ಔರಂಗಾಬಾದ್ ಜಿಲ್ಲೆ
ಔರಂಗಾಬಾದ್ ಜಿಲ್ಲೆ
| |
---|---|
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಆಡಳಿತ ವಿಭಾಗ | ಔರಂಗಬಾದ್ ವಿಭಾಗ |
ಜಿಲ್ಲಾ ಕೇಂದ್ರ | ಔರಂಗಬಾದ್, ಮಹಾರಾಷ್ಟ್ರ |
ತಾಲೂಕುಗಳು | ೧. ಔರಂಗಾಬಾದ್, ೨. ಪೈತಾನ್, ೩. ವೈಜಾಪುರ್, ೪.ಗಂಗಾಪುರ್, ೫. ಖುಲ್‍ದಾಬಾದ್, ೬. ಫುಲಾಂಬ್ರಿ, ೭. ಕನ್ನಡ್, ೮.ಸಿಲ್ಲೊಡ್, ೯. ಸೊಯ್ಗೊನ್ |
Government | |
• ಲೋಕಸಭಾ ಕ್ಷೇತ್ರ/ಗಳು | ೧.ಔರಂಗಾಬಾದ್ ೨. ಜಾಲ್ನಾ, ಜಾಲ್ನಾ ಜಿಲ್ಲೆ[೧] |
ಜನಸಂಖ್ಯಾ ವಿಜ್ಞಾನ | |
• ಸಾಕ್ಷರತೆ | 61.15% |
• ಲಿಂಗಾನುಪಾತ | 924 |
ಮುಖ್ಯ ಹೆದ್ದಾರಿಗಳು | NH-211 |
ಸರಾಸರಿ ವಾರ್ಷಿಕ ಮಳೆ | 734 mm |
ಔರಂಗಾಬಾದ್ ಮಹಾರಾಷ್ಟ್ರದಲ್ಲಿರುವ ಒಂದು ಜಿಲ್ಲೆ ಮತ್ತು ಜಿಲ್ಲಾ ಆಡಳಿತ ಕೇಂದ್ರ. 1956ರ ವರೆಗೂ ಇದು ಹೈದರಾಬಾದ್ ರಾಜ್ಯದಲ್ಲಿತ್ತು. ಪುನಕ್ಕೆ ಈಶಾನ್ಯದಲ್ಲಿ 330 ಕಿಮೀ ದೂರದಲ್ಲಿ. ಮುಂಬಯಿಗೆ ಪುರ್ವ ಈಶಾನ್ಯಗಳ ನಡುವೆ 220 ಕಿಮೀ. ದೂರದಲ್ಲಿ ಕೌನ್ ನದಿಯ ದಡದ ಮೇಲಿದೆ. ಹೈದರಾಬಾದ್ ಮನ್ಮಾಡ್ ರೈಲುಮಾರ್ಗದಲ್ಲಿ ಔರಂಗಾಬಾದ್ ಒಂದು ನಿಲ್ದಾಣ.
ಚರಿತ್ರೆ
[ಬದಲಾಯಿಸಿ]ಔರಂಗಾಬಾದಿನ ಪುರ್ವದ ಹೆಸರು ಖಿಡ್ಕಿ (ಖಿರ್ಕಿ). ಅಹಮದ್ ನಗರದ ಪ್ರಧಾನಿಯಾಗಿದ್ದ ಮಲಿಕ್ ಅಂಬರ್ 1601ರಲ್ಲಿ ಇದನ್ನು ಸ್ಥಾಪಿಸಿದ.https://www.maharashtratourism.net/cities/aurangabad/history.html 1636ರಲ್ಲಿ ದಖನ್ ಪ್ರಾಂತ್ಯಗಳ ವೈಸ್‍ರಾಯ್ ಆಗಿ ಬಂದ ಔರಂಗಜೇಬ್ ಇದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡು ಇದಕ್ಕೆ ಈಗಿನ ಹೆಸರಿಟ್ಟ. ನಿಜಾ಼ಮರು ದೆಹಲಿಯ ಸಾಮ್ರಾಜ್ಯದಿಂದ ಸ್ವತಂತ್ರರಾದ ಮೇಲೆ ಈ ನಗರ ಅವರ ರಾಜಧಾನಿಯಾಗಿ ಮುಂದುವರಿಯಿತಾದರೂ ಮುಂದೆ ಅವರು ತಮ್ಮ ರಾಜಧಾನಿಯನ್ನು ಹೈದರಾಬಾದಿಗೆ ವರ್ಗಾಯಿಸಿದಾಗಿನಿಂದ ಈ ನಗರದ ಪ್ರಾಮುಖ್ಯ ಕುಂದಲಾರಂಭಿಸಿತು. 1956ರಲ್ಲಿ ಭಾರತದ ರಾಜ್ಯಪುನರ್ವಿಂಗಡಣೆಯಾದಾಗ ಇದೂ ಔರಂಗಾಬಾದ್ ಜಿಲ್ಲೆಯೂ ಮುಂಬಯಿ ರಾಜ್ಯದಲ್ಲಿ ಸೇರಿದುವು. 1960ರಲ್ಲಿ ಇವು ಮಹಾರಾಷ್ಟ್ರದಲ್ಲಿ ಮುಂದುವರಿದುವಲ್ಲದೆ ಈ ವಿಭಾಗಕ್ಕೆ ಔರಂಗಾಬಾದ್ ನಗರವೇ ಕೇಂದ್ರವಾಯಿತು. ಔರಂಗಾಬಾದ್ ನಗರದ ಸುತ್ತಲೂ ಕಲ್ಲಿನಿಂದ ಕಟ್ಟಿದ ಭದ್ರವಾದ ಕೋಟೆಯಿದೆ. ನಗರಕ್ಕೆ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಮಾರ್ಗಗಳುಂಟು. ಇಲ್ಲಿ ಮರಾಠ್ವಾಡಾ ವಿಶ್ವವಿದ್ಯಾನಿಲಯವೂ ಹತ್ತಿ ಗಿರಣಿಯೂ ಇವೆ.
ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]ಪ್ರಾಚೀನವಾದ ಪ್ರತಿಷ್ಠಾನಪುರ-ಉಜ್ಜಯಿನಿ ವಾಣಿಜ್ಯಮಾರ್ಗ ಔರಂಗಾಬಾದಿನ ಬಳಿಯಲ್ಲಿ ಹಾದುಹೋಗುತ್ತದೆ. ಬೃಹತ್ ಪರ್ವತಶ್ರೇಣಿಗಳ ಮಧ್ಯೆ ವಿಶಾಲ ಬಯಲಿನಲ್ಲಿರುವ ಔರಂಗಾಬಾದ್ ಪ್ರಾಚೀನ ಅವಶೇಷಗಳಿಗೆ ಪ್ರಸಿದ್ಧವಾದುದ್ದು. ಇಲ್ಲಿ ಬೆಟ್ಟಸಾಲಿನಲ್ಲಿ ಕೊರೆದ ಬೌದ್ಧರ 11 ಚೈತ್ಯ ಮತ್ತು ವಿಹಾರ ಗುಹೆಗಳಿವೆ. 4ನೆಯ ಗುಹೆಯಲ್ಲಿ ಪ್ರ.ಶ. 2ನೆಯ ಶತಮಾನದ ಹೀನಯಾನ ಪಂಥದ ಭವ್ಯ ಬುದ್ಧನ ಮೂರ್ತಿಯುಳ್ಳ ಚೈತ್ಯ ಹಾಗೂ ಚೈತ್ಯವಿಹಾರಗಳಿವೆ. 1, 8, 9ನೆಯ ಗುಹೆಗಳು ಅಪುರ್ಣ. ಗರ್ಭಗುಡಿಯನ್ನು ಹಿಂದಿನ ಗೋಡೆಯಿಂದ ಬೇರ್ಪಡಿಸಿ, ಪ್ರದಕ್ಷಿಣ ಪಥವಿಟ್ಟಿರುವುದು ಈ ಚೈತ್ಯಗಳಲ್ಲಿ ಹೆಚ್ಚಾಗಿ ಕಾಣುತ್ತದೆ. 3ನೆಯ ಗುಹೆಯಲ್ಲಿರುವ ಸುತಸೋಮಜಾತಕದ ನಿರೂಪಣೆ, ಸ್ತಂಭಗಳ ವೈವಿದ್ಯಮಯ ಕುಸುರಿ ಕೆಲಸ. ಭಕ್ತವೃಂದ ಇವೂ 6ನೆಯ ಗುಹೆಯಲ್ಲಿ ಬೋಧಿಸತ್ತ್ವನೊಡನೆ ಇರುವ ಸ್ತ್ರೀಮೂರ್ತಿಗಳ ಸಾಲು, ಅವಲೋಕಿತೇಶ್ವರ ಪದ್ಮಪಾಣಿ. ತಾರಾವೃಂದದ ಚೌಕಟ್ಟು ಮತ್ತು ನೃತ್ಯಗೋಷ್ಠಿ ಇವೂ ಅಂಗಸೌಷ್ಠವ, ಚೆಲುವು, ಶಿಲ್ಪಕಲೆಯ ಪ್ರತಿಭೆ ಮತ್ತು ಕುಶಲತೆಯ ಅತ್ಯುನ್ನತಿಯ ಗುರುತುಗಳಿವೆ. ಅಜಂತ ಗುಹೆಗಳಲ್ಲಿರುವ ಹಾಗೆ ಅಲ್ಲಲ್ಲಿ ವರ್ಣಚಿತ್ರಗಳ ತುಣುಕುಗಳಿವೆ. ಇತ್ತೀಚೆಗೆ ದೃಷ್ಟಿಗೋಚರವಾದ ಎರಡು ಗುಹೆಗಳ ಪೈಕಿ ಒಂದರಲ್ಲಿ ವೀರಭದ್ರ, ಸಪ್ತಮಾತೃಕೆಯರು, ಗಜಾನನ, ದುರ್ಗಾ ಮತ್ತು ಬುದ್ಧನ ಮೂರ್ತಿಗಳಿರುವುದು ಒಂದು ವಿಶೇಷ. ದಖನಿನ ತಾಜ್‍ಮಹಲ್ ಎಂದು ಪ್ರಸಿದ್ಧವಾಗಿರುವ ಬೀಬೀಕಾ-ಮುಕ್ಬರಾದಲ್ಲಿ ಔರಂಗಜೇಬ್‍ನ ಪತ್ನಿ ದಿಲ್ರಸ್ ಬಾನು ಬೇಗಮಳ (1660) ಗೋರಿಯಿದೆ. ಅತುಲ್ಲಾ ಮತ್ತು ಹನ್ಸ್ವತ್ ರೈ ಇದರ ವಾಸ್ತುಶಿಲ್ಪಿಗಳೆಂದು ಮುಖದ್ವಾರದ ಬಲಬಾಗಿಲಿನ ಲೋಹಶಾಸನದಲ್ಲಿದೆ. ಗುಮ್ಮಟದ ಸುತ್ತಲೂ ಒತ್ತಾಗಿ ಸಣ್ಣ ಸಣ್ಣ ಗುಮ್ಮಟಗಳಿದ್ದು, ಎತ್ತರ ಅಗಲಗಳು ಹದವಾಗಿರದೆ, ತಾಜ್ಮಹಲಿನ ಸನ್ನಿವೇಶ, ಪ್ರಮಾಣಬದ್ಧ ವಾಸ್ತುಶಿಲ್ಪ, ವೈಶಾಲ್ಯ, ಚೆಲುವು ಮತ್ತು ಕಲಾಭಿರುಚಿಗಳಿಗೆ ಇದು ಸರಿಗಟ್ಟದಿದ್ದರೂ ಒಂದು ವಿಧವಾದ ಬಿಳಿಗಾರೆಯಿಂದ ರಚಿಸಿದ (ಸ್ಟಕೊ ಪ್ಲಾಸ್ಟರ್) ಅಲಂಕಾರಿಕ ಚಿತ್ರಗಳಿಗೂ ಲಾವಣ್ಯಕ್ಕೂ ಉದಾಹರಣೆಯಾಗಿರುವ ಮೊಗಲರ ಶೈಲಿಯ ಘನವಾದ ಕಟ್ಟಡ.ಕೆಲವು ಮಸೀದಿಗಳು, ನೌಖಂದ್ ಅರಮನೆ, ಕಲ್ಲಿನ ಕೋಟೆಗಳಲ್ಲದೆ, ಮಲಿಕ್ ಅಂಬರನ ಕಾಲದಲ್ಲಿ ನೀರು ಪುರೈಸುವ ಯೋಜನೆಯ ಭಾಗವಾಗಿ ಅದರ ಸರಳತೆಯಷ್ಟೆ ಚತುರತೆಯಿಂದ ಕಟ್ಟಿದ ನೀರಿನ ಕಾಲುವೆಯುಳ್ಳ ಯಂತ್ರ ಪಂಚಕ್ಕಿ ಕುತೂಹಲಜನಕವಾಗಿದೆ.ಜಗತ್ಪ್ರಸಿದ್ಧ ಎಲ್ಲೋರ ಮತ್ತು ಅಜಂತ ಗುಹೆಗಳು ಇರುವುದು ಈ ಜಿಲ್ಲೆಯಲ್ಲೇ. 13ನೆಯ ಶತಮಾನದ ಕೋಟೆಯನ್ನುಳ್ಳ ದೌಲತಾಬಾದ್ ಇದೇ ಜಿಲ್ಲೆಯಲ್ಲಿದೆ. ಔರಂಗಾಬಾದಿನಿಂದ 14 ಕಿಮೀ ದೂರದಲ್ಲಿ ಬೆಟ್ಟವೊಂದರ ಮೇಲಿರುವ ಈ ನಗರದ ಪುರ್ವದಹೆಸರು ದೇವಗಿರಿ. 14ನೆಯ ಶತಮಾನದಲ್ಲಿ ದೆಹಲಿಯ ಸುಲ್ತಾನನಾಗಿದ್ದ ಮಹಮ್ಮದ್ ತೊಗಲಖ್ ತನ್ನ ರಾಜಧಾನಿಯನ್ನು ಇಲ್ಲಿಗೆ ಬದಲಾಯಿಸಿ ಇದಕ್ಕೆ ದೌಲತಾಬಾದ್ (ವೈಭವನಗರ) ಎಂದು ಹೆಸರಿಟ್ಟ. ಗೋದಾವರಿ ನದಿಯ ದಡದಲ್ಲಿರುವ ಪೈಠಣ ಒಂದು ಯಾತ್ರಾಸ್ಥಳ. 17ನೆಯ ಶತಮಾನದಲ್ಲಿದ್ದ ವೈಷ್ಣವ ಸಂತ ಏಕನಾಥ ದೇಹತ್ಯಾಗ ಮಾಡಿದ್ದು ಇಲ್ಲೇ. ಔರಂಗಾಬಾದ್ ನಗರಕ್ಕೆ 28 ಕಿಮೀ ಖುಲ್ದಾಬಾದಿನಲ್ಲಿ ಚಕ್ರವರ್ತಿ ಔರಂಗ್ಜೇóಬನ ಸಮಾಧಿಯಿದೆ. ಅದೊಂದು ತೀರಸರಳವಾದ ಗೋರಿ. ತಾನು ಬಟ್ಟೆ ಹೊಲಿದು ಸಂಪಾದಿಸಿದಷ್ಟು ಹಣದಿಂದ ಮಾತ್ರ ತನ್ನ ಗೋರಿ ನಿರ್ಮಿಸಬೇಕೆಂದು ಔರಂಗಜೇಬ್ ಸೂಚನೆ ನೀಡಿದ್ದನೆಂದು ಪ್ರತೀತಿ.
ವಿಸ್ತೀರ್ಣ ಮತ್ತು ಜನಸಂಖ್ಯೆ
[ಬದಲಾಯಿಸಿ]ಔರಂಗಾಬಾದ್ ಜಿಲ್ಲೆಯ ವಿಸ್ತೀರ್ಣ 16,353 ಚಕಿಮೀ, ಜನಸಂಖ್ಯೆ 3,695,928,[೨]
ಭೌಗೋಳಿಕ
[ಬದಲಾಯಿಸಿ]ಈ ಜಿಲ್ಲೆಯ ಉತ್ತರದಲ್ಲಿರುವುದೇ ಸಹ್ಯಾದ್ರಿಶ್ರೇಣಿ. ಅಜಂತ ಮತ್ತು ಜಾಸ್ನ ಬೆಟ್ಟಗಳು ಇದರಲ್ಲಿವೆ. ಗೋದಾವರಿ ನದಿ ಈ ಜಿಲ್ಲೆಯ ನದಿ.https://sandrp.in/2017/03/08/godavari-basin-in-maharashtra-a-profile/ ಇದರ ಕೆಲವು ಉಪನದಿಗಳು ಈ ಜಿಲ್ಲೆಯಲ್ಲಿ ಹರಿಯುತ್ತವೆ. ಪರ್ವತಗಳ ಇಳಿಜಾರಿನಲ್ಲಿ ದಟ್ಟವಾದ ಕಾಡುಗಳಿವೆ. ಕಾಡುಹಂದಿ, ಕರಡಿ, ತೋಳ ಮುಂತಾದುವು ಅಲ್ಲಿರುವ ವನ್ಯಮೃಗಗಳು. ಹುಲಿ ಚಿರತೆಗಳನ್ನೂ ಕಾಣಬಹುದು. ಈ ಜಿಲ್ಲೆಯ ಭೂಮಿ ಮಸಬು ಮತ್ತು ಮಿಲ್ವಾ ಎಂಬ ಎರಡು ರೀತಿಯದು.
ವಾಣಿಜ್ಯ
[ಬದಲಾಯಿಸಿ]ಜೋಳ, ಸಜ್ಜೆ ಮತ್ತು ಗೋದಿ ಇಲ್ಲಿಯ ಮುಖ್ಯ ಆಹಾರ ಬೆಳೆಗಳು. ದ್ವಿದಳಧಾನ್ಯ ಮತ್ತು ಬತ್ತವನ್ನೂ ಬೆಳೆಯುತ್ತಾರೆ.http://macp.gov.in/sites/default/files/user_doc/Aurangabad%20District%20Booklet.pdf ಹತ್ತಿ ಮತ್ತು ಎಣ್ಣೆಕಾಳುಗಳನ್ನೂ ಬೆಳೆಯುವುದುಂಟು. ನೆಯ್ಗೆ, ಕಿನ್ಕಾಪು ಕೆಲಸ, ಎಣ್ಣೆ ತಯಾರಿಕೆ ಮುಖ್ಯ ಕೈಗಾರಿಕೆಗಳು. ಸಾಗವಾನಿ ಮುಖ್ಯ ಅರಣ್ಯೋತ್ಪನ್ನ.
ಉಲ್ಲೇಖಗಳು
[ಬದಲಾಯಿಸಿ]- ↑ based on - http://164.100.9.199/ecimaps/ecipdf/state_pc_Map/Maharashtra.pdf Archived 2009-03-06 ವೇಬ್ಯಾಕ್ ಮೆಷಿನ್ ನಲ್ಲಿ. Election Commission website
- ↑ "District Census 2011". Census2011.co.in. 2011. Retrieved 2011-09-30.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- http://santeknath.org/kase%20yal.html Archived 2013-07-10 ವೇಬ್ಯಾಕ್ ಮೆಷಿನ್ ನಲ್ಲಿ.
- Aurangabad District website
- Pages using duplicate arguments in template calls
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- ಮಹಾರಾಷ್ಟ್ರದ ಜಿಲ್ಲೆಗಳು
- ಭಾರತದ ಜಿಲ್ಲೆಗಳು