ವಿಷಯಕ್ಕೆ ಹೋಗು

ಖಾಂಡಲೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಋಷಿಕೊಂಡ, ವಿಶಾಖಪಟ್ಟಣ, ಭಾರತದಲ್ಲಿ ಖಾಂಡಲೈಟ್

ಖಾಂಡಲೈಟ್ ದಕ್ಷಿಣ ಭಾರತದ ಪೂರ್ವ ಘಟ್ಟಗಳ ಶ್ರೇಣಿಯಲ್ಲಿ ಕಂಡುಬರುವ ಮುಖ್ಯ ಶಿಲಾ ವರ್ಗ. ಮೊಟ್ಟಮೊದಲಿಗೆ ಇದನ್ನು ಟಿ.ಎಲ್.ವಾಕರ್ ಎಂಬ ಭೂವಿಜ್ಞಾನಿ ಒರಿಸ್ಸ ರಾಜ್ಯದ ಗುಡ್ಡಗಾಡುಗಳಲ್ಲಿ ಪತ್ತೆ ಮಾಡಿದ. ಆ ಪ್ರದೇಶದ ಖಾಂಡ್ ಗುಂಪಿನ ಆದಿವಾಸಿಗಳ ಹೆಸರನ್ನು ಅನುಸರಿಸಿ ಈ ಶಿಲೆಗಳಿಗೆ ಖಾಂಡಲೈಟ್ ಎಂದು ಹೆಸರಿಟ್ಟ.[][] ಪೂರ್ವ ಕರಾವಳಿಯ ಉದ್ದಕ್ಕೂ ಈ ಗುಂಪಿನ ಶಿಲೆಗಳು ಸಣ್ಣ ಸಣ್ಣ ಗುಡ್ಡ ಬೆಟ್ಟಗಳೋಪಾದಿಯಲ್ಲಿ ಕಂಡುಬರುತ್ತವೆ. ಕೇರಳ ಮತ್ತು ಶ್ರೀಲಂಕಾ ದ್ವೀಪದವರೆಗೂ ಈ ಶಿಲಾಶ್ರೇಣಿ ಹರಡಿದೆ.[] ತಮಿಳುನಾಡಿನ ಕೊಯಮತ್ತೂರು, ಮಧ್ಯ ಪ್ರದೇಶ ಮತ್ತು ಬರ್ಮಗಳಲ್ಲೂ ಖಾಂಡಲೈಟುಗಳನ್ನು ಗುರುತಿಸಿದ್ದಾರೆ. ಕರ್ನಾಟಕದಲ್ಲಿ ಸಹ ಇದನ್ನೇ ಬಹುಮಟ್ಟಿಗೆ ಹೋಲುವ ಹಲವು ಶಿಲೆಗಳಿವೆ.

ಲಕ್ಷಣಗಳು

[ಬದಲಾಯಿಸಿ]

ಖಾಂಡಲೈಟ್ ಮುಖ್ಯವಾಗಿ ಗಾರ್ನೆಟ್ ಮತ್ತು ಸಿಲಿಮನೈಟ್ ಖನಿಜಗಳಿಂದ ಉಂಟಾದ ರೂಪಾಂತರ ವರ್ಗದ ಪದರುಶಿಲೆ. ಗ್ರಾಫೈಟ್ ವಿವಿಧ ಪರಿಮಾಣಗಳಲ್ಲೂ, ಕ್ವಾರ್ಟ್ಸ್ ಮತ್ತು ಫೆಲ್ಸ್‌ಪಾರುಗಳು ಅಲ್ಪಸ್ವಲ್ಪ ಪರಿಮಾಣದಲ್ಲೂ ಈ ಶಿಲೆಯಲ್ಲಿವೆ. ಇದರ ಬಣ್ಣ ಬೂದು ಅಥವಾ ಕೆಂಪು ಛಾಯೆ. ಸಾಮಾನ್ಯವಾಗಿ ಪದರು ರಚನೆ. ಅಥವಾ ಗೀರು ರಚನೆ. ಉಷ್ಣಹವೆಯ ಮಳೆ ಬೀಳುವ ಪ್ರದೇಶಗಳಲ್ಲಿ ಶಿಲೆ ಬಹು ಸುಲಭವಾಗಿ ಶಿಥಿಲಗೊಂಡು, ಮುಟ್ಟಿದರೆ ಪುಡಿ ಪುಡಿಯಾಗಿ ಉದುರಿಹೋಗುತ್ತವೆ. ಲ್ಯಾಟೆರೈಟ್ ಮತ್ತು ಬಾಕ್ಸೈಟ್ ಎಂಬ ಶೇಷ ನಿಕ್ಷೇಪಗಳೂ ಉಂಟಾಗಬಹುದು. ಹಾಗಿಲ್ಲದಲ್ಲಿ ಶಿಲೆ ತಕ್ಕಷ್ಟು ಗಡುಸಾಗಿದ್ದು ಕೆಂಪುಬಣ್ಣದ ಗಾರ್ನೆಟಿನ ವಿವಿಧ ಗಾತ್ರದ ನೂರಾರು ಹರಳುಗಳಿಂದಲೂ ಕಣಗಳಿಂದಲೂ ಕೂಡಿರುತ್ತದೆ.

ಉಪಯೋಗಗಳು

[ಬದಲಾಯಿಸಿ]

ಆಂಧ್ರ ಪ್ರದೇಶ ಮತ್ತು ಒರಿಸ್ಸ ರಾಜ್ಯದ ಅನೇಕ ಪ್ರಸಿದ್ಧ ದೇವಾಲಯಗಳನ್ನು ಖಾಂಡಲೈಟಿನಿಂದ ನಿರ್ಮಿಸಲಾಗಿದೆ. ಹಲವು ಗುಹಾಂತರ್ದೇವಾಲಯಗಳನ್ನು ಶಿಲೆಯಿಂದ ಕಡೆಯಲಾಗಿದೆ. ಒರಿಸ್ಸದ ಇತಿಹಾಸ ಪ್ರಸಿದ್ಧ ಕೋಣಾರ್ಕ ಸೂರ್ಯ ದೇವಾಲಯದ ಹಲವಾರು ಸುಂದರ ವಿಗ್ರಹಗಳೂ ಈ ಶಿಲೆಯವು. ಈ ರಾಜ್ಯಗಳಲ್ಲಿ ಇಂದಿಗೂ ಖಾಂಡಲೈಟ್ ಕಟ್ಟಡದ ಕಲ್ಲಾಗಿ ಬಳಕೆಯಲ್ಲಿ ಉಂಟು. ಕೇರಳ ಮತ್ತು ಶ್ರೀಲಂಕಾ ದ್ವೀಪದ ಖಾಂಡಲೈಟುಗಳು ಗ್ರಾಫೈಟ್ (ಬರೆಯುವ ಸೀಸ) ಅದುರಿಗೆ ಮುಖ್ಯ ತವರು.

ಲೂಯಿಸ್ ಫರ್ಮರ್ ಎಂಬ ವಿಜ್ಞಾನಿಯ ಅಭಿಪ್ರಾಯದಂತೆ ಈ ಶಿಲೆಗಳಿಗೆ ಸಂಬಂಧಿಸಿದ ರೂಪಾಂತರ ಕ್ರಿಯೆ ಹೆಚ್ಚಿನ ಆಳದಲ್ಲಿ ನಡೆದರೂ ಇವುಗಳಿದ್ದ ಭೂ ಭಾಗ, ಎಂದರೆ ಆಂಧ್ರ ಪ್ರದೇಶದ ಪೂರ್ವ ಕರಾವಳಿ, ಕ್ರಮೇಣ ಮೇಲಕ್ಕೆ ಒಯ್ಯಲ್ಟಟ್ಟು ಈಗಿನ ಪೂರ್ವ ಘಟ್ಟಗಳಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. P. C. Varghese (November 2012). Engineering Geology for Civil Engineers. PHI Learning Pvt. Ltd. p. 126. ISBN 978-81-203-4495-2. Retrieved 2 August 2013.
  2. Kesavulu (1 February 2009). Textbook of Engineering Geology. Macmillan Publishers India Limited. p. 188. ISBN 978-0-230-63870-9. Retrieved 2 August 2013.
  3. Dash, B. (1990). "Khondalite". In Bowes, Donald (ed.). Petrology. Encyclopedia of Igneous and Metamorphic Petrology. Encyclopedia of Earth Science. Berlin: Springer. pp. 263–264. doi:10.1007/0-387-30845-8_111. ISBN 978-0387335643.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: