ವಿಷಯಕ್ಕೆ ಹೋಗು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನದಿಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹರಿಯುವ ಕೆಲವು ನದಿಗಳ ಪಟ್ಟಿಯಾಗಿದೆ. ಈ ನದಿಗಳ ಹೆಸರುಗಳು ಅವು ಹರಿಯುವ ಪ್ರದೇಶವನ್ನು ಅವಲಂಬಿಸಿ ಬದಲಾಗುತ್ತವೆ. ಈ ಜಿಲ್ಲೆಗಳಲ್ಲಿನ ಬಹುತೇಕ ಎಲ್ಲಾ ನದಿಗಳು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ.

ನೇತ್ರಾವತಿ[ಬದಲಾಯಿಸಿ]

ನೇತ್ರಾವತಿ ನದಿಯು ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ತನ್ನ ಉಗಮವನ್ನು ಹೊಂದಿದೆ. ಸುಮರಾಧಾರ, ನೆರ್ಯಾರೆ, ಮಣಿಹಳ್ಳ ಮತ್ತು ಗುರುಪುರ ನದಿಗಳು ನೇತ್ರಾವತಿ ನದಿಗೆ ಬಂದು ಸೇರುತ್ತವೆ. ಈ ನದಿಯ ದಡದಲ್ಲಿರುವ ಕೆಲವು ಸ್ಥಳಗಳೆಂದರೆ ಮಂಗಳೂರು, ಬಂಟ್ವಾಳ, ಉಪ್ಪಿನಂಗಡಿ, ಧರ್ಮಸ್ಥಳ ಮತ್ತು ಉಳ್ಳಾಲ. ಇದು ಮಂಗಳೂರಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ನೇತ್ರಾವತಿ ನದಿಯನ್ನು ದಕ್ಷಿಣ ಕನ್ನಡದ ಜೀವ ನದಿ ಎಂದೇ ಕರೆಯಲಾಗುತ್ತದೆ. ಇದರ ಉದ್ದ 103 ಕಿ.ಮೀ. ಇದು ಸರಿಸುಮಾರು 1352 ಚದರ ಮೈಲಿ ವಿಸ್ತೀರ್ಣವನ್ನು ಹೊಂದಿದೆ. ಈ ನದಿಯು ನೀರಿನ ಸಾರಿಗೆ, ಮೀನುಗಾರಿಕೆ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗೆ ಮುಖ್ಯ ಮೂಲವಾಗಿ ಬಳಕೆಯಾಗುತ್ತಿದೆ.

ಕುಮಾರಧಾರ[ಬದಲಾಯಿಸಿ]

ಕುಮಾರಧಾರಾ ನದಿಯು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ನೇತ್ರಾವತಿ ನದಿಯನ್ನು ಸೇರುತ್ತದೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವು ಕುಮಾರಧಾರ ನದಿಯ ದಡದಲ್ಲಿದೆ.

ಗುರುಪುರ ಅಥವಾ ಫಲ್ಗುಣಿ[ಬದಲಾಯಿಸಿ]

ಗುರುಪುರ ನದಿಯು ಗುರುಪುರ, ಮಂಗಳೂರು, ತಣ್ಣೀರುಭಾವಿ ಮೂಲಕ ಹರಿಯುತ್ತದೆ. ಇದು ಬೇಂಗ್ರೆ ಬಳಿ ನೇತ್ರಾವತಿ ನದಿಯನ್ನು ಸೇರುತ್ತದೆ.

ನಂದಿನಿ ಅಥವಾ ಪಾವಂಜೆ[ಬದಲಾಯಿಸಿ]

ನಂದಿನಿ ಅಥವಾ ಪಾವಂಜೆ ನದಿಯು ಸಸಿಹಿತ್ಲು ಮತ್ತು ಕೊಳುವೈಲ್ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇದರ ಉಗಮಸ್ಥಳವು ಕನಕಗಿರಿ(ಇರುವೈಲ್) ಮತ್ತು ಕಟೀಲು, ಅತ್ತೂರು-ಕೆರ್ಮಾಳ್ಮತ್ತು ಪಾವಂಜೆ ಮುಖೇನ ಹರಿಯುತ್ತದೆ.

ಶಾಂಭವಿ[ಬದಲಾಯಿಸಿ]

ಶಾಂಭವಿ ನದಿಯು ಮೂಲ್ಕಿ ಪಟ್ಟಣದ ಮೂಲಕ ಹರಿಯುತ್ತದೆ.

ಪಾಂಗಾಳ[ಬದಲಾಯಿಸಿ]

ಈ ನದಿಯು ಪಾಂಗಾಳ ಗ್ರಾಮವನ್ನು ಮುಟ್ಟಿ, 'ಮತ್ತಿ' ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಪಾಪನಾಶಿನಿ[ಬದಲಾಯಿಸಿ]

ಉದ್ಯಾವರ ನದಿ ಎಂದೂ ಸಹ ಕರೆಯಲ್ಪಡುವ ಪಾಪನಾಶಿನಿ ನದಿಯು ಮಲ್ಪೆ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಉದ್ಯಾವರ, ಶಿರ್ವ-ಮಂಚಕಲ್ ಮತ್ತು ಮಲ್ಪೆ -ಇವು ಈ ನದಿ ಹರಿಯುವ ಕೆಲವು ಸ್ಥಳಗಳಾಗಿವೆ.

