ವಿಷಯಕ್ಕೆ ಹೋಗು

ಗಾಜ಼ಿ ಆಂಟೆಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಾಜ಼ಿ ಆಂಟೆಪ್ ಕೋಟೆಮನೆ

ಗಾಜ಼ಿ ಆಂಟೆಪ್ ದಕ್ಷಿಣ ತುರ್ಕಿಯ ಒಂದು ಪ್ರಾಂತ್ಯ ಹಾಗೂ ಆ ಪ್ರಾಂತ್ಯದ ಆಡಳಿತ ಕೇಂದ್ರ. ಮೊದಲು ಇದಕ್ಕೆ ಐಂಟಾಬ್ (Aintab) ಎಂಬ ಹೆಸರಿತ್ತು. 1920-21ರ ಅವಧಿಯಲ್ಲಿ ಫ್ರೆಂಚರ ಆಕ್ರಮಣವನ್ನು ಪ್ರತಿಭಟಿಸಿ ನಿಂತ ಗೌರವದ ಕುರುಹಾಗಿ ಕಮಾಲ್ ಆಟಾಟುರ್ಕ್ನಗರಕ್ಕೆ ಗಾಜಿ಼ ಆಂಟೆಪ್ ಎಂದು ಹೊಸದಾಗಿ ನಾಮಕರಣ ಮಾಡಿದ. ಗಾಜಿ಼ ಎಂದರೆ ಇಸ್ಲಾಮಿಗಾಗಿ ಹೋರಾಟಗಾರ ಎಂದು ಅರ್ಥ. ಈ ನಗರ ಟಾರಸ್ ಪರ್ವತದ ಇಳಿಜಾರಿನಲ್ಲಿ ಸುಣ್ಣಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದೆ. ಮೊದಲು ಇಲ್ಲಿ ಆರ್ಮೇನಿಯನರೇ ಬಹುಸಂಖ್ಯಾತರಾಗಿದ್ದರೂ ಈಗ ತುರ್ಕೊಮನ್ ಮತ್ತು ಕುರ್ದಿ ಜನಾಂಗಗಳವರೂ ವಿಶೇಷವಾಗಿದ್ದಾರೆ. ನಗರದ ಜನಸಂಖ್ಯೆ 2,130,432 (2021).[]

ಇತಿಹಾಸ

[ಬದಲಾಯಿಸಿ]

ಇತಿಹಾಸಪೂರ್ವ ಕಾಲದಿಂದಲೂ ಈ ನಗರ ಜನಭರಿತವಾಗಿದ್ದುದಾಗಿ ತಿಳಿದು ಬಂದಿದೆ. ಹಿಟ್ಟೈಟರ ಕಾಲದಲ್ಲಿ ಈ ನಗರಕ್ಕೆ ಯಾವ ಹೆಸರಿತ್ತೆಂಬುದು ಖಚಿತವಾಗಿ ತಿಳಿದಿಲ್ಲವಾದರೂ ಇದು ತುಂಬ ಮಹತ್ವದ ನಗರವಾಗಿದ್ದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಕಾರಣ ಇದರ ಭೌಗೋಳಿಕ ನೆಲೆ. ಮಧ್ಯಯುಗದಲ್ಲೂ ಇದು ಪ್ರಮುಖ ಸೈನಿಕ ನೆಲೆಯಾಗಿತ್ತು. 1183ರಲ್ಲಿ ಸಲಾದೀನ್ ಈ ನಗರವನ್ನು ಆಕ್ರಮಿಸಿಕೊಂಡಿದ್ದ. 1516ರಲ್ಲಿ ಇದು ಆಟೊಮನ್ ಚಕ್ರಾಧಿಪತ್ಯದ ಒಂದು ಭಾಗವಾಗಿತ್ತು. 19ನೆಯ ಶತಮಾನದ ಆದಿಭಾಗದಲ್ಲಿ ಇಬ್ರಾಹಿಂ ಪಾಷ ಇದನ್ನು ತನ್ನ ಸೈನಿಕ ನೆಲೆಯಾಗಿಸಿಕೊಂಡು, ಆಟೊಮನ್ ದಳಗಳ ಮೇಲೆ ವಿಜಯ ಸಾಧಿಸಿದ. 1920-21ರ ನಡುವೆ ಇದು ಹತ್ತು ತಿಂಗಳುಗಳ ಕಾಲ ಫ್ರೆಂಚರ ಆಕ್ರಮಣವನ್ನು ಯಶಸ್ವಿಯಾಗಿ ತಡೆದಿತ್ತು. ಈ ಕಾರಣದಿಂದಾಗಿಯೇ ಇದಕ್ಕೆ ಗಾಜಿ಼ ಆಂಟೆಪ್ ಎಂದು ಮರು ನಾಮಕರಣವಾದದ್ದು. ಕೊನೆಗೆ ಇದು ಫ್ರೆಂಚರ ಕೈವಶವಾಯಿತು.[] ಆದರೆ, 1922ರಲ್ಲಿ ಮತ್ತೆ ಇದನ್ನು ತುರ್ಕಿಗೆ ಒಪ್ಪಿಸಿಕೊಡಲಾಯಿತು. ಜ್ಯೂಪಿಟರ್ ದೊಲಿಚೆನಸ್ಸನ ಪ್ರಸಿದ್ಧ ದೇವಾಲಯವಿದ್ದ ದುಲುಕ್ (ದೊಲಿಚೆ - Doliche ಎಂಬುದು ಪ್ರಾಚೀನ ಹೆಸರು) ನಗರದ ನಿವೇಶನ ಈ ನಗರದ ವಾಯವ್ಯಕ್ಕೆ ಕೆಲವೇ ಮೈಲಿಗಳ ದೂರದಲ್ಲಿದೆ. ಅಲ್ಲಿಗೂ ಈ ನಗರಕ್ಕೂ ರೈಲುಸಂಪರ್ಕವುಂಟು. ದುಲುಕ್‌ನಲ್ಲಿ ಗಮನಾರ್ಹವಾದ ಅನೇಕ ಪ್ರಾಚೀನ ಸಮಾಧಿಗಳು ದೊರೆತಿವೆ. ಇದರಿಂದಾಗಿ ಗಾಜಿ಼ ಆಂಟೆಪ್‌ನ ಮಹತ್ತ್ವ ಹೆಚ್ಚಿದೆ.

