ವಿಷಯಕ್ಕೆ ಹೋಗು

ಕರ್ನಾಟಕ ಸಂಘಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸಂಘಗಳು : ಕನ್ನಡ ದೇಶ ಹಲವಾರು ರಾಜಕೀಯ ಕ್ಷೇತ್ರಗಳಿಗೆ ಹಂಚಿಹೋಗಿದ್ದ ಕಾಲದಿಂದಲೂ ಜನತೆಯಲ್ಲಿ ಭಾಷಾಭಿಮಾನ ದೇಶಾಭಿಮಾನಗಳನ್ನು ಹುಟ್ಟಿಸಿ ನಾಡು ನುಡಿಯ, ಸೇವೆಗಾಗಿ ಪಣತೊಟ್ಟು ದುಡಿಯುತ್ತಿರುವ ಸಂಸ್ಥೆಗಳು. ಕರ್ಣಾಟಕ ಸಂಘ ಎಂಬ ಮಾತು ಕನ್ನಡನಾಡಿನಲ್ಲಿ ಮಾತ್ರವಲ್ಲದೆ ಹೊರಗೂ-ಭಾರತದಾದ್ಯಂತ ಕನ್ನಡ ಜನ ಎಲ್ಲೆಲ್ಲಿ ನೆಲಸಿರುವರೋ ಅಲ್ಲೆಲ್ಲ-ಮನೆ ಮಾತಾಗಿದೆ ಎಂದರೆ ಅತಿಶಯೋಕ್ತಿಯಾಗದು. ಆದರೆ, ಈ ಮಾತಿನ ಹಿಂದೆ, ಕನ್ನಡ ನಾಡು ನುಡಿ ನಯಗಳ ಉಳಿವಿಗೂ ಬೆಳೆವಣಿಗೆಗೂ ಕನ್ನಡಿಗರು ನಡೆಸಿದ ಮತ್ತು ನಡೆಸುತ್ತಿರುವ ಹೋರಾಟದ ಕಥೆ ಅಡಗಿದೆ. ಎಂಬ ಸಂಗತಿ ಬಹುಶಃ ಅನೇಕರಿಗೆ ತಿಳಿಯದು.

ಒಂದೇ ಭಾಷೆಯನ್ನಾಡುವ ಜನ ಒಂದೇ ಕಡೆ-ಎಂದರೆ ಒಂದು ನಿರ್ದಿಷ್ಟ ವಿಸ್ತಾರದ ಭೂಮಿಯಲ್ಲಿ ನೆಲೆಸಿ ಬದುಕು ಸಾಗಿಸುವುದು ಮಾನವಇತಿಹಾಸದಲ್ಲಿ ಅನಾದಿ ಕಾಲದಿಂದ ನಡೆದು ಬಂದಿರುವ ಒಂದು ಸಾಮಾಜಿಕ ನಿಯಮ. ಹೀಗೆ, ನುಡಿ, ನಾಡು, ಜನ ಎಂಬ ಮೂರು ಘಟಕಗಳೂ ಒಂದುಗೂಡಿ ಒಂದು ಜನಾಂಗ ಅಥವಾ ಜನಪದ ಏರ್ಪಡುತ್ತದೆ. ಇಂಗ್ಲೆಂಡು ಎಂದ ಕೂಡಲೆ ಆಂಗ್ಲನೆಲ, ಆಂಗ್ಲನುಡಿ, ಆಂಗ್ಲಜನ ಈ ಮೂರು ಘಟಕಗಳೂ ಮನಸ್ಸಿನ ಮುಂದೆ ಬಂದು ನಿಲ್ಲುತ್ತವೆ; ಇಂಗ್ಲಿಷ್ ಎಂದಾಗ ಭಾಷೆ ಒಂದೇ. ಹೀಗೆಯೇ, ಕನ್ನಡ ನಾಡು ಅಥವಾ ಕರ್ಣಾಟಕ ಎಂದಾಗ ಕನ್ನಡ ನುಡಿ, ಕನ್ನಡದ ನೆಲ, ಕನ್ನಡ ಜನ-ಈ ಮೂರೂ ಕಲ್ಪನೆಗಳೂ ಬೋಧೆಯಾಗುತ್ತವೆ. ಸುಮ್ಮನೆ ಕನ್ನಡ ಎಂದರೆ ಕನ್ನಡ ಭಾಷೆ ಮಾತ್ರ.

ಒಂದೆ ಭಾಷೆಯನ್ನಾಡುವ ಜನ ಕೆಲವೊಮ್ಮೆ ಹಂಚಿ ಹೋಳಾಗಿ ಬದುಕಬೇಕಾದ ಪ್ರಸಂಗಗಳು ಇತಿಹಾಸದಲ್ಲಿ ಜರುಗಿವೆ. ಹಿಂದೆ. ಬ್ರಿಟಿಷರು ಭಾರತವನ್ನಾಳುತ್ತಿದ್ದಾಗ ಬಂಗಾಳವನ್ನು ಒಡೆದರು. ಬಂಗಾಳ ಇಬ್ಭಾಗವಾದುದನ್ನು ಪ್ರತಿಭಟಿಸಿ, ವಂಗಭಂಗ ಚಳವಳಿ ಆಯಿತು. ಪರಿಣಾಮವಾಗಿ, ಬಂಗಾಳ ಮತ್ತೆ ಒಂದುಗೂಡಿತು. ಈಚೆಗೆ, ಭಾರತದಲ್ಲಿ ಪಾಕಿಸ್ತಾನ ನಿರ್ಮಾಣವಾದಾಗ, ಹಿಂದೂ ಮತ್ತು ಮುಸ್ಲಿಂ ಜನಾಂಗ ಎಂಬ ತತ್ತ್ವದ ಆಧಾರದ ಮೇಲೆ ಬಂಗಾಳ ಎರಡಾಗಿ ಒಡೆಯಿತು-ಪಶ್ಚಿಮ ಬಂಗಾಳ ಮತ್ತು ಪೂರ್ವ ಬಂಗಾಳ ಎಂದು. ಮತಧರ್ಮದ ಆಧಾರದ ಮೇಲೆ ಜನವನ್ನು ಒಡೆದಿರುವುದು ಕೃತಕ. ಎರಡು ಬಂಗಾಳಗಳ ಜನ ತಾವು ಬಂಗಾಳಿಗಳು ಎಂಬ ಭಾವನೆಯನ್ನು ಬಿಡಲು ಸಾಧ್ಯವಾಗಿಲ್ಲ.

ಬಂಗಾಲಕ್ಕೆ ಒದಗಿದ್ದ, ಒದಗಿರುವ, ದುರ್ಗತಿ ಕನ್ನಡ ನಾಡಿಗೂ ಎಂದರೆ, ಕರ್ನಾಟಕಕ್ಕೂ ೧೭೯೯ರ ತರುವಾಯ ಒದಗಿತ್ತು. ಇಂಗ್ಲಿಷರು ತಾವು ಟಿಪ್ಪುಸುಲ್ತಾನನಿಂದ ಗೆದ್ದ ಮೈಸೂರು ರಾಜ್ಯವನ್ನು, ಅರ್ಥಾತ್ ಕರ್ನಾಟಕವನ್ನು, ಅನೇಕ ಭಾಗಗಳಾಗಿ ಒಡೆದು, ಬೇರೆ ಬೇರೆ ಸರ್ಕಾರಗಳ ಅಧೀನಕ್ಕೆ ಒಳಪಡಿಸಿದರು. ಹೀಗೆ ಅಸ್ತಿತ್ವಕ್ಕೆ ಬಂದವು-ಮೈಸೂರು ಸಂಸ್ಥಾನ, ಉತ್ತರ ಕನ್ನಡ ಜಿಲ್ಲೆಯನ್ನೂ ಒಳಗೊಂಡ ಮುಂಬಯಿ ಕರ್ನಾಟಕ ಅಥವಾ ಉತ್ತರ ಕರ್ನಾಟಕ, ದಕ್ಷಿಣ ಕನ್ನಡವನ್ನು ಒಳಗೊಂಡ ಹೈದರಾಬಾದು ಕರ್ನಾಟಕ, ಮದ್ರಾಸು ಕರ್ನಾಟಕ ಮತ್ತು ಕೊಡಗು.

