ಖೋಟಾನ್
ಖೋಟಾನ್ ಚೀನದ ಷಿಂಜಿಯಾಂಗ್ ಉಯಿಗರ್ ಸ್ವಯಮಾಡಳಿತ ಪ್ರದೇಶದಲ್ಲಿರುವ[೧][೨] ಒಂದು ಪಟ್ಟಣ. ಟಾರೀಂ ನದೀ ಕಣಿವೆಯ ದಕ್ಷಿಣದ ಅಂಚಿನಲ್ಲಿದೆ. ಜನಸಂಖ್ಯೆ ಸು. 408,900 (2018).[೩] ಕಾಷ್ಗಾರ್ ಪಟ್ಟಣಕ್ಕೂ ಇದಕ್ಕೂ 270 ಮೈ. ದೂರ. ಖೋಟಾನ್ ಪಟ್ಟಣ ಒಂದು ಓಯಸಿಸ್‌ನ ನಡುವೆ ಇದೆ. ಈ ಓಯಸಿಸ್‌ಗೆ ನೀರು ಒದಗುವುದು ಕೂನ್‌ಲೂನ್ ಪರ್ವತದಿಂದ ಇಳಿದು ಬರುವ ಯೂರುಂಗ್‍ಕಷ್ ಮತ್ತು ಕಾರಾಕಾಷ್ ನದಿಗಳಿಂದ.[೪][೫] ಈ ಎರಡೂ ನದಿಗಳು ಕೂಡಿ ಖೋಟಾನ್ ನದಿಯಾಗಿ ಪರಿಣಮಿಸುತ್ತವೆ. ಈ ನದಿ ಕೊನೆಯಲ್ಲಿ ಟಾಕ್ಲಾಮಾಕಾನ್ ಮರುಭೂಮಿಯಲ್ಲಿ ಇಂಗಿಹೋಗುತ್ತದೆ.[೬]
ಇತಿಹಾಸ
[ಬದಲಾಯಿಸಿ]ಚೀನದ ಪೂರ್ವದ ಹಾನ್ ಸಂತತಿಯ ಆಳ್ವಿಕೆಯ ಕಾಲದಲ್ಲಿ ಈ ಪಟ್ಟಣ ಅಷ್ಟೇನೂ ಮುಖ್ಯವಾದ್ದಾಗಿರಲಿಲ್ಲ. ಆದರೆ ಕ್ರಿ.ಶ. 1ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಾಮುಖ್ಯ ಗಳಿಸಿತು. ಇದಕ್ಕೆ ಖೋಟಾನಿನ ಸನ್ನಿವೇಶ ಮಹತ್ವವೂ ಅದು ಅತ್ಯಂತ ದೊಡ್ಡ ಓಯಸಿಸ್‌ನ ಕೇಂದ್ರವಾಗಿದ್ದುದೂ ಕಾರಣ. ಪಶ್ಚಿಮಕ್ಕೆ ಸಾಗುತ್ತಿದ್ದ ಎರಡು ಮುಖ್ಯ ಮಾರ್ಗಗಳ ಪೈಕಿ ದಕ್ಷಿಣದ ಮಾರ್ಗ ಇದರ ಮೂಲಕ ಸಾಗುತ್ತಿತ್ತು. ಇದು ಭಾರತಕ್ಕೂ, ಮಧ್ಯ ಏಷ್ಯಕ್ಕೂ ನಡುವಣ ಮಾರ್ಗದ ಕೊಂಡಿಯಂತಿತ್ತು. ಪಾನ್ ಚಾವ್ ಎಂಬ ಸೇನಾನಿ ಇದನ್ನು 70ರಲ್ಲಿ ಗೆದ್ದ ಮೇಲೆ ಅನಂತರದ ಹಾನ್ ವಂಶದ ಆಳ್ವಿಕೆಯಲ್ಲಿ ಚೀನಕ್ಕೆ ಅಧೀನವಾಗಿತ್ತು. ಮತ್ತೆ 7ನೆಯ ಶತಮಾನದಲ್ಲಿ ಟಾಂಗ್ ವಂಶದ ದೊರೆಗಳ ವಶದಲ್ಲಿತ್ತು;[೭][೮] ಒಂದು ಮುಖ್ಯ ಸೈನಿಕ ಠಾಣ್ಯವಾಗಿತ್ತು. 8ನೆಯ ಶತಮಾನದಲ್ಲಿ ಇದನ್ನು ಪಶ್ಚಿಮ ತುರ್ಕಿಸ್ಥಾನದ ಅರಬರು ಜಯಿಸಿದರು. 10ನೆಯ ಶತಮಾನದಲ್ಲಿ ಇದು ಕಾಷ್ಗಾರಿಗೆ ಸೇರಿತು. 13ನೆಯ ಶತಮಾನದಲ್ಲಿ ಚೆಂಘಿಸ್ ಖಾನ್ ಇದನ್ನು ಗೆದ್ದುಕೊಂಡ. ಆಗ ಇದು ಮಂಗೋಲರ ಆಡಳಿತಕ್ಕೆ ಒಳಪಟ್ಟಿತ್ತು. 1254ರಲ್ಲಿ ಈ ಪ್ರದೇಶದ ಮಾರ್ಗವಾಗಿ ಪ್ರಯಾಣ ಮಾಡಿದ ಮಾರ್ಕೊ ಪೋಲೋ ಇಲ್ಲಿಯ ಕೃಷಿ ಸಂಪತ್ತು, ವಾಣಿಜ್ಯ ಪ್ರಗತಿ, ಜನರ ಶಾಂತಿಪ್ರಿಯತೆ ಇವನ್ನು ವರ್ಣಿಸಿದ್ದಾನೆ.[೯][೧೦]}} ಅನಂತರ ಇದು ಮಧ್ಯ ಏಷ್ಯದ ಮುಸ್ಲಿಂ ಚಟುವಟಿಕೆಗಳ ಕೇಂದ್ರವಾಗಿ ಚೀನೀ ಪ್ರಭುತ್ವದ ವಿರುದ್ಧ ಮುಸ್ಲಿಮರು ನಡೆಸಿದ ದಂಗೆಯಲ್ಲಿ (1864-75) ಪ್ರಮುಖ ಪಾತ್ರ ವಹಿಸಿತ್ತು. ಕೊನೆಗೆ 1878ರಲ್ಲಿ ಈ ಪಟ್ಟಣ ಚೀನದ ಆಡಳಿತಕ್ಕೆ ಒಳಪಟ್ಟಿತು.[೧೧]
ಕೃಷಿ, ಕೈಗಾರಿಕೆಗಳು
[ಬದಲಾಯಿಸಿ]ಖೋಟಾನಿನ ವ್ಯವಸಾಯಾಭಿವೃದ್ಧಿಗೆ ಇಲ್ಲಿರುವ ಓಯಸಿಸ್ ಮುಖ್ಯ ಕಾರಣ. ಅನೇಕ ಕಡೆಗಳಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ಗೋಧಿ, ಬತ್ತ, ಓಟ್ಸ್, ಮಿಲೆಟ್, ಮುಸುಕಿನ ಜೋಳ ಮುಖ್ಯವಾದ ಧಾನ್ಯಗಳು. ಹತ್ತಿಯನ್ನೂ, ಅನೇಕ ಬಗೆಯ ಹಣ್ಣುಗಳನ್ನೂ ಬೆಳೆಯುತ್ತಾರೆ. ಉಪ್ಪುನೇರಳೆಯನ್ನು ಅಧಿಕವಾಗಿ ಬೆಳೆಯುವುದರಿಂದ ಖೋಟಾನ್ ಪಟ್ಟಣ ರೇಷ್ಮೆ ಕೈಗಾರಿಕೆಗೆ ಪ್ರಸಿದ್ಧ. ಜಮಖಾನೆ ಮತ್ತು ಫೆಲ್ಟ್ ತಯಾರಿಕೆ, ಲೋಹಗೆಲಸ ಇವು ಕೆಲವು ಕಸಬುಗಳು. ನದಿಯ ಮೆಕ್ಕಲುಮಣ್ಣಿನಿಂದ ಚಿನ್ನ ತೆಗೆಯುತ್ತಾರೆ. ಭರಣಿ, ಬಟ್ಟಲು, ಸೀಸೆ, ಚುಂಗಾಣಿಗಳನ್ನು ಅಲಂಕರಿಸಲು ಬೇಕಾದ ಜೇಡ್‍ಶಿಲೆಗಳಿಗೆ ಖೋಟಾನ್ ಹಿಂದಿನಿಂದಲೂ ಪ್ರಸಿದ್ಧವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "新疆的历史与发展". www.gov.cn. Retrieved 2023-03-20.
- ↑ "新疆维吾尔自治区政府网(En)". The Government of Xinjiang Uygur Autonomous Region of China. Archived from the original on 7 December 2020. Retrieved 18 August 2020.
- ↑ China Population: Xinjiang: Hotan: Hetian City https://www.ceicdata.com/en/china/population-county-level-region/population-xinjiang-hotan-hetian-city
- ↑ Marc Aurel Stein. (1907) Ancient Khotan: Detailed Report of Archaeological Explorations in Eastern Turkestan. Oxford. Pages 123-126.
- ↑ Bonavia, Judy. The Silk Road: Xi'an to Kashgar. Revised by Christopher Baumer (2004), pp. 306-319. Odyssey Publications. ISBN 962-217-741-7.
- ↑ http://www.travel-silkroad.com/english/dongfanwenming/history/htsj/gyzkc.htm
- ↑ Whitfield 2004, p. 47.
- ↑ Twitchett 2000, pp. 116–118.
- ↑ Latham, Ronald (1958). Marco Polo: the travels. p. 80.
- ↑ Wood, Frances (2002). The Silk Road: two thousand years in the heart of Asia. University of California Press. p. 18. ISBN 9780520243408.
- ↑ S. Frederick Starr (2015). Xinjiang: China's Muslim Borderland. Taylor & Francis. p. 57. ISBN 9781317451372.
ಗ್ರಂಥಸೂಚಿ
[ಬದಲಾಯಿಸಿ]- Whitfield, Susan (2004), The Silk Road: Trade, Travel, War and Faith, Chicago: Serindia, ISBN 978-1-932476-13-2
- Twitchett, Denis (2000), "Tibet in Tang's Grand Strategy", in van de Ven, Hans (ed.), Warfare in Chinese History, Leiden: Koninklijke Brill, pp. 106–179, ISBN 978-90-04-11774-7
ಹೊರಗಿನ ಕೊಂಡಿಗಳು
[ಬದಲಾಯಿಸಿ]- Official government site (in Chinese)
- Silk Road Seattle - University of Washington (The Silk Road Seattle website contains many useful resources including a number of full-text historical works)
- Site devoted to the Buddhism of Khotan with a copy of Sir Aurel Stein's map of the Tarim Basin and Khotan region