ವಿಷಯಕ್ಕೆ ಹೋಗು

ಒಂಗೋಲ್ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂಗೋಲ್
ತಳಿಯ ಹೆಸರುಒಂಗೋಲ್
ಮೂಲಆಂಧ್ರದ ಒಂಗೋಲ್
ವಿಭಾಗಹಾಲು ಮತ್ತು ಕೆಲಸಗಾರ ತಳಿ.
ಬಣ್ಣಬಿಳಿ
ಮುಖಕಣ್ಣುಗಳ ಮಧ್ಯೆ ಅಗಲವಾದಂತಿರುವ ಮುಂಚಾಚಿದ ಹಣೆ
ಕೊಂಬುದಪ್ಪನೆಯ ಗಿಡ್ಡ ಕೋಡು
ಕಾಲುಗಳುಉದ್ದ ನೀಳ ಕಾಲುಗಳು
ಕಿವಿಉದ್ದ ಕಿವಿ

ಒಂಗೋಲ್ ಭಾರತದ ಬಹಳಷ್ಟು ತಳಿಗಳಂತೆ ತನ್ನ ತವರಿನ ಹೆಸರಿನಿಂದ ಗುರುತಿಸಲ್ಪಡುವ ಒಂದು ಉತ್ಕೃಷ್ಟ ತಳಿ. ಆಂಧ್ರದ ಒಂಗೋಲ್ ಪ್ರದೇಶದ[] ಈ ತಳಿ ನೆಲ್ಲೂರ್ ತಳಿ ಅಂತಲೂ ಕರೆಯಲ್ಪಡಲು ಕಾರಣ ಒಂಗೋಲ್ ತಾಲೂಕು ಮೊದಲು ನೆಲ್ಲೂರ್ ಜಿಲ್ಲೆಯಲ್ಲಿತ್ತು ಎಂಬುದು. ಇದು ಉತ್ತರದ ಭಗ್ನಾರಿ ತಳಿಯ ಮಿಶ್ರತಳಿ ಅಂತಲೂ, ಆರ್ಯರು ದಕ್ಷಿಣಕ್ಕೆ ಬರುವಾಗ ಕರೆತಂದರು ಅಂತ ಹೇಳುತ್ತರಾದರೂ ಸರಿಯಾದ ಆಧಾರವಿಲ್ಲ. ಕೃಷ್ಣಾ ನದಿಪ್ರದೇಶ, ಪೆನ್ನಾರ್ ನದಿಯ ಆಸುಪಾಸು, ನೆಲಮಲೈ ಅರಣ್ಯ ಇತ್ಯಾದಿಗಳು ಒಂಗೋಲ್‌ನ ಮೂಲಪ್ರದೇಶಗಳು. ಒಂಗೋಲ್‌ಗಳು ಉಭಯತಳಿಗಳು. ಹೋರಿಗಳು ಬಲಶಾಲಿಗಳಾಗಿದ್ದು ಉಳುಮೆಗೆ ಬಹು ಉಪಯುಕ್ತವೆನಿಸಿದರೆ, ಹಸುಗಳು ಉತ್ತಮ ಹಾಲಿನತಳಿಗಳಾಗಿ ಗುರುತಿಸಲ್ಪಡುತ್ತವೆ. ಒಂಗೋಲ್‌ಗಳು ಮೂಲದಲ್ಲಿ ಹಾಲಿನ ತಳಿಗಳೆ. ಒಂಗೋಲ್‌ನ ತವರು ಪ್ರದೇಶದಲ್ಲಿ ಆರ್ಥಿಕವಾಗಿ ನೆಚ್ಚಿಕೊಳ್ಳಬಲ್ಲ ಬೆಳೆಗಳಿಲ್ಲದ ಕಾರಣ, ರೈತರಿಗೆ ಹೈನುಗಾರಿಕೆಯತ್ತ ಒಲಿಯುವಂತಾಗಿ ಉತ್ತಮ ಹಾಲಿನ ತಳಿಯ ಅನ್ವೇಷಣೆಯಲ್ಲಿ ದೊರಕಿದ್ದು ಒಂಗೋಲ್. ಕಾಲಾನಂತರ ನಿಧಾನವಾಗಿ ಇದು ಉಭಯತಳಿಯಾಗಿ ಬದಲಾಯಿತು ಅನ್ನುತ್ತಾರೆ ತಜ್ಞರು.

ದೇಹಲಕ್ಷಣಗಳು[]

[ಬದಲಾಯಿಸಿ]

ಒಂಗೋಲ್‌ಗಳು ಸಾಮಾನ್ಯವಾಗಿ ದೊಡ್ಡಗಾತ್ರದವುಗಳು. ಹೆಚ್ಚಾಗಿ ಬಿಳಿ ಬಣ್ಣ. ಅವುಗಳ ದೇಹ ಚಹರೆ ಉದ್ದ ದೇಹ, ಚಿಕ್ಕ ಕುತ್ತಿಗೆ, ಉದ್ದ ನೀಳ ಕಾಲುಗಳು, ಕಣ್ಣುಗಳ ಮಧ್ಯೆ ಅಗಲವಾದಂತಿರುವ ಮುಂಚಾಚಿದ ಹಣೆ, ಕಪ್ಪು ಅಂಡಾಕೃತಿಯ ಕಣ್ಣುಗಳು, ಅವುಗಳ ಸುತ್ತ ಅರ್ಧ ಅಂಗುಲದವರೆಗೂ ವ್ಯಾಪಿಸಿದ ಕಡುಗಪ್ಪು ವರ್ತುಲ, ದಪ್ಪನೆಯ ಗಿಡ್ಡ ಕೋಡು, ಅವುಗಳಿಗೆ ಮುತ್ತಿಕ್ಕುವಂತೆ ಉದ್ದ ಕಿವಿ ಇತ್ಯಾದಿ. ಆದರೆ ಇವೆಲ್ಲವುಗಳಿಗಿಂತ ಒಂಗೋಲ್‌ ಅನ್ನು ಉಳಿದ ತಳಿಗಳಿಗಿಂತ ಭಿನ್ನವಾಗಿಸಿರುವುದು, ಅದಕ್ಕೊಂದು ರಾಜಗಾಂಭೀರ್ಯ ತಂದುಕೊಟ್ಟಿರುವುದು ಬೆನ್ನಿನ ಮೇಲಿನ ಡುಬ್ಬ. ಒಂಗೋಲ್‌ನ ಪ್ರಮುಖ ವಿಶೇಷ ಅದರ ಚರ್ಮ. ಅದರ ಮೆಲ್ಮೈ ಚರ್ಮ ಸೂರ್ಯನ ಬೆಳಕಿನ ಉಷ್ಣವನ್ನು ಶೇಕಡ ೮೫ರಷ್ಟನ್ನು ಹೊರಹಾಕಿದರೆ ಒಳಗಿರುವ ಕಪ್ಪುಚರ್ಮದ ಪದರುಗಳು ತಾಪಮಾನವನ್ನು ಇನ್ನಷ್ಟು ಕುಗ್ಗಿಸುವಂತೆ ಮಾಡುತ್ತವೆ. ಹಾಗಾಗಿ ಒಂಗೋಲ್ ಅಕ್ಷರಶಃ thermostat !

ಒಂಗೋಲ್ ಪ್ರದೇಶಗಳಲ್ಲಿ ವಸಾಹತುಶಾಹಿ ಕಾಲಿಕ್ಕುವುದಕ್ಕೂ ಮುನ್ನ ವಿಭಿನ್ನ ಸಂಪ್ರದಾಯವೊಂದನ್ನು ತಳಿಸಂಕರ ತಡೆಯಲೋಸುಗ ಆಚರಿಸಲಾಗುತ್ತಿತ್ತಂತೆ. ಹಳ್ಳಿಯ ಮುಖ್ಯಸ್ಥನ ಪ್ರಾಯೋಜಕತ್ವದಲ್ಲಿ ತಳಿಗೆ ಒಂದೊಂದರಂತೆ ಹೋರಿಗಳನ್ನು ಬೀಜದ ಹೋರಿಯನ್ನಾಗಿ ದೊಡ್ಡ ಸಮಾರಂಭವೊಂದರಲ್ಲಿ ಘೋಷಿಸಲಾಗುತ್ತಿತ್ತಂತೆ. ಅಲ್ಲಿ ಅದಕ್ಕೆ ಶಂಖ, ಚಕ್ರ ಅಥವಾ ತ್ರಿಶೂಲವೊಂದನ್ನು ಸಾಂಕೇತಿಕವಾಗಿ ನೀಡುವುದರೊಂದಿಗೆ ಆ ಹೋರಿ ಊರಿನ ಎಲ್ಲ ಹಸುಗಳ ಪತಿಯಾಗಿ ಪರಿಣಮಿಸುತ್ತಿತ್ತು. ಊರಿನ ಹಸುಗಳು ಬೇರೆ ಹೋರಿಯ ಸಂಗ ಮಾಡದಂತೆ ನೋಡಿಕೊಳ್ಳುವುದು ಆ ಹಸುವಿನ ಯಜಮಾನನ ಜವಾಬ್ದಾರಿ. ಈ ಪರಿಯ ಕಾಳಜಿಗೆ ಕಾರಣ ಒಂಗೋಲ್‌ನಂತಹ ತಳಿಯೊಂದನ್ನು ಎಲ್ಲಿ ಕಳಕೊಂಡೇವೋ ಎಂಬ ಆಗಿನವರ ಕಾಳಜಿ. ಆದರೆ ನಂತರ ಬಂದ ಕ್ಷೀರಕ್ರಾಂತಿ ಈ ಪದ್ಧತಿಗೆ ತಿಲಾಂಜಲಿ ಇಡುವಂತೆ ಮಾಡಿ ಕೃತಕ ಗರ್ಭಧಾರಣೆಯನ್ನು ಪ್ರೋತ್ಸಾಹಿಸಿ, ಒಂಗೋಲ್‌ನ ತಳಿ ಶುದ್ಧತೆಗೆ ಮಾರಕವಾಗುವಂತೆ ಮಾಡಿತು.

ಆಧಾರ/ಆಕರ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. Ongole Cattle. Roysfarm.com
  2. Breeds of Livestock - Ongole Cattle, Dept. of Animal Science, Oklahama University

ಹೊರಕೊಂಡಿಗಳು

[ಬದಲಾಯಿಸಿ]

ಚಿತ್ರಗಳು

[ಬದಲಾಯಿಸಿ]