ಮೈಸೂರು ಸಂಸ್ಥಾನದಲ್ಲಿ ಎಂದಿನಿಂದಲೂ ಆಳರಸರಾದ ಒಡೆಯರು ಕನ್ನಡ ಭಾಷಾಸಾಹಿತ್ಯಗಳಿಗೆ ಪ್ರೋತ್ಸಾಹವನ್ನು ಕೊಡುತ್ತ ಬಂದಿದ್ದರು. ಈ ಪ್ರೋತ್ಸಾಹ ಚಿಕ್ಕದೇವರಾಜ ಒಡೆಯರ್ ಹಾಗೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ವಿಶೇಷವಾಗಿ ಸಾಹಿತ್ಯದ ಸೃಷ್ಟಿಗೆ ಕಾರಣವಾಯಿತು. ಮುಮ್ಮಡಿಯವರ ಕಾಲದಲ್ಲಿಯೇ ಇಂಗ್ಲೀಷು ವಿದ್ಯಾಭ್ಯಾಸದ ಅಂಕುರಾರ್ಪಣವಾಗಿ, ಚಾಮರಾಜ ಒಡೆಯರ ಕಾಲದಲ್ಲಿ ಬೆಳೆದು, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅದು ದೊಡ್ಡ ವೃಕ್ಷವಾಯಿತು. ಅದರಲ್ಲಿ ಬಿಟ್ಟ ದೊಡ್ಡ ಫಲ, ೧೯೧೬ರಲ್ಲಿ ಸ್ಥಾಪಿತವಾದ ಮೈಸೂರು ವಿಶ್ವವಿದ್ಯಾನಿಲಯ. ಇದರ ಆಶ್ರಯಕ್ಕೆ ಬಂದುವು ಅದಕ್ಕೂ ಮೊದಲೇ ಹುಟ್ಟಿ ಬೆಳೆದಿದ್ದ ಮೈಸೂರಿನ ಮಹಾರಾಜ ಕಾಲೇಜು ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜುಗಳು. ಕನ್ನಡದ ವಿದ್ಯೆಗೆ ಎಲ್ಲ ರೀತಿಯಲ್ಲೂ ಎಡೆಗೊಟ್ಟು ಉತ್ತೇಜನ ಕೊಡಬೇಕೆಂಬುದು ಸ್ಥಾಪಕರ ಉದ್ದೇಶವಾಗಿದ್ದರೂ ಬಹುಕಾಲದವರೆಗೆ ಅಲ್ಲಿ ಕನ್ನಡ ಅಂಬೆಗಾಲಿಡುತ್ತಲೇ ಬದುಕಿರಬೇಕಾಯಿತು. ಚಾಮರಾಜ ಒಡೆಯರ ಕಾಲದಲ್ಲಿ ಕನ್ನಡ ರಂಗಭೂಮಿಗೆ ದೊರೆತ ಪ್ರೋತ್ಸಾಹದ ಮಾತು ಬಿಟ್ಟರೆ, ಅರಸರ ಆಸ್ಥಾನದಲ್ಲಿ ಸೃಷ್ಟಿಯಾಗುತ್ತಿದ್ದ ಕನ್ನಡ ತನ್ನ ಹಿಂದಿನ ಕಸುವನ್ನು ಕಳೆದುಕೊಂಡು ಯಾವ ರೀತಿಯಲ್ಲೂ ಜನಕ್ಕೆ ರಸದೂಟ ಒದಗಿಸಲು ಸಮರ್ಥವಾಗಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಶಾಲಾಕಾಲೇಜುಗಳಲ್ಲಿ ಕಲಿತ ಕಲಿಯುತ್ತಿದ್ದ ಜನ ಇಂಗ್ಲಿಷಿನ ನಿರರ್ಥಕ ಪ್ರಭಾವಕ್ಕೆ ಒಳಗಾಗತೊಡಗಿದರು. ಆಡಳಿತದಲ್ಲೂ ಇಂಗ್ಲಿಷು ದರ್ಬಾರು ಮಾಡತೊಡಗಿತು. ಮೈಸೂರು ಜನದ ಬದುಕಿನಲ್ಲಿ ಇಂಗ್ಲಿಷಿನ ಉಸಿರು ಬೆರೆಯಿತು; ವ್ಯಾಮೋಹ ಬಲಿಯಿತು.

ಉತ್ತರ ಕರ್ನಾಟಕದ ಜನ ಮುಂಬಯಿ ವಿಶ್ವವಿದ್ಯಾನಿಲಯದ ಕಡೆಗೂ ಮದರಾಸು ಕರ್ನಾಟಕದ ಜನ ಮದರಾಸು ವಿಶ್ವವಿದ್ಯಾನಿಲಯದ ಕಡೆಗೂ ಹೈದರಾಬಾದು ಕರ್ನಾಟಕದ ಜನ ಉಸ್ಮಾನಿಯ ವಿಶ್ವವಿದ್ಯಾನಿಲಯದ ಕಡೆಗೂ ಕನ್ನಡದ ಭಿಕ್ಷೆಗಾಗಿ ಕೈಯೊಡ್ಡಬೇಕಾಗಿತ್ತು. ಮರಾಠಿಯ ಪ್ರಭಾವದಿಂದಾಗಿ ಉತ್ತರ ಕರ್ನಾಟಕದ ಕನ್ನಡಿಗರ ಕನ್ನಡತನಕ್ಕೆ ಸಂಚಕಾರ ಬಂದಿತ್ತು. ಉಳಿದ ಕಡೆ ಕನ್ನಡದ ಅವಸ್ಥೆ ಮೇಲು ಎನ್ನುವಂತಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಕನ್ನಡಿಗರು ತಮ್ಮ ನಾಡು ನುಡಿಗಳ ಏಳಿಗೆಯ ಬಗೆಗೆ ಚಿಂತಿಸುವಂತಾದುದು ಚಾರಿತ್ರಿಕ ಘಟನೆ ಎಂದೇ ಹೇಳಬೇಕು. ಈ ಚಿಂತನೆಯ ಫಲ ಮಹತ್ವದ್ದು. ಕರ್ನಾಟಕ ಭಾಷಾ ಸಾಹಿತ್ಯಗಳ ಸಂವರ್ಧನೆಗೆ, ಸಂಘಟನೆಗೆ ನಡೆದ ಪ್ರಯತ್ನ. ಚಾಮರಾಜ ಒಡೆಯರ ಕಾಲದಲ್ಲಿ ಮೈಸೂರಿನಲ್ಲಿ ಕರ್ನಾಟಕ ಭಾಷೋಜ್ಜೀವಿನೀ ಸಭಾ ಸ್ಥಾಪಿತವಾಯಿತು; ೧೮೯೦ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಜನ್ಮ ತಾಳಿತು; ೧೯೧೫ರಲ್ಲಿ, ಬೆಂಗಳೂರಿನಲ್ಲಿ, ಕರ್ನಾಟಕ ಸಾಹಿತ್ಯ ಪರಿಷತ್ತು (ನೋಡಿ- ಕನ್ನಡ ಸಾಹಿತ್ಯ ಪರಿಷತ್ತು) ಅಖಿಲ ಕರ್ನಾಟಕ ಸಂಸ್ಥೆಯಾಗಿ ಅವತರಿಸಿತು. ಈ ಮೂರಕ್ಕೂ ಸಾಮಾನ್ಯವಾಗಿದ್ದ ಮುಖ್ಯ ಗುರಿ ಒಂದೇ: ಕನ್ನಡದಲ್ಲಿ ಗ್ರಂಥ ರಚನೆಗೆ ಪ್ರೋತ್ಸಾಹ; ಆ ಮೂಲಕ ಕನ್ನಡ ನುಡಿಯ ಏಳಿಗೆ. ಈ ಮೂರು ಸಂಸ್ಥೆಗಳಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಹಲವೊಮ್ಮೆ ಪರೋಕ್ಷವಾಗಿ, ನಾಡಿನಲ್ಲೆಲ್ಲ ಕಾಲಕ್ರಮದಲ್ಲಿ ಕರ್ನಾಟಕ ಸಂಘಗಳು ಹುಟ್ಟಿಕೊಳ್ಳಲು ಕಾರಣವಾದುವು. ಗಿಡವನ್ನು ಬೆಳೆಸಿದ ತೋಟಗಾರ ಅದರ ಅಂಟುಗಳನ್ನು ಕತ್ತರಿಸಿ ನಟ್ಟು ಹತ್ತಾರು ಗಿಡ ಬೆಳೆಸುವ ಹಾಗೆ, ಈ ಸಂಸ್ಥೆಗಳ ಹಿರಿಯರು ಅವುಗಳ ಉದ್ದೇಶವನ್ನೇ ಬೇರೆಯ ವಿಧಾನದಲ್ಲಿ ಸಾಧಿಸಲು ಕಿರಿಯರನ್ನು ಒಂದೂಗೂಡಿಸಿದರು; ಸಂಘಗಳನ್ನು ಕಟ್ಟಿದರು. ಆಲೂರು ವೆಂಕಟರಾಯರು, ಬೆಳ್ಳಾವೆ ವೆಂಕಟನಾರಾಯಣಪ್ಪನವರು, ಬಿ.ಎಂ.ಶ್ರೀಕಂಠಯ್ಯನವರು, ಎ.ಆರ್.ಕೃಷ್ಣಶಾಸ್ತ್ರಿಗಳು, ಟಿ.ಎಸ್.ವೆಂಕಣ್ಣಯ್ಯಯನವರು, ದ.ರಾ.ಬೇಂದ್ರೆ- ಈ ಮೊದಲಾದವರೂ ಮೊದಲು ಹುಟ್ಟಿದ ಸಂಘಗಳಾದ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ, ಮೈಸೂರು ಮಹಾರಾಜರವರ ಕಾಲೇಜಿನ ಕರ್ಣಾಟಕ ಸಂಘ, ಧಾರವಾಡದ ಗೆಳೆಯರ ಗುಂಪು-ಇವುಗಳ ಹುಟ್ಟು ಬೆಳೆವಣಿಗೆಗಳಲ್ಲಿ (ಬೇರೆ ಬೇರೆಯಾಗಿ, ಬೇರೆ ಬೇರೆ ಕಾಲಗಳಲ್ಲಿ) ಪ್ರಮುಖ ಪಾತ್ರವಹಿಸಿದರು.

ಈ ಸಂದರ್ಭದಲ್ಲಿ, ಒಂದು ವಿಶೇಷ ವಿವರಣೆಯನ್ನು ಕೊಡಬೇಕಾದದ್ದು ಅಗತ್ಯ. ಪರಿಷತ್ತು ಹಾಗೂ ವಿದ್ಯಾವರ್ಧಕ ಸಂಘಗಳು, ರಾಜಕೀಯವಾಗಿ ಒಡೆದು ಹೋಗಿದ್ದ ಕನ್ನಡ ನಾಡಿನ ಜನರನ್ನು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ದೃಷ್ಟಿಯಿಂದ ಒಂದುಗೂಡಿಸುವ ಗುರಿಯನ್ನು ಹೊಂದಿದ್ದುವು. ಅಖಿಲ ಕರ್ನಾಟಕ ವ್ಯಾಪ್ತಿ ಈ ಎರಡರ ಕಾರ್ಯಕ್ಷೇತ್ರವಾಗಿದ್ದರೂ ಕಾಲಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯ ಕ್ಷೇತ್ರ ಧಾರವಾಡದ ಸುತ್ತಮುತ್ತಣ ಪ್ರಾಂತಕ್ಕೆ ಸೀಮಿತವಾಯಿತು. ಗೆಳೆಯರ ಗುಂಪು ಸಂಖ್ಯಾದೃಷ್ಟಿಯಿಂದ ಕೆಲವರ ಸಂಘವೇ ಆಗಿತ್ತು; ನಿಯಮ ನಿಬಂಧನೆಗಳಿಲ್ಲದ, ಅಧಿಕಾರಿವರ್ಗ ಇಲ್ಲದ, ಅದರೂ ಕನ್ನಡದ ಊಳಿಗಕ್ಕೆ ಟೊಂಕ ಕಟ್ಟಿನಿಂತ ಸಂಘವದು. ಸೆಂಟ್ರಲ್ ಕಾಲೇಜಿನ ಸಂಘ ವಿದ್ಯಾರ್ಥಿ ವೃಂದಕ್ಕೆ ಮಾತ್ರ ಸೀಮಿತವಾದದ್ದು. ಕನ್ನಡದಲ್ಲಿ ಬರೆಯ ಬಲ್ಲವರು, ಕನ್ನಡದ ಅಭಿಮಾನಿಗಳು, ಒಟ್ಟುಗೂಡಿ ಕನ್ನಡಕ್ಕಾಗಿ ದುಡಿಯಲು ಸಂಘವಾಗಿ ಸೇರಬೇಕು ಎನ್ನುವವರಿಗೆ ಗೆಳೆಯರ ಗುಂಪು ಮೇಲುಪಂಕ್ತಿಯಾಯಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸೆಂಟ್ರಲ್ ಕಾಲೇಜಿನ ಸಂಘ ಮಾದರಿಯಾಯಿತು. ಹೀಗೆ, ನಾಡಿನಲ್ಲಿ ಮೂರು ನಾಲ್ಕು ಬಗೆಯ ಕರ್ನಾಟಕ ಸಂಘಗಳು ಕಾಣಿಸಿಕೊಂಡುವು; ೧ ಕರ್ಣಾಟಕ ಅಥವಾ ಕರ್ನಾಟಕ ಸಂಘ ಎಂಬ ಹೆಸರು ತಳೆದ, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳ ಕರ್ಣಾಟಕ ಸಂಘಗಳು; ಹಲವು ಕಡೆ ಇವು ಕನ್ನಡ ಸಂಘ ಎಂಬ ಹೆಸರನ್ನೂ ತಳೆದುವು. ೨ ಸ್ಥಳೀಯ ಜನರಲ್ಲಿ ಕನ್ನಡದ ಅಭಿಮಾನವನ್ನು ಹುಟ್ಟಿಸಿ, ಕನ್ನಡದ ಏಳಿಗೆಗೆ ಕೆಲಸ ಮಾಡತೊಡಗಿದ, ಜಿಲ್ಲಾ ಕೇಂದ್ರ ನಗರ ಪಟ್ಟಣ ಊರು ಹಳ್ಳಿಗಳಲ್ಲಿ ಸ್ಥಾಪಿತವಾದ (ಸಾರ್ವಜನಿಕ) ಕರ್ನಾಟಕ ಸಂಘಗಳು. ೩ ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯ ಬಂದಮೇಲೂ ಕನ್ನಡ ನಾಡಿನ ಹೊರಗಡೆ ನೆಲೆಸಿರುವ ಹೊರನಾಡಿನ ಕನ್ನಡಿಗರು ನಾಡುನುಡಿಗಳ ಅಭಿಮಾನವನ್ನು ಜೀವಂತವಾಗಿರಿಸಿಕೊಳ್ಳಲು ಕಟ್ಟಿಕೊಂಡ ಸಂಘಗಳು. ೪ ಬೆಂಗಳೂರಿನ ವಿಮಾನ ಕಾರ್ಖಾನೆ ಮುಂತಾದ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಸ್ಥಾಪಿತವಾಗಿರುವವು. ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಅನೇಕ ಸಂಘಗಳು ಕರ್ನಾಟಕ ಸಂಘ ಮಾಡಬೇಕಾದ ಕಾರ್ಯಗಳಲ್ಲಿ ಹಲವನ್ನೊ ಕೆಲವನ್ನೊ ತಮ್ಮ ತಮ್ಮ ಇಚ್ಛೆ, ಉದ್ದೇಶ, ಅನುಕೂಲಗಳಿಗೆ ತಕ್ಕಂತೆ ಮಾಡಿಕೊಂಡು ಹೋಗುತ್ತಿದ್ದರೂ ಅದೇ ಹೆಸರನ್ನು ಹೊಂದಿರುವುದಿಲ್ಲ. ಕೆಲವು ಸಾಹಿತ್ಯ ಸಂಘ ಎಂಬ ಹೆಸರನ್ನು ಹೊಂದಿದ್ದರೆ ಕೆಲವು ಕನ್ನಡಿಗರ ಸಂಘವಾಗಿರುತ್ತವೆ; ಕೆಲವು ಕನ್ನಡ ಸಂಘ ಎನಿಸಿವೆ. ಸಂಘಕ್ಕೆ ಬದಲು ಕೂಟವಾಗಿರುತ್ತವೆ, ಕೆಲವು. ಭಾಷಾಸೂಚಕವಾದ ವಿಶೇಷಣವೇ ಇಲ್ಲದ, ಮಿತ್ರ ಮಂಡಲಿ, ಮಿತ್ರವೃಂದಗಳೂ ಉಂಟು. ಇಂಥವೆಲ್ಲವನ್ನೂ ಕರ್ನಾಟಕ ಸಂಘ ಎಂಬ ಸಾಮಾನ್ಯ ವಾಚಕ ಒಳಗೊಳ್ಳುತ್ತದೆ.

ಬಹು ಹಳೆಯವಾದ ಕೆಲವು ಸಂಘಗಳ ಕಾರ್ಯಕಲಾಪಗಳ ಪರಿಚಯ ಮಾಡಿ ಕೊಳ್ಳುವುದರ ಮೂಲಕ, ಸಾಮಾನ್ಯತಃ ಕರ್ನಾಟಕ ಸಂಘಗಳು ಮಾಡಿರುವ ಹಾಗೂ ಮಾಡುತ್ತಿರುವ, ಮುಂದೆಯೂ ಮಾಡಬೇಕಾದ, ಕೆಲಸದ ಸ್ವರೂಪವನ್ನು ತಿಳಿದುಕೊಳ್ಳಬಹುದು.

ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ

[ಬದಲಾಯಿಸಿ]

ಈ ಸಂಘವನ್ನು ೧೯೧೮ರಲ್ಲಿ ಆರಂಭ ಮಾಡಿ ೧೯೩೨ರವರೆಗೂ ನಡಸಿಕೊಂಡು ಬಂದ ಎ. ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ಣಾಟಕದ ವಿಷಯವಾಗಿ ಪ್ರಸ್ತಾಪಿಸುತ್ತ ಸಂಘದ ವಿಚಾರವಾಗಿಯೂ ಬರೆದಿದ್ದಾರೆ. ಕನ್ನಡದ ವಿಷಯದಲ್ಲಿ ಆಗಿನ ಕಾಲದ ಧೋರಣೆ ಮತ್ತು ಸಂಘ ಸ್ಥಾಪನೆಗೆ ಇದ್ದ ಆವಶ್ಯಕತೆಗಳು ಅವರ ಮಾತುಗಳಲ್ಲಿ ಪ್ರತಿಬಿಂಬಿತವಾಗಿವೆ. ಅವರ ಅರ್ಥಪೂರ್ಣ ಮಾತುಗಳು ಇವು; “ನಾನು ವಿದ್ಯಾರ್ಥಿಯಾಗಿದ್ದಾಗ ಮೈಸೂರು ಮಹಾರಾಜರವರ ಕಾಲೇಜಿನಲ್ಲಿ ಇದ್ದದ್ದು ಎರಡು ಸಂಘಗಳು-(೧) ೧೮೯೪ರಲ್ಲಿ ಹುಟ್ಟಿ ಥಾಮಸ್ ಡನ್ಹ್ಯಾಂ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಚರಿತ್ರೆ ಸಂಘ. (೨) ಸುಮಾರು ೧೯೧೩ರಲ್ಲಿ ಬಿ. ಎಂ. ಶ್ರೀಕಂಠಯ್ಯನವರಿಂದ ಸ್ಥಾಪಿತವಾದ ಇಂಗ್ಲಿಷ್ ಸಾಹಿತ್ಯ ಸಂಘ. ಕನ್ನಡಕ್ಕೆ ಯಾವ ಸಂಘವೂ ಇರಲಿಲ್ಲ. ೧೯೧೫ರಲ್ಲಿ ನಾನು ಬೆಂಗಳೂರಿಗೆ ಕನ್ನಡದ ಉಪಾಧ್ಯಾಯನಾಗಿ ಹೋದಾಗ (ಸೆಂಟ್ರಲ್ ಕಾಲೇಜಿನಲ್ಲಿಯೂ) ಕನ್ನಡಕ್ಕೆ ಯಾವ ಸಂಘವೂ ಇರಲಿಲ್ಲ. ಒಂದು ಸಂಘವನ್ನು ಸ್ಥಾಪಿಸಬೇಕೆಂಬ ಯೋಚನೆ ಹೋದ ಕೂಡಲೇ ಬರಲಿಲ್ಲ. ಕನ್ನಡದಲ್ಲಿಯೂ ಕಲಿಯುವುದು ಇದೆ. ಇಂಗ್ಲಿಷಿನಂತೆಯೇ ಕಲಿಯುವುದು ಇದೆ ಎಂದು ತೋರಿಸಿ, ಕನ್ನಡದ ಸ್ಥಿತಿಯನ್ನು ಬಂಗಾಳಿ ಮರಾಠಿಗಳ ಸ್ಥಿತಿಯೊಡನೆ ಹೋಲಿಸಿ ಕನ್ನಡದಲ್ಲಿ ಒಂದು ಅಭಿಮಾನ ಹುಟ್ಟಿಸಿ ವಿದ್ಯಾರ್ಥಿಗಳ ಸಹಾನುಭೂತಿ ಸ್ನೇಹಗೌರವಗಳನ್ನು ಗಳಿಸಲು ಒಂದೆರಡು ವರ್ಷ ಬೇಕಾಯಿತು. ಈ ಮಧ್ಯೆ ಕೆಲವು ವಿದ್ಯಾರ್ಥಿಗಳು ಅತ್ಯುತ್ತಮ ಪ್ರಬಂಧಗಳನ್ನು ಬರೆದಿದ್ದರು...... ಇವರ ಬರವಣಿಗೆಯೆಲ್ಲ ವ್ಯರ್ಥವಾಗಿ ಹೋಗಿಬಿಡುವುದಲ್ಲ ಎಂದು ನನಗೆ ಒಂದು ಬಗೆಯ ಕೊರಗಾಗಿತ್ತು. ಇವೆಲ್ಲವನ್ನೂ ಒಂದು ಪ್ರಕಟಣೆಯಾಗಿ ಅಚ್ಚು ಮಾಡಿಸಬಹುದೆಂದು ಹೇಳಿದೆ. ಬಹುಮಂದಿ ಉತ್ಸಾಹಶಾಲಿಗಳಾಗಿ ಮುಂದೆ ಬಂದರು. ಅದರ ಜೊತೆಯಲ್ಲಿಯೇ ಸಂಘದ ಯೋಚನೆಯೂ ಹುಟ್ಟಿತು. ವಿದ್ಯಾರ್ಥಿಗಳು ಕೊಡುವ ಹಣವನ್ನು ಸಂಘದ ಚಂದಾ ಎಂದು ಭಾವಿಸಿ ಪತ್ರಿಕೆಯನ್ನು ಉಚಿತವಾಗಿ ಕೊಡಬಹುದು ಎಂದೆ. ಅದಕ್ಕೂ ವಿದ್ಯಾರ್ಥಿಗಳು ಒಪ್ಪಿದರು. ಮೊದಲು ಸಂಘದ ಏರ್ಪಾಡು. ಈಗ ಕರ್ಣಾಟಕ ಸಂಘ ಎಂಬುದು ಸುಪರಿಚಿತವಾದ ಹೆಸರು, ಆಗ ಈ ಸಂಸ್ಥೆಗೆ ಏನು ಹೆಸರು ಇಡಬೇಕೆಂದೇ ನಾನು ಬಹುದಿನ ಯೋಚಿಸಿದೆ-ಸಾಹಿತ್ಯ ಸಮಾಜವೇ, ಕನ್ನಡ ಸಮಾಜವೇ, ಕರ್ಣಾಟಕ ಸಮಾಜವೇ, ಇತ್ಯಾದಿ, ಆಗ್ಗೆ ಇಂಗ್ಲಿಷಿನಲ್ಲಿ ರೂಢಿಯಾಗಿದ್ದ ಸೊಸೈಟಿ ಎಂಬ ಪದಕ್ಕೆ ಸಮಾನವಾಗಿ ಸಮಾಜವೇ ಮುಂದೆ ಬರುತ್ತಿತ್ತು. ಆದರೆ ಏಕೋ ಅದರಲ್ಲಿ ಸತ್ತ್ವವಿಲ್ಲವೆಂದು ಭಾಸವಾಗಿ ಕೊನೆಗೆ ಬಾಯಿ ತುಂಬ ಬರುವ, ಗಂಭೀರವಾಗಿ ಕೇಳುವ, ಕರ್ಣಾಟಕ ಸಂಘ ಎಂಬುದನ್ನು ನಿಷ್ಕ ರ್ಷೆ ಮಾಡಿಯಾಯಿತು.”

ಈ ನಿಷ್ಕ ರ್ಷೆ ಫಲಿಸಿ, ಆಗಸ್ಟ್‌ ೧೯೧೮ರಲ್ಲಿ ಸಂಘ ಆರಂಭವಾಯಿತು. ಕೃಷ್ಣಶಾಸ್ತ್ರಿಗಳೇ ಸಂಘದ ಅಧ್ಯಕ್ಷರಾಗಬೇಕೆಂದು ವಿದ್ಯಾರ್ಥಿಗಳು ಬಯಸಿದರು. ಆದರೆ ಅವರು ಒಪ್ಪಲಿಲ್ಲ. ದೊಡ್ಡವರನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕೆಂದು ತಿಳಿಸಿ, ಪರಿಷತ್ತಿನಲ್ಲಿ ಕೆಲಸ ಮಾಡಿ ಗೌರವವನ್ನು ಗಳಿಸಿದ್ದ ವ್ಯಕ್ತಿಯಾಗಿದ್ದ, ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದ, ಬೆಳ್ಳಾವೆ ವೆಂಕಟನಾರಾಯಣಪ್ಪನವರನ್ನು ಅಧ್ಯಕ್ಷರಾಗಿ ಇಟ್ಟುಕೊಳ್ಳಬೇಕೆಂದು ಶಾಸ್ತ್ರಿಗಳು ಸೂಚಿಸಿದರು. ಅದೇ ಮೇರೆಗೆ ಬಿ. ವೆಂಕಟನಾರಾಯಣಪ್ಪನವರು ಸಂಘದ ಪ್ರಥಮ ಅಧ್ಯಕ್ಷರಾದರು; ಕೃಷ್ಣಶಾಸ್ತ್ರಿಗಳು ಉಪಾಧ್ಯಕ್ಷರಾದರು. ಕಾರ್ಯದರ್ಶಿ ಮಾತ್ರ ವಿದ್ಯಾರ್ಥಿಯೇ ಆಗಿರಬೇಕೆಂದೂ ಸಂಘ ವಿದ್ಯಾರ್ಥಿಗಳಿಗೆ ಒಂದು ಶಿಕ್ಷಣ ಕ್ಷೇತ್ರವಾಗಿರಬೇಕೆಂದೂ ಖಂಡಿತವಾಗಿ ಹೇಳಿದರು, ಶಾಸ್ತ್ರಿಗಳು. ಅದೇ ಮೇರೆಗೆ, ಡಿ. ಗುರುರಾಯರು ಕಾರ್ಯದರ್ಶಿಯಾಗಿ ನಿಯಮಿತರಾದರು. (ಚುನಾಯಿತರಾಗಲಿಲ್ಲ-ಎಂಬ ಮಾತನ್ನು ಅರ್ಥಪೂರ್ಣವಾಗಿ ತಿಳಿಸಿದ್ದಾರೆ ಶಾಸ್ತ್ರಿಗಳು). ಕವಿಚರಿತೆಕಾರರಾದ ಆರ್. ನರಸಿಂಹಾಚಾರ್ಯರು ಮೊದಲ ವರ್ಷದ ಆರಂಭ ಭಾಷಣ ಮಾಡಿದರು.

ಪ್ರಬುದ್ಧ ಕರ್ಣಾಟಕ ಕನ್ನಡ ನಾಡಿಗೆ ಈ ಸಂಘದ ಅಮೂಲ್ಯ ಕೊಡುಗೆ ಎಂದು ಧಾರಾಳವಾಗಿ ಹೇಳಬಹುದು. ಪರ್ಯಾಯವಾಗಿ, ಕೃಷ್ಣಶಾಸ್ತ್ರಿಗಳ ಕೊಡುಗೆ ಎಂದರೂ ತಪ್ಪಾಗುವುದಿಲ್ಲ. ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘ, ಕೃಷ್ಣಶಾಸ್ತ್ರಿಗಳು, ಪ್ರಬುದ್ಧ ಕರ್ಣಾಟಕ ಈ ಮೂರು ಒಟ್ಟಿಗೆ ನೆನೆಯತಕ್ಕವು.

ಕೃಷ್ಣಶಾಸ್ತ್ರಿಗಳ ಸ್ಫೂರ್ತಿದಾಯಕ ನೇತೃತ್ವದಲ್ಲಿ ಸಂಘವೂ ಅದರ ಪತ್ರಿಕೆಯೂ ವಿದ್ಯಾರ್ಥಿಗಳ ಪ್ರಯೋಜನಕ್ಕೆ ಮಾತ್ರವಲ್ಲದೆ ಮಹಾಜನರ ಪ್ರಯೋಜನಕ್ಕೂ ಒದಗಿಬಂದುವು. ಪ್ರಬುದ್ಧ ಕರ್ಣಾಟಕದ ಲೇಖನಗಳು ಪುಡಿಪುಡಿಯಾಗಿರಬಾರದೆಂದೂ ಸಾರವತ್ತಾಗಿ ನಾಲ್ಕುಕಾಲ ನಿಲ್ಲುವಂತಿರಬೇಕೆಂದೂ ಸಾಧ್ಯವಾದರೆ ಕೆಲವು ಸಂಚಿಕೆಗಳಲ್ಲಿ ಬಂದ ಲೇಖನಗಳನ್ನು ಸೇರಿಸಿ ಅಚ್ಚುಕಟ್ಟಾದ ಒಂದು ಪುಸ್ತಕ ಮಾಡುವಂತಿರಬೇಕೆಂದೂ ನಿರ್ಧರಿಸಲಾಗಿತ್ತು. ಹೀಗೆ ಪ್ರಕಟವಾದ ಲೇಖನಗಳೆಲ್ಲ ಸೇರಿ, ೧೯೪೫ರ ವೇಳೆಗೆ ಒಟ್ಟು ೪೩ ಗ್ರಂಥಗಳಾಗಿ ಪ್ರಕಟವಾಗಿ ಪ್ರಬುದ್ಧ ಕರ್ಣಾಟಕವನ್ನು ಪುಷ್ಟಿಗೊಳಿಸಿ, ಕರ್ಣಾಟಕ ಸಂಘದ ಗ್ರಂಥ ಭಂಡಾರವನ್ನು ಬೆಳೆಸಿದುವು. ಡಿ. ವಿ. ಜಿ. ಯವರ ಕನ್ನಡಸಾಹಿತ್ಯ ಮತ್ತು ಜನಜೀವನ, ಭಾಸನ ಪ್ರತಿಮಾನಾಟಕ (ಮೈಸೂರು ಸೀತಾರಾಮಶಾಸ್ತ್ರಿಗಳ ಅನುವಾದ), ಎ. ವೆಂಕಟಸುಬ್ಬಯ್ಯನರ ಕೆಲವು ಕನ್ನಡ ಕವಿಗಳ ಜೀವನಕಾಲ ವಿಚಾರ, ಮುದ್ದಣ ಪ್ರಶಸ್ತಿಗ್ರಂಥ, ಬಿ. ಎಂ. ಶ್ರೀಯವರ ಗದಾಯುದ್ಧ ನಾಟಕ, ಮತ್ತು ಅಶ್ವತ್ಥಾಮನ್, ಬಿ. ವೆಂಕೋಬರಾಯರ ಮೈಸೂರು ದೇಶದ ವಾಸ್ತುಶಿಲ್ಪ. ಕೆ.ವಿ. ಪುಟ್ಟಪ್ಪನವರ ಯಮನ ಸೋಲು, ಮತ್ತು ಮಲೆನಾಡಿನ ಚಿತ್ರಗಳು, ಮಾಸ್ತಿ ವೆಂಕಟೇಶ ಅಯ್ಯಂಗಾರರ ಸುಬ್ಬಣ್ಣ-ಇವು ಕೆಲವನ್ನು ಪ್ರಾತಿನಿಧಿಕವಾಗಿ ಹೆಸರಿಸಬಹುದು. ಇವು ಹೊಸಗನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಮೈಲಿಗಲ್ಲುಗಳಾಗಿವೆ, ಈ ಗ್ರಂಥಗಳು, ಸಂಘ ಬಿಡಿಯಾಗಿ ಪ್ರಕಟಿಸಿದ ನಾಲ್ಕಾರು ಗ್ರಂಥಗಳಲ್ಲಿ ಶ್ರೀಯವರ ಇಂಗ್ಲಿಷ್ ಗೀತಗಳು ಚರಿತ್ರಾರ್ಹ ಪ್ರಕಟನೆ; ಕನ್ನಡ ಕಾವ್ಯಪ್ರಪಂಚದಲ್ಲಿ ಹೊಸ ವಸಂತವನ್ನು ಸಾರಿತಂದ ಗ್ರಂಥವಿದು.

ಪತ್ರಿಕಾ ಪ್ರಕಟಣೆ ಮತ್ತು ಗ್ರಂಥ ಪ್ರಕಟಣೆ ಸಂಘದ ಶಾಶ್ವತಕಾರ್ಯಗಳಾದುವು. ಇವುಗಳ ಜೊತೆಗೆ, ನಿತ್ಯಗಟ್ಟಳೆಯ ಕಾರ್ಯಗಳಾಗಿ ಉಪನ್ಯಾಸ ಉತ್ಸವಾದಿಗಳನ್ನು ಸಂಘ ಏರ್ಪಡಿಸುತ್ತಿತ್ತು. ಸೆಂಟ್ರಲ್ ಕಾಲೇಜಿನ ಸಂಘದ ವಾರ್ಷಿಕೋತ್ಸವ ಎಂದರೆ ರಸದೌತಣ ಎಂಬ ಪ್ರತೀತಿ ಇತ್ತು; ಪ್ರಸಿದ್ಧ ವಿದ್ವಾಂಸರು, ಮುಖ್ಯ ಅತಿಥಿಗಳಾಗಿರುತ್ತಿದ್ದರು. ೧೯೨೪ರ ವಾರ್ಷಿಕೋತ್ಸವದಲ್ಲಿ ಅಗ್ರಾಸನ ವಹಿಸಿದ್ದ ಬೆನಗಲ್ ರಾಮರಾಯರು ತಾವು ಮುದ್ದಣನ ಹೆಸರಿನಲ್ಲಿ ಪ್ರತಿವರ್ಷ ಒಂದು ಸುವರ್ಣಪದಕವನ್ನು ಕೊಡುವುದಾಗಿ ಘೋಷಿಸಿ ಮುದ್ದಣ ಸ್ಮಾರಕ ಸಣ್ಣಕಥೆಗಳ ಸ್ಪರ್ಧೆಯನ್ನು ಏರ್ಪಡಿಸಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಪದಕ ಕೊಡತಕ್ಕದೆಂದು ಏರ್ಪಾಡು ಮಾಡಿದರು. ಮುದ್ದಣ ಸ್ವರ್ಣಪದಕ ಪಡೆದವರಲ್ಲಿ ಇಬ್ಬರಾದ ಆನಂದರೂ ಕೆ. ಗೋಪಾಲಕೃಷ್ಣರಾಯರೂ ಮುಂದೆ ಪ್ರಸಿದ್ಧ ಕಥೆಗಾರರಾದರು. ಸಂಘ ನಡೆಸಿದ ಸ್ಮರಣಾರ್ಹ ಕಾರ್ಯಕ್ರಮ ಎಂದರೆ, ಕೆ.ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಕವಿ ಸಮ್ಮೇಳನ (೧೯೨೮). ಹೀಗೆ ಹೊಸಗನ್ನಡ ಸಾಹಿತ್ಯದ ನಿರ್ಮಾಣ ಕಾರ್ಯದಲ್ಲಿ ಈ ಸಂಘ ಪ್ರಮುಖಪಾತ್ರ ವಹಿಸಿದೆ. ಜಿ. ಪಿ. ರಾಜರತ್ನಂ ಸಂಘದ ನಾಯಕರಾಗಿದ್ದ ಕಾಲದಲ್ಲಿ ವಿದ್ಯಾರ್ಥಿಗಳ ಬರೆವಣಿಗೆಗೆ ವಿಶೇಷ ಪ್ರೋತ್ಸಾಹ ಕೊಟ್ಟು, ಗುರುಗಳು ಹಾಕಿದ್ದ ಸಂಪ್ರದಾಯವನ್ನು ಮುಂದುವರಿಸಿದರು. ಇವರ ನೇತೃತ್ವದಲ್ಲಿ ವಿದ್ಯಾರ್ಥಿ ಲೇಖಕರಿಂದ ಸಿದ್ಧವಾದ ಅನೇಕ ಗ್ರಂಥಗಳು ಪ್ರಕಟವಾದುವು. ೧೯೬೮ರಲ್ಲಿ ಸಂಘ ಚಿನ್ನದ ಹಬ್ಬವನ್ನು ಆಚರಿಸಿತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೇರೆ ಬೇರೆ ಕನ್ನಡ ಉನ್ನತ ಪರೀಕ್ಷೆಗಳಲ್ಲಿ ಮೊದಲಿಗರಾಗಿ ಬಂದವರಿಗೆ ಟಿ. ಪಿ. ಕೈಲಾಸಂ, ಎ. ಆರ್. ಕೃಷ್ಣಶಾಸ್ತ್ರೀ-ಇವರ ಹೆಸರಿನಲ್ಲಿ ಚಿನ್ನದ ಪದಕಗಳ ನೀಡಿಕೆಗೆ ವ್ಯವಸ್ಥೆ ಮಾಡಿ, ತನ್ನ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆದುಕೊಂಡಿದೆ ಈ ಸಂಘ.

ಮೈಸೂರು ಮಹಾರಾಜರವರ ಕಾಲೇಜು ಕರ್ಣಾಟಕ ಸಂಘ

[ಬದಲಾಯಿಸಿ]

ಟಿ. ಎಸ್. ವೆಂಕಣ್ಣಯ್ಯನವರೂ ಎ. ಆರ್. ಕೃಷ್ಣಶಾಸ್ತ್ರಿಗಳೂ ಕನ್ನಡದ ಅಶ್ವಿನೀ ದೇವತೆಗಳು ಎಂದು ಪ್ರಸಿದ್ಧರಷ್ಟೆ. ಸಂಘಸೇವೆಯಲ್ಲೂ ಇಬ್ಬರದ್ದೂ ಅವಳಿಯೂಳಿಗ. ಎ. ಆರ್. ಕೃಷ್ಣಶಾಸ್ತ್ರಿಗಳು ಮೈಸೂರಿಗೆ ವರ್ಗವಾದಾಗ, ವೆಂಕಣ್ಣಯ್ಯನವರು ಸೆಂಟ್ರಲ್ ಕಾಲೇಜು ಸಂಘದ ಉಪಾಧ್ಯಕ್ಷರಾಗಿ ಕೆಲವರ್ಷ ದುಡಿದರು. ಅವರು ೧೯೨೬-೨೭ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾಗಿ ನೇಮಕಗೊಂಡ ಮೇಲೆ, ಅಲ್ಲೊಂದು ಕರ್ಣಾಟಕ ಸಂಘವನ್ನು ಹುಟ್ಟುಹಾಕಿದರು. ಆಗ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಅಧ್ಯಕ್ಷರಾಗಿದ್ದ ಬಿ. ಎಂ. ಶ್ರೀಕಂಠಯ್ಯನವರು ಈ ಸಂಘಕ್ಕೂ ಅಧ್ಯಕ್ಷರಾದರಲ್ಲದೆ ತಾವು ನಿವೃತ್ತರಾಗುವವರೆಗೂ ಎರಡೂ ಸಂಘಗಳ ಅಧ್ಯಕ್ಷರಾಗಿದ್ದರು. ಸಂಘ ಪ್ರಾರಂಭವಾದ ಮಾರನೆಯ ವರ್ಷವೇ ಕಿರಿಯ ಕಾಣಿಕೆ-ವಿದ್ಯಾರ್ಥಿಗಳಿಂದ ರಚಿತವಾದ ಕವನಗಳ ಸಂಕಲನ-ಪ್ರಕಟವಾಯಿತು. ೧೯೩೦ರಲ್ಲಿ ಅದೇ ಮಾದರಿಯ ತಳಿರು ಎಂಬ ಹೊತ್ತಗೆ ಪ್ರಕಟವಾಯಿತು. ಇಂಗ್ಲಿಷ್ ಗೀತೆಗಳು ಸಂಕಲನದಿಂದ ಸ್ಫೂರ್ತಿಗೊಂಡು ಹೊಸಕವಿತೆಯ ಸೃಷ್ಟಿಗೆ ತೊಡಗಿದ್ದ ತರುಣ ಕವಿಗಳು ಇವೆರಡರ ಮೂಲಕ ಬೆಳಕಿಗೆ ಬಂದರು. ಅವರ ಪೈಕಿ ಕಾವ್ಯ ರಚನೆಯನ್ನು ಮುಂದುವರಿಸಿಕೊಂಡು ಬಂದವರು-ಕೆ. ವಿ. ಪುಟ್ಟಪ್ಪ (ಕುವೆಂಪು), ಪು. ತಿ. ನರಸಿಂಹಾಚಾರ್, ಜಿ. ಪಿ, ರಾಜರತ್ನಂ, ರಾಘವ (ಎಂ.ವಿ. ಸೀತಾರಾಮಯ್ಯ) ಮತ್ತು ದಿನಕರ ದೇಸಾಯಿ. ೧೯೩೦ರಲ್ಲಿ, ಪ್ರಸಿದ್ಧ ಕಾದಂಬರಿಕಾರ ಗಳಗನಾಥರನ್ನು ಸಂಘ ಬರಮಾಡಿಕೊಂಡು ಸನ್ಮಾನಿಸಿ ಬಿನ್ನವತ್ತಳೆ ಅರ್ಪಿಸಿತು. ಕುಮಾರವ್ಯಾಸ ಜಯಂತಿಯನ್ನು (೧೯೩೧) ನಡೆಸಿ ಮೂರು ದಿನ ಸುಪ್ರಸಿದ್ಧ ಗಮಕಿಗಳಿಂದ ಕನ್ನಡ ಭಾರತದ ಕಥಾ ಪ್ರಸಂಗಗಳನ್ನು ವಾಚನ ಮಾಡಿಸಿತು. ಈ ಉತ್ಸವದ ಸ್ಮಾರಕವಾಗಿ, ೧೯೪೦ರಲ್ಲಿ ಕುಮಾರವ್ಯಾಸ ಪ್ರಶಸ್ತಿ ಪ್ರಕಟವಾಯಿತು. ಆಷಾಢಭೂತಿ, ಸಾವಿನ ಸಮಸ್ಯೆ, ನಾಗಾನಂದ-ಇವು ಸಂಘದ ಇತರ ಪ್ರಕಟಣೆಗಳು. ಈ ಸಂಘದ ಕಾರ್ಯಪ್ರಮಾಣ ಚಿಕ್ಕದಾದರೂ ತನ್ನ ಹಿರಿಯ ಸೋದರ ಸಂಘದೊಂದಿಗೆ - ಮುಂದೆ ನಾಡಿನ ಕಾಲೇಜುಗಳಲ್ಲಿ ಶಾಲೆಗಳಲ್ಲಿ ಇತರ ಕಡೆಗಳಲ್ಲಿ ಅಸಂಖ್ಯಾತವಾಗಿ ಕರ್ನಾಟಕ ಸಂಘಗಳು ಸ್ಥಾಪನೆಗೊಳ್ಳಲು ಮಾರ್ಗದರ್ಶಕವಾಗಿ ಕೆಲಸಮಾಡಿತು.

ಬೆಂಗಳೂರು ಸರ್ಕಾರಿ ಕಾಲೇಜಿನ ಕರ್ಣಾಟಕ ಸಂಘ

[ಬದಲಾಯಿಸಿ]

ಕಾಲೇಜಿನ ಕರ್ಣಾಟಕ ಸಂಘಗಳು ಏನೆಲ್ಲ ಮಾಡಬಹುದು ಎಂಬುದಕ್ಕೆ ಈ ಸಂಘ ಇನ್ನೊಂದು ನಿದರ್ಶನ. ೧೯೫೯ರಲ್ಲಿ ಪ್ರಾರಂಭವಾದ ಈ ಸಂಘ ಅದ್ಭುತವಾಗಿ ಕೆಲಸಮಾಡಿದೆ. ಚೀಣೀ ಆಕ್ರಮಣ ಕಾಲದಲ್ಲಿ ಸಮರ ಸಮಯ ಕವಿಸಮ್ಮೇಳವೊಂದನ್ನು ಸಂಘ ನಡೆಸಿತು. ವಿದ್ಯಾರ್ಥಿ ಬರಹಗಳ ಪ್ರಕಟಣೆಯ ಜೊತೆಗೆ, ಎಂ. ವಿ. ಸೀತಾರಾಮಯ್ಯನವರಿಂದ ಸಂಪಾದಿತವಾದ ಕವಿರಾಜಮಾರ್ಗವನ್ನು ಪ್ರಕಟಿಸಿ ಸಂಪಾದಕರ ಸಂಭಾವನೆಯನ್ನೂ ತನ್ನ ಲಾಭಾಂಶವನ್ನೂ ಕೂಡಿಸಿ ಕನ್ನಡ ಎಂ. ಎ. ಪದವೀಧರರಿಗೆ ಚಿನ್ನದ ಪದಕವನ್ನು ಕೊಡಲೆಂದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದತ್ತಿಯನ್ನು ಇಟ್ಟಿತು. ೧೯೨೧ರಷ್ಟು ಹಿಂದೆಯೇ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಕೆ. ಪಿ. ಪುಟ್ಟಣ್ಣಶೆಟ್ಟರು ‘ಪ್ರತಿಯೊಂದು ಊರಿನಲ್ಲಿಯೂ ಕರ್ಣಾಟಕ ಸೇವಾ ಸಂಘಗಳು ಏರ್ಪಡಬೇಕು. ಅವೆಲ್ಲವೂ ಈ ಸಂಸ್ಥೆಗೆ (ಪರಿಷತ್ತಿಗೆ) ಶಾಖೆಗಳಾಗಬೇಕು’ ಎಂದೂ ಪ್ರತಿಯೊಂದು ಊರಿನ ಪಾಠಶಾಲೆಯ ಅಧ್ಯಾಪಕರೂ ವಿದ್ಯಾರ್ಥಿಗಳೂ ಕೂಡಿ ಇಂಥ ಸಂಘಗಳನ್ನು ಕಟ್ಟಬೇಕೆಂದೂ ಹೇಳಿ ಕನ್ನಡದ ಅಭಿಮಾನಿಗಳೆಲ್ಲರ ಅಂತರಂಗದ ಅಪೇಕ್ಷೆಗೆ ನುಡಿಗೊಟ್ಟರು; ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಆದರ್ಶವನ್ನು ಮುಂದಿಟ್ಟರು.

೧೯೩೪ರಲ್ಲಿ ಡಿ.ವಿ. ಗುಂಡಪ್ಪನವರು ಪರಿಷತ್ತಿನ ಉಪಾಧ್ಯಕ್ಷರಾದಾಗ, ಕರ್ನಾಟಕ ಸಂಘಗಳನ್ನು ಪರಿಷತ್ತಿನ ಅಂಗಸಂಸ್ಥೆಗಳಾಗಿ ಸೇರಿಸಿಕೊಳ್ಳಲು ನಿಯಮಾವಳಿಯೊಂದು ಸಿದ್ಧವಾಯಿತು. ೧೯೩೬ರಲ್ಲಿ, ಪರಿಷತ್ತಿನ ವಸಂತಸಾಹಿತ್ಯೋತ್ಸವದ ಸಂದರ್ಭದಲ್ಲಿ ಸಂಘಗಳ ಸಮ್ಮೇಳನ ನಡೆಯಿತು. ಆ ವೇಳೆಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಮಧುಗಿರಿ, ತಿಪಟೂರು, ಮೈಸೂರು, ಚನ್ನರಾಯಪಟ್ಟಣ, ಮಂಡ್ಯ, ಕೋಲಾರ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಹೈದರಾಬಾದು, ಬೆಳಗಾಂವಿ, ಕೊಪ್ಪಳ, ಕೊಲ್ಹಾಪುರ, ಕುಮಟ, ಕಾಶೀ ವಿಶ್ವವಿದ್ಯಾನಿಲಯ ಮುಂತಾದ ನಾನಾ ನಗರಗಳಲ್ಲೂ ನಾಡಿನ ಅನೇಕ ಶಾಲೆ ಕಾಲೇಜುಗಳಲ್ಲೂ ಸಂಘಗಳು ಸ್ಥಾಪನೆಯಾಗಿದ್ದವು. ೧೯೩೬ರಲ್ಲಿ ೩೦ ಸಂಘಗಳು ಪರಿಷತ್ತಿಗೆ ಅಂಗಸಂಸ್ಥೆಗಳಾಗಿ ಸೇರಿದ್ದುವು.

ಪರಿಷತ್ತು ಏರ್ಪಡಿಸಿದ್ದ ಪ್ರಥಮ ಸಂಘ ಸಮ್ಮೇಳನದಲ್ಲಿ ಒಟ್ಟು ೨೩ ಸಂಘಗಳಿಂದ ೨೫ ಪ್ರತಿನಿಧಿಗಳು ಬಂದು ಭಾಗವಹಿಸಿದ್ದರು. ಎಲ್ಲ ಕರ್ನಾಟಕ ಸಂಘಗಳೂ ಪರಿಷತ್ತಿನೊಡನೆ ಕಲೆತು ಒಮ್ಮುಖವಾಗಿ ಹೇಗೆ ಕೆಲಸ ಮಾಡಬಹುದು. ಅನುಸರಿಸಬೇಕಾದ ಕಾರ್ಯಕ್ರಮಗಳು ಮತ್ತು ಮಾಡಬೇಕಾದ ಕೆಲಸಗಳು ಯಾವುವು ಎಂಬ ವಿಚಾರಗಳನ್ನು ಕುರಿತ ೧೫ ನಿರ್ಣಯಗಳನ್ನು ಸಮ್ಮೇಳನ ಅಂಗೀಕರಿಸಿತು. ಅಂದಿನಿಂದ ಈವರೆಗೆ, ವಿಶೇಷವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದು ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ, ಕರ್ನಾಟಕ ಸಂಘಗಳ ಸಂಖ್ಯೆ ಇಮ್ಮಡಿ ಮುಮ್ಮಡಿಯಾಗಿ ಬೆಳೆದಿದೆ. ಬೆಂಗಳೂರು ನಗರವೊಂದರಲ್ಲೇ ಸುಮಾರು ೧೫-೨೦ ಸಂಘಗಳು ಗಣ್ಯವಾಗಿ ಕೆಲಸಮಾಡುತ್ತಿವೆ.

ಶಿವಮೊಗ್ಗ ಕರ್ಣಾಟಕ ಸಂಘ

[ಬದಲಾಯಿಸಿ]

ಸ್ಥಳೀಯ ಸಂಘವೊಂದು ಎಷ್ಟರಮಟ್ಟಿಗೆ ಕೆಲಸಮಾಡಬಹುದು ಎಂಬುದಕ್ಕೆ ಶಿವಮೊಗ್ಗದ ಕರ್ಣಾಟಕ ಸಂಘವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಎ. ಸೀತಾರಾಂ ಮತ್ತು ಬಿ. ಆರ್. ಪುಟ್ಟ ನಂಜಪ್ಪ ಇವರ ಉತ್ಸಾಹದ ಫಲವಾಗಿ, ಆ ವೇಳೆಗಾಗಲೇ ಕನ್ನಡದ ಶ್ರೇಷ್ಠಕವಿ ಎಂದು ಹೆಸರಾಗಿದ್ದ ಕೆ. ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ೧೯೩೦ರ ನವೆಂಬರ್ ೮ರಂದು ಸ್ಥಾಪಿತವಾದ ಶಿವಮೊಗ್ಗದ ಕರ್ಣಾಟಕ ಸಂಘ ಈಗ ೮೦ ವರ್ಷ ಪ್ರಾಯದ ಸಂಸ್ಥೆ. ೧೯೩೪ರಲ್ಲಿ ಈ ಸಂಘ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘವನ್ನು ಬರಮಾಡಿಕೊಂಡು ಒಂದು ಉಪನ್ಯಾಸ ಸಪ್ತಾಹವನ್ನು ಏರ್ಪಾಡು ಮಾಡಿತ್ತು. ಈ ವಿಶೇಷ ಕಾರ್ಯಕ್ರಮದ ಬಗೆಗೆ ಬರೆಯುತ್ತ ಪ್ರಬುದ್ಧ ಕರ್ಣಾಟಕ ತನ್ನ ೫೭ನೆಯ ಸಂಚಿಕೆಯಲ್ಲಿ (೧೯೩೪ರ ೧೫-೩ನೆಯ ಸಂಚಿಕೆ) ವ್ಯಕ್ತಪಡಿಸಿದ ಪ್ರಶಂಸೆಯ ಮಾತುಗಳು ಉಲ್ಲೇಖನಾರ್ಹ: ‘ಶಿವಮೊಗ್ಗದ ಕರ್ಣಾಟಕ ಸಂಘ ನಮ್ಮ ನಾಡಿನ ಒಂದು ಅತ್ಯಂತ ಪ್ರಬಲವಾದ ಸಂಘ. ಅದು ಹುಟ್ಟಿ ಮೂರೇ ವರ್ಷಗಳಾಗಿದ್ದರೂ ಅದರ ಕಾರ್ಯ ವಿಸ್ತಾರವೂ ಗ್ರಂಥ ಪ್ರಕಟಣೆಯೂ ಧನ ಸಂಪತ್ತಿಯೂ ಅದಕ್ಕೆ ಕರ್ನಾಟಕ ಸಂಘಗಳಲ್ಲಿ ಅಗ್ರಸ್ಥಾನವನ್ನು ಗಳಿಸುವಂತಿವೆ. ಇವು ಕೇವಲ ಅಭಿಮಾನದ ಇಲ್ಲವೆ ಅತಿಶಯೋಕ್ತಿಯ ಮಾತಲ್ಲ ಎಂಬುದು, ಸಂಘ ಈವರೆಗೆ ನಡೆಸಿರುವ ವೈವಿಧ್ಯಪೂರ್ಣವೂ ವಿಪುಲವೂ ಆದ ಕಾರ್ಯಕ್ರಮಗಳ ಸಂಕ್ಷಿಪ್ತ ಪರಿಚಯದಿಂದ ಮಾತ್ರ ವೇದ್ಯವಾಗತಕ್ಕದು’.

ಸಂಘ ನಡೆಸಿರುವ ಕಾರ್ಯಕ್ರಮಗಳನ್ನು (ಅವು ಸಂಘದ ಮೂಲ ಉದ್ದೇಶಗಳಿಗೆ ಅನುಗುಣವಾಗಿಯೂ ಇರುವುದರಿಂದ) ಹೀಗೆ ವರ್ಗೀಕರಿಸಬಹುದು. (೧) ಕವಿಗಳನ್ನೂ ಲೇಖಕರನ್ನೂ ಬರಮಾಡಿಕೊಂಡು ಅವರ ಕೈಯಿಂದ ಕನ್ನಡ ಸಮಕಾಲೀನ ಸಾಹಿತ್ಯದ ಪರಿಚಯ ಮಾಡಿಸಿಕೊಡುವುದು; (೨) ಆಧುನಿಕ ನಾಟಕಗಳ ಅಭಿನಯ ; (೩) ಕನ್ನಡ ಪ್ರಾಚೀನ ಸಾಹಿತ್ಯದ ವಿಮರ್ಶಾತ್ಮಕ ಪರಿಚಯ; (೪) ವಿದ್ಯಾರ್ಥಿಗಳಿಗಾಗಿ ಕಾವ್ಯವಾಚನ ಸ್ಪರ್ಧೆ ; (೫) ಕರ್ನಾಟಕದ ಕವಿಗಳ, ಮಹಾಪುರುಷರ ಜಯಂತ್ಯುತ್ಸವಗಳು ; (೬) ಸಂಸ್ಕೃತಕಾವ್ಯಗಳ ಪರಿಚಯ ಭಾಷಣಗಳು; (೭) ಆಂಗ್ಲ ಮತ್ತು ಇತರ ಭಾಷಾ ಸಾಹಿತ್ಯಗಳ ಪರಿಚಯಾತ್ಮಕ ಭಾಷಣಗಳು ; (೮) ಪುಸ್ತಕಭಂಡಾರ ಸ್ಥಾಪನೆ.

ಉಭಯ ಭಾಷಾವಿದ್ವಾಂಸರಾಗಿದ್ದ ದಿವಂಗತ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು ಸಂಘದ ಅಧ್ಯಕ್ಷರಾಗಿದ್ದುದು ಸ್ಮರಣೀಯ. ದೇಶಪಾಂಡೆ ಗುರುರಾಯರೂ (ಇವರು ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘಕ್ಕೂ ಪ್ರಥಮ ಕಾರ್ಯದರ್ಶಿಗಳಾಗಿದ್ದುದು ಗಮನಾರ್ಹ) ಕೂಡಲಿ ಚಿದಂಬರಂ (ಈಗಿನ ಕಾವ್ಯಾಲಯ ಪ್ರಕಾಶನದ ಮಾಲೀಕರು) ಅವರೂ ಸಂಘದ ಪ್ರಥಮ ಕಾರ್ಯದರ್ಶಿಗಳು. ಮೇಲ್ಕಂಡ ಕಾರ್ಯಕ್ರಮಗಳ ಪ್ರಕಾರ ನಡೆದ ಉಪನ್ಯಾಸಗಳು, ಕಾವ್ಯವಾಚನಗಳು, ನಾಟಕಪ್ರದರ್ಶನಗಳು ಮುಂತಾದವನ್ನು ಹೆಸರಿಸುತ್ತ ಹೋದರೆ ದೊಡ್ಡ ಪಟ್ಟಿಯಾಗುವುದು. ಆದರೆ, ಸಂಘ ಪ್ರಕಟಿಸಿರುವ ಗ್ರಂಥಮಾಲೆಯನ್ನೂ ಒಂದೆರಡು ವಿಶೇಷ ಸಂಗತಿಗಳನ್ನೂ ತಿಳಿಸಿದ್ದರೆ, ಇತರ ಸಂಘಗಳಿಗೆ ಸ್ಫೂರ್ತಿಕೊಡುವಂಥ ಅಂಶಗಳನ್ನೇ ಮರೆತಂತಾಗುವುದು.

ಸಂಘ ಈವರೆಗೆ ಪ್ರಕಟಿಸಿರುವ ಗ್ರಂಥಗಳು ಇವು : ಮೊದಲ ಮೂರು ವರ್ಷಗಳಲ್ಲಿ ಕೆ. ವಿ. ಪುಟ್ಟಪ್ಪನವರ ಸಾಹಿತ್ಯ ಪ್ರಚಾರ, ರಕ್ತಾಕ್ಷಿ, ಪಾಂಚಜನ್ಯ ; ಜಿ. ಪಿ. ರಾಜರತ್ನಂ ಅವರ ಗಂಡುಗೊಡಲಿ, ಹನಿಗಳು. ಆಮೇಲೆ, ಬೇರೆ ಬೇರೆ ವರ್ಷಗಳಲ್ಲಿ-ಆನಂದರ ಮಾಟಗಾತಿ ; ಪುಟ್ಟಪ್ಪನವರ ನವಿಲು; ನಾ. ಕಸ್ತೂರಿಯವರ ಪಾತಾಳದಲ್ಲಿ ಪಾಪಚ್ಚಿ (ಆಲಿಸ್ ಇನ್ ವಂಡರ್ಲ್ಯಾಂಡ್) ಎಂಬ ಸಚಿತ್ರ ಮಕ್ಕಳ ಪುಸ್ತಕ; ಟಿ. ಎಸ್. ವೆಂಕಣ್ಣಯ್ಯ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಸಹಕರಿಸಿ ಸಂಪಾದನೆ ಮಾಡಿದ ರಾಘವಾಂಕನ ಸಿದ್ಧರಾಮ ಚರಿತೆ; ರಾಜರತ್ನಂ ಅವರ ನರಕದಲ್ಲಿ ನ್ಯಾಯ; ಎ. ಎನ್. ಮೂರ್ತಿರಾಯರ ಹಗಲುಗನಸುಗಳು; ಡಿ. ಎಲ್. ನರಸಿಂಹಾಚಾರ್ಯರಿಂದ ಸಂಪಾದಿತವಾದ ಶಾಂತಿನಾಥನ ಸುಕುಮಾರ ಚರಿತೆ; ಎಸ್. ವಿ. ಕೃಷ್ಣಮೂರ್ತಿರಾಯರ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ-ಇತ್ಯಾದಿ.

ಸಂಘ ೧೯೫೦ರಲ್ಲಿ ಪರಿಷತ್ತಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿತು. ಕವಿ ದ. ರಾ. ಬೇಂದ್ರೆ ಆ ವರ್ಷದ ಸಮ್ಮೇಳನಾಧ್ಯಕ್ಷರು.

ಶಿವಮೊಗ್ಗದ ಪ್ರಸಿದ್ಧ ಮಂಡಿವರ್ತಕರಾದ ಹಸೂಡಿ ವೆಂಕಟಶಾಸ್ತ್ರಿಗಳು ೪೦,೦೦೦ ರೂಪಾಯಿ ಮುಟ್ಟಿಸಿ, ಸಂಘಕ್ಕೆ ಭವ್ಯ ಭವನವನ್ನು ಕಟ್ಟಿಸಿಕೊಟ್ಟರು. ೧೧ನೆಯ ಫೆಬ್ರವರಿ ೧೯೪೩ರಲ್ಲಿ ಮೈಸೂರಿನ ಅಂದಿನ ಶ್ರೀಮನ್ಮಹಾರಾಜರವರಾದ ಜಯಚಾಮರಾಜೇಂದ್ರ ಒಡೆಯರವರು ಭವನದ ಉದ್ಘಾಟನೆ ಮಾಡಿದರು. ಪ್ರಾಯಶಃ ಕರ್ನಾಟಕ ಸಂಘಗಳಲ್ಲೆಲ್ಲ ಶಿವಮೊಗ್ಗ ಕರ್ನಾಟಕ ಸಂಘವೇ ಸ್ವಂತ ಕಟ್ಟಡವನ್ನು ಹೊಂದಿರುವುದರಲ್ಲಿ ಮೊದಲನೆಯದು ಎಂದು ಕಾಣುತ್ತದೆ.

ಇತರ ಸಂಘಗಳು

[ಬದಲಾಯಿಸಿ]

ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡಿಗರು ವಿಶೇಷವಾಗಿ ಮದರಾಸು, ಮುಂಬಯಿ, ಕಲ್ಕತ್ತ ಈ ಮೂರು ನಗರಗಳಲ್ಲಿ ಮಾತ್ರ ನೆಲಸಿದ್ದರು. ಸ್ವಾತಂತ್ರ್ಯ ಬಂದಮೇಲೆ, ಉದ್ಯೋಗಕ್ಷೇತ್ರ ವಿಸ್ತಾರವಾಗಿ ಕನ್ನಡಿಗರು ಭಾರತದ ಪ್ರಮುಖ ನಗರಗಳಲ್ಲೆಲ್ಲ ಹರಡಿಕೊಂಡಿದ್ದಾರೆ. ಹತ್ತು ಜನ ಕನ್ನಡಿಗರಿರುವ ಕಡೆ ಒಂದು ಕನ್ನಡ ಸಂಘ ಹುಟ್ಟಿಕೊಂಡಿದೆ. ಅವೆಲ್ಲ ಪತ್ರಿಕೆಗಳ ಮೂಲಕ ಪ್ರಖ್ಯಾತವಾಗಿಲ್ಲದಿರಬಹುದು. ಆದರೆ ಅವು ಹೊರನಾಡ ಕನ್ನಡಿಗರ ಕನ್ನಡತನವನ್ನು ಉಳಿಸಿ ಬೆಳೆಸುವ ಹೊಣೆ ಹೊತ್ತಿರುವುದಲ್ಲದೆ, ಪರಪ್ರಾಂತಗಳಲ್ಲಿ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿಗಳಾಗಿವೆ. ಈ ಹೊರನಾಡ ಕರ್ನಾಟಕ ಸಂಘಗಳು ಮೇಲಿನ ಮೂರು ಸಂಘಗಳ ಕಾರ್ಯಸಮೀಕ್ಷೆಯಲ್ಲಿ ಉಲ್ಲೇಖಿಸಿದ ಕೆಲಸವನ್ನೇ ಮಾಡುತ್ತಿವೆ. ಈ ಸಂಘಗಳ ಪೈಕಿ ಮುಂಬಯಿ ಕರ್ಣಾಟಕ ಸಂಘ (೧೯೩೩), ಮುಂಬಯಿಯ ಕನ್ನಡ ಸಂಘ (೧೯೩೬), ನಾಗಪುರದ ಕರ್ಣಾಟಕ ಸಂಘ (೧೯೪೪), ರಂಗಂಪೇಟೆಯ ಕನ್ನಡಸಾಹಿತ್ಯ ಸಂಘ (೧೯೪೩), ದೆಹಲಿ ಕರ್ಣಾಟಕ ಸಂಘ ಇವು ಕೆಲವು ಇಂದಿಗೂ ಕೆಲಸಮಾಡಿಕೊಂಡು ಹೋಗುತ್ತಿವೆ. ಸಿಕಂದರಾಬಾದಿನ ಕನ್ನಡ ಮೈತ್ರೀ ಸಂಘ (೧೯೫೬), ಮುಂಬಯಿಯ ಕರ್ಣಾಟಕ ಸಂಘ, ನಾಗಪುರದ ಕರ್ಣಾಟಕ ಸಂಘ-ಕರ್ನಾಟಕ ಸಂಘ ಇವು ತಮ್ಮದೇ ಆದ ಸ್ವಂತ ಭವನಗಳನ್ನು ಕಟ್ಟಿಕೊಂಡಿವೆ. ಇನ್ನು ಕೆಲವು ಆ ಪ್ರಯತ್ನದಲ್ಲಿವೆ.

ಪ್ರಪಂಚದ ಯಾವುದೇ ಭಾಷಾಲೋಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಭಾಷಾ ಸಾಹಿತ್ಯ ಪ್ರಚಾರಕ್ಕಾಗಿ ಸಂಘಗಳು ಹುಟ್ಟಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಒಂದು ವಿಷಯ ಕನ್ನಡನಾಡು ಈ ಹಿಂದೆ ಅನುಭವಿಸಿದ ಇನ್ನೂ ಅನುಭವಿಸುತ್ತಿರುವ ಅನ್ಯಾಯ ಕ್ಲೇಶ ಪರಂಪರೆಗಳ ದ್ಯೋತಕವಾಗಿರುವುದಲ್ಲದೆ. ಭವ್ಯಭವಿಷ್ಯದ ಸೂಚಕವೂ ಆಗಿದೆ.

ಕರ್ನಾಟಕ ಮತ್ತು ಕನ್ನಡಕ್ಕೆ ಸಂಬಂಧಿಸಿದ ಸಂಘಗಳು ಇಂದು ಅಸಂಖ್ಯ ಸಂಖ್ಯೆಯಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ತು (ನೋಡಿ) ಇಡೀ ರಾಜ್ಯಾದ್ಯಂತ ಹೋಬಳಿ ಮಟ್ಟದವರೆಗೂ ತನ್ನ ಶಾಖಾ ಸಂಸ್ಥೆಗಳನ್ನು ಹೊಂದಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಣೆ ಮತ್ತು ಪ್ರಸಾರಕ್ಕೆ ಕಂಕಣಬದ್ಧವಾಗಿದೆ. ಇದರಲ್ಲದೆ ಕರ್ನಾಟಕ ಹಿತರಕ್ಷಣಾ ಸಮಿತಿ; ಕರ್ನಾಟಕ ರಕ್ಷಣಾ ವೇದಿಕೆ ಮೊದಲಾದ ಸಂಘಗಳು ಶಾಖೋಪಶಾಖೆಗಳಾಗಿ ತಮ್ಮ ಧ್ಯೇಯಧೋರಣೆಗಳಿಗನುಸಾರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸಿಕೊಂಡು ಬರುತ್ತಿವೆ. ಸರ್ಕಾರವೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳನ್ನು ರಚಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಹಿತಕಾಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ ಇಂದು ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾಗಿ ಪ್ರತ್ಯೇಕ ಸಚಿವ ಖಾತೆಯನ್ನು ಹೊಂದಿದೆ. (ಎಂ.ವಿ.ಎಸ್.)