ಸಾರಿಗೆ, ಆರ್ಥಿಕತೆ

[ಬದಲಾಯಿಸಿ]

ತುರ್ಕಿ ರಾಷ್ಟ್ರೀಯ ರೈಲ್ವೆ ಜಾಲ ಈ ನಗರಕ್ಕೂ ಇತರ ನಗರಗಳಿಗೂ ಸಂಪರ್ಕ ಕಲ್ಪಿಸಿದೆ. ಸರ್ವಋತು ಭೂಮಾರ್ಗಗಳೂ ಉಂಟು. ಈ ನಗರದ ಸುತ್ತ ದ್ರಾಕ್ಷಿಯ ತೋಟಗಳು, ಪಿಸ್ತಾಶಿಯೋ ಮತ್ತು ಆಲಿವ್ ತೋಪುಗಳು ಉಂಟು. ಇದು ಈ ಪ್ರಾಂತ್ಯದ ಪ್ರಮುಖ ವ್ಯಾಪಾರ ಕೇಂದ್ರ. ಇಲ್ಲಿ ವೈದ್ಯಕೀಯ ಶಾಲೆಯನ್ನೊಳಗೊಂಡಿರುವ ಅಮೆರಿಕನ್ ಮಿಷನ್ ಕಾಲೇಜು ಮತ್ತು ಬಾಲಿಕೆಯರ ಶಾಲೆ ಇವೆ. ಒಂದು ಹವಾ ವೀಕ್ಷಣಾಲಯವೂ ಉಂಟು. ಉತ್ತಮ ದರ್ಜೆಯ ಹತ್ತಿ ಬಟ್ಟೆಗಳು, ಮೇಕೆಯ ಕೂದಲಿನ ಗುಡಾರದ ಬಟ್ಟೆಗಳು, ಮೇಕೆ ಚರ್ಮದ ವಸ್ತುಗಳು, ಹೊಗೆಸೊಪ್ಪು, ಸಾಬೂನು, ಕಚ್ಚಾ ಹತ್ತಿ ಮತ್ತು ಹತ್ತಿ ನೂಲು, ಬಣ್ಣಗಳು, ದ್ರಾಕ್ಷಾ ಪಾಕ- ಇವು ಇಲ್ಲಿಯ ಮುಖ್ಯ ವ್ಯಾಪಾರ ಸರಕುಗಳು.

ಗಾಜ಼ಿ ಆಂಟೆಪ್ ಪ್ರಾಂತ್ಯ

[ಬದಲಾಯಿಸಿ]

ಗಾಜಿ಼ ಆಂಟೆಪ್ ಪ್ರಾಂತ್ಯದ ವಿಸ್ತೀರ್ಣ 2,627 ಚ. ಮೈ.[] ಜನಸಂಖ್ಯೆ 2,154,051 (2022).[] ಯುಫ್ರೇಟೀಸ್ ಇದರ ಪೂರ್ವಕ್ಕಿದೆ. ಈ ಪ್ರಾಂತ್ಯದ ಮೇಲ್ನಾಡಿನಲ್ಲಿ ಕುರಿಗಳನ್ನೂ ಮೇಕೆಗಳನ್ನೂ ಸಾಕುತ್ತಾರೆ. ಹತ್ತಿ, ತಂಬಾಕು, ದ್ವಿದಳ ಧಾನ್ಯ ಇಲ್ಲಿಯ ಮುಖ್ಯ ಬೆಳೆಗಳು. ಮೇಕೆಗಳು, ಚರ್ಮದ ರಗ್ಗುಗಳಿಗೂ, ಹಲವು ಬಗೆಯ ಮದ್ಯಗಳಿಗೂ, ಬಕ್ಲಾವಾ,[] ಪೆಕ್ಮೇಜ್ ಮೊದಲಾದ ಖಾದ್ಯವಸ್ತುಗಳಿಗೂ ಈ ಪ್ರಾಂತ್ಯ ಹೆಸರಾಗಿದೆ. ಈ ಪ್ರಾಂತ್ಯ ತುರ್ಕಿಯ ಅಶ್ವದಳಕ್ಕೆ ಕುದುರೆಗಳನ್ನು ಒದಗಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Turkey: Administrative Division (Provinces and Districts) - Population Statistics, Charts and Map". Archived from the original on 2021-08-31. Retrieved 2021-09-12.
  2. Documents on British foreign policy, 1919-1939, London: H. M. Stationery Office, 1970, vol. 15, p. 155.
  3. "İl ve İlçe Yüz ölçümleri". General Directorate of Mapping. Retrieved 19 September 2023.
  4. "Address-based population registration system (ADNKS) results dated 31 December 2022, Favorite Reports" (XLS) (in ಇಂಗ್ಲಿಷ್). TÜİK. Retrieved 19 September 2023.
  5. "Capital of baklava". Aramco world. Archived from the original on 2021-02-02. Retrieved 2020-12-19.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: