ಸಜ್ಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pearl millet

second name Bajra /Bajri

U.S. pearl millet hybrid for grain
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
P. glaucum
Binomial name
Pennisetum glaucum
Synonyms

Pennisetum americanum (L.) Leeke
Pennisetum typhoides (Burm. f.) Stapf & C. E. Hubb. Pennisetum typhoideum

Pennisetum glaucum

ಸಜ್ಜೆಯು (ಪೆನಿಸೀಟಮ್ ಗ್ಲಾಕಮ್) ಮಿಲಿಟ್‌ನ ಅತ್ಯಂತ ವ್ಯಾಪಕವಾಗಿ ಬೆಳೆಯಲಾದ ಪ್ರಕಾರ. ಪ್ರಾಗೈತಿಹಾಸಿಕ ಕಾಲದಿಂದ ಆಫ್ರಿಕಾ ಮತ್ತು ಭಾರತೀಯ ಉಪಖಂಡದಲ್ಲಿ ಬೆಳೆಯಲಾದ ಸಜ್ಜೆಯು ಆಫ್ರಿಕಾದಲ್ಲಿ ಉತ್ಪತ್ತಿಯಾಗಿ ನಂತರ ಭಾರತದಲ್ಲಿ ಪ್ರವೇಶ ಮಾಡಿತೆಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಭಾರತದಲ್ಲಿನ ಅತ್ಯಂತ ಮುಂಚಿನ ಪುರಾತತ್ವ ದಾಖಲೆಗಳು ಕ್ರಿ.ಪೂ. ೨೦೦೦ರ ಕಾಲಮಾನದ್ದೆಂದು ನಿರ್ಧರಿಸಲಾಗಿದೆ, ಹಾಗಾಗಿ ಆಫ್ರಿಕಾದಲ್ಲಿ ಪಳಗಿಸುವಿಕೆಯು ಇನ್ನೂ ಮೊದಲೇ ನಡೆದಿರಬೇಕು.

ಸಜ್ಜೆಯು ಪ್ರಮುಖ ಕಿರುದಾನ್ಯಗಳಲ್ಲೊಂದು. ವಾಸ್ತವದಲ್ಲಿ ಭಾರತದಲ್ಲಿ ಅಲ್ಲದೆ ಏಷಿಯಾದ ಇತರ ಭಾಗಗಳಲ್ಲಿ ಮತ್ತು ಆಫ್ರಿಕಾದಲ್ಲಿ ಜೋಳವನ್ನು ಕಿರುಧಾನ್ಯಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. [೧][೨] ಆದರೆ ಇದೇ ಪದ್ಧತಿಯನ್ನು ಜಾಗತಿಕ ಮಟ್ಟದಲ್ಲಿ ಬಳಸುವುದಿಲ್ಲ. ಹೀಗಾಗಿ ಅಲ್ಲಿ ಅತಿಹೆಚ್ಚು ಬೆಳೆಯುವ ಕಿರುಧಾನ್ಯ ಪಟ್ಟಿಯಲ್ಲಿ ಸಜ್ಜೆ ಇದೆ. ಸಜ್ಜೆಯನ್ನು ಜಾಗತಿಕವಾಗಿ ಸುಮಾರು ೩೧ ದಶಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತದೆ. ಈ ಧಾನ್ಯದ ಅಡಿ ಅತಿಹೆಚ್ಚು ಪ್ರದೇಶ ಹೊಂದಿರುವುದು ಮತ್ತು ಅತಿಹೆಚ್ಚು ಉತ್ಪಾದನೆ ಮಾಡುವ ದೇಶ ಭಾರತ. ಇತರ ಪ್ರಮುಖ ಬೆಳೆಯುವ ಪ್ರದೇಶವು ಪಶ್ಚಿಮ ಮತ್ತು ಕೇಂದ್ರ ಆಫ್ರಿಕಾದ ಕಿರುಧಾನ್ಯಗಳು ಬೆಳೆಯುವ ಪ್ರದೇಶದ (೧೫.೭ ದಶಲಕ್ಷ ಹೆಕ್ಟೇರು) ಶೇ ೯೦ರಷ್ಟು ಬೆಳೆ ಸಜ್ಜೆ. ಅಲ್ಲದೆ ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ಪ್ರದೇಶಗಳಲ್ಲಿನ ೨ ದಶಲಕ್ಷಕ್ಕೂ ಹೆಚ್ಚು ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತದೆ.[೩] ಕರ್ನಾಟಕದ ಸಜ್ಜೆಯ ಉತ್ಪಾದನೆ ೧.೫ ಲಕ್ಷ ಟನ್ (ವರುಷ ೨೦೦೯-೧೦).

ಸಜ್ಜೆಯು ಒಣ ಮತ್ತು ಅರೆ-ಒಣ ಪ್ರದೇಶದ ಬೆಳೆ.[೪] ಏಷಿಯಾ ಮತ್ತು ಆಫ್ರಿಕಾದಲ್ಲಿ ಇದನ್ನು ಮುಂಗಾರು ಬೆಳೆಯಾಗಿ ಮಳೆಯಾಧಾರಿತ ಬೆಳೆಯಾಗಿ ಬೆಳೆಯಲಾಗುತ್ತದೆ. ಇದನ್ನು ಬರಗಾಲಗಳಿಗೆ ತುತ್ತಾಗುವ, ಕೆಳಮಟ್ಟದ ಭೂಮಿಯ ಫಲವತ್ತತೆಯಿರುವ ಮತ್ತು ಹೆಚ್ಚು ತಾಪಮಾನದ ಪ್ರದೇಶಗಳಲ್ಲಿ ಬೆಳಯಲಾಗುತ್ತದೆ. ಇದು ಉಪ್ಪುಭೂಮಿಗಳಲ್ಲಿ ಬೆಳೆಯಬಲ್ಲದು. ಗೋಧಿ ಮತ್ತು ಮೆಕ್ಕೆ ಜೋಳ ಬೆಳೆಯದ ಹಲವು ಪ್ರದೇಶಗಳಲ್ಲಿ ಇದನ್ನು ಬೆಳೆಯ ಬಹುದು. ಉದಾಹರಣೆಗೆ ಇದನ್ನು ಈಶಾನ್ಯ ಮಾಲಿಯ ಸಹೇಲ್ ಮರುಭೂಮಿಯ ಅಂಚಿನಲ್ಲಿ ಇದನ್ನು ಬೆಳೆಯಲಾಗುತ್ತದೆ.[೩] ಇದನ್ನು ನೈಜೀರಿಯದ ಈಶಾನ್ಯ ಪ್ರದೇಶಗಳಲ್ಲಿ, ವಿಶೇಷವಾಗಿ ಬೊರ್ನೊ ಮತ್ತು ಯೊಬೆ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದ್ದು ಸಜ್ಜೆ ಇಲ್ಲಿಯ ಜನರ ಪ್ರಮುಖ ಆಹಾರ. .[೫] ನೈಜೀರಿಯ ಅಲ್ಲದೆ ಇದನ್ನು ಆಫ್ರಿಕಾದಲ್ಲಿ ನೈಜರ್, ಮಾಲಿ, ಚಾಡ್, ಟಾಂಜೇನಿಯ, ಸುಡಾನ್, ಸೆನೆಗಲ್ ಮತ್ತು ಬುರ್ಕೀನ ಫಾಸೊ ದೇಶಗಳಲ್ಲಿ ಸಹ ಬೆಳೆಯಲಾಗುತ್ತದೆ.[೬]

ಇತಿಹಾಸ[ಬದಲಾಯಿಸಿ]

ಇದನ್ನು ಮೊದಲು ಪಶ್ಚಿಮ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ಕ್ರಿ ಪೂ ೨೦೦೦ ದಿಂದ ೨೫೦೦ರ ನಡುವಿನಲ್ಲಿ ಸಾಗುವಳಿಗೆ ತರಲಾಯಿತು ಎಂದು ಇತ್ತೀಚಿನ ಸಸ್ಯಶಾಸ್ತ್ರೀಯ ಪ್ರಾಚ್ಯಶಾಸ್ತ್ರ ಸಂಶೋಧನೆಗಳು ಸೂಚಿಸುತ್ತವೆ.[೫] ಭಾರತದಲ್ಲಿನ ಈ ಧಾನ್ಯದ ತೀರ ಪುರಾತನ ಇರುವಿಕೆಯ ಪುರಾವೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಹಲ್ಲೂರಿನಲ್ಲಿ ದೊರೆತಿದೆ. ಇದನ್ನು ಅಲ್ಲಿನ ನವಶಿಲಾಯುಗದ ಕಾಲಮಾನದಲ್ಲಿ (ಈ ಯುಗದ ಕಾಲಮಾನ I ಎರಡು ಹಂತಗಳಲ್ಲಿ ಇದ್ದು ಮೊದಲನೆಯ ಹಂತದ ಕಾಲಮಾನ ಕ್ರಿ ಪೂ ೨೦೦೦ ಮತ್ತು ಎರಡನೆಯ ಹಂತದ ಕಾಲಮಾನ ಕ್ರಿ ಪೂ ೧೨೦೦)[೭][೮] ಇದು ಭಾರತೀಯ ಉಪಖಂಡದ ಉತ್ತರಕ್ಕೆ ಆಫ್ರಿಕಾದಿಂದ ಕ್ರಿ ಪೂ ೨೦೦೦ ಸುಮಾರಿಗೆ ಬಂದು ನಂತರ ಕ್ರಿ ಪೂ ೧೫೦೦ ರ ಸುಮಾರಿಗೆ ದಕ್ಷಿಣ ಭಾರತಕ್ಕೆ ಬಂದಿತೆಂದು ಭಾವಿಸಲಾಗಿದೆ.[೫]

