ವಿಷಯಕ್ಕೆ ಹೋಗು

ಖಾಸಗಿ ಕಂಪನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಾಸಗಿ ಕಂಪನಿ ಎಂದರೆ ಯಾವುದರ ಷೇರುಗಳು ಮತ್ತು ಸಂಬಂಧಿತ ಹಕ್ಕುಗಳು ಅಥವಾ ಬಾಧ್ಯತೆಗಳನ್ನು ಸಾರ್ವಜನಿಕ ವಂತಿಗೆಗೆ ನೀಡುವುದಿಲ್ಲವೊ ಅಥವಾ ತಮ್ಮ ಅನುಕ್ರಮವಾದ ಪಟ್ಟೀಕೃತ ಮಾರುಕಟ್ಟೆಗಳಲ್ಲಿ ಸಾರ್ವಜನಿಕವಾಗಿ ವ್ಯವಹರಿಸಲ್ಪಡುವುದಿಲ್ಲವೊ ಅಂತಹ ಕಂಪನಿಗೆ ಈ ಹೆಸರಿದೆ.

ಖಾಸಗಿ ಉದ್ಯಮ (private enterprise) ಎಂದರೆ ಖಾಸಗಿ ವ್ಯಕ್ತಿಗಳ ಅಥವಾ ಗುಂಪುಗಳ ಒಡೆತನ, ಸಂಘಟನೆ, ವ್ಯವಸ್ಥಾಪನ, ನಿಯಂತ್ರಣಗಳಿಗೆ ವ್ಯವಹಾರೋದ್ಯಮಗಳು ಒಳಪಟ್ಟಿರುವಂಥ ವ್ಯವಸ್ಥೆ. ಲಾಭದೃಷ್ಟಿ, ಸ್ಪರ್ಧೆಯ ಪರಿಸ್ಥಿತಿ-ಇವು ಸಾಮಾನ್ಯವಾಗಿ ಇದಕ್ಕೆ ಪ್ರೇರಣೆಗಳಾಗಿರುತ್ತವೆ. ತಾತ್ತ್ವಿಕವಾಗಿ ಖಾಸಗಿ ಉದ್ಯಮ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರುವುದೆಂದು ಹೇಳಲಾದರೂ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ವಸ್ತುತಃ ಅದು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಸರ್ಕಾರಿ ನಿಯಂತ್ರಣಗಳಿಗೆ ಒಳಪಟ್ಟಿರುತ್ತದೆ. ಆಯಾ ದೇಶದ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿ ಈ ನಿಯಂತ್ರಣದ ಪ್ರಮಾಣ ವ್ಯತ್ಯಾಸವಾಗುತ್ತದೆ. ಸ್ವಹಿತಮೂಲವಾಗಿ ಸಂಭವಿಸುವ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಬೇಡಿಕೆ-ಸರಬರಾಯಿಗಳ ಪರಸ್ಪರ ಕ್ರಿಯೆಗಳಿಂದಾಗಿ ನಿಶ್ಚಿತವಾಗುವ ಬೆಲೆಗಿಂತ ಆದಷ್ಟು ಕಡಿಮೆ ವೆಚ್ಚದಲ್ಲಿ ಸರಕನ್ನು ಉತ್ಪಾದಿಸಿ ಗರಿಷ್ಠ ಲಾಭ ಗಳಿಸಲು ಉತ್ಪಾದಕರು ಉದ್ಯುಕ್ತರಾಗುವರಾದ್ದರಿಂದ ಉದ್ಯಮದ ದಕ್ಷತೆ ಉನ್ನತ ಮಟ್ಟದಲ್ಲಿರುವುದೆಂದೂ ಹೇಳಲಾಗಿದೆ. ಸಮಾಜದ ಆವಶ್ಯಕತೆ, ಕಲ್ಯಾಣ, ಸರಕು ಅಥವಾ ಸೇವೆಗಾಗಿ ಒಟ್ಟಿನಲ್ಲಿ ಸಮಾಜ ಹೊರಬೇಕಾದ ವೆಚ್ಚ ಇವುಗಳಿಗಿಂತ ವ್ಯಕ್ತಿಯ ಲಾಭದೃಷ್ಟಿ ಮುಖ್ಯವಾದರೂ ಸಮಾಜದ ಬೇಕುಬೇಡಗಳ ಸೂಚಿಯಾಗಿ ಬೆಲೆ ವ್ಯವಸ್ಥೆ ವರ್ತಿಸುವುದರಿಂದ ಖಾಸಗಿ ಉದ್ಯಮದ ಇಡೀ ದರ್ಶನ ಅದರ ಮೇಲೆಯೇ ನಿಂತಿದೆಯೆನ್ನಬಹುದು. ಪರಿಪೂರ್ಣ ಸ್ಫರ್ಧೆಯ ಅಭಾವದಿಂದಾಗಿ ಇದು ಕೇವಲ ತಾತ್ತ್ವಿಕವಾಗಿ ಉಳಿದಿದೆ.

ವ್ಯವಹಾರ ಚಟುವಟಿಕೆಗಳ ಉಗಮದ ಕಾಲದಲ್ಲೇ ಖಾಸಗಿ ಉದ್ಯಮವೂ ಆರಂಭವಾಯಿತೆನ್ನಬಹುದು. ಆದ್ಯ ಅಭಿಜಾತ ಅರ್ಥಶಾಸ್ತ್ರಜ್ಞರನೇಕರು ಈ ವ್ಯವಸ್ಥೆಯನ್ನು ಸರ್ಕಾರಿ ಉದ್ಯಮಕ್ಕಿಂತ ಹೆಚ್ಚು ದಕ್ಷವೆಂದೂ ಸಾಹಸಯುಕ್ತವೆಂದೂ ಹೊಗಳಿದ್ದಾರೆ. ಈಚಿನ ಅನೇಕ ಅರ್ಥಶಾಸ್ತ್ರಜ್ಞರು ಇದನ್ನು ಟೀಕಿಸಿಯೂ ಇದ್ದಾರೆ. ಉತ್ಪಾದನ ಸಾಧನಗಳ ಖಾಸಗಿ ಒಡೆತನ ನಿರ್ವಹಣೆಗಳಿಂದ ವರಮಾನ, ಸಂಪತ್ತುಗಳ ಅಸಮ ವಿತರಣೆಯಾಗುವುದೆಂದೂ, ಕಾರ್ಮಿಕರೂ ಅನುಭೋಗಿಗಳೂ ಶೋಷಣೆಗೆ ಒಳಗಾಗುವರೆಂದೂ, ಏಕಸ್ವಾಮ್ಯ, ಕಲಬೆರಕೆ, ಕಾಳಸಂತೆ ಮುಂತಾದ ಸಮಾಜವಿರೋಧಿ ಪ್ರವೃತ್ತಿಗಳು ಲಾಭದೃಷ್ಟಿಯಿಂದಾಗಿ ಬೆಳೆಯುವುವೆಂದೂ ಹೇಳಲಾಗಿದೆ.

ಬಂಡವಾಳ ವ್ಯವಸ್ಥೆಯ ಪ್ರಧಾನ ಲಕ್ಷಣವೆಂದರೆ ಖಾಸಗಿ ಉದ್ಯಮ. ಬಂಡವಾಳ ವ್ಯವಸ್ಥೆ, ಖಾಸಗಿ ಉದ್ಯಮ ಇವೆರಡೂ ಸಮಾನಾರ್ಥಕಗಳೆಂಬಂತೆಯೂ ಸಾಮಾನ್ಯವಾಗಿ ಭಾವಿಸುವುದುಂಟು. ಬಂಡವಾಳ ವ್ಯವಸ್ಥೆಯ ಒಳಿತು ಕೆಡಕುಗಳೆಲ್ಲ ಖಾಸಗಿ ಉದ್ಯಮದ್ದೆಂದೂ, ಖಾಸಗಿ ಉದ್ಯಮದ ಎಲ್ಲ ಒಳಿತು ಕೆಡಕುಗಳೂ ಬಂಡವಾಳ ವ್ಯವಸ್ಥೆಯದ್ದೆಂದೂ ಹೇಳುವ ವಾಡಿಕೆಯಿದೆ.

ಉದ್ಯಮದ ಸ್ವರೂಪ ಹಾಗೂ ಆವಶ್ಯಕತೆಗಳಿಗೆ ಅನುಗುಣವಾಗಿ ಖಾಸಗಿ ಉದ್ಯಮ ಘಟನೆ ನಾನಾರೂಪಗಳನ್ನು ತಳೆಯಬಹುದು:

ಇವು ಕೆಲವು ಪ್ರರೂಪಗಳು.

