ವಿಷಯಕ್ಕೆ ಹೋಗು

ಅಶ್ವದಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊದಮೊದಲು ರಾವುತರ ದಳಕ್ಕೆ ಇದ್ದ ಹೆಸರು (ಕ್ಯಾವಲ್ರಿ). ಕುದುರೆಗಳನ್ನು ಏರಿ ಯುದ್ಧ ಮಾಡುತ್ತಿದ್ದ ಸವಾರರು ಬಹಳ ಹಿಂದಿನ ಕಾಲದಿಂದಲೂ ಸೈನ್ಯದ ಒಂದು ಅಂಗವಾಗಿದ್ದರು. ಅರ್ಥಶಾಸ್ತ್ರದಲ್ಲಿ ರಥ, ಗಜ, ಅಶ್ವ, ಪದಾತಿ ಎಂಬ ಚದುರಂಗ ಸೇನೆಯ ಉಲ್ಲೇಖವಿದೆ.ಅದಕ್ಕಿಂತ ಪುರ್ವದಿಂದಲೂ ಅಶ್ವಾರೋಹಣ ಕೌಶಲ್ಯಕ್ಕೆ ಪ್ರಾಶಸ್ತ್ಯವಿದ್ದೇ ಇತ್ತು.

ಇತಿವೃತ್ತ

[ಬದಲಾಯಿಸಿ]
  • ಪುರಾಣಗಳಲ್ಲಿ ಅಶ್ವಾರೋಹಿಗಳು ಹೇಗೆ ಒಬ್ಬರ ಮೇಲೊಬ್ಬರು ನುಗ್ಗಿದರು ಎಂಬ ವರ್ಣನೆ ಇದೆ. ಯುರೋಪ್ ಖಂಡದಲ್ಲೂ ಯೋಧರು ಕುದುರೆ ಏರಿ ಬಿಲ್ಲುಬಾಣಗಳನ್ನು ಹಿಡಿದು ಯುದ್ಧ ಮಾಡುತ್ತಿದ್ದರೆಂಬುದು ಗೊತ್ತಿದ್ದ ಸಂಗತಿ. ಯೋಧರಲ್ಲಿ ಪ್ರಾಚೀನ ಕಾಲದಿಂದಲೂ ಬಂದ ಎರಡು ಮಾದರಿಗಳೆಂದರೆ ಪದಾತಿಗಳು ಮತ್ತು ಅಶ್ವಾರೋಹಿಗಳು. ಪದಾತಿ ಸೈನ್ಯಕ್ಕೆ ಕೆಲವು ಮಿತಿಗಳುಂಟು. ಆದರೆ ಅಶ್ವದಳ ವೇಗವಾಗಿ ಸಾಗಿ ಯುದ್ಧರಂಗದಲ್ಲಿ ಕಾಳಗಕೊಟ್ಟು, ಪಕ್ಕಕ್ಕೆ ಬೇಗ ತಿರುಗಿ ಚಲಿಸಬಲ್ಲುದು.
  • ಪದಾತಿ ಸೈನ್ಯವಾದರೋ ಅದರ ಪಕ್ಕಗಳಲ್ಲಾಗಲಿ ಹಿಂಭಾಗದಲ್ಲಾಗಲಿ ಶತ್ರು ಆಕ್ರಮಣ ನಡೆಸಿದಾಗ ತುಂಬ ಪೇಚಾಟಕ್ಕೆ ಸಿಕ್ಕಿಕೊಳ್ಳುತ್ತದೆ. ಅದಕ್ಕೆ ವೇಗವಾದ ಚಲನವಲನಗಳಿಲ್ಲ. ಶತ್ರು ಥಟ್ಟನೆ ಎರಗಿದಾಗ ಅದನ್ನು ಕಾಪಾಡುವುದಕ್ಕೆ ಅದರ ಇಕ್ಕೆಲದಲ್ಲೂ ರಾವುತರ ದಳಗಳನ್ನಿರಿಸ ಬೇಕಾಗುತ್ತದೆ. ಏಷ್ಯ ಖಂಡದಲ್ಲಿ ಅಶ್ವದಳ ಒಳ್ಳೆ ಅವಸ್ಥೆಯಲ್ಲಿತ್ತು. ಏಷ್ಯನರು ಪ್ರ.ಶ.ಪೂ. 5ನೆಯ ಶತಮಾನದಲ್ಲಿ ಗ್ರೀಕರ ಮೇಲೆ ದಾಳಿ ನಡೆಸಿದಾಗ ಗ್ರೀಕರು ಕಕ್ಕಾಬಿಕ್ಕಿಯಾದರು.
  • ಏಷ್ಯಖಂಡದ ಅಶ್ವಾರೋಹಿಗಳನ್ನು ನೋಡಿದ ಮೇಲೆಯೇ ಮ್ಯಾಸಿಡೋನಿನ ಫಿಲಿಪ್ ದೊರೆ ಆತ್ಮ ಸಂರಕ್ಷಣೆಗೂ ಆಕ್ರಮಣ ಮತ್ತು ವ್ಯೂಹ ಭೇದನಗಳಿಗೂ ರಾವುತರ ಸೈನ್ಯವನ್ನು ರಚಿಸಿದ. ಆತನ ಮಗ ವಿಖ್ಯಾತನಾದ ಅಲೆಕ್ಸಾಂಡರ್ ತನ್ನ ಅಶ್ವದಳದಿಂದ ಮಹತ್ತ್ವದ ಯುದ್ಧಗಳನ್ನು ನಡೆಸಿದ. ದೃಢಕಾಯರಾದ ಆರುಜನ ಕಾಲಾಳುಗಳಿಗೆ ಒಬ್ಬ ರಾವುತನಂತೆ ಆತ ನಿಯಮಿಸಿದ. ಅಲೆಕ್ಸಾಂಡರನಿಂದೀಚೆಗೆ ಅಶ್ವದಳ ಜಯ ನಿರ್ಣಯಿಸಬಲ್ಲ ಸೇನಾಂಗವಾಯಿತು.
  • ಪ್ರ.ಶ.ಪೂ. 216ರಲ್ಲಿ ಕಾರ್ಥೇಜಿಯನ್ನರು ಅಶ್ವದಳ ರಹಿತವಾದ ರೋಮನ್ ಜನರೊಂದಿಗೆ ಕಾದಾಡಿ ತಮ್ಮ ರಾಹುತರಿಂದ ಅವರನ್ನು ಸೋಲಿಸಿದರು. ಪ್ರ.ಶ.ಪೂ. 205ರಲ್ಲಿ ಅವರು ಸ್ಕಿಪಿಯೋ ಆಫ್ರಿಕಾನಸ್‌ನೊಡನೆ ಯುದ್ಧಹೂಡಿ ಅವನನ್ನು ಜಯಿಸಿದರು. ಜೂಲಿಯಸ್ ಸೀಜ಼ರನ ಕಾಲದಲ್ಲಿ ರೋಮನರು ಯೂಫ್ರೆಟೀಸ್ ನದಿಯನ್ನು ದಾಟಿದಾಗ ಪಾರ್ಥಿಯನ್ನರು ತಮ್ಮ ಹತ್ತಿರ ಬಲವಾದ ರಾಹುತರ ದಳವಿದ್ದ ಕಾರಣ 20,000 ರೋಮನ್ನರನ್ನು ಕೊಂದರು, 10,000 ಜನರನ್ನು ಸೆರೆಹಿಡಿದರು. ಕಾದಾಡಲು ಬಂದ 40,000 ರೋಮನ್ನರಲ್ಲಿ 10,000 ಜನರು ಮಾತ್ರ ಪಲಾಯನ ಮಾಡಲು ಅವಕಾಶವಾಯಿತು. ರೋಮನ್ನರ ಹತ್ತಿರ ನೆಪಕ್ಕೊಂದು ಅಶ್ವದಳವಿದ್ದಿತಾದರೂ ಪಾರ್ಥಿಯನ್ನರ ಹತ್ತಿರ ಕುದುರೆಯೇರಿದ ಬಿಲ್ಲಾಳುಗಳಿದ್ದರು. ಅವರನ್ನು ರಕ್ಷಿಸಿಕೊಂಡು ಸಾಕಷ್ಟು ಸ್ಥೈರ್ಯವನ್ನು ಕೊಡುವುದಕ್ಕಾಗಿ ಘನವಾದ ಅಶ್ವದಳ ಅವರನ್ನು ಹಿಂಬಾಲಿಸಿತ್ತು.

ಚೆಂಗೀಸ್ ಖಾನನ ಅಶ್ವದಳ

[ಬದಲಾಯಿಸಿ]
  • ಏಷ್ಯ ಖಂಡದಲ್ಲಿ ಆಕ್ರಮಣದ ಜೀವಾಳವೇ ಅಶ್ವದಳದ ಕೈಯಲ್ಲಿತ್ತು. 12ನೆಯ ಶತಮಾನದಲ್ಲಿದ್ದ ಚೆಂಗೀಸ್ ಖಾನನ ಅಶ್ವದಳ ಅತ್ಯಂತ ಪ್ರಸಿದ್ಧವಾದದ್ದು. ಸಾಹಸವಂತರೂ ದಣಿವಿಲ್ಲದವರೂ ಆದ ತನ್ನ ಜನವನ್ನು ಆತ ಸಹ್ರಸಾರು ಧೀರ ರಾಹುತರನ್ನಾಗಿ ಪರಿವರ್ತಿಸಿ ಹೋದ ಕಡೆಯಲ್ಲೆಲ್ಲ ವಿಜಯವನ್ನು ಗಳಿಸಿದ. ಏಷ್ಯ ಖಂಡದ ಉತ್ತರ ಮತ್ತು ಪುರ್ವ ದಿಕ್ಕುಗಳಲ್ಲಿ ಅನೇಕ ಭಾಗಗಳನ್ನು ಆತ ಆಕ್ರಮಿಸಿಕೊಂಡ. ಅವನ ಕೈಕೆಳಗೆ ಶಿಕ್ಷಣವನ್ನು ಪಡೆದ ಸುಮಾರು ಏಳು ಲಕ್ಷ ಜನ ಅವನು ಹೇಳಿದ ಕಡೆಗೆ ಹೋಗಿ ಜಯಗಳಿಸುತ್ತಿದ್ದರು.
  • ಯಾವನೊಬ್ಬನಾದರೂ ಹಿಮ್ಮೆಟ್ಟಿದ ಪಕ್ಷದಲ್ಲಿ ಆತ ಕೂಡಲೇ ಸಾವಿಗೀಡಾಗಬೇಕಾಗುತ್ತಿದ್ದ. ನನ್ನ ಸೈನ್ಯದ ಒಬ್ಬ ಸಾಮಾನ್ಯ ಸವಾರ ಮಿಕ್ಕವರ ಸೈನ್ಯದ ತುಕಡಿದಾರನಿಗಿಂತಲೂ ಶ್ರೇಷ್ಠ ಎಂದು ಚೆಂಗೀಸ್óಖಾನ್ ಹೇಳುತ್ತಿದ್ದನಂತೆ. ನಮ್ಮ ದೇಶದಲ್ಲಿ ಅಶ್ವಾರೋಹಣ ಕುಶಲತೆ ರಾಜ ನಿಗಿರಬೇಕಾದ ಗುಣಗಳಲ್ಲಿ ಅತ್ಯುತ್ತಮವೆನಿಸಿತ್ತು. ಯುದ್ಧರಂಗಗಳಲ್ಲಿ ತೆಗೆದುಕೊಂಡು ಹೋಗತಕ್ಕ ಕುದುರೆಗಳಿಗೆ ಹೆಸರಿಟ್ಟು ಕರೆಯುತ್ತಿದ್ದರು. ರಣರಂಗದಲ್ಲೊಂದರಲ್ಲೇ ಅಲ್ಲದೆ ಮೃಗಯಾದಿ ವಿನೋದಗಳಿಗೂ ಕುದುರೆಗಳನ್ನು ಬಳಸುತ್ತಿದ್ದರು. ಈಗ ಪ್ರಪಂಚದ ಎಲ್ಲ ಭಾಗಗಳಲ್ಲೂ ಕಾಣಬರುವ ಪೋಲೋ ಎಂಬ ಆಟ ಭಾರತ ದೇಶದಿಂದ ತುಂಬ ಪುಷ್ಟಿಯನ್ನು ಪಡೆದಿದೆ. ಈ ನವೀನ ಯುಗದಲ್ಲಿ ಅಶ್ವದಳ ಯುದ್ಧರಂಗಕ್ಕಿಳಿದಾಗಲೆಲ್ಲ ಬಹಳ ಯಶಸ್ಸನ್ನು ಗಳಿಸಿದೆ. ಹಡ್ಸನ್ ಹಾರ್ಸ್‌ ಎಂಬುದು ಇಂಥ ಮತ್ತೊಂದು.

ಮೈಸೂರು ಲ್ಯಾನ್ಸ್‌ರ್ಸ್‌ ರಾಹುತರು

[ಬದಲಾಯಿಸಿ]
  • ಮೈಸೂರು ಲ್ಯಾನ್ಸ್‌ರ್ಸ್‌ ರಾಹುತರು ಭರ್ಜಿಗಳನ್ನು ಹಿಡಿದುಕೊಂಡಿರುತ್ತಿದ್ದರಿಂದ ಈ ದಳಕ್ಕೆ ಈ ಹೆಸರು ಬಂತು-ಅವರ ಖ್ಯಾತಿಯೂ ಇವಕ್ಕೆ ಕಡಿಮೆಯದಲ್ಲ. ನಮ್ಮ ದೇಶದಲ್ಲಿ ಕಂಡುಬರುವ ಶಿವಾಜಿ ಮಹಾರಾಜ ಮತ್ತು ಅನೇಕ ವೀರರ ಅಶ್ವಾರೋಹಿ ವಿಗ್ರಹಗಳು ಅಶ್ವದಳ ತನ್ನ ಉತ್ಕರ್ಷದ ದಿನಗಳಲ್ಲಿ ಮಾಡುತ್ತಿದ್ದ ಮಹತ್ಕಾರ್ಯಗಳ ಸಾಕ್ಷಿಯಾಗಿ ನಿಂತಿವೆ. ಶ್ರೀರಂಗಪಟ್ಟಣ ಮತ್ತು ಮೈಸೂರುಗಳಲ್ಲಿ ಕಣ್ಣಿಗೆ ಬೀಳುವ ಚಿತ್ರಗಳು ಮೈಸೂರು ಲ್ಯಾನ್ಸರಿಗೂ ಮುಂಚಿನ ಅಶ್ವದಳಗಳ ಚಾಕಚಕ್ಯವನ್ನು ನೆನಪಿಗೆ ತರುತ್ತವೆ.
  • ಖಾಸಗಿ ಪಾಗ ಎಂದು ಪ್ರಸಿದ್ಧವಾದ ಪೇಷ್ವೆಗಳ ಸ್ವಂತ ಅಶ್ವದಳ ಬಹು ಶ್ರೇಷ್ಠ ಅಂಗರಕ್ಷಕ ಸೈನ್ಯವೆನಿಸಿತ್ತು. ಹಗುರವಾದ ಉಡುಪುಗಳನ್ನು ಧರಿಸಿದ್ದ ಮರಾಠ ರಾಹುತರು ಶತ್ರುಗಳನ್ನು ತರಬುತ್ತಾ ಒಂದೇ ನಾಗಾಲೋಟದಲ್ಲಿ ಇಡೀ ದೇಶವನ್ನೇ ಆಕ್ರಮಿಸುತ್ತಿದ್ದರು. ಅವರಲ್ಲಿ ಬಾರಗೀರ್ ಮತ್ತು ಸಿಲೇದಾರ್ ಎಂಬ ಎರಡು ವರ್ಗಗಳಿದ್ದುವು. ಬಾರಗೀರರಿಗೆ ಸರ್ಕಾರವಾಗಲಿ ವ್ಯಕ್ತಿಗಳಾಗಲಿ ಕುದುರೆಗಳನ್ನು ಒದಗಿಸುತ್ತಿದ್ದರು. ಸಿಲೇದಾರರು ತಮ್ಮ ಸ್ವಂತ ಖರ್ಚಿನಿಂದ ಕುದುರೆಗಳನ್ನು ಕೊಂಡು ಸಾಕುತ್ತಿದ್ದರು.
  • ಇವರೆಲ್ಲರೂ ಕತ್ತಿ ಅಥವಾ ಭರ್ಜಿ ಮತ್ತು ಗುರಾಣಿಯನ್ನು ಹಿಡಿಯುತ್ತಿದ್ದರು. ಈ ಆಯುಧಗಳ ಪ್ರಯೋಗದಲ್ಲಿ ಇವರು ತುಂಬ ಪಳಗಿದವರಾಗಿದ್ದರು. ಭರ್ಜಿಯಲ್ಲಿ ಸುಶಿಕ್ಷಿತರಾದವರು ಉದ್ದವಾದ ರಿಕಾಪಿಗೆ ಹೆಬ್ಬೆರಳು ತಗುಲುವಂತೆ ಸವಾರಿ ಮಾಡುತ್ತಿದ್ದರು. ಮ್ಯಾಚ್ಲಾಕ್ ಎಂಬ ಮದ್ದಿನ ಬತ್ತಿಯ ಕೋವಿಯನ್ನು ಹಿಡಿದವರು ತುಂಬ ಚಿಕ್ಕ ರಿಕಾಪಿನಲ್ಲಿ ಸವಾರಿ ಮಾಡುತ್ತಿದ್ದರು.
  • ಈ ಕೋವಿಯವರು ಎಲ್ಲ ಅಶ್ವದಳಗಳಲ್ಲೂ ಕೆಲಮಂದಿ ಇರುತ್ತಿದ್ದರು. ಅವರು ಮೊಳಕಾಲನ್ನು ಮುಚ್ಚುವಂತೆ ಬಿಗಿ ಚಲ್ಲಣಗಳನ್ನು ತೊಟ್ಟು ಹತ್ತಿಯ ರಸಾಯಿಗಳಿಂದ ಮಾಡಿದ ಕವಚಗಳನ್ನು ಧರಿಸಿ, ನಡುವಿಗೆ ಒಂದು ಪಟ್ಟಿಯನ್ನು ಕಟ್ಟಿ-ಬೆಲ್ಟಿಗಿಂತ ಪಟ್ಟಿಯೇ ಅವರಲ್ಲಿ ಮೇಲೆನಿಸಿತ್ತು-ತಲೆಗೆ ಒಂದು ರುಮಾಲನ್ನು ಸುತ್ತಿಕೊಳ್ಳುತ್ತಿದ್ದರು. ಅವರಲ್ಲಿ ಅನೇಕರು ಈ ರುಮಾಲಿನ ಒಂದು ಚುಂಗನ್ನು ಗಡ್ಡದ ಕೆಳಭಾಗಕ್ಕೆ ತಂದು ಗಂಟನ್ನು ಬಿಗಿದು ತಮ್ಮ ರುಮಾಲನ್ನು ಭದ್ರಪಡಿಸಿಕೊಳ್ಳುತ್ತಿದ್ದರು.

ಮೊದಲನೆಯ ಮಹಾಯುದ್ಧದಲ್ಲಿ

[ಬದಲಾಯಿಸಿ]
  • ಪರಿಸ್ಥಿತಿ ಹೀಗಿರುವಲ್ಲಿ ಮದ್ದುಗುಂಡುಗಳೂ ಬಂದೂಕುಗಳೂ, ಬಳಕೆಗೆ ಬಂದ ಮೇಲೆ ಕುದುರೆಗಳನ್ನು ಸಂರಕ್ಷಿಸುವ ಬಗೆ ಹೇಗೆಂಬುದು ಬಹಳ ಆತಂಕದ ಪ್ರಶ್ನೆಯಾಯಿತು. ತೆಳ್ಳಗಿರುವ ಲೋಹಫಲಕಗಳು ಅಷ್ಟು ಉಪಯುಕ್ತವಾಗಿರಲಿಲ್ಲ. ಏಕೆಂದರೆ ಗುಂಡುಗಳು ಅವುಗಳನ್ನು ತೂರಿ ಹೋಗುತ್ತಿದ್ದುವು. ಎರಡೂ ಮಹಾಯುದ್ಧಗಳಲ್ಲಿ ಅಶ್ವದಳಗಳನ್ನು ಉಪಯೋಗಿಸಿಕೊಂಡಿದ್ದುದು ಬಹಳ ಕಡಿಮೆ. ಮೊದಲನೆಯ ಮಹಾಯುದ್ಧದಲ್ಲಿ ಬಂದೂಕಿನ ಸವಾರರಿದ್ದರು.
  • ಆದರೆ ಫ್ರಾನ್ಸಿನಲ್ಲಾಗಲಿ, ಜರ್ಮನಿಯಲ್ಲಾಗಲಿ ರಷ್ಯದಲ್ಲಾಗಲಿ ಅವರಿಂದ ಯಾವ ನಿರ್ಣಾಯಕ ಫಲಿತಾಂಶಗಳೂ ದೊರೆಯಲಿಲ್ಲ. ಪ್ಯಾಲಸ್ಟೈನಿನಲ್ಲಿ ಜರುಗಿದ ಪ್ರಳಯರಂಗದಲ್ಲಿ ಲಾರ್ಡ್ ಆಲೆನ್ಬಿಯವರು ತುರ್ಕಿದೇಶದ ಸೈನ್ಯವನ್ನು ಕಣಿವೆಕಂದಕಗಳಲ್ಲಿ ಉರುಳುವಂತೆ ಓಡಿಸಿಕೊಂಡು ಹೋಗಲು ಅಶ್ವದಳವನ್ನು ಉಪಯೋಗಿಸಿದಾಗ ಮಾತ್ರ ಅದು ಗೆಲುವನ್ನು ಕಂಡಿತು.
  • ಆದುದರಿಂದ ಸಹಜವಾಗಿಯೇ ಮೊದಲನೆಯ ಮಹಾಯುದ್ಧ ಮುಗಿದಮೇಲೆ ಯುದ್ಧರಂಗದಲ್ಲಿ ಕುದುರೆಗಳನ್ನು ಬಳಸುವುದು ನಿಂತುಹೋಗಿ, ಕವಚವನ್ನು ಹೊದಿಸಿದ ರಥಗಳೂ ಟ್ಯಾಂಕುಗಳೂ ಅವುಗಳ ಜಾಗಕ್ಕೆ ಬಂದುವು. ಕವಚವುಳ್ಳ ರಥ (ಆರ್ಮ್ರ್ಡ್ ಕಾರ್ಸ್) ಕುದುರೆಗಳಷ್ಟೇ ಚಲನವಲನವುಳ್ಳದ್ದು ಮತ್ತು ಅದಕ್ಕಿಂತ ಉಪಯುಕ್ತವಾದದ್ದು; ಏಕೆಂದರೆ ಶತ್ರುವಿನ ಗುಂಡು ಅದರ ಕವಚದೊಳಗೆ ತೂರಲಾಗುತ್ತಿರಲಿಲ್ಲ. ಆದ ಕಾರಣ ಅವು ಕವಚ ಹೊದಿಸಿದ ರಥಗಳಾಗಿದ್ದರೂ ಕೂಡ ಈ ರೀತಿ ಹುಟ್ಟಿದ್ದರಿಂದ ಅವುಗಳನ್ನೂ ಕ್ಯಾವಲ್ರಿ ಎಂದೇ ಕರೆಯಲಾಗುತ್ತಿದೆ.

ಎರಡನೆಯ ಮಹಾಯುದ್ಧದಲ್ಲಿ

[ಬದಲಾಯಿಸಿ]
  • ಎರಡನೆಯ ಮಹಾಯುದ್ಧದಲ್ಲಿ ಇವುಗಳ ಚಲನಶಕ್ತಿ ಎಷ್ಟು ಚೆನ್ನಾಗಿತ್ತೆಂದರೆ ಜರ್ಮನಿ ದೇಶದ ಕವಚ ರಥಗಳು ಪ್ರಬಲ ರಾಷ್ಟ್ರಗಳಲ್ಲಿ ಮೊದಲ ಪಂಕ್ತಿಗೆ ಸೇರಿದ ಪೋಲೆಂಡ್ ದೇಶವನ್ನು ಕಬಳಿಸಿದುವು. ಇದೇ ಜರ್ಮನ್ ಕ್ಯಾವಲ್ರಿ ಫ್ರಾನ್ಸ್‌ ದೇಶದ ಪ್ರಖ್ಯಾತ ಮಾಜಿನೋಲೈನ್ ಎಂಬ ದುರ್ಗಮ ಪ್ರದೇಶವನ್ನು ಒಂದು ಕಡೆಗೆ ಬಿಟ್ಟು ಮುನ್ನುಗ್ಗಿತು. ಬರಿಯ ಬಯಲಾದ ಪಶ್ಚಿಮದ ಮರುಳುಕಾಡಿನಲ್ಲಿ ಈ ಹೊಸ ಸಾಧನ ತನಗೆ ತಕ್ಕ ಪ್ರಾಶಸ್ತ್ಯ ಪಡೆಯಿತು.
  • ಶತ್ರು ಸೈನಿಕರು ಮಿತ್ರ ಪಕ್ಷದವರೂ ಬೇಕಾದ ಹಾಗೆ ಇದನ್ನು ಉಪಯೋಗಿಸಿದರು. ನಾರ್ಮಂಡಿಯಿಂದ ರೈನ್ ನದಿಯವರೆಗೆ ಸಂಯುಕ್ತ ರಾಷ್ಟ್ರದವರು ತಮ್ಮ ಕವಚ ರಥಗಳ ಪಡೆಗಳನ್ನು ಶತ್ರುವಿನ ರಾಜ್ಯದೊಳಗೆ ನುಗ್ಗಿಸಿ ಗುಂಡು ಹೊಡೆದು ಕಕ್ಕಾಬಿಕ್ಕಿಯಾಗುವಂತೆ ಮಾಡಿ ಅವರನ್ನು ಸೋಲಿಸಿದರು. ಈ ಯಾಂತ್ರಿಕ ಅಶ್ವದಳ ಯುದ್ಧಮಾಡುವುದಕ್ಕೊಂದಕ್ಕೇ ಅಲ್ಲದೆ ಸ್ಥಳ ಶೋಧನಕ್ಕೂ ಉಪಯುಕ್ತವಾಯಿತು.
"https://kn.wikipedia.org/w/index.php?title=ಅಶ್ವದಳ&oldid=816844" ಇಂದ ಪಡೆಯಲ್ಪಟ್ಟಿದೆ