ಕಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂಗಳ ಪ್ರಕಾರ, ಕಲಿಯು ಕಲಿಯುಗದ ಅಗ್ರಗಣ್ಯ ಅಧಿಪತಿ ಮತ್ತು ಹಿಂದೂ ದೇವತೆ ವಿಷ್ಣುವಿನ ೧೦ನೇ ಮತ್ತು ಅಂತಿಮ ಅವತಾರನಾದ ಕಲ್ಕಿಯ ಬದ್ಧ ವೈರಿ. ಕಲ್ಕಿ ಪುರಾಣದಲ್ಲಿ, ಅವನನ್ನು ರಾಕ್ಷಸನಾಗಿ ಮತ್ತು ಎಲ್ಲ ಅಧರ್ಮದ ಮೂಲವಾಗಿ ಚಿತ್ರಿಸಲಾಗಿದೆ. ಮಹಾಭಾರತದಲ್ಲಿ, ಅವನು ನಳನ ಮೈಮೇಲೆ ಬಂದ ಗಂಧರ್ವನಾಗಿದ್ದನ್ನು, ಮತ್ತು ನಳನು ತನ್ನ ರಾಜ್ಯವನ್ನು ಪಗಡೆ ಆಟದಲ್ಲಿ ಅವನ ಸೋದರನಾದ ಪುಷ್ಕರನಿಗೆ ಕಳೆದುಕೊಳ್ಳುವಂತೆ ಬಲವಂತಪಡಿಸಿದನು.

ಕಲ್ಕಿ ಪುರಾಣವು ಇವನನ್ನು ದೊಡ್ಡ ನಾಲಿಗೆ, ಮತ್ತು ವಿಪರೀತ ದುರ್ನಾತ ಹೊಂದಿರುವ ಹೊಗೆಮಸಿ ಬಣ್ಣದ ಬೃಹತ್ ಜೀವಿ ಎಂದು ವರ್ಣಿಸುತ್ತದೆ. ತನ್ನ ಜನನದಿಂದಲೇ, ಇವನು ಒಂದು ಉಪಾಸ್ಥಿ (ಆರಾಧನೆ) ಮೂಳೆಯನ್ನು ಹೊತ್ತೊಯ್ಯುತ್ತಿದ್ದನು. ಈ ರಾಕ್ಷಸನು ಜೂಜು, ಮದ್ಯ, ವ್ಯಭಿಚಾರ, ಹತ್ಯೆ ಮತ್ತು ಚಿನ್ನವನ್ನು ತನ್ನ ಶಾಶ್ವತ ವಾಸಸ್ಥಾನಗಳಾಗಿ ಆಯ್ದುಕೊಂಡನು ಎಂದು ಕಲ್ಕಿ ಪುರಾಣವು ಹೇಳುತ್ತದೆ.[೧] ಕಲಿಯು ಪೌರಾಣಿಕ ಜೀವಿಗಳ ವರ್ಗದವನು (ಗಂಧರ್ವರಿಗೆ ಸಂಬಂಧಿತನಾದ, ಮತ್ತು ಜೂಜನ್ನು ಇಷ್ಟಪಡುವವನು ಎಂದು ಕೆಲವರು ಭಾವಿಸುತ್ತಾರೆ) ಎಂದು ಸಂಸ್ಕೃತ-ಇಂಗ್ಲಿಷ್ ನಿಘಂಟು ಹೇಳುತ್ತದೆ. ಭಾಗವತ ಪುರಾಣವು ಇವನನ್ನು ರಾಜನ ಉಡುಗೆಯನ್ನು ಧರಿಸಿರುವ ಶೂದ್ರ ಎಂದು ವರ್ಣಿಸುತ್ತದೆ. ಭಾರತದಲ್ಲಿ ಪವಿತ್ರ ಹಸುವಿನ ವಧೆಯನ್ನು ವಿರೋಧಿಸುವ ಒಂದು ಮುಂಚಿನ ೨೦ನೇ ಶತಮಾನದ ಗೋಮಾಂಸ ಭಕ್ಷಣ ವಿರೋಧಿ ಕರಪತ್ರವು ಕಲಿಯನ್ನು ನಾಯಿಯಂಥ ಮುಖ, ಹೊರಚಾಚಿಕೊಂಡಿರುವ ಹಲ್ಲುಗಳು, ಚೂಪು ತುದಿಯ ಕಿವಿಗಳು, ಉದ್ದನೆಯ ಹಸಿರುಬಣ್ಣದ ದಟ್ಟವಾದ ಕೂದಲು ಹೊಂದಿರುವ ಮತ್ತು ಕೆಂಪು ತುಂಡುದಟ್ಟಿ ಹಾಗೂ ಚಿನ್ನದ ಆಭರಣಗಳನ್ನು ಧರಿಸಿರುವ ಕಂದು ಚರ್ಮದ ರಾಕ್ಷಸನಾಗಿ ಚಿತ್ರಿಸುತ್ತದೆ.

ಕಾಲದ ನಾಲ್ಕು ಯುಗಗಳಾದ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳನ್ನು ವೈದಿಕ ಕಾಲದಲ್ಲಿ ಜನಪ್ರಿಯವಾಗಿದ್ದ ಪಗಡೆ ಆಟದ ಪಗಡೆ ಎಸೆತಗಳಿಂದ ಹೆಸರಿಸಲಾಗಿದೆ. ಅವುಗಳ ಕ್ರಮವು ಪ್ರತಿ ಎಸೆತದ ಅನುಕೂಲಕರತೆಯೊಂದಿಗೆ ತಾಳೆಹೊಂದುತ್ತದೆ: "ಸತ್ಯ"ವು ಅತ್ಯುತ್ತಮ ಎಸೆತವಾದರೆ, "ಕಲಿ"ಯನ್ನು ಅತ್ಯಂತ ಕೆಟ್ಟ ಎಸೆತವೆಂದು ಪರಿಗಣಿಸಲಾಗುತ್ತದೆ. ಮಹಾಭಾರತದ ಅವಧಿಯಲ್ಲಿ, ನಳ ರಾಜನು ಕಲಿಯ ಬೇರ್ಪಡಿಸಲ್ಪಟ್ಟ ಆತ್ಮವನ್ನು ವಿಭೀದಕ ಮರಕ್ಕೆ (ಶಾಂತಿಮರ) ಉಚ್ಚಾಟಿಸುತ್ತಾನೆ. ಈ ಮರದ ಹಣ್ಣುಗಳು ವೈದಿಕ ಪಗಡೆ ಆಟಕ್ಕೆ ದಾಳಗಳಾಗಿ ಬಳಸಲಾದ ಬೀಜಕೋಶಗಳನ್ನು ಹೊಂದಿರುತ್ತದೆ. ಹಾಗಾಗಿ, ಕಲಿಯ ಹೆಸರಷ್ಟೇ ಅಲ್ಲದೆ, ಜೂಜಿನ ಪ್ರತಿ ಅವನ ಒಲವು ಮತ್ತು ದುಷ್ಟನೆಂಬುವ ಪ್ರಸಿದ್ಧಿಯು ಈ ಪಗಡೆ ಆಟದಿಂದ ಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Chaturvedi, B.K. Kalki Purana. New Delhi: Diamond Books, 2004 (ISBN 81-288-0588-6)
"https://kn.wikipedia.org/w/index.php?title=ಕಲಿ&oldid=881926" ಇಂದ ಪಡೆಯಲ್ಪಟ್ಟಿದೆ