ಖಾಸಗಿ ಉದ್ಯಮ ವಲಯ

[ಬದಲಾಯಿಸಿ]

ಸಂಪೂರ್ಣವಾಗಿ ಸ್ವತಂತ್ರವಾದ ಖಾಸಗಿ ಉದ್ಯಮ ವ್ಯವಸ್ಥೆ ಇಂದು ವಿಶ್ವದ ಯಾವ ನಾಗರಿಕ ರಾಷ್ಟ್ರದಲ್ಲೂ ಇಲ್ಲ. ಒಂದು ದೇಶದ ಆರ್ಥಿಕತೆಯ ಕಾರ್ಯಭಾಗಗಳನ್ನು ಅಧ್ಯಯನ ಮಾಡುವ ಸಲುವಾಗಿ ಅದನ್ನು ವಿವಿಧ ವಲಯಗಳಾಗಿ ವಿಂಗಡಿಸುವುದು ಅನುಕೂಲಕರ. ಒಂದು ಆರ್ಥಿಕತೆಯ ಮುಖ್ಯ ವಲಯಗಳು ಎರಡು:

  1. ಸರ್ಕಾರಿ ವಲಯ: ಇವು ಕೇಂದ್ರ ಪ್ರಾಂತೀಯ ಸ್ಥಳೀಯ ಸರ್ಕಾರಗಳು ನಡೆಸುವ ರಾಷ್ಟ್ರೀಕೃತ ಉದ್ಯಮಗಳು. ಇತರ ಸಾರ್ವಜನಿಕ ಕಾರ್ಪೊರೇಷನ್‌ಗಳು ಇವೆಲ್ಲ ಇದರ ಕಕ್ಷೆಯಲ್ಲಿ ಬರುತ್ತವೆ.
  2. ಖಾಸಗಿ ವಲಯ: ಯಾವುದೇ ಸರ್ಕಾರದ ಅಂಗವಾಗಿರದ, ಆರ್ಥಿಕತೆಯ ಇತರ ಎಲ್ಲ ಧಾತುಗಳೂ (ಎಲಿಮೆಂಟ್ಸ್) ಇದಕ್ಕೆ ಒಳಪಡುತ್ತವೆ.

ಸಮಾಜವಾದಿ ವ್ಯವಸ್ಥೆಯಲ್ಲಿ ಎಲ್ಲ ಉತ್ಪಾದನ ಸಾಧನಗಳೂ ರಾಷ್ಟ್ರದ ಒಡೆತನಕ್ಕೆ ಒಳಪಟ್ಟಿರುತ್ತವೆ.[] ಉಳಿದ ವ್ಯವಸ್ಥೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಉದ್ಯಮಗಳೆರಡೂ ಇರುವುದುಂಟು. ಇದು ಮಿಶ್ರ ಆರ್ಥಿಕತೆ.[][] ಖಾಸಗಿ ಮತ್ತು ಸರ್ಕಾರಿ ವಲಯಗಳ ಸಾಪೇಕ್ಷ ಗಾತ್ರ, ಪ್ರಭಾವ, ದಕ್ಷತೆ, ಸಾಮರ್ಥ್ಯಗಳು ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತವೆ.

ಖಾಸಗಿ ವಲಯದ ಅನುಕೂಲಗಳು ಮತ್ತು ಅನಾನುಕೂಲಗಳು: ಖಾಸಗಿ ವಲಯದಲ್ಲಿ ಪ್ರಕೃತಿ ಸಂಪತ್ತು, ಉತ್ಪಾದನ ಸಾಮಗ್ರಿ, ಬಂಡವಾಳಗಳು ಕೆಲವೇ ಪ್ರಭಾವಶಾಲಿ ಉದ್ಯಮಿಗಳ ನಿಯಂತ್ರಣದಲ್ಲಿರುವುದರಿಂದ, ವಿವಿಧ ಉದ್ಯಮಗಳನ್ನು (enterprises) ಪ್ರಾರಂಭಿಸಿ, ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಿ, ದಕ್ಷತೆ ಹೆಚ್ಚಿಸಿ, ವೆಚ್ಚಗಳನ್ನು ಮಿತಗೊಳಿಸಲು ಪ್ರಯತ್ನಿಸಿ, ಅಧಿಕ ಲಾಭ ಗಳಿಸುವ ಪ್ರಯತ್ನಗಳು ನಡೆಯುತ್ತವೆ; ದೇಶದ ಕೈಗಾರಿಕಾಕರಣ ಸುಲಭಸಾಧ್ಯವಾಗುತ್ತದೆ; ತೀವ್ರ ಆರ್ಥಿಕ ಪ್ರಗತಿಯಾಗುತ್ತದೆ-ಎಂಬ ವಾದಗಳನ್ನು ಮುಂದಿರಿಸಿ ಹಲವರು ಖಾಸಗಿ ವಲಯದ ಉದ್ಯಮಗಳಿಗೆ ಪ್ರೋತ್ಸಾಹ ಬಯಸಿದರೂ, ಸಾಮಾನ್ಯವಾಗಿ ಖಾಸಗಿ ವಲಯದಲ್ಲಿ ಅಲ್ಪಕಾಲದಲ್ಲಿ ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ತರುವಂಥ ಅನುಭೋಗ ಸರಕುಗಳ ಉತ್ಪಾದನೆಗೆ ಹೆಚ್ಚು ಪ್ರಯತ್ನಗಳು ನಡೆಯುವುದೇ ಸಾಮಾನ್ಯ. ಮೂಲಭೂತವಾದ, ಶೀಘ್ರ ಲಾಭ ತರದ, ಹೆಚ್ಚು ಲಾಭದಾಯಕವಲ್ಲದ, ಜನೋಪಯೋಗಿಯಾದ ಕೈಗಾರಿಕೆಗಳ ಬೆಳೆವಣಿಗೆಯ ಕಡೆಗೆ ಲಕ್ಷ್ಯ ಹರಿಸದಿರುವ ಸಂಭವವುಂಟು. ನಿಸರ್ಗ ಸಾಧನಗಳು ಪೋಲಾಗುವ ಅಪಾಯವೂ ಇರುತ್ತದೆ. ದೇಶದ ದೀರ್ಘಕಾಲಿಕ ಅಭಿವೃದ್ಧಿಗೆ ಅಲ್ಲಿ ಗಮನ ಕಡಿಮೆ. ಕ್ರಮಬದ್ಧ ಆರ್ಥಿಕ ಯೋಜನೆಗಳೂ ಕಷ್ಟಸಾಧ್ಯ. ಪ್ರಬಲ ಖಾಸಗಿ ವಲಯವಿದ್ದಲ್ಲಿ ಆರ್ಥಿಕ ಶಕ್ತಿಗಳು ಕೇಂದ್ರೀಭವಿಸಿ ಜನಸಾಮಾನ್ಯರೂ ಕಾರ್ಮಿಕರೂ ಶೋಷಣೆಗೆ ಒಳಗಾಗಬಹುದು. ಬಡವ-ಶ್ರೀಮಂತ ಎಂಬ ವ್ಯತ್ಯಾಸ ಹೆಚ್ಚಿ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಗಳ ಮೇಲೆ ದುಷ್ಪ್ರಭಾವ ಉಂಟಾಗಬಹುದು.

ಯಾವುದೇ ದೇಶದ ಆರ್ಥಿಕ ನಿರ್ಮಾಣ ಪ್ರಾರಂಭದ ಹಂತದಲ್ಲಿದ್ದಾಗ ದೇಶೀಯ ಬಂಡವಾಳ, ತಂತ್ರಜ್ಞಾನ ಮತ್ತು ಉದ್ಯಮಿಗಳ ಅಭಾವವಿರುತ್ತದೆ. ಆಗ ಒಂದು ದೇಶದ ಖಾಸಗಿ ಬಂಡವಾಳ ಇನ್ನೊಂದು ದೇಶದ ಖಾಸಗೀ ವಲಯದಲ್ಲಿ ಆ ಸರ್ಕಾರದ ನಿಯಂತ್ರಣಕ್ಕೊಳಪಟ್ಟು ಉದ್ಯಮಗಳನ್ನು ಪ್ರಾರಂಭಿಸಬಹುದು. ಆದರೆ ರಾಷ್ಟ್ರವು ಅಧಿವೃದ್ಧಿ ಹೊಂದಿದಂತೆ ವಿದೇಶಿ ಬಂಡವಾಳದ ಅವಲಂಬನವನ್ನು ಕ್ರಮಕ್ರಮವಾಗಿ ಕಡಿಮೆ ಮಾಡುವುದು ಆವಶ್ಯಕವೆನಿಸಿದೆ.

ಭಾರತದಲ್ಲಿ

[ಬದಲಾಯಿಸಿ]

ಭಾರತದಲ್ಲಿ ಖಾಸಗಿ, ಸರ್ಕಾರಿ-ಎರಡು ವಲಯಗಳೂ ಇವೆ. ದೇಶದ ಪ್ರಮುಖ ಉದ್ಯೋಗವಾದ ಕೃಷಿ ವಿಶೇಷವಾಗಿ ಖಾಸಗಿ ವಲಯದಲ್ಲಿದೆ. ದೇಶದ ಕೈಗಾರಿಕಾಕರಣ ಇನ್ನೂ ಶೈಶವಾವಸ್ಥೆಯಲ್ಲಿದ್ದರೂ ಕೈಗಾರಿಕೆ, ಗಣಿಗಾರಿಕೆ, ಸಾರಿಗೆ ಹಾಗೂ ಇತರ ಸೇವೆಗಳಲ್ಲಿ ಖಾಸಗಿ ವಲಯ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿಗೆ ಪೂರಕವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ವಲಯಗಳೆರಡರಲ್ಲೂ ಬಂಡವಾಳ ಹೂಡಿಕೆ ಹೆಚ್ಚುತ್ತಿದ್ದರೂ ಸರ್ಕಾರಿ ವಲಯವು ದಿನೇದಿನೇ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ.

ಭಾರತ ಸರ್ಕಾರ 1948ರಲ್ಲಿ ಘೋಷಿಸಿದ ಕೈಗಾರಿಕಾ ನೀತಿಯಲ್ಲಿ:

  1. ಕೇಂದ್ರ ಸರ್ಕಾರದ ಏಕಸ್ವಾಮ್ಯವಿರುವ ಉದ್ಯಮಗಳು,
  2. ಕ್ರಮೇಣ ಸರ್ಕಾರದ ಒಡೆತನಕ್ಕೆ ಬರುವ ಉದ್ಯಮಗಳು,
  3. ಸರ್ಕಾರ ನಿಯಂತ್ರಿತ ಉದ್ಯಮಗಳು ಮತ್ತು
  4. ಇತರ

ಎಂದು ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿತ್ತು. ರಾಸಾಯನಿಕ ಗೊಬ್ಬರ, ಹತ್ತಿ ಜವಳಿ, ಉಣ್ಣೆ, ಸಿಮೆಂಟ್, ಸಕ್ಕರೆ, ಕಾಗದ, ರಬ್ಬರ್, ಉಪ್ಪು, ರಾಸಾಯನಿಕಗಳು, ಭಾರಯಂತ್ರಗಳು, ಟ್ರಾಕ್ಟರ್ ಇತ್ಯಾದಿ ಉದ್ಯಮಗಳನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಟ್ಟು ಸರ್ಕಾರ ಅವುಗಳ ಮೇಲೆ ತನ್ನ ನಿಯಂತ್ರಣವಿರಿಸಿತ್ತು. ಆ ವೇಳೆಗಾಗಲೇ ಖಾಸಗಿ ವಲಯದಲ್ಲಿದ್ದ ಕಬ್ಬಿಣ ಮತ್ತು ಉಕ್ಕು, ಹಡಗು ನಿರ್ಮಾಣ, ಟೆಲಿಫೋನ್, ಟೆಲಿಗ್ರಾಫ್ ಉದ್ಯಮಗಳನ್ನು ಹತ್ತು ವರ್ಷಗಳವರೆಗೆ ರಾಷ್ಟ್ರೀಕರಿಸುವುದಿಲ್ಲವೆಂದೂ ಅನಂತರ ಪರಿಶೀಲಿಸಲಾಗುವುದೆಂದೂ ಸರ್ಕಾರ ಘೋಷಿಸಿತು. ಸಮಾಜವಾದಿ ಸಮಾಜದ ರಚನೆಗೆ ಪೂರಕವಾಗುವಂತೆ ಎರಡನೆಯ ಯೋಜನೆಯ ಪ್ರಾರಂಭದಲ್ಲಿ 1956ರಲ್ಲಿ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳನ್ನು ಮೂರು ವರ್ಗಗಳಾಗಿ ಪುನರ್ವಿಂಗಡಿಸಲಾಯಿತು. ಅದರಲ್ಲೂ ಖಾಸಗಿ ವಲಯಕ್ಕೆ ಸೂಕ್ತ ಅವಕಾಶ ನೀಡಲಾಗಿದೆ.

ಭಾರತದಲ್ಲಿ ಖಾಸಗಿ ವಲಯದಲ್ಲಿರುವ ಉದ್ಯಮಗಳ ಪ್ರಗತಿಯನ್ನು ಮುಂದೆ ಕೊಡಲಾಗಿದೆ:

ವರ್ಷ ಖಾಸಗಿ ವಲಯದಲ್ಲಿರುವ ಸಾರ್ವಜನಿಕ ಪರಿಮಿತ ಕಂಪನಿಗಳು ಖಾಸಗಿ ಪರಿಮಿತ ಕಂಪನಿಗಳು ಒಟ್ಟು ಅವುಗಳ ಪಾವತಿಯಾದ ಬಂಡವಾಳ (ಕೋಟಿ ರೂ.)
1966 6,329 20,137 26,466 1,807.0
1967 6,231 20,452 26,686 1,840.5
1968 6,152 20,939 27,091 1,890.9
1969 6,109 21,593 27,702 1,921.8
1970 6,097 23,566 29,663 2,002.5

1970ರ ಕೊನೆಯಲ್ಲಿ ದೇಶದಲ್ಲಿದ್ದ ಸರ್ಕಾರಿ ಕಂಪನಿಗಳ ಸಂಖ್ಯೆ 302. ಅವುಗಳ ಒಟ್ಟು ಪಾವತಿಯಾದ ಬಂಡವಾಳ ರೂ. 1,820 ಕೋಟಿ. ಎಂದರೆ ಒಂದು ಸರ್ಕಾರಿ ಕಂಪನಿಯ ಸರಾಸರಿ ಪಾವತಿಯಾದ ಬಂಡವಾಳ ರೂ. 6 ಕೋಟಿ. ಆದರೆ ಖಾಸಗಿ ವಲಯದ ಒಂದು ಸಂಸ್ಥೆಯ ಸರಾಸರಿ ಬಂಡವಾಳ ರೂ. 7 ಲಕ್ಷ.

1970-71ರ ಅಂಕಿ-ಅಂಶಗಳ ಪ್ರಕಾರ ಭಾರತದ ಮೊದಲ ಹತ್ತು ದೊಡ್ಡ ಕೈಗಾರಿಕಾ ದೈತ್ಯ ಸಂಸ್ಥೆಗಳಲ್ಲಿ ಮೊದಲ ಒಂಬತ್ತು ಸರ್ಕಾರಿ ವಲಯದಲ್ಲಿವೆ. ಹತ್ತನೆಯದು ಖಾಸಗಿ ವಲಯದ ಅತಿದೊಡ್ಡ ಸಂಸ್ಥೆ. ದೇಶದ ಪ್ರಥಮ 25, 50, 100 ದೈತ್ಯ ಕೈಗಾರಿಕಾ ಸಂಸ್ಥೆಗಳಲ್ಲಿ ಅನುಕ್ರಮವಾಗಿ 11, 29, 71 ಸಂಸ್ಥೆಗಳು ಖಾಸಗಿ ವಲಯದಲ್ಲಿವೆ.

ದೇಶದಲ್ಲಿರುವ ಖಾಸಗಿ ವಲಯದ ಎಲ್ಲ ಉದ್ಯಮಗಳ ಆಸ್ತಿಗಳು, ಬಂಡವಾಳ, ಲಾಭ ನಷ್ಟ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಗಳು ಲಭ್ಯವಿಲ್ಲ. 1970-71ರಲ್ಲಿ ಪ್ರಥಮ 100 ದೈತ್ಯ ಸಾರ್ವಜನಿಕ ಪರಿಮಿತ ಕಂಪನಿಗಳ ಒಟ್ಟು ಆಸ್ತಿಗಳ ಮೌಲ್ಯ ರೂ. 3,234 ಕೋಟಿ. ಪಾವತಿಯಾದ ಬಂಡವಾಳ ಹಾಗೂ ಸಂಚಿತಿಗಳ (ರಿಸರ್ವ್) ಮೊತ್ತ ರೂ. 1,347 ಕೋಟಿ. ವಾರ್ಷಿಕ ಉತ್ಪಾದನೆ ರೂ. 3,021.33 ಕೋಟಿ. ತೆರಿಗೆ ತೆತ್ತ ಅನಂತರ ಉಳಿದ ಲಾಭ ರೂ. 171.63 ಕೋಟಿ. ಲಾಭಾಂಶ ವಿತರಣೆ ಮಾಡಿ ಪುನರ್ವಿನಿಯೋಜನೆಗೆ ಉಳಿದ ಲಾಭ 86.68 ಕೋಟಿ. ಪ್ರಥಮ 100 ದೈತ್ಯ ಕಂಪನಿಗಳಲ್ಲಿ ನಷ್ಟ ಅನುಭವಿಸುತ್ತಿರುವ ಕಂಪನಿಗಳ ಸಂಖ್ಯೆ 19. ಹತ್ತಿ ಜವಳಿ, ಕಾಗದ, ಸಕ್ಕರೆ, ಸಾರಿಗೆ, ಸಿಮೆಂಟ್, ಸೆಣಬು, ಎಂಜಿನಿಯರಿಂಗ್ ಹಾಗೂ ರಾಸಾಯನಿಕಗಳು, ವಿದ್ಯುತ್ ಉಪಕರಣ ಇತ್ಯಾದಿ ಉದ್ಯಮಗಳು ಪ್ರಮುಖವಾಗಿ ಖಾಸಗಿ ವಲಯದಲ್ಲಿವೆ.

ಉಲ್ಲೇಖಗಳು

[ಬದಲಾಯಿಸಿ]
  1. * Busky (2000), p. 2: "Socialism may be defined as movements for social ownership and control of the economy. It is this idea that is the common element found in the many forms of socialism."
    • Arnold (1994), pp. 7–8: "What else does a socialist economic system involve? Those who favor socialism generally speak of social ownership, social control, or socialization of the means of production as the distinctive positive feature of a socialist economic system."
    • Horvat (2000), pp. 1515–1516: "Just as private ownership defines capitalism, social ownership defines socialism. The essential characteristic of socialism in theory is that it destroys social hierarchies, and therefore leads to a politically and economically egalitarian society. Two closely related consequences follow. First, every individual is entitled to an equal ownership share that earns an aliquot part of the total social dividend... Second, in order to eliminate social hierarchy in the workplace, enterprises are run by those employed, and not by the representatives of private or state capital. Thus, the well-known historical tendency of the divorce between ownership and management is brought to an end. The society—i.e. every individual equally—owns capital and those who work are entitled to manage their own economic affairs."
    • Rosser & Barkley (2003), p. 53: "Socialism is an economic system characterised by state or collective ownership of the means of production, land, and capital.";
    • Badie, Berg-Schlosser & Morlino (2011), p. 2456: "Socialist systems are those regimes based on the economic and political theory of socialism, which advocates public ownership and cooperative management of the means of production and allocation of resources."
    • Zimbalist, Sherman & Brown (1988), p. 7: "Pure socialism is defined as a system wherein all of the means of production are owned and run by the government and/or cooperative, nonprofit groups."
    • Brus (2015), p. 87: "This alteration in the relationship between economy and politics is evident in the very definition of a socialist economic system. The basic characteristic of such a system is generally reckoned to be the predominance of the social ownership of the means of production."
    • Hastings, Adrian; Mason, Alistair; Pyper, Hugh (2000). The Oxford Companion to Christian Thought. Oxford University Press. p. 677. ISBN 978-0198600244. Socialists have always recognized that there are many possible forms of social ownership of which co-operative ownership is one...Nevertheless, socialism has throughout its history been inseparable from some form of common ownership. By its very nature it involves the abolition of private ownership of capital; bringing the means of production, distribution, and exchange into public ownership and control is central to its philosophy. It is difficult to see how it can survive, in theory or practice, without this central idea.
  2. Stilwell, Frank J. B. (2006). Political Economy: The Contest of Economic Ideas (2 ed.). Oxford University Press. ISBN 9780195551273. Retrieved 12 November 2018.ಟೆಂಪ್ಲೇಟು:Qn
  3. Hendricks, Jean and Gaoreth D. Myles. Intermediate Public Economics, The MIT Press, 2006, p. 4 "the mixed economy where individual decisions are respected but the government attempts to affect these through the policies it implements".

ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: