬಾದಿನ ಸಿಮೆಂಟ್ ಕಾರ್ಖಾನೆ
  9. ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ
  10. ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಪ್ರಾರಂಭಗೊಂಡವು.

ರಸ್ತೆ ಸಾರಿಗೆ

[ಬದಲಾಯಿಸಿ]
  1. ಬೆಂಗಳೂರು-೨೧೫ ಮೈಲಿ
  2. ಕೋಲಾರ -೨೧೧ ಮೈಲಿ
  3. ತುಮಕೂರು -೧೮೯ ಮೈಲಿ
  4. ಚಿತ್ರದುರ್ಗ - ೨೨೦ ಮೈಲಿ
  5. ಮೈಸೂರು -೩೬೮ ಮೈಲಿ
  6. ಹಾಸನ - ೧೯೧ ಮೈಲಿ
  7. ಶಿವಮೊಗ್ಗ - ೨೮೩ ಮೈಲಿ
  8. ಕಡೂರು - ೩೨೫ ಮೈಲಿ

ರೈಲು ಸಾರಿಗೆ

[ಬದಲಾಯಿಸಿ]
  1. ೧೯೧೩ ರಲ್ಲಿ ಹೊಸ ರೈಲು ಸಾರಿಗೆ ನಿರ್ಮಾಣ ಇಲಾಖೆ ಆರಂಭವಾಯಿತು.[]
  2. ೧೯೧೮ ರಲ್ಲಿ ಚಿಕ್ಕಬಳ್ಳಾಪುರ-ಯಲಹಂಕ-ಮೈಸೂರು-ಅರಸೀಕೆರೆ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಾಣವಾಯಿತು.
  3. ೧೯೨೧ ರಲ್ಲಿ ಚಿಕ್ಕ ಜಾಜೂರು-ಚಿತ್ರದುರ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಾಣ ವಾಯಿತು.

ಮೈಸೂರು ಸಂಸ್ಥಾನದ ಬಗೆಗಿನ ಮೆಚ್ಚುಗೆಯ ನುಡಿಗಳು

[ಬದಲಾಯಿಸಿ]
  1. ಡಿ.ವಿ.ಜಿಯವರ ಮಾತು- "ನನ್ನ ತಿಳುವಳಿಕೆಯಲ್ಲಿ ೧೮೮೧ ರಿಂದ ೧೯೪೦ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣ ಯುಗ" ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.
  2. ಇಂಗ್ಲೆಂಡಿನ ಗ್ರಾಫಿಕ್ ಪತ್ರಿಕೆ- ಮಾದರಿ ಸಂಸ್ಥಾನ ಎಂಬ ಹೆಮ್ಮೆಯ ಹೆಸರಿಗೆ ಮತ್ತ್ಯಾವ ಭಾರತೀಯ ಸಂಸ್ಥಾನಕ್ಕೂ ಆ ಅರ್ಹತೆ ಇಲ್ಲ. ನ ಪಡಪಡಪಢಪಢ ಹಾಸನಹಾಸನ ಖ್ಠಿಞ್ಝ ಉಜ್ಟ್ಚಿ ಛಿಜ (ಮಾರ್ಚ್-೧೦,೧೯೦೬)
  3. ಎನ್‍ಸೈಕ್ಲೋಪಿಡಿಯಾ ಬ್ರಿಟಾನಿಕಾದ ಬೃಹತ್ ಕೃತಿಯಲ್ಲಿ-ಭಾರತ ಖಂಡದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಮುಂದುವರೆಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನ್ಯಾಯವಾದ ಅರ್ಹತೆಯನ್ನು ಪಡೆದಿರುವ ಮೈಸೂರು ಮಾದರಿ ಸಂಸ್ಥಾನವಾಗಿದೆ-೧೯೩೮

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಂತಿಮ ಯಾತ್ರೆ

[ಬದಲಾಯಿಸಿ]

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೩೮ ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ ಪ್ರಜೆಗಳಿಂದ "ರಾಜರ್ಷಿ" ಬಿರುದು ಪಡೆದರು. ತಮ್ಮ ಸಂಸ್ಥಾನದ ಏಳಿಗೆಗಾಗಿ, ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ ೩, ೧೯೪೦ರಲ್ಲಿ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು.[]

ನಾಲ್ವಡಿ ಕೃಷ್ಣರಾಜ ಒಡೆಯರು ಹಾಗು ಅವರ ತಂದೆ ೯ನೇ ಚಾಮರಾಜ ಒಡೆಯರು ಹಾಗು ಸಹೋದರರು
ನಾಲ್ವಡಿ ಕೃಷ್ಣರಾಜ ಒಡೆಯರು ಹಾಗು ಅವರ ತಂದೆ ೯ನೇ ಚಾಮರಾಜ ಒಡೆಯರು ಹಾಗು ಸಹೋದರರು 
೨ ಫೆಬ್ರವರಿ ೧೮೯೫ ರಂದು ಚಿತ್ರಿಸಿದ ನಾಲ್ವಡಿ ಕೃಷ್ಣ ರಾಜ ಒಡೆಯರ ಚಿತ್ರ
೨ ಫೆಬ್ರವರಿ ೧೮೯೫ ರಂದು ಚಿತ್ರಿಸಿದ ನಾಲ್ವಡಿ ಕೃಷ್ಣ ರಾಜ ಒಡೆಯರ ಚಿತ್ರ 
ನಾಲ್ವಡಿ ಕೃಷ್ಣರಾಜ ಒಡೆಯರು ಹಾಗು ಸಹೋದರರು
ನಾಲ್ವಡಿ ಕೃಷ್ಣರಾಜ ಒಡೆಯರು ಹಾಗು ಸಹೋದರರು 
೧೯೦೩ರಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರು
೧೯೦೩ರಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರು 
ನಾಲ್ವಡಿ ಕೃಷ್ಣ ರಾಜ ಹಾಗು ಪ್ರತಾಪ ಕುಮಾರಿ ಯವರ ವಿವಾಹ ಮಹೋತ್ಸವದ ತೈಲ ವರ್ಣ ಚಿತ್ರ(೧೯೦೪).
ನಾಲ್ವಡಿ ಕೃಷ್ಣ ರಾಜ ಹಾಗು ಪ್ರತಾಪ ಕುಮಾರಿ ಯವರ ವಿವಾಹ ಮಹೋತ್ಸವದ ತೈಲ ವರ್ಣ ಚಿತ್ರ(೧೯೦೪). 

ಬಾಹ್ಯಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://web.archive.org/web/20081024183112/http://www.india-today.com/itoday/millennium/100people/durai.html
  2. "The Maharajah of Mysore" The Times (London). Monday, 11 August 1902. Issue 36843, p. 15.
  3. https://web.archive.org/web/20170309164922/http://timesofindia.indiatimes.com/city/mysuru/Centenary-milestone-for-KRS-dam/articleshow/10325469.cms
  4. "ಆರ್ಕೈವ್ ನಕಲು". Archived from the original on 5 ಡಿಸೆಂಬರ್ 2020. Retrieved 1 ಜೂನ್ 2020.
  5. https://eresources.nlb.gov.sg/newspapers/Digitised/Article/morningtribune19400806-1.2.18