ಸಾಗುವಳಿ ಮತ್ತು ಬಳಕೆ[ಬದಲಾಯಿಸಿ]

ಭಾರತದ ಪ್ರಮುಖ ಧಾನ್ಯಗಳ ಬೆಳೆಯುವ ಪ್ರದೇಶ, ಉತ್ಪಾದನೆ ಮತ್ತು ಇಳುವರಿ[೯]
ಧಾನ್ಯ ಪ್ರದೇಶ

(ದಶಲಕ್ಷ ಹೆಕ್ಟೇರ್)

ಉತ್ಪಾದನೆ

(ದಶಲಕ್ಷ ಟನ್ನು)

ಇಳುವರಿ

(ಕಿಲೊ/ಹೆಕ್ಟೇರು)

ಭತ್ತ ೪೩.೭೭ ೯೪.೦೨ ೨೧೪೮
ಗೋಧಿ ೨೭.೭೫ ೭೭.೯೪ ೨೭೭೭
ಸಜ್ಜೆ ೯.೨೬ ೮.೨೯ ೮೯೫
ಜೋಳ ೮.೦೫ ೭.೩೩ ೯೧೧
ಮೆಕ್ಕೆಜೋಳ ೮.೦೧ ೧೭.೦೪ ೨೧೨೮
ಭಾರತದ ರಾಜ್ಯಗಳಲ್ಲಿ ಸಜ್ಜೆಯ ಪ್ರದೇಶ, ಉತ್ಪಾದನೆ ೨೦೦೯-೧೦ ವರುಷ[೧೦]
ರಾಜ್ಯ ಪ್ರದೇಶ

(ದಶಲಕ್ಷ ಹೆಕ್ಟೇರು)

ಉತ್ಪಾದನೆ

(ದಶಲಕ್ಷ ಟನ್ನು)

ರಾಜಸ್ಥಾನ ೫.೧೭ ೨.೦೩
ಉತ್ತರ ಪ್ರದೇಶ ೦.೮೫ ೧.೩೯
ಹರಿಯಾಣ ೦.೫೯ ೦.೮೩
ಗುಜರಾತ್ ೯.೬೭ ೦.೮೩
ಮಹಾರಾಷ್ಟ್ರ ೧.೦೩ ೯.೭೭
ಮಧ್ಯ ಪ್ರದೇಶ ೦.೧೭ ೦.೨೫
ಕರ್ನಾಟಕ ೦.31 ೦.೧೫

ಸಾಗುವಳಿ[ಬದಲಾಯಿಸಿ]

ಸಜ್ಜೆಯನ್ನು ಅದರ ಬೆಳವಣಿಗೆಯ ಅವಧಿಯಲ್ಲಿ ೫೦೦-೬೦೦ ಮಿಮಿ ಮಳೆಯಿರುವ ಬಿಸುಪು ಪ್ರದೇಶಗಳಲ್ಲಿ ಬೆಳಯಲಾಗುತ್ತದೆ. ಆದರೆ ಇದನ್ನು ೪೦೦ ರಿಂದ ೭೫೦ ಮಿಮಿ ಮಳೆಯ ಪ್ರದೇಶಗಳಲ್ಲಿಯೂ ಬೆಳೆಯ ಬಹುದು. ಗಿಡದ ಬೆಳವಣಿಗೆಗೆ ತೇವಾಂಶವಿರುವ ವಾತಾವರಣದ ಅಗತ್ಯವಿದೆ ಆದರೆ ಇದು ನೀರು ನಿಲ್ಲುವಿಕೆಯನ್ನು ಸಹಿಸಲಾರದು. ಭೆಳವಣಿಗೆಗೆ ತಾಪಮಾನ ೨೫° ನಿಂದ ೩೦° ಸೆಂ. ಅತ್ಯುತ್ತಮ. ಸಾಮಾನ್ಯವಾಗಿ ಇದನ್ನು ಮುಂಗಾರು ಮಳೆಯಾಧಾರಿತ (ಖುಷ್ಕಿ) ಬೆಳೆಯಾಗಿ ಬೆಳಯಲಾಗುತ್ತದೆ. ಕರ್ನಾಟಕ ಮತ್ತು ತಮಿಳು ನಾಡುಗಳಲ್ಲಿ ಬೇಸಿಗೆಯಲ್ಲಿ ನೀರಾವರಿ ಬೆಳೆಯಾಗಿಯೂ ಬೆಳೆಯುತ್ತಾರೆ.[೬] ಬೆಳೆಯ ಅವಧಿಯು ನಿರ್ದಿಷ್ಟ ತಳಿಯ ಮೇಲೆ ಆಧಾರ ಪಟ್ಟಿರುತ್ತದೆ. ಆದರೆ ಸಾಮಾನ್ಯವಾಗಿ ಬೆಳೆಯ ಅವಧಿಯು ೭೦ ರಿಂದ ೧೧೦ ದಿನಗಳು.[೧೧]

  • ಬಿತ್ತನೆ: ಜೂನ್‌ ಮಧ್ಯಭಾಗದಿಂದ ಜೂಲೈ ಮಧ್ಯಭಾಗದವರೆಗೂ ಮುಂಗಾರು ಬೆಳೆ ಬಿತ್ತಲು ಉತ್ತಮ ಕಾಲ. ನೀರಾವರಿ ಬೇಸಿಗೆಯ ಬೆಳೆಯನ್ನು ಫಿಬ್ರವರಿ-ಮಾರ್ಚಿನಲ್ಲಿ ಬಿತ್ತಬಹುದು. ಹೆಕ್ಟೇರಿಗೆ ೪-೫ ಕಿಲೊ ಬೀಜ ಬಿತ್ತನೆಗೆ ಸಾಕಾಗುತ್ತದೆ. ಉತ್ತಮ ಸಾಲು ಸಾಲುಗಳ ನಡುವಿನ ಅಂತರವು ೫೦ ಸೆಮೀ ಇರಬೇಕು ಮತ್ತು ಗಿಡ ಗಿಡಗಳ ನಡುವಿನ ಅಂತರವು ೧೦-೧೨ ಸೆಂಮೀ ಇರಬಹುದು. ಇದು ಹೆಕ್ಟೇರಿಗೆ ೧.೫ ರಿಂದ ೨ ಲಕ್ಷ ಸಸ್ಯಗಳನ್ನು ಕೊಡುತ್ತದೆ. ಚೆನ್ನಾಗಿ ಮೊಳಕೆಯೊಡೆಯಲು ಬೀಜವನ್ನು ೪ ಸೆಂಮೀಗೂ ಹೆಚ್ಚು ಆಳಕ್ಕೆ ಬಿತ್ತಬಾರದು. ಕರ್ನಾಟಕವನ್ನು ಒಂದು ಪ್ರದೇಶವಾಗಿ ಗುರುತಿಸಿ (ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳು ನಾಡುಗಳೊಂದಿಗೆ) ಇದಕ್ಕೆ ಕೆಲವು ಬೇರೆಯಾದ ತಳಿಗಳನ್ನು ಶಿಫಾರಸು ಮಾಡಲಾಗಿದೆ.[೬]
ದಕ್ಷಿಣ ಭಾರತಕ್ಕೆ ಶಿಫಾರಸು ಮಾಡಿದ ಸಜ್ಜೆಯ ತಳಿಗಳು[೬]
ಪ್ರದೇಶ ಹೈಬ್ರಿಡು ತಳಿಗಳು ಸುಧಾರಿತ ತಳಿಗಳು
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಎಂಹೆಚ್ ೫೧೫, ಎಂಹೆಚ್ ೫೫೨, ಎಸ್‌ಎಎಂಹೆಚ್-೧೬೬, ಐಸಿಎಂವಿ ೧೫೫, ಎಪಿ ಕಾಂಪೋಸಿಟ್ (ಎಂಟಿ), ಕಾಂಪೋಸಿಟ್ ೩.

ಬಿಡಿ-೧೬೩, ಬಿಡಿ-೧೧೧, ಸಿಜೆ-೧೦೪

ದಕ್ಷಿಣ ಭಾರತ

(ಇವನ್ನು ಉತ್ತರ ಭಾರತದಲ್ಲಿಯೂ ಬೆಳೆಯ ಬಹುದು)

ಹೆಚ್‌ಸಿ-೪, ಜಿಹೆಚ್‌ಬಿ-೫೫೮, ಬಿಕೆ ೫೬೦-೨೩೦ ಐಸಿಟಿಪಿ-೮೨೦೩, ಡಬ್ಲುಸಿಸಿ-೭೫, ಐಸಿಎಮ್‌ಎಸ್-೭೭೦೩, ರಾಜ್ ಬಾಜ್ರ ಚಾರಿ-೨

ಐಸಿಎಂವಿ-೨೨೧, ರಾಜ್-೧೭೧, ಪುಸ-೩೩೪

ನಿರ್ದಿಷ್ಟವಾಗಿ ರಾಜ್ಯಗಳಿಗೆ ಮಾಡಿದ ಶಿಫಾರಸು
ಆಂಧ್ರಪ್ರದೇಶ, ತಮಿಳು ನಾಡು ಹೆಚ್‌ಬಿ ೪, ಹೆಚ್‌ಬಿ ೫, ಪಿಹೆಚ್‌ಬಿ ೧೦, ಪಿಹೆಚ್‌ಬಿ ೧೪ -
ಮಹಾರಾಷ್ಟ್ರ (ಗುಜರಾತಿಗೂ ಇವೇ) ಪಿಹೆಚ್‌ಬಿ ೧೦, ಪಿಹೆಚ್‌ಬಿ ೧೪, ಬಿಜೆ ೧೦೪, ಎಂಬಿಹೆಚ್ ೧೧೦,

ಜಿಹೆಚ್‌ಬಿ ೫೨೬ (ಬೇಸಿಗೆಗೆ), ಪಿಬಿ ೧೮೦

ಪಿಪಿಸಿ ೬
ಕರ್ನಾಟಕ ಬಿಜೆ ೧೦೪, ಎಂಬಿಹೆಚ್ ೧೧೦ ಆರ್‌ಸಿಬಿ ೨
  • ಕಳೆ ಹತೋಟಿ: ಬಿತ್ತನೆಯ ನಂತರದ ೩-೫ ವಾರಗಳು ಕಳೆ ಹತೋಟಿಗೆ ಬಹಳ ಮುಖ್ಯ. ಕಳೆಗಳ ಕಾರಣದಿಂದಾಗಿ ಇಳುವರಿಯು ಶೇ ೨೫-೫೦ರಷ್ಟು ಕಡಿಮೆಯಾಗ ಬಲ್ಲದು. ಮೊದಲ ಸಲ ಸಾಲುಗಳ ನಡುವೆ ಕಳೆತೆಗೆಯುವಾಗ ದಟ್ಟವಾದ ಕಡೆ ಸಜ್ಜೆ ಸಸ್ಯಗಳನ್ನು ತೆಗೆದು ಅಥವಾ ಸಸ್ಯಗಳು ಮೊಳಕೆ ಒಡೆಯದ ಕಡೆ ಬೀಜ ಇರಿಸುವ ಮೂಲಕ ಶಿಫಾರಸು ಮಾಡಿದ ಸಾಲು ಮತ್ತು ಗಿಡಗಳ ನಡುವಿನ ಅಂತರವನ್ನು ಕಾಪಾಡಿಕೊಳ್ಳುವ ಕೆಲಸವನ್ನು ಮಾಡಬಹುದು. ಈ ಕಳೆತೆಗೆಯುವಿಕೆಯನ್ನು ಒಟ್ಟಾರೆ ಎರಡರಿಂದ ಮೂರು ಸಲ ಮಾಡಬಹುದು. ಯಾಂತ್ರಿಕವಾಗಿ (ಕೈಯಿಂದ ಮತ್ತು ಕಳೆಗುದ್ದಲಿಯ ಮೂಲಕ) ಕಳೆತೆಗೆಯುವುದರೊಂದಿಗೆ ನಾಟು ಪೂರ್ವ ಕಳೆನಾಶಕ ಅಟ್ರಾಜಿನನ್ನು ಹೆಕ್ಟೇರಿಗೆ ೦.೫ ಕಿಲೊ ಬಳಸಬಹುದು.[೬]
  • ಗೊಬ್ಬರ ಮತ್ತು ಕ್ರಿಮಿನಾಶಕಗಳು: ಕೊಟ್ಟಿಗೆ ಗೊಬ್ಬರದೊಂದಿಗೆ ಶಿಫಾರಸು ಮಾಡಿದ ರಸಾಯನಿಕ ಗೊಬ್ಬರಗಳನ್ನು ಕೊಡುವುದು ಇಳುವರಿ ಹೆಚ್ಚಲು ಸಹಾಯಕ. ಸಜ್ಜೆಗೆ ತಗಲುವ ಕೀಟಗಳು: ಬೊಬ್ಬೆ ದುಂಬಿ (ಬ್ಲಿಸ್ಟರ್ ಬೀಟಲ್) ಮತ್ತು ತೆನೆಗಳ ರಸಹೀರುವ ತಗಣಿ. ರೋಗಗಳು: ಜಿಗಿ ರೋಗ (ಎರ್ಗಾಟ್), ಎಲೆ ತುಕ್ಕು ಮತ್ತು ಕೇದಿಗೆ ರೋಗ ಅಥವಾ ಹಸಿರು ತೆನೆ ರೋಗ. ರೋಗ ತಗುಲಿದಾಗ ಅಥವಾ ಮುಂಚೆ ತಗುಲದಂತೆ ರಕ್ಷಿಸಲು ಶಿಫಾರಸು ಮಾಡಿದ ಕ್ರಿಮಿನಾಶಕಗಳನ್ನು ಬಳಸ ಬೇಕು. ಇಂತಹ ಶಿಫಾರಸನ್ನು ಸಾಮಾನ್ಯವಾಗಿ ಸರಕಾರ (ಕೃಷಿ ಇಲಾಖೆ) ಅಥವಾ ಕೃಷಿ ವಿಶ್ವವಿದ್ಯಾಲಯಗಳು ಮಾಡುತ್ತವೆ. [೧೧]
  • ನೀರಿನ ಅಗತ್ಯ: ಸಜ್ಜೆಯ ನೀರಿನ ಅಗತ್ಯವು ಗೋದಿ, ಜೋಳ, ಮೆಕ್ಕೆಜೋಳ, ರಾಗಿ ಮತ್ತು ಭತ್ತದ ನೀರಿನ ಅಗತ್ಯಗಳಿಗಿಂತ ಕಡಿಮೆ. ಹೂಬಿಡುವ ಸಮಯದಲ್ಲಿಯ ನೀರವಾರಿ ಇಳುವರಿ ಹೆಚ್ಚಿಸಲು ಸಹಾಯಕ. ಪೂರ್ಣವಾಗಿ ಮಳೆ ಇಲ್ಲವಾದಾಗ ಸಜ್ಜೆಗೆ ಮೂರರಿಂದ ನಾಲ್ಕು ಸಲ ನೀರು ಹಾಯಿಸುವುದು ಅಗತ್ಯ. ಮಳೆ ಪೂರ್ಣವಾಗಿ ವಿಫಲವಾದಾಗ ಸಸ್ಯಗಳ ಸಾಂದ್ರತೆ ಕಡಿಮೆ ಮಾಡಿ ಹೆಕ್ಟೇರಿಗೆ ೧.೨೫ ಸಸ್ಯಗಳನ್ನು ಉಳಿಸಿಕೊಳ್ಳುವುದು ತೇವಾಂಶದ ಒತ್ತಡವನ್ನು ನಿಬಾಯಿಸುವ ದಾರಿಗಳಲ್ಲೊಂದು.[೬]
ಆಯ್ದ ಧಾನ್ಯಗಳ ನೀರಿನ ಅಗತ್ಯ [೧೨]
ಧಾನ್ಯ ನೀರಿನ ಅಗತ್ಯ

ಮಿಮೀಗಳಲ್ಲಿ

ಭತ್ತ ೯೦೦ - ೨೫೦೦
ಗೋದಿ ೪೫೦ - ೬೫೦
ಜೋಳ ೪೫೦ - ೬೫೦
ಮೆಕ್ಕೆ ಜೋಳ ೫೦೦ - ೮೦೦
ರಾಗಿ ೪೦೦ – ೪೫೦
ಸಜ್ಜೆ [೧೩] ೨೫೦ - ೩೫೦
  • ಕೊಯ್ಲು, ಒಕ್ಕಣೆ ಮತ್ತು ಇಳುವರಿ: ಕೊಯ್ಲು ಕಾಳಿನಲ್ಲಿನ ತೇವಾಂಶ ಸುಮಾರು ಶೇ ೨೦ರಷ್ಟು ಆದಾಗ ಮಾಡಬೇಕು. ಸಾಮಾನ್ಯವಾಗಿ ಕೊಯ್ಲಿಗೆ ಎರಡು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಮೊದಲು ತೆನೆಯನ್ನು ಕೊಯ್ದು ತುಸು ಕಾಲದ ನಂತರ ಸಸ್ಯವನ್ನು ಕೊಯ್ಯುವುದು ಮತ್ತು ಸಸ್ಯವನ್ನು ಬುಡದಿಂದ ತುಸು ಮೇಲೆ ತೆನೆಯೊಂದಿಗೆ ಕೊಯ್ಯುವುದು. ಹೀಗೆ ಕೊಯ್ಲು ಮಾಡಿದುದನ್ನು ೫-೬ ದಿನ ಬಿಸಿಲಿನಲ್ಲಿ ಒಣಗಲು ಬಿಡಬೇಕು. ನಂತರದಲ್ಲಿ ತೆನೆಗಳನ್ನು ಕಟ್ಟಿಗೆಯಿಂದ ಬಡಿದು ಅಥವಾ ಪಶುಗಳಿಂದ ತುಳಿಯಿಸುವ ಮೂಲಕ ಒಕ್ಕಣೆ (ಕಾಳನ್ನು ಬೇರ್ಪಡಿಸುವುದು) ಮಾಡಬಹುದು. ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಿ ಕಾಳಿನ ತೇವಾಂಶವನ್ನು ಶೇ ೧೩ ರಿಂದ ೧೪ಕ್ಕೆ ತರುವುದರ ಮೂಲಕ ಅದನ್ನು ಸಂಗ್ರಹ ಯೋಗ್ಯ ಮಾಡಬಹುದು. ಸಾಮಾನ್ಯವಾಗಿ ಚೆನ್ನಾಗಿ ಬೆಳೆದ ಬೆಳೆ ನೀರಾವರಿಯಲ್ಲಿ ಹೆಕ್ಟೇರಿಗೆ ಹೈಬ್ರಿಡು ತಳಿಗಳು ೩ ರಿಂದ ೩.೫ ಟನ್ನು ಮತ್ತು ಸುಧಾರಿತ ತಳಿಗಳು ೨ ರಿಂದ ೨.೫ ಟನ್ನು ಧಾನ್ಯ ಇಳುವರಿ ಮತ್ತು ೧೦ ಟನ್ನು ಕಡ್ಡಿಮೇವು ಇಳುವರಿ ಕೊಡುತ್ತವೆ. ಒಣ ಬೇಸಾಯದಲ್ಲಿನ ಇಳುವರಿಯು ೧.೨ ರಿಂದ ೧.೫ ಧಾನ್ಯ ಮತ್ತು ೭ ರಿಂದ ೭.೫ ಕಡ್ಡಿಮೇವು ಇರುತ್ತದೆ.[೬]

ಬಳಕೆ[ಬದಲಾಯಿಸಿ]

ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ಸಜ್ಜೆಯ ಹಿಟ್ಟನ್ನು ದೊಡ್ಡ ಉಂಡೆಗಳಾಗಿ ಅರೆ ಬೇಯಿಸಿ ನಂತರದಲ್ಲಿ ಮೊಸರಿನಂತಹವುಗಳನ್ನು ಸೇರಿಸಿ ನೀರನಂತೆ ಪೇಯವಾಗಿಸಿ ಕುಡಿಯುತ್ತಾರೆ. ನೈಜೇರಿಯದ ಹೌಸ ಭಾಷೆಯಲ್ಲಿ ಈ ಪೇಯಕ್ಕೆ “ಫುರ” ಎಂದು ಕರೆಯಲಾಗುವ ಈ ಪೇಯವು ಉತ್ತರ ನೈಜೀರಿಯ ಮತ್ತು ದಕ್ಷಿಣ ನೈಜರ್‌ನಲ್ಲಿ ಜನಪ್ರಿಯ ಪೇಯ. ನಮೀಬಿಯದಲ್ಲಿ ಇದನ್ನು ಸಜ್ಜೆಯನ್ನು ಸ್ಥಳೀಯವಾಗಿ ಮಹಂಗು ಎಂದು ಕರೆಯಲಾಗುತ್ತದೆ. ಇದನ್ನು ಗಂಜಿಯಂತೆ ಮಾಡಿದ “ಒಶಿಫಿಮ” ತಯಾರಿಸಲಾಗುತ್ತದೆ ಅಥವಾ ಹುಳಿಯಾಗಿಸಿ “ಒಂಟಕು” ಅಥವಾ “ಒಷಿಕುಂದು” ಎಂದು ಕರೆಯಲಾದ ಪೇಯವನ್ನು ತಯಾರಿಸಲಾಗುತ್ತದೆ.[೫] ಭಾರತದಲ್ಲಿ ಇದನ್ನು ಪ್ರಮುಖವಾಗಿ ರೊಟ್ಟಿಯಾಗಿ ಬಳಸಲಾಗುತ್ತದೆ. ಅಲ್ಲದೆ ಬೇಯಿಸಿದ ಕಡುಬನ್ನು ಸಹ ಸ್ಥಳೀಯವಾಗಿ ತಯಾರಿಸಲಾಗುತ್ತದೆ.

ನೂರು ಗ್ರಾಂ ಸಜ್ಜೆಯಲ್ಲಿನ ಪೋಷಕಾಂಶಗಳು[೩]
ಪೋಷಕಾಂಶಗಳು ಪ್ರಮಾಣ
ಶಕ್ತಿ ೧,೪೭ ಕಿಲೊಜೆ

(೩೫೧ ಕಿಲೊಕ್ಯಾಲರಿಗಳು)[೧೪]

ಕಾರ್ಬೋಹೈಡ್ರೇಟ್‌ಗಳು ೭೫ ಗ್ರಾಂ
ಆಹಾರ ನಾರು ೬.೦ ಗ್ರಾಂ
ಕೊಬ್ಬು ೩.೩ ಗ್ರಾಂ
ಪ್ರೋಟೀನ್ ೧೦.೬ ಗ್ರಾಂ
ಖನಿಜಗಳು ೨.೩ ಗ್ರಾಂ
ಕಬ್ಬಿಣ ೧೬.೯ ಮಿಲ್ಲಿಗ್ರಾಂ
ಕ್ಯಾಲ್ಸಿಯಂ ೩೮ ಮಿಲ್ಲಿಗ್ರಾಂ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Lost Crops of Africa: Volume I: Grains, Chapters 4-6 - released by the National Research Council in 1996

ಉಲ್ಲೇಖ ಮತ್ತು ಟಿಪ್ಪಣಿಗಳು[ಬದಲಾಯಿಸಿ]

  1. ”Supporting Millets in India” Archived 2016-10-26 ವೇಬ್ಯಾಕ್ ಮೆಷಿನ್ ನಲ್ಲಿ., DHAN Foundation, Access date 2016-07-16
  2. “Pearl Millet -Production Guidelines” Archived 2013-01-24 ವೇಬ್ಯಾಕ್ ಮೆಷಿನ್ ನಲ್ಲಿ., Department of Agriculture, Forestry and Fisheries, South Africa, Access date 2016-07-17
  3. ೩.೦ ೩.೧ ೩.೨ “Pearl Millet” Archived 2016-12-29 ವೇಬ್ಯಾಕ್ ಮೆಷಿನ್ ನಲ್ಲಿ. ICRISAT Exploreit, Acess date 2016-07-17
  4. “Area and Distribution of Pearl Millet”, agropedia, access date 2016-07-16
  5. ೫.೦ ೫.೧ ೫.೨ ೫.೩ Wikipedia English, “Pearl Millet” access date 2016-07-17
  6. ೬.೦ ೬.೧ ೬.೨ ೬.೩ ೬.೪ ೬.೫ ೬.೬ Gangaiah B, “Agronomy – Kharif Crops Millets Sorghum (Jowar) Pearl Millet (Bajra) Finger Millet” Archived 2017-11-18 ವೇಬ್ಯಾಕ್ ಮೆಷಿನ್ ನಲ್ಲಿ. access date 2016-07-14.
  7. Wikipedia English, “Hallur”, access date 2016-07-17
  8. Sing, Purushottam “Chapter8 History of Millet Cultivation in India” in Editors. Lallanji Gopal and V. C. Srivastav (2008), Concept Publishing Company, History of Agriculture in India, Up to C. 1200 A.D., pages 108-109.
  9. “4.3 : Normal (Average of 2005-06 to 2009-10) Area, Production and Yield of Major Crops in India”, access date 2016-07-17(from Direcorate of Economics and Statistics, Department of Agriculture, Govt of India.)
  10. “4.10 (b): Area, Production and Yield of Bajra during 2009-10 in major Producing States alongwith coverage under Irrigation”, Access date 2016-07-17 (from Direcorate of Economics and Statistics, Department of Agriculture, Govt of India.)
  11. ೧೧.೦ ೧೧.೧ ಅಧಿಕ ಇಳುವರಿಗೆ ಸುಧಾರಿತ ಬೇಸಾಯ ಕ್ರಮಗಳು (ಕರ್ನಾಟಕ ಈಶಾನ್ಯ ಪ್ರದೇಶದಲ್ಲಿ (ಪ್ರದೇಶ ೧, ವಲಯ ೧ ಮತ್ತು ೨)), ಕೃಷಿ ವಿಶ್ವವಿದ್ಯಾಲಯ, ದಾರವಾಢ ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಬೆಂಗಳೂರು ೧೯೯೭
  12. ”Irrigation Water Requirement of Crops” , access date 2016-07-17
  13. Gangaiah B, “Agronomy – Kharif Crops Millets Sorghum (Jowar) Pearl Millet (Bajra) Finger Millet” Archived 2017-11-18 ವೇಬ್ಯಾಕ್ ಮೆಷಿನ್ ನಲ್ಲಿ. access date 2016-07-14. ಈ ಉಲ್ಲೇಖ ರಾಗಿಯ ನೀರಾವರಿಯ ಅಗತ್ಯ ೫೦೦-೬೦೦ ಮಿಮೀ ಎನ್ನುತ್ತದೆ.
  14. ಒಂದು ಕಿಲೊಕೆ=೪.೧೮೪ ಕಿಲೊಜೆ ಅಥವಾ ಕಿಲೊಜೋಲ್. ಕಿಲೊಕೆ ಅಂದರೆ ೧,೦೦೦ ಕ್ಯಾಲರಿಗಳು. ಇವು ಆಹಾರ ಶಕ್ತಿಯ ಮಾಪಕಗಳು. ನೋಡಿ "Daily Calorie Intake Per Capita" access date 2016-07-17
"https://kn.wikipedia.org/w/index.php?title=ಸಜ್ಜೆ&oldid=1151234" ಇಂದ ಪಡೆಯಲ್ಪಟ್ಟಿದೆ