ಸ್ವರ್ಣ ಅಥವಾ ಸುವರ್ಣ[ಬದಲಾಯಿಸಿ]

ಸ್ವರ್ಣ ನದಿ (ತುಳುವಿನಲ್ಲಿ ತುದ್ಹೆ) ಪೆರ್ಡೂರು, ಹಿರಿಯಡ್ಕ, ಪರೀಕ (ಪರ್ಕಳ), ಹಿರ್ಗ, ಮಣಿಪಾಲ,ಪೆರಂಪಳ್ಳಿ, ಉಪ್ಪೂರು ಮತ್ತು ಕಲ್ಲೈನಪುರ ಗ್ರಾಮಗಳ ಮೂಲಕ ಹರಿಯುತ್ತದೆ. ಮೂಡುಕುರ್ದು, ಬಾಳಿಗೇರ ಕುರ್ದು, ಪಡುಕುರ್ದು ಎಂಬಂತಹ ಅನೇಕ 'ಕುರ್ದುಸ್' (ಸಣ್ಣ ದ್ವೀಪ)ಗಳು ಇಲ್ಲಿವೆ. ಇದು ಉಡುಪಿ ಜಿಲ್ಲೆಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಇದು ಬೇಂಗ್ರೆಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಸೀತ ಅಥವಾ ಸೀತಾ[ಬದಲಾಯಿಸಿ]

ಈ ನದಿಯು ನರಸಿಂಹ ಪರ್ವತದ ತುದಿಯಲ್ಲಿರುವ ಹೆಬ್ರಿ ಬಳಿಯ ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತದೆ. ಈ ನದಿಯು ಹೆಚ್ಚಾಗಿ ಉಡುಪಿ ತಾಲೂಕಿನಲ್ಲಿ ಹರಿಯುತ್ತದೆ. ಪ್ರಸಿದ್ಧ ಪಟ್ಟಣವಾದ 'ಬಾರ್ಕೂರು' ಸೀತಾ ನದಿಯ ದಡದಲ್ಲಿದೆ. ಇದು ಅರೇಬಿಯನ್ ಸಮುದ್ರವನ್ನು ಸೇರುವ ಮೊದಲು ಸುವರ್ಣ ನದಿಯೊಂದಿಗೆ ಸಂಗಮಿಸುತ್ತದೆ.

ಪಂಚಗಂಗಾವಲ್ಲಿ ನದಿ[ಬದಲಾಯಿಸಿ]

ಪಂಚಗಂಗಾವಲ್ಲಿ ನದಿಯು ಭಾರತದ ಪಶ್ಚಿಮ ದಿಕ್ಕಿನ ಕುಂದಾಪುರ ಮತ್ತು ಗಂಗೊಳ್ಳಿಯ ಮೂಲಕ ಹರಿಯುವ ನದಿಯಾಗಿದೆ. ಸೌಪರ್ಣಿಕಾ ನದಿ, ವರಾಹಿ ನದಿ, ಕೇದಕ ನದಿ, ಚಕ್ರ ನದಿ ಮತ್ತು ಕುಬ್ಜಾ ನದಿಗಳು ಒಂದುಗೂಡಿ ಅರಬ್ಬಿ ಸಮುದ್ರದಲ್ಲಿ ವಿಲೀನಗೊಳ್ಳುತ್ತವೆ.

ಸೌಪರ್ಣಿಕಾ[ಬದಲಾಯಿಸಿ]

ಈ ನದಿಯ ದಡದಲ್ಲಿರುವ ಸ್ಥಳಗಳೆಂದರೆ ಕೊಲ್ಲೂರು ಮತ್ತು ಮರವಂತೆ. ಇದು ಮರವಂತೆ ಬಳಿ ಅರೇಬಿಯನ್ ಸಮುದ್ರದ ಸಮೀಪ ಬಂದಾಗ ಸಮುದ್ರ ಮತ್ತು ನದಿಯ ನಡುವೆ ಭೂಮಿಯ ಒಂದು ಸಣ್ಣ ಭಾಗ ಇದೆ. ಇದು ಈ ಹಂತದಿಂದ ಸಮುದ್ರವನ್ನು ತಲುಪಲು ಸುಮಾರು 7 ಕಿಲೋಮೀಟರ್‌ಗಳವರೆಗೆ ಭೂಮಿಯ ಒಳಮುಖವಾಗಿ ಹರಿಯುತ್ತದೆ ಮತ್ತು ಗಂಗೊಳ್ಳಿಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮೂಲದೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ವಾರಾಹಿ ನದಿ[ಬದಲಾಯಿಸಿ]

ವರಾಹಿ ನದಿಯನ್ನು 'ಹಾಲಾಡಿ ನದಿ' ಎಂದೂ ಸಹ ಕರೆಯುತ್ತಾರೆ. ಇದು ಭಾರತದ ಕರ್ನಾಟಕ ರಾಜ್ಯದಲ್ಲಿನ ಪಶ್ಚಿಮ ಘಟ್ಟಗಳ ಮೂಲಕ ಹರಿಯುತ್ತದೆ. ಹಾಲಾಡಿ, ಬಸ್ರೂರು, ಕುಂದಾಪುರ, ಗಂಗೊಳ್ಳಿ ಮೂಲಕ ಸಮುದ್ರವನ್ನು ಸೇರುತ್ತದೆ. ಪುರಾಣಗಳ ಪ್ರಕಾರ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ವರಾಹನ ಪತ್ನಿಯೇ ವರಾಹಿ.

ಚಕ್ರ[ಬದಲಾಯಿಸಿ]

ಚಕ್ರ ನದಿಯು ಪಶ್ಚಿಮ ಘಟ್ಟಗಳಲ್ಲಿ ತನ್ನ ಉಗಮವನ್ನು ಹೊಂದಿದೆ ಮತ್ತು ಹೆಮ್ಮಾಡಿ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಉಲ್ಲೇಖಗಳು[ಬದಲಾಯಿಸಿ]